ಪ್ರೀತಿಯ ಉಪಕಾರ
ಪ್ರೀತಿಯ ಉಪಕಾರ
ಅಧ್ಯಾಯ 1
ಯೂದಾಯದ ಅರಸನಾದ ಹೆರೋದನ ಕಾಲದಲ್ಲಿ ಅಬೀಯನ ವರ್ಗಕ್ಕೆ ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಅವನ ಹೆಂಡತಿಯು ಆರೋನನ ವಂಶದವಳು. ಆಕೆಯ ಹೆಸರು ಎಲಿಸಬೇತ್. ಅವರಿಬ್ಬರೂ ಕರ್ತನ ಎಲ್ಲಾ ಆಜ್ಞೆಗಳನ್ನೂ ನೇಮನಿಷ್ಠೆಗಳನ್ನೂ ಕೈಕೊಂಡು ತಪ್ಪಿಲ್ಲದೆ ನಡಕೊಳ್ಳುತ್ತಾ ದೇವರ ದೃಷ್ಟಿಯಲ್ಲಿ ನೀತಿವಂತರಾಗಿದ್ದರು. ಆದರೆ ಎಲಿಸಬೇತಳು ಬಂಜೆಯಾದದರಿಂದ ಅವರಿಗೆ ಮಕ್ಕಳಿರಲಿಲ್ಲ; ಇದಲ್ಲದೆ ಅವರಿಬ್ಬರೂ ದಿನಹೋದವರಾಗಿದ್ದರು.ಹೀಗಿರಲಾಗಿ ಜಕರೀಯನ ವರ್ಗದ ಸರತಿ ಬಂದಾಗ ಅವನು ದೇವರ ಸನ್ನಿಧಿಯಲ್ಲಿ ಯಾಜಕಧರ್ಮವನ್ನು ನಡಿಸುತ್ತಿರಲು ದೇವಾಲಯದೊಳಕ್ಕೆ ಹೋಗಿ ಧೂಪವನ್ನರ್ಪಿಸುವದು ಯಾಜಕರ ಮರ್ಯಾದೆಯ ಪ್ರಕಾರ ಅವನ ಪಾಲಿಗೆ ಬಂತು. ಧೂಪವನ್ನು ಅರ್ಪಿಸುವ ಹೊತ್ತಿನಲ್ಲಿ ಜನರ ಗುಂಪೆಲ್ಲಾ ಹೊರಗೆ ನಿಂತು ದೇವರನ್ನು ಪ್ರಾರ್ಥಿಸುತ್ತಿರಲಾಗಿ ಕರ್ತನ ದೂತನು ಧೂಪಪೀಠದ ಬಲಗಡೆಯಲ್ಲಿ ನಿಂತುಕೊಂಡವನಾಗಿ ಅವನಿಗೆ ಕಾಣಿಸಿಕೊಂಡನು. ಜಕರೀಯನು ಅವನನ್ನು ಕಂಡು ತತ್ತರಗೊಂಡು ಭಯಹಿಡಿದವನಾದನು. ಆದರೆ ಆ ದೂತನು ಅವನಿಗೆ - ಜಕರೀಯಾ, ಭಯಪಬೇಡ; ನಿನ್ನ ವಿಜ್ಞಾಪನೆ ದೇವರಿಗೆ ಮುಟ್ಟಿತು; ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು. ನೀನು ಅವನಿಗೆ ಯೋಹಾನನೆಂದು ಹೆಸರಿಡಬೇಕು. ನಿನಗೆ ಸಂತೋಷವೂ ಉಲ್ಲಾಸವೂ ಉಂಟಾಗುವದು; ಮತ್ತು ಅವನು ಹುಟ್ಟಿದ್ದಕ್ಕೆ ಬಹು ಜನರು ಸಂತೋಷಪಡುವರು. ಅವನು ಕರ್ತನ ದೃಷ್ಟಿಯಲ್ಲಿ ಮಹಾಪುರುಷನಾಗಿರುವನು; ದ್ರಾಕ್ಷಾರಸವನ್ನಾಗಲಿ ಯಾವ ಮದ್ಯವನ್ನಾಗಲಿ ಕುಡಿಯದವನಾಗಿರುವನು; ಅವನು ಹುಟ್ಟಿದಂದಿನಿಂದಲೂ ಪವಿತ್ರಾತ್ಮಭರಿತನಾಗಿರುವನು. ಇಸ್ರಾಯೇಲ್ಯರಲ್ಲಿ ಅನೇಕರನ್ನು ಅವರ ದೇವರಾಗಿರುವ ಕರ್ತನ ಕಡೆಗೆ ತಿರುಗಿಸುವನು. ಅವನು ಆತನ ಮುಂದೆ ಹೋಗಿ ಎಲೀಯನ ಗುಣಶಕ್ತಿಗಳಿಂದ ಕೂಡಿದವನಾಗಿ ತಂದೆಗಳ ಹೃದಯವನ್ನು ಮಕ್ಕಳ ಕಡೆಗೂ ಹಟಹಿಡಿದವರನ್ನು ನೀತಿವಂತರ ಜ್ಞಾನದ ಕಡೆಗೂ ತಿರುಗಿಸಿ ಸಿದ್ಧವಾದ ಜನವನ್ನು ಕರ್ತನಿಗೆ ಒದಗಿಸುವನು ಎಂದು ಹೇಳಿದನು.
ಜಕರೀಯನು ಆ ದೂತನಿಗೆ - ಇದನ್ನು ನಾನು ಯಾತರಿಂದ ತಿಳುಕೊಳ್ಳಲಿ? ನಾನು ಮುದುಕನು; ನನ್ನ ಹೆಂಡತಿಯೂ ದಿನಹೋದವಳು ಎಂದು ಹೇಳಿದ್ದಕ್ಕೆ ಆ ದೂತನು - ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು; ನಿನ್ನ ಕೂಡ ಮಾತಾಡಿ ಈ ಶುಭವರ್ತಮಾನವನ್ನು ನಿನಗೆ ತಿಳಿಸುವದಕ್ಕಾಗಿ ನಾನು ಕಳುಹಿಸಲ್ಪಟ್ಟಿದ್ದೇನೆ. ಈ ನನ್ನ ಮಾತು ತಕ್ಕ ಸಮಯದಲ್ಲಿ ನೆರವೇರುವದು; ಆದರೆ ನೀನು ಅದನ್ನು ನಂಬದೆಹೋದದ್ದರಿಂದ ಅದೆಲ್ಲಾ ಸಂಭವಿಸುವ ದಿನದವರೆಗೂ ಮಾತನಾಡಲಾರದೆ ಮೂಕನಾಗಿರುವಿ ಎಂದು ಅವನಿಗೆ ಉತ್ತರಕೊಟ್ಟನು. ಇಷ್ಟರೊಳಗೆ ಜನರು ಜಕರೀಯನನ್ನು ಕಾದುಕೊಂಡಿದ್ದು ಅವನು ದೇವಾಲಯದೊಳಗೆ ತಡಮಾಡಿದ್ದಕ್ಕೆ ಆಶ್ಚರ್ಯಪಟ್ಟರು. ಅವನು ಹೊರಗೆ ಬಂದಾಗ ಅವರ ಕೂಡ ಏನೂ ಮಾತಾಡಲಾರದೆ ಇರಲು ಅವರು - ಇವನಿಗೆ ದೇವಾಲಯದಲ್ಲಿ ಏನೋ ದಿವ್ಯದರ್ಶನವಾಗಿರಬೇಕು ಎಂದು ತಿಳುಕೊಂಡರು. ಅವನು ಅವರಿಗೆ ಕೈಸನ್ನೆ ಮಾಡುತ್ತಾ ಮೂಕನಾಗಿಯೇ ಇದ್ದನು. ಅವನ ಯಾಜಕವರ್ಗದ ದಿನಗಳು ತೀರಿದ ನಂತರ ಅವನು ತನ್ನ ಮನೆಗೆ ಹೋದನು.ಆ ದಿವಸಗಳಾದ ಮೇಲೆ ಅವನ ಹೆಂಡತಿಯಾದ ಎಲಿಸಬೇತಳು ಬಸುರಾಗಿ ಐದು ತಿಂಗಳು ಮನೆಯಲ್ಲೇ ಮರೆಯಾಗಿದ್ದು - ಕರ್ತನು ಈ ಕಾಲದಲ್ಲಿ ನನ್ನನ್ನು ಪರಾಮರಿಸಿ ನನಗೆ ಈ ರೀತಿಯಾಗಿ ಮಾಡಿ ಜನರಲ್ಲಿ ನನಗಿದ್ದ ಅವಮಾನವನ್ನು ಪರಿಹರಿಸಿದ್ದಾನಲ್ಲಾ ಅನ್ನುತ್ತಿದ್ದಳು.
ಆರನೆಯ ತಿಂಗಳಲ್ಲಿ ದೇವರು ಗಬ್ರಿಯೇಲನೆಂಬ ತನ್ನ ದೂತನನ್ನು ಗಲಿಲಾಯ ಸೀಮೆಯ ನಜರೇತೆಂಬ ಊರಿಗೆ ಒಬ್ಬ ಕನ್ಯೆಯ ಬಳಿಗೆ ಕಳುಹಿಸಿದನು; ಆ ಕನ್ಯೆಯ ಹೆಸರು ಮರಿಯಳು; ಆಕೆಯು ದಾವೀದನ ಮನೆತನದ ಯೋಸೇಫನೆಂಬ ಪುರುಷನಿಗೆ ನಿಶ್ಚಿತಾರ್ಥವಾಗಿದ್ದಳು. ಆ ದೂತನು ಆಕೆಯ ಬಳಿಗೆ ಬಂದು - ದೇವರ ದಯೆ ಹೊಂದಿದವಳೇ, ನಿನಗೆ ಶುಭವಾಗಲಿ; ಕರ್ತನು ನಿನ್ನ ಸಂಗಡ ಇದ್ದಾನೆ ಅಂದನು. ಆಕೆಯು ಆ ಮಾತಿಗೆ ತತ್ತರಿಸಿ - ಇದೆಂಥ ಆಶೀರ್ವಾದ ಎಂದು ಯೋಚನೆಮಾಡುತ್ತಿರಲಾಗಿ ಆ ದೂತನು ಆಕೆಗೆ - ಮರಿಯಳೇ, ಹೆದರಬೇಡ; ನಿನಗೆ ದೇವರ ದಯೆ ದೊರಕಿತು. ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು. ಆತನು ಮಹಾಪುರುಷನಾಗಿ ಪರಾತ್ಪರನ ಕುಮಾರನೆನಿಸಿಕೊಳ್ಳುವನು; ಇದಲ್ಲದೆ ದೇವರಾಗಿರುವ ಕರ್ತನು ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ ಎಂದು ಹೇಳಿದನು. ಮರಿಯಳು ಆ ದೂತನನ್ನು - ಇದು ಹೇಗಾದೀತು? ನಾನು ಪುರುಷನನ್ನು ಅರಿತವಳಲ್ಲವಲ್ಲಾ ಎಂದು ಕೇಳಿದ್ದಕ್ಕೆ ದೂತನು - ನಿನ್ನ ಮೇಲೆ ಪವಿತ್ರಾತ್ಮ ಬರುವದು; ಪರಾತ್ಪರನ ಶಕ್ತಿಯ ನೆರಳು ನಿನ್ನ ಮೇಲೆ ಬೀಳುವದು; ಆದದರಿಂದ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವದು. ಮತ್ತು ನಿನ್ನ ಬಂಧುವಾದ ಎಲಿಸಬೇತಳಿದ್ದಾಳಲ್ಲಾ, ಆಕೆ ಸಹ ಮುಪ್ಪಿನವಳಾದರೂ ಗರ್ಭಿಣಿಯಾಗಿದ್ದಾಳೆ; ಆಕೆಯ ಗರ್ಭದಲ್ಲಿ ಗಂಡುಮಗುವದೆ; ಬಂಜೆಯೆನಿಸಿಕೊಂಡಿದ್ದ ಆಕೆಗೆ ಇದೇ ಆರನೆಯ ತಿಂಗಳು. ದೇವರಿಂದ ಬರುವ ಯಾವ ಮಾತಾದರೂ ನಿಷ್ಫಲವಾಗುವದಿಲ್ಲ ಅಂದನು. ಆಗ ಮರಿಯಳು - ಇಗೋ, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗಾಗಲಿ ಅಂದಳು. ಆಮೇಲೆ ಆ ದೂತನು ಆಕೆಯ ಬಳಿಯಿಂದ ಹೊರಟುಹೋದನು.
ಎಲಿಸಬೇತಳು ದಿನತುಂಬಿ ಗಂಡು ಮಗುವನ್ನು ಹೆತ್ತಳು. ಆಕೆಯ ನೆರೆಹೊರೆಯವರೂ ಬಂಧುಬಾಂಧವರೂ ಆಕೆಯ ಮೇಲೆ ಕರ್ತನು ತನ್ನ ದಯವನ್ನು ವಿಶೇಷವಾಗಿ ತೋರಿಸಿದ್ದಾನೆಂಬದನ್ನು ಕೇಳಿ ಆಕೆಯ ಕೂಡ ಸಂತೋಷಪಟ್ಟರು. ಎಂಟನೆಯ ದಿನದಲ್ಲಿ ಅವರು ಆ ಮಗುವಿಗೆ ಸುನ್ನತಿಮಾಡುವದಕ್ಕಾಗಿ ಬಂದು ಅದಕ್ಕೆ ಜಕರೀಯನೆಂದು ತಂದೆಯ ಹೆಸರನ್ನು ಇಡಬೇಕೆಂದಿದ್ದರು. ಈ ವಿಷಯದಲ್ಲಿ ಅದರ ತಾಯಿಯು - ಅದು ಬೇಡ, ಯೋಹಾನನೆಂದು ಹೆಸರಿಡಬೇಕು ಅನ್ನಲು ಅವರು - ನಿನ್ನ ಬಂಧುಬಾಂಧವರಲ್ಲಿ ಈ ಹೆಸರಿನವರು ಒಬ್ಬರಾದರೂ ಇಲ್ಲವಲ್ಲಾ ಎಂದು ಆಕೆಗೆ ಹೇಳಿ ಇದಕ್ಕೆ ಏನು ಹೆಸರಿಡಬೇಕೆಂದಿರುತ್ತೀ ಎಂಬದಾಗಿ ತಂದೆಗೆ ಸನ್ನೆ ಮಾಡಿದರು. ಅವನು ಒಂದು ಹಲಿಗೆಯನ್ನು ತರಿಸಿಕೊಂಡು - ಯೋಹಾನನೆಂತಲೇ ಅದರ ಹೆಸರು ಎಂದು ಬರೆದನು. ಅದಕ್ಕೆ ಎಲ್ಲರೂ ಆಶ್ಚರ್ಯಪಟ್ಟರು. ಕೂಡಲೆ ಅವನಿಗೆ ಬಾಯಿ ಬಂತು, ನಾಲಿಗೆ ಸಡಿಲವಾಯಿತು, ಅವನು ಮಾತಾಡುವ ಶಕ್ತಿಯುಳ್ಳವನಾಗಿ ದೇವರನ್ನು ಕೊಂಡಾಡಿದನು. ಇದನ್ನು ಕೇಳಿದ ನೆರೆಹೊರೆಯವರಿಗೆಲ್ಲಾ ಹೆದರಿಕೆಯುಂಟಾಯಿತು; ಮತ್ತು ಈ ಎಲ್ಲಾ ಸಂಗತಿಗಳನ್ನು ಕುರಿತು ಯೂದಾಯದ ಮಲೆನಾಡಿನಲ್ಲೆಲ್ಲಾ ಮಾತಾಡಿಕೊಳ್ಳುತ್ತಿದ್ದರು. ಕೇಳಿದವರೆಲ್ಲರೂ - ಆಹಾ, ಈ ಕೂಸು ಎಂಥವನಾಗುವನೋ ಎಂದು ಈ ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡರು ಮತ್ತು ಕರ್ತನ ಹಸ್ತವು ಅದರ ಮೇಲೆ ಇತ್ತು.
ಅಧ್ಯಾಯ 2
ಯೇಸು ಕ್ರಿಸ್ತನ ಜನನವು ಹೇಗಾಯಿತಂದರೆ - ಆತನ ತಾಯಿಯಾದ ಮರಿಯಳನ್ನು ಯೋಸೇಫನಿಗೆ ನಿಶ್ಚಯಮಾಡಿರಲಾಗಿ ಅವರು ಕೂಡುವದಕ್ಕಿಂತ ಮುಂಚೆ ಆಕೆಯು ಪವಿತ್ರಾತ್ಮನಿಂದ ಬಸುರಾಗಿದ್ದದ್ದು ತಿಳಿದುಬಂತು. ಆದರೆ ಆಕೆಯ ಗಂಡನಾದ ಯೋಸೇಫನು ಸಜ್ಜನನಾಗಿದ್ದು ಆಕೆಯನ್ನು ಬೈಲಿಗೆ ತರುವದಕ್ಕೆ ಮನಸ್ಸಿಲ್ಲದೆ, ಯಾರಿಗೂ ತಿಳಿಯದಂತೆ ಆಕೆಯನ್ನು ಬಿಟ್ಟುಬಿಡಬೇಕೆಂದಿದ್ದನು. ಅವನು ಇದನ್ನು ಆಲೋಚಿಸುತ್ತಿರುವಾಗ ಕರ್ತನ ದೂತನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು - ಎಲೈ ಯೋಸೇಫನೇ, ದಾವೀದನ ವಂಶದವನೇ, ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳುವದಕ್ಕೆ ಅಂಜಬೇಡ. ಆಕೆಯ ಗರ್ಭವು ಪವಿತ್ರಾತ್ಮದಿಂದಲೇ ಆದದ್ದು. ಆಕೆಯು ಒಬ್ಬ ಮಗನನ್ನು ಹಡೆಯುವಳು; ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು; ಯಾಕಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಅಂದನು. ಕರ್ತನು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು; ಆ ಮಾತು ಏನಂದರೆ - ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹಡೆಯುವಳು; ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು ಎಂಬದು. ದೇವರು ನಮ್ಮ ಕೂಡ ಇದ್ದಾನೆಂದು ಈ ಹೆಸರಿನ ಅರ್ಥ. ಆಗ ಯೋಸೇಫನು ನಿದ್ದೆ ತಿಳಿದೆದ್ದು ಕರ್ತನ ದೂತನು ಅಪ್ಪಣೆಕೊಟ್ಟ ಹಾಗೆ ತನ್ನ ಹೆಂಡತಿಯನ್ನು ಸೇರಿಸಿಕೊಂಡನು. ಆದರೆ ಆಕೆಯು ಗಂಡುಮಗನನ್ನು ಹಡೆಯುವ ತನಕ ಆಕೆಯನ್ನು ಅರಿಯಲಿಲ್ಲ.
ಆ ಕಾಲದಲ್ಲಿ ರಾಜ್ಯವೆಲ್ಲಾ ಖಾನೆಷುಮಾರಿ ಬರಸಿಕೊಳ್ಳಬೇಕೆಂಬ ಆಜ್ಞೆಯು ಚಕ್ರವರ್ತಿಯಾದ ಔಗುಸ್ತನಿಂದ ಹೊರಟಿತು. ಕುರೇನ್ಯನು ಸುರಿಯಕ್ಕೆ ಅಧಿಪತಿಯಾಗಿದ್ದಾಗ ಈ ಮೊದಲನೆಯ ಖಾನೆಷುಮಾರಿ ನಡೆಯಿತು. ಆಗ ಎಲ್ಲರೂ ಖಾನೆಷುಮಾರಿ ಬರಸಿಕೊಳ್ಳುವದಕ್ಕಾಗಿ ತಮ್ಮತಮ್ಮ ಊರುಗಳಿಗೆ ಹೊರಟರು. -ಯೋಸೇಫನು ಸಹ ತಾನು ದಾವೀದನ ಮನೆತನದವನೂ ಗೋತ್ರದವನೂ ಆಗಿದ್ದದರಿಂದ ಹೆಸರು ಬರಸಿಕೊಳ್ಳುವದಕ್ಕಾಗಿ ತನಗೆ ನಿಶ್ಚಿತಾರ್ಥವಾಗಿದ್ದ ಮರಿಯಳ ಸಂಗಡ ಗಲಿಲಾಯಸೀಮೆಯ ನಜರೇತ್ ಎಂಬ ಊರಿನಿಂದ ಹೊರಟು ಯೂದಾಯದಲ್ಲಿರುವ ಬೇತ್ಲೆಹೇಮೆಂಬ ದಾವೀದನೂರಿಗೆ ಹೋದನು. ಆಗ ಮರಿಯಳು ಪೂರ್ಣಗರ್ಭಿಣಿಯಾಗಿದ್ದಳು. ಅವರು ಅಲ್ಲಿದ್ದಾಗ ಆಕೆಗೆ ದಿನತುಂಬಿತು. ಆಕೆಯು ತನ್ನ ಚೊಚ್ಚಲುಮಗನನ್ನು ಹೆತ್ತು ಬಟ್ಟೆಯಲ್ಲಿ ಸುತ್ತಿ ಚತ್ರದಲ್ಲಿ ಅವರಿಗೆ ಸ್ಥಳವಿಲ್ಲದ ಕಾರಣ ಅವನನ್ನು ಗೋದಲಿಯಲ್ಲಿ ಮಲಗಿಸಿದಳು.
ಅಧ್ಯಾಯ 3
ಅರಸನಾದ ಹೆರೋದನ ದಿನಗಳಲ್ಲಿ ಯೂದಾಯ ಸೀಮೆಯ ಬೇತ್ಲೆಹೇಮ್ ಎಂಬ ಊರಲ್ಲಿ ಯೇಸು ಹುಟ್ಟಿದಾಗ ಮೂಡಣದೇಶದ ಜೋಯಿಸರು ಯೆರೂಸಲೇವಿುಗೆ ಬಂದು - ಯೆಹೂದ್ಯರ ಅರಸನಾಗಿ ಹುಟ್ಟಿದವನು ಎಲ್ಲಿದ್ದಾನೆ? ಆತನನ್ನು ಸೂಚಿಸುವ ನಕ್ಷತ್ರವನ್ನು ನಾವು ಮೂಡಣದೇಶದಲ್ಲಿ ಕಂಡು ಆತನಿಗೆ ಅಡ್ಡಬೀಳುವದಕ್ಕೆ ಬಂದೆವು ಅಂದರು. ಇದನ್ನು ಕೇಳಿ ಅರಸನಾದ ಹೆರೋದನೂ ಅವನ ಕೂಡ ಯೆರೂಸಲೇವಿುನವರೆಲ್ಲರೂ ಕಳವಳಪಟ್ಟರು. ಅವನು ಯೆಹೂದ್ಯರ ಎಲ್ಲಾ ಮಹಾಯಾಜಕರನ್ನೂ ಶಾಸ್ತ್ರಿಗಳನ್ನೂ ಕೂಡಿಸಿ - ಕ್ರಿಸ್ತನು ಹುಟ್ಟಬೇಕಾದದ್ದು ಎಲ್ಲಿ ಎಂದು ಅವರನ್ನು ಕೇಳಿದನು. ಅವರು ಅವನಿಗೆ - ಯೂದಾಯದ ಬೇತ್ಲೆಹೇವಿುನಲ್ಲಿಯೇ; ಯಾಕಂದರೆ -ಯೆಹೂದ ಸೀಮೆಯ ಬೇತ್ಲೆಹೇಮೇ, ಯೆಹೂದದ ಮುಖ್ಯಪಟ್ಟಣಗಳಲ್ಲಿ ನೀನು ಎಷ್ಟುಮಾತ್ರವೂ ಸಣ್ಣದಲ್ಲ.ಒಬ್ಬ ಅಧಿಪತಿ ನಿನ್ನೊಳಗಿಂದಲೇ ಹೊರಡುವನು,ಆತನು ನನ್ನ ಪ್ರಜೆಯಾದ ಇಸ್ರಾಯೇಲನ್ನು ಆಳತಕ್ಕವನು ಎಂಬದಾಗಿ ಪ್ರವಾದಿಯ ಮುಖಾಂತರ ಬರೆದದೆ ಎಂದು ಹೇಳಿದರು.
ಅವರು ಹೋದ ಮೇಲೆ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು - ನೀನು ಎದ್ದು ಈ ಕೂಸನ್ನೂ ಇದರ ತಾಯಿಯನ್ನೂ ಕರಕೊಂಡು ಐಗುಪ್ತದೇಶಕ್ಕೆ ಓಡಿಹೋಗಿ ನಾನು ನಿನಗೆ ಹೇಳುವ ತನಕ ಅಲ್ಲೇ ಇರು; ಹೆರೋದನು ಈ ಕೂಸನ್ನು ಕೊಲ್ಲಬೇಕೆಂದು ಅದನ್ನು ಹುಡುಕುತ್ತಿರುವನು ಅಂದನು. ಆಗ ಅವನು ಎದ್ದು ಕೂಸನ್ನೂ ಅದರ ತಾಯಿಯನ್ನೂ ರಾತ್ರಿವೇಳೆಯಲ್ಲಿ ಕರಕೊಂಡು ಐಗುಪ್ತದೇಶಕ್ಕೆ ಹೊರಟುಹೋಗಿ ಹೆರೋದನು ತೀರಿಹೋಗುವ ತನಕ ಅಲ್ಲೇ ಇದ್ದನು. ಇದರಿಂದ - ನನ್ನ ಮಗನನ್ನು ಐಗುಪ್ತದೇಶದೊಳಗಿಂದ ಕರೆದೆನೆಂದು ಕರ್ತನು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರಿತು.ಆಗ ಹೆರೋದನು ತನಗೆ ಜೋಯಿಸರು ಮೋಸ ಮಾಡಿದರೆಂದು ತಿಳಿದು ಬಹಳ ಸಿಟ್ಟಾಗಿ ಆಳುಗಳನ್ನು ಕಳುಹಿಸಿ ತಾನು ಜೋಯಿಸರಿಂದ ತಿಳುಕೊಂಡ ಕಾಲಕ್ಕೆ ಸರಿಯಾಗಿ, ಬೇತ್ಲೆಹೇವಿುನಲ್ಲಿಯೂ ಅದರ ಎಲ್ಲಾ ನೆರೆಹೊರೆ ಹಳ್ಳಿಗಳಲ್ಲಿಯೂ ಎರಡು ವರುಷದೊಳಗಿನ ಗಂಡುಕೂಸುಗಳನ್ನೆಲ್ಲಾ ಕೊಲ್ಲಿಸಿದನು. ಯೆರೆಮೀಯನೆಂಬ ಪ್ರವಾದಿಯು ಹೇಳಿದ ಮಾತು ಆ ಕಾಲದಲ್ಲಿ ನೆರವೇರಿತು; ಅದೇನಂದರೆ -ರಾಮದಲ್ಲಿ ಬೊಬ್ಬೆಯು ಕೇಳಿಸಿತು; ಅಳುವಿಕೆಯೂ ಬಹು ಗೋಳಾಟವೂ ಉಂಟಾದವು; ರಾಹೇಲಳು ತನ್ನ ಮಕ್ಕಳಿಗೋಸ್ಕರ ಅತ್ತತ್ತು ಅವರು ಇಲ್ಲದೆಹೋದದ್ದಕ್ಕಾಗಿ ಸಮಾಧಾನ ಹೊಂದಲೊಲ್ಲದೆ ಇದ್ದಳು ಎಂಬದು.
ಹೆರೋದನು ತೀರಿಹೋದ ಮೇಲೆ ಐಗುಪ್ತದೇಶದಲ್ಲಿ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು - ನೀನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರಕೊಂಡು ಇಸ್ರಾಯೇಲ್‍ದೇಶಕ್ಕೆ ಹೋಗು; ಕೂಸಿನ ಪ್ರಾಣವನ್ನು ತೆಗೆಯಬೇಕೆಂದಿದ್ದವರು ಸತ್ತುಹೋದರು ಎಂದು ಹೇಳಿದನು. ಆಗ ಯೋಸೇಫನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರಕೊಂಡು ಇಸ್ರಾಯೇಲ್‍ದೇಶಕ್ಕೆ ಬಂದನು. ಆದರೆ ಅರ್ಖೆಲಾಯನು ತನ್ನ ತಂದೆಯಾದ ಹೆರೋದನಿಗೆ ಬದಲಾಗಿ ಯೂದಾಯವನ್ನು ಆಳುತ್ತಾನೆಂದು ಕೇಳಿ ಅಲ್ಲಿಗೆ ಹೋಗುವದಕ್ಕೆ ಅಂಜಿದನು. ಆಗ ಅವನು ಕನಸಿನಲ್ಲಿ ದೇವರ ಅಪ್ಪಣೆಯನ್ನು ಹೊಂದಿ ಗಲಿಲಾಯ ಸೀಮೆಗೆ ಹೋದನು. ಮತ್ತು ನಜರೇತೆಂಬ ಊರಿಗೆ ಬಂದು ಅಲ್ಲಿ ಮನೆಮಾಡಿಕೊಂಡು ಇದ್ದನು. ಇದರಿಂದ - ನಜರಾಯನೆಂಬ ಹೆಸರು ಆತನಿಗೆ ಬರುವದು ಎಂಬದಾಗಿ ಪ್ರವಾದಿಗಳಿಂದ ಹೇಳಿಸಿರುವ ಮಾತು ನೆರವೇರಿತು.
ಬಳಿಕ ಮೋಶೆಯ ನೇಮದ ಪ್ರಕಾರ ಅವರ ಸೂತಕ ಕಳೆಯುವದಕ್ಕೆ ತಕ್ಕಷ್ಟು ದಿವಸಗಳು ತುಂಬಲು ಅವರು ಆ ಕೂಸನ್ನು ಯೆರೂಸಲೇವಿುಗೆ ತೆಗೆದುಕೊಂಡು ಹೋದರು. ಯಾಕಂದರೆ ಚೊಚ್ಚಲು ಗಂಡೆಲ್ಲಾ ಕರ್ತನಿಗೆ ಮೀಸಲೆನಿಸಿಕೊಳ್ಳುವದು ಎಂಬದಾಗಿ ಕರ್ತನ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ ಅದನ್ನು ಕರ್ತನಿಗೆ ಸಮರ್ಪಿಸಬೇಕಾಗಿತ್ತು. ಇದಲ್ಲದೆ ಕರ್ತನ ಧರ್ಮಶಾಸ್ತ್ರದಲ್ಲಿ ಹೇಳಿರುವಂತೆ ಒಂದು ಜೋಡಿ ಬೆಳವಕ್ಕಿಯನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ಬಲಿಕೊಡಬೇಕಾಗಿತ್ತು. ಇತ್ತಲಾಗಿ ಅವರು ಕರ್ತನ ಧರ್ಮಶಾಸ್ತ್ರದಲ್ಲಿ ಹೇಳಿರುವ ಕಾರ್ಯಗಳನ್ನೆಲ್ಲಾ ನೆರವೇರಿಸಿದ ಮೇಲೆ ಗಲಿಲಾಯಕ್ಕೆ ಸೇರಿದ ನಜರೇತೆಂಬ ತಮ್ಮ ಊರಿಗೆ ಹಿಂತಿರುಗಿ ಹೋದರು.
ಆ ಬಾಲಕನು ಬೆಳೆದು ಬಲಗೊಂಡು ಜ್ಞಾನದಿಂದ ತುಂಬಿದವನಾದನು; ಮತ್ತು ಆತನ ಮೇಲೆ ದೇವರ ದಯವಿತ್ತು.
ಯೇಸು ಹನ್ನೆರಡು ವರುಷದವನಾದಾಗ ಯೆರೂಸಲೇವಿುಗೆ ಹೋಗಿ ದೇವಾಲಯದಲ್ಲಿ ವಿದ್ವಾಂಸರ ಸಂಗಡ ಸಂಭಾಷಣೆ ಮಾಡಿದ್ದು ಆತನ ತಂದೆತಾಯಿಗಳು ಪ್ರತಿವರುಷವೂ ಪಸ್ಕಹಬ್ಬದ ಜಾತ್ರೆಗೆ ಯೆರೂಸಲೇವಿುಗೆ ಹೋಗುತ್ತಿದ್ದರು. ಹೀಗಿರಲಾಗಿ ಆತನು ಹನ್ನೆರಡು ವರುಷದವನಾದಾಗ ಅವರು ಹಬ್ಬದ ಪದ್ಧತಿಯ ಪ್ರಕಾರ ಅಲ್ಲಿಗೆ ಹೋದರು. ಹಬ್ಬದ ದಿವಸಗಳನ್ನು ತೀರಿಸಿಕೊಂಡು ಹಿಂತಿರುಗಿ ಬರುವಾಗ ಬಾಲಕನಾದ ಯೇಸು ಯೆರೂಸಲೇವಿುನಲ್ಲಿಯೇ ಉಳುಕೊಂಡನು. ಆತನ ತಂದೆತಾಯಿಗಳು ಅದನ್ನು ತಿಳಿಯದೆ ಆತನು ಯಾತ್ರೆಯವರ ಗುಂಪಿನಲ್ಲಿ ಸೇರಿರುವನು ಎಂದು ಭಾವಿಸಿ ಒಂದು ದಿನದ ಪ್ರಯಾಣ ನಡೆದು ಬಂಧುಬಾಂಧವರಲ್ಲಿಯೂ ಪರಿಚಿತಿಯವರಲ್ಲಿಯೂ ಆತನನ್ನು ಹುಡುಕಿ ಕಾಣದೆ ತಿರಿಗಿ ಯೆರೂಸಲೇವಿುಗೆ ಹುಡುಕಿಕೊಂಡು ಹೋದರು. ಮೂರು ದಿನದ ಮೇಲೆ ಆತನನ್ನು ದೇವಾಲಯದಲ್ಲಿ ಕಂಡರು. ಆತನು ಬೋಧಕರ ನಡುವೆ ಕುಳಿತುಕೊಂಡು ಅವರ ಉಪದೇಶವನ್ನು ಕೇಳುತ್ತಾ ಪ್ರಶ್ನೆಮಾಡುತ್ತಾ ಇದ್ದನು. ಆತನು ಆಡಿದ ಮಾತುಗಳನ್ನು ಕೇಳಿದವರೆಲ್ಲರು ಆತನ ಬುದ್ಧಿಗೂ ಉತ್ತರಗಳಿಗೂ ಆಶ್ಚರ್ಯಪಟ್ಟರು. ತಂದೆತಾಯಿಗಳು ಆತನನ್ನು ಕಂಡು ಬೆರಗಾದರು; ಮತ್ತು ಆತನ ತಾಯಿಯು - ಕಂದಾ, ನೀನು ನಮಗೆ ಯಾಕೆ ಹೀಗೆ ಮಾಡಿದಿ? ನಿನ್ನ ತಂದೆಯೂ ನಾನೂ ಎಷ್ಟೋ ತಳಮಳಗೊಂಡು ನಿನ್ನನ್ನು ಹುಡುಕಿ ಬಂದೆವಲ್ಲಾ ಎಂದು ಹೇಳಲು ಆತನು ಅವರಿಗೆ - ನೀವು ನನ್ನನ್ನು ಹುಡುಕಿದ್ದೇನು? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದದ್ದು ನಿಮಗೆ ತಿಳಿಯಲಿಲ್ಲವೇ? ಎಂದು ಉತ್ತರಕೊಟ್ಟನು. ಆದರೆ ಆತನು ಹೇಳಿದ ಮಾತಿನ ಅರ್ಥವನ್ನು ಅವರು ಗ್ರಹಿಸಲಿಲ್ಲ. ಬಳಿಕ ಆತನು ಅವರ ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ಅಧೀನನಾಗಿದ್ದನು. ಆತನ ತಾಯಿಯು ಈ ಸಂಗತಿಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿ ಇಟ್ಟುಕೊಂಡಳು.
ಯೇಸು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು; ಇದಲ್ಲದೆ ದೇವರ ಮತ್ತು ಮನುಷ್ಯರ ದಯೆಯು ಆತನ ಮೇಲೆ ಹೆಚ್ಚಾಗುತ್ತಾ ಬಂತು.
-ಇದು ಯೆಶಾಯನೆಂಬ ಪ್ರವಾದಿಯ ಗ್ರಂಥದಲ್ಲಿ ಬರೆದಿರುವ ಮಾತಿಗೆ ಅನುಸಾರವಾಗಿ ನಡೆಯಿತು. ಆ ಮಾತು ಏನಂದರೆ - ಕರ್ತನ ದಾರಿಯನ್ನು ಸಿದ್ಧಮಾಡಿರಿ, ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ. ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡುವವು, ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡುವವು, ಡೊಂಕಾಗಿರುವಂಥದು ನೀಟಾಗುವದು, ಕೊರಕಲಾದ ದಾರಿಗಳು ಸಮವಾಗುವವು. ಎಲ್ಲಾ ಮನುಷ್ಯರೂ ದೇವರಿಂದ ಸಿದ್ಧವಾಗುವ ರಕ್ಷಣೆಯನ್ನು ಕಾಣುವರು ಎಂಬದಾಗಿ ಅಡವಿಯಲ್ಲಿ ಕೂಗುವವನ ಶಬ್ಧವದೆ ಎಂಬದೇ.ಯೋಹಾನನು ಬಂದು ಜನರಿಗೆ - ನೀವು ಪಾಪಪರಿಹಾರಕ್ಕಾಗಿ ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿಹೇಳುತ್ತಾ ಅಡವಿಯಲ್ಲಿ ದೀಕ್ಷಾಸ್ನಾನಮಾಡಿಸುತ್ತಾ ಇದ್ದನು.ಪರಲೋಕರಾಜ್ಯವು ಸಮೀಪವಾಯಿತು; ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ಯೂದಾಯದ ಅಡವಿಯಲ್ಲಿ ಸಾರಿ ಹೇಳುತ್ತಾ ಬಂದನು.ಈ ಯೋಹಾನನಿಗೆ ಒಂಟೇ ಕೂದಲಿನ ಹೊದಿಕೆಯೂ ಸೊಂಟದಲ್ಲಿ ತೊಗಲಿನ ನಡುಕಟ್ಟೂ ಇದ್ದವು. ಅವನಿಗೆ ವಿುಡಿತೆ ಮತ್ತು ಕಾಡಜೇನು ಆಹಾರವಾಗಿದ್ದವು.ಆಗ ಯೆರೂಸಲೇಮೂ ಎಲ್ಲಾ ಯೂದಾಯವೂ ಯೊರ್ದನ್ಹೊಳೆಯ ಸುತ್ತಲಿರುವ ಎಲ್ಲಾ ಸೀಮೆಯೂ ಅವನ ಬಳಿಗೆ ಹೊರಟುಹೋಗಿ, ಅವರು ತಮ್ಮತಮ್ಮ ಪಾಪಗಳನ್ನು ಹೇಳಿಕೊಂಡು ಯೊರ್ದನ್ಹೊಳೆಯಲ್ಲಿ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.
ಅಧ್ಯಾಯ 5
ದೇವಕುಮಾರನಾದ ಯೇಸು ಕ್ರಿಸ್ತನ ವಿಷಯವಾದ ಸುವಾರ್ತೆಯ ಪ್ರಾರಂಭವು.ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರ ಬಳಿಯಲ್ಲಿತ್ತು; ಆ ವಾಕ್ಯವು ದೇವರಾಗಿತ್ತು. ಆ ವಾಕ್ಯವೆಂಬವನು ಆದಿಯಲ್ಲಿ ದೇವರ ಬಳಿಯಲ್ಲಿದ್ದನು. ಆತನ ಮೂಲಕವಾಗಿ ಸಮಸ್ತವು ಉಂಟಾಯಿತು; ಉಂಟಾಗಿರುವ ವಸ್ತುಗಳಲ್ಲಿ ಆತನಿಲ್ಲದೆ ಒಂದಾದರೂ ಉಂಟಾಗಲಿಲ್ಲ. ಆತನಲ್ಲಿ ಜೀವವಿತ್ತು; ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು. ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ; ಕತ್ತಲು ಅದನ್ನು ಮುಸುಕಲಿಲ್ಲ. ದೇವರು ಕಳುಹಿಸಿದ ಒಬ್ಬ ಮನುಷ್ಯನು ಬಂದನು; ಅವನ ಹೆಸರು ಯೋಹಾನನು. ಈ ಯೋಹಾನನು ಸಾಕ್ಷಿಗಾಗಿ ಬಂದನು. ತನ್ನ ಮೂಲಕವಾಗಿ ಎಲ್ಲರು ನಂಬುವಂತೆ ಅವನು ಆ ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡುವದಕ್ಕೆ ಬಂದನು. ಅವನೇ ಆ ಬೆಳಕಲ್ಲ, ಆ ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡುವದಕ್ಕಾಗಿ ಬಂದವನು.ನಿಜವಾದ ಬೆಳಕು ಲೋಕಕ್ಕೆ ಬರುವದಾಗಿತ್ತು; ಆ ಬೆಳಕೇ ಪ್ರತಿ ಮನುಷ್ಯನಿಗೂ ಬೆಳಕನ್ನು ಕೊಡುವಂಥದು. ಆತನು ಲೋಕದಲ್ಲಿ ಇದ್ದನು; ಮತ್ತು ಲೋಕವು ಆತನ ಮೂಲಕವಾಗಿ ಉಂಟಾಯಿತು; ಆದರೂ ಲೋಕವು ಆತನನ್ನು ಅರಿಯಲಿಲ್ಲ. ಆತನು ತನ್ನ ಸ್ವಾಸ್ಥ್ಯಕ್ಕೆ ಬಂದನು; ಆದರೆ ಸ್ವಂತಜನರು ಆತನನ್ನು ಅಂಗೀಕರಿಸಲಿಲ್ಲ. ಯಾರಾರು ಆತನನ್ನು ಅಂಗೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ, ಅವರಿಗೆ ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು. ಇವರು ರಕ್ತಸಂಬಂಧದಿಂದಾಗಲಿ ಕಾಮದಿಂದಾಗಲಿ ಪುರುಷಸಂಕಲ್ಪದಿಂದಾಗಲಿ ಹುಟ್ಟಿದವರಲ್ಲ, ದೇವರಿಂದಲೇ ಹುಟ್ಟಿದವರು.ಆ ವಾಕ್ಯವೆಂಬವನು ನರಾವತಾರ ಎತ್ತಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು; ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು. ಯೋಹಾನನು ಆತನ ವಿಷಯವಾಗಿ ಸಾಕ್ಷಿಕೊಡುತ್ತಾನೆ; ಹೇಗಂದರೆ - ನನ್ನ ಹಿಂದೆ ಬರುವವನು ನನಗಿಂತ ಮೊದಲೇ ಇದ್ದದರಿಂದ ನನಗೆ ಮುಂದಿನವನಾದನು ಎಂಬದಾಗಿ ನಾನು ಹೇಳಿದವನು ಈತನೇ ಎಂದು ಕೂಗಿ ಹೇಳಿದ್ದಾನೆ. ಧರ್ಮಶಾಸ್ತ್ರವು ಮೋಶೆಯ ಮುಖಾಂತರ ಕೊಡಲ್ಪಟ್ಟಿತು; ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರ ಬಂದವು. ನಾವೆಲ್ಲರು ಆತನ ಪರಿಪೂರ್ಣತೆಯೊಳಗಿಂದ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು. ದೇವರನ್ನು ಯಾರೂ ಎಂದೂ ಕಂಡಿಲ್ಲ; ಯಾವನು ಏಕಪುತ್ರನೂ ಸ್ವತಃ ದೇವರೂ ಆಗಿದ್ದು ತಂದೆಯ ಎದೆಯಲ್ಲಿದ್ದಾನೋ ಆತನೇ ತಿಳಿಯಪಡಿಸಿದನು.
ಆ ಕಾಲದಲ್ಲಿ ಯೇಸು ಯೋಹಾನನಿಂದ ಸ್ನಾನಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದನ್ಹೊಳೆಗೆ ಬಂದನು. ಆಗ ಯೋಹಾನನು - ನಾನು ನಿನ್ನಿಂದ ಸ್ನಾನ ಮಾಡಿಸಿಕೊಳ್ಳತಕ್ಕವನಾಗಿರುವಲ್ಲಿ ನೀನು ನನ್ನ ಬಳಿಗೆ ಬರುವದೇನು ಎಂದು ಹೇಳಿ ಆತನನ್ನು ತಡೆಯುತ್ತಾ ಇದ್ದನು. ಆದರೆ ಯೇಸು ಅವನಿಗೆ - ಸದ್ಯಕ್ಕೆ ಒಪ್ಪಿಕೋ; ಹೀಗೆ ನಾವು ಎಲ್ಲಾ ಧರ್ಮವನ್ನು ನೆರವೇರಿಸತಕ್ಕದ್ದಾಗಿದೆ ಎಂದು ಹೇಳಿದಾಗ ಅವನು ಒಪ್ಪಿಕೊಂಡನು. ಯೇಸು ಸ್ನಾನಮಾಡಿಸಿಕೊಂಡ ಕೂಡಲೆ ನೀರಿನಿಂದ ಮೇಲಕ್ಕೆ ಬರಲು ಇಗೋ, ಆತನಿಗೆ ಆಕಾಶವು ತೆರೆಯಿತು; ಮತ್ತು ದೇವರ ಆತ್ಮ ಪಾರಿವಾಳದ ಹಾಗೆ ಇಳಿದು ತನ್ನ ಮೇಲೆ ಬರುವದನ್ನು ಕಂಡನು. ಆಗ - ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು.
ಮರುದಿನ ಯೋಹಾನನು ತನ್ನ ಕಡೆಗೆ ಬರುವ ಯೇಸುವನ್ನು ನೋಡಿ - ಅಗೋ [ಯಜ್ಞಕ್ಕೆ] ದೇವರು ನೇವಿುಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು. ನನ್ನ ಹಿಂದೆ ಬರುವವನು ನನಗಿಂತ ಮೊದಲೇ ಇದ್ದದರಿಂದ ನನಗೆ ಮುಂದಿನವನಾದನು ಎಂದು ನಾನು ಹೇಳಿದ ಮಾತು ಈತನ ವಿಷಯವಾಗಿಯೇ. ನನಗೂ ಆತನ ಗುರುತಿರಲಿಲ್ಲ; ಆದರೆ ಆತನನ್ನು ಇಸ್ರಾಯೇಲ್ಯರಿಗೆ ತಿಳಿಯಪಡಿಸುವದಕ್ಕೋಸ್ಕರವೇ ನಾನು ನೀರಿನ ಸ್ನಾನವನ್ನು ಮಾಡಿಸುವವನಾಗಿ ಬಂದೆನು ಅಂದನು. ಇದಲ್ಲದೆ ಯೋಹಾನನು ಸಾಕ್ಷಿಕೊಟ್ಟು ಹೇಳಿದ್ದೇನಂದರೆ - ದೇವರಾತ್ಮವು ಪಾರಿವಾಳದಂತೆ ಆಕಾಶದಿಂದ ಇಳಿಯುವದನ್ನು ನೋಡಿದೆನು. ಅದು ಆತನ ಮೇಲೆ ನೆಲೆಗೊಂಡಿತು. ನನಗೂ ಆತನ ಗುರುತಿರಲಿಲ್ಲ; ಆದರೆ ನೀರಿನ ಸ್ನಾನವನ್ನು ಮಾಡಿಸುವದಕ್ಕೆ ನನ್ನನ್ನು ಕಳುಹಿಸಿದಾತನು - ಯಾವನ ಮೇಲೆ ಆತ್ಮವು ಇಳಿದುಬಂದು ಇರುವದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮದ ಸ್ನಾನವನ್ನು ಕೊಡುವವನು ಎಂದು ತಾನೇ ನನಗೆ ಹೇಳಿದನು. ನಾನು ಅದನ್ನು ನೋಡಿ ಈತನೇ ದೇವಕುಮಾರನೆಂದು ಸಾಕ್ಷಿಕೊಟ್ಟಿದ್ದೇನೆ ಅಂದನು.
ಯೇಸು ಉಪದೇಶಮಾಡುವದಕ್ಕೆ ಪ್ರಾರಂಭಿಸಿದಾಗ ಹೆಚ್ಚುಕಡಿಮೆ ಮೂವತ್ತು ವರುಷದವನಾಗಿದ್ದನು. ಆತನು ಜನರ ಎಣಿಕೆಯಲ್ಲಿ ಯೋಸೇಫನ ಮಗನು. ಯೋಸೇಫನು ಹೇಲೀಯ ಮಗನು; ಇವನು ಮತ್ಥಾತನ ಮಗನು; ಇವನು ಲೇವಿಯ ಮಗನು; ಇವನು ಮೆಲ್ಖಿಯ ಮಗನು; ಇವನು ಯನ್ನಾಯನ ಮಗನು; ಇವನು ಯೋಸೇಫನ ಮಗನು; ಇವನು ಮತ್ತಥೀಯನ ಮಗನು; ಇವನು ಆಮೋಸನ ಮಗನು; ಇವನು ನಹೂಮನ ಮಗನು; ಇವನು ಎಸ್ಲಿಯ ಮಗನು; ಇವನು ನಗ್ಗಾಯನ ಮಗನು; ಇವನು ಮಹಾಥನ ಮಗನು; ಇವನು ಮತ್ತಥೀಯನ ಮಗನು; ಇವನು ಶಿಮೀಯ ಮಗನು; ಇವನು ಯೊಸೇಖನ ಮಗನು; ಇವನು ಯೂದನ ಮಗನು; ಇವನು ಯೋಹಾನನ ಮಗನು; ಇವನು ರೇಸನ ಮಗನು; ಇವನು ಜೆರುಬಾಬೆಲನ ಮಗನು; ಇವನು ಸಲಥಿಯೇಲನ ಮಗನು; ಇವನು ನೇರಿಯ ಮಗನು; ಇವನು ಮೆಲ್ಖಿಯ ಮಗನು; ಇವನು ಅದ್ದಿಯ ಮಗನು; ಇವನು ಕೋಸಾಮನ ಮಗನು; ಇವನು ಎಲ್ಮದಾಮನ ಮಗನು; ಇವನು ಏರನ ಮಗನು; ಇವನು ಯೆಹೋಷುವನ ಮಗನು; ಇವನು ಎಲಿಯೇಜರನ ಮಗನು; ಇವನು ಯೋರೈಮನ ಮಗನು; ಇವನು ಮತ್ಥಾತನ ಮಗನು; ಇವನು ಲೇವಿಯ ಮಗನು; ಇವನು ಸಿವಿುಯೋನನ ಮಗನು; ಇವನು ಯೂದನ ಮಗನು; ಇವನು ಯೋಸೇಫನ ಮಗನು; ಇವನು ಯೋನಾಮನ ಮಗನು; ಇವನು ಎಲಿಯಕೀಮನ ಮಗನು; ಇವನು ಮೆಲೆಯಾನ ಮಗನು; ಇವನು ಮೆನ್ನನ ಮಗನು; ಇವನು ಮತ್ತಾಥನ ಮಗನು; ಇವನು ನಾತಾನನ ಮಗನು; ಇವನು ದಾವೀದನ ಮಗನು;
ಇವನು ಇಶಾಯನ ಮಗನು; ಇವನು ಓಬೇದನ ಮಗನು; ಇವನು ಬೋವಜನ ಮಗನು; ಇವನು ಸಲ್ಮೋನನ ಮಗನು; ಇವನು ನಹಸ್ಸೋನನ ಮಗನು; ಇವನು ಅಮ್ಮಿನಾದಾಬನ ಮಗನು; ಇವನು ಆರ್ನೈಯನ ಮಗನು; ಇವನು ಎಸ್ರೋನನ ಮಗನು; ಇವನು ಪೆರೆಸನ ಮಗನು; ಇವನು ಯೂದನ ಮಗನು; ಇವನು ಯಾಕೋಬನ ಮಗನು; ಇವನು ಇಸಾಕನ ಮಗನು; ಇವನು ಅಬ್ರಹಾಮನ ಮಗನು; ಇವನು ತೇರನ ಮಗನು; ಇವನು ನಹೋರನ ಮಗನು; ಇವನು ಸೆರೂಗನ ಮಗನು; ಇವನು ರೆಗೂವನ ಮಗನು; ಇವನು ಪೆಲೆಗನ ಮಗನು; ಇವನು ಹೇಬೆರನ ಮಗನು; ಇವನು ಸಾಲನ ಮಗನು; ಇವನು ಕಯಿನಾನನ ಮಗನು; ಇವನು ಅರ್ಫಕ್ಷಾದನ ಮಗನು; ಇವನು ಶೇಮನ ಮಗನು; ಇವನು ನೋಹನ ಮಗನು; ಇವನು ಲಾಮೆಕನ ಮಗನು; ಇವನು ಮತೂಷಲನ ಮಗನು; ಇವನು ಹನೋಕನ ಮಗನು; ಇವನು ಯೆರೆದನ ಮಗನು; ಇವನು ಮಹಲಲೇಲನ ಮಗನು; ಇವನು ಕಯಿನಾನನ ಮಗನು; ಇವನು ಎನೋಷನ ಮಗನು; ಇವನು ಸೇಥನ ಮಗನು; ಇವನು ಆದಾಮನ ಮಗನು; ಇವನು ದೇವರ ಮಗನು.
ಅಧ್ಯಾಯ 6
ಆಗ ಯೇಸು ಸೈತಾನನಿಂದ ಶೋಧಿಸಲ್ಪಡುವದಕ್ಕಾಗಿ ಆತ್ಮನು ಆತನನ್ನು ಅಡವಿಗೆ ಒಯ್ದನು. ಆತನು ನಾಲ್ವತ್ತು ದಿವಸ ಹಗಲಿರುಳು ಉಪವಾಸವಿದ್ದ ತರುವಾಯ ಆತನಿಗೆ ಹಸಿವಾಯಿತು.ಆಗ ಆ ಶೋಧಕನು ಆತನ ಬಳಿಗೆ ಬಂದು - ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳು ರೊಟ್ಟಿಯಾಗುವಂತೆ ಅಪ್ಪಣೆಕೊಡು ಎಂದು ಹೇಳಲು ಆತನು - ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ ಅಂದನು.ಆಗ ಸೈತಾನನು ಆತನನ್ನು ಪರಿಶುದ್ಧ ಪಟ್ಟಣಕ್ಕೆ ಕರಕೊಂಡು ಹೋಗಿ ದೇವಾಲಯದ ಶಿಖರದ ಮೇಲೆ ನಿಲ್ಲಿಸಿ ಆತನಿಗೆ - ನೀನು ದೇವರ ಮಗನಾಗಿದ್ದರೆ ಕೆಳಕ್ಕೆ ದುಮುಕು; ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು; ನಿನ್ನ ಕಾಲು ಕಲ್ಲಿಗೆ ತಗಲೀತೆಂದು ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು ಎಂಬದಾಗಿ ಬರೆದದೆಯಲ್ಲಾ ಎಂದು ಹೇಳಿದನು. ಅದಕ್ಕೆ ಯೇಸು - ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದು ಎಂಬದಾಗಿ ಸಹ ಬರೆದದೆ ಅಂದನು.ಬಳಿಕ ಸೈತಾನನು ಆತನನ್ನು ಮೇಲಕ್ಕೆ ಕರೆದುಕೊಂಡು ಹೋಗಿ ಕ್ಷಣಮಾತ್ರದಲ್ಲಿ ಲೋಕದ ಎಲ್ಲಾ ರಾಜ್ಯಗಳನ್ನು ಆತನಿಗೆ ತೋರಿಸಿ - ಇವೆಲ್ಲವುಗಳ ಅಧಿಕಾರವನ್ನೂ ಇವುಗಳ ವೈಭವವನ್ನೂ ನಿನಗೆ ಕೊಡುವೆನು; ಇದೆಲ್ಲಾ ನನಗೆ ಕೊಟ್ಟದೆ, ಇದನ್ನು ನನ್ನ ಮನಸ್ಸು ಬಂದವನಿಗೆ ಕೊಡುತ್ತೇನೆ; ನೀನು ನನ್ನ ಮುಂದೆ ಅಡ್ಡಬಿದ್ದರೆ ಇದೆಲ್ಲಾ ನಿನ್ನದಾಗುವದು ಎಂದು ಆತನಿಗೆ ಹೇಳಿದನು. ಅದಕ್ಕೆ ಯೇಸು - ನಿನ್ನ ದೇವರಾಗಿರುವ ಕರ್ತನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬದಾಗಿ ಬರೆದದೆ ಎಂದು ಉತ್ತರಕೊಟ್ಟನು.ಆಗ ಸೈತಾನನು ಆತನನ್ನು ಬಿಟ್ಟುಬಿಟ್ಟನು. ಮತ್ತು ದೇವದೂತರು ಬಂದು ಆತನಿಗೆ ಉಪಚಾರ ಮಾಡಿದರು.ಸೈತಾನನು ಸಕಲವಿಧವಾದ ಶೋಧನೆಯನ್ನು ಮುಗಿಸಿ ಸ್ವಲ್ಪಕಾಲ ಆತನನ್ನು ಬಿಟ್ಟು ಹೊರಟುಹೋದನು.
ತರುವಾಯ ಯೇಸು ಪವಿತ್ರಾತ್ಮನ ಶಕ್ತಿಯಿಂದ ಕೂಡಿದವನಾಗಿ ತಿರಿಗಿ ಗಲಿಲಾಯಕ್ಕೆ ಹೋದನು; ಆತನ ಸುದ್ದಿಯು ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಹಬ್ಬಿಕೊಂಡಿತು. ಆತನು ಅವರ ಸಭಾಮಂದಿರಗಳಲ್ಲಿ ಬೋಧಿಸುತ್ತಾ ಬಂದನು; ಎಲ್ಲರೂ ಆತನನ್ನು ಹೊಗಳಿದರು. ಹೀಗಿರಲಾಗಿ ಆತನು ತಾನು ಬೆಳೆದ ನಜರೇತಿಗೆ ಬಂದು ತನ್ನ ವಾಡಿಕೆಯ ಪ್ರಕಾರ ಸಬ್ಬತ್ದಿನದಲ್ಲಿ ಸಭಾಮಂದಿರಕ್ಕೆ ಹೋಗಿ ಓದುವದಕ್ಕಾಗಿ ಎದ್ದು ನಿಂತನು. ಆಗ ಯೆಶಾಯನೆಂಬ ಪ್ರವಾದಿಯ ಗ್ರಂಥದ ಸುರಳಿಯನ್ನು ಆತನ ಕೈಗೆ ಕೊಡಲಾಗಿ ಆತನು ಆ ಸುರಳಿಯನ್ನು ಬಿಚ್ಚಿ ಮುಂದೆ ಹೇಳುವ ಮಾತು ಬರೆದಿರುವ ಸ್ಥಳವನ್ನು ಕಂಡು ಓದಿದನು; ಆ ಮಾತೇನಂದರೆ – ಕರ್ತನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು, ಸೆರೆಯವರಿಗೆ ಬಿಡುಗಡೆಯಾಗುವದನ್ನು ಮತ್ತು ಕುರುಡರಿಗೆ ಕಣ್ಣು ಬರುವದನ್ನು ಪ್ರಸಿದ್ಧಿಪಡಿಸುವದಕ್ಕೂ ಮನಮುರಿದವರನ್ನು ಬಿಡಿಸಿ ಕಳುಹಿಸುವದಕ್ಕೂಕರ್ತನು ನೇವಿುಸಿರುವ ಶುಭವರ್ಷವನ್ನು ಪ್ರಚುರಪಡಿಸುವದಕ್ಕೂಆತನು ನನ್ನನ್ನು ಕಳುಹಿಸಿದ್ದಾನೆ ಎಂಬದು. ಓದಿದ ಮೇಲೆ ಆತನು ಆ ಸುರಳಿಯನ್ನು ಸುತ್ತಿ ಸಭಾಮಂದಿರದ ಆಳಿನ ಕೈಗೆ ಕೊಟ್ಟು ಕೂತುಕೊಂಡನು. ಅಲ್ಲಿದ್ದವರೆಲ್ಲರ ಕಣ್ಣುಗಳು ಆತನ ಮೇಲೆಯೇ ಬಿದ್ದಿರಲಾಗಿ ಆತನು ಅವರಿಗೆ - ಈ ಹೊತ್ತು ನೀವು ನನ್ನ ಮಾತನ್ನು ಕೇಳುವಲ್ಲಿ ಈ ವೇದೋಕ್ತಿ ನೆರವೇರಿದೆ ಎಂದು ಹೇಳುತ್ತಿರುವಾಗ ಎಲ್ಲರು ಆತನನ್ನು ಹೊಗಳಿ ಆತನ ಬಾಯಿಂದ ಹೊರಡುವ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟು ಇವನು ಯೋಸೇಫನ ಮಗನಲ್ಲವೇ ಎಂದು ಮಾತಾಡಿಕೊಂಡರು.
ಆತನು ಅವರಿಗೆ - ನೀವಂತೂ ವೈದ್ಯನೇ, ನಿನ್ನನ್ನೇ ವಾಸಿಮಾಡಿಕೋ ಎಂಬ ಗಾದೆಯನ್ನು ನನಗೆ ಹೇಳಿ ಕಪೆರ್ನೌವಿುನಲ್ಲಿ ಎಂಥೆಂಥ ಕಾರ್ಯಗಳು ನಡೆದವೆಂದು ನಾವು ಕೇಳಿದೆವೋ ಅಂಥವುಗಳನ್ನು ಈ ನಿನ್ನ ಸ್ವಂತ ಸ್ಥಳದಲ್ಲಿ ಮಾಡು ಅನ್ನುವಿರಷ್ಟೆ. ಆದರೆ ಯಾವ ಪ್ರವಾದಿಯೂ ಸ್ವದೇಶದಲ್ಲಿ ಸಮ್ಮತನಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಕೇಳಿರಿ, ಎಲೀಯನ ಕಾಲದಲ್ಲಿ ಮೂರು ವರುಷ ಆರು ತಿಂಗಳು ಮಳೆಬಾರದೆ ದೇಶದಲ್ಲೆಲ್ಲಾ ದೊಡ್ಡ ಬರ ಉಂಟಾದಾಗ ಇಸ್ರಾಯೇಲ್ ಜನರಲ್ಲಿ ಎಷ್ಟೋ ಮಂದಿ ವಿಧವೆಯರು ಇದ್ದದ್ದು ನಿಜ; ಆದರೆ ಅವರಲ್ಲಿ ಒಬ್ಬರ ಬಳಿಗೂ ದೇವರು ಎಲೀಯನನ್ನು ಕಳುಹಿಸದೆ ಸೀದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನಲ್ಲಿದ್ದ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಿದನು. ಮತ್ತು ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಾಯೇಲ್ ಜನರೊಳಗೆ ಎಷ್ಟೋ ಮಂದಿ ಕುಷ್ಠರೋಗಿಗಳು ಇದ್ದಾಗ್ಯೂ ಅವರಲ್ಲಿ ಒಬ್ಬನಾದರೂ ಶುದ್ಧನಾಗದೆ ಸುರಿಯ ದೇಶದವನಾದ ನಾಮಾನನು ಮಾತ್ರ ಶುದ್ಧನಾದನು ಎಂದು ಹೇಳಿದನು. ಸಭಾಮಂದಿರದಲ್ಲಿರುವವರೆಲ್ಲರು ಈ ಮಾತುಗಳನ್ನು ಕೇಳಿ ಬಹಳವಾಗಿ ಸಿಟ್ಟುಗೊಂಡು ಎದ್ದು ಆತನನ್ನು ಊರಹೊರಕ್ಕೆ ಅಟ್ಟಿ ತಮ್ಮ ಊರು ಕಟ್ಟಿದ್ದ ಗುಡ್ಡದ ಕಡಿದಾದ ಸ್ಥಳಕ್ಕೆ ನಡಿಸಿಕೊಂಡು ಹೋಗಿ ಅಲ್ಲಿಂದ ಕೆಳಕ್ಕೆ ದೊಬ್ಬಬೇಕೆಂದಿದ್ದರು. ಆದರೆ ಆತನು ಅವರ ಮಧ್ಯದಲ್ಲಿ ಹಾದು ಹೊರಟುಹೋದನು.
ಅಧ್ಯಾಯ 7
ಆದರೆ ಉಪರಾಜನಾದ ಹೆರೋದನು ತನ್ನ ಅಣ್ಣನ ಹೆಂಡತಿಯಾದ ಹೆರೋದ್ಯಳ ನಿವಿುತ್ತವಾಗಿಯೂ ತಾನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳ ನಿವಿುತ್ತವಾಗಿಯೂ ಯೋಹಾನನಿಂದ ಗದರಿಸಲ್ಪಟ್ಟವನಾಗಿ ಅವನನ್ನು ಸೆರೆಮನೆಯಲ್ಲಿ ಹಾಕಿಸಿ ತನ್ನ ದುಷ್ಕೃತ್ಯಗಳ ಲೆಕ್ಕವನ್ನು ಇನ್ನೂ ಹೆಚ್ಚಿಸಿದನು.ಯೋಹಾನನು ಸೆರೆಗೆ ಬಿದ್ದನೆಂದು ಯೇಸು ಕೇಳಿ ಆ ಸ್ಥಳವನ್ನು ಬಿಟ್ಟು ಗಲಿಲಾಯ ಸೀಮೆಗೆ ಹೊರಟುಹೋದನು. ಬಳಿಕ ನಜರೇತೆಂಬ ಊರನ್ನು ಬಿಟ್ಟು ಜೆಬುಲೋನ್ ನೆಫ್ತಲೀಮ್ ಎಂಬ ನಾಡುಗಳಿಗೆ ಬಂದು ಸಮುದ್ರದ ಹತ್ತಿರದಲ್ಲಿರುವ ಕಪೆರ್ನೌಮೆಂಬ ಊರಿನಲ್ಲಿ ಮನೆಮಾಡಿಕೊಂಡು ಇದ್ದನು. ಇದರಿಂದ ಯೆಶಾಯನೆಂಬ ಪ್ರವಾದಿಯ ಮುಖಾಂತರ ಹೇಳಿಸಿರುವ ಮಾತು ನೆರವೇರಿತು; ಆ ಮಾತು ಏನಂದರೆ ಜೆಬುಲೋನ್ ಸೀಮೆ ಮತ್ತು ನೆಫ್ತಲೀಮ್ ಸೀಮೆ, ಯೊರ್ದನಿನ ಆಚೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ, ಕತ್ತಲಲ್ಲಿ ವಾಸಿಸಿದ ಈ ಸೀಮೆಗಳ ಜನರಿಗೆ ದೊಡ್ಡ ಬೆಳಕು ಕಾಣಿಸಿತು; ಕಾರ್ಗತ್ತಲಾದ ದೇಶದಲ್ಲಿದ್ದವರಿಗೆ ಸೂರ್ಯೋದಯವಾಯಿತು ಎಂಬದು.ಯೇಸು ಗಲಿಲಾಯ ಸೀಮೆಗೆ ಬಂದು - ಕಾಲ ಪರಿಪೂರ್ಣವಾಯಿತು, ದೇವರ ರಾಜ್ಯವು ಸಮೀಪಿಸಿತು, ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ ಎಂದು ದೇವರ ಸುವಾರ್ತೆಯನ್ನು ಸಾರಿಹೇಳಿದನು.
ಹೀಗಿರುವಲ್ಲಿ ಆತನು ಗಲಿಲಾಯ ಸಮುದ್ರದ ಬಳಿಯಲ್ಲಿ ಹೋಗುತ್ತಿರುವಾಗ ಸೀಮೋನನೂ ಸೀಮೋನನ ತಮ್ಮನಾದ ಅಂದ್ರೆಯನೂ ಸಮುದ್ರದಲ್ಲಿ ಬಲೆಬೀಸುವದನ್ನು ಕಂಡನು. ಅವರು ಬೆಸ್ತರು. ಯೇಸು ಅವರಿಗೆ - ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು ಎಂದು ಹೇಳುತ್ತಲೇ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನ ಹಿಂದೆ ಹೋದರು. ಇನ್ನೂ ಸ್ವಲ್ಪ ಮುಂದೆ ಹೋಗಿ ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನನ್ನೂ ಕಂಡನು. ಇವರು ದೋಣಿಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು. ಕೂಡಲೆ ಇವರನ್ನೂ ಕರೆದನು. ಅವರು ತಮ್ಮ ತಂದೆಯಾದ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲಿ ಬಿಟ್ಟು ಆತನ ಹಿಂದೆ ಹೋದರು.
ಮೂರನೆಯ ದಿನದಲ್ಲಿ ಗಲಿಲಾಯದ ಕಾನಾ ಊರಿನಲ್ಲಿ ಒಂದು ಮದುವೆ ಆಯಿತು; ಯೇಸುವಿನ ತಾಯಿ ಅಲ್ಲಿ ಇದ್ದಳು; ಯೇಸುವನ್ನೂ ಆತನ ಶಿಷ್ಯರನ್ನೂ ಮದುವೆಗೆ ಕರೆದರು. ದ್ರಾಕ್ಷಾರಸವು ಸಾಲದೆ ಹೋಗಲಾಗಿ ಯೇಸುವಿನ ತಾಯಿ ಆತನಿಗೆ - ಅವರಲ್ಲಿ ದ್ರಾಕ್ಷಾರಸವಿಲ್ಲ ಎಂದು ಹೇಳಿದಳು. ಯೇಸು ಆಕೆಗೆ - ಅಮ್ಮಾ, ನನ್ನ ಗೊಡವೆ ನಿನಗೇಕೆ? ನನ್ನ ಸಮಯವು ಇನ್ನೂ ಬಂದಿಲ್ಲ ಎಂದು ಹೇಳಲು ಆತನ ತಾಯಿಯು ಕೆಲಸದವರಿಗೆ - ಆತನು ನಿಮಗೆ ಏನು ಹೇಳುವನೋ ಅದನ್ನು ಮಾಡಿರಿ ಅಂದಳು. ಯೆಹೂದ್ಯರ ಶುದ್ಧಾಚಾರದ ಪದ್ಧತಿಯ ಪ್ರಕಾರ ಎರಡು ಮೂರು ಕೊಳಗ ನೀರು ಹಿಡಿಯುವ ಆರು ಕಲ್ಲಿನ ಬಾನೆಗಳು ಅಲ್ಲಿ ಇಟ್ಟಿದ್ದವು. ಯೇಸು ಅವರಿಗೆ - ಆ ಬಾನೆಗಳಲ್ಲಿ ನೀರು ತುಂಬಿರಿ ಅನ್ನಲು ಅವುಗಳನ್ನು ಕಂಠದ ಮಟ್ಟಿಗೆ ತುಂಬಿದರು. ಆಗ ಅವರಿಗೆ - ಈಗ ಅದನ್ನು ತೋಡಿಕೊಂಡು ಹೋಗಿ ಔತಣದ ಪಾರುಪತ್ಯಗಾರನಿಗೆ ಕೊಡಿರಿ ಎಂದು ಹೇಳಿದಾಗ ತಕ್ಕೊಂಡು ಹೋಗಿ ಕೊಟ್ಟರು. ಅದು ಎಲ್ಲಿಂದ ಬಂತೋ ನೀರನ್ನು ತೋಡಿದ ಕೆಲಸದವರಿಗೆ ತಿಳಿದಿತ್ತೇ ಹೊರತು ಔತಣದ ಪಾರುಪತ್ಯಗಾರನಿಗೆ ತಿಳಿಯದಿರಲಾಗಿ ಅವನು ಅಷ್ಟರೊಳಗೆ ದ್ರಾಕ್ಷಾರಸವಾದ ಆ ನೀರನ್ನು ರುಚಿನೋಡಿದಾಗ ಮದಲಿಂಗನನ್ನು ಕರೆದು - ಎಲ್ಲರು ಹಿರಿದಿನ ದ್ರಾಕ್ಷಾರಸವನ್ನು ಮೊದಲುಕೊಟ್ಟು ಅಮಲೇರಿದ ಮೇಲೆ ಕಿರಿದಿನ ದ್ರಾಕ್ಷಾರಸವನ್ನು ಕೊಡುತ್ತಾರೆ; ನೀನು ಹಿರಿದಿನ ದ್ರಾಕ್ಷಾರಸವನ್ನು ಇದುವರೆಗೂ ಇಟ್ಟುಕೊಂಡಿದ್ದೀ ಅಂದನು. ಯೇಸು ಈ ಮೊದಲನೆಯ ಸೂಚಕಕಾರ್ಯವನ್ನು ಗಲಿಲಾಯದ ಕಾನಾ ಊರಿನಲ್ಲಿ ಮಾಡಿ ತನ್ನ ಮಹಿಮೆಯನ್ನು ತೋರ್ಪಡಿಸಿದನು; ಮತ್ತು ಆತನ ಶಿಷ್ಯರು ಆತನಲ್ಲಿ ನಂಬಿಕೆಯಿಟ್ಟರು. ಇದಾದ ಮೇಲೆ ಆತನೂ ಆತನ ತಾಯಿಯೂ ತಮ್ಮಂದಿರೂ ಆತನ ಶಿಷ್ಯರೂ ಘಟ್ಟಾ ಇಳಿದು ಕಪೆರ್ನೌವಿುಗೆ ಹೋಗಿ ಅಲ್ಲಿ ಕೆಲವು ದಿವಸ ಇದ್ದರು.
ಅಧ್ಯಾಯ 8
ಆಗ ಯೆಹೂದ್ಯರ ಪಸ್ಕಹಬ್ಬವು ಹತ್ತರ ಬಂದದರಿಂದ ಯೇಸು ಯೆರೂಸಲೇವಿುಗೆ ಹೋದನು. ಅಲ್ಲಿ ದೇವಾಲಯದೊಳಗೆ ದನ ಕುರಿ ಪಾರಿವಾಳ ಮಾರುವವರನ್ನೂ ಕೂತಿರುವ ಚಿನಿವಾರರನ್ನೂ ಕಂಡು ಹಗ್ಗದಿಂದ ಕೊರಡೆ ಮಾಡಿ ಅದರಿಂದ ಕುರಿ ದನ ಸಹಿತ ಎಲ್ಲರನ್ನು ದೇವಾಲಯದ ಹೊರಕ್ಕೆ ಅಟ್ಟಿ ಚಿನಿವಾರರ ರೊಕ್ಕವನ್ನು ಚೆಲ್ಲಿ ಮೇಜುಗಳನ್ನು ಕೆಡವಿದನು. ಪಾರಿವಾಳ ಮಾರುವವರಿಗೆ - ಇವುಗಳನ್ನು ಇಲ್ಲಿಂದ ತಕ್ಕೊಂಡು ಹೋಗಿರಿ; ನನ್ನ ತಂದೆಯ ಮನೆಯನ್ನು ಸಂತೆ ಮಾಡಬೇಡಿರಿ ಎಂದು ಹೇಳಿದನು. ಆಗ - ನಿನ್ನ ಆಲಯಾಭಿಮಾನವು ಬೆಂಕಿಯಂತೆ ನನ್ನನ್ನು ದಹಿಸುತ್ತದೆ ಎಂದು ಬರೆದ ಮಾತು ಶಿಷ್ಯರ ನೆನಪಿಗೆ ಬಂತು. ಯೆಹೂದ್ಯರು ಆತನನ್ನು - ನಿನಗೆ ಇದನ್ನೆಲ್ಲಾ ಮಾಡುವ ಅಧಿಕಾರ ಉಂಟೆಂಬದಕ್ಕೆ ಏನು ಸೂಚಕ ಕಾರ್ಯವನ್ನು ತೋರಿಸುತ್ತೀ? ಎಂದು ಕೇಳಿದ್ದಕ್ಕೆ ಯೇಸು - ಈ ದೇವಾಲಯವನ್ನು ಕೆಡವಿರಿ; ನಾನು ಮೂರು ದಿನದಲ್ಲಿ ಅದನ್ನು ಎಬ್ಬಿಸುವೆನು ಅಂದನು. ಅದಕ್ಕೆ ಯೆಹೂದ್ಯರು - ಈ ದೇವಾಲಯವನ್ನು ಕಟ್ಟುವದಕ್ಕೆ ನಾಲ್ವತ್ತಾರು ವರುಷ ಹಿಡಿಯಿತು; ನೀನು ಮೂರು ದಿನದಲ್ಲಿ ಅದನ್ನು ಎಬ್ಬಿಸುವಿಯೋ? ಅಂದರು. ಆದರೆ ಆತನು ತನ್ನ ದೇಹವೆಂಬ ದೇವಾಲಯದ ವಿಷಯವಾಗಿ ಆ ಮಾತನ್ನು ಹೇಳಿದ್ದನು. ಆದದರಿಂದ ಆತನು ಸತ್ತು ಬದುಕಿ ಎದ್ದ ಮೇಲೆ ಈ ಮಾತು ಆತನ ಶಿಷ್ಯರ ನೆನಪಿಗೆ ಬಂದು ಶಾಸ್ತ್ರದಲ್ಲಿ ಬರೆದದ್ದನ್ನೂ ಆತನ ಮಾತನ್ನೂ ಅವರು ನಂಬುವವರಾದರು. ಯೇಸು ಒಬ್ಬ ಶಾಸ್ತ್ರಿಗೆ ಪುನರ್ಜನ್ಮದ ವಿಷಯವಾಗಿ ಉಪದೇಶ ಮಾಡಿದ್ದುಆತನು ಪಸ್ಕಹಬ್ಬದ ಜಾತ್ರೆಯಲ್ಲಿ ಯೆರೂಸಲೇವಿುನೊಳಗೆ ಇದ್ದಾಗ ಬಹು ಜನರು ಆತನು ಮಾಡಿದ ಸೂಚಕಕಾರ್ಯಗಳನ್ನು ನೋಡಿ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರು. ಆದರೆ ಯೇಸು ಎಲ್ಲರನ್ನೂ ಬಲ್ಲವನಾದ್ದರಿಂದ ಅವರಿಗೆ ವಶವಾಗಲಿಲ್ಲ. ಆತನು ಪ್ರತಿಮನುಷ್ಯನ ಆಂತರ್ಯವನ್ನು ತಿಳಿದವನಾದ ಕಾರಣ ಯಾವನೂ ಯಾವ ಮನುಷ್ಯನ ವಿಷಯದಲ್ಲಿಯೂ ಆತನಿಗೆ ಸಾಕ್ಷಿ ಕೊಡಬೇಕಾದ ಅವಶ್ಯವಿರಲಿಲ್ಲ.
ಫರಿಸಾಯರಲ್ಲಿ ಯೆಹೂದ್ಯರ ಹಿರೀಸಭೆಯವನಾದ ನಿಕೊದೇಮನೆಂಬ ಒಬ್ಬ ಮನುಷ್ಯನಿದ್ದನು. ಅವನು ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದು ಆತನಿಗೆ - ಗುರುವೇ, ನೀನು ದೇವರ ಕಡೆಯಿಂದ ಬಂದ ಬೋಧಕನೆಂದು ಬಲ್ಲೆವು. ನೀನು ಮಾಡುವಂಥ ಈ ಸೂಚಕಕಾರ್ಯಗಳನ್ನು ದೇವರ ಸಹಾಯವಿಲ್ಲದೆ ಮಾಡುವದು ಯಾರಿಂದಲೂ ಆಗದು ಎಂದು ಹೇಳಿದನು. ಅದಕ್ಕೆ ಯೇಸು - ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು ಅಂದನು. ನಿಕೊದೇಮನು ಆತನನ್ನು - ಮನುಷ್ಯನು ಮುದುಕನಾದ ಮೇಲೆ ಹುಟ್ಟುವದು ಹೇಗೆ? ಅವನು ತನ್ನ ತಾಯಿಯ ಗರ್ಭದಲ್ಲಿ ತಿರಿಗಿ ಸೇರಿ ಹುಟ್ಟುವದಾದೀತೇ? ಎಂದು ಕೇಳಿದನು. ಅದಕ್ಕೆ ಯೇಸು - ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಆತ್ಮನಿಂದಲೂ ಹುಟ್ಟದಿದ್ದರೆ ದೇವರ ರಾಜ್ಯಕ್ಕೆ ಸೇರಲಾರನು. ದೇಹದಿಂದ ಹುಟ್ಟಿದ್ದು ದೇಹವೇ; ಆತ್ಮನಿಂದ ಹುಟ್ಟಿದ್ದು ಆತ್ಮವೇ. ನೀವು ಹೊಸದಾಗಿ ಹುಟ್ಟಬೇಕು ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ. ಗಾಳಿಯು ಮನಸ್ಸು ಬಂದ ಕಡೆ ಬೀಸುತ್ತದೆ; ಅದರ ಸಪ್ಪಳವನ್ನು ಕೇಳುತ್ತೀ; ಆದರೆ ಅದು ಎಲ್ಲಿಂದ ಬರುತ್ತದೋ ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು; ಆತ್ಮನಿಂದ ಹುಟ್ಟಿದವರೆಲ್ಲರು ಅದರಂತೆಯೇ ಅಂದನು.
ಅದಕ್ಕೆ ನಿಕೊದೇಮನು - ಇದು ಆಗುವದು ಹೇಗೆ? ಅಂದಾಗ ಯೇಸು ಅವನಿಗೆ ಹೇಳಿದ್ದೇನಂದರೆ - ಇಸ್ರಾಯೇಲ್ ಜನಕ್ಕೆ ಬೋಧಕನಾಗಿರುವ ನಿನಗೆ ಇದು ತಿಳಿಯುವದಿಲ್ಲವೋ? ನಿನಗೆ ನಿಜನಿಜವಾಗಿ ಹೇಳುತ್ತೇನೆ, ತಿಳಿದದ್ದನ್ನು ಹೇಳುತ್ತೇವೆ, ನೋಡಿದ್ದಕ್ಕೆ ಸಾಕ್ಷಿಕೊಡುತ್ತೇವೆ; ನೀವು ನಮ್ಮ ಸಾಕ್ಷಿಯನ್ನು ಒಪ್ಪುವದಿಲ್ಲ. ನಾನು ಭೂಲೋಕದಲ್ಲಿ ನಡೆಯುವ ಕಾರ್ಯಗಳನ್ನು ಕುರಿತು ನಿಮಗೆ ಹೇಳುವಾಗ ನೀವು ನಂಬದೆಹೋದರೆ ಪರಲೋಕದ ಕಾರ್ಯಗಳನ್ನು ಕುರಿತು ನಿಮಗೆ ಹೇಳಿದರೆ ಹೇಗೆ ನಂಬೀರಿ? ಪರಲೋಕದಿಂದ ಇಳಿದುಬಂದವನೇ ಅಂದರೆ ಮನುಷ್ಯಕುಮಾರನೇ ಹೊರತು ಮತ್ತಾರೂ ಪರಲೋಕಕ್ಕೆ ಏರಿಹೋದವನಲ್ಲ. ಇದಲ್ಲದೆ [ಜನರು ನೋಡಿ ಜೀವದಿಂದುಳಿಯಬೇಕೆಂದು] ಮೋಶೆಯು ಅಡವಿಯಲ್ಲಿ ಆ ಸರ್ಪವನ್ನು ಎತ್ತರದಲ್ಲಿಟ್ಟ ಹಾಗೆಯೇ ಮನುಷ್ಯಕುಮಾರನು ತನ್ನನ್ನು ನಂಬುವವರೆಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಎತ್ತರದಲ್ಲಿಡಲ್ಪಡಬೇಕು. ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು ತೀರ್ಪುಮಾಡುವದಕ್ಕಾಗಿ ಕಳುಹಿಸಲಿಲ್ಲ. ಆತನನ್ನು ನಂಬುವವನಿಗೆ ತೀರ್ಪು ಆಗುವದಿಲ್ಲ; ಆದರೆ ನಂಬದವನಿಗೆ ದೇವರ ಒಬ್ಬನೇ ಮಗನ ಹೆಸರನ್ನು ನಂಬದೆಹೋದದರಿಂದ ಆಗಲೇ ತೀರ್ಪು ಆಗಿಹೋಯಿತು. ಆ ತೀರ್ಪು ಏನಂದರೆ - ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಹೆಚ್ಚಾಗಿ ಪ್ರೀತಿಸಿದರು. ಕೆಟ್ಟದ್ದನ್ನು ಮಾಡುವವರು ಬೆಳಕನ್ನು ಸಹಿಸುವದಿಲ್ಲ, ತಮ್ಮ ಕೃತ್ಯಗಳು ದುಷ್ಕೃತ್ಯಗಳಾಗಿ ತೋರಿಬಂದಾವೆಂದು ಬೆಳಕಿಗೆ ಬರುವದಿಲ್ಲ; ಆದರೆ ಸತ್ಯವನ್ನು ಅನುಸರಿಸಿ ನಡೆಯುವವನು ತಾನು ದೇವರಿಂದ ನಡಿಸಿಕೊಂಡು ತನ್ನ ಕೃತ್ಯಗಳನ್ನು ಮಾಡಿದ್ದೇನೆಂದು ತೋರಿಬರುವಂತೆ ಬೆಳಕಿಗೆ ಬರುತ್ತಾನೆ.
ಮೇಲಣಿಂದ ಬರುವವನು ಎಲ್ಲರ ಮೇಲೆ ಇದ್ದಾನೆ; ಭೂಲೋಕದಿಂದ ಹುಟ್ಟಿದವನು ಭೂಲೋಕದವನಾಗಿದ್ದು ಭೂಲೋಕದ ಮಾತನ್ನು ಆಡುತ್ತಾನೆ; ಪರಲೋಕದಿಂದ ಬರುವವನು ಎಲ್ಲರ ಮೇಲೆ ಇದ್ದಾನೆ. ತಾನು ನೋಡಿ ಕೇಳಿದ್ದಕ್ಕೆ ಸಾಕ್ಷಿಕೊಡುತ್ತಾನೆ; ಆದರೆ ಆತನ ಸಾಕ್ಷಿಯನ್ನು ಯಾರೂ ಒಪ್ಪುವದಿಲ್ಲ. ಆತನ ಸಾಕ್ಷಿಯನ್ನು ಒಪ್ಪಿದವನು ದೇವರು ಸತ್ಯವಂತನೆಂಬ ಮಾತಿಗೆ ಮುದ್ರೆ ಹಾಕಿದವನಾಗಿದ್ದಾನೆ. ಹೇಗಂದರೆ ದೇವರು ಯಾರನ್ನು ಕಳುಹಿಸಿದ್ದಾನೋ ಆತನಿಗೆ ಆತ್ಮವರವನ್ನು ಅಳತೆಮಾಡದೆ ಅನುಗ್ರಹಿಸುವದರಿಂದ ಆತನು ದೇವರ ಮಾತುಗಳನ್ನೇ ಆಡುತ್ತಾನೆ. ತಂದೆಯಾದ ದೇವರು ತನ್ನ ಮಗನನ್ನು ಪ್ರೀತಿಸಿ ಎಲ್ಲವನ್ನೂ ಆತನ ಕೈಯಲ್ಲಿ ಕೊಟ್ಟಿದ್ದಾನೆ. ಆತನ ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು; ಮಗನಿಗೆ ಒಳಗಾಗದವನು ಜೀವವನ್ನು ಕಾಣುವದೇ ಇಲ್ಲ; ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವದು.
ಅಧ್ಯಾಯ 9
ಯೇಸು ಯೋಹಾನನಿಗಿಂತ ಹೆಚ್ಚು ಶಿಷ್ಯರನ್ನು ಮಾಡಿಕೊಂಡು ಅವರಿಗೆ ದೀಕ್ಷಾಸ್ನಾನಮಾಡಿಸುತ್ತಾನೆಂಬ ಸುದ್ದಿಯನ್ನು ಫರಿಸಾಯರು ಕೇಳಿದರೆಂದು ಕರ್ತನಿಗೆ ತಿಳಿದಾಗ -ಆತನು ಯೂದಾಯವನ್ನು ಬಿಟ್ಟು ಗಲಿಲಾಯಕ್ಕೆ ತಿರಿಗಿ ಹೋದನು. (ಆದರೂ ಸ್ನಾನ ಮಾಡಿಸುತ್ತಿದ್ದವನು ಯೇಸುವಲ್ಲ; ಆತನ ಶಿಷ್ಯರೇ ಮಾಡಿಸುತ್ತಿದ್ದರು.) ಆತನು ಸಮಾರ್ಯಸೀಮೆಯನ್ನು ಹಾದು ಹೋಗಬೇಕಾಯಿತು. ಹೋಗುವಾಗ ಸಮಾರ್ಯಸೀಮೆಗೆ ಸೇರಿದ ಸುಖರೆಂಬ ಊರಿಗೆ ಬಂದನು. ಅದು ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂವಿುಯ ಹತ್ತಿರದಲ್ಲಿತ್ತು; ಅಲ್ಲಿ ಯಾಕೋಬನು ತೆಗೆಸಿದ ಬಾವಿಯಿತ್ತು. ಯೇಸು ದಾರಿನಡೆದು ದಣಿದು ಆ ಬಾವಿಯ ಬಳಿಯಲ್ಲಿ ಹಾಗೆ ಕೂತುಕೊಂಡನು; ಹೆಚ್ಚು ಕಡಿಮೆ ಮಧ್ಯಾಹ್ನವಾಗಿತ್ತು. -ಆತನ ಶಿಷ್ಯರು ಊಟಕ್ಕೆ ಬೇಕಾದದ್ದನ್ನು ಕೊಂಡುಕೊಳ್ಳುವದಕ್ಕಾಗಿ ಊರೊಳಗೆ ಹೋಗಿರಲು ಸಮಾರ್ಯದವಳಾದ ಒಬ್ಬ ಹೆಂಗಸು ನೀರು ಸೇದುವದಕ್ಕೆ ಬಂದಳು. ಯೇಸು ಆಕೆಯನ್ನು - ಅಮ್ಮಾ, ನೀರು ಕುಡಿಯುವದಕ್ಕೆ ಕೊಡು ಎಂದು ಕೇಳಿದನು. ಯೆಹೂದ್ಯರಿಗೂ ಸಮಾರ್ಯರಿಗೂ ಬಳಕೆಯಿಲ್ಲದಿರಲಾಗಿ ಆ ಸಮಾರ್ಯದವಳು ಆತನಿಗೆ - ಯೆಹೂದ್ಯನಾದ ನೀನು ಸಮಾರ್ಯದವಳಾದ ನನ್ನನ್ನು ನೀರು ಬೇಡುವದು ಹೇಗೆ ಎಂದು ಹೇಳಿದಳು.
ಅದಕ್ಕೆ ಯೇಸು - ದೇವರು ಕೊಡುವ ವರವೇನೆಂಬದೂ ಕುಡಿಯುವದಕ್ಕೆ ನೀರುಕೊಡು ಎಂದು ನಿನಗೆ ಹೇಳಿದವನು ಯಾರೆಂಬದೂ ನಿನಗೆ ತಿಳಿದಿದ್ದರೆ ನೀನು ಅವನನ್ನು ಬೇಡಿಕೊಳ್ಳುತ್ತಿದ್ದಿ, ಅವನು ನಿನಗೆ ಜೀವಕರವಾದ ನೀರನ್ನು ಕೊಡುತ್ತಿದ್ದನು ಅಂದನು. ಆ ಹೆಂಗಸು ಆತನಿಗೆ - ಅಯ್ಯಾ, ಸೇದುವದಕ್ಕೆ ನಿನ್ನಲ್ಲಿ ಏನೂ ಇಲ್ಲ, ಬಾವಿ ಆಳವಾಗಿದೆ; ಹೀಗಿರುವಾಗ ಆ ಜೀವಕರವಾದ ನೀರು ನಿನಗೆ ಎಲ್ಲಿಂದ ಬಂತು? ನಮ್ಮ ಹಿರಿಯನಾದ ಯಾಕೋಬನಿಗಿಂತ ನೀನು ದೊಡ್ಡವನೋ? ಅವನೇ ಈ ಬಾವಿಯನ್ನು ನಮಗೆ ಕೊಟ್ಟವನು; ಅವನೂ ಅವನ ಮಕ್ಕಳೂ ಅವನು ಸಾಕಿದೆಲ್ಲವೂ ಸಹಿತವಾಗಿ ಇದೇ ಬಾವಿಯ ನೀರು ಕುಡಿದರು ಅನ್ನಲು ಯೇಸು ಆಕೆಗೆ - ಈ ನೀರನ್ನು ಕುಡಿಯುವವರೆಲ್ಲರಿಗೆ ತಿರಿಗಿ ನೀರಡಿಕೆಯಾಗುವದು; ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ; ನಾನು ಅವನಿಗೆ ಕೊಡುವ ನೀರು ಅವನಲ್ಲಿ ಉಕ್ಕುವ ಒರತೆಯಾಗಿದ್ದು ನಿತ್ಯಜೀವವನ್ನು ಉಂಟುಮಾಡುವದು ಎಂದು ಹೇಳಿದನು. ಆ ಹೆಂಗಸು - ಅಯ್ಯಾ, ನನಗೆ ಆ ನೀರನ್ನು ಕೊಡು; ಕೊಟ್ಟರೆ ಇನ್ನು ಮೇಲೆ ನನಗೆ ನೀರಡಿಕೆಯಾಗಲಿಕ್ಕಿಲ್ಲ; ನೀರು ಸೇದುವದಕ್ಕೆ ಇಷ್ಟು ದೂರ ಬರಬೇಕಾದದ್ದೂ ಇರುವದಿಲ್ಲ ಅನ್ನಲು ಯೇಸು ಅವಳಿಗೆ - ಹೋಗಿ ನಿನ್ನ ಗಂಡನನ್ನು ಇಲ್ಲಿಗೆ ಕರಕೊಂಡು ಬಾ ಎಂದು ಹೇಳಿದನು. ಅದಕ್ಕೆ ಆ ಹೆಂಗಸು - ನನಗೆ ಗಂಡನಿಲ್ಲ ಅಂದಳು. ಯೇಸು ಆಕೆಗೆ - ನನಗೆ ಗಂಡನಿಲ್ಲವೆಂದು ನೀನು ಹೇಳಿದ್ದು ಸರಿಯಾದ ಮಾತು; ನಿನಗೆ ಐದುಮಂದಿ ಗಂಡಂದಿರಿದ್ದರು, ಈಗ ಇರುವವನು ನಿನಗೆ ಗಂಡನಲ್ಲ; ನೀನು ಹೇಳಿದ್ದು ನಿಜವಾದ ಸಂಗತಿ ಅಂದನು.
ಆ ಹೆಂಗಸು ಆತನಿಗೆ - ಅಯ್ಯಾ, ನೀನು ಪ್ರವಾದಿಯೆಂದು ನನಗೆ ಕಾಣುತ್ತದೆ. ನಮ್ಮ ಹಿರಿಯರು ಈ ಬೆಟ್ಟದಲ್ಲಿ ದೇವಾರಾಧನೆ ಮಾಡುತ್ತಿದ್ದರು; ಆದರೆ ನೀವು ಆರಾಧನೆಮಾಡತಕ್ಕ ಸ್ಥಳವು ಯೆರೂಸಲೇವಿುನಲ್ಲಿ ಅದೆ ಅನ್ನುತ್ತೀರಿ ಎಂದು ಹೇಳಿದಾಗ ಯೇಸು ಆಕೆಗೆ - ಅಮ್ಮಾ, ನಾನು ಹೇಳುವ ಮಾತನ್ನು ನಂಬು; ಒಂದು ಕಾಲ ಬರುತ್ತದೆ, ಆ ಕಾಲದಲ್ಲಿ ನೀವು ತಂದೆಯನ್ನು ಆರಾಧಿಸಬೇಕಾದರೆ ಈ ಬೆಟ್ಟಕ್ಕೂ ಹೋಗುವದಿಲ್ಲ, ಯೆರೂಸಲೇವಿುಗೂ ಹೋಗುವದಿಲ್ಲ. ಬರಬೇಕಾದ ರಕ್ಷಣೆಯು ಯೆಹೂದ್ಯರೊಳಗಿಂದ ಬರುತ್ತದಷ್ಟೆ. ಆದದರಿಂದ ನಾವು ಅರಿತಿರುವದನ್ನೇ ಆರಾಧಿಸುವವರಾಗಿದ್ದೇವೆ; ನೀವು ಅರಿಯದೆ ಇರುವಂಥದನ್ನು ಆರಾಧಿಸುವವರು. ಅದಿರಲಿ; ಸತ್ಯಭಾವದಿಂದ ದೇವಾರಾಧನೆ ಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ; ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ. ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು ಅಂದನು. ಆ ಹೆಂಗಸು ಆತನಿಗೆ - ಮೆಸ್ಸೀಯನು ಅಂದರೆ ಕ್ರಿಸ್ತನು ಬರುತ್ತಾನೆಂದು ಬಲ್ಲೆನು; ಆತನು ಬಂದ ಮೇಲೆ ನಮಗೆ ಎಲ್ಲಾ ತಿಳಿಸುವನು ಎಂದು ಹೇಳಲು ಯೇಸು ಆಕೆಗೆ - ನಿನ್ನ ಸಂಗಡ ಮಾತಾಡುತ್ತಿರುವ ನಾನೇ ಆ ಮೆಸ್ಸೀಯನು ಎಂದು ಹೇಳಿದನು.
ಅಷ್ಟರೊಳಗೆ ಆತನ ಶಿಷ್ಯರು ಬಂದು ಆತನು ಒಬ್ಬ ಹೆಂಗಸಿನ ಸಂಗಡ ಮಾತಾಡುತ್ತಿರುವದನ್ನು ಕಂಡು ಆಶ್ಚರ್ಯಪಟ್ಟರು. ಆದರೂ - ನಿನಗೆ ಏನು ಬೇಕು? ಆಕೆಯ ಸಂಗಡ ಯಾಕೆ ಮಾತಾಡುತ್ತೀ? ಎಂದು ಒಬ್ಬರೂ ಕೇಳಲಿಲ್ಲ. ಆಗ ಆ ಹೆಂಗಸು ತನ್ನ ಕೊಡವನ್ನು ಅಲ್ಲೇ ಬಿಟ್ಟು ಊರೊಳಕ್ಕೆ ಹೋಗಿ ಜನರಿಗೆ - ಅಲ್ಲಿ ಒಬ್ಬನಿದ್ದಾನೆ, ನಾನು ಇದುವರೆಗೆ ಮಾಡಿದ್ದನ್ನೆಲ್ಲಾ ನನಗೆ ಹೇಳಿದನು; ಬಂದು ಅವನನ್ನು ನೋಡಿರಿ; ಬರತಕ್ಕ ಕ್ರಿಸ್ತನು ಅವನೇ ಏನೋ? ಎಂದು ಹೇಳಲು ಆತನ ಬಳಿಗೆ ಬರುವದಕ್ಕೆ ಊರೊಳಗಿಂದ ಹೊರಟರು. ಅಷ್ಟರೊಳಗೆ ಶಿಷ್ಯರು - ಗುರುವೇ, ಊಟಮಾಡು ಎಂದು ಆತನನ್ನು ಬೇಡಿಕೊಂಡರು. ಆದರೆ ಆತನು ಅವರಿಗೆ - ನಿಮಗೆ ತಿಳಿಯದಂಥ ಆಹಾರವು ನನಗುಂಟು ಎಂದು ಹೇಳಲು ಶಿಷ್ಯರು - ಆತನಿಗೆ ಯಾರಾದರೂ ಊಟಕ್ಕೆ ತಂದುಕೊಟ್ಟರೋ ಏನೋ ಎಂದು ತಮ್ಮ ತಮ್ಮೊಳಗೆ ಮಾತಾಡಿಕೊಂಡರು. ಯೇಸು ಅವರಿಗೆ - ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು. ಇನ್ನು ನಾಲ್ಕು ತಿಂಗಳಿಗೆ ಸುಗ್ಗಿಬರುವದೆಂದು ನೀವು ಹೇಳುವದುಂಟಷ್ಟೆ. ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ; ಅವು ಬೆಳ್ಳಗಾಗಿ ಕೊಯ್ಲಿಗೆ ಬಂದವೆಂದು ನಿಮಗೆ ಹೇಳುತ್ತೇನೆ. ಕೊಯ್ಯುವವನಿಗೆ ಈಗಲೇ ಕೂಲಿ ದೊರೆಯುತ್ತದೆ; ಅವನು ನಿತ್ಯಜೀವಕ್ಕೆ ಫಲವನ್ನು ಕೂಡಿಸಿಡುತ್ತಾನೆ; ಹೀಗೆ ಬಿತ್ತುವವನಿಗೂ ಕೊಯ್ಯುವವನಿಗೂ ಕೂಡ ಸಂತೋಷವಾಗುವದು. ಬಿತ್ತುವವನೊಬ್ಬ, ಕೊಯ್ಯುವವನೊಬ್ಬ ಎಂಬ ಗಾದೆಯಂತೆ ಆಯಿತು. ನೀವು ಕಷ್ಟಮಾಡದಂಥ ಬೆಳೆಯನ್ನು ಕೊಯ್ಯುವದಕ್ಕೆ ನಾನು ನಿಮ್ಮನ್ನು ಕಳುಹಿಸಿದೆನು; ಬೇರೊಬ್ಬರು ಕಷ್ಟಮಾಡಿದ್ದಾರೆ; ನೀವು ನಡುವೆ ಅವರ ಕಷ್ಟದಲ್ಲಿ ಸೇರಿದ್ದೀರಿ ಎಂದು ಹೇಳಿದನು.
ನಾನು ಮಾಡಿದ್ದನ್ನೆಲ್ಲಾ ಆತನು ನನಗೆ ಹೇಳಿದನೆಂಬದಾಗಿ ಸಾಕ್ಷಿಕೊಡುತ್ತಿರುವ ಆ ಹೆಂಗಸಿನ ಮಾತಿನ ಮೇಲೆ ಆ ಊರಿನ ಸಮಾರ್ಯರಲ್ಲಿ ಅನೇಕರು ಆತನನ್ನು ನಂಬುವವರಾದರು. ಆದ್ದರಿಂದ ಆ ಸಮಾರ್ಯರು ಆತನ ಬಳಿಗೆ ಬಂದು - ನೀನು ನಮ್ಮಲ್ಲಿ ಇರಬೇಕೆಂದು ಆತನನ್ನು ಬೇಡಿಕೊಳ್ಳಲು ಆತನು ಎರಡು ದಿವಸ ಅವರಲ್ಲೇ ಇದ್ದನು. ಹೆಚ್ಚು ಜನರು ಆತನ ವಾಕ್ಯವನ್ನು ಕೇಳಿ ನಂಬಿ ಆ ಹೆಂಗಸಿಗೆ - ನಾವು ಆತನನ್ನು ನಂಬಿರುವದು ಇನ್ನು ನಿನ್ನ ಮಾತಿನ ಮೇಲೆ ಅಲ್ಲ; ನಾವು ಕಿವಿಯಾರೆ ಕೇಳಿ ಈತನು ಲೋಕರಕ್ಷಕನೇ ಹೌದೆಂದು ತಿಳುಕೊಂಡಿದ್ದೇವೆ ಎಂದು ಹೇಳಿದರು. ಯೇಸು ಒಬ್ಬ ಪ್ರಧಾನನ ಮಗನನ್ನು ಮಾತಿನಿಂದಲೇ ಸ್ವಸ್ಥಮಾಡಿದ್ದು ಎರಡು ದಿವಸಗಳಾದ ಮೇಲೆ ಆತನು ಅಲ್ಲಿಂದ ಹೊರಟು ಗಲಿಲಾಯಕ್ಕೆ ಹೋದನು. ಯಾಕಂದರೆ ಪ್ರವಾದಿಗೆ ಸ್ವದೇಶದಲ್ಲಿ ಮರ್ಯಾದೆಯಿಲ್ಲವೆಂದು ಯೇಸು ತಾನೇ ಹೇಳಿದನು. ಗಲಿಲಾಯದವರು ತಾವೂ ಯೆರೂಸಲೇವಿುನ ಜಾತ್ರೆಗೆ ಹೋಗಿ ಆತನು ಅಲ್ಲಿ ಮಾಡಿದ್ದನ್ನೆಲ್ಲಾ ನೋಡಿದ್ದರಿಂದ ಆತನು ಗಲಿಲಾಯಕ್ಕೆ ಬಂದಾಗ ಆತನನ್ನು ಆದರದಿಂದ ಅಂಗೀಕರಿಸಿದರು.
ಹೀಗಿರಲಾಗಿ ಯೇಸು, ತಾನು ನೀರನ್ನು ದ್ರಾಕ್ಷಾರಸವಾಗಿ ಮಾಡಿದ ಗಲಿಲಾಯದ ಕಾನಾ ಊರಿಗೆ ಮತ್ತೊಮ್ಮೆ ಬಂದನು. ಅಲ್ಲಿದ್ದಾಗ ಅರಮನೆಯ ಒಬ್ಬ ಪ್ರಧಾನನ ಮಗನು ಕಪೆರ್ನೌವಿುನಲ್ಲಿ ಅಸ್ವಸ್ಥನಾಗಿದ್ದನು. ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಸುದ್ದಿಯನ್ನು ಆ ಪ್ರಧಾನನು ಕೇಳಿದಾಗ ತನ್ನ ಮಗನು ಸಾಯುವ ಹಾಗಿದ್ದದರಿಂದ ಯೇಸುವಿನ ಬಳಿಗೆ ಹೋಗಿ - ನೀನು ಇಳಿದು ಬಂದು ನನ್ನ ಮಗನನ್ನು ಸ್ವಸ್ಥಮಾಡಬೇಕೆಂದು ಬೇಡಿಕೊಂಡನು; ಯೇಸು ಅವನಿಗೆ - ನೀವು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ನೋಡದಿದ್ದರೆ ನಂಬುವದೇ ಇಲ್ಲವೆಂದು ಹೇಳಿದನು. ಆ ಪ್ರಧಾನನು - ಸ್ವಾಮೀ, ನನ್ನ ಮಗನು ಸಾಯುವದಕ್ಕೆ ಮುಂಚೆ ನೀನು ಬರಬೇಕು ಅನ್ನಲು ಯೇಸು ಅವನಿಗೆ - ನಿನ್ನ ಮಗನು ಬದುಕುತ್ತಾನೆ ಹೋಗು ಎಂದು ಉತ್ತರ ಕೊಟ್ಟನು. ಆ ಗೃಹಸ್ಥನು ಯೇಸು ತನಗೆ ಹೇಳಿದ ಮಾತನ್ನು ನಂಬಿ ಹೊರಟುಹೋದನು. ಅವನು ಇನ್ನೂ ಘಟ್ಟಾಯಿಳಿದು ಹೋಗುತ್ತಿರುವಲ್ಲಿ ಅವನ ಆಳುಗಳು ಅವನೆದುರಿಗೆ ಬಂದು - ನಿನ್ನ ಮಗನು ಬದುಕಿಕೊಂಡನು ಅಂದರು. ಎಷ್ಟು ಘಂಟೆಗೆ ಅವನಿಗೆ ರೋಗವು ಇಳಿತರವಾಯಿತೆಂದು ಅವನು ಅವರನ್ನು ಕೇಳಿದಾಗ ಅವರು - ನಿನ್ನೆ ಮಧ್ಯಾಹ್ನದ ಒಂದು ಗಂಟೆಗೆ ಜ್ವರವು ಅವನನ್ನು ಬಿಟ್ಟಿತು ಅಂದರು. ಆಗ ನಿನ್ನ ಮಗನು ಬದುಕುತ್ತಾನೆಂದು ಯೇಸು ತನಗೆ ಹೇಳಿದ ತಾಸಿನಲ್ಲಿಯೇ ಅದಾಯಿತೆಂದು ತಂದೆಯು ತಿಳುಕೊಂಡದರಿಂದ ಅವನೂ ಅವನ ಮನೆಯವರೆಲ್ಲರೂ ಆತನನ್ನು ನಂಬಿದರು. ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಮೇಲೆ ಈ ಎರಡನೆಯ ಸೂಚಕಕಾರ್ಯವನ್ನು ಮಾಡಿದನು.
ಅಧ್ಯಾಯ 10
ಇದಾದ ಮೇಲೆ ಯೆಹೂದ್ಯರದೊಂದು ಜಾತ್ರೆ ಬಂದದರಿಂದ ಯೇಸು ಯೆರೂಸಲೇವಿುಗೆ ಹೋದನು. ಯೆರೂಸಲೇವಿುನಲ್ಲಿ ಕುರೀ ಅಗಸೇಬಾಗಲಿನ ಹತ್ತಿರದಲ್ಲಿ ಒಂದು ಕೊಳವಿದೆ; ಇದಕ್ಕೆ ಇಬ್ರಿಯ ಮಾತಿನಲ್ಲಿ ಬೇತ್ಸಥಾ ಎಂದು ಹೆಸರು. ಅಲ್ಲಿ ಐದು ಮಂಟಪಗಳಿವೆ; ಇವುಗಳಲ್ಲಿ ಬಹುಮಂದಿ ರೋಗಿಗಳೂ ಕುರುಡರೂ ಕುಂಟರೂ ಮೈಒಣಗಿದವರೂ ಬಿದ್ದುಕೊಂಡಿರುವರು. ಅಲ್ಲಿ ಮೂವತ್ತೆಂಟು ವರುಷದಿಂದ ರೋಗಿಯಾಗಿದ್ದ ಒಬ್ಬ ಮನುಷ್ಯನಿದ್ದನು. ಅವನು ಬಿದ್ದಿರುವದನ್ನು ಯೇಸು ಕಂಡು ಇವನು ಹೀಗಾಗಿ ಬಹು ಕಾಲವಾಗಿದೆ ಎಂದು ತಿಳಿದು - ನಿನಗೆ ಸ್ವಸ್ಥವಾಗಲಿಕ್ಕೆ ಮನಸ್ಸುಂಟೋ? ಎಂದು ಅವನನ್ನು ಕೇಳಿದ್ದಕ್ಕೆ ಆ ರೋಗಿಯು - ಸ್ವಾಮೀ, ನೀರು ಉಕ್ಕುವಾಗ ನನ್ನನ್ನು ಕೊಳದೊಳಗೆ ಇಳಿಸುವವರು ಒಬ್ಬರೂ ಇಲ್ಲ; ನಾನು ಬರುವದರೊಳಗೆ ನನಗಿಂತ ಮುಂದಾಗಿ ಮತ್ತೊಬ್ಬನು ಇಳಿಯುತ್ತಾನೆ ಅಂದನು. ಯೇಸು ಅವನಿಗೆ - ಎದ್ದು ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆ ಎಂದು ಹೇಳಿದನು. ಆ ಕ್ಷಣವೇ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆದನು.
ಆದರೆ ಆ ದಿವಸ ಸಬ್ಬತ್ದಿನವಾಗಿತ್ತು; ಹೀಗಿರುವದರಿಂದ ಯೆಹೂದ್ಯರು ಸ್ವಸ್ಥವಾದವನಿಗೆ - ಈ ಹೊತ್ತು ಸಬ್ಬತ್ದಿನವಾಗಿದೆ; ನೀನು ಹಾಸಿಗೆಯನ್ನು ಹೊರುವದು ಸರಿಯಲ್ಲವೆಂದು ಹೇಳಿದ್ದಕ್ಕೆ ಅವನು - ನನ್ನನ್ನು ಸ್ವಸ್ಥಮಾಡಿದವನೇ ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆ ಎಂದು ನನಗೆ ಹೇಳಿದನು ಅಂದನು. ಹೊತ್ತುಕೊಂಡು ನಡೆ ಎಂದು ನಿನಗೆ ಹೇಳಿದ ಮನುಷ್ಯನು ಯಾರೆಂದು ಅವನನ್ನು ಕೇಳಿದರು. ಆದರೆ ಅವನಾರೆಂಬದು ಸ್ವಸ್ಥವಾದವನಿಗೆ ತಿಳಿದಿರಲಿಲ್ಲ; ಆ ಸ್ಥಳದಲ್ಲಿ ಜನರ ಗುಂಪು ಇದ್ದದರಿಂದ ಯೇಸು ಸರಕೊಂಡುಹೋಗಿದ್ದನು. ಇದಾದ ಮೇಲೆ ಯೇಸು ಅವನನ್ನು ದೇವಾಲಯದಲ್ಲಿ ಕಂಡುಕೊಂಡು - ನಿನಗೆ ಸ್ವಸ್ಥವಾಯಿತಲ್ಲಾ; ಇನ್ನು ಮೇಲೆ ಪಾಪಮಾಡಬೇಡ; ನಿನಗೆ ಹೆಚ್ಚಿನ ಕೇಡು ಬಂದೀತು ಅಂದನು. ಆ ಮನುಷ್ಯನು ಅಲ್ಲಿಂದ ಹೋಗಿ - ನನ್ನನ್ನು ಸ್ವಸ್ಥಮಾಡಿದವನು ಯೇಸುವೇ ಎಂದು ಯೆಹೂದ್ಯರಿಗೆ ತಿಳಿಸಿದನು. ಆದಕಾರಣ ಯೆಹೂದ್ಯರು - ಯೇಸು ಸಬ್ಬತ್ದಿನದಲ್ಲಿ ಇಂಥ ಕೆಲಸಗಳನ್ನು ಮಾಡುತ್ತಾನಲ್ಲಾ ಎಂದು ಆತನನ್ನು ಹಿಂಸಿಸುವವರಾದರು. ಅದಕ್ಕೆ ಯೇಸು - ನನ್ನ ತಂದೆಯು ಇಂದಿನವರೆಗೂ ಕೆಲಸಮಾಡುತ್ತಾನೆ, ನಾನೂ ಕೆಲಸಮಾಡುತ್ತೇನೆ ಅಂದನು. ಈ ಮಾತನ್ನು ಹೇಳಿದ್ದರಿಂದ ಆತನು ಸಬ್ಬತ್ದಿನವನ್ನು ಅಲಕ್ಷ್ಯಮಾಡಿದ್ದಲ್ಲದೆ ದೇವರನ್ನು ತನ್ನ ತಂದೆ ಎಂದು ಹೇಳಿ ತನ್ನನ್ನು ದೇವರಿಗೆ ಸರಿಗಟ್ಟಿಕೊಂಡನೆಂದು ಯೆಹೂದ್ಯರು ಆತನನ್ನು ಕೊಲ್ಲುವದಕ್ಕೆ ಮತ್ತಷ್ಟು ಪ್ರಯತ್ನಮಾಡಿದರು.
ಅದಕ್ಕೆ ಯೇಸು ಅವರಿಗೆ - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತಂದೆಯು ಮಾಡುವದನ್ನು ಕಂಡು ಮಗನು ಮಾಡುತ್ತಾನೆ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ಆತನು ಮಾಡುವದನ್ನೆಲ್ಲಾ ಹಾಗೆಯೇ ಮಗನೂ ಮಾಡುತ್ತಾನೆ. ತಂದೆಯು ಮಗನ ಮೇಲೆ ಮಮತೆಯಿಟ್ಟು ತಾನು ಮಾಡುವವುಗಳನ್ನೆಲ್ಲಾ ಅವನಿಗೆ ತೋರಿಸುತ್ತಾನೆ. ಇದಲ್ಲದೆ ಇವುಗಳಿಗಿಂತ ದೊಡ್ಡ ಕೆಲಸಗಳನ್ನು ಅವನಿಗೆ ತೋರಿಸುವನು; ಅವುಗಳನ್ನು ನೋಡಿ ನಿಮಗೆ ಆಶ್ಚರ್ಯವಾಗುವದು. ತಂದೆಯು ಹೇಗೆ ಸತ್ತವರನ್ನು ಎಬ್ಬಿಸಿ ಬದುಕಿಸುತ್ತಾನೋ ಹಾಗೆಯೇ ಮಗನು ಸಹ ತನಗೆ ಬೇಕಾದವರನ್ನು ಬದುಕಿಸುತ್ತಾನೆಂದು ತಿಳುಕೊಳ್ಳಿರಿ. ಇದಲ್ಲದೆ ತಂದೆಯು ಯಾರಿಗೂ ತೀರ್ಪುಮಾಡುವದೂ ಇಲ್ಲ; ತೀರ್ಪುಮಾಡುವ ಅಧಿಕಾರವನ್ನೆಲ್ಲಾ ಮಗನಿಗೆ ಕೊಟ್ಟಿದ್ದಾನೆ; ಎಲ್ಲರು ತನಗೆ ಮಾನ ಕೊಡುವ ಪ್ರಕಾರವೇ ಮಗನಿಗೂ ಮಾನ ಕೊಡಬೇಕೆಂದು ತಂದೆಯು ಇಚ್ಫೈಸುತ್ತಾನೆ. ಮಗನಿಗೆ ಮಾನಕೊಡದವನು ಅವನನ್ನು ಕಳುಹಿಸಿದ ತಂದೆಗೂ ಮಾನಕೊಡದವನಾಗಿದ್ದಾನೆ. ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿದ್ದಾನೆ. ಅವನು ತೀರ್ಪಿಗೆ ಗುರಿಯಾಗುವದಿಲ್ಲ; ಮರಣದಿಂದ ಪಾರಾಗಿ ಜೀವಕ್ಕೆ ಸೇರಿದ್ದಾನೆ. ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಸತ್ತವರು ದೇವಕುಮಾರನ ಧ್ವನಿಯನ್ನು ಕೇಳುವ ಕಾಲ ಬರುತ್ತದೆ, ಈಗಲೇ ಬಂದಿದೆ; ಕೇಳಿದವರು ಬದುಕುವರು. ತಂದೆಯು ತಾನು ಹೇಗೆ ಸ್ವತಃಜೀವವುಳ್ಳವನಾಗಿದ್ದಾನೋ ಹಾಗೆಯೇ ಮಗನೂ ಸ್ವತಃಜೀವವುಳ್ಳವನಾಗಿರುವಂತೆ ಮಾಡಿದನು. ಮತ್ತು ಮಗನು ಮನುಷ್ಯಕುಮಾರನಾಗಿರುವದರಿಂದ ತೀರ್ಪುಮಾಡುವ ಅಧಿಕಾರವನ್ನೂ ಅವನಿಗೆ ಕೊಟ್ಟನು. ಅದಕ್ಕೆ ಆಶ್ಚರ್ಯಪಡಬೇಡಿರಿ; ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ. ಒಳ್ಳೇದನ್ನು ಮಾಡಿದವರಿಗೆ ಜೀವಕ್ಕಾಗಿ ಪುನರುತ್ಥಾನವಾಗುವದು; ಕೆಟ್ಟದ್ದನ್ನು ನಡಿಸಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವದು.
ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು; ತಂದೆ ಹೇಳಿದ್ದನ್ನು ಕೇಳಿ ನ್ಯಾಯತೀರಿಸುತ್ತೇನೆ; ಮತ್ತು ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ಅಪೇಕ್ಷಿಸುವದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ. ನನ್ನ ವಿಷಯವಾಗಿ ನಾನೇ ಸಾಕ್ಷಿ ಹೇಳಿಕೊಂಡರೆ ನನ್ನ ಸಾಕ್ಷಿ ನಿಜವಾಗದು. ನನ್ನ ವಿಷಯವಾಗಿ ಸಾಕ್ಷಿಹೇಳುವವನು ಮತ್ತೊಬ್ಬನಿದ್ದಾನೆ; ಆತನು ನನ್ನ ವಿಷಯವಾಗಿ ಹೇಳುವ ಸಾಕ್ಷಿ ನಿಜವೆಂದು ಬಲ್ಲೆನು. ನೀವು ಯೋಹಾನನ ಬಳಿಯಲ್ಲಿ ಕೇಳಿಕೊಂಡು ಬರುವದಕ್ಕೆ ಕಳುಹಿಸಿದಿರಿ; ಅವನು ಸತ್ಯಕ್ಕೆ ಸಾಕ್ಷಿ ಹೇಳಿದನು. ನಾನಂತೂ ನನಗೆ ಬೇಕಾದ ಸಾಕ್ಷಿಯನ್ನು ಮನುಷ್ಯರಿಂದ ತಕ್ಕೊಳ್ಳುವದಿಲ್ಲ; ಆದರೂ ನಿಮಗೆ ರಕ್ಷಣೆ ಆಗಬೇಕೆಂದು ಇದನ್ನು ಹೇಳಿದ್ದೇನೆ. ಯೋಹಾನನು ಉರಿಯುವ ದೀಪದೋಪಾದಿಯಲ್ಲಿ ಪ್ರಕಾಶಿಸಿದನು. ಅವನು ಕೊಡುವ ಬೆಳಕಿನಲ್ಲಿ ಸ್ವಲ್ಪಕಾಲ ವಿನೋದಗೊಳ್ಳುವದಕ್ಕೆ ಮನಸ್ಸುಮಾಡಿದಿರಿ. ನನಗಂತೂ ಯೋಹಾನನ ಸಾಕ್ಷಿಗಿಂತ ಹೆಚ್ಚಿನ ಸಾಕ್ಷಿ ಉಂಟು; ಹೇಗಂದರೆ ಪೂರೈಸುವದಕ್ಕೆ ತಂದೆ ನನಗೆ ಕೊಟ್ಟಿರುವ ಕೆಲಸಗಳು, ಅಂದರೆ ನಾನು ಮಾಡುವ ಕೆಲಸಗಳೇ, ತಂದೆಯು ನನ್ನನ್ನು ಕಳುಹಿಸಿಕೊಟ್ಟನೆಂಬದಾಗಿ ನನ್ನ ವಿಷಯದಲ್ಲಿ ಸಾಕ್ಷಿಕೊಡುತ್ತವೆ. ಇದಲ್ಲದೆ ನನ್ನನ್ನು ಕಳುಹಿಸಿಕೊಟ್ಟ ತಂದೆಯು ನನ್ನ ವಿಷಯವಾಗಿ ಸಾಕ್ಷಿ ಹೇಳಿದ್ದಾನೆ. ನೀವು ಎಂದಾದರೂ ಆತನ ಧ್ವನಿಯನ್ನು ಕೇಳಿದ್ದೂ ಇಲ್ಲ, ಆತನ ರೂಪವನ್ನು ನೋಡಿದ್ದೂ ಇಲ್ಲ, ಆತನ ವಾಕ್ಯವು ನಿಮ್ಮಲ್ಲಿ ನೆಲೆಗೊಂಡದ್ದೂ ಇಲ್ಲ; ಆತನು ಕಳುಹಿಸಿಕೊಟ್ಟವನ ಮಾತನ್ನು ನೀವು ನಂಬದೆ ಇದ್ದೀರಷ್ಟೆ.
ಶಾಸ್ತ್ರಗಳಿಂದ ನಿತ್ಯಜೀವವು ದೊರೆಯುತ್ತದೆಂದು ನೀವು ನೆನಸಿ ಅವುಗಳನ್ನು ವಿಚಾರಿಸುತ್ತೀರಲ್ಲಾ; ಅವುಗಳೂ ನನ್ನ ವಿಷಯದಲ್ಲಿ ಸಾಕ್ಷಿಕೊಡುವವುಗಳಾಗಿವೆ. ಆದರೂ ಜೀವ ಹೊಂದುವದಕ್ಕಾಗಿ ನನ್ನ ಬಳಿಗೆ ಬರುವದಕ್ಕೆ ನಿಮಗೆ ಮನಸ್ಸಿಲ್ಲ.ನಾನು ಮನುಷ್ಯರಿಂದಾಗುವ ಮಾನವನ್ನು ಅಂಗೀಕರಿಸುವದಿಲ್ಲ. ಆದರೆ ನಿಮ್ಮನ್ನು ನಾನು ಬಲ್ಲೆನು, ದೇವರಲ್ಲಿ ನಿಮಗೆ ಪ್ರೀತಿಯಿಲ್ಲವೆಂದು ನನಗೆ ತಿಳಿದದೆ. ನಾನು ನನ್ನ ತಂದೆಯ ಹೆಸರಿನ ಮೇಲೆ ಬಂದಿದ್ದೇನೆ; ನನ್ನನ್ನು ನೀವು ಒಪ್ಪಿಕೊಳ್ಳುವದಿಲ್ಲ; ಮತ್ತೊಬ್ಬನು ಸ್ವಂತ ಹೆಸರಿನ ಮೇಲೆ ಬಂದರೆ ಅವನನ್ನು ಒಪ್ಪಿಕೊಳ್ಳುವಿರಿ. ಒಬ್ಬನೇ ದೇವರಿಂದ ಬರುವಂಥ ಮಾನವನ್ನು ಅಪೇಕ್ಷಿಸದೆ ಒಬ್ಬರಿಂದೊಬ್ಬರು ಮಾನವನ್ನು ಅಂಗೀಕರಿಸುವವರಾದ ನೀವು ಹೇಗೆ ನಂಬೀರಿ? ನಾನು ತಂದೆಯ ಮುಂದೆ ನಿಮ್ಮ ಮೇಲೆ ತಪ್ಪುಹೊರಿಸುವೆನೆಂದು ನೆನಸಬೇಡಿರಿ; ನೀವು ಆಶ್ರಯಿಸಿಕೊಂಡಿರುವ ಮೋಶೆಯೇ ನಿಮ್ಮ ಮೇಲೆ ತಪ್ಪುಹೊರಿಸುವವನು. ಅವನು ನನ್ನ ವಿಷಯವಾಗಿ ಬರೆದನು; ಆದದರಿಂದ ನೀವು ಮೋಶೆಯ ಮಾತನ್ನು ನಂಬುವವರಾಗಿದ್ದರೆ ನನ್ನ ಮಾತನ್ನೂ ನಂಬುತ್ತಿದ್ದಿರಿ. ಅವನು ಬರೆದ ಮಾತುಗಳನ್ನು ನೀವು ನಂಬದಿದ್ದರೆ ನಾನು ಹೇಳುವ ಮಾತುಗಳನ್ನು ಹೇಗೆ ನಂಬೀರಿ? ಅಂದನು.
ಅಧ್ಯಾಯ 11
ಬಳಿಕ ಆತನು ಗಟ್ಟಾ ಇಳಿದು ಗಲಿಲಾಯಕ್ಕೆ ಸೇರಿದ ಕಪೆರ್ನೌಮೆಂಬ ಊರಿಗೆ ಬಂದನು. ಅಲ್ಲಿ ಸಬ್ಬತ್ದಿನದಲ್ಲಿ ಅವರಿಗೆ ಉಪದೇಶ ಮಾಡುತ್ತಿರಲು ಆತನ ಮಾತು ಅಧಿಕಾರವುಳ್ಳದ್ದಾಗಿದ್ದದರಿಂದ ಅವರು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟರು. ಆ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು. ಆ ದೆವ್ವವು - ಹಾ! ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡುವದಕ್ಕೆ ಬಂದೆಯಾ? ನಿನ್ನನ್ನು ಬಲ್ಲೆನು. ನೀನು ದೇವರು ಪ್ರತಿಷ್ಠಿಸಿದವನೇ ಎಂದು ಅಬ್ಬರಿಸಿ ಹೇಳಿತು. ಯೇಸು ಅದನ್ನು ಗದರಿಸಿ - ಸುಮ್ಮನಿರು, ಇವನನ್ನು ಬಿಟ್ಟುಹೋಗು ಎನ್ನಲಾಗಿ ಆ ದೆವ್ವವು ಅವನನ್ನು ನಡುವೆ ಕೆಡವಿ ಅವನಿಗೆ ಯಾವ ಕೇಡನ್ನೂ ಮಾಡದೆ ಬಿಟ್ಟುಹೋಯಿತು. ಅದಕ್ಕೆ ಎಲ್ಲರು ಬೆರಗಾಗಿ - ಇದೆಂಥ ಮಾತಾಗಿರಬಹುದು? ಈತನು ಅಧಿಕಾರದಿಂದಲೂ ಬಲದಿಂದಲೂ ದೆವ್ವಗಳಿಗೆ ಅಪ್ಪಣೆ ಕೊಡುತ್ತಾನೆ, ಅವು ಬಿಟ್ಟುಹೋಗುತ್ತವೆ ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು. ಮತ್ತು ಆತನ ಸುದ್ದಿಯು ಸುತ್ತಲಿರುವ ಪ್ರಾಂತ್ಯದ ಊರುಗಳಲ್ಲೆಲ್ಲಾ ಹಬ್ಬಿತು.
ಆತನು ಸಭಾಮಂದಿರದಿಂದೆದ್ದು ಸೀಮೋನನ ಮನೆಗೆ ಬಂದನು. ಅಲ್ಲಿ ಸೀಮೋನನ ಅತ್ತೆಯು ಕಠಿನ ಜ್ವರದಿಂದ ಬಹಳ ಕಷ್ಟಪಡುತ್ತಿರಲಾಗಿ ಆಕೆಯ ವಿಷಯದಲ್ಲಿ ಆತನನ್ನು ಬೇಡಿಕೊಂಡರು. ಆತನು ಆಕೆಯ ಬಳಿ ನಿಂತು ಬಾಗಿ ಆ ಜ್ವರವನ್ನು ಗದರಿಸಲು ಅದು ಆಕೆಯನ್ನು ಬಿಟ್ಟುಹೋಯಿತು. ಕೂಡಲೆ ಆಕೆಯು ಎದ್ದು ಅವರಿಗೆ ಉಪಚಾರ ಮಾಡಿದಳು. ಸಂಜೆಯಾಗಲು ದೆವ್ವಹಿಡಿದ ಬಹಳ ಜನರನ್ನು ಆತನ ಬಳಿಗೆ ಕರತಂದರು; ಆತನು ಮಾತು ಮಾತ್ರದಿಂದಲೇ ದೆವ್ವಗಳನ್ನು ಬಿಡಿಸಿದ್ದಲ್ಲದೆ ಮೈಯಲ್ಲಿ ನೆಟ್ಟಗಿಲ್ಲದವರೆಲ್ಲರನ್ನು ವಾಸಿಮಾಡಿದನು.ಹೊತ್ತು ಮುಣುಗುವಾಗ ಆದದ್ದೇನಂದರೆ ಯಾರಾರ ಮನೆಯಲ್ಲಿ ತರತರದ ರೋಗಗಳಿಂದ ಅಸ್ವಸ್ಥವಾದವರಿದ್ದರೋ ಅವರೆಲ್ಲರು ಆ ರೋಗಿಗಳನ್ನು ಆತನ ಹತ್ತಿರಕ್ಕೆ ಕರಕೊಂಡು ಬಂದರು; ಆತನು ಪ್ರತಿಯೊಬ್ಬನ ಮೇಲೆಯೂ ಕೈಯಿಟ್ಟು ಅವರನ್ನು ವಾಸಿಮಾಡಿದನು.ದೆವ್ವಗಳು ಸಹ - ನೀನು ದೇವರ ಕುಮಾರನು ಎಂದು ಅಬ್ಬರಿಸಿ ಅನೇಕರನ್ನು ಬಿಟ್ಟು ಹೋದವು. ತಾನು ಕ್ರಿಸ್ತನೆಂದು ಅವುಗಳಿಗೆ ತಿಳಿದದ್ದರಿಂದ ಆತನು ಅವುಗಳನ್ನು ಮಾತಾಡದಂತೆ ಗದರಿಸಿದನು.ಇದರಿಂದ ನಮ್ಮ ಬೇನೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು ಎಂದು ಯೆಶಾಯನೆಂಬ ಪ್ರವಾದಿಯಿಂದ ಹೇಳಿರುವ ಮಾತು ನೆರವೇರಿತು.
ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ಹೊರಟು ಅಡವಿಯ ಸ್ಥಳಕ್ಕೆ ಹೋಗಿ ದೇವರನ್ನು ಪ್ರಾರ್ಥಿಸುತ್ತಿದ್ದನು. ಸೀಮೋನನೂ ಅವನ ಸಂಗಡ ಇದ್ದವರೂ ಆತನನ್ನು ಹಿಂದಟ್ಟಿ ಕಂಡು - ಎಲ್ಲರು ನಿನ್ನನ್ನು ಹುಡುಕುತ್ತಾರೆ ಅನ್ನಲಾಗಿ ಆತನು ಅವರಿಗೆ - ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ; ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು; ಇದಕ್ಕಾಗಿಯೇ ನಾನು ಹೊರಟು ಬಂದಿದ್ದೇನೆ ಎಂದು ಹೇಳಿದನು. ಬಳಿಕ ಯೇಸು ಗಲಿಲಾಯದಲ್ಲೆಲ್ಲಾ ತಿರುಗಾಡಿ ಅಲ್ಲಿಯವರ ಸಭಾಮಂದಿರಗಳಲ್ಲಿ ಉಪದೇಶಮಾಡುತ್ತಾ, ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಜನರ ಎಲ್ಲಾತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು. ಆತನ ಸುದ್ದಿಯು ಸಿರಿಯ ದೇಶದಲ್ಲೆಲ್ಲಾ ಹಬ್ಬಿದ್ದರಿಂದ ಮೈಯಲ್ಲಿ ನೆಟ್ಟಗಿಲ್ಲದವರನ್ನು, ಅಂದರೆ ತರತರದ ರೋಗಬಾಧೆಗಳಿಂದ ಕಷ್ಟಪಡುವವರನ್ನೂ ದೆವ್ವ ಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯುವಿನವರನ್ನೂ ಆತನ ಬಳಿಗೆ ಕರತಂದರು; ಆತನು ಅವರನ್ನು ಸ್ವಸ್ಥಮಾಡಿದನು. ಮತ್ತು ಗಲಿಲಾಯ ದೆಕಪೊಲಿ ಯೆರೂಸಲೇಮ್ ಯೂದಾಯ ಎಂಬೀ ಸ್ಥಳಗಳಿಂದಲೂ ಯೊರ್ದನ್ ಹೊಳೆಯ ಆಚೇಕಡೆಯಿಂದಲೂ ಜನರು ಗುಂಪುಗುಂಪಾಗಿ ಆತನ ಹಿಂದೆ ಹೋದರು.
ಅಧ್ಯಾಯ 12
ಆತನು ಆ ಜನರ ಗುಂಪುಗಳನ್ನು ಕಂಡು ಬೆಟ್ಟವನ್ನೇರಿ ಕೂತುಕೊಂಡ ತರುವಾಯ ಆತನ ಶಿಷ್ಯರು ಆತನ ಬಳಿಗೆ ಬಂದರು. ಆತನು ಅವರಿಗೆ ಉಪದೇಶ ಮಾಡಿ ಹೇಳಿದ್ದೇನಂದರೆ - ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಪರಲೋಕರಾಜ್ಯವು ಅವರದು. ದುಃಖಪಡುವವರು ಧನ್ಯರು; ಅವರು ಸಮಾಧಾನ ಹೊಂದುವರು. ಶಾಂತರು ಧನ್ಯರು; ಅವರು ಭೂವಿುಗೆ ಬಾಧ್ಯರಾಗುವರು. ನೀತಿಗೆ ಹಸಿದು ಬಾಯಾರಿದವರು ಧನ್ಯರು; ಅವರಿಗೆ ತೃಪ್ತಿಯಾಗುವದು. ಕರುಣೆಯುಳ್ಳವರು ಧನ್ಯರು; ಅವರು ಕರುಣೆಹೊಂದುವರು. ನಿರ್ಮಲಚಿತ್ತರು ಧನ್ಯರು; ಅವರು ದೇವರನ್ನು ನೋಡುವರು. ಸಮಾಧಾನ ಪಡಿಸುವವರು ಧನ್ಯರು; ಅವರು ದೇವರ ಮಕ್ಕಳು ಅನ್ನಿಸಿಕೊಳ್ಳುವರು. ನೀತಿಯ ನಿವಿುತ್ತವಾಗಿ ಹಿಂಸೆಯನ್ನು ತಾಳಿಕೊಳ್ಳುವವರು ಧನ್ಯರು; ಪರಲೋಕರಾಜ್ಯವು ಅವರದು. ನನ್ನ ನಿವಿುತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನೂ ಹೀಗೆಯೇ ಹಿಂಸೆಪಡಿಸಿದರಲ್ಲಾ. ಆದರೆ ಐಶ್ವರ್ಯವಂತರೇ, ನಿಮ್ಮ ಗತಿಯನ್ನು ಏನು ಹೇಳಲಿ! ನಿಮ್ಮ ಸುಖ ನಿಮಗೆ ಬಂದದೆ. ಈಗ ಹೊಟ್ಟೆತುಂಬಿದವರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಹಸಿಯುವಿರಿ. ಈಗ ನಗುವವರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ದುಃಖಪಟ್ಟು ಅಳುವಿರಿ. ಜನರೆಲ್ಲಾ ನಿಮ್ಮನ್ನು ಹೊಗಳಿದರೆ ನಿಮ್ಮ ಗತಿಯನ್ನು ಏನು ಹೇಳಲಿ! ಅವರ ಪಿತೃಗಳು ಸುಳ್ಳುಪ್ರವಾದಿಗಳನ್ನು ಹಾಗೆಯೇ ಹೊಗಳಿದರು.
ನೀವು ಭೂವಿುಗೆ ಉಪ್ಪಾಗಿದ್ದೀರಿ. ಉಪ್ಪು ಸಪ್ಪಗಾದರೆ ಅದಕ್ಕೆ ಇನ್ನಾತರಿಂದ ಉಪ್ಪಿನ ರುಚಿ ಬಂದೀತು? ಜನರು ಅದನ್ನು ಹೊರಗೆಹಾಕಿ ತುಳಿಯುವದಕ್ಕೆ ಅದು ಯೋಗ್ಯವೇ ಹೊರತು ಮತ್ತಾವ ಕೆಲಸಕ್ಕೂ ಬಾರದು. ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು. ಮತ್ತು ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುವದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕುಕೊಡುವದು. ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಮೋಶೆಯ ಧರ್ಮಶಾಸ್ತ್ರವನ್ನಾಗಲಿ ಪ್ರವಾದಿಗಳ ವಚನಗಳನ್ನಾಗಲಿ ತೆಗೆದುಹಾಕುವದಕ್ಕೆ ನಾನು ಬಂದೆನೆಂದು ನೆನಸಬೇಡಿರಿ. ತೆಗೆದುಹಾಕುವದಕ್ಕೆ ಬಂದಿಲ್ಲ; ನೆರವೇರಿಸುವದಕ್ಕೆ ಬಂದಿದ್ದೇನೆ. ನಿಮಗೆ ಸತ್ಯವಾಗಿ ಹೇಳುತ್ತೇನೆ - ಆಕಾಶವೂ ಭೂವಿುಯೂ ಅಳಿದು ಹೋಗುವ ತನಕ ಧರ್ಮಶಾಸ್ತ್ರವೆಲ್ಲಾ ನೆರವೇರಿದ ಹೊರತು ಅದರೊಳಗಿಂದ ಒಂದು ಸೊನ್ನೆಯಾದರೂ ಒಂದು ಗುಡುಸಾದರೂ ಅಳಿದುಹೋಗಲಾರದು. ಆದದರಿಂದ ಈ ಸಣ್ಣಸಣ್ಣ ಆಜ್ಞೆಗಳಲ್ಲಿಯಾದರೂ ಒಂದನ್ನು ಮೀರಿ ಜನರಿಗೂ ಹಾಗೆ ಮೀರುವದಕ್ಕೆ ಬೋಧಿಸುವವನು ಪರಲೋಕರಾಜ್ಯದಲ್ಲಿ ಬಹಳ ಚಿಕ್ಕವನೆನಿಸಿಕೊಳ್ಳುವನು; ಆದರೆ ತಾನೇ ಆ ಆಜ್ಞೆಗಳಂತೆ ನಡೆದುಕೊಂಡು ಜನರಿಗೂ ಹಾಗೆ ನಡೆಯಬೇಕೆಂದು ಬೋಧಿಸುವವನು ಪರಲೋಕರಾಜ್ಯದಲ್ಲಿ ದೊಡ್ಡವನೆನಿಸಿಕೊಳ್ಳುವನು. ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ಹೆಚ್ಚಿನದಾಗದಿದ್ದರೆ ನೀವು ಪರಲೋಕರಾಜ್ಯದಲ್ಲಿ ಸೇರಲಾರಿರಿ ಎಂದು ನಿಮಗೆ ಹೇಳುತ್ತೇನೆ.
ನರಹತ್ಯ ಮಾಡಬಾರದು; ನರಹತ್ಯ ಮಾಡುವವನು ನ್ಯಾಯವಿಚಾರಣೆಗೆ ಗುರಿಯಾಗುವನೆಂದು ಹಿರಿಯರಿಗೆ ಹೇಳಿಯದೆ ಎಂದು ಕೇಳಿದ್ದೀರಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ - ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಪ್ರತಿ ಮನುಷ್ಯನು ನ್ಯಾಯವಿಚಾರಣೆಗೆ ಗುರಿಯಾಗುವನು; ತನ್ನ ಸಹೋದರನನ್ನು ನೋಡಿ - ಛೀ ನೀಚಾ ಅನ್ನುವವನು ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು; ಮೂರ್ಖಾ ಅನ್ನುವವನು ಅಗ್ನಿನರಕಕ್ಕೆ ಗುರಿಯಾಗುವನು. ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತಿರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವದೆ ಎಂಬದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು. ನಿನ್ನ ವಾದಿಯ ಸಂಗಡ ಇನ್ನೂ ದಾರಿಯಲ್ಲಿರುವಾಗಲೇ ಅವನ ಕೂಡ ಬೇಗ ಸಮಾಧಾನ ಮಾಡಿಕೋ; ಇಲ್ಲದಿದ್ದರೆ ಆ ವಾದಿಯು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಾನು; ನ್ಯಾಯಾಧಿಪತಿಯು ನಿನ್ನನ್ನು ಓಲೇಕಾರನ ಕೈಗೆ ಒಪ್ಪಿಸಿಕೊಟ್ಟಾನು; ಆಗ ನೀನು ಸೆರೆಯಲ್ಲಿ ಬಿದ್ದೀಯೆ. ನೀನು ಒಂದು ಕಾಸನ್ನಾದರೂ ನಿಲ್ಲಿಸಿಕೊಳ್ಳದೆ ಎಲ್ಲಾ ಸಲ್ಲಿಸುವ ತನಕ ಅಲ್ಲಿಂದ ಬರುವದೇ ಇಲ್ಲ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ.
ವ್ಯಭಿಚಾರ ಮಾಡಬಾರದೆಂದು ಹೇಳಿಯದೆ ಎಂಬದಾಗಿ ನೀವು ಕೇಳಿದ್ದೀರಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ - ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು. ನಿನ್ನ ಬಲಗಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಿತ್ತು ಬಿಸಾಟುಬಿಡು; ನಿನ್ನ ದೇಹವೆಲ್ಲಾ ನರಕದಲ್ಲಿ ಬೀಳುವದಕ್ಕಿಂತ ಅವಯವಗಳಲ್ಲಿ ಒಂದು ಹೋಗುವದು ನಿನಗೆ ಹಿತವಲ್ಲವೇ. ನಿನ್ನ ಬಲಗೈ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಡಿದು ಬಿಸಾಟುಬಿಡು; ನಿನ್ನ ದೇಹವೆಲ್ಲಾ ನರಕದಲ್ಲಿ ಬೀಳುವದಕ್ಕಿಂತ ಅವಯವಗಳಲ್ಲಿ ಒಂದು ಹೋಗುವದು ನಿನಗೆ ಹಿತವಲ್ಲವೇ. ಇದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಆಕೆಗೆ ತ್ಯಾಗಪತ್ರವನ್ನು ಕೊಡತಕ್ಕದ್ದೆಂದು ಹೇಳಿಯದೆಯಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ - ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಅವಳು ವ್ಯಭಿಚಾರ ಮಾಡುವದಕ್ಕೆ ಕಾರಣನಾಗುತ್ತಾನೆ ಮತ್ತು ಗಂಡಬಿಟ್ಟವಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರಮಾಡಿದವನಾಗಿದ್ದಾನೆ.
ಮತ್ತು - ನೀನು ಸುಳ್ಳಾಣೆಯಿಡಬಾರದು; ನೀನು ಇಟ್ಟುಕೊಂಡ ಆಣೆಗಳನ್ನು ಕರ್ತನಿಗೆ ಸಲ್ಲಿಸಬೇಕೆಂದು ಹಿರಿಯರಿಗೆ ಹೇಳಿಯದೆ ಎಂದು ಕೇಳಿದ್ದೀರಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ - ಆಣೆಯನ್ನೇ ಇಡಬೇಡ. ಆಕಾಶದ ಮೇಲೆ ಆಣೆ ಇಡಬೇಡ; ಅದು ದೇವರ ಸಿಂಹಾಸನವು. ಭೂವಿುಯ ಮೇಲೆ ಆಣೆ ಇಡಬೇಡ; ಅದು ಆತನ ಪಾದಪೀಠವು. ಯೆರೂಸಲೇವಿುನ ಮೇಲೆ ಆಣೆ ಇಡಬೇಡ; ಅದು ಆ ದೊಡ್ಡ ಅರಸನ ಪಟ್ಟಣವಾಗಿದೆ. ನಿನ್ನ ತಲೆಯ ಮೇಲೆ ಕೂಡ ಆಣೆ ಇಡಬೇಡ; ನೀನು ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕರ್ರಗೆ ಮಾಡಲಾರಿ. ಆದರೆ ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ; ಇದಕ್ಕಿಂತ ಹೆಚ್ಚಾದದ್ದು ಸೈತಾನನಿಂದ ಬಂದದ್ದು.
ಕಣ್ಣಿಗೆ ಪ್ರತಿಯಾಗಿ ಕಣ್ಣನ್ನು ಹಲ್ಲಿಗೆ ಪ್ರತಿಯಾಗಿ ಹಲ್ಲನ್ನು ತೆಗಿಸು ಅಂತ ಹೇಳಿಯದೆ ಎಂದು ಕೇಳಿದ್ದೀರಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ - ಕೆಡುಕನನ್ನು ಎದುರಿಸಬೇಡ. ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು. ನಿನ್ನ ಸಂಗಡ ವ್ಯಾಜ್ಯವಾಡಿ ನಿನ್ನ ಒಳಂಗಿಯನ್ನು ತಕ್ಕೊಳ್ಳಬೇಕೆಂದಿರುವವನಿಗೆ ಮೇಲಂಗಿಯನ್ನೂ ಬಿಡು. ಒಬ್ಬನು - ಒಂದು ಮೈಲು ದೂರ ಬಾ ಎಂದು ನಿನ್ನನ್ನು ಬಿಟ್ಟೀಹಿಡಿದರೆ ಅವನ ಸಂಗಡ ಎರಡು ಮೈಲು ಹೋಗು.ನಿನ್ನನ್ನು ಬೇಡುವವನಿಗೆ ಕೊಡು; ಕಡಾ ಈಸಿಕೊಳ್ಳಬೇಕೆಂದು ಬಂದವನಿಗೆ ಮುಖತಿರುವಿಕೊಳ್ಳಬೇಡ.ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ. ಇದೇ ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ತಾತ್ಪರ್ಯ.
ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ಹಗೆಮಾಡಬೇಕೆಂದು ಹೇಳಿಯದೆ ಎಂಬದಾಗಿ ಕೇಳಿದ್ದೀರಷ್ಟೆ.ಕೇಳುವವರಾದ ನಿಮಗೆ ನಾನು ಹೇಳುವದೇನಂದರೆ - ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಉಪಕಾರಮಾಡಿರಿ; ನಿಮ್ಮನ್ನು ಶಪಿಸುವವರಿಗೆ ಆಶೀರ್ವಾದಮಾಡಿರಿ; ನಿಮ್ಮನ್ನು ಬಯ್ಯುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ.ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ. ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ. ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ಫಲವೇನು? ಭ್ರಷ್ಟರೂ ಹಾಗೆ ಮಾಡುವದಿಲ್ಲವೇ. ನಿಮ್ಮ ಸಹೋದರರಿಗೆ ಮಾತ್ರ ನೀವು ಮರ್ಯಾದೆಕೊಟ್ಟರೆ ಏನು ಹೆಚ್ಚು ಮಾಡಿದ ಹಾಗಾಯಿತು? ಅನ್ಯಜನಗಳು ಸಹ ಹಾಗೆ ಮಾಡುವದಿಲ್ಲವೇ. ನಿಮಗೆ ಮೇಲನ್ನು ಮಾಡುವವರಿಗೇ ನೀವು ಮೇಲನ್ನು ಮಾಡಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ಹಾಗೆ ಮಾಡುತ್ತಾರಲ್ಲಾ. ಅವರು ನಮಗೂ ಸಾಲಕೊಟ್ಟಾರೆಂದು ನೀವು ಯಾರಿಗಾದರೂ ಸಾಲಕೊಟ್ಟರೆ, ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ತಾವು ಕೊಟ್ಟಷ್ಟು ತಮಗೆ ತಿರಿಗಿ ಸಿಕ್ಕೀತೆಂದು ಪಾಪಿಷ್ಠರಿಗೆ ಸಾಲ ಕೊಡುತ್ತಾರಲ್ಲಾ. ನೀವಾದರೋ ನಿಮ್ಮ ವೈರಿಗಳನ್ನು ಪ್ರೀತಿಸಿ ಅವರಿಗೆ ಉಪಕಾರಮಾಡಿರಿ. ಧೈರ್ಯವನ್ನು ಬಿಡದೆ ಸಾಲಕೊಡಿರಿ; ಹೀಗೆ ಮಾಡಿದರೆ, ನಿಮಗೆ ಬಹಳ ಫಲ ಸಿಕ್ಕುವದು, ಮತ್ತು ನೀವು ಪರಾತ್ಪರನ ಮಕ್ಕಳಾಗುವಿರಿ. ಆತನಂತೂ ಉಪಕಾರ ನೆನಸದವರಿಗೂ ಕೆಟ್ಟವರಿಗೂ ಉಪಕಾರಿಯಾಗಿದ್ದಾನೆ. ನಿಮ್ಮ ತಂದೆ ಕರುಣವುಳ್ಳವನಾಗಿರುವ ಪ್ರಕಾರವೇ ನೀವೂ ಕರುಣವುಳ್ಳವರಾಗಿರಿ.ಆದದರಿಂದ ಪರಲೋಕದಲ್ಲಿರುವ ನಿಮ್ಮ ತಂದೆಯು ಯಾವ ದೋಷವೂ ಇಲ್ಲದವನಾಗಿರುವಂತೆ ನೀವೂ ದೋಷವಿಲ್ಲದವರಾಗಿರ್ರಿ.
ಅಧ್ಯಾಯ 13
ಜನರು ನೋಡಲಿ ಎಂದು ನಿಮ್ಮ ಧರ್ಮಕಾರ್ಯಗಳನ್ನು ಅವರ ಮುಂದೆ ಮಾಡಬಾರದು, ನೋಡಿರಿ; ಹಾಗೆ ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯ ಹತ್ತಿರ ನಿಮಗೆ ಫಲದೊರೆಯದು.ಆದದರಿಂದ ನೀನು ಧರ್ಮಕೊಡುವಾಗ ನಿನ್ನ ಮುಂದೆ ಕೊಂಬೂದಿಸಬೇಡ; ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳು ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ಹಾಗೆ ಮಾಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ನೀನಾದರೆ ಧರ್ಮಕೊಡುವಾಗ ನೀನು ಧರ್ಮಕೊಟ್ಟದ್ದು ಅಂತರಂಗವಾಗುವ ಹಾಗೆ ನಿನ್ನ ಬಲಗೈ ಮಾಡಿದ್ದು ಎಡಗೈಗೂ ತಿಳಿಯದಿರಲಿ. ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು.ಮತ್ತು ನೀವು ಪ್ರಾರ್ಥನೆಮಾಡುವಾಗ ಕಪಟಿಗಳ ಹಾಗೆ ಮಾಡಬೇಡಿರಿ. ಜನರು ನೋಡಬೇಕೆಂದು ಅವರು ಸಭಾಮಂದಿರಗಳಲ್ಲಿಯೂ ಬೀದೀಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆಮಾಡುವದಕ್ಕೆ ಇಷ್ಟಪಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆದರೆ ನೀನು ಪ್ರಾರ್ಥನೆಮಾಡಬೇಕಾದರೆ ನಿನ್ನ ಏಕಾಂತವಾದ ಕೋಣೆಯೊಳಗೆ ಹೋಗಿ ಬಾಗಲನ್ನು ಮುಚ್ಚಿಕೊಂಡು ಅಂತರಂಗದಲ್ಲಿಯೂ ಇರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು.ಇದಲ್ಲದೆ ನೀವು ಉಪವಾಸಮಾಡುವಾಗ ಕಪಟಿಗಳಂತೆ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಡಿರಿ. ಅವರು ತಾವು ಉಪವಾಸಿಗಳೆಂದು ಜನರಿಗೆ ತೋರುವದಕ್ಕಾಗಿ ತಮ್ಮ ಮುಖವನ್ನು ವಿಕಾರಮಾಡಿಕೊಳ್ಳುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆದರೆ ನೀನು ಉಪವಾಸಮಾಡುವಾಗ ತಲೆಗೆ ಎಣ್ಣೆ ಹಚ್ಚಿಕೊಂಡು ಮುಖವನ್ನು ತೊಳಕೋ. ಹೀಗೆ ಮಾಡಿದರೆ ನೀನು ಉಪವಾಸಿಯೆಂದು ಜನರಿಗೆ ಕಾಣದೆ ಹೋದಾಗ್ಯೂ ಅಂತರಂಗದಲ್ಲಿರುವ ನಿನ್ನ ತಂದೆಗೆ ಉಪವಾಸಿಯೆಂದು ಕಾಣಿಸಿಕೊಳ್ಳುವಿ. ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು.
ಆದರೆ ಪ್ರಾರ್ಥನೆಮಾಡುವಾಗ ಅಜ್ಞಾನಿಗಳ ಹಾಗೆ ಹೇಳಿದ್ದನ್ನೇ ಸುಮ್ಮಸುಮ್ಮನೆ ಹೇಳಬೇಡ; ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು ನೆನಸುತ್ತಾರೆ. ಆದದರಿಂದ ನೀವು ಅವರ ಹಾಗೆ ಆಗಬೇಡಿರಿ. ನೀವು ನಿಮ್ಮ ತಂದೆಯನ್ನು ಬೇಡಿಕೊಳ್ಳುವದಕ್ಕಿಂತ ಮುಂಚೆಯೇ ನಿಮಗೆ ಏನೇನು ಅಗತ್ಯವೆಂಬದು ಆತನಿಗೆ ತಿಳಿದದೆ. ಆದದರಿಂದ ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು -ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ.ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸು.
ನಮಗೆ ತಪ್ಪು ಮಾಡಿದವರನ್ನು ನಾವು ಕ್ಷವಿುಸಿದಂತೆ ನಮ್ಮ ತಪ್ಪುಗಳನ್ನು ಕ್ಷವಿುಸು. ನಮ್ಮನ್ನು ಶೋಧನೆಯೊಳಗೆ ಸೇರಿಸದೆ ಕೇಡಿನಿಂದ ನಮ್ಮನ್ನು ತಪ್ಪಿಸು.ನೀವು ಜನರ ತಪ್ಪುಗಳನ್ನು ಕ್ಷವಿುಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷವಿುಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷವಿುಸದೆಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷವಿುಸುವದಿಲ್ಲ.
ನಿಮಗಿರುವದನ್ನು ಮಾರಿಬಿಟ್ಟು ದಾನಾ ಕೊಡಿರಿ; ಹಳೇವಾಗದಂಥ ಹಮ್ಮೀಣಿಗಳನ್ನು ಮಾಡಿಕೊಂಡು ಪರಲೋಕದಲ್ಲಿ ಲಯವಾಗದ ದ್ರವ್ಯವನ್ನು ಇಟ್ಟುಕೊಳ್ಳಿರಿ. ಅಲ್ಲಿ ಕಳ್ಳನು ಸಮೀಪಕ್ಕೆ ಬರುವದಿಲ್ಲ; ಅದು ನುಸಿಹಿಡಿದು ನಾಶವಾಗುವದಿಲ್ಲ.ಭೂಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅಂತೂ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು.ನಿನ್ನ ಗಂಟು ಇದ್ದಲ್ಲಿಯೇ ನಿನ್ನ ಮನಸ್ಸೂ ಇರುವದಷ್ಟೆ.
ಯಾರೂ ದೀಪವನ್ನು ಹಚ್ಚಿ ಮರೆಯಲ್ಲಾಗಲಿ ಕೊಳಗದೊಳಗಾಗಲಿ ಇಡುವದಿಲ್ಲ. ಮನೆಯೊಳಕ್ಕೆ ಬರುವವರಿಗೆ ಬೆಳಕು ಕಾಣಿಸುವಂತೆ ಆ ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. ನಿನ್ನ ಕಣ್ಣು ದೇಹಕ್ಕೆ ದೀಪವಾಗಿದೆ; ನಿನ್ನ ಕಣ್ಣು ನೆಟ್ಟಗಿರುವಾಗ ಅದರಂತೆ ನಿನ್ನ ದೇಹವೆಲ್ಲಾ ಬೆಳಕಾಗಿರುವದು; ಅದು ಕೆಟ್ಟದ್ದಾಗಿರುವಾಗ ಅದರಂತೆ ನಿನ್ನ ದೇಹವು ಕತ್ತಲಾಗಿರುವದು. ಆದದರಿಂದ ನಿನ್ನೊಳಗಿರುವ ಬೆಳಕೇ ಕತ್ತಲಾಗಿದೆಯೋ ಏನೋ ನೋಡು. ನಿನ್ನ ದೇಹವೆಲ್ಲಾ ಬೆಳಕಾಗಿದ್ದು ಒಂದು ಭಾಗದಲ್ಲಿಯೂ ಕತ್ತಲಿಲ್ಲದ್ದಾಗಿದ್ದರೆ ದೀಪವು ಹೊಳೆದು ನಿನಗೆ ಬೆಳಕನ್ನು ಕೊಡುವ ಕಾಲದಲ್ಲಿ ಹೇಗೋ ಹಾಗೆಯೇ ಅದು ಪೂರ್ಣವಾಗಿ ಬೆಳಕಾಗಿರುವದು ಅಂದನು.
ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ. ಈ ಕಾರಣದಿಂದ - ನಮ್ಮ ಪ್ರಾಣಧಾರಣೆಗೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂಬದಾಗಿ ನಿಮಗೆ ಹೇಳುತ್ತೇನೆ. ಊಟಕ್ಕಿಂತ ಪ್ರಾಣವು ಉಡುಪಿಗಿಂತ ದೇಹವು ಮೇಲಾದದ್ದಲ್ಲವೇ. ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವದಿಲ್ಲ; ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ; ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ? ಚಿಂತೆಮಾಡಿಮಾಡಿ ಒಂದು ಮೊಳ ಉದ್ದ ಬೆಳೆಯುವದು ನಿಮ್ಮಲ್ಲಿ ಯಾರಿಂದಾದೀತು? ಆದದರಿಂದ ಕೇವಲ ಅಲ್ಪವಾದದ್ದನ್ನಾದರೂ ಮಾಡುವದಕ್ಕೆ ನೀವು ಅಶಕ್ತರಾಗಿರಲಾಗಿ ವಿುಕ್ಕಾದದ್ದರ ವಿಷಯದಲ್ಲಿ ಚಿಂತೆಮಾಡುವದೇಕೆ?
ಇದಲ್ಲದೆ ನೀವು ಉಡುಪಿನ ವಿಷಯದಲ್ಲಿ ಚಿಂತೆಮಾಡುವದೇಕೆ? ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಯೋಚಿಸಿ ತಿಳಿಯಿರಿ; ಅವು ದುಡಿಯುವದಿಲ್ಲ, ನೂಲುವದಿಲ್ಲ; ಆದಾಗ್ಯೂ ಈ ಹೂವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರವು ಅರಸನಾದ ಸೊಲೊಮೋನನಿಗೆ ಸಹ ಅವನು ತನ್ನ ಸಕಲ ವೈಭವದಿಂದಿರುವಾಗಲೂ ಇರಲಿಲ್ಲವೆಂದು ನಿಮಗೆ ಹೇಳುತ್ತೇನೆ. ಎಲೈ ಅಲ್ಪವಿಶ್ವಾಸಿಗಳೇ, ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನಲ್ಲವೇ. ಹೀಗಿರುವದರಿಂದ - ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. ಇವೆಲ್ಲವುಗಳಿಗಾಗಿ ಅಜ್ಞಾನಿಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ. ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.ಆದದರಿಂದ ನಾಳಿನ ವಿಷಯವಾಗಿ ಚಿಂತೆಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು. ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು.
ಅಧ್ಯಾಯ 14
ತೀರ್ಪುಮಾಡಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ. ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವದು; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.ಕೊಡಿರಿ, ಆಗ ನಿಮಗೂ ಕೊಡುವರು; ಜಡಿದು ಅಲ್ಲಾಡಿಸಿ ಹೊರಚೆಲ್ಲುವ ಹಾಗೆ ತುಂಬಾ ಅಳತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು ಅಂದನು. ಇದಲ್ಲದೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು. ಅದೇನಂದರೆ - ಕುರುಡನು ಕುರುಡನಿಗೆ ದಾರೀ ತೋರಿಸುವದಕ್ಕಾದೀತೇ? ಅವರಿಬ್ಬರೂ ಕುಣಿಯಲ್ಲಿ ಬೀಳುವರಲ್ಲವೆ.ಇದಲ್ಲದೆ ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವದೇಕೆ?ನೀನು ನಿನ್ನ ಸಹೋದರನಿಗೆ - ನಿನ್ನ ಕಣ್ಣಿನೊಳಗಿಂದ ರವೆಯನ್ನು ತೆಗೆಯುತ್ತೇನೆ ಬಾ ಎಂದು ಹೇಳುವದು ಹೇಗೆ? ನಿನ್ನ ಕಣ್ಣಿನಲ್ಲಿ ತೊಲೆಯದೆಯಲ್ಲಾ. ಕಪಟಿಯೇ, ಮೊದಲು ನಿನ್ನ ಕಣ್ಣಿನೊಳಗಿಂದ ತೊಲೆಯನ್ನು ತೆಗೆದುಹಾಕಿಕೋ; ಆಮೇಲೆ ನಿನ್ನ ಸಹೋದರನ ಕಣ್ಣಿನೊಳಗಿಂದ ರವೆಯನ್ನು ತೆಗೆಯುವದಕ್ಕೆ ಚೆನ್ನಾಗಿ ಕಾಣಿಸುವದು.ದೇವರ ವಸ್ತುವನ್ನು ನಾಯಿಗಳಿಗೆ ಹಾಕಬೇಡಿರಿ; ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿರಿ. ಚೆಲ್ಲಿದರೆ ತಮ್ಮ ಕಾಲಿನಿಂದ ಅವುಗಳನ್ನು ತುಳಿದು ಹಿಂತಿರುಗಿ ಬಂದು ನಿಮ್ಮನ್ನು ಸೀಳಿಬಿಟ್ಟಾವು.
ಸುಳ್ಳುಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ. ಅವರು ಕುರೀವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುತ್ತಾರೆ; ಆದರೆ ಒಳಗೆ ನೋಡಿದರೆ ಅವರು ಹಿಡುಕೊಂಡು ಹೋಗುವ ತೋಳಗಳೇ. ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ. ಮುಳ್ಳುಗಿಡಗಳಲ್ಲಿ ದ್ರಾಕ್ಷೇಹಣ್ಣುಗಳನ್ನೂ ಮದ್ದುಗುಣಿಕೇಗಿಡಗಳಲ್ಲಿ ಅಂಜೂರಗಳನ್ನೂ ಕೊಯ್ಯುವದುಂಟೇ? ಹಾಗೆಯೇ ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು; ಹುಳುಕು ಮರವು ಕೆಟ್ಟ ಫಲವನ್ನು ಕೊಡುವದು. ಒಳ್ಳೇ ಮರವು ಕೆಟ್ಟ ಫಲವನ್ನು ಕೊಡಲಾರದು; ಹುಳುಕು ಮರವು ಒಳ್ಳೇ ಫಲವನ್ನು ಕೊಡಲಾರದು. ಒಳ್ಳೇ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ. ಹೀಗಿರಲಾಗಿ ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ.ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿಂದ ಒಳ್ಳೆಯದನ್ನು ತರುತ್ತಾನೆ; ಕೆಟ್ಟವನು ಕೆಟ್ಟ ಬೊಕ್ಕಸದೊಳಗಿಂದ ಕೆಟ್ಟದ್ದನ್ನು ತರುತ್ತಾನೆ; ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು.
ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು. ಸ್ವಾಮೀ, ಸ್ವಾಮೀ, ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ನಿನ್ನ ಹೆಸರಿನ ಮೇಲೆ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಆ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು. ಆಗ ನಾನು ಅವರಿಗೆ - ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.ಆದದರಿಂದ, ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ನಡೆಯುವವನು ಬಂಡೆಯ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಯುಳ್ಳ ಮನುಷ್ಯನನ್ನು ಹೋಲುವನು. ಕಟ್ಟಿದ ಮೇಲೆ ಮಳೆ ಸುರಿಯಿತು; ಹಳ್ಳಗಳು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಬಡಿಯಿತು. ಆದಾಗ್ಯೂ ಅದರ ಅಸ್ತಿವಾರವು ಬಂಡೆಯ ಮೇಲಿದ್ದದರಿಂದ ಅದು ಬೀಳಲಿಲ್ಲ. ಆದರೆ ಈ ನನ್ನ ಮಾತುಗಳನ್ನು ಕೇಳಿಯೂ ಅವುಗಳಂತೆ ನಡೆಯದ ಪ್ರತಿಯೊಬ್ಬನು ಉಸುಬಿನ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಹೀನ ಮನುಷ್ಯನನ್ನು ಹೋಲುವನು. ಕಟ್ಟಿದ ಮೇಲೆ ಮಳೆ ಸುರಿಯಿತು; ಹಳ್ಳಗಳು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಹೊಡೆಯಿತು. ಆಗ ಅದು ಧಡಮ್ಮನೆ ಕಡುಕೊಂಡು ಬಿತ್ತು.
ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ಮೇಲೆ ಆ ಜನರ ಗುಂಪುಗಳು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟವು. ಯಾಕಂದರೆ ಆತನು ಅವರ ಶಾಸ್ತ್ರಿಗಳಂತೆ ಉಪದೇಶ ಮಾಡದೆ ಅಧಿಕಾರವಿದ್ದವನಂತೆ ಅವರಿಗೆ ಉಪದೇಶಮಾಡುತ್ತಿದ್ದನು.
ಅಧ್ಯಾಯ 15
ಆತನು ಬೆಟ್ಟದಿಂದಿಳಿದು ಬರುವಾಗ ಜನರು ಗುಂಪುಗುಂಪಾಗಿ ಆತನ ಹಿಂದೆ ಹೋದರು.ಆತನು ಒಂದಾನೊಂದು ಊರಿನಲ್ಲಿದ್ದಾಗ ಮೈಯೆಲ್ಲಾ ಕುಷ್ಠರೋಗ ತುಂಬಿದ್ದ ಒಬ್ಬ ಮನುಷ್ಯನು ಯೇಸುವನ್ನು ಕಂಡು ಅಡ್ಡ ಬಿದ್ದು - ಸ್ವಾಮೀ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ ಎಂದು ಬೇಡಿಕೊಂಡನು.ಆತನು ಕನಿಕರಪಟ್ಟು ಕೈನೀಡಿ ಅವನನ್ನು ಮುಟ್ಟಿ - ನನಗೆ ಮನಸ್ಸುಂಟು; ಶುದ್ಧವಾಗು ಅಂದನು. -ಕೂಡಲೆ ಅವನ ಕುಷ್ಠವು ಹೋಗಿ, ಅವನು ಶುದ್ಧವಾದನು. ಆಗ ಯೇಸು ಅವನಿಗೆ - ಯಾರಿಗೂ ಏನೂ ಹೇಳಬೇಡ ನೋಡು; ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆಯು ನೇಮಕಮಾಡಿರುವದನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು, ಅದು ಜನರಿಗೆ ಸಾಕ್ಷಿಯಾಗಲಿ ಎಂದು ಖಂಡಿತವಾಗಿ ಹೇಳಿ ಅವನನ್ನು ಕಳುಹಿಸಿಬಿಟ್ಟನು. ಆದರೆ ಅವನು ಹೊರಟುಹೋಗಿ ಆ ಸಂಗತಿಯನ್ನು ಬಹಳವಾಗಿ ಸಾರಿ ಹಬ್ಬಿಸಿದ್ದರಿಂದ ಯೇಸು ಬಹಿರಂಗವಾಗಿ ಇನ್ನು ಯಾವ ಊರೊಳಕ್ಕೂ ಹೋಗಲಾರದೆ ಹೊರಗೆ ಅಡವಿಯ ಸ್ಥಳಗಳಲ್ಲಿ ಇದ್ದನು. ಮತ್ತು ಜನರು ನಾಲ್ಕು ಕಡೆಯಿಂದಲೂ ಆತನ ಬಳಿಗೆ ಬರುತ್ತಿದ್ದರು.
ಕೆಲವು ದಿನಗಳಾದ ಮೇಲೆ ಆತನು ಕಪೆರ್ನೌವಿುಗೆ ತಿರಿಗಿ ಬಂದನು. ಮನೆಯಲ್ಲಿದ್ದಾನೆಂಬ ವರ್ತಮಾನವು ಹಬ್ಬಿದಾಗ ಬಹುಜನರು ಕೂಡಿ ಬಂದಿದ್ದರಿಂದ ಬಾಗಿಲಿನ ಬಳಿಯಲ್ಲಾದರೂ ಸ್ಥಳವಿರಲಿಲ್ಲ. ಆತನು ಅವರಿಗೆ ದೇವರ ವಾಕ್ಯವನ್ನು ಹೇಳುತ್ತಿದ್ದನು. ಗುಣಮಾಡುವದಕ್ಕೆ ಕರ್ತನ ಶಕ್ತಿಯು ಆತನಲ್ಲಿತ್ತು. ಹೀಗಿರುವಲ್ಲಿ ಕೆಲವು ಮಂದಿ ಗಂಡಸರು ಒಬ್ಬ ಪಾರ್ಶ್ವವಾಯು ರೋಗದವನನ್ನು ದೋಲಿಯಲ್ಲಿ ಹೊತ್ತುಕೊಂಡು ಬಂದರು; ಆದರೆ ಅವನನ್ನು ಒಳಗೆ ತೆಗೆದುಕೊಂಡುಹೋಗಿ ಆತನ ಮುಂದೆ ಇಡಬೇಕೆಂದು ಪ್ರಯತ್ನಿಸಿದರೂ ಜನರು ಗುಂಪಾಗಿದ್ದದರಿಂದ ಅವನನ್ನು ಒಳಗೆ ತೆಗೆದುಕೊಂಡುಹೋಗುವ ಮಾರ್ಗವನ್ನು ಕಾಣದೆ ಮನೆಯ ಮೇಲೆ ಹತ್ತಿ ಹಂಚುಗಳನ್ನು ತೆಗೆದು ಅವನನ್ನು ಹಾಸಿಗೆಯ ಸಹಿತ ನಡುವೆ ಯೇಸುವಿನ ಮುಂದೆ ಇಳಿಯಬಿಟ್ಟರು.ಯೇಸು ಅವರ ನಂಬಿಕೆಯನ್ನು ನೋಡಿ ಪಾರ್ಶ್ವವಾಯುರೋಗಿಗೆ - ಮಗನೇ, ಧೈರ್ಯವಾಗಿರು, ನಿನ್ನ ಪಾಪಗಳು ಕ್ಷವಿುಸಲ್ಪಟ್ಟಿವೆ ಎಂದು ಹೇಳಿದನು.ಆದರೆ ಶಾಸ್ತ್ರಿಗಳಲ್ಲಿ ಕೆಲವರು ಅಲ್ಲಿ ಕೂತುಕೊಂಡಿದ್ದು - ಇವನು ಯಾಕೆ ಹೀಗೆ ಮಾತನಾಡುತ್ತಾನೆ? ಇದು ದೇವದೂಷಣೆ. ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷವಿುಸಬಲ್ಲರು? ಎಂದು ತಮ್ಮ ತಮ್ಮ ಮನಸ್ಸಿನಲ್ಲಿ ಅಂದುಕೊಂಡರು.ಹೀಗೆ ಅಂದುಕೊಳ್ಳುವದನ್ನು ಕೂಡಲೆ ಯೇಸು ತನ್ನ ಆತ್ಮದಲ್ಲಿ ತಿಳಿದುಕೊಂಡು ಅವರಿಗೆ - ನೀವು ನಿಮ್ಮ ಮನಸ್ಸಿನಲ್ಲಿ ಯಾಕೆ ಹೀಗೆ ಅಂದುಕೊಳ್ಳುತ್ತೀರಿ? ಯಾವದು ಸುಲಭ? ನಿನ್ನ ಪಾಪಗಳು ಕ್ಷವಿುಸಲ್ಪಟ್ಟಿವೆ ಅನ್ನುವದೋ? ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಅನ್ನುವದೋ? ಆದರೆ ಪಾಪಗಳನ್ನು ಕ್ಷವಿುಸಿಬಿಡುವದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬದು ನಿಮಗೆ ತಿಳಿಯಬೇಕು ಎಂದು ಹೇಳಿ ಪಾರ್ಶ್ವವಾಯುರೋಗಿಯನ್ನು ನೋಡಿ - ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗೆಂದು ನಿನಗೆ ಹೇಳುತ್ತೇನೆ ಅಂದನು. ಅವನು ಎದ್ದು ಕೂಡಲೆ ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟು ಹೋದನು. ಅದಕ್ಕೆ ಎಲ್ಲರು ಬೆರಗಾಗಿ - ಇದುವರೆಗೆ ನಾವು ಇಂಥದನ್ನು ಎಂದಿಗೂ ನೋಡಿದ್ದೇ ಇಲ್ಲವೆಂದು ಹೇಳುತ್ತಾ ದೇವರನ್ನು ಕೊಂಡಾಡಿದರು. ಯೇಸು ಭ್ರಷ್ಟರ ಕೂಡ ಊಟಮಾಡಿದ್ದಕ್ಕೆ ಶಾಸ್ತ್ರಿಗಳು ಆತನ ಮೇಲೆ ಆಕ್ಷೇಪಣೆ ಮಾಡಿದ್ದು.
ಆತನು ಹೊರಟು ತಿರಿಗಿ ಸಮುದ್ರದ ಬಳಿಗೆ ಹೋದನು. ಜನರ ಗುಂಪೆಲ್ಲಾ ಆತನ ಬಳಿಗೆ ಬಂದಾಗ ಆತನು ಅವರಿಗೆ ಉಪದೇಶಮಾಡಿದನು. ಇದಾದ ಮೇಲೆ ಆತನು ಹೊರಟು ಸುಂಕಕ್ಕೆ ಕೂತಿದ್ದ ಲೇವಿಯೆಂಬ ಒಬ್ಬ ಸುಂಕದವನನ್ನು ಕಂಡು - ನನ್ನನ್ನು ಹಿಂಬಾಲಿಸು ಎಂದು ಅವನನ್ನು ಕರೆಯಲು ಅವನು ಎಲ್ಲವನ್ನೂ ಬಿಟ್ಟು ಎದ್ದು ಆತನ ಹಿಂದೆ ಹೋದನು. ತರುವಾಯ ಲೇವಿಯು ತನ್ನ ಮನೆಯಲ್ಲಿ ಆತನಿಗೆ ಒಂದು ದೊಡ್ಡ ಔತಣವನ್ನು ಮಾಡಿಸಲು ಸುಂಕದವರೂ ಇತರರೂ ಗುಂಪಾಗಿ ಕೂಡಿ ಅವರ ಸಂಗಡ ಊಟಕ್ಕೆ ಕೂತುಕೊಂಡಿದ್ದರು. ಅದನ್ನು ಕಂಡು ಫರಿಸಾಯರೂ ಅವರಲ್ಲಿದ್ದ ಶಾಸ್ತ್ರಿಗಳೂ ಆತನ ಶಿಷ್ಯರ ಮೇಲೆ ಗುಣುಗುಟ್ಟುತ್ತಾ - ನೀವು ಸುಂಕದವರ ಮತ್ತು ಪಾಪಿಗಳ ಸಂಗಡ ಊಟ ಮಾಡುವದೇಕೆ ಎಂದು ಕೇಳಿದರು. ಅದಕ್ಕೆ ಯೇಸು - ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು; ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ನೀತಿವಂತರನ್ನು ಕರೆಯುವದಕ್ಕೆ ನಾನು ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು ಎಂದು ಅವರಿಗೆ ಉತ್ತರಕೊಟ್ಟನು.
ಅವರು ಆತನಿಗೆ - ಯೋಹಾನನ ಶಿಷ್ಯರು ಪದೇಪದೇ ಉಪವಾಸಗಳನ್ನೂ ವಿಜ್ಞಾಪನೆಗಳನ್ನೂ ಮಾಡುತ್ತಾ ಇದ್ದಾರೆ; ಅದರಂತೆ ಫರಿಸಾಯರ ಶಿಷ್ಯರೂ ಮಾಡುತ್ತಾರೆ; ಆದರೆ ನಿನ್ನ ಶಿಷ್ಯರು ಊಟಮಾಡುತ್ತಾರೆ, ಕುಡಿಯುತ್ತಾರೆ ಎಂದು ಹೇಳಲು ಯೇಸು ಅವರಿಗೆ - ಮದಲಿಂಗನು ಮದುವೇಜನರ ಸಂಗಡ ಇರುವಲ್ಲಿ ಅವರಿಗೆ ಉಪವಾಸಮಾಡಿಸುವದಕ್ಕೆ ನಿಮ್ಮಿಂದಾದೀತೇ? ಆದರೆ ಮದಲಿಂಗನನ್ನು ಅವರ ಬಳಿಯಿಂದ ತೆಗೆದುಕೊಂಡುಹೋಗುವ ಕಾಲ ಬರುತ್ತದೆ. ಆ ಕಾಲದಲ್ಲೇ ಉಪವಾಸ ಮಾಡುವರು ಎಂದು ಉತ್ತರಕೊಟ್ಟನು. ಅವರಿಗೆ ಒಂದು ಸಾಮ್ಯವನ್ನು ಸಹ ಹೇಳಿದನು, ಅದೇನಂದರೆ - ಯಾರೂ ಹೊಸ ವಸ್ತ್ರದಿಂದ ಒಂದು ತುಂಡನ್ನು ಹರಕೊಂಡು ಹಳೇ ವಸ್ತ್ರಕ್ಕೆ ತ್ಯಾಪೆ ಹಚ್ಚುವದಿಲ್ಲ; ಹಚ್ಚಿದರೆ ಆ ಹೊಸದನ್ನು ಹರಿದು ಕೆಡಿಸಿದ ಹಾಗಾಗುವದಲ್ಲದೆ ಹೊಸದರಿಂದ ಹರಿದು ಹಚ್ಚಿದ ತ್ಯಾಪೆಯು ಹಳೇದಕ್ಕೆ ಒಪ್ಪುವದೂ ಇಲ್ಲ.
ಇದಲ್ಲದೆ ಹಳೆಯ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಹಾಕಿಡುವದಿಲ್ಲ; ಇಟ್ಟರೆ ಬುದ್ದಲಿಗಳು ಒಡೆದು ದ್ರಾಕ್ಷಾರಸವು ಚೆಲ್ಲಿಹೋಗುವದು, ಬುದ್ದಲಿಗಳು ಕೆಟ್ಟುಹೋಗುವವು; ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡುತ್ತಾರೆ, ಆಗ ಎರಡೂ ಉಳಿಯುತ್ತವೆ ಎಂದು ಹೇಳಿದನು.ಇದಲ್ಲದೆ ಹಳೇ ದ್ರಾಕ್ಷಾರಸವನ್ನು ಕುಡಿದವನು ಹೊಸದು ಬೇಕು ಅನ್ನುವದಿಲ್ಲ; ಹಳೇದೇ ಉತ್ತಮ ಅನ್ನುವನು.
ಅಧ್ಯಾಯ 16
ಆ ಕಾಲದಲ್ಲಿ ಯೇಸು ಸಬ್ಬತ್ ದಿನದಲ್ಲಿ ಪೈರಿನ ಹೊಲಗಳನ್ನು ಹಾದುಹೋಗುತ್ತಿರುವಾಗ ಆತನ ಶಿಷ್ಯರು ಹಸಿದು ತೆನೆಗಳನ್ನು ಮುರುಕೊಂಡು ತಿನ್ನುತ್ತಿದ್ದರು. ಫರಿಸಾಯರು ಅದನ್ನು ಕಂಡು - ನೋಡು, ನಿನ್ನ ಶಿಷ್ಯರು ಸಬ್ಬತ್ದಿನದಲ್ಲಿ ಮಾಡಬಾರದ ಕೆಲಸವನ್ನು ಮಾಡುತ್ತಾರೆ ಎಂದು ಆತನಿಗೆ ಹೇಳಿದರು. ಆತನು ಅವರಿಗೆ - ದಾವೀದನು ತಾನೂ ತನ್ನ ಸಂಗಡ ಇದ್ದವರೂ ಹಸಿದಾಗ ಏನು ಮಾಡಿದನೆಂಬದನ್ನು ನೀವು ಓದಲಿಲ್ಲವೋ? ಅವನು ದೇವರ ಮಂದಿರದೊಳಕ್ಕೆ ಹೋಗಿ ಯಾಜಕರು ಮಾತ್ರವೇ ಹೊರತು ತಾನಾಗಲಿ ತನ್ನ ಸಂಗಡ ಇದ್ದವರಾಗಲಿ ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನು ತಿಂದನಲ್ಲವೇ. ಇದಲ್ಲದೆ ಸಬ್ಬತ್ ದಿನದಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನವನ್ನು ವಿುಕ್ಕಾದ ದಿನಗಳಂತೆ ಮಾಡಿದಾಗ್ಯೂ ಅವರು ತಪ್ಪಿಗೆ ಗುರಿಯಾಗುವದಿಲ್ಲ. ಇದನ್ನು ನೀವು ಧರ್ಮಶಾಸ್ತ್ರದಲ್ಲಿ ಓದಲಿಲ್ಲವೋ? ಆದರೆ ಇಲ್ಲಿ ದೇವಾಲಯಕ್ಕಿಂತ ಹೆಚ್ಚಿನವನು ಇದ್ದಾನೆಂದು ನಿಮಗೆ ಹೇಳುತ್ತೇನೆ. ನನಗೆ ಯಜ್ಞವು ಬೇಡ, ಕರುಣೆಯೇಬೇಕು ಎಂಬದರ ಅರ್ಥವನ್ನು ನೀವು ತಿಳಿದಿದ್ದರೆ ನಿರಪರಾಧಿಗಳನ್ನು ಅಪರಾಧಿಗಳೆಂದು ತೀರ್ಪು ಮಾಡುತ್ತಿದ್ದಿಲ್ಲ.ಮತ್ತು ಆತನು - ಸಬ್ಬತ್ದಿನವು ಮನುಷ್ಯರಿಗೋಸ್ಕರ ಉಂಟಾಯಿತೇ ಹೊರತು ಮನುಷ್ಯರು ಸಬ್ಬತ್ ದಿನಕ್ಕೋಸ್ಕರ ಉಂಟಾಗಲಿಲ್ಲ; ಹೀಗಿರಲಾಗಿ ಮನುಷ್ಯಕುಮಾರನು ಸಬ್ಬತ್ದಿನಕ್ಕೂ ಒಡೆಯನಾಗಿದ್ದಾನೆ ಅಂದನು.
ಮತ್ತೊಂದು ಸಬ್ಬತ್ದಿನದಲ್ಲಿ ಆತನು ಸಭಾಮಂದಿರಕ್ಕೆ ಹೋಗಿ ಉಪದೇಶಮಾಡುತ್ತಿದ್ದಾಗ ಅಲ್ಲಿ ಬಲಗೈ ಬತ್ತಿದವನೊಬ್ಬನು ಇದ್ದನು. ಶಾಸ್ತ್ರಿಗಳೂ ಫರಿಸಾಯರೂ ಆತನ ಮೇಲೆ ತಪ್ಪುಹೊರಿಸುವದಕ್ಕೆ ಆಸ್ಪದ ಸಿಕ್ಕಬೇಕೆಂದು ಸಬ್ಬತ್ದಿನದಲ್ಲಿ ಸ್ವಸ್ಥಮಾಡುವನೋ ಏನೋ ಎಂದು ಆತನನ್ನು ಹೊಂಚಿನೋಡುತ್ತಿದ್ದರು. ಆದರೆ ಆತನು ಅವರ ಯೋಚನೆಗಳನ್ನು ತಿಳಿದು ಕೈ ಬತ್ತಿಹೋಗಿದ್ದ ಆ ಮನುಷ್ಯನಿಗೆ - ಎದ್ದು ನಡುವೆ ಬಂದು ನಿಂತುಕೋ ಎಂದು ಹೇಳಿದನು. ಅವನು ಎದ್ದು ನಿಂತುಕೊಂಡನು.ಆಗ ಅವರು ಆತನ ಮೇಲೆ ತಪ್ಪುಹೊರಿಸಬೇಕೆಂದು ಆತನನ್ನು - ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವದು ಸರಿಯೋ ಎಂದು ಕೇಳಿದರು. ಆಗ ಯೇಸು ಅವರಿಗೆ - ನಿಮ್ಮನ್ನು ಒಂದು ಮಾತು ಕೇಳುತ್ತೇನೆ; ಸಬ್ಬತ್ದಿನದಲ್ಲಿ ಯಾವದನ್ನು ಮಾಡುವದು ನ್ಯಾಯ? ಮೇಲನ್ನು ಮಾಡುವದೋ, ಕೇಡನ್ನು ಮಾಡುವದೋ? ಪ್ರಾಣವನ್ನು ಉಳಿಸುವದೋ, ಹಾಳುಮಾಡುವದೋ ಎಂದು ಹೇಳಿಅದಕ್ಕಾತನು - ನಿಮ್ಮಲ್ಲಿ ಯಾರಿಗಾದರೂ ಒಂದೇ ಒಂದು ಕುರಿ ಇದ್ದು ಅದು ಸಬ್ಬತ್ ದಿನದಲ್ಲಿ ಕುಣಿಯೊಳಗೆ ಬಿದ್ದರೆ ಅವನು ಅದನ್ನು ಹಿಡಿದು ಮೇಲಕ್ಕೆ ತೆಗೆಯದೆ ಇರುವನೇ? ಕುರಿಗಿಂತ ಮನುಷ್ಯನು ಎಷ್ಟೋ ಹೆಚ್ಚು. ಆದಕಾರಣ ಸಬ್ಬತ್ ದಿನದಲ್ಲಿ ಒಳ್ಳೇ ಕೆಲಸ ಮಾಡುವದು ತಕ್ಕದ್ದೇ ಸರಿ ಎಂದು ಉತ್ತರಕೊಟ್ಟುಅವರ ಮನಸ್ಸು ಕಲ್ಲಾಗಿರುವದನ್ನು ಕಂಡು ದುಃಖಪಟ್ಟು ಕೋಪದಿಂದ ಸುತ್ತಲೂ ಅವರನ್ನು ನೋಡಿ ಆ ಮನುಷ್ಯನಿಗೆ - ನಿನ್ನ ಕೈಚಾಚು ಎಂದು ಹೇಳಿದನು. ಅವನು ಚಾಚಿದನು; ಕೈ ವಾಸಿಯಾಯಿತು. ಫರಿಸಾಯರು ಹೊರಕ್ಕೆ ಹೋಗಿ ಕೂಡಲೆ ಹೆರೋದ್ಯರನ್ನು ಕೂಡಿಕೊಂಡು ಇವನನ್ನು ಯಾವ ಉಪಾಯದಿಂದ ಕೊಲ್ಲೋಣ ಎಂದು ಆತನಿಗೆ ವಿರೋಧವಾಗಿ ಆಲೋಚನೆ ಮಾಡಿಕೊಂಡರು.
ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟುಹೋದನು. ಯೇಸುವಿನ ಡಂಭವಿಲ್ಲದ ಸ್ವಭಾವಅನೇಕರು ಆತನ ಹಿಂದೆ ಹೋದರು. ಆತನು ಅವರೆಲ್ಲರನ್ನು ಸ್ವಸ್ಥಮಾಡಿ ತಾನು ಇಂಥವನೆಂಬದಾಗಿ ಯಾರಿಗೂ ಪ್ರಕಟಿಸಬಾರದೆಂದು ಅವರಿಗೆ ಖಂಡಿತವಾಗಿ ಹೇಳಿದನು. ಹೀಗೆ ಯೆಶಾಯನೆಂಬ ಪ್ರವಾದಿಯ ಮುಖಾಂತರ ಹೇಳಿಸಿರುವ ಮಾತು ನೆರವೇರಿತು; ಅದೇನಂದರೆ - ಇಗೋ, ನನ್ನ ಸೇವಕನು; ಈತನನ್ನು ನಾನು ಆರಿಸಿಕೊಂಡೆನು; ಈತನು ನನಗೆ ಇಷ್ಟನು; ನನ್ನ ಪ್ರಾಣಪ್ರಿಯನು. ಈತನಲ್ಲಿ ನನ್ನ ಆತ್ಮವನ್ನು ಇರಿಸುವೆನು; ಈತನು ಅನ್ಯಜನಗಳಿಗೂ ನ್ಯಾಯವಿಧಿಯನ್ನು ಸಾರುವನು. ಈತನು ಜಗಳಾಡುವದಿಲ್ಲ, ಕೂಗಾಡುವದಿಲ್ಲ; ಬೀದಿಗಳಲ್ಲಿ ಈತನ ಧ್ವನಿಯು ಯಾರಿಗೂ ಕೇಳಿಸುವದಿಲ್ಲ. ಜಜ್ಜಿದ ದಂಟನ್ನು ಮುರಿದುಹಾಕದೆಯೂ ಆರಿಹೋಗುತ್ತಿರುವ ದೀಪವನ್ನು ನಂದಿಸದೆಯೂ ನ್ಯಾಯವನ್ನು ದಿಗ್ವಿಜಯಕ್ಕಾಗಿ ಕಳುಹಿಸಿಕೊಡುವನು. ಅನ್ಯಜನರು ಈತನ ಹೆಸರನ್ನು ಕೇಳಿ ನಿರೀಕ್ಷೆಯಿಂದಿರುವರು.ಯೇಸು ತನ್ನ ಶಿಷ್ಯರ ಕೂಡ ಆ ಸ್ಥಳವನ್ನು ಬಿಟ್ಟು ಸಮುದ್ರದ ಬಳಿಗೆ ಹೋದನು. ಗಲಿಲಾಯದಿಂದ ಬಹುಜನರು ಆತನ ಹಿಂದೆ ಹೋದರು. ಇದಲ್ಲದೆ ಆತನು ಇಂಥಿಂಥ ಕೆಲಸಗಳನ್ನು ಮಾಡುತ್ತಾನೆಂದು ಕೇಳಿ ಬಹುಜನರು ಯೂದಾಯದಿಂದಲೂ ಯೆರೂಸಲೇವಿುನಿಂದಲೂ ಇದೂಮಾಯದಿಂದಲೂ ಯೊರ್ದನ್ ಹೊಳೆಯ ಆಚೆಯಿಂದಲೂ ತೂರ್ ಸೀದೋನ್ ಪಟ್ಟಣಗಳ ಸುತ್ತಲಿನಿಂದಲೂ ಆತನ ಬಳಿಗೆ ಬಂದರು. ಜನರು ಗುಂಪಾಗಿದ್ದದರಿಂದ ಮೈಮೇಲೆ ಬಿದ್ದು ನೂಕಾರೆಂದು ಆತನು ತನಗೆ ಒಂದು ದೋಣಿಯು ಸಿದ್ಧವಾಗಿರಲಿ ಎಂಬದಾಗಿ ಶಿಷ್ಯರಿಗೆ ಹೇಳಿದನು. ಯಾಕಂದರೆ ಆತನು ಅನೇಕರನ್ನು ಸ್ವಸ್ಥಮಾಡಿದ್ದದರಿಂದ ರೋಗಪೀಡಿತರಾಗಿದ್ದವರೆಲ್ಲರೂ ಆತನನ್ನು ಮುಟ್ಟಬೇಕೆಂದು ಮೇಲೆ ಬೀಳುತ್ತಿದ್ದರು. ಮತ್ತು ದೆವ್ವಗಳು ಆತನನ್ನು ಕಂಡಾಗೆಲ್ಲಾ ಆತನ ಪಾದಕ್ಕೆ ಬಿದ್ದು - ನೀನು ದೇವಕುಮಾರನೆಂದು ಕೂಗುತ್ತಿದ್ದವು. ಆದರೆ ಆತನು ತಾನು ಇಂಥವನೆಂಬದಾಗಿ ಯಾರಿಗೂ ಪ್ರಕಟಿಸಬಾರದೆಂದು ಅವರಿಗೆ ಬಹು ಖಂಡಿತವಾಗಿ ಹೇಳಿದನು.
ಅಧ್ಯಾಯ 17
ಆ ದಿವಸಗಳಲ್ಲಿ ಆತನು ಪ್ರಾರ್ಥನೆ ಮಾಡುವದಕ್ಕಾಗಿ ಬೆಟ್ಟಕ್ಕೆ ಹೋಗಿ ರಾತ್ರಿಯನ್ನೆಲ್ಲಾ ಪ್ರಾರ್ಥನೆಯಲ್ಲೇ ಕಳೆದನು. ಬೆಳಗಾದ ಮೇಲೆ ಆತನು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು ಅವರಿಗೆ ಅಪೊಸ್ತಲರೆಂತ ಹೆಸರಿಟ್ಟನು.ಆತನು ಹನ್ನೆರಡು ಮಂದಿಯನ್ನು ಆರಿಸಿ ಅವರು ತನ್ನ ಸಂಗಡ ಇರಬೇಕೆಂತಲೂ ದೆವ್ವಗಳನ್ನು ಬಿಡಿಸುವ ಅಧಿಕಾರವುಳ್ಳವರಾಗಿ ಸುವಾರ್ತೆಯನ್ನು ಸಾರುವದಕ್ಕೆ ತಾನು ಅವರನ್ನು ಕಳುಹಿಸುವೆನೆಂತಲೂ ಆ ಹನ್ನೆರಡು ಮಂದಿಯನ್ನು ಆರಿಸಿ ನೇವಿುಸಿದನು.ಆತನು ಕಳುಹಿಸಿಕೊಟ್ಟ ಅಪೊಸ್ತಲರೆಂಬ ಹನ್ನೆರಡು ಮಂದಿಯ ಹೆಸರುಗಳು ಯಾವವಂದರೆ - ಮೊದಲನೆಯವನು ಪೇತ್ರನೆನಿಸಿಕೊಳ್ಳುವ ಸೀಮೋನ, ಅವನ ತಮ್ಮನಾದ ಅಂದ್ರೆಯ, ಜೆಬೆದಾಯನ ಮಗನಾದ ಯಾಕೋಬ, ಅವನ ತಮ್ಮನಾದ ಯೋಹಾನ, ಫಿಲಿಪ್ಪ, ಬಾರ್ತೊಲೊಮಾಯ, ತೋಮ, ಸುಂಕದ ಮತ್ತಾಯ, ಅಲ್ಫಾಯನ ಮಗನಾದ ಯಾಕೋಬ, ತದ್ದಾಯ, ಮತಾಭಿಮಾನಿ ಎಂದು ಹೆಸರುಗೊಂಡ ಸೀಮೋನ, ಯೇಸುವನ್ನು ಹಿಡಿದುಕೊಟ್ಟ ಇಸ್ಕರಿಯೋತ ಯೂದ, ಇವುಗಳೇ.
ಯೇಸು ಕಪೆರ್ನೌವಿುಗೆ ಬಂದನು. ಅಲ್ಲಿ ದಂಡಿನ ಶತಾಧಿಪತಿಗೆ ಇಷ್ಟನಾದ ಒಬ್ಬ ಆಳು ಕ್ಷೇಮವಿಲ್ಲದೆ ಸಾಯುವ ಹಾಗಿದ್ದನು. ಅವನು ಯೇಸುವಿನ ಸುದ್ದಿಯನ್ನು ಕೇಳಿ ಆತನ ಬಳಿಗೆ - ನೀನು ಬಂದು ನನ್ನ ಆಳನ್ನು ಸ್ವಸ್ಥಮಾಡಬೇಕೆಂದು ಆತನನ್ನು ಬೇಡಿಕೊಳ್ಳುವ ಹಾಗೆ ಯೆಹೂದ್ಯರ ಹಿರಿಯರನ್ನು ಕಳುಹಿಸಿದನು. ಅವರು ಯೇಸುವಿನ ಬಳಿಗೆ ಬಂದು - ನಿನ್ನಿಂದ ಇಂಥ ಉಪಕಾರ ಹೊಂದುವದಕ್ಕೆ ಅವನು ಯೋಗ್ಯನು; ಅವನು ನಮ್ಮ ಜನರನ್ನು ಪ್ರೀತಿಸುವವನು, ತಾನೇ ನಮ್ಮ ಸಭಾಮಂದಿರವನ್ನು ನಮಗಾಗಿ ಕಟ್ಟಿಸಿದನು ಎಂದು ಆತನನ್ನು ಬಹಳವಾಗಿ ಬೇಡಿಕೊಳ್ಳಲು
ಯೇಸು ಅವರ ಸಂಗಡ ಹೋದನು. ಆತನು ಇನ್ನೂ ಮನೆಗೆ ಮುಟ್ಟುವದಕ್ಕೆ ಸ್ವಲ್ಪ ದೂರವಿರುವಾಗಲೇ ಶತಾಧಿಪತಿಯು ಸ್ನೇಹಿತರನ್ನು ಆತನ ಬಳಿಗೆ ಕಳುಹಿಸಿ - ಪ್ರಭುವೇ, ತೊಂದರೆ ತೆಗೆದುಕೊಳ್ಳಬೇಡ; ನೀನು ನನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆ ನನ್ನಲ್ಲಿಲ್ಲ. ಈ ಕಾರಣದಿಂದ ನಾನು ನನ್ನನ್ನು ನಿನ್ನ ಬಳಿಗೆ ಬರುವದಕ್ಕೆ ತಕ್ಕವನೆಂದು ಎಣಿಸಿಕೊಳ್ಳಲಿಲ್ಲ. ಆದರೆ ನೀನು ಒಂದು ಮಾತು ಹೇಳು, ನನ್ನ ಆಳಿಗೆ ಗುಣವಾಗುವದು. ನಾನು ಸಹ ಮತ್ತೊಬ್ಬರ ಕೈಕೆಳಗಿರುವವನು; ನನ್ನ ಕೈಕೆಳಗೆ ಸಿಪಾಯಿಗಳಿದ್ದಾರೆ; ನಾನು ಅವರಲ್ಲಿ ಒಬ್ಬನಿಗೆ ಹೋಗು ಎಂದು ಹೇಳಿದರೆ ಹೋಗುತ್ತಾನೆ; ಮತ್ತೊಬ್ಬನಿಗೆ ಬಾ ಎಂದು ಹೇಳಿದರೆ ಬರುತ್ತಾನೆ; ನನ್ನ ಆಳಿಗೆ ಇಂಥಿಂಥದನ್ನು ಮಾಡು ಎಂದು ಹೇಳಿದರೆ ಮಾಡುತ್ತಾನೆ ಎಂಬದಾಗಿ ಹೇಳಿಸಿದನು. ಯೇಸು ಈ ಮಾತನ್ನು ಕೇಳಿ ಅವನ ವಿಷಯದಲ್ಲಿ ಆಶ್ಚರ್ಯಪಟ್ಟು ತನ್ನ ಹಿಂದೆ ಬರುತ್ತಿರುವ ಗುಂಪನ್ನು ಹಿಂತಿರುಗಿ ನೋಡಿ - ನಾನು ಇಂಥ ದೊಡ್ಡ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲವೆಂದು ನಿಮಗೆ ಹೇಳುತ್ತೇನೆ ಅಂದನು. ಇದಲ್ಲದೆ ನಿಮಗೆ ಹೇಳುವದೇನಂದರೆ ಮೂಡಣ ಪಡುವಣ ದಿಕ್ಕುಗಳಿಂದ ಬಹಳ ಜನ ಬಂದು ಪರಲೋಕ ರಾಜ್ಯದಲ್ಲಿ ಅಬ್ರಹಾಮ್ ಇಸಾಕ್ ಯಾಕೋಬ್ ಎಂಬವರ ಸಂಗಡ ಊಟಕ್ಕೆ ಕೂಡ್ರುವರು; ಆದರೆ ಆ ರಾಜ್ಯದ ಬಾಧ್ಯಸ್ಥರು ಹೊರಗೆ ಕತ್ತಲೆಗೆ ಹಾಕಲ್ಪಡುವರು; ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು ಎಂದು ಹೇಳಿದನು.ಅದೇ ಗಳಿಗೆಯಲ್ಲಿ ಅವನ ಆಳಿಗೆ ಗುಣವಾಯಿತು.ತರುವಾಯ ಆ ಶತಾಧಿಪತಿಯ ಕಡೆಯಿಂದ ಬಂದವರು ತಿರಿಗಿ ಮನೆಗೆ ಹೋಗಿ ಆಳು ಆರೋಗ್ಯವಾಗಿರುವದನ್ನು ಕಂಡರು.
ಸ್ವಲ್ಪಕಾಲದ ಮೇಲೆ ಆತನು ನಾಯಿನೆಂಬ ಊರಿಗೆ ಹೋದನು. ಆತನ ಜೊತೆಯಲ್ಲಿ ಆತನ ಶಿಷ್ಯರೂ ಇನ್ನೂ ಅನೇಕ ಜನರೂ ಹೋಗುತ್ತಿದ್ದರು. ಆತನು ಊರಬಾಗಿಲಿನ ಹತ್ತಿರಕ್ಕೆ ಬಂದಾಗ ಸತ್ತುಹೋಗಿದ್ದ ಒಬ್ಬನನ್ನು ಹೊರಗೆ ತರುತ್ತಿದ್ದರು. ಇವನು ತನ್ನ ತಾಯಿಗೆ ಒಬ್ಬನೇ ಮಗನು; ಆಕೆಯು ಗಂಡಸತ್ತವಳಾಗಿದ್ದಳು. ಆಕೆಯ ಸಂಗಡ ಗ್ರಾಮಸ್ಥರು ಅನೇಕರಿದ್ದರು. ಸ್ವಾವಿುಯು ಆಕೆಯನ್ನು ಕಂಡು ಕನಿಕರಿಸಿ - ಅಳಬೇಡ ಎಂದು ಆಕೆಗೆ ಹೇಳಿ ಚಟ್ಟದ ಹತ್ತಿರಕ್ಕೆ ಹೋಗಿ ಅದನ್ನು ಮುಟ್ಟಲು ಹೊತ್ತುಕೊಂಡವರು ನಿಂತರು. ಆಗ ಆತನು - ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ ಅಂದನು. ಅನ್ನುತ್ತಲೇ ಸತ್ತಿದ್ದವನು ಎದ್ದು ಕೂತುಕೊಂಡು ಮಾತಾಡುವದಕ್ಕೆ ತೊಡಗಿದನು. ಯೇಸು ಅವನನ್ನು ಅವನ ತಾಯಿಗೆ ಕೊಟ್ಟನು. ಎಲ್ಲರು ಭಯಹಿಡಿದವರಾಗಿ - ಮಹಾ ಪ್ರವಾದಿಯು ನಮ್ಮಲ್ಲಿ ಎದ್ದಿದ್ದಾನೆ, ದೇವರು ತನ್ನ ಜನರಿಗೆ ದರ್ಶನವನ್ನು ಅನುಗ್ರಹಿಸಿದ್ದಾನೆ ಎಂದು ದೇವರನ್ನು ಕೊಂಡಾಡುವವರಾದರು. ಈ ವಾರ್ತೆಯು ಯೂದಾಯದಲ್ಲಿಯೂ ಸುತ್ತಲಿರುವ ಎಲ್ಲಾ ಪ್ರಾಂತ್ಯದಲ್ಲಿಯೂ ಹಬ್ಬಿತು.
ಫರಿಸಾಯರಲ್ಲಿ ಒಬ್ಬನು ಆತನನ್ನು ತನ್ನ ಜೊತೆಯಲ್ಲಿ ಊಟಮಾಡಬೇಕೆಂದು ಬೇಡಿಕೊಂಡಾಗ ಆತನು ಆ ಫರಿಸಾಯನ ಮನೆಗೆ ಹೋಗಿ ಊಟಕ್ಕೆ ಒರಗಿಕೊಂಡನು. ಆಗ ಆ ಊರಲ್ಲಿದ್ದ ದುರಾಚಾರಿಯಾದ ಒಬ್ಬ ಹೆಂಗಸು ಫರಿಸಾಯನ ಮನೆಯಲ್ಲಿ ಆತನು ಊಟಕ್ಕೆ ಒರಗಿದ್ದಾನೆಂದು ಗೊತ್ತುಹಿಡುಕೊಂಡು ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು ಹಿಂದೆ ಆತನ ಪಾದಗಳ ಬಳಿಯಲ್ಲಿ ನಿಂತುಕೊಂಡು ಅಳುತ್ತಾ ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ತ್ಯಾವಮಾಡಿ ತನ್ನ ತಲೇಕೂದಲಿನಿಂದ ಒರಸಿ ಅವುಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು. ಆದರೆ ಆತನನ್ನು ಊಟಕ್ಕೆ ಕರೆದ ಫರಿಸಾಯನು ಇದನ್ನು ಕಂಡು - ಇವಳು ದುರಾಚಾರಿ; ಇವನು ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟಿದ ಈ ಹೆಂಗಸು ಇಂಥವಳೆಂದು ತಿಳುಕೊಳ್ಳುತ್ತಿದ್ದನು ಅಂದುಕೊಂಡನು. ಅದಕ್ಕೆ ಯೇಸು - ಸೀಮೋನನೇ, ನಾನು ನಿನಗೆ ಹೇಳಬೇಕಾದ ಒಂದು ಮಾತದೆ ಅಂದಾಗ ಅವನು - ಬೋಧಕನೇ, ಹೇಳು ಅಂದನು. ಆಗ ಯೇಸು - ಒಬ್ಬ ಸಾಹುಕಾರನಿಗೆ ಇಬ್ಬರು ಸಾಲಗಾರರಿದ್ದರು; ಒಬ್ಬನು ಐನೂರು ಹಣ ಕೊಡಬೇಕಾಗಿತ್ತು. ಮತ್ತೊಬ್ಬನು ಐವತ್ತು ಹಣ ಕೊಡಬೇಕಾಗಿತ್ತು. ತೀರಿಸುವದಕ್ಕೆ ಅವರಿಗೆ ಗತಿಯಿಲ್ಲದ್ದರಿಂದ ಆ ಇಬ್ಬರಿಗೂ ಸಾಲವನ್ನು ಬಿಟ್ಟುಬಿಟ್ಟನು. ಹಾಗಾದರೆ ಅವರಲ್ಲಿ ಯಾವನು ಆ ಸಾಹುಕಾರನನ್ನು ಹೆಚ್ಚಾಗಿ ಪ್ರೀತಿಸಾನು ಎಂದು ಕೇಳಿದ್ದಕ್ಕೆ ಸೀಮೋನನು - ಯಾವನಿಗೆ ಹೆಚ್ಚಾಗಿ ಬಿಟ್ಟನೋ ಅವನೇ ಎಂದು ಭಾವಿಸುತ್ತೇನೆ ಅಂದನು. ಯೇಸು ಅವನಿಗೆ - ನೀನು ಸರಿಯಾಗಿ ತೀರ್ಪುಮಾಡಿದಿ ಎಂದು ಹೇಳಿ ಆ ಹೆಂಗಸಿನ ಕಡೆಗೆ ತಿರುಗಿಕೊಂಡು ಸೀಮೋನನಿಗೆ ಹೇಳಿದ್ದೇನಂದರೆ - ಈ ಹೆಂಗಸನ್ನು ನೋಡಿದಿಯಾ? ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ; ಇವಳಾದರೋ ನನ್ನ ಕಾಲುಗಳನ್ನು ಕಣ್ಣೀರಿನಿಂದ ತ್ಯಾವಮಾಡಿ ತನ್ನ ತಲೆಯಕೂದಲಿನಿಂದ ಒರಸಿದಳು. ನೀನು ನನಗೆ ಮುದ್ದಿಡಲಿಲ್ಲ; ಇವಳಾದರೋ ನಾನು ಒಳಗೆ ಬಂದಾಗಿನಿಂದ ನನ್ನ ಕಾಲಿಗೆ ಮುದ್ದಿಡುವದನ್ನು ಬಿಟ್ಟಿಲ್ಲ. ನೀನು ನನ್ನ ತಲೆಗೆ ಎಣ್ಣೆ ಹಚ್ಚಲಿಲ್ಲ; ಇವಳಾದರೋ ಸುಗಂಧತೈಲವನ್ನು ಕಾಲಿಗೆ ಹಚ್ಚಿದಳು. ಹೀಗಿರಲು ನಾನು ಹೇಳುವ ಮಾತೇನಂದರೆ - ಇವಳ ಪಾಪಗಳು ಬಹಳವಾಗಿದ್ದರೂ ಅವು ಕ್ಷವಿುಸಲ್ಪಟ್ಟಿವೆ. ಇದಕ್ಕೆ ಪ್ರಮಾಣವೇನಂದರೆ ಇವಳು ತೋರಿಸಿದ ಪ್ರೀತಿ ಬಹಳ. ಆದರೆ ಯಾವನಿಗೆ ಸ್ವಲ್ಪ ಮಾತ್ರ ಕ್ಷವಿುಸಲ್ಪಟ್ಟಿದೆಯೋ ಅವನು ತೋರಿಸುವ ಪ್ರೀತಿಯು ಸ್ವಲ್ಪವೇ ಅಂದನು. ಆಮೇಲೆ ಆತನು ಅವಳಿಗೆ - ನಿನ್ನ ಪಾಪಗಳು ಕ್ಷವಿುಸಲ್ಪಟ್ಟಿವೆ ಎಂದು ಹೇಳಿದನು. ಆತನ ಸಂಗಡ ಊಟಕ್ಕೆ ಒರಗಿಕೊಂಡವರು - ಪಾಪಗಳನ್ನು ಸಹ ಕ್ಷವಿುಸಿಬಿಡುವವನು ಇವನಾರು ಎಂದು ತಮ್ಮತಮ್ಮೊಳಗೆ ಅಂದುಕೊಂಡರು. ಆದರೆ ಆತನು ಆ ಹೆಂಗಸಿಗೆ - ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿ ಅದೆ; ಸಮಾಧಾನದಿಂದ ಹೋಗು ಎಂದು ಹೇಳಿದನು.
ಅಧ್ಯಾಯ 18
ತರುವಾಯ ಆತನು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರುಗಳಲ್ಲಿಯೂ ಗ್ರಾಮಗಳಲ್ಲಿಯೂ ಸಂಚರಿಸಿದನು. ಆತನ ಸಂಗಡ ಹನ್ನೆರಡು ಮಂದಿ ಶಿಷ್ಯರೂ ಇದ್ದರು. ದೆವ್ವಗಳ ಕಾಟದಿಂದಲೂ ರೋಗಗಳಿಂದಲೂ ಗುಣಹೊಂದಿದ ಕೆಲವು ಹೆಂಗಸರು ಸಹ ಇದ್ದರು. ಈ ಹೆಂಗಸರು ಯಾರಾರಂದರೆ - ಏಳು ದೆವ್ವಗಳು ಬಿಟ್ಟುಹೋಗಿದ್ದ ಮಗ್ದಲದವಳೆಂಬ ಮರಿಯಳು, ಹೆರೋದನ ಮನೆವಾರ್ತೆಯವನಾದ ಕೂಜನ ಹೆಂಡತಿ ಯೋಹಾನಳು, ಸುಸನ್ನಳು, ಇನ್ನು ಬೇರೆ ಅನೇಕರು. ಇವರು ತಮ್ಮ ಆಸ್ತಿಯಿಂದ ಆತನಿಗೆ ಕೊಟ್ಟು ಉಪಚಾರಮಾಡುತ್ತಿದ್ದರು.
ಆತನು ಮನೆಯೊಳಗೆ ಬಂದಾಗ ಜನರು ತಿರಿಗಿ ನೆರೆದದ್ದರಿಂದ ಊಟಕ್ಕೂ ಅವಕಾಶವಾಗಲಿಲ್ಲ.ದೆವ್ವಹಿಡಿದು ಕುರುಡನೂ ಮೂಕನೂ ಆಗಿರುವ ಒಬ್ಬನನ್ನು ಆತನ ಬಳಿಗೆ ಕರತಂದರು; ಆತನು ಅವನನ್ನು ಸ್ವಸ್ಥಮಾಡಲು ಆ ಮೂಕನಿಗೆ ಬಾಯಿ ಕಣ್ಣು ಎರಡೂ ಬಂದವು. ಅದಕ್ಕೆ ಜನರೆಲ್ಲರೂ ಬೆರಗಾಗಿ - ಈತನು ದಾವೀದಕುಮಾರನೇನು ಎಂದು ಮಾತಾಡುತ್ತಿದ್ದರು. ಆದರೆ ಫರಿಸಾಯರು ಅದನ್ನು ಕೇಳಿ - ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೇ ಹೊರತು ಬೇರೆ ರೀತಿಯಿಂದ ಬಿಡಿಸುವದಿಲ್ಲ ಅಂದರು.ಆತನು ಅವರನ್ನು ಹತ್ತಿರಕ್ಕೆ ಕರೆದು ಅವರಿಗೆ ಸಾಮ್ಯರೂಪವಾಗಿ ಹೇಳಿದ್ದೇನಂದರೆ - ಸೈತಾನನು ಸೈತಾನನನ್ನು ಬಿಡಿಸುವದುಂಟೇ? ಒಂದು ರಾಜ್ಯದಲ್ಲಿ ಭೇದಹುಟ್ಟಿದರೆ ಆ ರಾಜ್ಯವು ಉಳಿಯಲಾರದು; ಒಂದು ಮನೆಯಲ್ಲಿ ಭೇದಹುಟ್ಟಿದರೆ ಆ ಮನೆಯು ನಿಲ್ಲಲಾರದು.ತನ್ನಲ್ಲಿ ಭೇದ ಹುಟ್ಟಿದ ಯಾವ ಪಟ್ಟಣವಾದರೂ ಮನೆಯಾದರೂ ನಿಲ್ಲದು. ಅದರಂತೆ ಸೈತಾನನು ಸೈತಾನನನ್ನು ಹೊರಡಿಸಿದರೆ ತನ್ನಲ್ಲಿ ಭೇದ ಹುಟ್ಟಿಸಿಕೊಂಡ ಹಾಗಾಯಿತು. ಹಾಗಾದರೆ ಅವನ ರಾಜ್ಯವು ಹೇಗೆ ಉಳಿದೀತು?
ಬೆಲ್ಜೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುತ್ತಿ ಎಂದು ನನಗೆ ಹೇಳುತ್ತೀರಲ್ಲಾ.ನಾನು ಬೆಲ್ಜೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುವದಾದರೆ ನಿಮ್ಮವರು ಯಾರ ಬಲದಿಂದ ಬಿಡಿಸುತ್ತಾರೆ? ಆದದರಿಂದ ಅವರೇ ನಿಮಗೆ ನ್ಯಾಯತೀರಿಸುವವರಾಗುವರು. ನಾನು ದೇವರ ಬಲದಿಂದಲೇ ದೆವ್ವಗಳನ್ನು ಬಿಡಿಸುವದಾದರೆ ದೇವರ ರಾಜ್ಯವು ನಿಮ್ಮ ಹತ್ತಿರಕ್ಕೆ ಬಂತಲ್ಲಾ.ಅದಲ್ಲದೆ ಒಬ್ಬನು ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ ಆ ಬಲಿಷ್ಠನ ಮನೆಯನ್ನು ಹೊಕ್ಕು ಅವನ ಸೊತ್ತನ್ನು ಸುಲುಕೊಳ್ಳುವದಕ್ಕಾಗುವದಿಲ್ಲ; ಕಟ್ಟಿಹಾಕಿದ ಮೇಲೆ ಅವನ ಮನೆಯನ್ನು ಸುಲುಕೊಂಡಾನು.ನನ್ನ ಪಕ್ಷ ಹಿಡಿಯದವನು ನನಗೆ ವಿರೋಧಿ; ನನ್ನ ಜೊತೆಯಲ್ಲಿ ಒಟ್ಟುಗೂಡಿಸದವನು ಚದರಿಸುವವನಾಗುತ್ತಾನೆ.
ದೆವ್ವವು ಮನುಷ್ಯನನ್ನು ಬಿಟ್ಟುಹೋದ ಮೇಲೆ ವಿಶ್ರಾಂತಿಯನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ತಿರುಗಾಡುತ್ತದೆ. ವಿಶ್ರಾಂತಿ ಸಿಕ್ಕದ ಕಾರಣ ಅದು - ನಾನು ಬಿಟ್ಟು ಬಂದ ನನ್ನ ಮನೆಗೆ ತಿರಿಗಿ ಹೋಗುತ್ತೇನೆ ಅಂದುಕೊಂಡು ಬಂದು ಆ ಮನೆ ಒಕ್ಕಲಿಲ್ಲದ್ದೂ ಗುಡಿಸಿ ಅಲಂಕರಿಸಿದ್ದೂ ಆಗಿರುವದನ್ನು ಕಂಡು ಹೊರಟುಹೋಗಿ ತನಗಿಂತ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ತನ್ನೊಂದಿಗೆ ಕರಕೊಂಡು ಬರುವದು. ಅವು ಒಳಹೊಕ್ಕು ಅಲ್ಲಿ ವಾಸಮಾಡುವವು. ಆಗ ಆ ಮನುಷ್ಯನ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗುವದು. ಇದರಂತೆಯೇ ಈ ಕೆಟ್ಟ ಸಂತತಿಗೆ ಆಗುವದು ಅಂದನು.
ಆದಕಾರಣ ನಿಮಗೆ ಹೇಳುತ್ತೇನೆ, -ಆತನು ಅವರಿಗೆ - ನಿಮಗೆ ಸತ್ಯವಾಗಿ ಹೇಳುತ್ತೇನೆ, ಮನುಷ್ಯರು ಎಷ್ಟು ದೂಷಿಸಿದಾಗ್ಯೂ ಅವರು ಮಾಡುವ ಎಲ್ಲಾ ಪಾಪಗಳಿಗೂ ದೂಷಣೆಗಳಿಗೂ ಕ್ಷಮಾಪಣೆ ಉಂಟಾಗುವದು, ಆದರೆ ಪವಿತ್ರಾತ್ಮನನ್ನು ದೂಷಿಸಿದವನು ಎಂದಿಗೂ ಕ್ಷಮಾಪಣೆ ಹೊಂದನು; ಅವನು ಶಾಶ್ವತ ಪಾಪದೊಳಗೆ ಸೇರಿದವನಾದನು ಎಂದು ಹೇಳಿದನು.
ಯಾವನಾದರೂ ಮನುಷ್ಯಕುಮಾರನಿಗೆ ವಿರೋಧವಾಗಿ ಮಾತಾಡಿದರೆ ಅದು ಅವನಿಗೆ ಕ್ಷವಿುಸಲ್ಪಡುವದು; ಪವಿತ್ರಾತ್ಮನಿಗೆ ವಿರೋಧವಾಗಿ ಮಾತಾಡಿದರೆ ಅವನಿಗೆ ಇಹದಲ್ಲಾಗಲಿ ಪರದಲ್ಲಾಗಲಿ ಕ್ಷವಿುಸಲ್ಪಡುವದಿಲ್ಲ. ಮರ ಒಳ್ಳೇದಂದರೆ ಅದರ ಫಲವೂ ಒಳ್ಳೇದನ್ನಿರಿ. ಮರ ಹುಳುಕು ಅಂದರೆ ಅದರ ಫಲವೂ ಹುಳುಕು ಅನ್ನಿರಿ. ಫಲದಿಂದಲೇ ಮರದ ಗುಣವು ಗೊತ್ತಾಗುವದು. ಸರ್ಪಜಾತಿಯವರೇ, ನೀವು ಕೆಟ್ಟವರಾಗಿರಲಾಗಿ ಒಳ್ಳೆಯ ಮಾತುಗಳನ್ನಾಡುವದಕ್ಕೆ ನಿಮ್ಮಿಂದ ಹೇಗಾದೀತು? ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು. ಒಳ್ಳೆಯವನು ತನ್ನ ಒಳ್ಳೆಯ ಬೊಕ್ಕಸದೊಳಗಿಂದ ಒಳ್ಳೆಯ ವಸ್ತುಗಳನ್ನು ತೆಗೆಯುತ್ತಾನೆ; ಕೆಟ್ಟವನು ಕೆಟ್ಟ ಬೊಕ್ಕಸದೊಳಗಿಂದ ಕೆಟ್ಟ ವಸ್ತುಗಳನ್ನು ತೆಗೆಯುತ್ತಾನೆ. ಇದಲ್ಲದೆ ನಾನು ನಿಮಗೆ ಹೇಳುವದೇನಂದರೆ ಮನುಷ್ಯರು ಸುಮ್ಮನೆ ಆಡುವ ಪ್ರತಿಯೊಂದು ಮಾತಿನ ವಿಷಯವಾಗಿ ನ್ಯಾಯವಿಚಾರಣೆಯ ದಿನದಲ್ಲಿ ಉತ್ತರಕೊಡಬೇಕು. ನಿನ್ನ ಮಾತುಗಳಿಂದಲೇ ನೀತಿವಂತನೆಂದು ತೀರ್ಪು ಹೊಂದುವಿ; ನಿನ್ನ ಮಾತುಗಳಿಂದಲೇ ಅಪರಾಧಿಯೆಂದು ತೀರ್ಪುಹೊಂದುವಿ ಅಂದನು.ಇದಲ್ಲದೆ ಅವರು - ಇವನಿಗೆ ದೆವ್ವ ಹಿಡಿದದೆ ಎಂದು ಹೇಳಿದ್ದರಿಂದ
ಆತನು ಈ ಮಾತುಗಳನ್ನು ಹೇಳುತ್ತಿರುವಾಗ ಜನರಲ್ಲಿ ಒಬ್ಬ ಸ್ತ್ರೀಯು - ನಿನ್ನನ್ನು ಹೊತ್ತ ಗರ್ಭವೂ ನೀನು ಕುಡಿದ ಮೊಲೆಗಳೂ ಧನ್ಯವಾದವುಗಳು ಎಂದು ಕೂಗಿದಳು. ಆತನು - ಹಾಗನ್ನಬೇಡ, ದೇ – ವರ ವಾಕ್ಯವನ್ನು ಕೇಳಿ ಅದಕ್ಕೆ ಸರಿಯಾಗಿ ನಡಕೊಳ್ಳುವವರೇ ಧನ್ಯರು ಅಂದನು.ಆಗ ಶಾಸ್ತ್ರಿಗಳಲ್ಲಿಯೂ ಫರಿಸಾಯರಲ್ಲಿಯೂ ಕೆಲವರು - ಬೋಧಕನೇ, ನಿನ್ನಿಂದಾಗುವ ಒಂದು ಸೂಚಕಕಾರ್ಯವನ್ನು ನೋಡಬೇಕೆಂದು ನಮಗೆ ಅಪೇಕ್ಷೆಯದೆ ಎಂದು ಆತನನ್ನು ಕೇಳಲಾಗಿ ಆತನು ಅವರಿಗೆ ಉತ್ತರಕೊಟ್ಟದ್ದೇನಂದರೆ - ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ನೋಡಬೇಕೆಂದು ಅಪೇಕ್ಷಿಸುತ್ತದೆ. ಆದರೆ ಯೋನನೆಂಬ ಪ್ರವಾದಿಯಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವದೂ ಇದಕ್ಕೆ ಸಿಕ್ಕುವದಿಲ್ಲ. ಅಂದರೆ ಯೋನನು ಹೇಗೆ ಮೂರು ದಿನ ರಾತ್ರಿಹಗಲು ದೊಡ್ಡ ಮೀನಿನ ಹೊಟ್ಟೆಯೊಳಗೆ ಇದ್ದನೋ, ಹಾಗೆಯೇ ಮನುಷ್ಯಕುಮಾರನು ಮೂರು ದಿನ ರಾತ್ರಿಹಗಲು ಭೂಗರ್ಭದೊಳಗೆ ಇರುವನು. ನ್ಯಾಯವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ನಿಂತು ಇವರನ್ನು ಅಪರಾಧಿಗಳೆಂದು ಹೇಳುವರು; ಅವರು ಯೋನನು ಸಾರಿದ ವಾಕ್ಯವನ್ನು ಕೇಳಿ ದೇವರಕಡೆಗೆ ತಿರುಗಿಕೊಂಡರು; ಆದರೆ ಇಲ್ಲಿ ಯೋನನಿಗಿಂತಲೂ ಹೆಚ್ಚಿನವನಿದ್ದಾನೆ. ದಕ್ಷಿಣದೇಶದ ರಾಣಿಯು ನ್ಯಾಯವಿಚಾರಣೆಯಲ್ಲಿ ಈ ಸಂತತಿಯವರೊಂದಿಗೆ ಎದ್ದುನಿಂತು ಇವರನ್ನು ಅಪರಾಧಿಗಳೆಂದು ಹೇಳುವಳು; ಆಕೆಯು ಸೊಲೊಮೋನನ ಜ್ಞಾನವನ್ನು ತಿಳುಕೊಳ್ಳುವದಕ್ಕೆ ಭೂವಿುಯ ಕಟ್ಟಕಡೆಯಿಂದ ಬಂದಳು; ಆದರೆ ಇಲ್ಲಿ ಸೊಲೊಮೋನನಿಗಿಂತಲೂ ಹೆಚ್ಚಿನವನಿದ್ದಾನೆ. ಆತನು ಜನರ ಗುಂಪುಗಳ ಸಂಗಡ ಇನ್ನೂ ಮಾತಾಡುತ್ತಿರುವಾಗ ಆತನ ತಾಯಿಯೂ ಸಹೋದರರೂ ಆತನನ್ನು ಮಾತಾಡಿಸಬೇಕೆಂದು ಹೊರಗೆ ನಿಂತಿದ್ದರು. ಆಗ ಒಬ್ಬನು - ಇಗೋ, ನಿನ್ನ ತಾಯಿಯೂ ನಿನ್ನ ಸಹೋದರರೂ ನಿನ್ನನ್ನು ಮಾತಾಡಿಸಬೇಕೆಂದು ಹೊರಗೆ ನಿಂತಿರುತ್ತಾರೆ ಅಂದನು. ಅದಕ್ಕಾತನು ಆ ಮಾತು ಹೇಳಿದವನಿಗೆ - ನನಗೆ ತಾಯಿ ಯಾರು? ನನಗೆ ಸಹೋದರರು ಯಾರು? ಎಂದು ಹೇಳಿ,ತನ್ನ ಸುತ್ತಲು ಕೂತಿದ್ದವರನ್ನು ನೋಡಿ - ಇಗೋ, ನನ್ನ ತಾಯಿ, ನನ್ನ ತಮ್ಮಂದಿರು. ದೇವರ ಚಿತ್ತದಂತೆ ನಡೆಯುವವನೇ ನನಗೆ ತಮ್ಮನೂ ತಂಗಿಯೂ ತಾಯಿಯೂ ಆಗಬೇಕು ಅಂದನು.ಆತನು ಅವರಿಗೆ - ಯಾರು ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುತ್ತಾರೋ ಅವರೇ ನನಗೆ ತಾಯಿಯೂ ಸಹೋದರರು ಆಗಬೇಕು ಎಂದು ಉತ್ತರಕೊಟ್ಟನು.
ಅಧ್ಯಾಯ 19
ಆತನು ತಿರಿಗಿ ಸಮುದ್ರದ ದಡದಲ್ಲಿ ಉಪದೇಶ ಮಾಡುತ್ತಿದ್ದನು. ಬಹುಜನರು ಆತನ ಬಳಿಗೆ ಕೂಡಿ ಬಂದದ್ದರಿಂದ ಆತನು ಸಮುದ್ರದಲ್ಲಿದ್ದ ದೋಣಿಹತ್ತಿ ಕೂತುಕೊಂಡನು; ಆ ಜನರೆಲ್ಲರು ಸಮುದ್ರದ ಹತ್ತರ ನೆಲದ ಮೇಲೆ ಇದ್ದರು. ಆಗ ಆತನು ಅವರಿಗೆ ಸಾಮ್ಯರೂಪವಾಗಿ ಅನೇಕ ಸಂಗತಿಗಳನ್ನು ಉಪದೇಶ ಮಾಡಿದನು. ಆ ಉಪದೇಶದಲ್ಲಿ ಅವರಿಗೆ ಹೇಳಿದ್ದೇನಂದರೆ -ಕೇಳಿರಿ! ಬಿತ್ತುವವನು ಬಿತ್ತುವದಕ್ಕೆ ಹೊರಟನು. ಬಿತ್ತುವಾಗ ಕೆಲವು ಬೀಜ ದಾರಿಯ ಮಗ್ಗುಲಲ್ಲಿ ಬಿದ್ದವು; ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು. ಬೇರೆ ಕೆಲವು ಬೀಜ ಬಹಳ ಮಣ್ಣಿಲ್ಲದ ಬಂಡೆಯ ನೆಲದಲ್ಲಿ ಬಿದ್ದವು; ಅಲ್ಲಿ ಮಣ್ಣು ತೆಳ್ಳಗಿದ್ದದರಿಂದ ಅವು ಬೇಗ ಮೊಳೆತವು; ಆದರೆ ಬಿಸಿಲೇರಿದಾಗ ಬಾಡಿ ಬೇರಿಲ್ಲದಕಾರಣ ಒಣಗಿಹೋದವು. ಮತ್ತೆ ಕೆಲವು ಬೀಜ ಮುಳ್ಳುಗಿಡಗಳಲ್ಲಿ ಬಿದ್ದವು; ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟದ್ದರಿಂದ ಅವು ಫಲಕೊಡಲಿಲ್ಲ. ಇನ್ನು ಕೆಲವು ಬೀಜ ಒಳ್ಳೆಯ ನೆಲದಲ್ಲಿ ಬಿದ್ದು ಹುಟ್ಟಿ ಬೆಳೆಯುತ್ತಾ ಬಂದು ಒಂದು ಮೂವತ್ತರಷ್ಟು, ಒಂದು ಅರುವತ್ತರಷ್ಟು, ಒಂದು ನೂರರಷ್ಟು ಫಲವನ್ನು ಕೊಟ್ಟವು ಎಂದು ಹೇಳಿ - ಕೇಳುವದಕ್ಕೆ ಕಿವಿಯುಳ್ಳವನು ಕೇಳಲಿ ಅಂದನು.
ತರುವಾಯ ಆತನ ಶಿಷ್ಯರು ಬಂದು - ಯಾಕೆ ಸಾಮ್ಯರೂಪವಾಗಿ ಅವರ ಸಂಗಡ ಮಾತಾಡುತ್ತೀ ಎಂದು ಕೇಳಿದರು.ಆತನು ಅವರಿಗೆ - ದೇವರ ರಾಜ್ಯದ ಗುಟ್ಟು ನಿಮಗೇ ಕೊಟ್ಟಿದೆ; ಹೊರಗಿನವರಿಗೆ ಎಲ್ಲವೂ ಸಾಮ್ಯದ ಮರೆಯಲ್ಲಿವೆ. ಅವರು ಕಣ್ಣಿದ್ದು ನೋಡಿದರೂ ಕಾಣಬಾರದು, ಕಿವಿಯಿದ್ದು ಕೇಳಿದರೂ ತಿಳುಕೊಳ್ಳಬಾರದು, ಹಾಗೆ ಕಂಡು ತಿಳುಕೊಂಡರೆ ಅವರು ದೇವರ ಕಡೆಗೆ ತಿರುಗಿಕೊಂಡು ಪಾಪಕ್ಷಮೆಯನ್ನು ಹೊಂದಾರು ಎಂದೇ ಮರೆಮಾಡಲಾಗಿದೆ.ಯಾಕಂದರೆ ಇದ್ದವನಿಗೆ ಕೊಡಲ್ಪಡುವದು, ಅವನಿಗೆ ಮತ್ತೂ ಹೆಚ್ಚಾಗುವದು; ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವದು.ಯೆಶಾಯನು ಹೇಳಿದ ಪ್ರವಾದನೆಯು ಅವರಲ್ಲಿ ನೆರವೇರುತ್ತದೆ; ಅದೇನಂದರೆ -ನೀವು ಕಿವಿಯಿದ್ದು ಕೇಳಿದರೂ ತಿಳುಕೊಳ್ಳುವದೇ ಇಲ್ಲ; ಕಣ್ಣಿದ್ದು ನೋಡಿದರೂ ಕಾಣುವದೇ ಇಲ್ಲ. ಈ ಜನರ ಹೃದಯವು ಕೊಬ್ಬಿತು; ಇವರ ಕಿವಿ ಮಂದವಾಯಿತು; ಇವರು ಕಣ್ಣು ಮುಚ್ಚಿಕೊಂಡಿದ್ದಾರೆ. ತಾವು ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ ಹೃದಯದಿಂದ ತಿಳಿದು ನನ್ನ ಕಡೆಗೆ ತಿರುಗುಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದಬಾರದೆಂದು ಮಾಡಿಕೊಂಡಿದ್ದಾರೆ ಎಂಬದು. ಆದರೆ ನಿಮ್ಮ ಕಣ್ಣು ಕಾಣುತ್ತವೆ, ನಿಮ್ಮ ಕಿವಿ ಕೇಳುತ್ತವೆ; ಆದದರಿಂದ ನೀವು ಧನ್ಯರು. ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ನೋಡುತ್ತಿರುವ ಕಾರ್ಯಗಳನ್ನು ಬಹು ಮಂದಿ ಪ್ರವಾದಿಗಳೂ ಸತ್ಪುರುಷರೂ ನೋಡಬೇಕೆಂದು ಅಪೇಕ್ಷಿಸಿದರೂ ನೋಡಲಿಲ್ಲ; ನೀವು ಕೇಳುತ್ತಿರುವ ಸಂಗತಿಗಳನ್ನು ಅವರು ಕೇಳಬೇಕೆಂದು ಅಪೇಕ್ಷಿಸಿದರೂ ಕೇಳಲಿಲ್ಲ.
ಆತನ ಶಿಷ್ಯರು - ಈ ಸಾಮ್ಯದ ಅರ್ಥವೇನೆಂದು ಆತನನ್ನು ಕೇಳಿದಾಗ ಆತನು ಈ ಸಾಮ್ಯದ ಅರ್ಥ ನಿಮಗೆ ಗೊತ್ತಾಗಲಿಲ್ಲವೋ? ಹಾಗಾದರೆ ನನ್ನ ಎಲ್ಲಾ ಸಾಮ್ಯಗಳನ್ನು ಹೇಗೆ ತಿಳುಕೊಂಡೀರಿ?ಈ ಸಾಮ್ಯದ ಅರ್ಥವೇನಂದರೆ - ಆ ಬೀಜವೆಂದರೆ ದೇವರ ವಾಕ್ಯ. ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸೈತಾನನು ಬಂದು ಅವರು ನಂಬಿ ರಕ್ಷಣೆ ಹೊಂದಬಾರದೆಂದು ವಾಕ್ಯವನ್ನು ಅವರ ಹೃದಯದಿಂದ ತೆಗೆದು ಬಿಡುತ್ತಾನೆ; ಇವರೇ ದಾರಿಯ ಮಗ್ಗುಲಾಗಿರುವವರು. ಕೆಲವರು ವಾಕ್ಯವನ್ನು ಕೇಳಿದಾಗಲೇ ಅದನ್ನು ಸಂತೋಷದಿಂದ ಅಂಗೀಕರಿಸುತ್ತಾರೆ; ಇವರಿಗೆ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರವೇ ನಂಬಿಕೊಂಡಿದ್ದು ಶೋಧನೆಯ ಕಾಲದಲ್ಲಿ ಬಿದ್ದುಹೋಗುತ್ತಾರೆ; ಇವರೇ ಬಂಡೆಯ ನೆಲವಾಗಿರುವವರು. ಬೇರೆ ಕೆಲವರು ವಾಕ್ಯವನ್ನು ಕೇಳಿದ ಮೇಲೆ ಬರಬರುತ್ತಾ ಈ ಜೀವಮಾನದಲ್ಲಿ ಆಗುವ ಚಿಂತೆ ಐಶ್ವರ್ಯ ಭೋಗಗಳಿಂದ ಅಡಗಿಸಲ್ಪಟ್ಟು ಫಲವನ್ನು ಮಾಗಿಸುವದಿಲ್ಲ; ಇವರೇ ಮುಳ್ಳುಗಿಡಗಳಲ್ಲಿ ಬೀಜ ಬಿದ್ದ ನೆಲವಾಗಿರುವವರು. ಮತ್ತೆ ಕೆಲವರು ವಾಕ್ಯವನ್ನು ಕೇಳಿ ಸುಗುಣವುಳ್ಳ ಒಳ್ಳೆಯ ಹೃದಯದಲ್ಲಿ ಇಟ್ಟುಕೊಂಡು ತಾಳ್ಮೆಯಿಂದ ಫಲವನ್ನು ಕೊಡುತ್ತಾರೆ; ಇವರೇ ಬೀಜ ಬಿದ್ದ ಒಳ್ಳೆಯ ನೆಲವಾಗಿರುವವರು.
ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು; ಅದೇನಂದರೆ - ಪರಲೋಕರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ್ದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ. ಆದರೆ ಜನರು ನಿದ್ರೆಮಾಡುವ ಕಾಲದಲ್ಲಿ ಅವನ ವೈರಿಯು ಬಂದು ಗೋದಿಯ ನಡುವೆ ಹಣಜಿ ಬಿತ್ತಿ ಹೋದನು. ಗೋದಿಯು ಬೆಳೆದು ಫಲಕ್ಕೆ ಬಂದಾಗ ಹಣಜಿ ಸಹ ಕಾಣಬಂತು. ಆಗ ಯಜಮಾನನ ಆಳುಗಳು ಅವನ ಬಳಿಗೆ ಬಂದು - ಅಯ್ಯಾ, ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜ ಬಿತ್ತಿದಿಯಲ್ಲಾ; ಹಣಜಿ ಎಲ್ಲಿಂದ ಬಂತು ಎಂದು ಕೇಳಲು ಅವನು - ಇದು ಒಬ್ಬ ವೈರಿ ಮಾಡಿದ ಕೆಲಸ ಅನ್ನಲಾಗಿ ಆಳುಗಳು ಅವನನ್ನು - ಹಾಗಾದರೆ ನಾವು ಅದನ್ನು ಆರಿಸಿ ತೆಗೆಯೋಣೋ ಎಂದು ಕೇಳಲು ಅವನು - ಬೇಡ; ಹಣಜಿಯನ್ನು ಆರಿಸಿ ತೆಗೆಯುವಾಗ ಅದರ ಸಂಗಡ ಗೋದಿಯನ್ನೆಲ್ಲಾದರೂ ಕಿತ್ತೀರಿ. ಸುಗ್ಗೀಕಾಲದ ತನಕ ಎರಡೂ ಕೂಡ ಬೆಳೆಯಲಿ; ಸುಗ್ಗೀಕಾಲದಲ್ಲಿ ನಾನು ಕೊಯ್ಯುವವರಿಗೆ - ಮೊದಲು ಹಣಜಿಯನ್ನು ಆರಿಸಿತೆಗೆದು ಅದನ್ನು ಸುಡುವದಕ್ಕೆ ಹೊರೆಕಟ್ಟಿಹಾಕಿ, ಗೋದಿಯನ್ನು ನನ್ನ ಕಣಜಕ್ಕೆ ತುಂಬಿರಿ ಎಂದು ಹೇಳುವೆನು ಅಂದನು.
ಆಗ ಯೇಸು ಜನರನ್ನು ಬಿಟ್ಟು ಮನೆಗೆ ಹೋದ ಮೇಲೆ ಆತನ ಶಿಷ್ಯರು ಬಂದು - ಹೊಲದಲ್ಲಿಯ ಹಣಜಿಯ ಸಾಮ್ಯದ ಅರ್ಥವನ್ನು ನಮಗೆ ಹೇಳು ಅಂದರು. ಅದಕ್ಕಾತನು - ಒಳ್ಳೆಯ ಬೀಜವನ್ನು ಬಿತ್ತುವವನಂದರೆ ಮನುಷ್ಯಕುಮಾರನು; ಹೊಲವಂದರೆ ಈ ಲೋಕ; ಒಳ್ಳೆಯ ಬೀಜವಂದರೆ ಪರಲೋಕ ರಾಜ್ಯದವರು; ಹಣಜಿ ಅಂದರೆ ಸೈತಾನನವರು; ಅದನ್ನು ಬಿತ್ತುವ ವೈರಿ ಅಂದರೆ ಸೈತಾನನು; ಸುಗ್ಗೀಕಾಲ ಅಂದರೆ ಯುಗದ ಸಮಾಪ್ತಿ; ಕೊಯ್ಯುವವರು ಅಂದರೆ ದೇವದೂತರು. ಹೀಗಿರಲಾಗಿ ಹೇಗೆ ಹಣಜಿಯನ್ನು ಆರಿಸಿತೆಗೆದು ಸುಟ್ಟುಬಿಡುತ್ತಾರೋ, ಹಾಗೆಯೇ ಯುಗದ ಸಮಾಪ್ತಿಯಲ್ಲಿ ನಡೆಯುವದು. ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು; ಅವರು ಆತನ ರಾಜ್ಯದೊಳಗಿಂದ ಎಲ್ಲಾ ಕಂಟಕರನ್ನೂ ಅಧರ್ಮಿಗಳನ್ನೂ ಕೂಡಿಸಿ ಬೆಂಕೀಕೊಂಡದಲ್ಲಿ ಹಾಕುವರು; ಅಲ್ಲಿ ಗೋಳಾಟವೂ ಕಟಕಟನೆ ಹಲ್ಲುಕಡಿಯೋಣವೂ ಇರುವವು. ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕಿವಿಯುಳ್ಳವನು ಕೇಳಲಿ ಅಂದನು.
ಇನ್ನೂ ಆತನು ಅವರಿಗೆ ಹೇಳಿದ್ದು - ಒಬ್ಬನು ಭೂವಿುಯಲ್ಲಿ ಬೀಜವನ್ನು ಹಾಕಿ ರಾತ್ರಿ ಮಲಗುತ್ತಾ ಹಗಲು ಎದ್ದಿರುತ್ತಾ ಇರಲು ಅವನಿಗೆ ತಿಳಿಯದ ರೀತಿಯಲ್ಲಿ ಆ ಬೀಜವು ಹುಟ್ಟಿ ಬೆಳೆಯುವದು. ಇದರಂತೆ ದೇವರ ರಾಜ್ಯ. ಭೂವಿುಯು ಮೊದಲು ಗರಿಯನ್ನೂ, ಆಮೇಲೆ ಹೊಡೆಯನ್ನೂ, ತರುವಾಯ ತೆನೆಯಲ್ಲಿ ತುಂಬಾ ಕಾಳನ್ನೂ ತನ್ನಷ್ಟಕ್ಕೆ ತಾನೇ ಹುಟ್ಟಿಸುತ್ತದೆ. ಆದರೆ ಫಲಮಾಗಿದ ಕೂಡಲೆ ಅವನು ಸುಗ್ಗಿ ಕಾಲ ಬಂತೆಂದು ಕೊಯಿಸುತ್ತಾನೆ ಅಂದನು. ಇನ್ನೂ ಆತನು ಹೇಳಿದ್ದು - ದೇವರ ರಾಜ್ಯವನ್ನು ಯಾವದಕ್ಕೆ ಹೋಲಿಸೋಣ? ಯಾವ ಸಾಮ್ಯದಿಂದ ಅದನ್ನು ತೋರಿಸಿಕೊಡೋಣ? ಅದು ಸಾಸಿವೆ ಕಾಳಿನಂತಿರುತ್ತದೆ. ಭೂವಿುಯಲ್ಲಿ ಬಿತ್ತುವಾಗ ಅದು ಭೂವಿುಯಲ್ಲಿರುವ ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ. ಬಿತ್ತಿದ ಮೇಲೆ ಅದು ಬೆಳೆದು ಎಲ್ಲಾ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ದೊಡ್ಡ ದೊಡ್ಡ ಕೊಂಬೆಗಳನ್ನು ಬಿಡುವದರಿಂದ ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಅದರ ನೆರಳಿನಲ್ಲಿ ವಾಸಮಾಡುವದಕ್ಕಾಗುತ್ತದೆ ಅಂದನು.
ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು; ಅದೇನಂದರೆ - ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಹೆಂಗಸು ತಕ್ಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು.ಯೇಸು ಈ ಮಾತುಗಳನ್ನೆಲ್ಲಾ ಜನರ ಗುಂಪುಗಳಿಗೆ ಸಾಮ್ಯರೂಪವಾಗಿ ಹೇಳಿದನು; ಸಾಮ್ಯವಿಲ್ಲದೆ ಒಂದನ್ನೂ ಹೇಳಲಿಲ್ಲ. ಹೀಗೆ -ನಾನು ಬಾಯಿದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು;ಲೋಕಾದಿಯಿಂದ ಮರೆಯಾಗಿದ್ದವುಗಳನ್ನು ಹೊರಪಡಿಸುವೆನುಎಂದು ಒಬ್ಬ ಪ್ರವಾದಿಯ ಮುಖಾಂತರ ನುಡಿದ ಮಾತು ನೆರವೇರಿತು.
ಪರಲೋಕರಾಜ್ಯವು ಹೊಲದಲ್ಲಿ ಹೂಳಿಟ್ಟ ದ್ರವ್ಯಕ್ಕೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡುಮುಚ್ಚಿಬಿಟ್ಟು ಅದರಿಂದಾದ ಸಂತೋಷದಿಂದ ತನ್ನ ಬದುಕನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು. ಮತ್ತು ಪರಲೋಕರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ. ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡು ತನ್ನ ಬದುಕನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡನು. ಮತ್ತು ಪರಲೋಕರಾಜ್ಯವು ಒಂದು ಬಲೆಗೆ ಹೋಲಿಕೆಯಾಗಿದೆ. ಅದನ್ನು ಸಮುದ್ರದಲ್ಲಿ ಹಾಕಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿದರು. ಅದು ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು ಕೂತುಕೊಂಡು ಒಳ್ಳೆಯ ಮೀನುಗಳನ್ನು ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಟುಬಿಟ್ಟರು. ಹಾಗೆಯೇ ಯುಗದ ಸಮಾಪ್ತಿಯಲ್ಲಿ ಆಗುವದು. ದೇವದೂತರು ಹೊರಟುಬಂದು ನೀತಿವಂತರೊಳಗಿಂದ ಕೆಟ್ಟವರನ್ನು ಬೇರೆಮಾಡಿ ಅವರನ್ನು ಬೆಂಕೀಕೊಂಡದಲ್ಲಿ ಹಾಕುವರು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲುಕಡಿಯೋಣವೂ ಇರುವವು. ಈ ಎಲ್ಲಾ ಮಾತುಗಳ ಅರ್ಥವು ನಿಮಗೆ ತಿಳಿಯಿತೋ ಎಂದು ಕೇಳಲು ಅವರು - ತಿಳಿಯಿತು ಅಂದರು. ಆಗ ಆತನು ಅವರಿಗೆ - ಹೀಗಿರಲಾಗಿ ಪರಲೋಕರಾಜ್ಯದ ವಿಷಯವಾಗಿ ಉಪದೇಶಹೊಂದಿ ಶಿಕ್ಷಿತನಾದ ಪ್ರತಿಯೊಬ್ಬ ಶಾಸ್ತ್ರೋಪದೇಶಕನು ಮನೇಯಜಮಾನನಿಗೆ ಹೋಲಿಕೆಯಾಗಿದ್ದಾನೆ. ಅವನು ತನ್ನ ಬೊಕ್ಕಸದೊಳಗಿಂದ ಹೊಸ ವಸ್ತುಗಳನ್ನೂ ಹಳೇ ವಸ್ತುಗಳನ್ನೂ ಹೊರಗೆ ತರುತ್ತಿರುವನು ಎಂದು ಹೇಳಿದನು. ಆತನು ಈ ತರದ ಅನೇಕ ಸಾಮ್ಯಗಳಿಂದ ಜನರ ಗ್ರಹಿಕೆಗೆ ತಕ್ಕ ಹಾಗೆ ದೇವರ ವಾಕ್ಯವನ್ನು ಹೇಳುತ್ತಿದ್ದನು. ಸಾಮ್ಯವಿಲ್ಲದೆ ಅವರಿಗೆ ಹೇಳಲಿಲ್ಲ. ಆದರೆ ಪ್ರತ್ಯೇಕವಾಗಿ ಆತನು ತನ್ನ ಆಪ್ತಶಿಷ್ಯರಿಗೆ ಎಲ್ಲವನ್ನು ಬಿಚ್ಚಿ ಹೇಳಿದನು.
ಇದಲ್ಲದೆ ಆತನು ಅವರಿಗೆ ಯಾರೂ ದೀಪವನ್ನು ಹಚ್ಚಿ ಮಡಿಕೆಯಿಂದ ಮುಚ್ಚುವದಿಲ್ಲ, ಮಂಚದ ಕೆಳಗೂ ಇಡುವದಿಲ್ಲ; ಮನೆಯೊಳಕ್ಕೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ.ಯಾವದಾಗಲಿ ಪ್ರಕಾಶಕ್ಕೆ ಬರಬೇಕೇ ಹೊರತು ರಹಸ್ಯವಾಗಿರುವದಿಲ್ಲ; ಯಾವದಾಗಲಿ ಬೈಲಿಗೆ ಬರಬೇಕೇ ಹೊರತು ಗುಟ್ಟಾಗಿರುವದಿಲ್ಲ. ಕೇಳುವದಕ್ಕೆ ಕಿವಿಯುಳ್ಳವನು ಕೇಳಲಿ ಎಂದು ಹೇಳಿದನು. ಮತ್ತು ಆತನು ಅವರಿಗೆ - ನೀವು ಕಿವಿಗೊಡುವ ವಿಷಯದಲ್ಲಿ ಎಚ್ಚರಿಕೆ. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು; ಇನ್ನೂ ಕೂಡಿಸಿ ಕೊಡುವರು.ಆದದರಿಂದ ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ; ಇದ್ದವನಿಗೆ ಕೊಡಲ್ಪಡುವದು; ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವದು ಎಂದು ಹೇಳಿದನು.
ಅಧ್ಯಾಯ 20
ಯೇಸು ಈ ಸಾಮ್ಯಗಳನ್ನು ಮುಗಿಸಿದ ಮೇಲೆ ಅಲ್ಲಿಂದ ಹೊರಟುಹೋದನು.ಆತನು ಅಲ್ಲಿಂದ ಹೊರಟು ತನ್ನ ಊರಿಗೆ ಬಂದನು; ಶಿಷ್ಯರು ಆತನ ಹಿಂದೆಯೇ ಬಂದರು. ಸಬ್ಬತ್ ದಿನ ಬಂದಾಗ ಆತನು ಸಭಾಮಂದಿರಕ್ಕೆ ಹೋಗಿ ಉಪದೇಶ ಮಾಡುವದಕ್ಕೆ ಪ್ರಾರಂಭಿಸಿದನು. ಎಲ್ಲರು ಕೇಳಿ ಅತ್ಯಾಶ್ಚರ್ಯಪಟ್ಟು - ಇವನಿಗೆ ಈ ಮಾತುಗಳು ಎಲ್ಲಿಂದ ಬಂದಿದ್ದಾವು? ಇವನು ಪಡೆದಿರುವ ಈ ಜ್ಞಾನವೇನು? ಇವನ ಕೈಯಿಂದ ಇಂಥ ಮಹತ್ಕಾರ್ಯಗಳಾಗುವದೇನು? ಇವನು ಆ ಬಡಗಿಯಲ್ಲವೇ. ಇವನು ಮರಿಯಳ ಮಗನಲ್ಲವೇ. ಯಾಕೋಬ ಯೋಸೆ ಯೂದ ಸೀಮೋನ ಇವರ ಅಣ್ಣನಲ್ಲವೇ. ಇವನ ತಂಗಿಯರು ಇಲ್ಲಿ ನಮ್ಮಲ್ಲಿ ಇದ್ದಾರಲ್ಲವೇ ಎಂದು ಮಾತಾಡಿಕೊಂಡು ಆತನ ವಿಷಯವಾಗಿ ಬೇಸರಗೊಂಡರು. ಯೇಸು ಅವರಿಗೆ - ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಮರ್ಯಾದೆ ಉಂಟು; ಆದರೆ ಸ್ವದೇಶದಲ್ಲಿಯೂ ಸ್ವಂತ ಜನರಲ್ಲಿಯೂ ಸ್ವಂತ ಮನೆಯಲ್ಲಿಯೂ ಮಾತ್ರ ಮರ್ಯಾದೆಯಿಲ್ಲ ಎಂದು ಹೇಳಿದನು. ಆತನು ಅಲ್ಲಿ ಕೆಲವು ಮಂದಿ ರೋಗಿಗಳ ಮೇಲೆ ಕೈಯಿಟ್ಟು ಸ್ವಸ್ಥಮಾಡಿದ್ದೇ ಹೊರತು ಬೇರೆ ಯಾವ ಮಹತ್ಕಾರ್ಯವನ್ನೂ ಮಾಡುವದಕ್ಕಾಗಲಿಲ್ಲ. ಅವರು ತನ್ನನ್ನು ನಂಬದೆ ಹೋದದ್ದಕ್ಕೆ ಆತನು ಆಶ್ಚರ್ಯಪಟ್ಟನು. ಆತನು ಹಳ್ಳಿಪಳ್ಳಿಗಳನ್ನು ಸುತ್ತಿಕೊಂಡು ಉಪದೇಶ ಮಾಡುತ್ತಾ ಬಂದನು.
ಯೇಸು ತನ್ನ ಸುತ್ತಲಿದ್ದ ಬಹು ಜನಗಳ ದೊಡ್ಡ ಗುಂಪುಗಳನ್ನು ಕಂಡು ಆಚೇದಡಕ್ಕೆ ಹೊರಟುಹೋಗಬೇಕೆಂದು ಅಪ್ಪಣೆಕೊಟ್ಟನು. ಆಗ ಒಬ್ಬ ಶಾಸ್ತ್ರಿಯು ಹತ್ತರಕ್ಕೆ ಬಂದು ಆತನಿಗೆ - ಗುರುವೇ, ನೀನು ಎಲ್ಲಿಗೆ ಹೋದರೂ ನಾನು ನಿನ್ನ ಹಿಂದೆ ಬರುತ್ತೇನೆ ಎಂದು ಹೇಳಲು ಯೇಸು ಅವನಿಗೆ - ನರಿಗಳಿಗೆ ಗುದ್ದುಗಳಿವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ ಎಂದು ಹೇಳಿದನು.ಆತನು ಮತ್ತೊಬ್ಬನಿಗೆ - ನನ್ನನ್ನು ಹಿಂಬಾಲಿಸು ಎಂದು ಹೇಳಲು ಅವನು - ಸ್ವಾಮೀ, ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿಬರುವಂತೆ ನನಗೆ ಅಪ್ಪಣೆಯಾಗಬೇಕು ಅಂದನು. ಆದರೆ ಆತನು ಅವನಿಗೆ - ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ, ನೀನಂತೂ ಹೋಗಿ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸು ಎಂದು ಹೇಳಿದನು. ಇನ್ನೊಬ್ಬನು ಸಹ - ಸ್ವಾಮೀ, ನಿನ್ನನ್ನು ಹಿಂಬಾಲಿಸುತ್ತೇನೆ; ಆದರೆ ಮೊದಲು ನನ್ನ ಮನೆಯವರಿಗೆ ಹೇಳಿಬರುವದಕ್ಕೆ ನನಗೆ ಅಪ್ಪಣೆಯಾಗಬೇಕು ಅಂದನು. ಯೇಸು ಅವನಿಗೆ - ಯಾವನಾದರೂ ನೇಗಿಲಿನ ಮೇಲೆ ತನ್ನ ಕೈಯನ್ನು ಹಾಕಿ ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲವೆಂದು ಹೇಳಿದನು.
ಆ ಹೊತ್ತು ಸಾಯಂಕಾಲವಾದಾಗ ಆತನು ಅವರಿಗೆ - ಆಚೇದಡಕ್ಕೆ ಹೋಗೋಣ ಎಂದು ಹೇಳಲುಆತನು ದೋಣಿಯನ್ನು ಹತ್ತಿದಾಗ ಆತನ ಶಿಷ್ಯರು ಆತನ ಹಿಂದೆ ಹೋದರು.ಅವರು ಆ ಜನರ ಗುಂಪನ್ನು ಬಿಟ್ಟು ಆತನನ್ನು ಅದೇ ದೋಣಿಯಲ್ಲಿ ಹಾಗೆಯೇ ಕರಕೊಂಡುಹೋದರು. ಬೇರೆ ದೋಣಿಗಳೂ ಆತನ ಸಂಗಡ ಇದ್ದವು. ತರುವಾಯ ದೊಡ್ಡ ಬಿರುಗಾಳಿ ಎದ್ದು ತೆರೆಗಳು ಆ ದೋಣಿಗೆ ಬಡಿದು ಒಳಗೆ ನುಗ್ಗಿದ್ದರಿಂದ ಆ ದೋಣಿ ಆಗಲೇ ತುಂಬುವದಕ್ಕೆ ಬಂದಿತ್ತು. ಆತನು ದೋಣಿಯ ಹಿಂಭಾಗದಲ್ಲಿ ತಲೆಗಿಂಬನ್ನು ಒರಗಿ ನಿದ್ದೆ ಮಾಡುತ್ತಿದ್ದನು. ಅವರು ಆತನನ್ನು ಎಬ್ಬಿಸಿ - ಗುರುವೇ, ನಾವು ಮುಳುಗಿಹೋಗುವದರಲ್ಲಿ ನಿನಗೆ ಚಿಂತೆಯಿಲ್ಲವೇ ಎಂದು ಕೇಳಲು ದೋಣಿಯೊಳಗೆ ನೀರು ತುಂಬಿಕೊಂಡದರಿಂದ ಅವರು ಅಪಾಯಕ್ಕೆ ಗುರಿಯಾದರು. ಹೀಗಿರಲಾಗಿ ಅವರು ಆತನ ಹತ್ತಿರ ಬಂದು - ಗುರುವೇ, ಗುರುವೇ, ಸಾಯುತ್ತೇವೆ ಎಂದು ಹೇಳಿ ಆತನನ್ನು ಎಬ್ಬಿಸಿದರು. ಆಗ ಆತನು ಎದ್ದು ಗಾಳಿಯನ್ನೂ ಉಬ್ಬುವ ನೀರನ್ನೂ ಗದರಿಸಿದನು. ಗದರಿಸಲು ಅವು ನಿಂತವು, ಶಾಂತವಾಯಿತು.ತರುವಾಯ ಆತನು ಅವರನ್ನು - ಯಾಕೆ ಧೈರ್ಯಗೆಡುತ್ತೀರಿ? ಇನ್ನೂ ನಿಮಗೆ ನಂಬಿಕೆಯಿಲ್ಲವೇ ಎಂದು ಕೇಳಲು ಅವರಾದರೋ ಭಯಪಟ್ಟು - ಈತನು ಯಾರಿರಬಹುದು? ಗಾಳಿಗೂ ನೀರಿಗೂ ಅಪ್ಪಣೆ ಕೊಡುತ್ತಾನೆ; ಅವು ಕೂಡ ಹೇಳಿದ ಹಾಗೆ ಕೇಳುತ್ತವಲ್ಲಾ ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡು ಅತ್ಯಾಶ್ಚರ್ಯಪಟ್ಟರು.
ಆ ಮೇಲೆ ಅವರು ಗಲಿಲಾಯಕ್ಕೆ ಎದುರಾಗಿರುವ ಗೆರಸೇನರ ಸೀಮೆಗೆ ಮುಟ್ಟಿದರು. ಆತನು ದಡಕ್ಕೆ ಇಳಿಯುತ್ತಲೇ ಆ ಊರಿನವನಾದ ಒಬ್ಬ ಮನುಷ್ಯನು ಆತನೆದುರಿಗೆ ಬಂದನು. ಅವನಿಗೆ ದೆವ್ವಗಳು ಹಿಡಿದಿದ್ದವು. ಬಹುಕಾಲದಿಂದ ಬಟ್ಟೆಯನ್ನೇ ಹಾಕಿಕೊಳ್ಳದೆ ಯಾವ ಮನೆಯಲ್ಲಿಯೂ ಇರದೆ ಸಮಾಧಿಯ ಗವಿಗಳಲ್ಲಿಯೇ ಇರುತ್ತಿದ್ದನು.ಅವನನ್ನು ಅನೇಕಸಾರಿ ಬೇಡಿಗಳಿಂದಲೂ ಸರಪಣಿಗಳಿಂದಲೂ ಕಟ್ಟಿದ್ದರೂ ಅವನು ಸರಪಣಿಗಳನ್ನು ಕಿತ್ತು ಬೇಡಿಗಳನ್ನು ಮುರಿದುಹಾಕಿದ್ದನು; ಅವನನ್ನು ಇನ್ನು ಯಾರೂ ಸರಪಣಿಯಿಂದಾದರೂ ಕಟ್ಟಲಾರದೆ ಹೋದರು; ಅವನನ್ನು ಹತೋಟಿಗೆ ತರುವದಕ್ಕೆ ಯಾರಿಂದಲೂ ಆಗಲಿಲ್ಲ. ಅವನು ನಿತ್ಯ ರಾತ್ರಿಹಗಲು ಸಮಾಧಿಯ ಗವಿಗಳಲ್ಲಿಯೂ ಗುಡ್ಡಗಳಲ್ಲಿಯೂ ಆರ್ಭಟಿಸುತ್ತಾ ಕಲ್ಲುಗಳಿಂದ ತನ್ನನ್ನು ಕಡಿದುಕೊಳ್ಳುತ್ತಾ ಇದ್ದನು. ಅವನು ಯೇಸುವನ್ನು ದೂರದಿಂದ ಕಂಡು ಓಡಿಬಂದು ಆತನಿಗೆ ಅಡ್ಡಬಿದ್ದು ಮಹಾಶಬ್ದದಿಂದ ಆರ್ಭಟಿಸಿ - ಯೇಸುವೇ, ಪರಾತ್ಪರನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ದೇವರಾಣೆ, ನನ್ನನ್ನು ಕಾಡಬೇಡ ಎಂದು ಹೇಳಿದನು. ಯಾಕಂದರೆ - ಎಲಾ ದೆವ್ವಾ, ಇವನನ್ನು ಬಿಟ್ಟುಹೋಗು ಎಂದು ಯೇಸು ಹೇಳಿದನು.
ಮತ್ತು - ನಿನ್ನ ಹೆಸರೇನೆಂದು ಅವನನ್ನು ಕೇಳಿದ್ದಕ್ಕೆ ಅವನು - ನನ್ನ ಹೆಸರು ದಂಡು; ಯಾಕಂದರೆ ನಾವು ಬಹು ಮಂದಿ ಇದ್ದೇವೆ ಎಂದು ಹೇಳಿ - ನಮ್ಮನ್ನು ಈ ಸೀಮೆಯಿಂದ ಹೊರಡಿಸಬೇಡವೆಂದು ಆತನನ್ನು ಬಹಳವಾಗಿ ಬೇಡಿಕೊಂಡನು. ಅಲ್ಲಿಯ ಗುಡ್ಡದಲ್ಲಿ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು. ಆ ದೆವ್ವಗಳು - ಆ ಹಂದಿಗಳೊಳಗೆ ಸೇರಿಕೊಳ್ಳುವದಕ್ಕೆ ನಮ್ಮನ್ನು ಕಳುಹಿಸಿಕೊಡು ಎಂದು ಬೇಡಿಕೊಂಡವು.ಆತನು - ಆಗಲಿ ಎಂದು ಅವುಗಳಿಗೆ ಅಪ್ಪಣೆಕೊಡಲು ಆ ದೆವ್ವಗಳು ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು; ಆ ಗುಂಪು ಓಡಿ ಕಡಿದಾದ ಸ್ಥಳದಿಂದ ಸಮುದ್ರದೊಳಗೆ ಬಿದ್ದು ಅಲ್ಲಿ ಉಸುರುಕಟ್ಟಿ ಸತ್ತಿತು. ಹೆಚ್ಚು ಕಡಿಮೆ ಎರಡು ಸಾವಿರ ಹಂದಿಗಳಿದ್ದವು.ಮೇಯಿಸುವವರು ನಡೆದದ್ದನ್ನು ಕಂಡು ಓಡಿಹೋಗಿ ಆ ಊರಲ್ಲಿಯೂ ಹಳ್ಳಿಗಳಲ್ಲಿಯೂ ಅದನ್ನು ತಿಳಿಸಲು ಜನರು ನಡೆದ ಸಂಗತಿಯನ್ನು ನೋಡುವದಕ್ಕೆ ಹೊರಟು ಯೇಸುವಿದ್ದಲ್ಲಿಗೆ ಬಂದು ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ಬಟ್ಟೆಗಳನ್ನು ಹಾಕಿಕೊಂಡು ಸ್ವಸ್ಥಬುದ್ಧಿಯಿಂದ ಯೇಸುವಿನ ಪಾದಗಳ ಬಳಿಯಲ್ಲಿ ಕೂತಿರುವದನ್ನು ಕಂಡು ಹೆದರಿದರು. ನಡೆದ ಸಂಗತಿಯನ್ನು ನೋಡಿದ್ದವರು ಆ ದೆವ್ವಹಿಡಿದಿದ್ದವನಿಗೆ ಬಿಡುಗಡೆಯಾದ ರೀತಿಯನ್ನು ಅವರಿಗೆ ತಿಳಿಸಲು ಗೆರಸೇನರ ಸುತ್ತಲಿರುವ ಸೀಮೆಯವರಿಗೆಲ್ಲಾ ಮಹಾ ಭಯಹಿಡಿದದ್ದರಿಂದ ಅವರು ಯೇಸುವನ್ನು - ನೀನು ನಮ್ಮನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು. ಆತನು ದೋಣಿಯನ್ನು ಹತ್ತಿ ಹಿಂತಿರುಗಿ ಹೋದನು.ಆತನು ದೋಣಿಯನ್ನು ಹತ್ತುವಾಗ ಆ ದೆವ್ವಹಿಡಿದಿದ್ದವನು - ನಾನು ನಿನ್ನ ಬಳಿಯಲ್ಲಿಯೇ ಇರುತ್ತೇನೆಂದು ಆತನನ್ನು ಬೇಡತೊಡಗಿದನು. ಆದರೆ ಆತನು ಅವನನ್ನು ಇರಗೊಡದೆ ಅವನಿಗೆ - ನೀನು ನಿನ್ನ ಮನೆಗೂ ನಿನ್ನ ಜನರ ಬಳಿಗೂ ಹೋಗಿ ಸ್ವಾವಿುಯು ನಿನ್ನಲ್ಲಿ ಕರುಣೆಯಿಟ್ಟು ನಿನಗೆ ಎಂಥೆಂಥ ಉಪಕಾರಗಳನ್ನು ಮಾಡಿದ್ದಾನೋ ಅದನ್ನು ಹೇಳು ಅಂದನು. ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರಗಳನ್ನು ದೆಕಪೊಲಿ ಎಂಬ ಸೀಮೆಯಲ್ಲಿ ಸಾರುವದಕ್ಕೆ ಪ್ರಾರಂಭಿಸಿದನು; ಎಲ್ಲರೂ ಆಶ್ಚರ್ಯಪಟ್ಟರು.
ಅಧ್ಯಾಯ 21
ಆತನು ದೋಣಿಯನ್ನು ಹತ್ತಿ ಸಮುದ್ರವನ್ನು ದಾಟಿ ತನ್ನ ಊರಿಗೆ ಬಂದನು. ಯೇಸು ಹಿಂತಿರುಗಿ ಬಂದಾಗ ಜನರೆಲ್ಲರೂ ಆತನನ್ನು ಕಾದುಕೊಂಡಿದ್ದು ಸಂತೋಷದಿಂದ ಸ್ವೀಕರಿಸಿದರು. -ಆಗ ಸಭಾಮಂದಿರದ ಅಧಿಕಾರಿಯಾದ ಯಾಯೀರನೆಂಬ ಒಬ್ಬ ಮನುಷ್ಯನು ಬಂದು ಯೇಸುವಿನ ಪಾದಗಳಿಗೆ ಬಿದ್ದನು. ಹೆಚ್ಚು ಕಡಿಮೆ ಹನ್ನೆರಡು ವರುಷದವಳಾದ ಅವನ ಒಬ್ಬಳೇ ಮಗಳು ಸಾಯುವವಳಾಗಿದ್ದ ಕಾರಣ ಆತನನ್ನು ತನ್ನ ಮನೆಗೆ ಬರಬೇಕೆಂದು ಬೇಡಿಕೊಂಡನು. ಆತನು ಹೋಗುತ್ತಿರುವಲ್ಲಿ ಜನರು ಗುಂಪುಗುಂಪಾಗಿ ಆತನನ್ನು ಇರಿಕಿಸುತ್ತಿದ್ದರು.ನನ್ನ ಚಿಕ್ಕ ಮಗಳು ಈಗ ಸಾಯುತ್ತಾಳೆ; ಆಕೆಯು ವಾಸಿಯಾಗಿ ಬದುಕಿಕೊಳ್ಳುವಂತೆ ನೀನು ಬಂದು ಆಕೆಯ ಮೇಲೆ ಕೈಯಿಡಬೇಕು ಎಂದು ಆತನನ್ನು ಬಹಳವಾಗಿ ಬೇಡಿಕೊಂಡನು. ಆತನು ಅವನ ಸಂಗಡ ಹೋದನು; ಮತ್ತು ಬಹು ಜನರು ಆತನನ್ನು ನೂಕಿಕೊಂಡು ಹಿಂದೆ ಹೋದರು.
ಆಗ ಹನ್ನೆರಡು ವರುಷದಿಂದ ರಕ್ತಕುಸುಮ ರೋಗವಿದ್ದ ಒಬ್ಬ ಹೆಂಗಸು ಬಂದಳು. ಆಕೆಯು ಒಬ್ಬರಿಂದಲೂ ಗುಣ ಹೊಂದಲಾರದೆ ಇದ್ದಳು.ಆಕೆಯು ಅನೇಕ ವೈದ್ಯರಿಂದ ಬಹು ಕಷ್ಟವನ್ನು ಅನುಭವಿಸಿ ಕೈಯಲ್ಲಿದ್ದದ್ದನ್ನೆಲ್ಲಾ ಕಳಕೊಂಡರೂ ರೋಗವು ಹೆಚ್ಚುತ್ತಾ ಬಂದದ್ದೇ ಹೊರತು ಮತ್ತೇನು ಪ್ರಯೋಜನವನ್ನೂ ಹೊಂದಿರಲಿಲ್ಲ. -ಆ ಹೆಂಗಸು ಯೇಸುವಿನ ಸಮಾಚಾರವನ್ನು ಕೇಳಿ - ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ನೆಟ್ಟಗಾಗುವೆನು ಎಂದು ಆಲೋಚಿಸಿ ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಉಡುಪನ್ನು ಮುಟ್ಟಿದಳು. ಮುಟ್ಟಿದ ಕೂಡಲೆ ಆಕೆಗೆ ರಕ್ತಹರಿಯುವದು ನಿಂತುಹೋದದರಿಂದ ಆಕೆಯು - ನನ್ನನ್ನು ಕಾಡಿದ ರೋಗವು ಹೋಗಿ ನನಗೆ ಗುಣವಾಯಿತು ಎಂದು ತನ್ನೊಳಗೆ ತಿಳುಕೊಂಡಳು. ಆ ಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳುಕೊಂಡು ಗುಂಪಿನಲ್ಲಿ ಹಿಂತಿರುಗಿ - ನನ್ನ ಉಡುಪನ್ನು ಯಾರು ಮುಟ್ಟಿದರು? ಎಂದು ಕೇಳಲು ಆತನ ಶಿಷ್ಯರು ಆತನಿಗೆ - ಜನರು ನಿನ್ನನ್ನು ನೂಕುವದನ್ನು ಕಂಡೂ ಕಂಡು ನನ್ನನ್ನು ಯಾರು ಮುಟ್ಟಿದರೆಂದು ಕೇಳುತ್ತೀಯಲ್ಲಾ ಎಂದು ಹೇಳಿದರು. ಆದರೆ ಆತನು ಈ ಕೆಲಸ ಮಾಡಿದವಳನ್ನು ಕಾಣಬೇಕೆಂದು ಸುತ್ತಲು ನೋಡುತ್ತಾ ಇರಲಾಗಿಆದರೆ ಯೇಸು - ಯಾರೋ ಒಬ್ಬರು ನನ್ನನ್ನು ಮುಟ್ಟಿದರು; ನನ್ನಿಂದ ಶಕ್ತಿಯು ಹೊರಟಿತೆಂಬದು ನನಗೆ ಗೊತ್ತಾಯಿತು ಅಂದಾಗ ಆ ಹೆಂಗಸು ತಾನು ಮರೆಯಾಗಿಲ್ಲವೆಂತ ತಿಳಿದು ನಡುಗುತ್ತಾ ಬಂದು ಆತನಿಗೆ ಅಡ್ಡ ಬಿದ್ದು ತಾನು ಇಂಥ ಕಾರಣದಿಂದ ಈತನನ್ನು ಮುಟ್ಟಿದೆನೆಂತಲೂ ಮುಟ್ಟಿದ ಕೂಡಲೆ ತನಗೆ ವಾಸಿಯಾಯಿತೆಂತಲೂ ಎಲ್ಲಾ ಜನರ ಮುಂದೆ ತಿಳಿಸಿದಳು.ಆತನು ಆಕೆಗೆ - ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನನ್ನು ಕಾಡಿದ ರೋಗವು ಹೋಗಿ ನಿನಗೆ ಗುಣವಾಗಲಿ ಎಂದು ಹೇಳಿದನು.
ಆತನು ಇನ್ನೂ ಮಾತಾಡುತ್ತಿರುವಲ್ಲಿ ಸಭಾಮಂದಿರದ ಅಧಿಕಾರಿಯ ಕಡೆಯವರು ಬಂದು - ನಿನ್ನ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುವದು? ಅಂದರು.ಆದರೆ ಯೇಸು ಅದನ್ನು ಕೇಳಿ ಅವನಿಗೆ - ಅಂಜಬೇಡ, ನಂಬಿಕೆ ಮಾತ್ರ ಇರಲಿ, ಆಕೆ ಬದುಕುವಳು ಎಂದು ಉತ್ತರಕೊಟ್ಟನು. ತರುವಾಯ ಆತನು ಆ ಮನೆಗೆ ಹೋಗಿ ಪೇತ್ರನು ಯೋಹಾನನು ಯಾಕೋಬನು ಆ ಹುಡುಗಿಯ ತಂದೆತಾಯಿಗಳು ಇಷ್ಟು ಮಂದಿಯನ್ನೇ ಹೊರತು ಬೇರೆ ಯಾರನ್ನೂ ತನ್ನ ಸಂಗಡ ಒಳಕ್ಕೆ ಬರಗೊಡಲಿಲ್ಲ. ಎಲ್ಲರು ಅಳುತ್ತಾ ಆಕೆಗೋಸ್ಕರ ಎದೆಬಡುಕೊಳ್ಳುತ್ತಾ ಇದ್ದರು. ಯೇಸು - ಅಳಬೇಡಿರಿ, ಆಕೆ ಸತ್ತಿಲ್ಲ, ನಿದ್ದೆಮಾಡುತ್ತಾಳೆ ಅನ್ನಲಾಗಿ ಜನರು ಆಕೆ ಸತ್ತಳೆಂದು ತಿಳಿದುಕೊಂಡದರಿಂದ ಆತನನ್ನು ಹಾಸ್ಯಮಾಡಿದರು. ಆದರೆ ಆತನು ಆಕೆಯ ಕೈ ಹಿಡಿದು - ಅಮ್ಮಣ್ಣೀ, ಏಳು ಎಂದು ಕೂಗಿದನು. ಆಕೆಯ ಪ್ರಾಣ ತಿರಿಗಿ ಬಂದು ತಕ್ಷಣವೇ ಆಕೆ ಎದ್ದಳು. ತರುವಾಯ ಆತನು - ಈಕೆಗೆ ಊಟಮಾಡಿಸಿರಿ ಎಂದು ಅಪ್ಪಣೆ ಕೊಟ್ಟನು. ಆಕೆಯ ತಂದೆತಾಯಿಗಳು ಬೆರಗಾದರು. ಆತನು - ಈ ನಡೆದ ಸಂಗತಿಯನ್ನು ಯಾರಿಗೂ ತಿಳಿಸಬೇಡಿರೆಂದು ಖಂಡಿತವಾಗಿ ಹೇಳಿದನು.
ಯೇಸು ಅಲ್ಲಿಂದ ಹೋಗುವಾಗ ಇಬ್ಬರು ಕುರುಡರು - ದಾವೀದನ ಕುಮಾರನೇ, ನಮ್ಮನ್ನು ಕರುಣಿಸು ಎಂದು ಕೂಗುತ್ತಾ ಆತನ ಹಿಂದೆ ಹೋದರು. ಆತನು ಮನೆಗೆ ಬಂದಾಗ ಆ ಕುರುಡರು ಆತನ ಬಳಿಗೆ ಬಂದರು. ಯೇಸು ಅವರನ್ನು - ನಾನು ಇದನ್ನು ಮಾಡಬಲ್ಲೆನೆಂಬದನ್ನು ನಂಬುತ್ತೀರೋ ಎಂದು ಕೇಳಿದ್ದಕ್ಕೆ ಅವರು - ಹೌದು, ಸ್ವಾಮೀ, ನಂಬುತ್ತೇವೆ ಅಂದರು. ಆಗ ಆತನು ಅವರ ಕಣ್ಣುಗಳನ್ನು ಮುಟ್ಟಿ - ನೀವು ನಂಬಿದಂತೆ ನಿಮಗೆ ಆಗಲಿ ಅಂದನು. ಆಗ ಅವರಿಗೆ ಕಣ್ಣು ಬಂದವು. ಮತ್ತು ಯೇಸು ಅವರಿಗೆ - ಇದು ಯಾರಿಗೂ ತಿಳಿಯಬಾರದು ನೋಡಿರಿ ಎಂದು ಖಂಡಿತವಾಗಿ ಹೇಳಿದನು. ಆದರೆ ಅವರು ಹೊರಟುಹೋಗಿ ಆ ದೇಶದೊಳಗೆಲ್ಲಾ ಆತನ ಸುದ್ದಿಯನ್ನು ಹಬ್ಬಿಸಿದರು.
ಅಧ್ಯಾಯ 22
ಯೇಸು ಎಲ್ಲಾ ಊರುಗಳನ್ನೂ ಹಳ್ಳಿಪಳ್ಳಿಗಳನ್ನೂ ಸುತ್ತಿಕೊಂಡು ಅವರ ಸಭಾಮಂದಿರಗಳಲ್ಲಿ ಉಪದೇಶಮಾಡುತ್ತಾ ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು. ಆದರೆ ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು. ಆಗ ತನ್ನ ಶಿಷ್ಯರಿಗೆ - ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು - ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ ಎಂದು ಹೇಳಿದನು.ಮತ್ತು ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಹತ್ತರಕ್ಕೆ ಕರೆದು ದೆವ್ವಗಳನ್ನು ಬಿಡಿಸುವದಕ್ಕೂ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುವದಕ್ಕೂ ಅವರಿಗೆ ಅಧಿಕಾರಕೊಟ್ಟನು.ದೇವರ ರಾಜ್ಯದ ವಿಷಯವನ್ನು ಸಾರುವದಕ್ಕೂ ಅಸ್ವಸ್ಥರಾದವರನ್ನು ಸ್ವಸ್ಥಮಾಡುವದಕ್ಕೂ ಅವರನ್ನು ಕಳುಹಿಸಿದನು.
ಈ ಹನ್ನೆರಡು ಮಂದಿಯನ್ನು ಯೇಸು ಕಳುಹಿಸಿದನು. ಕಳುಹಿಸುವಾಗ ಅವರಿಗೆ ಅಪ್ಪಣೆ ಕೊಟ್ಟದ್ದೇನಂದರೆ -ಅನ್ಯಜನಗಳ ಕಡೆಗೆ ಹೋಗಬೇಡಿರಿ, ಸಮಾರ್ಯರ ಊರೊಳಗೆ ಕಾಲಿಡಬೇಡಿರಿ; ಇವರನ್ನು ಬಿಟ್ಟು ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲನ ಮನೆತನದವರ ಬಳಿಗೆ ಹೋಗಿರಿ. ಪರಲೋಕರಾಜ್ಯವು ಸಮೀಪವಾಯಿತೆಂದು ಸಾರಿಹೇಳುತ್ತಾ ಹೋಗಿರಿ. ರೋಗಿಗಳನ್ನು ಸ್ವಸ್ಥಮಾಡಿರಿ, ಸತ್ತವರನ್ನು ಬದುಕಿಸಿರಿ, ಕುಷ್ಠಹತ್ತಿದವರನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ; ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ. ನಿಮ್ಮ ಹಮ್ಮೀಣಿಗಳಲ್ಲಿ ಹೊನ್ನು ಹಣ ದುಡ್ಡುಗಳನ್ನೂ ದಾರಿಗೆ ಹಸಿಬೆಯನ್ನೂ ಎರಡು ಅಂಗಿ ಕೆರ ಕೋಲು ಮೊದಲಾದವುಗಳನ್ನೂ ಸೌರಿಸಿಕೊಳ್ಳಬೇಡಿರಿ. ಆಳು ಅಂಬಲಿಗೆ ಯೋಗ್ಯನಷ್ಟೆ.ನೀವು ಯಾವದೊಂದು ಊರಿಗೆ ಅಥವಾ ಹಳ್ಳಿಗೆ ಸೇರಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆ ಮಾಡಿ ಮುಂದಕ್ಕೆ ಹೊರಡುವ ತನಕ ಅವರಲ್ಲೇ ಇರ್ರಿ. ಆ ಮನೆಯೊಳಕ್ಕೆ ಹೋಗುವಾಗ ಶುಭವಾಗಲಿ ಅನ್ನಿರಿ. ಆ ಮನೆಯವರು ಯೋಗ್ಯರಾಗಿದ್ದರೆ ನಿಮ್ಮ ಆಶೀರ್ವಾದವು ಅವರಿಗೆ ಆಗಲಿ; ಅಯೋಗ್ಯರಾಗಿದ್ದರೆ ನಿಮ್ಮ ಆಶೀರ್ವಾದವು ನಿಮಗೆ ಹಿಂದಕ್ಕೆ ಬರಲಿ. ಯಾರಾದರೂ ನಿಮ್ಮನ್ನು ಸೇರಿಸಿಕೊಳ್ಳದೆಯೂ ನಿಮ್ಮ ವಾಕ್ಯಗಳನ್ನು ಕೇಳದೆಯೂ ಹೋದರೆ ನೀವು ಆ ಮನೆಯನ್ನಾಗಲಿ ಆ ಊರನ್ನಾಗಲಿ ಬಿಟ್ಟು ಹೊರಡುವಾಗ ನಿಮ್ಮ ಕಾಲಿಗೆ ಹತ್ತಿದ ದೂಳನ್ನು ಝಾಡಿಸಿಬಿಡಿರಿ. ನ್ಯಾಯವಿಚಾರಣೆಯ ದಿವಸದಲ್ಲಿ ಅಂಥ ಊರಿನ ಗತಿಯು ಸೊದೋಮ್ ಗೊಮೋರಗಳ ಸೀಮೆಯ ಗತಿಗಿಂತಲೂ ಕಠಿಣವಾಗಿರುವದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
ನೋಡಿರಿ, ತೋಳಗಳ ನಡುವೆ ಕುರಿಗಳನ್ನು ಹೊಗಿಸಿದಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತೇನೆ. ಆದದರಿಂದ ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರ್ರಿ. ಇದಲ್ಲದೆ ಜನರ ವಿಷಯದಲ್ಲಿ ಎಚ್ಚರಿಕೆಯಾಗಿರ್ರಿ; ಅವರು ನಿಮ್ಮನ್ನು ನ್ಯಾಯ ವಿಚಾರಣೆಯ ಸಭೆಗಳಿಗೆ ಎಳಕೊಂಡು ಹೋಗುವರು; ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. ನನ್ನ ನಿವಿುತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದಕ್ಕೂ ಅರಸುಗಳ ಮುಂದಕ್ಕೂ ತೆಗೆದುಕೊಂಡು ಹೋಗುವರು. ಹೀಗೆ ಅವರಿಗೂ ಅನ್ಯಜನಗಳಿಗೂ ಸಾಕ್ಷಿಯಾಗುವದು. ಆದರೆ ಅವರು ನಿಮ್ಮನ್ನು ಒಪ್ಪಿಸಿಕೊಡುವಾಗ ಹೇಗೆ ಮಾತಾಡಬೇಕು, ಏನು ಹೇಳಬೇಕು ಎಂದು ಚಿಂತೆಮಾಡಬೇಡಿರಿ; ಆಡತಕ್ಕ ಮಾತು ಆ ಗಳಿಗೆಯಲ್ಲಿ ನಿಮಗೆ ಸೂಚನೆಯಾಗುವದು. ಮಾತಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮನೇ ನಿಮ್ಮ ಮುಖಾಂತರವಾಗಿ ಮಾತಾಡುವನು.ಯಾಕಂದರೆ ನೀವು ಹೇಳತಕ್ಕದ್ದನ್ನು ಪವಿತ್ರಾತ್ಮನು ಆ ಗಳಿಗೆಯಲ್ಲಿಯೇ ನಿಮಗೆ ಕಲಿಸಿಕೊಡುವನು ಅಂದನು.ಇದಲ್ಲದೆ ಅಣ್ಣನು ತಮ್ಮನನ್ನು, ತಂದೆಯು ಮಗನನ್ನು, ಮರಣಕ್ಕೆ ಒಪ್ಪಿಸುವರು; ಮಕ್ಕಳು ಹೆತ್ತವರ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು. ಮತ್ತು ನನ್ನ ಹೆಸರಿನ ನಿವಿುತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು. ಆದರೆ ಕಡೇವರೆಗೂ ತಾಳುವವನು ರಕ್ಷಣೆಹೊಂದುವನು. ಒಂದು ಊರಲ್ಲಿ ನಿಮ್ಮನ್ನು ಹಿಂಸೆಪಡಿಸಿದರೆ ಮತ್ತೊಂದು ಊರಿಗೆ ಓಡಿಹೋಗಿರಿ; ಮನುಷ್ಯಕುಮಾರನು ಬರುವಷ್ಟರಲ್ಲಿ ನೀವು ಇಸ್ರಾಯೇಲ್ ಜನರ ಊರುಗಳ ಸಂಚಾರವನ್ನು ತೀರಿಸಿರುವದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.ಗುರುವಿಗಿಂತ ಶಿಷ್ಯನು ದೊಡ್ಡವನಲ್ಲ, ಧಣಿಗಿಂತ ಆಳು ದೊಡ್ಡವನಲ್ಲ. ಗುರುವಿನಂತೆ ಆಗುವದು ಶಿಷ್ಯನಿಗೆ ಸಾಕು, ಧಣಿಯಂತೆ ಆಗುವದು ಆಳಿಗೆ ಸಾಕು. ಅವರು ಮನೆಯ ಯಜಮಾನನಿಗೆ ಬೆಲ್ಜೆಬೂಲನೆಂದು ಹೆಸರಿಟ್ಟ ಮೇಲೆ ಆತನ ಮನೆಯವರನ್ನು ಏನಂದಾರು? ಆದರೂ ಅವರಿಗೆ ಹೆದರಬೇಡಿರಿ.
ಇಷ್ಟರಲ್ಲಿ ಸಾವಿರಾರು ಜನರು ಒಬ್ಬರನ್ನೊಬ್ಬರು ತುಳಿಯುವಷ್ಟು ಕೂಡಿಬಂದಿರಲಾಗಿ ಆತನು ಮೊದಲು ತನ್ನ ಶಿಷ್ಯರಿಗೆ ಹೇಳುವದಕ್ಕೆ ತೊಡಗಿದ್ದೇನಂದರೆ - ಫರಿಸಾಯರ ಕಪಟವೆಂಬ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರ್ರಿ. ಮರೆಯಾಗಿರುವ ಯಾವದೂ ವ್ಯಕ್ತವಾಗದೆ ಇರುವದಿಲ್ಲ; ಹೊರಪಡದ ರಹಸ್ಯವೂ ಇಲ್ಲ. ಹೀಗಿರುವದರಿಂದ ನೀವು ಕತ್ತಲಲ್ಲಿ ಹೇಳಿದಂಥದು ಬೆಳಕಿನಲ್ಲಿ ಕೇಳಲಾಗುವದು; ಮತ್ತು ನೀವು ಕೋಣೆಗಳೊಳಗೆ ಕಿವಿಮಾತು ಆಡಿದ್ದು ಮಾಳಿಗೆಗಳ ಮೇಲೆ ಸಾರಲಾಗುವದು.ಮರೆಯಾಗಿರುವ ಯಾವದೂ ವ್ಯಕ್ತವಾಗದೆ ಇರುವದಿಲ್ಲ; ಹೊರಪಡದ ರಹಸ್ಯವೂ ಇಲ್ಲ. ನಾನು ಕತ್ತಲಲ್ಲಿ ನಿಮಗೆ ಹೇಳುವದನ್ನು ನೀವು ಬೆಳಕಿನಲ್ಲಿ ಹೇಳಿರಿ, ಮತ್ತು ಕಿವಿಯಲ್ಲಿ ಕೇಳಿದ್ದನ್ನು ಮಾಳಿಗೆಗಳ ಮೇಲೆ ನಿಂತು ಸಾರಿರಿ.
ನನ್ನ ಸ್ನೇಹಿತರಾದ ನಿಮಗೆ ಹೇಳುತ್ತೇನೆ - ದೇಹವನ್ನು ಕೊಂದು ಅದಕ್ಕಿಂತ ಹೆಚ್ಚಿನದೇನೂ ಮಾಡಲಾರದವರಿಗೆ ಹೆದರಬೇಡಿರಿ. ನೀವು ಯಾರಿಗೆ ಹೆದರಬೇಕೋ ನಿಮಗೆ ತಿಳಿಸುತ್ತೇನೆ; ಕೊಂದ ಮೇಲೆ ನರಕದೊಳಗೆ ಹಾಕುವ ಅಧಿಕಾರವುಳ್ಳವನಿಗೆ ಹೆದರಬೇಕು; ಹೌದು, ಆತನಿಗೇ ಹೆದರಬೇಕೆಂದು ನಿಮಗೆ ಹೇಳುತ್ತೇನೆ.ಇದಲ್ಲದೆ ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾರದವರಿಗೆ ಹೆದರಬೇಡಿರಿ, ಆತ್ಮ ದೇಹ ಎರಡನ್ನೂ ಕೂಡ ನರಕದಲ್ಲಿ ಹಾಕಿ ನಾಶಮಾಡಬಲ್ಲಾತನಿಗೇ ಹೆದರಿರಿ. ದುಡ್ಡಿಗೆ ಎರಡು ಗುಬ್ಬಿಗಳನ್ನು ಮಾರುವದುಂಟಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಒಂದಾದರೂ ನೆಲಕ್ಕೆ ಬೀಳದು. ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.ಹಾಗಾದರೆ ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನೆಂದು ಒಪ್ಪಿಕೊಳ್ಳುವನೋ, ನಾನು ಸಹ ಅವನನ್ನು ನನ್ನವನೆಂದು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು. ಆದರೆ ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನಲ್ಲವೆಂದು ಹೇಳುವನೋ ಅವನನ್ನು ನಾನು ಸಹ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನನ್ನವನಲ್ಲವೆಂದು ಹೇಳುವೆನು.
ಭೂಲೋಕದ ಮೇಲೆ ಸಮಾಧಾನ ಹುಟ್ಟಿಸುವದಕ್ಕೆ ಬಂದೆನೆಂದು ನೆನಸಬೇಡಿರಿ; ಸಮಾಧಾನವನ್ನು ಹುಟ್ಟಿಸುವದಕ್ಕೆ ನಾನು ಬಂದಿಲ್ಲ, ಖಡ್ಗವನ್ನು ಹಾಕುವದಕ್ಕೆ ಬಂದೆನು. ಹೇಗಂದರೆ ಮಗನಿಗೂ ತಂದೆಗೂ, ಮಗಳಿಗೂ ತಾಯಿಗೂ, ಸೊಸೆಗೂ ಅತ್ತೆಗೂ ಭೇದ ಹುಟ್ಟಿಸುವದಕ್ಕೆ ಬಂದೆನು. ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು. ತಂದೆಯ ಮೇಲಾಗಲಿ ತಾಯಿಯ ಮೇಲಾಗಲಿ ನನ್ನ ಮೇಲೆ ಇಡುವದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ; ಮಗನ ಮೇಲಾಗಲಿ ಮಗಳ ಮೇಲಾಗಲಿ ನನ್ನ ಮೇಲೆ ಇಡುವದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ. ಮತ್ತು ಯಾವನಾದರೂ ತನ್ನ ಶಿಲುಬೆಯನ್ನು ತೆಗೆದುಕೊಂಡು ನನ್ನ ಹಿಂದೆ ಬಂದ ಹೊರತು ನನಗೆ ಯೋಗ್ಯನಲ್ಲ. ತನ್ನ ಪ್ರಾಣವನ್ನು ಕಂಡು ಕೊಂಡವನು ಅದನ್ನು ಕಳಕೊಳ್ಳುವನು; ನನ್ನ ನಿವಿುತ್ತವಾಗಿ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಕಂಡುಕೊಳ್ಳುವನು.
ನಿಮ್ಮನ್ನು ಸೇರಿಸಿಕೊಳ್ಳುವವನು ನನ್ನನ್ನು ಸೇರಿಸಿಕೊಳ್ಳುವವನಾಗಿದ್ದಾನೆ; ನನ್ನನ್ನು ಸೇರಿಸಿಕೊಳ್ಳುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಳ್ಳುವವನಾಗಿದ್ದಾನೆ. ಪ್ರವಾದಿಯನ್ನು ಪ್ರವಾದಿಯೆಂದು ಸೇರಿಸಿಕೊಳ್ಳುವವನು ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು; ನೀತಿವಂತನನ್ನು ನೀತಿವಂತನೆಂದು ಸೇರಿಸಿಕೊಳ್ಳುವವನು ನೀತಿವಂತನಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು. ಮತ್ತು ಈ ಚಿಕ್ಕವರಲ್ಲಿ ಒಬ್ಬನಿಗೆ ಯೇಸುವಿನ ಶಿಷ್ಯನೆಂದು ಯಾವನಾದರೂ ಒಂದು ತಂಬಿಗೆ ತಣ್ಣೀರನ್ನಾದರೂ ಕುಡಿಯುವದಕ್ಕೆ ಕೊಟ್ಟರೆ ಬರತಕ್ಕ ಪ್ರತಿಫಲವು ಅವನಿಗೆ ತಪ್ಪುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು.
ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಹೇಳಬೇಕಾದದ್ದನ್ನು ಹೇಳಿ ಮುಗಿಸಿದ ಬಳಿಕ ಅಲ್ಲಿಯವರ ಊರುಗಳಲ್ಲಿ ಉಪದೇಶಮಾಡುವದಕ್ಕೂ ಸುವಾರ್ತೆಯನ್ನು ಸಾರುವದಕ್ಕೂ ಅಲ್ಲಿಂದ ಹೊರಟನು. ಅವರು ಹೊರಟುಹೋಗಿ ಎಲ್ಲೆಲ್ಲಿಯೂ ಸುವಾರ್ತೆಯನ್ನು ಸಾರುತ್ತಾ ರೋಗಿಗಳಿಗೆ ವಾಸಿಮಾಡುತ್ತಾ ಗ್ರಾಮಗಳಲ್ಲೆಲ್ಲಾ ಸಂಚರಿಸಿದರು. ದೇವರ ಕಡೆಗೆ ತಿರುಗಿಕೊಳ್ಳಬೇಕೆಂದು ಸಾರಿ ಅನೇಕ ದೆವ್ವಗಳನ್ನು ಬಿಡಿಸಿ ಅನೇಕ ರೋಗಿಗಳಿಗೆ ಎಣ್ಣೆಹಚ್ಚಿ ವಾಸಿಮಾಡಿದರು.ಇತ್ತಲಾಗಿ ಅಪೊಸ್ತಲರು ಆತನ ಬಳಿಗೆ ಕೂಡಿ ಬಂದು ತಾವು ಮಾಡಿದ್ದನ್ನೂ ಉಪದೇಶಿಸಿದ್ದನ್ನೂ ಎಲ್ಲಾ ಆತನಿಗೆ ತಿಳಿಸಲು ಆತನು ಅವರಿಗೆ –
ಅಧ್ಯಾಯ 23
ತರುವಾಯ ಯೇಸು ಗಲಿಲಾಯದ ಸಮುದ್ರದ ಆಚೆಗೆ ಹೋದನು; ಅದಕ್ಕೆ ತಿಬೇರಿಯದ ಸಮುದ್ರವೆಂತಲೂ ಹೇಳುತ್ತಾರೆ. ಬಹು ಜನರ ಗುಂಪು ರೋಗಿಗಳಲ್ಲಿ ಆತನು ನಡಿಸಿದ ಸೂಚಕಕಾರ್ಯಗಳನ್ನು ನೋಡಿದ್ದರಿಂದ ಆತನ ಹಿಂದೆ ಹೋಗುತ್ತಿತ್ತು.ಅವರು ಹೋಗುವದನ್ನು ಬಹು ಜನರು ಕಂಡು ಅವರ ಗುರುತನ್ನು ಹಿಡಿದು ಎಲ್ಲಾ ಊರುಗಳಿಂದ ಕಾಲುನಡಿಗೆಯಾಗಿ ಓಡಿ ಅವರಿಗಿಂತ ಮುಂಚೆ ಅಲ್ಲಿ ಸೇರಿದರು. ಆತನು ಹೊರಗೆ ಬಂದು ಬಹುಜನರ ಗುಂಪನ್ನು ಕಂಡು ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರಪಟ್ಟು ಅವರಿಗೆ ಬಹಳ ಉಪದೇಶ ಮಾಡುತ್ತಿದ್ದನು.ಆದರೆ ಜನರ ಗುಂಪು ಇದನ್ನು ತಿಳಿದು ಆತನ ಹಿಂದೆ ಹೋಗಲು ಆತನು ಅವರನ್ನು ಪ್ರೀತಿಯಿಂದ ಸ್ವೀಕರಿಸಿ ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತಾಡಿ ಕ್ಷೇಮಬೇಕಾದವರಿಗೆ ವಾಸಿಮಾಡಿದನು.ಸಂಜೆಯಾದಾಗ ಶಿಷ್ಯರು ಆತನ ಬಳಿಗೆ ಬಂದು - ಇದು ಅಡವಿ, ಈಗ ಹೊತ್ತು ಹೋಯಿತು; ಈ ಗುಂಪಿಗೆ ಅಪ್ಪಣೆ ಕೊಡು; ಅವರು ಹಳ್ಳಿಪಳ್ಳಿಗಳಿಗೆ ಹೋಗಿ ಆಹಾರಪದಾರ್ಥಗಳನ್ನು ಕೊಂಡುಕೊಳ್ಳಲಿ ಎಂದು ಹೇಳಲಾಗಿ ಯೇಸು - ಅವರು ಹೋಗುವದು ಅಗತ್ಯವಿಲ್ಲ; ನೀವೇ ಅವರಿಗೆ ಊಟಕ್ಕೆ ಕೊಡಿರಿ ಅಂದನು. ಯೇಸು ತಲೆಯೆತ್ತಿ ನೋಡಿದಾಗ ತನ್ನ ಬಳಿಯಲ್ಲಿ ಒಂದು ದೊಡ್ಡ ಗುಂಪನ್ನು ಕಂಡನು. ಇವರ ಊಟಕ್ಕೆ ನಾವು ಎಲ್ಲಿಂದ ರೊಟ್ಟಿ ಕೊಂಡುತರೋಣ? ಎಂದು ಫಿಲಿಪ್ಪನನ್ನು ಕೇಳಿದನು. ತಾನು ಮಾಡಬೇಕೆಂದಿದ್ದದ್ದು ತನಗೆ ತಿಳಿದಿದ್ದರೂ ಅವನನ್ನು ಪರೀಕ್ಷಿಸುವದಕ್ಕೆ ಈ ಮಾತನ್ನು ಹೇಳಿದನು. ಅದಕ್ಕೆ ಫಿಲಿಪ್ಪನು - ಒಬ್ಬೊಬ್ಬನಿಗೆ ಸ್ವಲ್ಪ ಸ್ವಲ್ಪ ಸಿಕ್ಕಬೇಕಾದರೆ ಇನ್ನೂರು ಹಣದ ರೊಟ್ಟಿಯಾದರೂ ಸಾಲದು ಅಂದನು. ನಾವು ಹೋಗಿ ಇನ್ನೂರು ಹಣಕ್ಕೆ ರೊಟ್ಟಿಯನ್ನು ಕೊಂಡುಕೊಂಡು ಅವರಿಗೆ ಊಟಕ್ಕೆ ಕೊಡಬೇಕೋ? ಎಂದು ಕೇಳಲು
ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿಕೊಂಡು ಬನ್ನಿ ಅಂದನು. ಆಗ ಆತನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್ಪೇತ್ರನ ತಮ್ಮನಾದ ಅಂದ್ರೆಯನು ಆತನಿಗೆ - ಇಲ್ಲಿರುವ ಒಬ್ಬ ಹುಡುಗನ ಬಳಿಯಲ್ಲಿ ಐದು ಜವೆಗೋದಿಯ ರೊಟ್ಟಿಗಳೂ ಎರಡು ಮೀನುಗಳೂ ಅವೆ; ಆದರೆ ಇಷ್ಟು ಜನರಿಗೆ ಅವು ಯಾತಕ್ಕಾದಾವು?ಆತನು - ಅವುಗಳನ್ನು ಇಲ್ಲಿ ನನಗೆ ತಂದುಕೊಡಿರಿ ಅಂದನು.ಅವರು ತಿಳುಕೊಂಡು ಬಂದು - ಐದು ರೊಟ್ಟಿ ಎರಡು ಮೀನು ಅಂದರು. ಆಗ ಆತನು ಅವರಿಗೆ - ಎಲ್ಲರೂ ಹಸುರುಹುಲ್ಲಿನ ಮೇಲೆ ಪಂಙ್ತಿಪಂಙ್ತಿಯಾಗಿ ಕೂತುಕೊಳ್ಳಲಿ ಎಂದು ಅಪ್ಪಣೆಕೊಟ್ಟಾಗಆಮೇಲೆ ಆತನು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಅವುಗಳನ್ನು ಆಶೀರ್ವದಿಸಿ ಮುರಿದು ಶಿಷ್ಯರ ಕೈಗೆ ಕೊಟ್ಟು - ಈ ಜನರ ಗುಂಪಿಗೆ ಹಂಚಿರಿ ಅಂದನು.ಅವರಿಗೆ ತೃಪ್ತಿಯಾದ ಮೇಲೆ ಯೇಸು ತನ್ನ ಶಿಷ್ಯರಿಗೆ - ವಿುಕ್ಕತುಂಡುಗಳನ್ನು ಕೂಡಿಸಿರಿ; ಇದರಲ್ಲಿ ಯಾವದೂ ವ್ಯರ್ಥವಾಗಬಾರದು ಎಂದು ಹೇಳಿದನು. ಅವರು ಕೂಡಿಸಲಾಗಿ ಆ ಐದು ಜವೆಗೋದಿಯ ರೊಟ್ಟಿಗಳಲ್ಲಿ ಜನರು ತಿಂದು ವಿುಕ್ಕತುಂಡುಗಳಿಂದ ಹನ್ನೆರಡು ಪುಟ್ಟಿ ತುಂಬಿದವು.ಊಟಮಾಡಿದವರು ಹೆಂಗಸರೂ ಮಕ್ಕಳೂ ಅಲ್ಲದೆ ಗಂಡಸರೇ ಹೆಚ್ಚು ಕಡಿಮೆ ಐದು ಸಾವಿರ ಮಂದಿ.ಆತನು ಮಾಡಿದ ಈ ಸೂಚಕಕಾರ್ಯವನ್ನು ಆ ಜನರು ನೋಡಿ - ಲೋಕಕ್ಕೆ ಬರಬೇಕಾದ ಪ್ರವಾದಿ ಈತನೇ ನಿಜ ಎಂದು ಹೇಳಿಕೊಂಡರು. ಆಗ ಯೇಸು - ಅವರು ಬಂದು ತನ್ನನ್ನು ಹಿಡುಕೊಂಡುಹೋಗಿ ಅರಸನನ್ನಾಗಿ ಮಾಡಬೇಕೆಂಬ ಯೋಚನೆಯಲ್ಲಿದ್ದಾರೆಂದು ತಿಳಿದುಕೊಂಡು
ಇದು ಆದ ಕೂಡಲೆ ಆತನು ತನ್ನ ಶಿಷ್ಯರಿಗೆ - ನಾನು ಈ ಜನರ ಗುಂಪುಗಳನ್ನು ಕಳುಹಿಸಿಬಿಡುವಷ್ಟರೊಳಗೆ ನೀವು ದೋಣಿಯನ್ನು ಹತ್ತಿ ಮುಂದಾಗಿ ಆಚೇದಡಕ್ಕೆ ಹೋಗಿರಿ ಎಂದು ಬಲವಂತ ಮಾಡಿದನು.ಆತನು ಜನರ ಗುಂಪುಗಳನ್ನು ಕಳುಹಿಸಿ ಬಿಟ್ಟ ಮೇಲೆ ಪ್ರಾರ್ಥನೆಮಾಡುವದಕ್ಕೆ ಏಕಾಂತವಾಗಿ ಬೆಟ್ಟವನ್ನು ಹತ್ತಿದನು. ಮತ್ತು ಹೊತ್ತು ಮುಳುಗಿದ ಮೇಲೆ ಒಬ್ಬನೇ ಅಲ್ಲಿ ಇದ್ದನು. ಅಷ್ಟರಲ್ಲಿ ದೋಣಿಯು ಭೂವಿುಗೆ ಬಹು ದೂರ ಹೋಗಿತ್ತು. ಮತ್ತು ಎದುರುಗಾಳಿ ಬೀಸುತ್ತಿದ್ದದರಿಂದ ತೆರೆಗಳ ಬಡಿತಕ್ಕೆ ಸಿಕ್ಕಿ ಒದ್ದಾಡುತ್ತಿತ್ತು.ಎದುರು ಗಾಳಿ ಬೀಸುತ್ತಿದ್ದದರಿಂದ ಶಿಷ್ಯರು ಹುಟ್ಟು ಹಾಕಿ ಹಾಕಿ ಒದ್ದಾಡುವದನ್ನು ಆತನು ಕಂಡು ಹೆಚ್ಚುಕಡಿಮೆ ರಾತ್ರಿಯ ನಾಲ್ಕನೆಯ ಜಾವದಲ್ಲಿ ಸಮುದ್ರದ ಮೇಲೆ ನಡೆದು ಅವರ ಕಡೆಗೆ ಬಂದು ಅವರನ್ನು ದಾಟಿ ಮುಂದಕ್ಕೆ ಹೋಗಬೇಕೆಂದಿದ್ದನು. ಸಮುದ್ರದ ಮೇಲೆ ನಡೆಯುವ ಆತನನ್ನು ಅವರು ಕಂಡು ಭೂತವೆಂದು ಭಾವಿಸಿ ಅಬ್ಬರಿಸಿ ಕೂಗಿದರು; ಅವರೆಲ್ಲರೂ ಆತನನ್ನು ನೋಡಿ ತತ್ತರಿಸಿದರು. ಆತನು ಕೂಡಲೆ ಅವರನ್ನು ಮಾತಾಡಿಸಿ ಅವರಿಗೆ - ಧೈರ್ಯವಾಗಿರಿ; ನಾನು; ಅಂಜಬೇಡಿರಿ ಎಂದು ಹೇಳಿದನು.
ಅದಕ್ಕೆ ಪೇತ್ರನು - ಸ್ವಾಮೀ, ನೀನೇಯಾದರೆ ನನಗೆ ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರುವದಕ್ಕೆ ಅಪ್ಪಣೆಕೊಡು ಅನ್ನಲು ಆತನು - ಬಾ ಅಂದನು. ಆಗ ಪೇತ್ರನು ಯೇಸುವಿನ ಬಳಿಗೆ ಹೋಗುವದಕ್ಕೆ ದೋಣಿಯಿಂದ ಇಳಿದು ನೀರಿನ ಮೇಲೆ ನಡೆದನು. ಆದರೆ ಗಾಳಿಯನ್ನು ನೋಡಿ ಭಯಪಟ್ಟು ಮುಣುಗುತ್ತಾ - ಸ್ವಾಮೀ, ನನ್ನನ್ನು ಕಾಪಾಡು ಎಂದು ಕೂಗಿಕೊಂಡನು. ಆ ಕ್ಷಣವೇ ಯೇಸು ಕೈ ಚಾಚಿ ಅವನನ್ನು ಹಿಡಿದು - ಅಲ್ಪ ವಿಶ್ವಾಸಿಯೇ, ಯಾಕೆ ಸಂದೇಹಪಟ್ಟೆ ಎಂದು ಹೇಳಿದನು. ತರುವಾಯ ಅವರು ದೋಣಿಯನ್ನು ಹತ್ತಿದ ಮೇಲೆ ಗಾಳಿ ನಿಂತು ಹೋಯಿತು. ಆಗ ದೋಣಿಯಲ್ಲಿದ್ದವರು - ನಿಜವಾಗಿ ನೀನು ದೇವಕುಮಾರನು ಎಂದು ಹೇಳಿ ಆತನಿಗೆ ನಮಸ್ಕರಿಸಿದರು.ಆಗ ಅವರು ತಮ್ಮೊಳಗೆ ಬಹಳವಾಗಿ ಬೆರಗಾದರು. ಯಾಕಂದರೆ ಅವರು ರೊಟ್ಟಿಯ ವಿಷಯವಾದ ಮಹತ್ಕಾರ್ಯವನ್ನು ಗ್ರಹಿಸಲಿಲ್ಲ; ಅವರ ಮನಸ್ಸು ಕಲ್ಲಾಗಿತ್ತು.ಅವರು ಸಮುದ್ರವನ್ನು ದಾಟಿ ಗೆನೆಜರೇತ್ ದೇಶದ ದಡಕ್ಕೆ ಮುಟ್ಟಿ ದೋಣಿಯನ್ನು ಕಟ್ಟಿದರು. ಅವರು ದೋಣಿಯಿಂದ ಇಳಿದ ಕೂಡಲೆ ಜನರು ಆತನ ಗುರುತನ್ನು ಹಿಡಿದು ಆ ಸೀಮೆಯಲ್ಲೆಲ್ಲಾ ಓಡಾಡುತ್ತಾ ಮೈಯಲ್ಲಿ ನೆಟ್ಟಗಿಲ್ಲದವರನ್ನು ದೋಲಿಯ ಮೇಲೆ ಹಾಕಿಕೊಂಡು ಆತನು ಎಲ್ಲೆಲ್ಲಿ ಇದ್ದಾನೆಂದು ಕೇಳಿದರೋ ಅಲ್ಲಲ್ಲಿಗೆ ತೆಗೆದುಕೊಂಡು ಹೋದರು. ಆತನು ಯಾವ ಗ್ರಾಮಗಳಿಗೂ ಯಾವ ಊರು ಹಳ್ಳಿಗಳಿಗೂ ಹೋದನೋ ಅಲ್ಲಿಯವರು ರೋಗಿಗಳನ್ನು ಪೇಟೆಗಳಲ್ಲಿ ಇಟ್ಟು - ನಿನ್ನ ಉಡುಪಿನ ಗೊಂಡೆಯನ್ನಾದರೂ ಮುಟ್ಟಗೊಡಿಸಬೇಕೆಂದು ಆತನನ್ನು ಬೇಡಿಕೊಂಡರು; ಆತನನ್ನು ಮುಟ್ಟಿದವರೆಲ್ಲರೂ ಸ್ವಸ್ಥರಾದರು.
ಅಧ್ಯಾಯ 24
ಮರುದಿವಸ ಸಮುದ್ರದ ಆಚೇಕಡೆಯಲ್ಲಿ ನಿಂತುಕೊಂಡಿದ್ದ ಜನರು ಯೇಸುವನ್ನು ಹುಡುಕುತ್ತಿದ್ದರು; ಇಲ್ಲಿ ಒಂದೇ ಹಡಗು ಇದ್ದ ಹೊರತು ಬೇರೆ ದೋಣಿಯು ಇರಲಿಲ್ಲವೆಂದೂ ಶಿಷ್ಯರು ಮಾತ್ರ ಹೊರಟು ಹೋದದ್ದಲ್ಲದೆ ಯೇಸು ತನ್ನ ಶಿಷ್ಯರ ಸಂಗಡ ಆ ಹಡಗನ್ನು ಹತ್ತಲಿಲ್ಲವೆಂದೂ ಅವರಿಗೆ ತಿಳಿದಿತ್ತು. ಆದರೆ ಅಷ್ಟರೊಳಗೆ ಬೇರೆ ದೋಣಿಗಳು ತಿಬೇರಿಯದಿಂದ ಹೊರಟು ಸ್ವಾವಿುಯು ಸ್ತೋತ್ರಮಾಡಿ ಜನರಿಗೆ ರೊಟ್ಟೀ ಊಟಮಾಡಿಸಿದ ಸ್ಥಳದ ಸಮೀಪಕ್ಕೆ ಬಂದಿದ್ದವು. ಹೀಗಿರಲಾಗಿ ಯೇಸು ಇಲ್ಲಿ ಇಲ್ಲ, ಆತನ ಶಿಷ್ಯರೂ ಇಲ್ಲ ಎಂದು ಆ ಜನರು ನೋಡಿ ತಾವೇ ಆ ಸಣ್ಣ ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌವಿುಗೆ ಬಂದರು. ಮತ್ತು ಸಮುದ್ರದ ಆಚೇಕಡೆಯಲ್ಲಿ ಆತನನ್ನು ಕಂಡುಕೊಂಡು - ಗುರುವೇ, ಯಾವಾಗ ಇಲ್ಲಿಗೆ ಬರೋಣವಾಯಿತು? ಎಂದು ಕೇಳಿದ್ದಕ್ಕೆ, ಯೇಸು ಅವರಿಗೆ - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ನನ್ನನ್ನು ಹುಡುಕುವದು ಸೂಚಕಕಾರ್ಯಗಳನ್ನು ನೋಡಿದ್ದರಿಂದಲ್ಲ, ಆ ರೊಟ್ಟಿ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದರಿಂದಲೇ. ದುಡಿಯಿರಿ; ಕೆಟ್ಟುಹೋಗುವ ಆಹಾರಕ್ಕಾಗಿ ದುಡಿಯಬೇಡಿರಿ, ನಿತ್ಯಜೀವಕ್ಕೆ ಉಳಿಯುವ ಆಹಾರಕ್ಕಾಗಿ ದುಡಿಯಿರಿ; ಇಂಥ ಆಹಾರವನ್ನು ಮನುಷ್ಯಕುಮಾರನು ನಿಮಗೆ ಕೊಡುವನು; ಇದಕ್ಕಾಗಿ ತಂದೆಯಾದ ದೇವರು ಆತನನ್ನು ನೇವಿುಸಿ ಮುದ್ರೆಹಾಕಿದ್ದಾನೆ ಅಂದನು. ಅವರು - ದೇವರಿಗೆ ಮೆಚ್ಚಿಕೆಯಾದ ಕೆಲಸಗಳನ್ನು ನಾವು ನಡಿಸಬೇಕಾದರೆ ಏನು ಮಾಡಬೇಕೆಂದು ಆತನನ್ನು ಕೇಳಿದ್ದಕ್ಕೆ ಯೇಸು - ದೇವರು ಮೆಚ್ಚುವ ಕೆಲಸ ಯಾವದಂದರೆ ಆತನು ಕಳುಹಿಸಿಕೊಟ್ಟವನನ್ನು ನೀವು ನಂಬುವದೇ ಅಂದನು. ಅವರು ಆತನನ್ನು - ಹಾಗಾದರೆ ನಾವು ನೋಡಿ ನಿನ್ನ ಮಾತನ್ನು ನಂಬುವಂತೆ ಏನು ಸೂಚಕಕಾರ್ಯ ಮಾಡುತ್ತೀ? ನಮ್ಮ ಹಿರಿಯರು ಅಡವಿಯಲ್ಲಿ ಮನ್ನಾ ತಿಂದರು; ಪರಲೋಕದಿಂದ ರೊಟ್ಟಿಯನ್ನು ಅವರಿಗೆ ತಿನ್ನುವದಕ್ಕೆ ಕೊಟ್ಟನು ಎಂದು ಶಾಸ್ತ್ರದಲ್ಲಿ ಬರೆದದೆಯಲ್ಲಾ, ನೀನು ಏನು ಕೆಲಸ ನಡಿಸುತ್ತೀ? ಎಂದು ಕೇಳಿದಾಗ
ಯೇಸು ಅವರಿಗೆ - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಮೋಶೆಯು ನಿಮಗೆ ಪರಲೋಕದಿಂದ ರೊಟ್ಟಿ ಕೊಟ್ಟವನಲ್ಲ; ನನ್ನ ತಂದೆಯು ಪರಲೋಕದಿಂದ ಬರುವ ನಿಜವಾದ ರೊಟ್ಟಿಯನ್ನು ನಿಮಗೆ ಕೊಡುತ್ತಾನೆ. ದೇವರು ಕೊಡುವ ಆ ರೊಟ್ಟಿ ಯಾವದಂದರೆ ಪರಲೋಕದಿಂದ ಇಳಿದು ಬಂದು ಲೋಕಕ್ಕೆ ಜೀವವನ್ನು ಉಂಟುಮಾಡುವಂಥದೇ ಎಂದು ಹೇಳಿದನು. ಆಗ ಅವರು - ಸ್ವಾಮೀ, ಆ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು ಅನ್ನಲು ಯೇಸು ಅವರಿಗೆ - ಜೀವಕೊಡುವ ರೊಟ್ಟಿ ನಾನೇ; ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವದಿಲ್ಲ, ನನ್ನನ್ನು ನಂಬುವವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ. ಆದರೆ ನೀವು ನನ್ನನ್ನು ನೋಡಿದ್ದರೂ ನಂಬದೆ ಇದ್ದೀರಿ ಎಂದು ನಿಮಗೆ ಹೇಳಿದೆನಲ್ಲವೇ. ತಂದೆಯು ನನಗೆ ಕೊಡುವಂಥವರೆಲ್ಲರು ನನ್ನ ಬಳಿಗೆ ಬರುವರು; ಮತ್ತು ನನ್ನ ಬಳಿಗೆ ಬರುವವನನ್ನು ನಾನು ತಳ್ಳಿಬಿಡುವದೇ ಇಲ್ಲ. ನನ್ನ ಚಿತ್ತದಂತೆ ನಡೆಯುವದಕ್ಕಾಗಿ ನಾನು ಬಂದಿಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವದಕ್ಕೆ ಪರಲೋಕದಿಂದ ಬಂದೆನು. ನನ್ನನ್ನು ಕಳುಹಿಸಿದಾತನ ಚಿತ್ತವು ಏನಂದರೆ ಆತನು ನನಗೆ ಕೊಟ್ಟವರಲ್ಲಿ ಒಬ್ಬನನ್ನೂ ನಾನು ಕೆಡಗೊಡಿಸದೆ ಅವನನ್ನು ಕಡೇದಿನದಲ್ಲಿ ಎಬ್ಬಿಸಬೇಕೆಂಬದೇ. ಮಗನನ್ನು ನೋಡಿ ಆತನನ್ನು ನಂಬುವ ಪ್ರತಿಯೊಬ್ಬನಿಗೆ ನಿತ್ಯ ಜೀವವು ಸಿಕ್ಕಬೇಕೆಂಬದೇ ನನ್ನ ತಂದೆಯ ಚಿತ್ತವಾಗಿದೆ; ಮತ್ತು ನಾನು ಕಡೇದಿನದಲ್ಲಿ ಅವನನ್ನು ಎಬ್ಬಿಸುವೆನು ಎಂದು ಹೇಳಿದನು.
ಆತನು - ಪರಲೋಕದಿಂದ ಇಳಿದು ಬಂದ ರೊಟ್ಟಿ ನಾನೇ ಎಂದು ಹೇಳಿದ್ದಕ್ಕೆ ಯೆಹೂದ್ಯರು ಆತನ ವಿಷಯವಾಗಿ ಗುಣುಗುಟ್ಟಿ - ಇವನು ಯೋಸೇಫನ ಮಗನಾದ ಯೇಸು ಅಲ್ಲವೇ. ಇವನ ತಂದೆತಾಯಿಗಳನ್ನು ನಾವು ಬಲ್ಲೆವಲ್ಲವೇ. ಈಗ ಇವನು ಪರಲೋಕದಿಂದ ಇಳಿದುಬಂದಿದ್ದೇನೆಂದು ಹೇಳುವದು ಹೇಗೆ? ಅಂದರು. ಅದಕ್ಕೆ ಯೇಸು ಅವರಿಗೆ - ನಿಮ್ಮ ನಿಮ್ಮೊಳಗೆ ಗುಣುಗುಟ್ಟಬೇಡಿರಿ. ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು; ಮತ್ತು ನಾನು ಅವನನ್ನು ಕಡೇದಿನದಲ್ಲಿ ಎಬ್ಬಿಸುವೆನು. ಅವರೆಲ್ಲರು ದೇವರಿಂದ ಶಿಕ್ಷಿತರಾಗಿರುವರು ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದದೆ; ತಂದೆಯಿಂದ ಕೇಳಿ ಕಲಿತವರೆಲ್ಲರು ನನ್ನ ಬಳಿಗೆ ಬರುತ್ತಾರೆ. ಯಾವನಾದರೂ ತಂದೆಯನ್ನು ನೋಡಿದ್ದಾನೆಂದು ತಿಳಿಯಬೇಡಿರಿ; ದೇವರ ಬಳಿಯಿಂದ ಬಂದವನೊಬ್ಬನೇ ತಂದೆಯನ್ನು ನೋಡಿದ್ದಾನೆ. ನಂಬಿರುವವನು ನಿತ್ಯಜೀವವನ್ನು ಹೊಂದಿದ್ದಾನೆಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ. ಜೀವ ಕೊಡುವ ರೊಟ್ಟಿ ನಾನೇ. ನಿಮ್ಮ ಹಿರಿಯರು ಅಡವಿಯಲ್ಲಿ ಮನ್ನಾ ತಿಂದರೂ ಸತ್ತುಹೋದರು; ಪರಲೋಕದಿಂದ ಇಳಿದುಬರುವ ರೊಟ್ಟಿ ಎಂಥದಂದರೆ ಅದನ್ನು ತಿಂದವನು ಸಾಯುವದಿಲ್ಲ. ಪರಲೋಕದಿಂದ ಇಳಿದುಬರುವ ಜೀವವುಳ್ಳ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾಕಾಲ ಬದುಕುವನು. ಮತ್ತು ನಾನು ಕೊಡುವ ರೊಟ್ಟಿ ನನ್ನ ಮಾಂಸವೇ; ಅದನ್ನು ಲೋಕದ ಜೀವಕ್ಕೋಸ್ಕರ ಕೊಡುವೆನು ಎಂದು ಹೇಳಿದನು.
ಆಗ ಯೆಹೂದ್ಯರು - ಇವನು ತನ್ನ ಮಾಂಸವನ್ನು ನಮಗೆ ಹೇಗೆ ತಿನ್ನುವದಕ್ಕೆ ಕೊಟ್ಟಾನು ಎಂದು ತಮ್ಮತಮ್ಮೊಳಗೆ ವಾಗ್ವಾದಮಾಡುತ್ತಿರಲು ಯೇಸು ಅವರಿಗೆ - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿನ್ನದೆ ಅವನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮೊಳಗೆ ಜೀವವಿಲ್ಲ; ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ; ಮತ್ತು ನಾನು ಅವನನ್ನು ಕಡೇದಿನದಲ್ಲಿ ಎಬ್ಬಿಸುವೆನು. ಯಾಕಂದರೆ ನನ್ನ ಮಾಂಸವೇ ನಿಜವಾದ ಆಹಾರ, ನನ್ನ ರಕ್ತವೇ ನಿಜವಾದ ಪಾನ; ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ಇರುತ್ತಾನೆ; ನಾನು ಅವನಲ್ಲಿ ಇರುತ್ತೇನೆ. ಜೀವ ಸ್ವರೂಪನಾದ ತಂದೆಯು ನನ್ನನ್ನು ಕಳುಹಿಸಿಕೊಟ್ಟಿರಲಾಗಿ ನಾನು ತಂದೆಯಿಂದ ಜೀವಿಸುತ್ತೇನೆ; ಅದರಂತೆ ನನ್ನನ್ನು ತಿನ್ನುವವನೇ ನನ್ನಿಂದ ಜೀವಿಸುವನು. ಪರಲೋಕದಿಂದ ಇಳಿದುಬಂದ ರೊಟ್ಟಿ ಇದೇ. ನಿಮ್ಮ ಹಿರಿಯರು ಮನ್ನಾ ತಿಂದರೂ ಸತ್ತರು; ಇದು ಹಾಗಲ್ಲ; ಈ ರೊಟ್ಟಿಯನ್ನು ತಿನ್ನುವವನು ಸದಾಕಾಲ ಜೀವಿಸುವನು ಎಂದು ಹೇಳಿದನು. ಕಪೆರ್ನೌವಿುನ ಸಭಾಮಂದಿರದಲ್ಲಿ ಉಪದೇಶ ಮಾಡುವಾಗ ಇದನ್ನು ಹೇಳಿದನು.
ಆತನ ಶಿಷ್ಯರಲ್ಲಿ ಅನೇಕರು ಇದನ್ನು ಕೇಳಿ - ಇದು ಕಠಿನವಾದ ಮಾತು, ಇದನ್ನು ಯಾರು ಕೇಳಾರು? ಅಂದುಕೊಂಡರು. ಯೇಸು ತನ್ನ ಶಿಷ್ಯರು ಇದಕ್ಕೆ ಗುಣುಗುಟ್ಟುತ್ತಾರೆಂದು ತನ್ನಲ್ಲಿ ತಿಳುಕೊಂಡು ಅವರಿಗೆ - ಈ ಮಾತಿನಿಂದ ನಿಮಗೆ ಬೇಸರವಾಯಿತೋ? ಹಾಗಾದರೆ ಮನುಷ್ಯಕುಮಾರನು ತಾನು ಮೊದಲು ಇದ್ದಲ್ಲಿಗೆ ಏರಿಹೋಗುವದನ್ನು ನೀವು ನೋಡಿದರೆ ಏನನ್ನುವಿರಿ? ಬದುಕಿಸುವಂಥದು ಆತ್ಮವೇ; ಮಾಂಸವು ಯಾವದಕ್ಕೂ ಬರುವದಿಲ್ಲ. ನಾನು ನಿಮಗೆ ಹೇಳಿರುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಅವೆ. ಆದರೆ ನಿಮ್ಮಲ್ಲಿ ಕೆಲವರು ನಂಬದವರಾಗಿದ್ದಾರೆ ಅಂದನು. ನಂಬದವರು ಇಂಥವರು, ತನ್ನನ್ನು ಹಿಡುಕೊಡುವವನು ಇಂಥವನು ಎಂಬದು ಯೇಸುವಿಗೆ ಮೊದಲಿನಿಂದ ತಿಳಿದಿತ್ತು. ಮತ್ತು ಆತನು - ತಂದೆಯ ಅನುಗ್ರಹವಿಲ್ಲದೆ ಯಾರೂ ನನ್ನ ಬಳಿಗೆ ಬರಲಾರರು ಎಂಬದನ್ನು ನಾನು ನಿಮಗೆ ಅದರ ದೆಸೆಯಿಂದಲೇ ಹೇಳಿದೆನು ಅಂದನು.ಅಂದಿನಿಂದ ಆತನ ಶಿಷ್ಯರಲ್ಲಿ ಅನೇಕರು ಹಿಂಜರಿದು ಆತನ ಕೂಡ ಸಂಚಾರಮಾಡುವದನ್ನು ಬಿಟ್ಟರು. ಯೇಸು ಇದನ್ನು ನೋಡಿ ತನ್ನ ಹನ್ನೆರಡು ಮಂದಿಯನ್ನು - ನೀವು ಸಹ ಹೋಗಬೇಕೆಂದಿದ್ದೀರಾ? ಎಂದು ಕೇಳಿದ್ದಕ್ಕೆ ಸೀಮೋನ್ಪೇತ್ರನು - ಸ್ವಾಮೀ, ನಿನ್ನನ್ನು ಬಿಟ್ಟು ನಾವು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು; ನೀನು ದೇವರು ಪ್ರತಿಷ್ಠಿಸಿದವನೇ ಎಂದು ನಾವು ನಂಬಿದ್ದೇವೆ ಮತ್ತು ತಿಳಿದಿದ್ದೇವೆ ಅಂದನು. ಅದಕ್ಕೆ ಯೇಸು - ಹನ್ನೆರಡು ಮಂದಿಯಾದ ನಿಮ್ಮನ್ನು ನಾನು ಆರಿಸಿ ತೆಗೆದುಕೊಂಡೆನಲ್ಲವೋ? ನಿಮ್ಮಲ್ಲಿಯೂ ಒಬ್ಬನು ಸೈತಾನನ ಮಗನಾಗಿದ್ದಾನೆ ಅಂದನು. ಈ ಮಾತಿನಿಂದ ಆತನು ಸೀಮೋನನ ಮಗನಾದ ಇಸ್ಕರಿಯೋತ ಯೂದನನ್ನು ಸೂಚಿಸಿದನು. ಇವನು ಆ ಹನ್ನೆರಡು ಮಂದಿಯಲ್ಲಿ ಒಬ್ಬನಾಗಿದ್ದು ಮುಂದೆ ಆತನನ್ನು ಹಿಡುಕೊಡುವವನಾದನು.
ಅಧ್ಯಾಯ 25
ಈ ಸಂಗತಿಗಳಾದ ಮೇಲೆ ಯೇಸು ಗಲಿಲಾಯದಲ್ಲಿ ಸಂಚಾರಮಾಡುತ್ತಿದ್ದನು; ಯೆಹೂದ್ಯರು ಆತನನ್ನು ಕೊಲ್ಲುವ ಪ್ರಯತ್ನದಲ್ಲಿದ್ದದರಿಂದ ಆತನಿಗೆ ಯೂದಾಯದಲ್ಲಿ ಸಂಚಾರಮಾಡುವ ಮನಸ್ಸಿರಲಿಲ್ಲ. ಪರ್ಣಶಾಲೆಗಳ ಹಬ್ಬವೆಂಬ ಯೆಹೂದ್ಯರದೊಂದು ಜಾತ್ರೆಯು ಸಮೀಪವಾದಾಗ ಆತನ ತಮ್ಮಂದಿರು ಆತನಿಗೆ - ನೀನು ಮಾಡುವ ಕಾರ್ಯಗಳನ್ನು ನಿನ್ನ ಶಿಷ್ಯರು ಸಹ ನೋಡುವಂತೆ ಇಲ್ಲಿಂದ ಹೊರಟು ಯೂದಾಯಕ್ಕೆ ಹೋಗು; ಪ್ರಸಿದ್ಧಿಗೆ ಬರಬೇಕೆಂದಿರುವ ಯಾವನಾದರೂ ತಾನು ಮಾಡುವದನ್ನು ಮರೆಯಲ್ಲಿ ಮಾಡುವದಿಲ್ಲವಲ್ಲಾ; ನೀನು ಇಂಥ ಕಾರ್ಯಗಳನ್ನು ಮಾಡುವವನಾದ್ದರಿಂದ ಲೋಕಕ್ಕೆ ತಿಳಿಯಪಡಿಸಿಕೋ ಎಂದು ಹೇಳಿದರು. ಯಾಕಂದರೆ ಆತನ ಸಹೋದರರು ಸಹ ಆತನನ್ನು ನಂಬದೆ ಇದ್ದರು. ಯೇಸು ಅವರಿಗೆ - ನನ್ನ ಸಮಯವು ಇನ್ನೂ ಬಂದಿಲ್ಲ; ನಿಮ್ಮ ಸಮಯವು ಯಾವಾಗಲೂ ಸಿದ್ಧವಾಗಿದೆ. ಲೋಕವು ನಿಮ್ಮನ್ನು ಹಗೆಮಾಡಲಾರದು; ಆದರೆ ನಾನು ಅದರ ಕ್ರಿಯೆಗಳು ಕೆಟ್ಟವುಗಳೆಂದು ಸಾಕ್ಷಿಹೇಳುವದರಿಂದ ನನ್ನನ್ನು ಹಗೆಮಾಡುತ್ತದೆ. ನೀವೇ ಜಾತ್ರೆಗೆ ಹೋಗಿರಿ; ನನ್ನ ಸಮಯವು ಇನ್ನೂ ಒದಗದೆ ಇರುವದರಿಂದ ನಾನು ಈ ಜಾತ್ರೆಗೆ ಈಗ ಹೋಗುವದಿಲ್ಲವೆಂದು ಹೇಳಿದನು. ಇದನ್ನು ಹೇಳಿ ಗಲಿಲಾಯದಲ್ಲಿಯೇ ನಿಂತನು.
ಆದರೆ ಆತನ ಸಹೋದರರು ಜಾತ್ರೆಗೆ ಹೋದ ಮೇಲೆ ಆತನು ಸಹ ಹೋದನು; ಜನರಿಗೆ ಕಾಣುವಂತೆ ಹೋಗದೆ ಮರೆಯಾಗಿ ಹೋದನು. ಜಾತ್ರೆಯಲ್ಲಿ ಯೆಹೂದ್ಯರು - ಅವನು ಎಲ್ಲಿದ್ದಾನೆಂದು ಆತನನ್ನು ಹುಡುಕುತ್ತಿದ್ದರು. ಮತ್ತು ಜನರ ಗುಂಪುಗಳಲ್ಲಿ ಆತನ ವಿಷಯವಾಗಿ ಬಹಳ ಗುಜುಗುಜು ಮಾತು ನಡೆಯುತ್ತಿತ್ತು. ಕೆಲವರು - ಆತನು ಒಳ್ಳೆಯವನು ಅಂದರು; ಇನ್ನು ಕೆಲವರು - ಅಲ್ಲ, ಜನರನ್ನು ತಪ್ಪಾದ ಮಾರ್ಗಕ್ಕೆ ಎಳೆಯುತ್ತಾನೆ ಅಂದರು. ಆದರೂ ಯೆಹೂದ್ಯರ ಭಯದಿಂದ ಯಾರೂ ಆತನ ವಿಷಯದಲ್ಲಿ ಧಾರಾಳವಾಗಿ ಮಾತಾಡಲಿಲ್ಲ.ಜಾತ್ರೆಯ ಮಧ್ಯಕಾಲದಲ್ಲಿ ಯೇಸು ದೇವಾಲಯಕ್ಕೆ ಹೋಗಿ ಬೋಧಿಸುತ್ತಿದ್ದನು. ಯೆಹೂದ್ಯರು ಅದಕ್ಕೆ ಆಶ್ಚರ್ಯಪಟ್ಟು - ವಿದ್ಯಾಭ್ಯಾಸ ಮಾಡದಿರುವ ಈತನಿಗೆ ಶಾಸ್ತ್ರಗಳು ತಿಳಿದಿರುವದು ಹೇಗೆ ಎಂದು ಹೇಳುತ್ತಿದ್ದರು. ಅದಕ್ಕೆ ಯೇಸು - ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು. ಆತನ ಚಿತ್ತದಂತೆ ನಡೆಯುವದಕ್ಕೆ ಯಾರಿಗೆ ಮನಸ್ಸದೆಯೋ ಅವರಿಗೆ ಈ ಬೋಧನೆಯು ದೇವರಿಂದ ಬಂದದ್ದೋ ನಾನೇ ಕಲ್ಪಿಸಿ ಹೇಳಿದ್ದೋ ಗೊತ್ತಾಗುವದು. ಕಲ್ಪಿಸಿ ಹೇಳುವವನು ತನಗೆ ಮಾನ ಬರಬೇಕೆಂದು ಅಪೇಕ್ಷಿಸುತ್ತಾನೆ; ತನ್ನನ್ನು ಕಳುಹಿಸಿದವನಿಗೆ ಮಾನಬರಬೇಕೆಂದು ಅಪೇಕ್ಷಿಸುವವನು ಸತ್ಯವಂತನು, ಅಧರ್ಮವು ಅವನಲ್ಲಿ ಇಲ್ಲ. ಮೋಶೆಯು ನಿಮಗೆ ಧರ್ಮಶಾಸ್ತ್ರವನ್ನು ಕೊಟ್ಟಿದ್ದರೂ ನಿಮ್ಮಲ್ಲಿ ಒಬ್ಬನಾದರೂ ಧರ್ಮಶಾಸ್ತ್ರದಂತೆ ನಡೆಯುವದಿಲ್ಲವಲ್ಲಾ; ಯಾಕೆ ನನ್ನನ್ನು ಕೊಲ್ಲುವದಕ್ಕೆ ನೋಡುತ್ತೀರಿ? ಎಂದು ಹೇಳಿದನು. ಅದಕ್ಕೆ ಆ ಜನರು - ನಿನಗೆ ದೆವ್ವ ಹಿಡಿದದೆ; ಯಾರು ನಿನ್ನನ್ನು ಕೊಲ್ಲುವದಕ್ಕೆ ನೋಡುತ್ತಾರೆ? ಅಂದರು. ಯೇಸು ಅವರಿಗೆ - ಒಂದೇ ಕ್ರಿಯೆಯನ್ನು ಮಾಡಿದೆನು; ಅದಕ್ಕೆ ನೀವೆಲ್ಲರು ಬೆರಗಾಗಿದ್ದೀರಿ. ಮೋಶೆಯು ನಿಮಗೆ ಸುನ್ನತಿಯೆಂಬ ಸಂಸ್ಕಾರವನ್ನು ನೇವಿುಸಿದನು. ಅದು ಮೋಶೆಯಿಂದ ಬಂದದ್ದೆಂದು ನಾನು ಹೇಳುವದಿಲ್ಲ, ಮೂಲಪುರುಷರ ಕಾಲದಿಂದ ಬಂದದ್ದು. ಮತ್ತು ಆ ಸುನ್ನತಿಯನ್ನು ಸಬ್ಬತ್ದಿನದಲ್ಲಿಯೂ ಮಾಡುತ್ತೀರಿ. ಮೋಶೆಯ ನೇಮವನ್ನು ಮೀರಬಾರದೆಂದು ಒಬ್ಬನು ಸಬ್ಬತ್ದಿನದಲ್ಲಿ ಸುನ್ನತಿಮಾಡಿಸಿಕೊಳ್ಳುವದಾದರೆ ನಾನು ಸಬ್ಬತ್ದಿನದಲ್ಲಿ ಒಬ್ಬ ಮನುಷ್ಯನನ್ನು ಸಂಪೂರ್ಣವಾಗಿ ಸ್ವಸ್ಥಮಾಡಿದ್ದಕ್ಕೆ ನನ್ನ ಮೇಲೆ ಕೋಪಗೊಳ್ಳುತ್ತೀರೋ? ಕಣ್ಣಿಗೆ ತೋರಿದ್ದರ ಮೇಲೆ ತೀರ್ಪುಮಾಡಬೇಡಿರಿ; ನ್ಯಾಯವಾದ ತೀರ್ಪುಮಾಡಿರಿ ಎಂದು ಹೇಳಿದನು.
ಯೆರೂಸಲೇವಿುನವರಲ್ಲಿ ಕೆಲವರು - ಇವನನ್ನಲ್ಲವೇ ಅವರು ಕೊಲ್ಲಬೇಕೆಂದಿರುವದು? ನೋಡಿರಿ, ಇವನು ಧಾರಾಳವಾಗಿ ಮಾತಾಡುತ್ತಾನೆ, ಅವರು ಅವನಿಗೆ ಏನೂ ಹೇಳುವದಿಲ್ಲ. ಹಿರೀಸಭೆಯವರು ಇವನೇ ಬರಬೇಕಾದ ಕ್ರಿಸ್ತನೆಂದು ನಿಶ್ಚಯಮಾಡಿಕೊಂಡಿದ್ದಾರೇನೋ? ಆದರೂ ಇವನು ಎಲ್ಲಿಯವನೆಂದು ಬಲ್ಲೆವು; ಕ್ರಿಸ್ತನು ಬರುವಾಗ ಅವನು ಎಲ್ಲಿಯವನೋ ಒಬ್ಬರಿಗೂ ತಿಳಿಯುವದಿಲ್ಲವೆಂದು ಮಾತಾಡಿಕೊಳ್ಳುತ್ತಿದ್ದರು. ಯೇಸು ಇದನ್ನು ತಿಳಿದು ದೇವಾಲಯದಲ್ಲಿ ಉಪದೇಶ ಮಾಡುವಾಗ - ನನ್ನನ್ನು ಬಲ್ಲಿರಿ, ನಾನು ಎಲ್ಲಿಯವನೆಂದು ಬಲ್ಲಿರಿ ನಿಜವೇ. ಆದರೂ ನಾನು ನನ್ನಷ್ಟಕ್ಕೆ ಬಂದವನಲ್ಲ, ನನ್ನನ್ನು ಕಳುಹಿಸಿದಾತನು ನಿಜವಾದವನು; ನೀವು ಆತನನ್ನು ಅರಿತವರಲ್ಲ. ನಾನು ಆತನನ್ನು ಬಲ್ಲೆನು; ಆತನ ಕಡೆಯಿಂದ ಬಂದವನಾದದರಿಂದಲೂ ನನ್ನನ್ನು ಆತನೇ ಕಳುಹಿಸಿದ್ದರಿಂದಲೂ ಆತನನ್ನು ಬಲ್ಲೆನೆಂದು ಕೂಗಿ ಹೇಳಿದನು. ಇದಕ್ಕಾಗಿ ಆತನನ್ನು ಹಿಡಿಯುವದಕ್ಕೆ ನೋಡುತ್ತಿದ್ದರು; ಆದರೆ ಆತನ ಕಾಲ ಇನ್ನೂ ಬಾರದೆ ಇದ್ದಕಾರಣ ಯಾರೂ ಆತನ ಮೇಲೆ ಕೈಹಾಕಲಿಲ್ಲ. ಜನರಲ್ಲಿ ಅನೇಕರು ಆತನನ್ನು ನಂಬಿ - ಕ್ರಿಸ್ತನು ಬಂದಾಗ ಈತನು ಮಾಡಿದ್ದಕ್ಕಿಂತ ಹೆಚ್ಚು ಸೂಚಕಕಾರ್ಯಗಳನ್ನು ಮಾಡಾನೋ ಎಂದು ಹೇಳಿದರು.ಜನರು ಆತನ ವಿಷಯವಾಗಿ ಗುಜುಗುಜು ಆಡಿದ ಈ ಮಾತುಗಳನ್ನು ಫರಿಸಾಯರು ಕೇಳಲು ಮಹಾಯಾಜಕರೂ ಫರಿಸಾಯರೂ ಆತನನ್ನು ಹಿಡಿಯುವದಕ್ಕೆ ಓಲೇಕಾರರನ್ನು ಕಳುಹಿಸಿದರು.
ಆಗ ಯೇಸು - ಇನ್ನು ಸ್ವಲ್ಪಕಾಲ ನಾನು ನಿಮ್ಮಲ್ಲಿ ಇದ್ದು ಆಮೇಲೆ ನನ್ನನ್ನು ಕಳುಹಿಸಿದಾತನ ಬಳಿಗೆ ಹೊರಟು ಹೋಗುತ್ತೇನೆ. ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಂಡುಕೊಳ್ಳದೆ ಹೋಗುವಿರಿ, ನಾನು ಇರುವಲ್ಲಿಗೆ ನೀವು ಬರಲಾರಿರಿ ಅಂದನು. ಅದಕ್ಕೆ ಯೆಹೂದ್ಯರು - ಇವನು ನಮಗೆ ಸಿಕ್ಕದ ಹಾಗೆ ಎಲ್ಲಿ ಹೋಗಬೇಕೆಂದಿರುತ್ತಾನೆ? ಗ್ರೀಕರೊಳಗೆ ಚದರಿಕೊಂಡಿರುವ ನಮ್ಮವರ ಬಳಿಗೆ ಹೋಗಿ ಆ ಗ್ರೀಕರಿಗೆ ಉಪದೇಶ ಮಾಡಬೇಕೆಂದಿರುತ್ತಾನೋ? ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಂಡುಕೊಳ್ಳದೆ ಹೋಗುವಿರಿ, ನಾನು ಇರುವಲ್ಲಿಗೆ ನೀವು ಬರಲಾರಿರಿ ಎಂದು ಅವನು ಹೇಳಿದ ಮಾತು ಏನಿದ್ದೀತು? ಎಂಬದಾಗಿ ತಮ್ಮತಮ್ಮೊಳಗೆ ಮಾತಾಡಿಕೊಂಡರು.ಆ ಜಾತ್ರೆಯ ಮಹಾದಿವಸವಾದ ಕಡೇ ದಿನದಲ್ಲಿ ಯೇಸು ನಿಂತುಕೊಂಡು - ಯಾವನಿಗಾದರೂ ನೀರಡಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. ನನ್ನನ್ನು ನಂಬಿದವನ ಹೊಟ್ಟೆಯೊಳಗಿಂದ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಜೀವಕರವಾದ ನೀರಿನ ಹೊಳೆಗಳು ಹರಿಯುವವು ಎಂದು ಕೂಗಿ ಹೇಳಿದನು. ಇದನ್ನು ಯೇಸು ತನ್ನನ್ನು ನಂಬಿದವರು ಹೊಂದಲಿರುವ ಪವಿತ್ರಾತ್ಮವರವನ್ನು ಕುರಿತು ಹೇಳಿದನು; ಆತನು ಇನ್ನೂ ತನ್ನ ಮಹಿಮೆಯ ಪದವಿಯನ್ನು ಹೊಂದದೆ ಇದ್ದಕಾರಣ ಪವಿತ್ರಾತ್ಮವರವು ಇನ್ನೂ ಬಂದಿದ್ದಿಲ್ಲ.
ಜನರಲ್ಲಿ ಕೆಲವರು ಆ ಮಾತುಗಳನ್ನು ಕೇಳಿ - ನಿಜವಾಗಿ ಈತನು ಬರಬೇಕಾದ ಪ್ರವಾದಿ ಅಂದರು; ಮತ್ತು ಕೆಲವರು - ಈತನು ಬರಬೇಕಾದ ಕ್ರಿಸ್ತನು ಅಂದರು. ಇನ್ನೂ ಕೆಲವರು - ಕ್ರಿಸ್ತನು ಗಲಿಲಾಯದಿಂದ ಬರುವದು ಹೇಗೆ? ದಾವೀದನ ಸಂತಾನದಿಂದಲೂ ದಾವೀದನು ಇದ್ದ ಬೇತ್ಲೆಹೇಮೆಂಬ ಗ್ರಾಮದಿಂದಲೂ ಕ್ರಿಸ್ತನು ಬರುವನು ಎಂಬದಾಗಿ ಶಾಸ್ತ್ರದಲ್ಲಿ ಉಂಟಲ್ಲವೇ ಎಂದು ಹೇಳಿದರು. ಹೀಗೆ ಜನರಲ್ಲಿ ಆತನನ್ನು ಕುರಿತು ಭೇದ ಉಂಟಾಯಿತು. ಅವರಲ್ಲಿ ಕೆಲವರು ಆತನನ್ನು ಹಿಡಿಯಬೇಕೆಂದಿದ್ದರೂ ಒಬ್ಬರೂ ಆತನ ಮೇಲೆ ಕೈಹಾಕಲಿಲ್ಲ.ಬಳಿಕ ಆ ಓಲೇಕಾರರು ಮಹಾಯಾಜಕರ ಮತ್ತು ಫರಿಸಾಯರ ಬಳಿಗೆ ಬಂದಾಗ ಇವರು - ನೀವು ಯಾಕೆ ಅವನನ್ನು ಹಿಡತರಲಿಲ್ಲ? ಎಂದು ಅವರನ್ನು ಕೇಳಿದ್ದಕ್ಕೆ ಆ ಓಲೇಕಾರರು - ಈ ಮನುಷ್ಯನು ಮಾತಾಡುವ ರೀತಿಯಲ್ಲಿ ಯಾರೂ ಎಂದೂ ಮಾತಾಡಿದ್ದಿಲ್ಲ ಎಂದು ಉತ್ತರಕೊಟ್ಟರು. ಅದಕ್ಕೆ ಫರಿಸಾಯರು - ನೀವೂ ಮರುಳಾದಿರಾ? ಹಿರೀಸಭೆಯವರಲ್ಲಿಯಾಗಲಿ ಫರಿಸಾಯರಲ್ಲಿಯಾಗಲಿ ಯಾರಾದರೂ ಅವನನ್ನು ನಂಬಿದ್ದಾರೋ? ಧರ್ಮಶಾಸ್ತ್ರವನ್ನರಿಯದಂಥ ಈ ಹಿಂಡು ಶಾಪಗ್ರಸ್ತವಾದದ್ದೇ ಅಂದರು. ಮುಂಚೆ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಅವರಲ್ಲಿ ಒಬ್ಬನಾಗಿದ್ದನು; ಅವನು ಅವರಿಗೆ - ನಮ್ಮ ಧರ್ಮಶಾಸ್ತ್ರವು ಮೊದಲು ಒಬ್ಬನನ್ನು ವಿಚಾರಿಸಿ ಅವನು ಮಾಡುವದೇನೆಂದು ತಿಳುಕೊಳ್ಳದೆ ಅವನ ವಿಷಯವಾಗಿ ತೀರ್ಪುಮಾಡುವದುಂಟೇ? ಎಂದು ಹೇಳಿದ್ದಕ್ಕೆ ಅವರು - ನೀನೂ ಗಲಿಲಾಯದವನೋ? ಗಲಿಲಾಯದಲ್ಲಿ ಪ್ರವಾದಿ ಹುಟ್ಟುವದೇ ಇಲ್ಲ, ವಿಚಾರಿಸಿ ನೋಡು ಅಂದರು.
ಅಧ್ಯಾಯ 26
ಯೇಸು ಎಣ್ಣೇಮರಗಳ ಗುಡ್ಡಕ್ಕೆ ಹೋದನು. ಬೆಳಿಗ್ಗೆ ಆತನು ತಿರಿಗಿ ದೇವಾಲಯಕ್ಕೆ ಬಂದಾಗ ಜನರೆಲ್ಲರು ಆತನ ಬಳಿಗೆ ಬಂದರು; ಆತನು ಕೂತುಕೊಂಡು ಅವರಿಗೆ ಉಪದೇಶಮಾಡುತ್ತಿರುವಲ್ಲಿ ಶಾಸ್ತ್ರಿಗಳೂ ಫರಿಸಾಯರೂ ವ್ಯಭಿಚಾರದಲ್ಲಿ ಸಿಕ್ಕಿದ ಒಬ್ಬ ಹೆಂಗಸನ್ನು ಆತನ ಬಳಿಗೆ ತಂದು ಆಕೆಯನ್ನು ನಡುವೆ ನಿಲ್ಲಿಸಿ - ಬೋಧಕನೇ, ಈ ಹೆಂಗಸು ವ್ಯಭಿಚಾರ ಮಾಡುತ್ತಿರುವಾಗಲೇ ಕೈಗೆ ಸಿಕ್ಕಿದಳು. ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯು ಧರ್ಮಶಾಸ್ತ್ರದಲ್ಲಿ ನಮಗೆ ಅಪ್ಪಣೆಕೊಟ್ಟಿದ್ದಾನೆ; ಈಕೆಯ ವಿಷಯದಲ್ಲಿ ನೀನು ಏನು ಹೇಳುತ್ತೀ ಎಂದು ಆತನನ್ನು ಕೇಳಿದರು. ಆತನ ಮೇಲೆ ತಪ್ಪುಹೊರಿಸುವದಕ್ಕೆ ಏನಾದರೂ ಒಂದು ನಿವಿುತ್ತ ಬೇಕಾಗಿದ್ದದರಿಂದ ಈತನು ಏನನ್ನುತ್ತಾನೋ ನೋಡೋಣ ಎಂದು ಹಾಗೆ ಕೇಳಿದರು. ಆದರೆ ಯೇಸು ಬೊಗ್ಗಿಕೊಂಡು ಬೆರಳಿನಿಂದ ನೆಲದ ಮೇಲೆ ಬರೆಯುತ್ತಾ ಇದ್ದನು. ಅವರು ಆತನನ್ನು ಬಿಡದೆ ಕೇಳುತ್ತಿರುವಾಗ ಆತನು ನೆಟ್ಟಗೆ ಕೂತುಕೊಂಡು ಅವರಿಗೆ - ನಿಮ್ಮಲ್ಲಿ ಪಾಪವಿಲ್ಲದವನು ಯಾರೋ ಅವನೇ ಮೊದಲು ಆಕೆಯ ಮೇಲೆ ಕಲ್ಲನ್ನು ಹಾಕಲಿ ಎಂದು ಹೇಳಿ ತಿರಿಗಿ ಬೊಗ್ಗಿಕೊಂಡು ನೆಲದ ಮೇಲೆ ಬರೆಯುತ್ತಾ ಇದ್ದನು. ಆ ಮಾತನ್ನು ಕೇಳಿ ತಾವೇ ಪಾಪಿಗಳೆಂದು ಮನಸ್ಸಿನಲ್ಲಿ ತಿಳುಕೊಂಡು ಹಿರಿಯರು ಮೊದಲುಗೊಂಡು ಕಿರಿಯರವರೆಗೂ ಒಬ್ಬರ ಹಿಂದೊಬ್ಬರು ಹೊರಗೆ ಹೋದರು; ಯೇಸು ಒಬ್ಬನೇ ಉಳಿದನು, ಮತ್ತು ನಡುವೆ ನಿಂತಿದ್ದ ಹೆಂಗಸು ಅಲ್ಲೇ ಇದ್ದಳು. ಯೇಸು ನೆಟ್ಟಗೆ ಕೂತುಕೊಂಡು ಆ ಸ್ತ್ರೀಯನ್ನೇ ಹೊರತು ಯಾರನ್ನೂ ನೋಡದೆ ಆಕೆಗೆ - ಅಮ್ಮಾ, ನಿನ್ನ ಮೇಲೆ ತಪ್ಪುಹೊರಿಸುವವರು ಎಲ್ಲಿದ್ದಾರೆ? ನಿನಗೆ ಯಾರೂ ಶಿಕ್ಷೆಯನ್ನು ವಿಧಿಸಲಿಲ್ಲವೋ? ಅಂದನು. ಯಾರೂ ವಿಧಿಸಲಿಲ್ಲ, ಸ್ವಾಮೀ, ಅಂದಳು. ಯೇಸು ಆಕೆಗೆ - ನಾನೂ ನಿನಗೆ ಶಿಕ್ಷೆ ವಿಧಿಸುವದಿಲ್ಲ; ಹೋಗು, ಇನ್ನು ಮೇಲೆ ಪಾಪಮಾಡಬೇಡ ಎಂದು ಹೇಳಿದನು.]
ಯೇಸು ತಿರಿಗಿ ಅವರ ಸಂಗಡ ಮಾತಾಡಲಾರಂಭಿಸಿ - ನಾನೇ ಲೋಕಕ್ಕೆ ಬೆಳಕು; ನನ್ನನ್ನು ಅನುಸರಿಸುವವನು ಕತ್ತಲೆಯಲ್ಲಿ ನಡೆಯದೆ ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು ಎಂದು ಹೇಳಿದನು. ಇದನ್ನು ಕೇಳಿ ಫರಿಸಾಯರು ಆತನಿಗೆ - ನಿನ್ನ ವಿಷಯವಾಗಿ ನೀನೇ ಸಾಕ್ಷಿಹೇಳಿಕೊಳ್ಳುತ್ತೀ; ನಿನ್ನ ಸಾಕ್ಷಿ ನಿಜವಾಗದು ಎಂದು ಹೇಳಲು ಯೇಸು ಅವರಿಗೆ - ನಾನು ಎಲ್ಲಿಂದ ಬಂದವನಾಗಿಯೂ ಎಲ್ಲಿಗೆ ಹೋಗುವವನಾಗಿಯೂ ಇದ್ದೇನೆಂಬದು ನನಗೆ ಗೊತ್ತಿರುವದರಿಂದ ನನ್ನ ವಿಷಯವಾಗಿ ನಾನೇ ಸಾಕ್ಷಿಹೇಳಿಕೊಂಡರೂ ನನ್ನ ಸಾಕ್ಷಿ ನಿಜವಾಗಿರುವದು. ನೀವಾದರೋ ನಾನು ಎಲ್ಲಿಂದ ಬಂದವನು, ಎಲ್ಲಿಗೆ ಹೋಗುವವನು ಎಂಬದನ್ನು ತಿಳಿಯದವರು. ನೀವು ಹೊರಗಿನ ತೋರಿಕೆಯ ಪ್ರಕಾರ ತೀರ್ಪುಮಾಡುವವರು; ನಾನು ಯಾವನಿಗೂ ತೀರ್ಪುಮಾಡುವದಿಲ್ಲ. ತೀರ್ಪುಮಾಡಿದರೂ ನನ್ನ ತೀರ್ಪು ಸರಿಯಾದದ್ದೇ; ಯಾಕಂದರೆ ನಾನು ಒಂಟಿಗನಲ್ಲ; ನಾನೂ ನನ್ನನ್ನು ಕಳುಹಿಸಿಕೊಟ್ಟ ತಂದೆಯೂ ಇಬ್ಬರು ಇದ್ದೇವೆ. ಇಬ್ಬರ ಸಾಕ್ಷಿ ನಿಜವಾಗುತ್ತದೆಂಬದಾಗಿ ನಿಮ್ಮ ಧರ್ಮಶಾಸ್ತ್ರದಲ್ಲೇ ಬರೆದದೆ. ನನ್ನನ್ನು ಕುರಿತು ನಾನು ಸಾಕ್ಷಿ ಹೇಳುವವನಾಗಿದ್ದೇನೆ, ಅದಲ್ಲದೆ ನನ್ನನ್ನು ಕಳುಹಿಸಿದ ತಂದೆಯೂ ನನ್ನ ವಿಷಯವಾಗಿ ಸಾಕ್ಷಿಹೇಳುತ್ತಾನೆ ಅಂದನು. ಅವರು - ನಿನ್ನ ತಂದೆ ಎಲ್ಲಿದ್ದಾನೆ? ಎಂದು ಕೇಳಲು ಯೇಸು - ನೀವು ನನ್ನನ್ನೂ ತಿಳಿದಿಲ್ಲ, ನನ್ನ ತಂದೆಯನ್ನೂ ತಿಳಿದಿಲ್ಲ; ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನೂ ತಿಳಿದಿರುವಿರಿ ಅಂದನು. ಯೇಸು ದೇವಾಲಯದೊಳಗೆ ಕಾಣಿಕೆಯ ಪೆಟ್ಟಿಗೆಗಳು ಇರುವ ಅಂಗಳದಲ್ಲಿ ಉಪದೇಶಮಾಡುತ್ತಿರುವಾಗ ಈ ಮಾತುಗಳನ್ನು ಹೇಳಿದನು. ಆತನ ಕಾಲ ಇನ್ನೂ ಬಾರದೆ ಇದ್ದ ಕಾರಣ ಯಾರೂ ಆತನನ್ನು ಹಿಡಿಯಲಿಲ್ಲ.
ಯೇಸು ತಿರಿಗಿ ಅವರಿಗೆ - ನಾನು ಹೋಗುತ್ತೇನೆ; ನೀವು ನನ್ನನ್ನು ಹುಡುಕುವಿರಿ; ಮತ್ತು ನಿಮ್ಮ ಪಾಪದಲ್ಲೇ ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ ಅಂದನು. ಆ ಮಾತಿಗೆ ಯೆಹೂದ್ಯರು - ನಾನು ಹೋಗುವಲ್ಲಿಗೆ ನೀವು ಬರಲಾರಿರೆಂದು ಹೇಳುತ್ತಾನಲ್ಲಾ? ಇವನು ತನ್ನನ್ನು ತಾನೇ ಕೊಂದುಕೊಳ್ಳಬೇಕೆಂದಿದ್ದಾನೋ ಎಂದು ಮಾತಾಡಿಕೊಂಡರು. ಆತನು ಅವರಿಗೆ - ನೀವು ಕೆಳಗಿನವರು, ನಾನು ಮೇಲಿನವನು; ನೀವು ಈ ಲೋಕದವರು, ನಾನು ಈ ಲೋಕದವನಲ್ಲ. ಆದದರಿಂದ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರೆಂದು ನಿಮಗೆ ಹೇಳಿದೆನು; ನನ್ನನ್ನು ಆತನೆಂದು ನೀವು ನಂಬದೆ ಹೋದರೆ ನಿಮ್ಮ ಪಾಪಗಳಲ್ಲಿಯೇ ಸಾಯುವಿರೆಂದು ಹೇಳಿದನು. ಆಗ ಅವರು - ನೀನು ಯಾರು? ಅಂದಾಗ ಯೇಸು - ನಾನು ನಿಮಗೆ ಹೇಳಿದಂಥದೇ. ನಿಮ್ಮ ವಿಷಯವಾಗಿ ಮಾತಾಡುವದಕ್ಕೂ ನಿಮ್ಮ ಮೇಲೆ ತೀರ್ಪುಮಾಡುವದಕ್ಕೂ ಅನೇಕ ಸಂಗತಿಗಳು ನನಗುಂಟು; ಆದರೆ ನನ್ನನ್ನು ಕಳುಹಿಸಿಕೊಟ್ಟಾತನು ಸತ್ಯವಂತನು; ಆತನಿಂದ ನಾನು ಕೇಳಿದವುಗಳನ್ನೇ ಲೋಕಕ್ಕೆ ಹೇಳುತ್ತೇನೆ ಅಂದನು. ಆತನು ತಂದೆಯನ್ನು ಸೂಚಿಸಿ ಇದನ್ನು ಹೇಳಿದನೆಂದು ಅವರಿಗೆ ಗೊತ್ತಾಗಲಿಲ್ಲ. ಹೀಗಿರಲಾಗಿ ಯೇಸು - ನೀವು ಮನುಷ್ಯಕುಮಾರನನ್ನು ಎತ್ತರದಲ್ಲಿಟ್ಟಾಗ ಇವನೇ ಆತನೆಂದೂ ತನ್ನಷ್ಟಕ್ಕೆ ತಾನೇ ಏನೂ ಮಾಡದೆ ತಂದೆಯು ತನಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾತಾಡಿದನೆಂದೂ ನನ್ನ ವಿಷಯವಾಗಿ ನಿಮಗೆ ತಿಳಿಯುವದು. ನನ್ನನ್ನು ಕಳುಹಿಸಿಕೊಟ್ಟಾತನು ನನ್ನ ಸಂಗಡ ಇದ್ದಾನೆ, ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುವದರಿಂದ ಆತನು ನನ್ನನ್ನು ಒಂಟಿಗನಾಗಿ ಬಿಡಲಿಲ್ಲ ಅಂದನು.
ಆತನು ಈ ಮಾತುಗಳನ್ನಾಡುವಾಗ ಅನೇಕರು ಆತನಲ್ಲಿ ನಂಬಿಕೆಯಿಟ್ಟರು. ಆಗ ಯೇಸು ತನ್ನನ್ನು ನಂಬಿದ ಯೆಹೂದ್ಯರಿಗೆ - ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿದ್ದು ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು ಎಂದು ಹೇಳಿದನು. ಅದಕ್ಕವರು - ನಾವು ಅಬ್ರಹಾಮನ ಸಂತಾನದವರು; ನಾವು ಯಾರಿಗೂ ಎಂದೂ ದಾಸರಾಗಿಲ್ಲ; ನಿಮಗೆ ಬಿಡುಗಡೆಯಾಗುವದೆಂದು ನೀನು ಹೇಳುವದು ಹೇಗೆ? ಅಂದರು. ಅದಕ್ಕೆ ಯೇಸು - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಪಾಪಮಾಡುವವರೆಲ್ಲರು ಪಾಪಕ್ಕೆ ದಾಸರಾಗಿದ್ದಾರೆ. ದಾಸನು ಮನೆಯಲ್ಲಿ ಶಾಶ್ವತವಾಗಿ ಇರುವದಿಲ್ಲ; ಮಗನು ಶಾಶ್ವತವಾಗಿ ಇರುವನು; ಆದದರಿಂದ ಮಗನು ನಿಮ್ಮನ್ನು ಬಿಡುಗಡೆಮಾಡಿದರೆ ನಿಜವಾಗಿ ನಿಮಗೆ ಬಿಡುಗಡೆಯಾಗುವದು. ನೀವು ಅಬ್ರಹಾಮನ ಸಂತಾನದವರು ನಿಜ; ಆದರೂ ನನ್ನ ವಾಕ್ಯವು ನಿಮ್ಮಲ್ಲಿ ಸಾಗದೆ ಇರುವ ಕಾರಣ ನನ್ನನ್ನು ಕೊಲ್ಲುವದಕ್ಕೆ ನೋಡುತ್ತೀರಿ. ನಾನು ತಂದೆಯ ಬಳಿಯಲ್ಲಿ ನೋಡಿದ್ದನ್ನು ಹೇಳುತ್ತೇನೆ; ನೀವೂ ತಂದೆಯಿಂದ ಕೇಳಿದ್ದನ್ನು ಮಾಡಿರಿ ಅಂದನು.
ಅದಕ್ಕವರು - ನಮ್ಮ ತಂದೆಯು ಅಬ್ರಹಾಮನೇ ಅಂದಾಗ ಯೇಸು ಅವರಿಗೆ - ನೀವು ಅಬ್ರಹಾಮನ ಮಕ್ಕಳಾಗಿದ್ದರೆ ಅಬ್ರಹಾಮನು ಮಾಡಿದಂಥ ಕೃತ್ಯಗಳನ್ನು ಮಾಡುತ್ತಿದ್ದಿರಿ. ನೀವು ಹಾಗೆ ಮಾಡದೆ ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದವನಾದ ನನ್ನನ್ನು ಕೊಲ್ಲುವದಕ್ಕೆ ನೋಡುತ್ತೀರಿ; ಅಬ್ರಹಾಮನು ಹೀಗೆ ಮಾಡಲಿಲ್ಲ. ನೀವು ನಿಮ್ಮ ತಂದೆಯ ಕೃತ್ಯಗಳನ್ನು ಮಾಡುತ್ತೀರಿ ಅಂದನು. ಅದಕ್ಕವರು - ನಾವು ಹಾದರಕ್ಕೆ ಹುಟ್ಟಿದವರಲ್ಲ; ನಮಗೆ ಒಬ್ಬನೇ ತಂದೆ, ಆತನು ದೇವರೇ ಅಂದರು. ಯೇಸು ಅವರಿಗೆ - ದೇವರು ನಿಮ್ಮ ತಂದೆಯಾಗಿದ್ದರೆ, ನನ್ನನ್ನು ಪ್ರೀತಿಸುತ್ತಿದ್ದಿರಿ; ಯಾಕಂದರೆ ನಾನು ದೇವರಿಂದಲೇ ಹೊರಟು ಲೋಕಕ್ಕೆ ಬಂದವನಾಗಿದ್ದೇನೆ. ನನ್ನಷ್ಟಕ್ಕೆ ನಾನೇ ಬರಲಿಲ್ಲ; ಆತನೇ ನನ್ನನ್ನು ಕಳುಹಿಸಿದ್ದಾನೆ. ನೀವು ನನ್ನ ಮಾತನ್ನು ಗ್ರಹಿಸದೆ ಇರುವದಕ್ಕೆ ಕಾರಣವೇನು? ನನ್ನ ಬೋಧನೆಗೆ ಕಿವಿಗೊಡಲಾರದೆ ಇರುವದೇ ಕಾರಣ. ಸೈತಾನನು ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಫೆಗಳನ್ನೇ ನಡಿಸಬೇಕೆಂದಿದ್ದೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನಿಲ್ಲಲಿಲ್ಲ; ಅವನಲ್ಲಿ ಸತ್ಯವು ಇಲ್ಲವೇ ಇಲ್ಲ. ಅವನು ಸುಳ್ಳಾಡುವಾಗ ಸ್ವಭಾವಾನುಸಾರವಾಗಿ ಆಡುತ್ತಾನೆ; ಅವನು ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ ಆಗಿದ್ದಾನೆ. ನಾನು ಸತ್ಯವನ್ನು ಹೇಳುವವನಾದದರಿಂದ ನೀವು ನನ್ನನ್ನು ನಂಬುವದಿಲ್ಲ. ನನ್ನಲ್ಲಿ ಪಾಪವನ್ನು ತೋರಿಸಿಕೊಡುವವರು ನಿಮ್ಮೊಳಗೆ ಯಾರಿದ್ದಾರೆ? ನಾನು ಸತ್ಯವನ್ನು ಹೇಳುವವನಾಗಿರುವಲ್ಲಿ ನೀವು ನನ್ನ ಮಾತನ್ನು ನಂಬದೆ ಇರುವದು ಯಾಕೆ? ದೇವರಿಂದ ಹುಟ್ಟಿದವನು ದೇವರ ಮಾತುಗಳನ್ನು ಕೇಳುತ್ತಾನೆ. ನೀವು ದೇವರಿಂದ ಹುಟ್ಟದ ಕಾರಣ ಅವುಗಳನ್ನು ಕೇಳುವದಿಲ್ಲ ಎಂದು ಹೇಳಿದನು.
ಅದಕ್ಕೆ ಯೆಹೂದ್ಯರು - ನೀನು ಸಮಾರ್ಯನೂ ದೆವ್ವಹಿಡಿದವನೂ ಆಗಿದ್ದೀ ಎಂದು ನಾವು ಹೇಳುವದು ಸರಿಯಲ್ಲವೋ ಎಂದು ಹೇಳಲು ಯೇಸು - ನಾನು ದೆವ್ವಹಿಡಿದವನಲ್ಲ, ನನ್ನ ತಂದೆಯನ್ನು ಸನ್ಮಾನಿಸುವವನಾಗಿದ್ದೇನೆ; ಆದರೂ ನೀವು ನನ್ನನ್ನು ಅವಮಾನಪಡಿಸುತ್ತೀರಿ. ನನಗೆ ಮಾನಬರಬೇಕೆಂದು ನಾನು ಅಪೇಕ್ಷಿಸುವದಿಲ್ಲ; ನನಗೆ ಮಾನಬರಬೇಕೆಂದು ಅಪೇಕ್ಷಿಸುವವನು ಒಬ್ಬನಿದ್ದಾನೆ; ಆತನೇ ನ್ಯಾಯತೀರಿಸುವನು. ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಯಾವನಾದರೂ ನನ್ನ ವಾಕ್ಯವನ್ನು ಕೈಕೊಂಡು ನಡೆದರೆ ಅವನು ಎಂದಿಗೂ ಸಾವನ್ನು ಕಾಣುವದಿಲ್ಲ ಅಂದನು. ಅದಕ್ಕೆ ಯೆಹೂದ್ಯರು - ನೀನು ದೆವ್ವಹಿಡಿದವನೆಂದು ಈಗ ನಮಗೆ ತಿಳಿಯಿತು; ಅಬ್ರಹಾಮನು ಸತ್ತನು. ಪ್ರವಾದಿಗಳೂ ಸತ್ತರು; ಆದರೆ ನೀನು - ನನ್ನ ವಾಕ್ಯವನ್ನು ಕೈಕೊಂಡು ನಡೆಯುವವನು ಎಂದಿಗೂ ಸಾವನ್ನು ಅನುಭವಿಸುವದಿಲ್ಲವೆಂದು ಹೇಳುತ್ತೀ. ನಮ್ಮ ಮೂಲಪುರುಷನಾದ ಅಬ್ರಹಾಮನಿಗಿಂತ ನೀನು ದೊಡ್ಡವನೋ? ಅವನೂ ಸತ್ತುಹೋದನು, ಪ್ರವಾದಿಗಳೂ ಸತ್ತುಹೋದರು; ನಿನ್ನನ್ನು ಯಾರೆಂತ ಮಾಡಿಕೊಳ್ಳುತ್ತೀ ಎಂದು ಹೇಳಲು ಯೇಸು - ನನ್ನನ್ನು ನಾನೇ ಮಹಿಮೆಪಡಿಸಿಕೊಂಡರೆ ನನ್ನ ಮಹಿಮೆ ಹುರುಳಿಲ್ಲದ್ದು; ನನ್ನನ್ನು ಮಹಿಮೆಪಡಿಸುವವನು ನನ್ನ ತಂದೆಯೇ. ನೀವು ಆತನನ್ನು ನಮ್ಮ ದೇವರು ಅನ್ನುತ್ತೀರಿ; ಆದರೂ ನೀವು ಆತನನ್ನು ತಿಳಿಯದೆ ಇದ್ದೀರಿ. ನಾನಂತು ಆತನನ್ನು ಬಲ್ಲೆನು; ಆತನನ್ನು ಅರಿಯೆನೆಂದು ಹೇಳಿದರೆ ನಿಮ್ಮ ಹಾಗೆ ಸುಳ್ಳುಗಾರನಾಗುವೆನು; ಆದರೆ ಆತನನ್ನು ತಿಳಿದಿದ್ದೇನೆ, ಆತನ ವಾಕ್ಯವನ್ನು ಕೈಕೊಂಡು ನಡೆಯುತ್ತೇನೆ. ನಿಮ್ಮ ಮೂಲಪುರುಷನಾದ ಅಬ್ರಹಾಮನು ನನ್ನ ದಿನವನ್ನು ತಾನು ನೋಡೇನೆಂದು ಉಲ್ಲಾಸಪಟ್ಟನು; ಅದನ್ನು ನೋಡಿ ಸಂತೋಷಗೊಂಡನು ಅಂದನು. ಅದಕ್ಕೆ ಯೆಹೂದ್ಯರು - ನಿನಗೆ ಇನ್ನೂ ಐವತ್ತು ವರುಷವಾಗಿಲ್ಲ; ಅಬ್ರಹಾಮನನ್ನು ನೋಡಿದ್ದೀಯಾ? ಅಂದಾಗ ಯೇಸು - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಅಬ್ರಹಾಮನು ಹುಟ್ಟುವದಕ್ಕಿಂತ ಮುಂಚಿನಿಂದಲೂ ನಾನು ಇದ್ದೇನೆ ಅಂದನು. ಅವರು ಈ ಮಾತನ್ನು ಕೇಳಿ ಆತನನ್ನು ಕೊಲ್ಲುವದಕ್ಕಾಗಿ ಕಲ್ಲು ತಕ್ಕೊಳ್ಳಲು ಯೇಸು ಅಡಗಿಕೊಂಡು ದೇವಾಲಯದೊಳಗಿಂದ ಹೊರಟುಹೋದನು.
ಅಧ್ಯಾಯ 27
ಯೇಸು ಹಾದುಹೋಗುತ್ತಿರುವಾಗ ಒಬ್ಬ ಹುಟ್ಟುಕುರುಡನನ್ನು ಕಂಡನು. ಆತನ ಶಿಷ್ಯರು - ಗುರುವೇ, ಇವನು ಕುರುಡನಾಗಿ ಹುಟ್ಟಿರುವದಕ್ಕೆ ಯಾರು ಪಾಪಮಾಡಿದರು? ಇವನೋ? ಇವನ ತಂದೆತಾಯಿಗಳೋ? ಎಂದು ಆತನನ್ನು ಕೇಳಿದ್ದಕ್ಕೆ ಯೇಸು - ಇವನೂ ಪಾಪಮಾಡಲಿಲ್ಲ, ಇವನ ತಂದೆತಾಯಿಗಳೂ ಪಾಪಮಾಡಲಿಲ್ಲ; ದೇವರ ಕ್ರಿಯೆಗಳು ಇವನಲ್ಲಿ ತೋರಿಬರುವದಕ್ಕೆ ಇದಾಯಿತು. ನನ್ನನ್ನು ಕಳುಹಿಸಿದಾತನ ಕಾರ್ಯಗಳನ್ನು ನಾವು ಹಗಲಿರುವಾಗಲೇ ನಡಿಸಬೇಕು. ರಾತ್ರಿ ಬರುತ್ತದೆ, ಅದು ಬಂದ ಮೇಲೆ ಯಾರೂ ಕೆಲಸ ಮಾಡಲಾರರು. ನಾನು ಲೋಕದಲ್ಲಿರುವಾಗ ಲೋಕಕ್ಕೆ ಬೆಳಕಾಗಿದ್ದೇನೆ ಅಂದನು. ಇದನ್ನು ಹೇಳಿ ನೆಲದ ಮೇಲೆ ಉಗುಳಿ ಆ ಉಗುಳಿನಿಂದ ಕೆಸರುಮಾಡಿ ಆ ಕೆಸರನ್ನು ಅವನ ಕಣ್ಣುಗಳಿಗೆ ಹಚ್ಚಿ - ನೀನು ಸಿಲೋವ ಕೊಳಕ್ಕೆ ಹೋಗಿ ತೊಳಕೋ ಅಂದನು. (ಸಿಲೋವ ಎಂಬ ಮಾತಿಗೆ ಕಳುಹಿಸಲ್ಪಟ್ಟವನು ಎಂದರ್ಥ.) ಅವನು ಹೋಗಿ ತೊಳಕೊಂಡು ಕಣ್ಣು ಹೊಂದಿದವನಾಗಿ ಬಂದನು.ಆಗ ನೆರೆಹೊರೆಯವರೂ ಅವನು ಭಿಕ್ಷಗಾರನಾಗಿದ್ದದ್ದನ್ನು ಮೊದಲು ನೋಡಿದವರೂ - ಇವನು ಕೂತಿದ್ದ ಆ ಭಿಕ್ಷುಕನಲ್ಲವೇ ಅಂದರು. ಕೆಲವರು - ಹೌದು, ಅವನೇ ಅಂದರು; ಇನ್ನೂ ಕೆಲವರು - ಅವನಲ್ಲ, ಅವನ ಹಾಗಿದ್ದಾನೆ ಅಂದರು. ಅವನಾದರೆ - ನಾನೇ ಅವನು ಅಂದನು. ಆಗ ಅವರು - ನಿನಗೆ ಕಣ್ಣು ಹೇಗೆ ಬಂದವು? ಎಂದು ಅವನನ್ನು ಕೇಳಿದ್ದಕ್ಕೆ ಇವನು - ಯೇಸು ಎಂಬವನಿದ್ದಾನಲ್ಲಾ, ಅವನು ಕೆಸರುಮಾಡಿ ನನ್ನ ಕಣ್ಣಿಗೆ ಹಚ್ಚಿ ಸಿಲೋವ ಕೊಳಕ್ಕೆ ಹೋಗಿ ತೊಳಕೋ ಎಂದು ಹೇಳಿದನು; ನಾನು ಹೋಗಿ ತೊಳಕೊಂಡೆನು; ಕಣ್ಣು ಬಂದವು ಅಂದನು. ಅವರು - ಅವನೆಲ್ಲಿದ್ದಾನೆ ಎಂದು ಅವನನ್ನು ಕೇಳಿದ್ದಕ್ಕೆ ಅವನು - ನನಗೆ ಗೊತ್ತಿಲ್ಲ ಅಂದನು.
ಮುಂಚೆ ಕುರುಡನಾಗಿದ್ದ ಇವನನ್ನು ಫರಿಸಾಯರ ಬಳಿಗೆ ಕರಕೊಂಡು ಹೋದರು. ಯೇಸು ಕೆಸರುಮಾಡಿ ಅವನಿಗೆ ಕಣ್ಣು ಕೊಟ್ಟ ದಿವಸವು ಸಬ್ಬತ್ದಿವಸವಾಗಿತ್ತು. ಆದಕಾರಣ ಈ ಫರಿಸಾಯರು ಸಹ ಅವನನ್ನು ವಿಚಾರಿಸಿ - ನಿನಗೆ ಹೇಗೆ ಕಣ್ಣು ಬಂದವು ಎಂದು ಕೇಳಿದರು. ಅವನು ಅವರಿಗೆ - ಕೆಸರನ್ನು ನನ್ನ ಕಣ್ಣಿನ ಮೇಲೆ ಇಟ್ಟನು, ನಾನು ತೊಳಕೊಂಡೆನು, ಕಣ್ಣು ಕಾಣುತ್ತವೆ ಎಂದು ಉತ್ತರಕೊಟ್ಟನು. ಆ ಫರಿಸಾಯರಲ್ಲಿ ಕೆಲವರು - ಈ ಮನುಷ್ಯನು ದೇವರಿಂದ ಬಂದವನಲ್ಲ; ಅವನು ಸಬ್ಬತ್ದಿವಸವನ್ನು ಲಕ್ಷ್ಯಮಾಡುವದಿಲ್ಲವಲ್ಲಾ ಅಂದರು. ಇನ್ನು ಕೆಲವರು - ಇಂಥ ಮಹತ್ತುಗಳನ್ನು ಮಾಡುವದು ಭಕ್ತಿಹೀನನ ಕೈಯಿಂದ ಹೇಗಾದೀತು? ಅಂದರು. ಹೀಗೆ ಅವರಲ್ಲಿ ಭೇದವಾಯಿತು. ಹೀಗಿರಲಾಗಿ ಅವರು ತಿರಿಗಿ ಆ ಕುರುಡನನ್ನು - ಅವನು ನಿನಗೆ ಕಣ್ಣುಕೊಟ್ಟದ್ದರಿಂದ ನೀನು ಅವನ ವಿಷಯವಾಗಿ ಏನು ಹೇಳುತ್ತೀ ಎಂದು ಕೇಳಿದಾಗ ಅವನು - ಆತನು ಪ್ರವಾದಿ ಅನ್ನುತ್ತೇನೆ ಎಂದು ಹೇಳಿದನು.ಆದರೆ ಕಣ್ಣುಬಂದವನ ವಿಷಯವಾಗಿ ಆ ಯೆಹೂದ್ಯರು - ಇವನು ಕುರುಡನಾಗಿದ್ದು ಈಗ ಕಣ್ಣುಳ್ಳವನಾದನೆಂದು ನಂಬದೆ ಅವನ ತಂದೆತಾಯಿಗಳನ್ನು ಕರೆಯಿಸಿ - ಕುರುಡನಾಗಿ ಹುಟ್ಟಿದನೆಂದು ನೀವು ಹೇಳುವಂಥ ನಿಮ್ಮ ಮಗನು ಇವನೋ? ಈಗ ಇವನಿಗೆ ಕಣ್ಣು ಹೇಗೆ ಬಂದವು ಎಂದು ಅವರನ್ನು ಕೇಳಿದರು. ಅವನ ತಂದೆತಾಯಿಗಳು - ಇವನು ನಮ್ಮ ಮಗನೆಂದೂ ಕುರುಡನಾಗಿ ಹುಟ್ಟಿದನೆಂದೂ ಬಲ್ಲೆವು; ಈಗ ಹೇಗೆ ಕಣ್ಣು ಬಂದವೋ ಅರಿಯೆವು; ಕಣ್ಣು ಕೊಟ್ಟವನು ಯಾರೋ ಅರಿಯೆವು; ಇವನನ್ನೇ ಕೇಳಿರಿ; ಪ್ರಾಯದವನಾಗಿದ್ದಾನಲ್ಲಾ; ಇವನೇ ತನ್ನ ವಿಷಯವಾಗಿ ಹೇಳುವನು ಎಂದು ಉತ್ತರಕೊಟ್ಟರು. ಅವನ ತಂದೆತಾಯಿಗಳು ಯೆಹೂದ್ಯರಿಗೆ ಅಂಜಿದ ಕಾರಣ ಈ ಪ್ರಕಾರ ಹೇಳಿದರು. ಯಾಕಂದರೆ - ಯಾರಾದರೂ ಯೇಸುವನ್ನು ಕ್ರಿಸ್ತನೆಂದು ಒಪ್ಪಿಕೊಂಡು ಹೇಳಿದರೆ ಅಂಥವನಿಗೆ ಬಹಿಷ್ಕಾರಹಾಕಬೇಕೆಂದು ಯೆಹೂದ್ಯರು ಅದಕ್ಕೆ ಮುಂಚೆ ಗೊತ್ತುಮಾಡಿಕೊಂಡಿದ್ದರು. ಇವನು ಪ್ರಾಯದವನು, ಇವನನ್ನೇ ಕೇಳಿರಿ ಎಂದು ಅವನ ತಂದೆತಾಯಿಗಳು ಹೇಳಿದ್ದಕ್ಕೆ ಇದೇ ಕಾರಣ.
ಆದಕಾರಣ ಅವರು ಕುರುಡನಾಗಿದ್ದ ಆ ಮನುಷ್ಯನನ್ನು ಎರಡನೆಯ ಸಾರಿ ಕರೆದು - ನೀನು ದೇವರಿಗೆ ಮಾನಬರುವಂತೆ ಹೇಳು; ಆ ಮನುಷ್ಯನು ಭಕ್ತಿಹೀನನೆಂದು ನಾವು ಬಲ್ಲೆವು ಎಂದು ಹೇಳಲು ಅವನು - ಆತನು ಭಕ್ತಿಹೀನನೋ ಏನೋ ನಾನರಿಯೆ, ಒಂದು ಮಾತ್ರ ಬಲ್ಲೆ, ಕುರುಡನಾಗಿದ್ದೆನು, ಈಗ ಕಣ್ಣು ಕಾಣುತ್ತವೆ ಅಂದನು. ಅವರು ಅವನನ್ನು - ನಿನಗೆ ಏನು ಮಾಡಿದನು? ನಿನಗೆ ಹೇಗೆ ಕಣ್ಣುಕೊಟ್ಟನು ಎಂದು ಕೇಳಿದ್ದಕ್ಕೆ ಅವನು - ನಿಮಗೆ ಆಗಲೇ ಹೇಳಿದೆನಲ್ಲಾ, ನೀವು ಕೇಳಲಿಲ್ಲ; ಯಾಕೆ ತಿರಿಗಿ ಕೇಳಬೇಕೆಂದಿದ್ದೀರಿ? ಆತನ ಶಿಷ್ಯರಾಗುವದಕ್ಕೆ ನಿಮಗೂ ಮನಸ್ಸದೆಯೋ? ಅಂದನು. ಅದಕ್ಕೆ ಅವರು ಅವನನ್ನು ಬೈದು - ನೀನು ಆ ಮನುಷ್ಯನ ಶಿಷ್ಯ; ನಾವು ಮೋಶೆಯ ಶಿಷ್ಯರು; ಮೋಶೆಯ ಸಂಗಡ ದೇವರು ಮಾತಾಡಿದನೆಂದು ನಾವು ಬಲ್ಲೆವು; ಆದರೆ ಇವನು ಎಲ್ಲಿಯವನೋ ಅರಿಯೆವು ಅಂದರು. ಅದಕ್ಕೆ ಆ ಮನುಷ್ಯನು - ಆತನು ನನಗೆ ಕಣ್ಣುಕೊಟ್ಟರೂ ಆತನು ಎಲ್ಲಿಯವನೋ ನಿಮಗೆ ಗೊತ್ತಿಲ್ಲದೆ ಇರುವದು ಆಶ್ಚರ್ಯವಲ್ಲವೇ. ಭಕ್ತಿಹೀನರ ಪ್ರಾರ್ಥನೆಯನ್ನು ದೇವರು ಕೇಳುವದಿಲ್ಲ; ಯಾವನು ಭಕ್ತನಾಗಿದ್ದು ಆತನ ಚಿತ್ತದಂತೆ ನಡೆಯುತ್ತಾನೋ ಅವನ ಪ್ರಾರ್ಥನೆಯನ್ನು ಕೇಳುತ್ತಾನೆಂದು ಬಲ್ಲೆವು. ಹುಟ್ಟುಕುರುಡನಿಗೆ ಯಾರಾದರೂ ಕಣ್ಣು ಕೊಟ್ಟ ಸಂಗತಿಯನ್ನು ಲೋಕಾದಿಯಿಂದ ಒಬ್ಬರೂ ಕೇಳಿದ್ದಿಲ್ಲ; ಈತನು ದೇವರಿಂದ ಬಂದವನಲ್ಲದಿದ್ದರೆ ಏನೂ ಮಾಡಲಾರದೆ ಇರುತ್ತಿದ್ದನು ಅಂದನು. ಈ ಮಾತಿಗೆ ಅವರು - ನೀನು ಕೇವಲ ಪಾಪದಲ್ಲಿ ಹುಟ್ಟಿದವನು, ನಮಗೆ ಉಪದೇಶಮಾಡುತ್ತೀಯೋ ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.
ಅವನನ್ನು ಹೊರಗೆ ಹಾಕಿದರೆಂದು ಯೇಸು ಕೇಳಿ ಅವನನ್ನು ಕಂಡುಕೊಂಡು - ನೀನು ಮನುಷ್ಯಕುಮಾರನನ್ನು ನಂಬುತ್ತೀಯೋ ಎಂದು ಕೇಳಿದನು. ಅದಕ್ಕವನು - ಆತನು ಯಾರು, ಸ್ವಾಮೀ? ತಿಳಿಸಿದರೆ ಆತನನ್ನು ನಂಬುತ್ತೇನೆ ಅಂದಾಗ ಯೇಸು - ನೀನು ಅವನನ್ನು ಕಂಡಿದ್ದೀ; ನಿನ್ನ ಸಂಗಡ ಮಾತಾಡುತ್ತಿರುವ ನಾನೇ ಅವನು ಅಂದನು. ಅವನು - ನಂಬುತ್ತೇನೆ, ಸ್ವಾಮೀ, ಎಂದು ಹೇಳಿ ಆತನಿಗೆ ಅಡ್ಡಬಿದ್ದನು.ಆಗ ಯೇಸು - ನಾನು ನ್ಯಾಯತೀರ್ಪಿಗಾಗಿ ಈ ಲೋಕಕ್ಕೆ ಬಂದಿದ್ದೇನೆ; ಆ ತೀರ್ಪು ಏನಂದರೆ, ಕಣ್ಣಿಲ್ಲದವರಿಗೆ ಕಣ್ಣುಬರುವವು. ಕಣ್ಣಿದ್ದವರು ಕುರುಡರಾಗುವರು ಅಂದನು. ಇದನ್ನು ಆತನ ಸಂಗಡ ಇದ್ದ ಫರಿಸಾಯರು ಕೇಳಿ - ನಾವೂ ಕುರುಡರೇನು? ಎಂದು ಕೇಳಿದಾಗ ಯೇಸು ಅವರಿಗೆ - ನೀವು ಕುರುಡರಾಗಿದ್ದರೆ ನಿಮಗೆ ಪಾಪವು ಇರುತ್ತಿರಲಿಲ್ಲ; ನಮಗೆ ಕಣ್ಣು ಕಾಣುತ್ತವೆ ಅನ್ನುತ್ತೀರಾದ್ದರಿಂದ ನಿಮ್ಮ ಪಾಪವು ಉಳಿದದೆ.
ಅಧ್ಯಾಯ 28
ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಕುರೀಹಟ್ಟಿಯೊಳಗೆ ಬಾಗಲಿಂದ ಬಾರದೆ ಮತ್ತೆಲ್ಲಿಂದಾದರೂ ಹತ್ತಿಬರುವವನು ಕಳ್ಳನೂ ಸುಲುಕೊಳ್ಳುವವನೂ ಆಗಿದ್ದಾನೆ. ಬಾಗಲಿಂದ ಒಳಗೆ ಬರುವವನು ಆ ಕುರಿಗಳ ಕುರುಬನು. ಬಾಗಲು ಕಾಯುವವನು ಅವನಿಗೆ ಬಾಗಲನ್ನು ತೆರೆಯುತ್ತಾನೆ, ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. ಅವನು ಸ್ವಂತ ಕುರಿಗಳನ್ನು ಹೆಸರು ಹೇಳಿ ಕರೆದು ಹೊರಗೆ ಬಿಡುತ್ತಾನೆ. ಸ್ವಂತ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ಮೇಲೆ ತಾನು ಅವುಗಳ ಮುಂದೆ ಹೋಗುತ್ತಾನೆ; ಕುರಿಗಳು ಅವನ ಸ್ವರವನ್ನು ತಿಳುಕೊಂಡು ಅವನ ಹಿಂದೆ ಹೋಗುತ್ತವೆ. ಅವು ಅನ್ಯರ ಸ್ವರವನ್ನು ತಿಳಿಯುವದಿಲ್ಲ; ಅನ್ಯನ ಹಿಂದೆ ಹೋಗದೆ ಅವನ ಬಳಿಯಿಂದ ಓಡಿಹೋಗುತ್ತವೆ. ಈ ಉಪಮಾನವನ್ನು ಯೇಸು ಅವರಿಗೆ ಹೇಳಿದನು; ಆದರೂ ಆತನ ಮಾತಿನ ಅರ್ಥವನ್ನು ಅವರು ಗ್ರಹಿಸಲಿಲ್ಲ. ಆದಕಾರಣ ಯೇಸು ಮತ್ತೂ ಅವರಿಗೆ - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಕುರಿಗಳಿಗೆ ನಾನೇ ಬಾಗಲಾಗಿದ್ದೇನೆ. ನನಗಿಂತ ಮುಂಚೆ ಬಂದವರೆಲ್ಲರು ಕಳ್ಳರೂ ಸುಲುಕೊಳ್ಳುವವರೂ ಆಗಿದ್ದಾರೆ; ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ. ನಾನೇ ಆ ಬಾಗಲು; ನನ್ನ ಮುಖಾಂತರವಾಗಿ ಯಾವನಾದರೂ ಒಳಗೆ ಹೋದರೆ ಸುರಕ್ಷಿತವಾಗಿದ್ದು ಒಳಗೆ ಹೋಗುವನು, ಹೊರಗೆ ಬರುವನು, ಮೇವನ್ನು ಕಂಡುಕೊಳ್ಳುವನು. ಕಳ್ಳನು ಕದ್ದುಕೊಳ್ಳುವದಕ್ಕೂ ಕೊಯ್ಯುವದಕ್ಕೂ ಹಾಳುಮಾಡುವದಕ್ಕೂ ಬರುತ್ತಾನೆ ಹೊರತು ಮತ್ತಾವದಕ್ಕೂ ಬರುವದಿಲ್ಲ; ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿ ಇರಬೇಕೆಂತಲೂ ಬಂದೆನು. ನಾನೇ ಒಳ್ಳೇ ಕುರುಬನು; ಒಳ್ಳೇ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ. ಕೂಲಿಯಾಳು ಕುರುಬನೂ ಕುರಿಗಳ ಒಡೆಯನೂ ಆಗಿರದೆ ತೋಳ ಬರುವದನ್ನು ಕಾಣುತ್ತಲೇ ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ; ತೋಳವು ಅವುಗಳನ್ನು ಹಿಡುಕೊಂಡು ಹಿಂಡನ್ನು ಚದರಿಸುತ್ತದೆ. ಅವನು ಕೂಲಿಯಾಳು; ಕುರಿಗಳ ಚಿಂತೆ ಅವನಿಗಿಲ್ಲ.
ನಾನೇ ಒಳ್ಳೇ ಕುರುಬನು; ತಂದೆಯು ನನ್ನನ್ನು ನಾನು ತಂದೆಯನ್ನು ತಿಳಿದಿರುವಂತೆಯೇ ನಾನು ನನ್ನ ಕುರಿಗಳನ್ನು ತಿಳಿದಿದ್ದೇನೆ; ನನ್ನ ಕುರಿಗಳು ನನ್ನನ್ನು ತಿಳಿದವೆ; ಮತ್ತು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನು ಕೊಡುತ್ತೇನೆ. ಇದಲ್ಲದೆ ಈ ಹಟ್ಟಿಗೆ ಸೇರದಿರುವ ಇನ್ನು ಬೇರೆ ಕುರಿಗಳು ನನಗೆ ಅವೆ, ಅವುಗಳನ್ನೂ ನಾನು ತರಬೇಕು; ಅವು ನನ್ನ ಸ್ವರಕ್ಕೆ ಕಿವಿಗೊಡುವವು; ಆಗ ಒಂದೇ ಹಿಂಡು ಆಗುವದು, ಒಬ್ಬನೇ ಕುರುಬನಿರುವನು. ನಾನು ತಿರಿಗಿ ಪಡಕೊಳ್ಳುತ್ತೇನೆಂದು ನನ್ನ ಪ್ರಾಣವನ್ನು ಕೊಡುತ್ತೇನೆ; ಅದರ ನಿವಿುತ್ತವಾಗಿ ತಂದೆಯು ನನ್ನನ್ನು ಪ್ರೀತಿಸುತ್ತಾನೆ. ನನ್ನ ಪ್ರಾಣವನ್ನು ಯಾರೂ ನನ್ನಿಂದ ತೆಗೆಯರು, ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ; ಅದನ್ನು ಕೊಡುವದಕ್ಕೆ ನನಗೆ ಅಧಿಕಾರ ಉಂಟು, ಅದನ್ನು ತಿರಿಗಿ ಪಡಕೊಳ್ಳುವದಕ್ಕೆ ನನಗೆ ಅಧಿಕಾರ ಉಂಟು; ಈ ಅಪ್ಪಣೆಯನ್ನು ನನ್ನ ತಂದೆಯಿಂದ ಹೊಂದಿದ್ದೇನೆ ಅಂದನು.ಈ ಮಾತುಗಳ ದೆಸೆಯಿಂದ ಯೆಹೂದ್ಯರಲ್ಲಿ ತಿರಿಗಿ ಭೇದವಾಯಿತು. ಅವರಲ್ಲಿ ಅನೇಕರು - ಅವನಿಗೆ ದೆವ್ವಹಿಡಿದದೆ, ಹುಚ್ಚುಹಿಡಿದದೆ, ಯಾಕೆ ಅವನ ಮಾತು ಕೇಳುತ್ತೀರಿ? ಅಂದರು. ಮತ್ತು ಕೆಲವರು - ಇವು ದೆವ್ವಹಿಡಿದವನ ಮಾತುಗಳಲ್ಲ; ದೆವ್ವವು ಕುರುಡರಿಗೆ ಕಣ್ಣುಕೊಡಬಲ್ಲದೇ? ಅಂದರು.
ಆ ಕಾಲದಲ್ಲಿ ದೇವಾಲಯಪ್ರತಿಷ್ಠೆಯ ಹಬ್ಬವು ಯೆರೂಸಲೇವಿುನಲ್ಲಿ ನಡೆಯಿತು; ಆಗ ಚಳಿಕಾಲವಾಗಿತ್ತು. ಯೇಸು ದೇವಾಲಯದೊಳಗೆ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಾ ಇರುವಾಗ ಯೆಹೂದ್ಯರು ಆತನನ್ನು ಸುತ್ತಿಕೊಂಡು - ಇನ್ನು ಎಷ್ಟು ಕಾಲ ನಮ್ಮಲ್ಲಿ ಅನುಮಾನ ಹುಟ್ಟಿಸುತ್ತೀ? ನೀನು ಕ್ರಿಸ್ತನಾಗಿದ್ದರೆ ಅದನ್ನು ನಮಗೆ ಸ್ಪಷ್ಟವಾಗಿ ಹೇಳು ಅಂದರು. ಅದಕ್ಕೆ ಯೇಸು - ನಿಮಗೆ ಹೇಳಿದೆನು, ಆದರೆ ನೀವು ನಂಬದೆ ಇದ್ದೀರಿ; ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನಗೆ ಸಾಕ್ಷಿಯಾಗಿವೆ. ಆದರೂ ನೀವು ನನ್ನ ಕುರಿಗಳಿಗೆ ಸೇರಿದವರಲ್ಲವಾದದರಿಂದ ನಂಬದೆ ಇದ್ದೀರಿ. ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ಬಲ್ಲೆನು; ಅವು ನನ್ನ ಹಿಂದೆ ಬರುತ್ತವೆ. ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ; ಅವು ಎಂದಿಗೂ ನಾಶವಾಗುವದೇ ಇಲ್ಲ; ಅವುಗಳನ್ನು ಯಾರೂ ನನ್ನ ಕೈಯೊಳಗಿಂದ ಕಸಕೊಳ್ಳರು. ನನ್ನ ತಂದೆಯು ನನಗೆ ಕೊಟ್ಟದ್ದು ಎಲ್ಲಾದ್ದಕ್ಕಿಂತ ದೊಡ್ಡದು; ಅದನ್ನು ತಂದೆಯ ಕೈಯೊಳಗಿಂದ ಯಾರೂ ಕಸಕೊಳ್ಳಲಾರರು. ನಾನೂ ತಂದೆಯೂ ಒಂದಾಗಿದ್ದೇವೆ ಅಂದನು.
ಯೆಹೂದ್ಯರು ಆತನನ್ನು ಹೊಡೆದು ಕೊಲ್ಲಬೇಕೆಂದು ತಿರಿಗಿ ಕಲ್ಲುಗಳನ್ನು ತೆಗೆದುಕೊಂಡು ಬರಲು ಯೇಸು ಅವರನ್ನು - ತಂದೆಯ ಕಡೆಯಿಂದ ಅನೇಕ ಒಳ್ಳೇ ಕ್ರಿಯೆಗಳನ್ನು ನಿಮಗೆ ತೋರಿಸಿದೆನು; ಅವುಗಳಲ್ಲಿ ಯಾವ ಕ್ರಿಯೆಯ ದೆಸೆಯಿಂದ ನನ್ನ ಮೇಲೆ ಕಲ್ಲೆಸೆಯುತ್ತೀರಿ ಎಂದು ಕೇಳಿದ್ದಕ್ಕೆ ಯೆಹೂದ್ಯರು - ನಾವು ನಿನ್ನ ಮೇಲೆ ಕಲ್ಲೆಸೆಯುವದು ಒಳ್ಳೇ ಕಾರ್ಯದ ದೆಸೆಯಿಂದಲ್ಲ, ದೇವದೂಷಣೆಯ ದೆಸೆಯಿಂದಲೂ ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರನ್ನಾಗಿ ಮಾಡಿಕೊಳ್ಳುವದರ ದೆಸೆಯಿಂದಲೂ ನಿನ್ನ ಮೇಲೆ ಕಲ್ಲೆಸೆಯುತ್ತೇವೆ ಅಂದರು. ಅದಕ್ಕೆ ಯೇಸು - ನೀವು ದೇವರುಗಳೇ ಎಂದು ನಾನು ಹೇಳಿದೆನು ಎಂಬದಾಗಿ ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದದೆಯಲ್ಲಾ; ಶಾಸ್ತ್ರವು ಸುಳ್ಳಾಗಲಾರದಷ್ಟೆ; ಹಾಗಾದರೆ ದೇವರ ವಾಕ್ಯವನ್ನು ಹೊಂದಿದವರನ್ನು ದೇವರುಗಳೆಂದು ಆತನು ಹೇಳಿರುವಲ್ಲಿ ತಂದೆಯು ಪ್ರತಿಷ್ಠೆಮಾಡಿ ಲೋಕಕ್ಕೆ ಕಳುಹಿಸಿಕೊಟ್ಟವನಾದ ನಾನು ದೇವರ ಮಗನಾಗಿದ್ದೇನೆಂದು ಹೇಳಿದ್ದಕ್ಕೆ ನೀನು ದೇವದೂಷಣೆ ಮಾಡುತ್ತೀ ಅನ್ನುತ್ತೀರೋ? ನಾನು ನನ್ನ ತಂದೆಯ ಕ್ರಿಯೆಗಳನ್ನು ಮಾಡದಿದ್ದರೆ ನನ್ನ ಮಾತನ್ನು ನಂಬಬೇಡಿರಿ; ಮಾಡಿದರೆ ನನ್ನ ಮಾತನ್ನು ನಂಬದೆ ಇದ್ದರೂ ಆ ಕ್ರಿಯೆಗಳ ಸಾಕ್ಷಿಯನ್ನಾದರೂ ನಂಬಿರಿ; ಆಗ ನನ್ನಲ್ಲಿ ತಂದೆಯು ಇದ್ದಾನೆಂತಲೂ ತಂದೆಯಲ್ಲಿ ನಾನು ಇದ್ದೇನೆಂತಲೂ ನೀವು ತಿಳುಕೊಂಡು ಮನನಮಾಡಿಕೊಳ್ಳುವಿರಿ ಅಂದನು. ಅವರು ತಿರಿಗಿ ಆತನನ್ನು ಹಿಡಿಯುವದಕ್ಕೆ ನೋಡಿದರು; ಆದರೆ ಅವರ ಕೈಗೆ ತಪ್ಪಿಸಿಕೊಂಡು ಹೋದನು.ಆಮೇಲೆ ಆತನು ಯೊರ್ದನ್ಹೊಳೆಯ ಆಚೆ ಯೋಹಾನನು ಮೊದಲು ಸ್ನಾನಮಾಡಿಸುತ್ತಿದ್ದ ಸ್ಥಳಕ್ಕೆ ತಿರಿಗಿ ಹೋಗಿ ಅಲ್ಲಿ ಇದ್ದನು. ಅನೇಕರು ಆತನ ಬಳಿಗೆ ಬಂದು - ಯೋಹಾನನು ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ; ಆದರೆ ಈತನ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲಾ ನಿಜವಾಗಿತ್ತು ಎಂದು ಮಾತಾಡುತ್ತಿದ್ದರು.
ಅಧ್ಯಾಯ 29
ತರುವಾಯ ಯೆರೂಸಲೇವಿುನಿಂದ ಬಂದಿದ್ದ ಫರಿಸಾಯರೂ ಶಾಸ್ತ್ರಿಗಳಲ್ಲಿ ಕೆಲವರೂ ಆತನ ಬಳಿಗೆ ಕೂಡಿ ಬಂದರು. -ಫರಿಸಾಯರೂ ಯೆಹೂದ್ಯರೆಲ್ಲರೂ ಹಿರಿಯರಿಂದ ಬಂದ ಸಂಪ್ರದಾಯವನ್ನು ಹಿಡಿದು ತಮ್ಮ ಕೈಗಳನ್ನು ಚೆನ್ನಾಗಿ ತೊಳಕೊಳ್ಳದೆ ಆಹಾರ ತೆಗೆದುಕೊಳ್ಳುವದಿಲ್ಲ; ಮತ್ತು ಪೇಟೆಗೆ ಹೋಗಿ ಬಂದರೆ ನೀರನ್ನು ಪ್ರೋಕ್ಷಿಸಿಕೊಳ್ಳದೆ ಆಹಾರ ತೆಗೆದುಕೊಳ್ಳುವದಿಲ್ಲ; ಆತನ ಶಿಷ್ಯರಲ್ಲಿ ಕೆಲವರು ಮೈಲಿಗೆಯ ಕೈಯಿಂದ, ಅಂದರೆ ಕೈತೊಳಕೊಳ್ಳದೆ ಆಹಾರ ತೆಗೆದುಕೊಳ್ಳುವದನ್ನು ಆ ಫರಿಸಾಯರೂ ಶಾಸ್ತ್ರಿಗಳೂ ಕಂಡು ಆತನನ್ನು - ನಿನ್ನ ಶಿಷ್ಯರು ಹಿರಿಯರಿಂದ ಬಂದ ಸಂಪ್ರದಾಯದಂತೆ ಯಾಕೆ ನಡೆದುಕೊಳ್ಳುವದಿಲ್ಲ? ಮೈಲಿಗೆಯ ಕೈಯಿಂದ ಯಾಕೆ ಆಹಾರ ತೆಗೆದುಕೊಳ್ಳುತ್ತಾರೆ ಎಂದು ಕೇಳಿದರು. ಅದಕ್ಕೆ ಆತನು - ಕಪಟಿಗಳಾದ ನಿಮ್ಮ ವಿಷಯದಲ್ಲಿ ಯೆಶಾಯನು ವಿಹಿತವಾಗಿ ಪ್ರವಾದಿಸಿದ್ದಾನೆ; ಅವನು ಬರೆದದ್ದೇನಂದರೆ -ಈ ಜನರು ಮಾತಿನಿಂದ ನನ್ನನ್ನು ಸನ್ಮಾನಿಸುತ್ತಾರೆ,ಆದರೆ ಅವರ ಮನಸ್ಸು ನನಗೆ ದೂರವಾಗಿದೆ.ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರುಬೋಧಿಸುವದರಿಂದ ನನಗೆ ಭಕ್ತಿತೋರಿಸುವದು ವ್ಯರ್ಥ ಎಂಬದೇ.ನೀವು ದೇವರ ಆಜ್ಞೆಯನ್ನು ಬಿಟ್ಟು ಮನುಷ್ಯರು ಕಲ್ಪಿಸಿದ ಸಂಪ್ರದಾಯವನ್ನು ಹಿಡಿದಿದ್ದೀರಿ ಎಂದು ಹೇಳಿದನು. ಆತನು ಇನ್ನೂ ಅವರಿಗೆ - ನೀವು ನಿಮ್ಮ ಸಂಪ್ರದಾಯವನ್ನು ಹಿಡಿದು ನಡಿಸುವದಕ್ಕಾಗಿ ದೇವರ ಆಜ್ಞೆಯನ್ನು ವ್ಯರ್ಥಮಾಡುತ್ತೀರಿ; ಬಹು ಚೆನ್ನಾಗಿದೆಯಲ್ಲವೇ. ತಂದೆತಾಯಿಗಳನ್ನು ಸನ್ಮಾನಿಸಬೇಕೆಂತಲೂ ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣದಂಡನೆ ಆಗಬೇಕೆಂತಲೂ ಮೋಶೆಯು ಹೇಳಿದ್ದಾನೆ; ನೀವೋ ಒಬ್ಬನು ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ನೋಡಿ - ನಾನು ನಿನ್ನ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ಕೊರ್ಬಾನ್ ಮಾಡಿದ್ದೇನೆ (ಅಂದರೆ ದೇವರಿಗಾಗಿ ಇಟ್ಟಿದ್ದೇನೆ) ಎಂದು ಹೇಳುವದಾದರೆ ಅವನು ತನ್ನ ತಂದೆಗಾಗಲಿ ತಾಯಿಗಾಗಲಿ ಇನ್ನೇನೂ ಮಾಡಬಾರದೆಂದು ಹೇಳುತ್ತೀರಿ. ಹೀಗೆ ನೀವು ಕಲಿಸುತ್ತಾ ಬಂದಿರುವ ಸಂಪ್ರದಾಯದಿಂದ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ, ಮತ್ತು ಇಂಥ ಕಾರ್ಯಗಳನ್ನು ಇನ್ನೂ ಎಷ್ಟೋ ಮಾಡುತ್ತೀರಿ ಎಂದು ಹೇಳಿದನು.
ಆಮೇಲೆ ಯೇಸು ಜನರ ಗುಂಪನ್ನು ತಿರಿಗಿ ಹತ್ತಿರಕ್ಕೆ ಕರೆದು ಅವರಿಗೆ - ಎಲ್ಲರೂ ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ, ತಿಳುಕೊಳ್ಳಿರಿ.ಬಾಯೊಳಕ್ಕೆ ಹೋಗುವಂಥದು ಮನುಷ್ಯನನ್ನು ಹೊಲೆಮಾಡುವದಿಲ್ಲ; ಬಾಯೊಳಗಿಂದ ಹೊರಡುವಂಥದೇ ಮನುಷ್ಯನನ್ನು ಹೊಲೆಮಾಡುವದು ಎಂದು.ಆಗ ಶಿಷ್ಯರು ಬಂದು ಆತನನ್ನು - ಫರಿಸಾಯರು ಈ ಮಾತನ್ನು ಕೇಳಿ ಬೇಸರಗೊಂಡರೆಂದು ನಿನಗೆ ಗೊತ್ತಾಯಿತೋ ಎಂದು ಕೇಳಿದರು. ಅದಕ್ಕೆ ಆತನು - ಪರಲೋಕದಲ್ಲಿರುವ ನನ್ನ ತಂದೆಯು ನೆಡದೆ ಇರುವ ಗಿಡಗಳೆಲ್ಲಾ ಬೇರಿನೊಂದಿಗೆ ಕಿತ್ತುಹಾಕಲ್ಪಡುವವು. ಅವರ ಮಾತನ್ನು ಬಿಡಿರಿ; ತಾವೇ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸುವದಕ್ಕೆ ಹೋಗುತ್ತಾರೆ; ಕುರುಡನು ಕುರುಡನಿಗೆ ದಾರಿತೋರಿಸಿದರೆ ಅವರಿಬ್ಬರೂ ಕುಣಿಯಲ್ಲಿ ಬೀಳುವರು ಅಂದನು.ಮೋಶೆಯ ಧರ್ಮಶಾಸ್ತ್ರವನ್ನಾಗಲಿ ಪ್ರವಾದಿಗಳ ವಚನಗಳನ್ನಾಗಲಿ ತೆಗೆದುಹಾಕುವದಕ್ಕೆ ನಾನು ಬಂದೆನೆಂದು ನೆನಸಬೇಡಿರಿ. ತೆಗೆದುಹಾಕುವದಕ್ಕೆ ಬಂದಿಲ್ಲ; ನೆರವೇರಿಸುವದಕ್ಕೆ ಬಂದಿದ್ದೇನೆ. ಆಗ ಪೇತ್ರನು ಈ ಸಾಮ್ಯದ ಅರ್ಥವನ್ನು ನಮಗೆ ಹೇಳು ಅನ್ನಲುಆತನು ಅವರಿಗೆ - ನಿಮಗೂ ಅಷ್ಟು ಬುದ್ಧಿ ಇಲ್ಲವೇ? ಹೊರಗಿನಿಂದ ಮನುಷ್ಯನೊಳಕ್ಕೆ ಹೋಗುವಂಥದು ಅವನ ಹೃದಯದೊಳಕ್ಕೆ ಸೇರದೆ ಹೊಟ್ಟೆಯಲ್ಲಿ ಸೇರಿ ಬಹಿರ್ದೇಶಕ್ಕೆ ಹೋಗುವದರಿಂದ ಅವನನ್ನು ಹೊಲೆಮಾಡಲಾರದೆಂದು ನಿಮಗೆ ತಿಳಿಯಲಿಲ್ಲವೋ ಎಂದು ಹೇಳಿದನು. ಹೀಗೆ ಹೇಳಿದ್ದರಿಂದ ತಿನ್ನುವ ಪದಾರ್ಥಗಳೆಲ್ಲಾ ಶುದ್ಧವೆಂದು ಸೂಚಿಸಿದನು. ಆತನು ಇನ್ನೂ - ಮನುಷ್ಯನೊಳಗಿಂದ ಹೊರಡುವಂಥದೇ ಮನುಷ್ಯನನ್ನು ಹೊಲೆಮಾಡುವದು; ಒಳಗಿನಿಂದ ಅಂದರೆ ಮನುಷ್ಯರ ಮನಸ್ಸಿನೊಳಗಿಂದ ಸೂಳೆಗಾರಿಕೆ ಕಳ್ಳತನ ಕೊಲೆ ಹಾದರ ದ್ರವ್ಯಾಶೆ ಕೆಡುಕುತನ ಮೋಸ ಬಂಡತನ ಹೊಟ್ಟೇಕಿಚ್ಚು ಬೈಗಳು ಸೊಕ್ಕು ಬುದ್ಧಿಗೇಡಿತನ ಇವೇ ಮೊದಲಾದವುಗಳ ಕೆಟ್ಟ ಆಲೋಚನೆಗಳು ಹೊರಡುತ್ತವೆ. ಈ ಕೆಟ್ಟ ವಿಷಯಗಳೆಲ್ಲಾ ಒಳಗಿನಿಂದ ಹೊರಟು ಮನುಷ್ಯನನ್ನು ಹೊಲೆಮಾಡುತ್ತವೆ ಅಂದನು.
ಯೇಸು ಅಲ್ಲಿಂದ ಹೊರಟು ತೂರ್ ಸೀದೋನ್ ಪಟ್ಟಣಗಳ ಪ್ರಾಂತ್ಯಗಳಿಗೆ ಹೋದನು.ಕೂಡಲೆ ಒಬ್ಬ ಹೆಂಗಸು ಆತನ ಸುದ್ದಿಯನ್ನು ಕೇಳಿ ಬಂದು ಆತನ ಪಾದಕ್ಕೆ ಬಿದ್ದಳು. ಆಕೆಯ ಮಗಳಿಗೆ ದೆವ್ವ ಹಿಡಿದಿತ್ತು. ಆ ಹೆಂಗಸು ಅನ್ಯಮತದವಳೂ ಸುರೋಪೊಯಿನಿಕ್ಯರವಳೂ ಆಗಿದ್ದಳು. ಸ್ವಾಮೀ, ದಾವೀದನ ಕುಮಾರನೇ, ನನ್ನನ್ನು ಕರುಣಿಸು. ನನ್ನ ಮಗಳಿಗೆ ದೆವ್ವದ ಕಾಟ ಬಹಳವಾಗಿದೆ ಎಂದು ಕೂಗಿಕೊಂಡಳು. ಆದರೆ ಆತನು ಆಕೆಗೆ ಏನೂ ಉತ್ತರಕೊಡಲಿಲ್ಲ; ಆಗ ಆತನ ಶಿಷ್ಯರು ಬಂದು - ನಮ್ಮ ಹಿಂದೆ ಕೂಗಿಕೊಂಡು ಬರುತ್ತಾಳೆ; ಆಕೆಯನ್ನು ಕಳುಹಿಸಿಬಿಡು ಎಂದು ಆತನನ್ನು ಬೇಡಿಕೊಂಡರು. ಅದಕ್ಕಾತನು - ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲನ ಮನೆತನದವರ ಬಳಿಗೇ ಹೊರತು ಮತ್ತಾರ ಬಳಿಗೂ ನಾನು ಕಳುಹಿಸಲ್ಪಟ್ಟವನಲ್ಲ ಅಂದನು. ಆಗ ಆಕೆ ಬಂದು ಆತನಿಗೆ ಅಡ್ಡಬಿದ್ದು - ಸ್ವಾಮೀ, ನನಗೆ ಅನುಗ್ರಹ ಮಾಡಬೇಕು ಅಂದಳು.ಆಕೆಯು ತನ್ನ ಮಗಳ ದೆವ್ವವನ್ನು ಬಿಡಿಸಬೇಕೆಂದು ಆತನನ್ನು ಬೇಡಿಕೊಂಡಾಗ ಆತನು ಆಕೆಗೆ - ಮಕ್ಕಳಿಗೆ ಮೊದಲು ತೃಪ್ತಿಯಾಗಲಿ; ಮಕ್ಕಳು ತಿನ್ನುವ ರೊಟ್ಟಿಯನ್ನು ತಕ್ಕೊಂಡು ನಾಯಿಮರಿಗಳಿಗೆ ಹಾಕುವದು ಸರಿಯಲ್ಲ ಎಂದು ಹೇಳಿದನು. ಅದಕ್ಕೆ ಆಕೆಯು - ಸ್ವಾಮೀ, ಆ ಮಾತು ನಿಜವೇ; ಮೇಜಿನ ಕೆಳಗಿರುವ ನಾಯಿಮರಿಗಳಂತೂ ಮಕ್ಕಳ ಕೈಯಿಂದ ಬೀಳುವ ರೊಟ್ಟೀತುಂಡುಗಳನ್ನು ತಿನ್ನುತ್ತವಲ್ಲಾ ಎಂದು ಉತ್ತರಕೊಡಲುಆಗ ಯೇಸು ಆಕೆಗೆ - ಅಮ್ಮಾ, ನಿನ್ನ ನಂಬಿಕೆ ಬಹಳ; ನಿನ್ನ ಮನಸ್ಸಿನಂತೆ ಆಗಲಿ ಎಂದು ಉತ್ತರಕೊಟ್ಟನು. ಅದೇ ಗಳಿಗೆಯಲ್ಲಿ ಆಕೆಯ ಮಗಳು ಸ್ವಸ್ಥಳಾದಳು.ಆಕೆಯು ತನ್ನ ಮನೆಗೆ ಹೋಗಿ ನೋಡಲಾಗಿ ಆ ಹುಡುಗಿ ಹಾಸಿಗೆಯ ಮೇಲೆ ಮಲಗಿದ್ದಳು; ದೆವ್ವ ಅವಳನ್ನು ಬಿಟ್ಟು ಹೋಗಿತ್ತು.
ಅಧ್ಯಾಯ 30
ಅನಂತರ ಆತನು ತೂರ್ ಪಟ್ಟಣದ ಪ್ರಾಂತ್ಯಗಳನ್ನು ಬಿಟ್ಟು ಸೀದೋನ್ ಪಟ್ಟಣದ ಮಾರ್ಗವಾಗಿ ದೆಕಪೊಲಿಯ ಪ್ರಾಂತ್ಯಗಳನ್ನು ಹಾದು ಗಲಿಲಾಯ ಸಮುದ್ರಕ್ಕೆ ಬಂದನು. ಆಗ ಕೆಲವರು ತೊದಲು ಮಾತಾಡುವ ಒಬ್ಬ ಕಿವುಡನನ್ನು ಆತನ ಬಳಿಗೆ ಕರತಂದು - ಇವನ ಮೇಲೆ ನಿನ್ನ ಕೈಯಿಡಬೇಕು ಎಂದು ಆತನನ್ನು ಬೇಡಿಕೊಂಡರು. ಆತನು ಅವನನ್ನು ಜನರ ಗುಂಪಿನಿಂದ ಒತ್ತಟ್ಟಿಗೆ ಕರಕೊಂಡು ಹೋಗಿ ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿ ಇಟ್ಟು ಉಗುಳಿ ಅವನ ನಾಲಿಗೆಯನ್ನು ಮುಟ್ಟಿ ಆಕಾಶದ ಕಡೆಗೆ ನೋಡಿ ನಿಟ್ಟುಸುರು ಬಿಟ್ಟು ಅವನಿಗೆ - ಎಪ್ಫಥಾ ಎಂದು ಹೇಳಿದನು. ಆ ಶಬ್ದಕ್ಕೆ ತೆರೆಯಲಿ ಎಂದರ್ಥ. ಹೇಳುತ್ತಲೇ ಅವನ ಕಿವಿ ತೆರೆದವು; ಅವನ ನಾಲಿಗೆಯ ಕಟ್ಟು ಬಿಚ್ಚಿಹೋಯಿತು; ಅವನು ನೆಟ್ಟಗೆ ಮಾತಾಡಿದನು. ಆಗ ಆತನು - ಯಾರಿಗೂ ತಿಳಿಸಬಾರದೆಂದು ಅವರಿಗೆ ಖಂಡಿತವಾಗಿ ಹೇಳಿದನು. ಆದರೆ ಎಷ್ಟು ಖಂಡಿತವಾಗಿ ಹೇಳಿದರೂ ಅವರು ಮತ್ತಷ್ಟು ಹೆಚ್ಚಾಗಿ ಅದನ್ನು ಹಬ್ಬಿಸಿದರು. ಅವರು ಅತ್ಯಂತಾಶ್ಚರ್ಯಪಟ್ಟು - ಎಲ್ಲಾ ಚೆನ್ನಾಗಿ ಮಾಡಿದ್ದಾನೆ; ಕಿವುಡರಾದರೂ ಕೇಳುವಂತೆ ಮಾಡುತ್ತಾನೆ, ಮೂಕರಾದರೂ ಮಾತಾಡುವಂತೆ ಮಾಡುತ್ತಾನೆ ಅಂದುಕೊಂಡರು. ಯೇಸು ಅಲ್ಲಿಂದ ಹೊರಟು ಗಲಿಲಾಯಸಮುದ್ರದ ಬಳಿಗೆ ಬಂದು ಬೆಟ್ಟವನ್ನು ಹತ್ತಿ ಅಲ್ಲಿ ಕೂತುಕೊಂಡನು. ಆಗ ಜನರು ಗುಂಪುಗುಂಪಾಗಿ ಆತನ ಬಳಿಗೆ ಬಂದು ಕುಂಟರು ಕುರುಡರು ಮೂಕರು ಕೈಕಾಲಿಲ್ಲದವರು ಈ ಮುಂತಾದ ಅನೇಕರನ್ನು ಕರತಂದು ಅವರನ್ನು ಆತನ ಪಾದಗಳ ಬಳಿಯಲ್ಲಿ ಬಿಟ್ಟರು; ಆತನು ಅವರನ್ನು ವಾಸಿಮಾಡಿದನು. ಮೂಕರಾಗಿದ್ದವರು ಮಾತಾಡಿದ್ದನ್ನೂ ಕೈಕಾಲಿಲ್ಲದವರು ಸ್ವಸ್ಥವಾದದ್ದನ್ನೂ ಕುಂಟರಿಗೆ ಕಾಲುಬಂದದ್ದನ್ನೂ ಕುರುಡರಿಗೆ ಕಣ್ಣು ಬಂದದ್ದನ್ನೂ ಜನರು ಕಂಡು ಆಶ್ಚರ್ಯಪಟ್ಟು ಇಸ್ರಾಯೇಲ್ ಜನರ ದೇವರನ್ನು ಕೊಂಡಾಡಿದರು.
ಆ ದಿವಸಗಳಲ್ಲಿ ಜನರು ತಿರಿಗಿ ಗುಂಪುಕೂಡಿ ಬಂದಾಗ ಅವರಿಗೆ ಊಟಕ್ಕೆ ಏನೂ ಇಲ್ಲದೆ ಇರಲು ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು - ಈ ಜನರನ್ನು ನೋಡಿ ಕನಿಕರಪಡುತ್ತೇನೆ; ಇವರು ನನ್ನ ಬಳಿಗೆ ಬಂದು ಮೂರು ದಿನವಾಯಿತು; ಇವರಿಗೆ ಊಟಕ್ಕೆ ಏನೂ ಇಲ್ಲ; ಇವರನ್ನು ಉಪವಾಸವಾಗಿ ಮನೆಗೆ ಕಳುಹಿಸಿಬಿಟ್ಟರೆ ದಾರಿಯಲ್ಲಿ ಬಳಲಿಹೋಗುವರು; ಇವರಲ್ಲಿ ಕೆಲವರು ದೂರದಿಂದ ಬಂದಿದ್ದಾರಲ್ಲಾ ಎಂದು ಅವರಿಗೆ ಹೇಳಿದ್ದಕ್ಕೆ ಶಿಷ್ಯರು - ಈ ಅಡವಿಯಲ್ಲಿ ಎಲ್ಲಿಂದ ರೊಟ್ಟಿಯನ್ನು ತಂದು ಈ ಜನರನ್ನು ತೃಪ್ತಿಪಡಿಸುವದಕ್ಕಾದೀತು? ಅಂದರು. ಆತನು - ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ ಎಂದು ಅವರನ್ನು ಕೇಳಿದ್ದಕ್ಕೆ ಅವರು - ಏಳು ಅವೆ ಅಂದರು. ಆಗ ಆತನು ಜನರ ಗುಂಪಿಗೆ - ನೆಲದ ಮೇಲೆ ಕೂತುಕೊಳ್ಳಿರಿ ಎಂದು ಅಪ್ಪಣೆಕೊಟ್ಟು ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅವುಗಳನ್ನು ಮುರಿದು ಹಂಚುವದಕ್ಕೆ ತನ್ನ ಶಿಷ್ಯರ ಕೈಗೆ ಕೊಟ್ಟನು; ಅವರು ಗುಂಪಿನವರಿಗೆ ಹಂಚಿಕೊಟ್ಟರು. ಇದಲ್ಲದೆ ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು; ಅವುಗಳನ್ನು ಆತನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ - ಇವುಗಳನ್ನೂ ಹಂಚಿಕೊಡಿರಿ ಅಂದನು. ಅವರು ಊಟಮಾಡಿ ತೃಪ್ತರಾದರು. ವಿುಕ್ಕ ತುಂಡುಗಳನ್ನು ಕೂಡಿಸಲಾಗಿ ಏಳು ಹೆಡಿಗೆ ಆದವು. ಊಟ ಮಾಡಿದವರು, ಹೆಂಗಸರು ಮಕ್ಕಳು ಅಲ್ಲದೆ, ಗಂಡಸರೇ ನಾಲ್ಕು ಸಾವಿರ ಮಂದಿ.ಬಳಿಕ ಆತನು ಆ ಜನರ ಗುಂಪನ್ನು ಕಳುಹಿಸಿಬಿಟ್ಟು ದೋಣಿಯನ್ನು ಹತ್ತಿ ಮಗದಾನ ಸೀಮೆಗೆ ಬಂದನು.
ತರುವಾಯ ಫರಿಸಾಯರು ಹೊರಟು ಬಂದು ಆತನ ಕೂಡ ತರ್ಕಮಾಡುತ್ತಾ ಪರೀಕ್ಷಿಸುವದಕ್ಕಾಗಿ - ನೀನು ಆಕಾಶದಲ್ಲಿ ಒಂದು ಸೂಚಕಕಾರ್ಯವನ್ನು ತೋರಿಸಿಕೊಡಬೇಕೆಂದು ಕೇಳುತ್ತಿರಲು ಆತನು ತನ್ನ ಆತ್ಮದಲ್ಲಿ ನೊಂದು ನಿಟ್ಟುಸುರುಬಿಟ್ಟು - ಈ ಸಂತತಿಯು ಸೂಚಕಕಾರ್ಯವನ್ನು ಅಪೇಕ್ಷಿಸುವದು ಯಾಕೆ? ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಸಂತತಿಗೆ ಸೂಚಕಕಾರ್ಯವು ಸಿಕ್ಕುವದೇ ಇಲ್ಲ ಎಂದು ಹೇಳಿಸಂಜೇವೇಳೆಯಲ್ಲಿ ನೀವು - ಆಕಾಶವು ಕೆಂಪಾಗಿದೆ, ನಿರ್ಮಲದಿನ ಬರುವದು ಅನ್ನುತ್ತೀರಿ; ಬೆಳಿಗ್ಗೆ - ಆಕಾಶವು ಮೋಡಮುಚ್ಚಿಕೊಂಡು ಕೆಂಪಾಗಿದೆ, ಈ ಹೊತ್ತು ಗಾಳಿ ಮಳೆ ಅನ್ನುತ್ತೀರಿ ಅಲ್ಲವೇ. ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವದನ್ನು ನೀವು ನೋಡಿದ ಕೂಡಲೆ ಮಳೆ ಬರುತ್ತದೆ ಅನ್ನುತ್ತೀರಿ; ಹಾಗೇ ಆಗುತ್ತದೆ. ದಕ್ಷಿಣ ದಿಕ್ಕಿನ ಗಾಳಿ ಬೀಸಲಾಗಿ ಸೆಕೆ ಹುಟ್ಟುವದು ಅನ್ನುತ್ತೀರಿ; ಅದೂ ಆಗುತ್ತದೆ. ಕಪಟಿಗಳು ನೀವು, ಭೂಮ್ಯಾಕಾಶಗಳ ಭಾವವನ್ನು ಶೋಧಿಸುವದಕ್ಕೆ ನಿಮಗೆ ಗೊತ್ತಿರುವಲ್ಲಿ ಈ ಸಮಯವನ್ನು ಶೋಧಿಸುವದಕ್ಕೆ ನಿಮಗೆ ಯಾಕೆ ಗೊತ್ತಿಲ್ಲ?ಇದಲ್ಲದೆ ಇಂಥಿಂಥದು ನ್ಯಾಯವಾದದ್ದೆಂದು ನೀವೇ ಯಾಕೆ ತೀರ್ಮಾನಮಾಡಿಕೊಳ್ಳುವದಿಲ್ಲ?
ಅವರನ್ನು ಬಿಟ್ಟು ತಿರಿಗಿ ದೋಣಿಯನ್ನು ಹತ್ತಿ ಆಚೇದಡಕ್ಕೆ ಹೋದನು.ಆದರೆ ಶಿಷ್ಯರು ರೊಟ್ಟೀಬುತ್ತಿ ಕಟ್ಟಿಕೊಳ್ಳುವದನ್ನು ಮರೆತರು. ದೋಣಿಯಲ್ಲಿ ಅವರಿಗೆ ಒಂದು ರೊಟ್ಟಿ ಮಾತ್ರ ಇತ್ತು; ಬೇರೆ ಇರಲಿಲ್ಲ. ಯೇಸು ಅವರಿಗೆ - ಎಚ್ಚರಿಕೆ, ಫರಿಸಾಯರ ಮತ್ತು ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ನೋಡಿಕೊಳ್ಳಿರಿ ಎಂದು ಖಂಡಿತವಾಗಿ ಹೇಳಲು ಅವರು - ನಮ್ಮಲ್ಲಿ ರೊಟ್ಟಿಯಿಲ್ಲವಲ್ಲಾ ಎಂದು ತಮ್ಮ ತಮ್ಮೊಳಗೆ ಮಾತಾಡಿಕೊಳ್ಳುತ್ತಿದ್ದರು. ಆತನು ಅದನ್ನು ತಿಳಿದು - ರೊಟ್ಟಿಯಿಲ್ಲವಲ್ಲಾ ಎಂದು ಮಾತಾಡಿಕೊಳ್ಳುವದೇಕೆ? ನೀವು ಇನ್ನೂ ಗ್ರಹಿಸಲಿಲ್ಲವೋ? ತಿಳುವಳಿಕೆ ಬರಲಿಲ್ಲವೋ? ನಿಮ್ಮ ಮನಸ್ಸು ಕಲ್ಲಾಗಿದೆಯೋ? ಕಣ್ಣಿದ್ದೂ ಕಾಣುವದಿಲ್ಲವೋ? ಕಿವಿಯಿದ್ದೂ ಕೇಳುವದಿಲ್ಲವೋ? ನಿಮಗೆ ನೆನಪಿಲ್ಲವೋ? ನಾನು ಆ ಐದು ರೊಟ್ಟಿಗಳನ್ನು ಮುರಿದು ಐದುಸಾವಿರ ಜನರಿಗೆ ಹಂಚಿಸಿದಾಗ ತುಂಡು ತುಂಬಿದ ಎಷ್ಟು ಪುಟ್ಟಿಗಳನ್ನು ತೆಗೆದುಕೊಂಡು ಹೋದಿರಿ ಎಂದು ಕೇಳಿದ್ದಕ್ಕೆ ಅವರು - ಹನ್ನೆರಡು ಪುಟ್ಟಿ ಅಂದರು. ಮತ್ತು ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರಿಗೆ ಹಂಚಿಸಿದಾಗ ತುಂಡು ತುಂಬಿದ ಎಷ್ಟು ಹೆಡಿಗೆಗಳನ್ನು ತೆಗೆದುಕೊಂಡು ಹೋದಿರಿ ಎಂದು ಕೇಳಿದ್ದಕ್ಕೆ ಅವರು - ಏಳು ಹೆಡಿಗೆ ಅಂದರು.ನಾನು ರೊಟ್ಟಿಯನ್ನು ಕುರಿತು ಮಾತಾಡಲಿಲ್ಲವೆಂಬದು ನಿಮಗೆ ತಿಳಿಯದೆ ಇರುವದು ಹೇಗೆ? ಎಚ್ಚರಿಕೆ, ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ ಅಂದನು. ಆಗ ಅವರು ರೊಟ್ಟಿಯ ಹುಳಿ ಹಿಟ್ಟನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಆತನು ತಮಗೆ ಹೇಳಲಿಲ್ಲ, ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಹೇಳಿದನು ಎಂಬದಾಗಿ ತಿಳುಕೊಂಡರು.
ಅಧ್ಯಾಯ 31
ಮತ್ತು ಅವರು ಬೇತ್ಸಾಯಿದ ಊರಿಗೆ ಬಂದರು. ಅಲ್ಲಿ ಜನರು ಒಬ್ಬ ಕುರುಡನನ್ನು ಯೇಸುವಿನ ಬಳಿಗೆ ಕರಕೊಂಡುಬಂದು - ಇವನನ್ನು ಮುಟ್ಟಬೇಕು ಎಂದು ಆತನನ್ನು ಬೇಡಿಕೊಂಡರು. ಆತನು ಕುರುಡನ ಕೈ ಹಿಡುಕೊಂಡು ಊರ ಹೊರಕ್ಕೆ ಕರಕೊಂಡು ಹೋಗಿ ಅವನ ಕಣ್ಣುಗಳಲ್ಲಿ ಉಗುಳಿ ಅವನ ಮೇಲೆ ಕೈಯಿಟ್ಟು - ನಿನಗೇನಾದರೂ ಕಾಣುತ್ತದೋ? ಎಂದು ಅವನನ್ನು ಕೇಳಿದನು. ಅವನು ತಲೆಯೆತ್ತಿ ನೋಡಿ - ನನಗೆ ಜನರು ಕಾಣುತ್ತಾರೆ; ಅವರು ಮರಗಳಂತೆ ಕಾಣಿಸಿದರೂ ತಿರುಗಾಡುತ್ತಾ ಇದ್ದಾರೆ ಅಂದನು. ಆಗ ಆತನು ಅವನ ಕಣ್ಣುಗಳ ಮೇಲೆ ತಿರಿಗಿ ಕೈಯಿಟ್ಟನು; ಅವನು ಕಣ್ಣು ಬಿಟ್ಟು ನೋಡಲು ಅವನಿಗೆ ಗುಣವಾಗಿತ್ತು; ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು. ತರುವಾಯ ಆತನು - ನೀನು ಊರೊಳಕ್ಕೇನೂ ಹೋಗಬೇಡ ಎಂದು ಹೇಳಿ ಅವನನ್ನು ಅವನ ಮನೆಗೆ ಕಳುಹಿಸಿಬಿಟ್ಟನು.
ಯೇಸು ಫಿಲಿಪ್ಪನ ಕೈಸರೈಯ ಎಂಬ ಪಟ್ಟಣದ ಪ್ರಾಂತ್ಯಕ್ಕೆ ಬಂದಾಗ - ಜನರು ಮನುಷ್ಯಕುಮಾರನೆಂಬ ನನ್ನನ್ನು ಯಾರು ಅನ್ನುತ್ತಾರೆ ಎಂದು ತನ್ನ ಶಿಷ್ಯರನ್ನು ಕೇಳಿದ್ದಕ್ಕೆ ಅವರು - ನಿನ್ನನ್ನು ಕೆಲವರು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ, ಕೆಲವರು ಎಲೀಯನು ಅನ್ನುತ್ತಾರೆ, ಬೇರೆ ಕೆಲವರು ಯೆರೆಮೀಯನು, ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು ಅನ್ನುತ್ತಾರೆ ಎಂದು ಹೇಳಿದರು. ಆತನು ಅವರನ್ನು - ಆದರೆ ನೀವು ನನ್ನನ್ನು ಯಾರನ್ನುತ್ತೀರಿ ಎಂದು ಕೇಳಲಾಗಿ ಸೀಮೋನ್ ಪೇತ್ರನು - ನೀನು ಬರಬೇಕಾಗಿರುವ ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು ಎಂದು ಉತ್ತರಕೊಟ್ಟನು. ಅದಕ್ಕೆ ಯೇಸು - ಯೋನನ ಮಗನಾದ ಸೀಮೋನನೇ, ನೀನು ಧನ್ಯನು; ಈ ಗುಟ್ಟು ನಿನಗೆ ತಿಳಿಸಿದವನು ನರಮನುಷ್ಯನಲ್ಲ, ಪರಲೋಕದಲ್ಲಿರುವ ನನ್ನ ತಂದೆಯೇ ತಿಳಿಸಿದನು. ಮತ್ತು ನಾನೂ ನಿನಗೆ ಒಂದು ಮಾತನ್ನು ಹೇಳುತ್ತೇನೆ, ಅದೇನಂದರೆ - ನೀನು ಪೇತ್ರನು, ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುವೆನು; ಪಾತಾಳಲೋಕದ ಬಲವು ಅದನ್ನು ಸೋಲಿಸಲಾರದು. ಪರಲೋಕರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು; ಭೂಲೋಕದಲ್ಲಿ ನೀನು ಯಾವದನ್ನು ಕಟ್ಟುತ್ತೀಯೋ, ಅದು ಪರಲೋಕದಲ್ಲಿಯೂ ಕಟ್ಟಿರುವದು; ಮತ್ತು ಭೂಲೋಕದಲ್ಲಿ ನೀನು ಯಾವದನ್ನು ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಿರುವದು ಅಂದನು. ಆಗ ಆತನು - ನಾನು ಕ್ರಿಸ್ತನಾಗಿದ್ದೇನೆಂಬದನ್ನು ಯಾರಿಗೂ ಹೇಳಬೇಡಿರಿ ಎಂದು ಶಿಷ್ಯರಿಗೆ ಖಂಡಿತವಾಗಿ ಹೇಳಿದನು.
ಅಂದಿನಿಂದ ಯೇಸು ಕ್ರಿಸ್ತನು ತಾನು ಯೆರೂಸಲೇವಿುಗೆ ಹೋಗಿ ಅಲ್ಲಿ ಹಿರಿಯರಿಂದಲೂ ಮಹಾಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹು ಕಷ್ಟಗಳನ್ನನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡಬೇಕೆಂದು ತನ್ನ ಶಿಷ್ಯರಿಗೆ ತಿಳಿಸುವದಕ್ಕೆ ಪ್ರಾರಂಭಮಾಡಿದನು. ಆಗ ಪೇತ್ರನು ಆತನ ಕೈಹಿಡಿದು - ಸ್ವಾಮೀ, ದೇವರು ನಿನ್ನನ್ನು ಕಾಯಲಿ; ನಿನಗೆ ಹೀಗೆ ಎಂದಿಗೂ ಆಗಬಾರದು ಎಂದು ಆತನನ್ನು ಗದರಿಸುವದಕ್ಕೆ ಪ್ರಾರಂಭಿಸಲು ಆತನು ತಿರುಗಿಕೊಂಡು ಪೇತ್ರನಿಗೆ - ಸೈತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ, ನನಗೆ ನೀನು ವಿಘ್ನವಾಗಿದ್ದೀ; ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ ಎಂದು ಹೇಳಿದನು.
ಆಮೇಲೆ ಆತನು ತನ್ನ ಶಿಷ್ಯರ ಜೊತೆಗೆ ಜನರ ಗುಂಪನ್ನೂ ಹತ್ತಿರ ಕರೆದು ಅವರಿಗೆ ಹೇಳಿದ್ದೇನಂದರೆ - ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳಕೊಳ್ಳುವನು; ಆದರೆ ನನ್ನ ನಿವಿುತ್ತವಾಗಿಯೂ ಸುವಾರ್ತೆಯ ನಿವಿುತ್ತವಾಗಿಯೂ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಉಳಿಸಿಕೊಳ್ಳುವನು. ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು? ಒಬ್ಬನು ತನ್ನ ಪ್ರಾಣಕ್ಕೆ ಏನು ಈಡು ಕೊಡಬಹುದು? ವ್ಯಭಿಚಾರಿಣಿಯಂತಿರುವ ಈ ಪಾಪಿಷ್ಠ ಸಂತತಿಯಲ್ಲಿ ಯಾವನು ನನಗೂ ನನ್ನ ಮಾತುಗಳಿಗೂ ನಾಚಿಕೊಳ್ಳುತ್ತಾನೋ ಅವನಿಗೆ ಮನುಷ್ಯಕುಮಾರನು, ತಾನು ತನ್ನ ತಂದೆಯ ಪ್ರಭಾವದೊಡನೆ ಪರಿಶುದ್ಧ ದೇವದೂತರ ಸಮೇತವಾಗಿ ಬರುವಾಗ ನಾಚಿಕೊಳ್ಳುವನು ಅಂದನು. ಮನುಷ್ಯಕುಮಾರನು ತನ್ನ ತಂದೆಯ ಪ್ರಭಾವದೊಡನೆ ತನ್ನ ದೂತರ ಸಮೇತವಾಗಿ ಬರುವನು; ಆವಾಗ ಆತನು ಒಬ್ಬೊಬ್ಬನಿಗೆ ಅವನವನ ನಡತೆಗೆ ತಕ್ಕ ಫಲವನ್ನು ಕೊಡುವನು.ನಿಮಗೆ ನಿಜವಾಗಿ ಹೇಳುತ್ತೇನೆ, ಇಲ್ಲಿ ನಿಂತವರೊಳಗೆ ಕೆಲವರು, ಮನುಷ್ಯಕುಮಾರನು ತನ್ನ ರಾಜ್ಯದಲ್ಲಿ ಬರುವದನ್ನು ನೋಡುವ ತನಕ ಮರಣಹೊಂದುವದಿಲ್ಲ ಅಂದನು.
ಅಧ್ಯಾಯ 32
ಯೇಸು ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿವಸಗಳಾದ ಮೇಲೆ ಪೇತ್ರ ಯೋಹಾನ ಯಾಕೋಬರನ್ನು ಕರಕೊಂಡು ಪ್ರಾರ್ಥನೆಮಾಡುವದಕ್ಕೆ ಬೆಟ್ಟವನ್ನು ಹತ್ತಿದನು. ಆತನು ಪ್ರಾರ್ಥನೆಮಾಡುತ್ತಿರಲಾಗಿ ಆತನ ಮುಖಭಾವವು ಬೇರೆಯಾಯಿತು. ಆತನ ಉಡುಪು ಬೆಳ್ಳಗಾಗಿ ವಿುಂಚುತ್ತಾ ಬಂತು. ಇದಲ್ಲದೆ ಇಬ್ಬರು ಪುರುಷರು ಆತನ ಸಂಗಡ ಮಾತಾಡುತ್ತಿದ್ದರು. ಇವರು ಯಾರಂದರೆ ಮೋಶೆಯೂ ಎಲೀಯನೂ. ಇವರು ವೈಭವದೊಡನೆ ಕಾಣಿಸಿಕೊಂಡು ಯೆರೂಸಲೇವಿುನಲ್ಲಿ ಆತನು ನೆರವೇರಿಸಬೇಕಾಗಿದ್ದ ಮರಣದ ವಿಷಯವಾಗಿ ಮಾತಾಡುತ್ತಿದ್ದರು. ಇಷ್ಟರಲ್ಲಿ ಪೇತ್ರನಿಗೂ ಅವನ ಸಂಗಡ ಇದ್ದವರಿಗೂ ನಿದ್ರೆಯಿಂದ ಮೈಭಾರವಾಗಿತ್ತು. ಆದರೆ ಎಚ್ಚರವಾದ ಮೇಲೆ ಅವರು ಆತನ ಮಹಿಮೆಯನ್ನೂ ಆತನ ಸಂಗಡ ನಿಂತಿದ್ದ ಆ ಇಬ್ಬರು ಪುರುಷರನ್ನೂ ಕಂಡರು. ಇವರು ಆತನನ್ನು ಬಿಟ್ಟುಹೋಗುತ್ತಿರುವಾಗ ಪೇತ್ರನು ಯೇಸುವಿಗೆ - ಗುರುವೇ ನಾವು ಇಲ್ಲೇ ಇರುವದು ಒಳ್ಳೇದು, ಮೂರು ಪರ್ಣಶಾಲೆಗಳನ್ನು ಕಟ್ಟುವೆವು; ನಿನಗೊಂದು ಮೋಶೆಗೊಂದು ಎಲೀಯನಿಗೊಂದು ಎಂದು ಹೇಳಿದನು. ತಾನಂದದ್ದು ತನಗೇ ಗೊತ್ತಾಗಲಿಲ್ಲ. ಅವನು ಇದನ್ನು ಹೇಳುತ್ತಿರುವಲ್ಲಿ ಮೋಡವು ಬಂದು ಅವರ ಮೇಲೆ ಕವಿಯಿತು. ಅವರು ಮೋಡದೊಳಗೆ ಸೇರಿದಾಗ ಹೆದರಿದರು. ಆಗ ಆ ಮೋಡದೊಳಗಿಂದ - ಈತನು ನನ್ನ ಮಗನು. ನಾನು ಆರಿಸಿಕೊಂಡವನು; ಈತನ ಮಾತನ್ನು ಕೇಳಿರಿ ಎಂಬ ಆಕಾಶವಾಣಿ ಆಯಿತು.ಶಿಷ್ಯರು ಇದನ್ನು ಕೇಳಿ ಬಹಳವಾಗಿ ಹೆದರಿ ಬೋರಲಬಿದ್ದರು. ಆದರೆ ಯೇಸು ಹತ್ತರಕ್ಕೆ ಬಂದು ಅವರನ್ನು ಮುಟ್ಟಿ - ಏಳಿರಿ, ಹೆದರಬೇಡಿರಿ ಅಂದನು. ಅವರು ಕಣ್ಣೆತ್ತಿ ನೋಡಿದಾಗ ಯೇಸುವನ್ನೇ ಹೊರತು ಮತ್ತಾರನ್ನೂ ಕಾಣಲಿಲ್ಲ.
ಅವರು ಆ ಬೆಟ್ಟದಿಂದ ಇಳಿದುಬರುತ್ತಿರುವಾಗ ಯೇಸು ಅವರಿಗೆ - ನೀವು ಈಗ ಕಂಡ ದರ್ಶನವನ್ನು ಮನುಷ್ಯಕುಮಾರನು ಸತ್ತು ಜೀವಿತನಾಗಿ ಎಬ್ಬಿಸಲ್ಪಡುವ ತನಕ ಯಾರಿಗೂ ಹೇಳಬೇಡಿರೆಂದು ಖಂಡಿತವಾಗಿ ಹೇಳಿದನು.ಅವರು ಈ ಮಾತನ್ನು ಹಿಡಿದು ಸತ್ತುಜೀವಿತನಾಗಿ ಏಳುವದಂದರೇನು ಎಂದು ತಮ್ಮ ತಮ್ಮೊಳಗೆ ಮಾತಾಡಿಕೊಂಡರು.ಆಗ ಆತನ ಶಿಷ್ಯರು - ಎಲೀಯನು ಮೊದಲು ಬರುವದು ಅಗತ್ಯವೆಂಬದಾಗಿ ಶಾಸ್ತ್ರಿಗಳು ಹೇಳುತ್ತಾರಲ್ಲಾ, ಇದು ಹೇಗೆ ಎಂದು ಆತನನ್ನು ಕೇಳಿದ್ದಕ್ಕೆ ಆತನು - ಎಲೀಯನು ಬರುವದು ನಿಜ; ಬಂದು ಎಲ್ಲವನ್ನು ತಿರಿಗಿ ಸರಿಮಾಡುವನು; ಆದರೆ ನಾನು ನಿಮಗೆ ಹೇಳುವದೇನಂದರೆ, ಎಲೀಯನು ಬಂದು ಹೋದನು; ಜನರು ಅವನ ಗುರುತು ಅರಿಯದೆ ತಮ್ಮ ಮನಸ್ಸಿಗೆ ಬಂದಂತೆ ಅವನಿಗೆ ಮಾಡಿದರು. ಅವನಿಗಾದಂತೆ ಮನುಷ್ಯಕುಮಾರನಿಗೆ ಸಹ ಅವರ ಕಡೆಯಿಂದ ಹಿಂಸೆಯಾಗುವದು ಎಂದು ಉತ್ತರಕೊಟ್ಟನು. ಆಗ ಸ್ನಾನಿಕನಾದ ಯೋಹಾನನ ವಿಷಯವಾಗಿ ತಮಗೆ ಈ ಮಾತನ್ನು ಹೇಳಿದನೆಂದು ಶಿಷ್ಯರು ತಿಳುಕೊಂಡರು.
ತರುವಾಯ ಅವರು [ಉಳಿದ] ಶಿಷ್ಯರ ಬಳಿಗೆ ಬಂದು ಅವರ ಸುತ್ತಲು ಜನರ ದೊಡ್ಡ ಗುಂಪು ಇರುವದನ್ನೂ ಅವರ ಸಂಗಡ ಶಾಸ್ತ್ರಿಗಳು ತರ್ಕಮಾಡುವದನ್ನೂ ಕಂಡರು. ಕೂಡಲೆ ಆ ಗುಂಪಿನವರೆಲ್ಲರು ಯೇಸುವನ್ನು ಕಂಡು ಬಹು ಆಶ್ಚರ್ಯಪಟ್ಟು ಆತನ ಬಳಿಗೆ ಓಡಿ ಬಂದು ಆತನನ್ನು ವಂದಿಸಿದರು. ಆತನು ಶಾಸ್ತ್ರಿಗಳನ್ನು - ಇವರ ಸಂಗಡ ಏನು ತರ್ಕಮಾಡುತ್ತೀರಿ? ಎಂದು ಕೇಳಿದ್ದಕ್ಕೆ ಆ ಗುಂಪಿನಲ್ಲಿ ಒಬ್ಬನು - ಬೋಧಕನೇ, ನನ್ನ ಮಗನನ್ನು ನಿನ್ನ ಬಳಿಗೆ ಕರಕೊಂಡು ಬಂದೆನು; ಅವನಿಗೊಂದು ಮೂಗದೆವ್ವ ಹಿಡಿದದೆ; ಅದು ಎಲ್ಲಿ ಅವನ ಮೇಲೆ ಬಂದರೂ ಅವನನ್ನು ಕೆಡವುತ್ತದೆ; ಆಗ ಅವನು ನೊರೆ ಸುರಿಸುತ್ತಾ ಕರಕರನೆ ಹಲ್ಲು ಕಡಿಯುತ್ತಾ ಕುಂದಿ ಹೋಗುತ್ತಾನೆ. ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರಿಗೆ ಹೇಳಿಕೊಂಡೆ; ಅವರ ಕೈಯಿಂದ ಆಗದೆಹೋಯಿತು ಎಂದು ಉತ್ತರ ಕೊಟ್ಟನು. ಅದಕ್ಕಾತನು - ಎಲಾ, ನಂಬಿಕೆಯಿಲ್ಲದಂಥ ಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇರಲಿ? ಇನ್ನೆಷ್ಟು ದಿನ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ, ಅನ್ನಲು
ಅವನನ್ನು ಆತನ ಬಳಿಗೆ ತೆಗೆದುಕೊಂಡು ಬಂದರು. ಆತನನ್ನು ಕಂಡಕೂಡಲೆ ಆ ದೆವ್ವವು ಅವನನ್ನು ಬಹಳವಾಗಿ ಒದ್ದಾಡಿಸಲು ಅವನು ನೆಲಕ್ಕೆ ಬಿದ್ದು ನೊರೆ ಸುರಿಸುತ್ತಾ ಹೊರಳಾಡಿದನು. ಯೇಸು ಅವನ ತಂದೆಯನ್ನು - ಇದು ಇವನಿಗೆ ಬಂದು ಎಷ್ಟು ದಿನವಾಯಿತು ಎಂದು ಕೇಳಿದಾಗ ಅವನು - ಚಿಕ್ಕಂದಿನಲ್ಲಿಯೇ ಬಂದಿದೆ; ಮತ್ತು ಇವನನ್ನು ಕೊಲ್ಲಬೇಕೆಂದು ಆಗಾಗ್ಗೆ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಕೆಡವಿತು; ನಿನ್ನ ಕೈಲಿ ಏನಾದರೂ ಆಗುವ ಹಾಗಿದ್ದರೆ ನಮ್ಮ ಮೇಲೆ ಕರುಣೆಯಿಟ್ಟು ನಮಗೆ ಸಹಾಯಮಾಡು ಅಂದನು. ಯೇಸು ಅವನಿಗೆ - ನಿನ್ನ ಕೈಲಿ ಆಗುವ ಹಾಗಿದ್ದರೆ ಅನ್ನುತ್ತೀಯೋ? ನಂಬುವವನಿಗೆ ಎಲ್ಲಾ ಆಗುವದು ಎಂದು ಹೇಳಿದನು. ಕೂಡಲೆ ಆ ಹುಡುಗನ ತಂದೆಯು - ನಂಬುತ್ತೇನೆ, ನನಗೆ ನಂಬಿಕೆ ಕಡಿಮೆಯಾಗಿದ್ದರೂ ಸಹಾಯಮಾಡು ಎಂದು ಕೂಗಿ ಹೇಳಿದನು. ಆಗ ಯೇಸು ಜನರ ಗುಂಪು ಓಡಿಬರುವದನ್ನು ಕಂಡು ಆ ದೆವ್ವವನ್ನು ಗದರಿಸಿ - ಎಲೇ, ಕಿವುಡಾದ ಮೂಗದೆವ್ವವೇ, ಇವನನ್ನು ಬಿಟ್ಟುಹೋಗು; ಇನ್ನು ಮುಂದೆ ಹಿಡಿಯಬೇಡವೆಂದು ನಾನು ನಿನಗೆ ಅಪ್ಪಣೆಕೊಡುತ್ತೇನೆ ಅಂದನು. ಆಗ ಅದು ಅಬ್ಬರಿಸಿ ಅವನನ್ನು ಒದ್ದಾಡಿಸಿ ಬಿಟ್ಟು ಹೋಯಿತು. ಆ ಹುಡುಗನು ಸತ್ತಹಾಗೆ ಬಿದ್ದಿದ್ದರಿಂದ ಬಹುಜನರು - ಸತ್ತುಹೋದ ಅಂದರು. ಆದರೆ ಯೇಸು ಅವನನ್ನು ಕೈಹಿಡಿದು ಎಬ್ಬಿಸಲು ಅವನು ಎದ್ದು ನಿಂತನು. ಯೇಸು ಮನೆಗೆ ಬಂದಾಗ ಆತನ ಶಿಷ್ಯರು - ಅದನ್ನು ಬಿಡಿಸಲಿಕ್ಕೆ ನವ್ಮಿುಂದ ಯಾಕೆ ಆಗಲಿಲ್ಲವೆಂದು ಆತನನ್ನು ಏಕಾಂತದಲ್ಲಿ ಕೇಳಲುನಿಮ್ಮ ನಂಬಿಕೆ ಕಡಿಮೆಯಾಗಿರುವದರಿಂದಲೇ ಆಗಲಿಲ್ಲ; ನಿಮಗೆ ಸತ್ಯವಾಗಿ ಹೇಳುತ್ತೇನೆ, ಸಾಸಿವೇಕಾಳಷ್ಟು ನಂಬಿಕೆ ನಿಮಗೆ ಇರುವದಾದರೆ ನೀವು ಈ ಬೆಟ್ಟಕ್ಕೆ - ಇಲ್ಲಿಂದ ಅಲ್ಲಿಗೆ ಹೋಗು ಎಂದು ಹೇಳಿದರೂ ಅದು ಹೋಗುವದು; ಮತ್ತು ನಿಮ್ಮ ಕೈಯಿಂದಾಗದಂಥದು ಒಂದೂ ಇರುವದಿಲ್ಲ ಅಂದನು.
ಅಧ್ಯಾಯ 33
ಅಲ್ಲಿಂದ ಅವರು ಹೊರಟು ಗಲಿಲಾಯವನ್ನು ಹಾದು ಹೋಗುತ್ತಿದ್ದರು. ಇದು ಜನರಿಗೆ ಗೊತ್ತಾಗಬಾರದೆಂದು ಆತನಿಗೆ ಮನಸ್ಸಿತ್ತು. ಯಾಕಂದರೆ ಆತನು ತನ್ನ ಶಿಷ್ಯರಿಗೆ ಉಪದೇಶಮಾಡುತ್ತಾ - ಮನುಷ್ಯಕುಮಾರನು ಜನರ ಕೈಗೆ ಒಪ್ಪಿಸಲ್ಪಡುತ್ತಾನೆ; ಅವರು ಅವನನ್ನು ಕೊಲ್ಲುವರು; ಕೊಂದ ಮೂರು ದಿನದ ಮೇಲೆ ಆತನು ಜೀವಿತನಾಗಿ ಎದ್ದು ಬರುವನೆಂದು ಹೇಳಿದನು. ಅವರು ಆ ಮಾತನ್ನು ಗ್ರಹಿಸಲಿಲ್ಲ, ಆದರೆ ಆತನನ್ನು ಕೇಳುವದಕ್ಕೆ ಅಂಜಿದರು.
ಅವರು ಕಪೆರ್ನೌವಿುಗೆ ಬಂದಾಗ ದೇವಾಲಯಕ್ಕಾಗಿ ತೆರಿಗೆಯನ್ನು ಎತ್ತುವವರು ಪೇತ್ರನ ಬಳಿಗೆ ಬಂದು - ನಿಮ್ಮ ಬೋಧಕನು ದೇವಾಲಯದ ತೆರಿಗೆಯನ್ನು ಸಲ್ಲಿಸುವದಿಲ್ಲವೇ ಎಂದು ಕೇಳಲು - ಹೌದು, ಸಲ್ಲಿಸುವನು ಅಂದನು. ಪೇತ್ರನು ಮನೆಯೊಳಕ್ಕೆ ಬಂದಾಗ ಯೇಸು ಅವನಿಗಿಂತ ಮೊದಲೇ - ಸೀಮೋನಾ, ನಿನಗೆ ಹೇಗೆ ತೋರುತ್ತದೆ? ಭೂಲೋಕದ ಅರಸರು ಸುಂಕವನ್ನಾಗಲಿ ಮಂಡೇತೆರಿಗೆಯನ್ನಾಗಲಿ ಯಾರಿಂದ ತೆಗೆದುಕೊಳ್ಳುತ್ತಾರೆ? ತಮ್ಮ ಮಕ್ಕಳಿಂದಲೋ? ಬೇರೆಯವರಿಂದಲೋ ಎಂದು ಕೇಳಿದನು. ಅವನು - ಬೇರೆಯವರಿಂದ ಎಂದು ಉತ್ತರಕೊಡಲು ಯೇಸು ಅವನಿಗೆ - ಹಾಗಾದರೆ ಮಕ್ಕಳು ಅದಕ್ಕೆ ಒಳಗಾದವರಲ್ಲವಲ್ಲಾ. ಆದರೂ ನಮ್ಮ ವಿಷಯವಾಗಿ ಅವರು ಬೇಸರಗೊಳ್ಳಬಾರದು; ನೀನು ಸಮುದ್ರಕ್ಕೆ ಹೋಗಿ ಗಾಳಾ ಹಾಕಿ ಮೊದಲು ಸಿಕ್ಕುವ ಮೀನನ್ನು ಎತ್ತು; ಅದರ ಬಾಯಿ ತೆರೆದು ನೋಡಿದರೆ ಅದರಲ್ಲಿ ಒಂದು ರೂಪಾಯಿ ಸಿಕ್ಕುವದು; ಅದನ್ನು ತೆಗೆದುಕೊಂಡು ನಮ್ಮಿಬ್ಬರದಂತ ಹೇಳಿ ಅವರಿಗೆ ಕೊಡು ಎಂದು ಹೇಳಿದನು.
ತರುವಾಯ ಶಿಷ್ಯರೊಳಗೆ - ತಮ್ಮಲ್ಲಿ ಯಾವನು ಹೆಚ್ಚಿನವನಾಗುವನು ಎಂಬ ವಿಚಾರ ಹುಟ್ಟಿತು.ಮತ್ತು ಅವರು ಕಪೆರ್ನೌವಿುಗೆ ಬಂದರು. ಅಲ್ಲಿ ಆತನು ಮನೆಯಲ್ಲಿದ್ದಾಗ - ನೀವು ದಾರಿಯಲ್ಲಿ ಏನು ಮಾತಾಡಿಕೊಳ್ಳುತ್ತಿದ್ದಿರಿ ಎಂದು ಶಿಷ್ಯರನ್ನು ಕೇಳಲು ಆತನು ಕೂತುಕೊಂಡು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ - ಯಾವನಾದರೂ ಮೊದಲಿನವನಾಗಬೇಕೆಂದಿದ್ದರೆ ಅವನು ಎಲ್ಲರಲ್ಲಿ ಕಡೆಯವನೂ ಎಲ್ಲರ ಆಳೂ ಆಗಿರಬೇಕು ಎಂದು ಹೇಳಿಯೇಸು ಅವರ ಮನಸ್ಸಿನ ವಿಚಾರವನ್ನು ತಿಳಿದು ಒಂದು ಚಿಕ್ಕ ಮಗುವನ್ನು ಹಿಡಿದುಕೊಂಡು ತನ್ನ ಬಳಿಯಲ್ಲಿ ನಿಲ್ಲಿಸಿ ಅವರಿಗೆ - ಯಾವನಾದರೂ ನನ್ನ ಹೆಸರಿನಲ್ಲಿ ಈ ಚಿಕ್ಕ ಮಗುವನ್ನು ಸೇರಿಸಿಕೊಂಡರೆ ನನ್ನನ್ನು ಸೇರಿಸಿಕೊಂಡ ಹಾಗಾಯಿತು; ಮತ್ತು ಯಾವನಾದರೂ ನನ್ನನ್ನು ಸೇರಿಸಿಕೊಂಡರೆ ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಂಡ ಹಾಗಾಯಿತು; ಯಾಕಂದರೆ ನಿಮ್ಮೆಲ್ಲರಲ್ಲಿ ಯಾವನು ಚಿಕ್ಕವನೋ ಅವನೇ ದೊಡ್ಡವನು ಎಂದು ಹೇಳಿದನು.
ಯೋಹಾನನು ಆತನಿಗೆ - ಬೋಧಕನೇ, ಯಾವನೋ ಒಬ್ಬನು ನಿನ್ನ ಹೆಸರನ್ನು ಹೇಳಿ ದೆವ್ವ ಬಿಡಿಸುವದನ್ನು ನಾವು ಕಂಡು ಅವನು ನಮಗೆ ಸೇರಿದವನಲ್ಲವಾದ್ದರಿಂದ ಅವನಿಗೆ ಅಡ್ಡಿಮಾಡಿದೆವು ಎಂದು ಹೇಳಲಾಗಿ ಯೇಸು - ಅವನಿಗೆ ಅಡ್ಡಿಮಾಡಬೇಡಿರಿ; ನನ್ನ ಹೆಸರಿನ ಮೇಲೆ ಮಹತ್ತನ್ನು ಮಾಡಿ ಏಕಾಏಕಿ ನನ್ನನ್ನು ದೂಷಿಸುವವನು ಒಬ್ಬನೂ ಇಲ್ಲ. ನಮ್ಮನ್ನು ಎದುರಿಸದವನು ನಮ್ಮ ಪಕ್ಷದವನೇ. ನೀವು ಕ್ರಿಸ್ತನವರೆಂದು ನಿಮಗೆ ಯಾವನಾದರೂ ಒಂದು ತಂಬಿಗೆ ನೀರನ್ನು ಕುಡಿಯುವದಕ್ಕೆ ಕೊಟ್ಟರೆ ಬರತಕ್ಕ ಪ್ರತಿಫಲವು ಅವನಿಗೆ ತಪ್ಪುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆ ವೇಳೆಯಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು - ಪರಲೋಕರಾಜ್ಯದಲ್ಲಿ ಯಾವನು ಹೆಚ್ಚಿನವನು ಎಂದು ಕೇಳಲು ಆತನು ಚಿಕ್ಕ ಮಗುವನ್ನು ಹತ್ತರಕ್ಕೆ ಕರೆದು ಅವರ ನಡುವೆ ನಿಲ್ಲಿಸಿ ಅವರಿಗೆ - ನೀವು ತಿರುಗಿಕೊಂಡು ಚಿಕ್ಕ ಮಕ್ಕಳಂತೆ ಆಗದೆ ಹೋದರೆ ನೀವು ಪರಲೋಕರಾಜ್ಯದಲ್ಲಿ ಸೇರುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವದರಿಂದ ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಗ್ಗಿಸಿಕೊಳ್ಳುತ್ತಾನೋ, ಅವನೇ ಪರಲೋಕರಾಜ್ಯದಲ್ಲಿ ಹೆಚ್ಚಿನವನು.
ಅಧ್ಯಾಯ 34
ಆತನು ತನ್ನ ಶಿಷ್ಯರಿಗೆ - ತೊಡಕುಗಳು ಬಾರದೆ ಇರಲಾರವು; ಆದರೂ ಅವು ಯಾವನಿಂದ ಬರುತ್ತವೆಯೋ ಅವನ ಗತಿಯನ್ನು ಏನು ಹೇಳಲಿ?ಆದರೆ ನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಅಡ್ಡಿಯಾದರೆ ಅಂಥವನ ಕೊರಳಿಗೆ ಬೀಸುವ ಕಲ್ಲು ಕಟ್ಟಿ ಅವನನ್ನು ಆಳವಾದ ಸಮುದ್ರದಲ್ಲಿ ಮುಣುಗಿಸಿಬಿಡುವದು ಅವನಿಗೆ ಹಿತವಾಗುವದು.ತೊಡಕುಗಳು ಬರುವದರಿಂದ ಲೋಕಕ್ಕೆ ಎಷ್ಟೋ ಕೇಡು! ತೊಡಕುಗಳು ಹೇಗಾದರೂ ಬರುವವು. ಆದಾಗ್ಯೂ ಯಾವ ಮನುಷ್ಯನಿಂದ ತೊಡಕು ಬರುತ್ತದೋ, ಅವನ ಗತಿಯನ್ನು ಏನು ಹೇಳಲಿ! ಹಾಗಾದರೆ ನಿನ್ನ ಕೈಯಾಗಲಿ ನಿನ್ನ ಕಾಲಾಗಲಿ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಡಿದು ಬಿಸಾಟುಬಿಡು; ಎರಡು ಕೈ ಎರಡು ಕಾಲು ಉಳ್ಳವನಾಗಿದ್ದು ನಿತ್ಯವಾಗಿರುವ ಬೆಂಕಿಯಲ್ಲಿ ಹಾಕಿಸಿಕೊಳ್ಳುವದಕ್ಕಿಂತ ಕೈ ಕಾಲು ಕಳಕೊಂಡವನಾಗಿ ಜೀವದಲ್ಲಿ ಸೇರುವದು ನಿನಗೆ ಉತ್ತಮ. ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಿತ್ತು ಬಿಸಾಟುಬಿಡು; ಎರಡು ಕಣ್ಣುಳ್ಳವನಾಗಿದ್ದು ಅಗ್ನಿ ನರಕದಲ್ಲಿ ಹಾಕಿಸಿಕೊಳ್ಳುವದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ಜೀವದಲ್ಲಿ ಸೇರುವದು ನಿನಗೆ ಉತ್ತಮ.ನರಕದಲ್ಲಿ ಅವರನ್ನು ಕಡಿಯುವ ಹುಳ ಸಾಯುವದಿಲ್ಲ, ಬೆಂಕಿ ಆರುವದಿಲ್ಲ. ಪ್ರತಿಯೊಬ್ಬನಿಗೂ ಬೆಂಕಿಯೆಂಬ ಉಪ್ಪಿನ ಹದವು ಕೊಡಲ್ಪಡಬೇಕು. ಉಪ್ಪು ಒಳ್ಳೆಯ ಪದಾರ್ಥವೇ; ಉಪ್ಪು ಸಪ್ಪೆಯಾದರೆ ಅದನ್ನು ಇನ್ಯಾತರಿಂದ ರುಚಿಗೊಳಿಸುವಿರಿ? ನಿಮ್ಮೊಳಗೆ ಉಪ್ಪು ಇರಲಿ, ಒಬ್ಬರಿಗೊಬ್ಬರು ಸಮಾಧಾನದಿಂದಿರಿ.
ಈ ಚಿಕ್ಕವರಲ್ಲಿ ಒಬ್ಬನನ್ನಾದರೂ ತಾತ್ಸಾರಮಾಡಬಾರದು ನೋಡಿರಿ; ಪರಲೋಕದಲ್ಲಿ ಅವರ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಲಿದ್ದಾರೆ ಎಂದು ನಿಮಗೆ ಹೇಳುತ್ತೇನೆ. ನಿಮಗೆ ಹೇಗೆ ತೋರುತ್ತದೆ? ಒಬ್ಬ ಮನುಷ್ಯನಿಗೆ ನೂರು ಕುರಿಗಳು ಇರಲಾಗಿ ಅವುಗಳಲ್ಲಿ ಒಂದು ತಪ್ಪಿಸಿಕೊಂಡರೆ ಅವನು ತೊಂಭತ್ತೊಂಭತ್ತು ಕುರಿಗಳನ್ನು ಬಿಟ್ಟು ಬೆಟ್ಟಕ್ಕೆ ಹೋಗಿ ತಪ್ಪಿಸಿಕೊಂಡದ್ದನ್ನು ಹುಡುಕುತ್ತಾನಲ್ಲವೇ. ಅದು ಸಿಕ್ಕಿದರೆ ತಪ್ಪಿಸಿಕೊಳ್ಳದೆ ಇರುವ ತೊಂಭತ್ತೊಂಭತ್ತು ಕುರಿಗಳಿಗಿಂತ ಆ ಒಂದಕ್ಕೋಸ್ಕರ ಹೆಚ್ಚಾಗಿ ಸಂತೋಷಪಡುವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹಾಗೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ಕೆಟ್ಟುಹೋಗುವದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ. ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನಿನ್ನ ಸಹೋದರನು ತಪ್ಪುಮಾಡಿದರೆ ಅವನನ್ನು ಗದರಿಸು; ಅವನು ಪಶ್ಚಾತ್ತಾಪಪಟ್ಟರೆ ಅವನ ತಪ್ಪನ್ನು ಕ್ಷವಿುಸಿಬಿಡು. ಅವನು ದಿನಕ್ಕೆ ಏಳು ಸಾರಿ ನಿನಗೆ ತಪ್ಪುಮಾಡಿ ಏಳು ಸಾರಿಯೂ ನಿನ್ನ ಕಡೆಗೆ ತಿರುಗಿಕೊಂಡು - ನನಗೆ ಪಶ್ಚಾತ್ತಾಪವಾಯಿತು ಎಂದು ಹೇಳಿದರೆ ಅವನಿಗೆ ಕ್ಷವಿುಸು ಎಂದು ಹೇಳಿದನು.
ಇದಲ್ಲದೆ ನಿನ್ನ ಸಹೋದರನು ತಪ್ಪುಮಾಡಿದರೆ ನೀನು ಹೋಗಿ ನೀನೂ ಅವನೂ ಇಬ್ಬರೇ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. ಅವನು ನಿನ್ನ ಮಾತನ್ನು ಕೇಳಿದರೆ ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ. ಅವನು ಕೇಳದೆಹೋದರೆ ಎರಡು ಮೂರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಾಪನೆಯಾಗುವ ಹಾಗೆ ಇನ್ನೂ ಒಬ್ಬಿಬ್ಬರನ್ನು ನಿನ್ನ ಸಂಗಡ ಕರಕೊಂಡು ಹೋಗು. ಅವನು ಅವರ ಮಾತನ್ನು ಕೇಳದೆ ಹೋದರೆ ಸಭೆಗೆ ಹೇಳು; ಆದರೆ ಸಭೆಯ ಮಾತನ್ನೂ ಕೇಳದೆಹೋದರೆ ಅವನು ನಿನಗೆ ಅಜ್ಞಾನಿಯಂತೆಯೂ ಭ್ರಷ್ಟನಂತೆಯೂ ಇರಲಿ.ಭೂಲೋಕದಲ್ಲಿ ನೀವು ಏನೇನು ಕಟ್ಟುತ್ತೀರೋ ಅದು ಪರಲೋಕದಲ್ಲಿಯೂ ಕಟ್ಟಿರುವದು; ಮತ್ತು ಭೂಲೋಕದಲ್ಲಿ ನೀವು ಏನೇನು ಬಿಚ್ಚುತ್ತೀರೋ ಅದು ಪರಲೋಕದಲ್ಲಿಯೂ ಬಿಚ್ಚಿರುವದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಇದಲ್ಲದೆ ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳತಕ್ಕ ಯಾವದಾದರೂ ಒಂದು ಕಾರ್ಯದ ವಿಷಯವಾಗಿ ಭೂಲೋಕದಲ್ಲಿ ಒಂದೇ ಮನಸ್ಸುಳ್ಳವರಾಗಿದ್ದರೆ ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವದೆಂದು ನಿಮಗೆ ಹೇಳುತ್ತೇನೆ. ಯಾಕಂದರೆ ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿ ಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ ಅಂದನು.ಆಗ ಪೇತ್ರನು ಆತನ ಬಳಿಗೆ ಬಂದು - ಸ್ವಾಮೀ, ನನ್ನ ಸಹೋದರನು ನನಗೆ ತಪ್ಪುಮಾಡುತ್ತಾ ಬಂದರೆ ನಾನು ಎಷ್ಟು ಸಾರಿ ಅವನಿಗೆ ಕ್ಷವಿುಸಬೇಕು? ಏಳು ಸಾರಿಯೋ ಎಂದು ಕೇಳಲು ಯೇಸು ಅವನಿಗೆ - ಏಳು ಸಾರಿ ಎಂದಲ್ಲ, ಏಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ.
ಆದದರಿಂದ ಪರಲೋಕರಾಜ್ಯವು ತನ್ನ ಸೇವಕರಿಂದ ಲೆಕ್ಕವನ್ನು ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ. ಅವನು ಲೆಕ್ಕಾ ತೆಗೆದುಕೊಳ್ಳುವದಕ್ಕೆ ಪ್ರಾರಂಭಮಾಡಿದಾಗ ಕೋಟ್ಯಾಂತರ ಸಾಲಾ ಮಾಡಿದವನೊಬ್ಬನನ್ನು ಅವನ ಬಳಿಗೆ ಹಿಡತಂದರು. ಆ ಸಾಲಾ ತೀರಿಸುವದಕ್ಕೆ ಅವನಲ್ಲಿ ಏನೂ ಇಲ್ಲದ್ದರಿಂದ ಅವನ ಒಡೆಯನು ಅವನನ್ನೂ ಅವನ ಹೆಂಡತಿಮಕ್ಕಳನ್ನೂ ಅವನ ಬದುಕೆಲ್ಲವನ್ನೂ ಮಾರಿ ಅದನ್ನು ತೀರಿಸಬೇಕೆಂದು ಅಪ್ಪಣೆ ಮಾಡಿದನು. ಆ ಸೇವಕನು ಅವನ ಕಾಲಿಗೆ ಬಿದ್ದು ಅವನಿಗೆ - ಒಡೆಯನೇ, ಸ್ವಲ್ಪ ತಾಳಿಕೋ, ನಿನ್ನದೆಲ್ಲಾ ನಾನು ಕೊಟ್ಟು ತೀರಿಸುತ್ತೇನೆಂದು ನಮಸ್ಕರಿಸಲಾಗಿ ಆ ಸೇವಕನ ಒಡೆಯನು ಕನಿಕರಪಟ್ಟು ಅವನನ್ನು ಬಿಡಿಸಿ ಆ ಸಾಲವನ್ನೆಲ್ಲಾ ಬಿಟ್ಟುಬಿಟ್ಟನು. ತರುವಾಯ ಆ ಸೇವಕನು ಹೊರಕ್ಕೆ ಬಂದು ತನಗೆ ನೂರು ಹಣಾ ಕೊಡಬೇಕಾದ ಒಬ್ಬ ಜೊತೇಸೇವಕನನ್ನು ಕಂಡು ಅವನನ್ನು ಹಿಡಿದು - ಎಲಾ, ನನ್ನ ಸಾಲ ತೀರಿಸು ಎಂದು ಹೇಳಿ ಕುತ್ತಿಗೆ ಹಿಸಿಕಿದನು. ಆಗ ಅವನ ಜೊತೇಸೇವಕನು ಅವನ ಕಾಲಿಗೆ ಬಿದ್ದು - ಸ್ವಲ್ಪ ತಾಳಿಕೋ, ತೀರಿಸುತ್ತೇನೆ ಎಂದು ಬೇಡಿಕೊಂಡನು. ಆದರೆ ಅವನು ಒಪ್ಪದೆ ಹೊರಟು ಹೋಗಿ ಆ ಸಾಲಾ ತೀರಿಸುವ ತನಕ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. ಅವನ ಜೊತೇ ಸೇವಕರು ನಡೆದ ಸಂಗತಿಯನ್ನು ನೋಡಿ ಬಹಳವಾಗಿ ದುಃಖಪಟ್ಟು ಒಡೆಯನ ಬಳಿಗೆ ಬಂದು ನಡೆದದ್ದನ್ನೆಲ್ಲಾ ತಿಳಿಸಿದರು. ಆಗ ಅವನ ಒಡೆಯನು ಅವನನ್ನು ಕರಸಿ - ಎಲಾ ನೀಚನೇ, ನೀನು ನನ್ನನ್ನು ಬೇಡಿಕೊಂಡದ್ದರಿಂದ ಆ ಸಾಲವನ್ನೆಲ್ಲಾ ನಾನು ಬಿಟ್ಟುಬಿಟ್ಟೆನಲ್ಲಾ; ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೇಸೇವಕನನ್ನು ಕರುಣಿಸಬಾರದಾಗಿತ್ತೇ ಎಂದು ಹೇಳಿ ಸಿಟ್ಟುಮಾಡಿ ತನಗೆ ಕೊಡಬೇಕಾದ ಸಾಲವನ್ನು ತೀರಿಸುವ ತನಕ ಪೀಡಿಸುವವರ ಕೈಗೆ ಒಪ್ಪಿಸಿದನು. ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಹೋದರನಿಗೆ ಮನಃಪೂರ್ವಕವಾಗಿ ಕ್ಷವಿುಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು.
ಅಧ್ಯಾಯ 35
ಯೇಸು ತಾನು ಪರಲೋಕವನ್ನೇರುವ ದಿವಸಗಳು ತುಂಬುತ್ತಾ ಬರುವಾಗ ಯೆರೂಸಲೇವಿುಗೆ ಹೋಗುವದಕ್ಕೆ ಮನಸ್ಸನ್ನು ದೃಢಮಾಡಿಕೊಂಡು ತನ್ನ ಮುಂದಾಗಿ ದೂತರನ್ನು ಕಳುಹಿಸಿದನು. ಇವರು ಹೊರಟು ಆತನಿಗೆ ಬೇಕಾದದ್ದನ್ನು ಸಿದ್ಧಮಾಡುವದಕ್ಕಾಗಿ ಸಮಾರ್ಯದವರ ಒಂದು ಹಳ್ಳಿಗೆ ಬಂದರು. ಆದರೆ ಆತನು ಯೆರೂಸಲೇವಿುಗೆ ಹೋಗುವವನಾದದರಿಂದ ಆ ಸಮಾರ್ಯದವರು ಆತನನ್ನು ಸೇರಿಸಿಕೊಳ್ಳಲಿಲ್ಲ. ಆತನ ಶಿಷ್ಯರಾದ ಯಾಕೋಬ ಯೋಹಾನರು ಇದನ್ನು ಕಂಡು - ಸ್ವಾಮೀ, ಆಕಾಶದಿಂದ ಬೆಂಕಿಬಿದ್ದು ಇವರನ್ನು ನಾಶಮಾಡಲಿ ಎಂದು ನಾವು ಹೇಳುವದಕ್ಕೆ ನಿನಗೆ ಮನಸ್ಸುಂಟೋ ಎಂದು ಕೇಳಲು ಆತನು ತಿರುಗಿಕೊಂಡು ಅವರನ್ನು ಗದರಿಸಿದನು. ಆಗ ಅವರೆಲ್ಲರು ಬೇರೆ ಹಳ್ಳಿಗೆ ಹೋದರು.
ಇದಾದ ಮೇಲೆ ಸ್ವಾವಿುಯು ಇನ್ನೂ ಎಪ್ಪತ್ತು ಮಂದಿಯನ್ನು ನೇವಿುಸಿ ಅವರನ್ನು ಇಬ್ಬಿಬ್ಬರಾಗಿ ತಾನು ಹೋಗಬೇಕೆಂದಿದ್ದ ಪ್ರತಿಯೊಂದೂರಿಗೂ ಪ್ರತಿಯೊಂದು ಸ್ಥಳಕ್ಕೂ ಮುಂದಾಗಿ ಕಳುಹಿಸಿದನು. ಕಳುಹಿಸುವಾಗ ಅವರಿಗೆ ಹೇಳಿದ್ದೇನಂದರೆ - ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು - ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ. ಹೋಗಿರಿ; ತೋಳಗಳ ನಡುವೆ ಕುರಿಮರಿಗಳನ್ನು ಹೊಗಿಸಿದಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತೇನೆ ನೋಡಿರಿ. ಹಣದ ಚೀಲವನ್ನಾಗಲಿ ಹಸಿಬೆಯನ್ನಾಗಲಿ ಕೆರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ; ದಾರಿಯಲ್ಲಿ ಯಾರಿಗೂ ವಂದಿಸಬೇಡಿರಿ. ಇದಲ್ಲದೆ ನೀವು ಯಾವ ಮನೆಯೊಳಗೆ ಹೋದರೂ - ಈ ಮನೆಗೆ ಶುಭವಾಗಲಿ ಎಂದು ಮೊದಲು ಹೇಳಿರಿ. ಆಶೀರ್ವಾದಪಾತ್ರನು ಅಲ್ಲಿ ಇದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನಿಲ್ಲುವದು; ಇಲ್ಲದಿದ್ದರೆ ಅದು ನಿಮಗೆ ಹಿಂತಿರುಗುವದು. ಆ ಮನೆಯಲ್ಲಿಯೇ ಇದ್ದುಕೊಂಡು ಅವರು ಕೊಡುವಂಥದನ್ನು ಊಟಮಾಡಿರಿ, ಕುಡಿಯಿರಿ. ಆಳು ತನ್ನ ಕೂಲಿಗೆ ಯೋಗ್ಯನಷ್ಟೆ. ಒಂದು ಮನೆಯನ್ನು ಬಿಟ್ಟು ಮತ್ತೊಂದು ಮನೆಗೆ ಹೋಗಿ ಇಳುಕೊಳ್ಳಬೇಡಿರಿ. ಮತ್ತು ನೀವು ಯಾವ ಊರಿಗಾದರೂ ಹೋದ ಮೇಲೆ ಆ ಜನರು ನಿಮ್ಮನ್ನು ಸೇರಿಸಿಕೊಂಡರೆ ಅವರು ನಿಮಗೆ ಬಡಿಸಿದ್ದನ್ನು ಊಟಮಾಡಿರಿ. ಅಲ್ಲಿರುವ ರೋಗಿಗಳಿಗೆ ವಾಸಿಮಾಡಿ ಅವರಿಗೆ - ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದದೆ ಎಂದು ಹೇಳಿರಿ. ಆದರೆ ನೀವು ಯಾವ ಊರಿಗಾದರೂ ಹೋದ ಮೇಲೆ ಆ ಜನರು ನಿಮ್ಮನ್ನು ಸೇರಿಸಿಕೊಳ್ಳದೆ ಹೋದರೆ ನೀವು ಆ ಊರ ಬೀದಿಗಳಿಗೆ ಬಂದು - ನಿಮ್ಮ ಊರಿಂದ ನಮ್ಮ ಕಾಲುಗಳಿಗೆ ಹತ್ತಿದ ಧೂಳನ್ನೂ ಒರಸಿಬಿಡುತ್ತೇವೆ; ಅದು ನಿಮಗೇ ಇರಲಿ; ಆದಾಗ್ಯೂ ದೇವರ ರಾಜ್ಯವು ಸಮೀಪಕ್ಕೆ ಬಂದದೆ ಎಂದು ನಿಮಗೆ ತಿಳಿದಿರಲಿ ಎಂಬದಾಗಿ ಹೇಳಿರಿ. ಆ ದಿವಸದಲ್ಲಿ ಅಂಥ ಊರಿನ ಗತಿಯು ಸೊದೋಮೂರಿನ ಗತಿಗಿಂತಲೂ ಕಠಿಣವಾಗಿರುವದು ಎಂದು ನಿಮಗೆ ಹೇಳುತ್ತೇನೆ.ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುವವನಾಗಿದ್ದಾನೆ; ನಿಮ್ಮನ್ನು ಅಲಕ್ಷ್ಯಮಾಡುವವನು ನನ್ನನ್ನು ಅಲಕ್ಷ್ಯಮಾಡುವವನಾಗಿದ್ದಾನೆ; ನನ್ನನ್ನು ಅಲಕ್ಷ್ಯಮಾಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಅಲಕ್ಷ್ಯಮಾಡುವವನಾಗಿದ್ದಾನೆ ಅಂದನು.
ಆಗ ಆತನು ತನ್ನ ಮಹತ್ಕಾರ್ಯಗಳು ಬಹಳವಾಗಿ ನಡೆದ ಊರುಗಳು ದೇವರ ಕಡೆಗೆ ತಿರುಗಲಿಲ್ಲವೆಂದು ಅವುಗಳನ್ನು ಗದರಿಸತೊಡಗಿದನು. ಹೇಗಂದರೆ - ಅಯ್ಯೋ ಖೊರಾಜಿನೇ, ಅಯ್ಯೋ ಬೇತ್ಸಾಯಿದವೇ, ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣೀತಟ್ಟು ಹೊದ್ದುಕೊಂಡು ಬೂದಿಯಲ್ಲಿ [ಕೂತುಕೊಂಡು] ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು. ಆದರೆ ನ್ಯಾಯವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ತೂರ್ ಸೀದೋನ್ ಪಟ್ಟಣಗಳ ಗತಿಯು ಮೇಲಾಗಿರುವದು ಎಂದು ನಿಮಗೆ ಹೇಳುತ್ತೇನೆ. ಎಲಾ ಕಪೆರ್ನೌಮೇ, ನೀನು ಪರಲೋಕಕ್ಕೆ ಏರಿಸಲ್ಪಡುವಿಯಾ? ಪಾತಾಳಕ್ಕೇ ಇಳಿಯುವಿ. ನಿನ್ನಲ್ಲಿ ನಡೆದ ಮಹತ್ಕಾರ್ಯಗಳು ಸೊದೋವಿುನಲ್ಲಿ ನಡೆದಿದ್ದರೆ ಅದು ಇಂದಿನವರೆಗೂ ಉಳಿಯುತ್ತಿತ್ತು. ಆದರೆ ನ್ಯಾಯವಿಚಾರಣೆಯ ದಿನದಲ್ಲಿ ನಿನ್ನ ಗತಿಗಿಂತಲೂ ಸೊದೋಮ್ ಸೀಮೆಯ ಗತಿಯು ಮೇಲಾಗಿರುವದು ಎಂದು ನಿಮಗೆ ಹೇಳುತ್ತೇನೆ ಅಂದನು.
ತರುವಾಯ ಆ ಎಪ್ಪತ್ತು ಮಂದಿಯು ಸಂತೋಷವುಳ್ಳವರಾಗಿ ಹಿಂತಿರುಗಿ ಬಂದು - ಸ್ವಾಮೀ, ದೆವ್ವಗಳು ಕೂಡಾ ನಿನ್ನ ಹೆಸರನ್ನು ಕೇಳಿ ನಮಗೆ ಅಧೀನವಾಗುತ್ತವೆ ಅಂದರು. ಆತನು ಅವರಿಗೆ - ಸೈತಾನನು ಸಿಡಿಲಿನಂತೆ ಆಕಾಶದಿಂದ ಬೀಳುವದನ್ನು ಕಂಡೆನು. ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ವೈರಿಯ ಸಮಸ್ತ ಬಲವನ್ನೂ ತುಳಿಯುವದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವದೂ ನಿಮಗೆ ಕೇಡುಮಾಡುವದೇ ಇಲ್ಲ. ಆದರೂ ದೆವ್ವಗಳು ನಮಗೆ ಅಧೀನವಾಗಿವೆ ಎಂದು ಸಂತೋಷಪಡದೆ ನಮ್ಮ ಹೆಸರುಗಳು ಪರಲೋಕದಲ್ಲಿ ಬರೆದಿರುತ್ತವೆ ಎಂದು ಸಂತೋಷಪಡಿರಿ ಎಂಬದಾಗಿ ಹೇಳಿದನು.ಅದೇ ಗಳಿಗೆಯಲ್ಲಿ ಆತನು ಪವಿತ್ರಾತ್ಮನ ಪ್ರೇರಣೆಯಿಂದ ಉಲ್ಲಾಸಗೊಂಡು ಹೇಳಿದ್ದೇನಂದರೆ - ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇ, ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ಮಾತುಗಳನ್ನು ಮರೆಮಾಡಿ ಬಾಲಕರಿಗೆ ಪ್ರಕಟಮಾಡಿದ್ದೀ ಎಂದು ನಿನ್ನನ್ನು ಕೊಂಡಾಡುತ್ತೇನೆ. ಹೌದು, ತಂದೆಯೇ, ಹೀಗೆ ಮಾಡುವದೇ ಒಳ್ಳೇದೆಂದು ನಿನ್ನ ದೃಷ್ಟಿಗೆ ತೋರಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನನ್ನ ತಂದೆಯು ಎಲ್ಲವನ್ನೂ ನನಗೆ ಒಪ್ಪಿಸಿದ್ದಾನೆ. ಮಗನು ಇಂಥವನೆಂದು ತಂದೆಯೇ ಹೊರತು ಇನ್ಯಾವನೂ ತಿಳಿದವನಲ್ಲ; ತಂದೆ ಇಂಥವನೆಂದು ಮಗನೇ ಹೊರತು ಇನ್ನಾವನೂ ತಿಳಿದವನಲ್ಲ; ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಿಸುವದಕ್ಕೆ ಮನಸ್ಸುಳ್ಳವನಾಗಿದ್ದಾನೋ ಅವನೂ ಆತನನ್ನು ತಿಳಿದವನಾಗಿದ್ದಾನೆ ಅಂದನು.ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು ಅಂದನು. ಆಗ ಒಬ್ಬ ಧರ್ಮೋಪದೇಶಕನು ಎದ್ದು ಆತನನ್ನು ಪರೀಕ್ಷಿಸುವದಕ್ಕಾಗಿ - ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯನಾಗುವಂತೆ ಏನು ಮಾಡಬೇಕು ಎಂದು ಕೇಳಲು ಆತನು ಅವನಿಗೆ - ಶಾಸ್ತ್ರದಲ್ಲಿ ಏನು ಬರೆದದೆ? ಹೇಗೆ ಓದಿದ್ದೀ? ಎಂದು ಹೇಳಿದನು. ಅದಕ್ಕೆ ಅವನು - ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು. ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂದು ಬರೆದದೆ ಅಂದನು. ಆತನು ಅವನಿಗೆ - ನೀನು ಸರಿಯಾಗಿ ಉತ್ತರಕೊಟ್ಟಿ; ಇದರಂತೆ ಮಾಡು, ಮಾಡಿದರೆ ಜೀವಿಸುವಿ ಎಂದು ಹೇಳಿದನು. ಆದರೆ ಅವನು ತನ್ನನ್ನು ನೀತಿವಂತನೆಂದು ತೋರಿಸಿಕೊಳ್ಳುವದಕ್ಕೆ ಅಪೇಕ್ಷಿಸಿ - ನನ್ನ ನೆರೆಯವನು ಯಾರು ಎಂದು ಯೇಸುವನ್ನು ಕೇಳಲು ಯೇಸು ಅವನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ - ಒಬ್ಬಾನೊಬ್ಬ ಮನುಷ್ಯನು ಯೆರೂಸಲೇವಿುನಿಂದ ಘಟ್ಟಾ ಇಳಿದು ಯೆರಿಕೋವಿಗೆ ಹೋಗುತ್ತಿರುವಾಗ ಕಳ್ಳರ ಕೈಗೆ ಸಿಕ್ಕಿದನು. ಅವರು ಅವನನ್ನು ಸುಲಿಗೆ ಮಾಡಿಕೊಂಡು ಗಾಯವಾಗುವಷ್ಟು ಹೊಡೆದು ಅವನನ್ನು ಅರೆಜೀವಮಾಡಿ ಬಿಟ್ಟುಹೋದರು. ಆಗ ಹೇಗೋ ಒಬ್ಬ ಯಾಜಕನು ಆ ದಾರಿಯಲ್ಲಿ ಇಳಿದುಬರುತ್ತಾ ಅವನನ್ನು ಕಂಡು ವಾರೆಯಾಗಿ ಹೋದನು. ಅದೇ ರೀತಿಯಲ್ಲಿ ಒಬ್ಬ ಲೇವಿಯನೂ ಆ ಸ್ಥಳಕ್ಕೆ ಬಂದು ಅವನನ್ನು ಕಂಡು ವಾರೆಯಾಗಿ ಹೋದನು. ಆದರೆ ಒಬ್ಬ ಸಮಾರ್ಯದವನು ಪ್ರಯಾಣ ಮಾಡುತ್ತಾ ಅವನಿದ್ದಲ್ಲಿಗೆ ಬಂದು ಅವನನ್ನು ಕಂಡು ಕನಿಕರಿಸಿ ಅವನ ಹತ್ತಿರಕ್ಕೆ ಹೋಗಿ ಅವನ ಗಾಯಗಳಲ್ಲಿ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು ಕಟ್ಟಿ ತನ್ನ ಸ್ವಂತ ವಾಹನದ ಮೇಲೆ ಹತ್ತಿಸಿಕೊಂಡು ಛತ್ರಕ್ಕೆ ಕರಕೊಂಡು ಹೋಗಿ ಅವನನ್ನು ಆರೈಕೆಮಾಡಿದನು. ಮರುದಿನ ಅವನು ಎರಡು ಹಣಗಳನ್ನು ತೆಗೆದು ಛತ್ರದವನಿಗೆ ಕೊಟ್ಟು - ಇವನನ್ನು ಆರೈಕೆಮಾಡು; ಇದಕ್ಕಿಂತ ಹೆಚ್ಚಾಗಿ ಏನಾದರೂ ವೆಚ್ಚಮಾಡಿದರೆ ನಾನು ಹಿಂತಿರುಗಿ ಬಂದಾಗ ನಿನಗೆ ಕೊಡುವೆನು ಅಂದನು. ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು ಎಂದು ಕೇಳಿದ್ದಕ್ಕೆ ಆ ಧರ್ಮೋಪದೇಶಕನು - ಅವನಿಗೆ ದಯತೋರಿಸಿದವನೇ ಅಂದನು. ಆಗ ಯೇಸು ಅವನಿಗೆ - ಹೋಗು, ನೀನೂ ಅದರಂತೆ ಮಾಡು ಎಂದು ಹೇಳಿದನು.
ಅಧ್ಯಾಯ 36
ಅವರು ಸಂಚಾರಮಾಡುತ್ತಿರುವಾಗ ಆತನು ಒಂದಾನೊಂದು ಹಳ್ಳಿಗೆ ಬಂದನು; ಅಲ್ಲಿ ಮಾರ್ಥಳೆಂಬ ಒಬ್ಬ ಸ್ತ್ರೀಯು ಆತನನ್ನು ತನ್ನ ಮನೆಯಲ್ಲಿ ಇಳಿಸಿಕೊಂಡಳು. ಆಕೆಗೆ ಮರಿಯಳೆಂಬ ಒಬ್ಬ ತಂಗಿ ಇದ್ದಳು. ಈಕೆಯು ಸ್ವಾವಿುಯ ಪಾದಗಳ ಬಳಿಯಲ್ಲಿ ಕೂತುಕೊಂಡು ಆತನ ವಾಕ್ಯವನ್ನು ಕೇಳುತ್ತಿದ್ದಳು. ಆದರೆ ಮಾರ್ಥಳು ಬಹಳ ಸೇವೆಯ ವಿಷಯವಾಗಿ ಬೇಸತ್ತು ಆತನ ಬಳಿಗೆ ಬಂದು - ಸ್ವಾಮೀ, ನನ್ನ ತಂಗಿಯು ಸೇವೆಗೆ ನನ್ನೊಬ್ಬಳನ್ನೇ ಬಿಟ್ಟಿದ್ದಾಳೆ, ಇದಕ್ಕೆ ನಿನಗೆ ಚಿಂತೆಯಿಲ್ಲವೋ? ನನಗೆ ನೆರವಾಗಬೇಕೆಂದು ಆಕೆಗೆ ಹೇಳು ಅಂದಳು. ಸ್ವಾವಿುಯು ಆಕೆಗೆ - ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯವಾಗಿ ಚಿಂತೆಯಲ್ಲಿಯೂ ಗಡಿಬಿಡಿಯಲ್ಲಿಯೂ ಸಿಕ್ಕಿಕೊಂಡಿದ್ದೀ. ಕೆಲವು ಮಾತ್ರ ಬೇಕಾದದ್ದು, ಅಥವಾ ಒಂದೇ, ಮರಿಯಳು ಆ ಉತ್ತಮ ಭಾಗವನ್ನು ಆರಿಸಿಕೊಂಡಿದ್ದಾಳೆ; ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ ಎಂದು ಉತ್ತರಕೊಟ್ಟನು.
ಆತನು ಒಂದಾನೊಂದು ಸ್ಥಳದಲ್ಲಿ ಪ್ರಾರ್ಥನೆಮಾಡಿ ಮುಗಿಸಿದಾಗ ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ - ಸ್ವಾಮೀ, ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದ ಹಾಗೆ ನಮಗೂ ಪ್ರಾರ್ಥನೆಮಾಡುವದನ್ನು ಕಲಿಸು ಎಂದು ಕೇಳಿದನು. ಅದಕ್ಕಾತನು - ನೀವು ಪ್ರಾರ್ಥಿಸುವಾಗ - ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.ನಿನ್ನ ರಾಜ್ಯವು ಬರಲಿ.ನಮ್ಮ ಅನುದಿನದ ಆಹಾರವನ್ನು ಪ್ರತಿದಿನವೂ ದಯಪಾಲಿಸು.ನಮಗೆ ತಪ್ಪುಮಾಡಿರುವ ಪ್ರತಿಯೊಬ್ಬನನ್ನುನಾವು ಕ್ಷವಿುಸುತ್ತೇವಾದ್ದರಿಂದ ನಮ್ಮ ಪಾಪಗಳನ್ನು ಕ್ಷವಿುಸು.ನಮ್ಮನ್ನು ಶೋಧನೆಯೊಳಗೆ ಸೇರಿಸಬೇಡ ಎಂದು ಹೇಳಿರಿ ಅಂದನು.
ಆಗ ಜನರಲ್ಲಿ ಒಬ್ಬನು - ಬೋಧಕನೇ, ತಂದೆಯ ಆಸ್ತಿಯನ್ನು ನನಗೆ ಪಾಲುಮಾಡಿ ಕೊಡುವಂತೆ ನನ್ನ ಅಣ್ಣನಿಗೆ ಹೇಳು ಎಂದು ಆತನನ್ನು ಕೇಳಿಕೊಳ್ಳಲು ಆತನು - ಎಲಾ ಮನುಷ್ಯ, ನನ್ನನ್ನು ನಿಮಗೆ ನ್ಯಾಯಾಧಿಪತಿಯನ್ನಾಗಿ ಅಥವಾ ಪಾಲುಮಾಡುವವನನ್ನಾಗಿ ನೇವಿುಸಿದವರಾರು ಎಂದು ಅವನನ್ನು ಕೇಳಿ ಜನರಿಗೆ - ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ ಎಂದು ಹೇಳಿ ಒಂದು ಸಾಮ್ಯವನ್ನು ಹೇಳಿದನು; ಅದೇನಂದರೆ ಒಬ್ಬಾನೊಬ್ಬ ಐಶ್ವರ್ಯವಂತನ ಭೂವಿುಯು ಚೆನ್ನಾಗಿ ಬೆಳೆಯಿತು. ಆಗ ಅವನು ತನ್ನೊಳಗೆ - ನಾನೇನು ಮಾಡಲಿ? ನನ್ನ ಬೆಳೆಯನ್ನು ತುಂಬಿಡುವದಕ್ಕೆ ನನಗೆ ಸ್ಥಳವಿಲ್ಲವಲ್ಲಾ ಎಂದು ಆಲೋಚಿಸಿ - ಒಂದು ಕೆಲಸ ಮಾಡುತ್ತೇನೆ; ನನ್ನ ಕಣಜಗಳನ್ನು ಕೀಳಿಸಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನೂ ತುಂಬಿಟ್ಟು ನನ್ನ ಜೀವಾತ್ಮಕ್ಕೆ - ಜೀವವೇ, ಅನೇಕ ವರುಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಿದ್ದದೆ; ವಿಶ್ರವಿುಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು ಅಂದುಕೊಂಡನು. ಆದರೆ ದೇವರು ಅವನಿಗೆ - ಬುದ್ಧಿಹೀನನು ನೀನು! ಈ ಹೊತ್ತು ರಾತ್ರಿ ನಿನ್ನ ಪ್ರಾಣವನ್ನು ನಿನ್ನ ಕಡೆಯಿಂದ ಕೇಳುವರು; ಆಗ ನೀನು ಸಿದ್ಧಮಾಡಿಟ್ಟಿರುವದು ಯಾರಿಗಾಗುವದು ಎಂದು ಹೇಳಿದನು. ತನಗೋಸ್ಕರ ದ್ರವ್ಯವನ್ನಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ ಅಂದನು.
ನಿಮ್ಮ ನಡುಗಳು ಕಟ್ಟಿರಲಿ; ನಿಮ್ಮ ದೀವಟಿಗೆಗಳು ಉರಿಯುತ್ತಾ ಇರಲಿ. ನೀವಂತೂ ತಮ್ಮ ಯಜಮಾನನು ಬಂದು ತಟ್ಟಿದ ಕೂಡಲೆ ಕದವನ್ನು ತೆರೆಯುವದಕ್ಕೆ ಸಿದ್ಧವಾಗಿದ್ದು ಮದುವೇ ಊಟವನ್ನು ಯಾವಾಗ ತೀರಿಸಿಕೊಂಡು ಬರುವನೋ ಎಂದು ಅವನನ್ನು ಎದುರುನೋಡುತ್ತಿರುವ ಮನುಷ್ಯರಂತಿರಿ. ಯಜಮಾನನು ಬಂದು ಯಾವ ಯಾವ ಆಳುಗಳು ಎಚ್ಚರವಾಗಿರುವದನ್ನು ಕಂಡುಕೊಳ್ಳುವನೋ ಆ ಆಳುಗಳೇ ಧನ್ಯರು. ಆತನೇ ನಡುಕಟ್ಟಿಕೊಂಡು ಅವರನ್ನು ಊಟಕ್ಕೆ ಕೂಡ್ರಿಸಿ ಹತ್ತಿರಕ್ಕೆ ಬಂದು ಅವರಿಗೆ ಸೇವೆಮಾಡುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಎರಡನೆಯ ಜಾವದಲ್ಲಿಯಾಗಲಿ ಮೂರನೆಯ ಜಾವದಲ್ಲಿಯಾಗಲಿ ಬಂದಾತನಿಗೆ ಹಾಗೆ ಕಾಣಿಸಿಕೊಂಡವರು ಧನ್ಯರು. ಕಳ್ಳನು ಬರುವ ಗಳಿಗೆಯು ಮನೇಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಾಹಾಕಗೊಡಿಸುತ್ತಿರಲಿಲ್ಲವೆಂದು ತಿಳುಕೊಳ್ಳಿರಿ. ನೀವು ಸಹ ಸಿದ್ಧವಾಗಿರ್ರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ ಅಂದನು.
ಆಗ ಪೇತ್ರನು - ಸ್ವಾಮೀ, ನೀನು ಈ ಸಾಮ್ಯವನ್ನು ನಮಗೆ ಮಾತ್ರ ಹೇಳುತ್ತೀಯೋ? ಎಲ್ಲರಿಗೂ ಹೇಳುತ್ತೀಯೋ ಎಂದು ಕೇಳಲು ಸ್ವಾವಿು ಹೇಳಿದ್ದೇನಂದರೆ - ಹೊತ್ತುಹೊತ್ತಿಗೆ ಅಶನಕ್ಕೆ ಬೇಕಾದದ್ದನ್ನು ಅಳೆದು ಕೊಡುವದಕ್ಕಾಗಿ ಯಜಮಾನನು ತನ್ನ ಮನೆಯವರ ಮೇಲೆ ನೇವಿುಸಿದ ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೆವಾರ್ತೆಯವನು ಯಾರು? ಯಜಮಾನನು ಬಂದು ಯಾವ ಆಳು ಹೀಗೆ ಮಾಡುವದನ್ನು ಕಾಣುವನೋ ಆ ಆಳು ಧನ್ಯನು. ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ನೇವಿುಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆದರೆ ಆ ಆಳು - ನನ್ನ ಯಜಮಾನನು ಬರುವದಕ್ಕೆ ತಡಮಾಡುತ್ತಾನೆ ಅಂತ ತನ್ನ ಮನಸ್ಸಿನಲ್ಲಿ ಅಂದುಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯುವದಕ್ಕೂ ತಿಂದು ಕುಡಿದು ಅಮಲೇರುವದಕ್ಕೂ ತೊಡಗಿದರೆ ಅವನು ನೆನಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿನವಾಗಿ ಹೊಡಿಸಿ ಅಪನಂಬಿಗಸ್ತರಿಗೆ ಆಗತಕ್ಕ ಗತಿಯನ್ನು ಅವನಿಗೆ ನೇವಿುಸುವನು. ತನ್ನ ಯಜಮಾನನ ಚಿತ್ತವನ್ನು ತಿಳಿದ ಆಳು ಸಿದ್ಧಮಾಡದೆಹೋದರೆ ಅಥವಾ ಅವನ ಚಿತ್ತಕ್ಕನುಸಾರ ನಡೆಯದಿದ್ದರೆ ಅವನು ಬಹಳ ಪೆಟ್ಟು ತಿನ್ನುವನು. ತಿಳಿಯದೆ ಪೆಟ್ಟುಗಳಿಗೆ ಯೋಗ್ಯವಾದದ್ದನ್ನು ನಡಿಸಿದವನು ಸ್ವಲ್ಪ ಪೆಟ್ಟು ತಿನ್ನುವನು. ಯಾವನಿಗೆ ಬಹಳವಾಗಿ ಕೊಟ್ಟದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವದು; ಇದಲ್ಲದೆ ಯಾವನ ವಶಕ್ಕೆ ಬಹಳವಾಗಿ ಒಪ್ಪಿಸಿದೆಯೋ ಅವನ ಕಡೆಯಿಂದ ಇನ್ನೂ ಹೆಚ್ಚಾಗಿ ಕೇಳುವರು.
ನಾನು ಬೆಂಕಿಯನ್ನು ಭೂವಿುಯ ಮೇಲೆ ಹಾಕಬೇಕೆಂದು ಬಂದೆನು; ಅದು ಇಷ್ಟರೊಳಗೆ ಹತ್ತಿಕೊಂಡಿದ್ದರೆ ನನಗೆ ಎಷ್ಟೋ ಸಂತೋಷ! ಆದರೆ ನಾನು ಹೊಂದತಕ್ಕ ದೀಕ್ಷಾಸ್ನಾನ ಒಂದುಂಟು. ಅದು ನೆರವೇರುವ ತನಕ ನಾನು ಎಷ್ಟೋ ಬಿಕ್ಕಟ್ಟಿನಲ್ಲಿದ್ದೇನೆ. ಭೂಲೋಕದಲ್ಲಿ ಸಮಾಧಾನವನ್ನುಂಟುಮಾಡುವದಕ್ಕೆ ಬಂದೆನೆಂದು ಭಾವಿಸುತ್ತೀರೋ? ಅದಕ್ಕೆ ಬರಲಿಲ್ಲ, ಭೇದವನ್ನುಂಟುಮಾಡುವದಕ್ಕೆ ಬಂದೆನೆಂದು ನಿಮಗೆ ಹೇಳುತ್ತೇನೆ. ಹೇಗಂದರೆ - ಇಂದಿನಿಂದ ಒಂದೇ ಮನೆಯಲ್ಲಿರುವ ಐದು ಮಂದಿಯೊಳಗೆ ಇಬ್ಬರಿಗೆ ವಿರೋಧವಾಗಿ ಮೂವರು, ಮೂವರಿಗೆ ವಿರೋಧವಾಗಿ ಇಬ್ಬರು, ಈ ಮೇರೆಗೆ ಭೇದವುಳ್ಳವರಾಗಿರುವರು. ಮಗನಿಗೆ ವಿರೋಧವಾಗಿ ತಂದೆಯು, ತಂದೆಗೆ ವಿರೋಧವಾಗಿ ಮಗನು, ಮಗಳಿಗೆ ವಿರೋಧವಾಗಿ ತಾಯಿಯು, ತಾಯಿಗೆ ವಿರೋಧವಾಗಿ ಮಗಳು, ಸೊಸೆಗೆ ವಿರೋಧವಾಗಿ ಅತ್ತೆಯು, ಅತ್ತೆಗೆ ವಿರೋಧವಾಗಿ ಸೊಸೆಯು ಭೇದವುಳ್ಳವರಾಗಿರುವರು ಅಂದನು.
ಅದೇ ಸಮಯದಲ್ಲಿ ಕೆಲವರು ಆತನ ಹತ್ತಿರದಲ್ಲಿದ್ದು - ಪಿಲಾತನು ಗಲಿಲಾಯದವರ ರಕ್ತವನ್ನು ಅವರು ಕೊಟ್ಟ ಬಲಿಗಳ ಸಂಗಡ ಬೆರಸಿದನೆಂದು ಆತನಿಗೆ ತಿಳಿಸಿದರು. ಅದಕ್ಕೆ ಆತನು ಅವರಿಗೆ - ಆ ಗಲಿಲಾಯದವರು ಅಂಥ ಕೊಲೆಯನ್ನು ಅನುಭವಿಸಿದ್ದರಿಂದ ಅವರನ್ನು ಎಲ್ಲಾ ಗಲಿಲಾಯದವರಿಗಿಂತ ಪಾಪಿಷ್ಠರೆಂದು ಭಾವಿಸುತ್ತೀರೋ? ಹಾಗೆ ಭಾವಿಸಕೂಡದೆಂದು ನಿಮಗೆ ಹೇಳುತ್ತೇನೆ. ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಹಾಗೆಯೇ ಹಾಳಾಗಿ ಹೋಗುವಿರಿ. ಇಲ್ಲವೆ ಸಿಲೊವಾವಿುನಲ್ಲಿ ಬುರುಜುಬಿದ್ದು ಸತ್ತ ಆ ಹದಿನೆಂಟು ಮಂದಿಯು ಯೆರೂಸಲೇವಿುನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ಅಪರಾಧಿಗಳೆಂದು ಭಾವಿಸುತ್ತೀರೋ? ಹಾಗಲ್ಲವೆಂದು ನಿಮಗೆ ಹೇಳುತ್ತೇನೆ. ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ಹಾಳಾಗಿ ಹೋಗುವಿರಿ ಎಂದು ಹೇಳಿದನು. ಆಮೇಲೆ ಆತನು ಒಂದು ಸಾಮ್ಯವನ್ನು ಹೇಳಿದನು. ಅದೇನಂದರೆ - ಒಬ್ಬಾನೊಬ್ಬನು ತನ್ನ ದ್ರಾಕ್ಷೆಯ ತೋಟದಲ್ಲಿ ಒಂದು ಅಂಜೂರದ ಗಿಡವನ್ನು ನೆಡಿಸಿದ್ದನು. ತರುವಾಯ ಅವನು ಅದರಲ್ಲಿ ಹಣ್ಣನ್ನು ಹುಡುಕುತ್ತಾ ಬಂದನು, ಸಿಕ್ಕಲಿಲ್ಲ. ಬಳಿಕ ಅವನು ತೋಟ ಮಾಡುವವನಿಗೆ - ನೋಡು, ನಾನು ಮೂರು ವರುಷದಿಂದಲೂ ಈ ಅಂಜೂರದ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದಿದ್ದೇನೆ; ಆದರೂ ನನಗೆ ಸಿಕ್ಕಲಿಲ್ಲ. ಇದನ್ನು ಕಡಿದು ಹಾಕು; ಇದರಿಂದ ಭೂವಿುಯೂ ಯಾಕೆ ಬಂಜೆಯಾಗಬೇಕು ಎಂದು ಹೇಳಿದನು. ಆದರೆ ತೋಟಮಾಡುವವನು - ಅಯ್ಯಾ, ಈ ವರುಷವೂ ಇದನ್ನು ಬಿಡು; ಅಷ್ಟರಲ್ಲಿ ನಾನು ಇದರ ಸುತ್ತಲು ಅಗೆದು ಗೊಬ್ಬರ ಹಾಕುತ್ತೇನೆ; ಮುಂದೆ ಹಣ್ಣುಬಿಟ್ಟರೆ ಸರಿ; ಇಲ್ಲದಿದ್ದರೆ ಇದನ್ನು ಕಡಿದುಹಾಕಬಹುದು ಎಂದು ಉತ್ತರಕೊಟ್ಟನು.
ಅಧ್ಯಾಯ 37
ಒಂದಾನೊಂದು ಸಬ್ಬತ್ದಿನದಲ್ಲಿ ಆತನು ಒಂದು ಸಭಾಮಂದಿರದೊಳಗೆ ಉಪದೇಶಮಾಡುತ್ತಾ ಇದ್ದನು. ಅಲ್ಲಿ ಹದಿನೆಂಟು ವರುಷಗಳಿಂದ ದೆವ್ವ ಬಡಿದು ಮೈಯಲ್ಲಿ ರೋಗವುಳ್ಳ ಒಬ್ಬ ಸ್ತ್ರೀಯು ಇದ್ದಳು. ಆಕೆಯು ನಡುಬೊಗ್ಗಿಹೋಗಿ ಸ್ವಲ್ಪವಾದರೂ ಮೈಯನ್ನು ಮೇಲಕ್ಕೆ ಎತ್ತಲಾರದೆ ಇದ್ದಳು. ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು ಆಕೆಗೆ - ಅಮ್ಮಾ, ನಿನಗೆ ರೋಗ ಬಿಡುಗಡೆಯಾಯಿತು ಎಂದು ಹೇಳಿ ಆಕೆಯ ಮೇಲೆ ತನ್ನ ಕೈಗಳನ್ನಿಟ್ಟನು; ಇಟ್ಟಕೂಡಲೆ ಆಕೆ ನೆಟ್ಟಗಾದಳು, ದೇವರನ್ನು ಕೊಂಡಾಡಿದಳು. ಆದರೆ ಆ ಸಭಾಮಂದಿರದ ಅಧಿಕಾರಿಯು ನಡೆದ ಸಂಗತಿಯನ್ನು ನೋಡಿ ಸಬ್ಬತ್ದಿನದಲ್ಲಿ ಯೇಸು ಸ್ವಸ್ಥಮಾಡಿದನಲ್ಲಾ ಎಂದು ರೋಷಗೊಂಡು ಜನರಿಗೆ - ಕೆಲಸಮಾಡುವದಕ್ಕೆ ಆರು ದಿವಸಗಳು ಅವೆಯಷ್ಟೆ; ಆ ದಿವಸಗಳಲ್ಲಿ ಬಂದು ವಾಸಿಮಾಡಿಸಿಕೊಳ್ಳಿರಿ, ಸಬ್ಬತ್ದಿನದಲ್ಲಿ ಮಾತ್ರ ಬೇಡ ಎಂದು ಹೇಳಿದನು. ಆ ಮಾತನ್ನು ಕೇಳಿ ಸ್ವಾವಿುಯು ಅವನಿಗೆ - ಕಪಟಿಗಳು ನೀವು, ನಿಮ್ಮಲ್ಲಿ ಪ್ರತಿಯೊಬ್ಬನೂ ಸಬ್ಬತ್ದಿನದಲ್ಲಿ ತನ್ನ ಎತ್ತನ್ನಾಗಲಿ ಕತ್ತೆಯನ್ನಾಗಲಿ ಗೋದಲಿಯಿಂದ ಬಿಚ್ಚಿ ನೀರು ಕುಡಿಸುವದಕ್ಕಾಗಿ ಹಿಡುಕೊಂಡು ಹೋಗುತ್ತಾನಲ್ಲವೇ. ಹಾಗಾದರೆ ಹದಿನೆಂಟು ವರುಷಗಳ ತನಕ ಸೈತಾನನು ಕಟ್ಟಿಹಾಕಿದ್ದವಳೂ ಅಬ್ರಹಾಮನ ವಂಶದವಳೂ ಆಗಿರುವ ಈಕೆಯನ್ನು ಸಬ್ಬತ್ದಿನದಲ್ಲಿ ಈ ಕಟ್ಟಿನೊಳಗಿಂದ ಬಿಡಿಸಬಾರದೋ ಎಂದು ಉತ್ತರಕೊಟ್ಟನು. ಈ ಮಾತುಗಳನ್ನು ಆತನು ಹೇಳುತ್ತಿರಲಾಗಿ ಆತನ ವಿರೋಧಿಗಳೆಲ್ಲರೂ ನಾಚಿಕೊಂಡರು; ಗುಂಪುಕೂಡಿದ್ದ ಜನರೆಲ್ಲಾ ಆತನಿಂದಾಗುತ್ತಿದ್ದ ಎಲ್ಲಾ ಮಹತ್ವದ ಕಾರ್ಯಗಳಿಗೆ ಸಂತೋಷಪಟ್ಟರು.
ಆತನು ಊರೂರಿಗೂ ಗ್ರಾಮಗ್ರಾಮಕ್ಕೂ ಹೋಗಿ ಉಪದೇಶಮಾಡುತ್ತಾ, ಯೆರೂಸಲೇವಿುಗೆ ಪ್ರಯಾಣಮಾಡುತ್ತಿದ್ದನು. ಆ ಕಾಲದಲ್ಲಿ ಒಬ್ಬನು - ಸ್ವಾಮೀ, ರಕ್ಷಣೆ ಹೊಂದುವವರು ಸ್ವಲ್ಪಜನರೋ ಎಂದು ಕೇಳಲು ಆತನು ಅವರಿಗೆ - ಇಕ್ಕಟ್ಟಾದ ಬಾಗಿಲಿನಿಂದ ಒಳಕ್ಕೆ ಹೋಗುವದಕ್ಕೆ ಹೆಣಗಾಡಿರಿ. ಬಹುಜನ ಒಳಕ್ಕೆ ಹೋಗುವದಕ್ಕೆ ನೋಡುವರು, ಆದರೆ ಅವರಿಂದಾಗುವದಿಲ್ಲ ಎಂದು ನಿಮಗೆ ಹೇಳುತ್ತೇನೆ. ಮನೇಯಜಮಾನನು ಎದ್ದು ಕದಾ ಹಾಕಿಕೊಂಡ ಮೇಲೆ ನೀವು ಹೊರಗೆ ನಿಂತುಕೊಂಡು ಕದತಟ್ಟಿ - ಸ್ವಾಮೀ, ನಮಗೆ ತೆರೆಯಿರಿ ಎಂದು ಹೇಳುವದಕ್ಕೆ ತೊಡಗುವಾಗ ಅವನು - ನೀವು ಎಲ್ಲಿಯವರೋ? ನಿಮ್ಮ ಗುರುತು ನನಗಿಲ್ಲ ಅಂದಾನು. ಅದಕ್ಕೆ ನೀವು - ನಿನ್ನ ಸನ್ನಿಧಿಯಲ್ಲಿ ನಾವು ಊಟಮಾಡಿದೆವು, ಕುಡಿದೆವು, ನಮ್ಮ ಬೀದಿಗಳಲ್ಲಿ ನೀನು ಉಪದೇಶ ಮಾಡಿದಿ ಎಂದು ಹೇಳುವದಕ್ಕೆ ತೊಡಗೀರಿ; ಆದರೆ ಅವನು - ನೀವು ಎಲ್ಲಿಯವರೋ ನಿಮ್ಮ ಗುರುತು ನನಗಿಲ್ಲ; ಅಧರ್ಮಮಾಡುವ ನೀವೆಲ್ಲರೂ ನನ್ನ ಕಡೆಯಿಂದ ಹೊರಟುಹೋಗಿರಿ ಎಂದು ನಿಮಗೆ ಹೇಳುತ್ತೇನೆ ಅನ್ನುವನು. ಅಬ್ರಹಾಮ ಇಸಾಕ ಯಾಕೋಬ ಇವರು ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿರುವದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕುವದನ್ನೂ ನೀವು ನೋಡುವಾಗ ನಿಮಗೆ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು. ಇದಲ್ಲದೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ದಿಕ್ಕುಗಳಿಂದಲೂ ಜನರು ಬಂದು ದೇವರ ರಾಜ್ಯದಲ್ಲಿ ಊಟಕ್ಕೆ ಕೂಡ್ರುವರು. ಇಗೋ, ಕಡೆಯವರಾಗಿರುವ ಕೆಲವರು ಮೊದಲಿನವರಾಗುವರು; ಮೊದಲಿನವರಾಗಿರುವ ಕೆಲವರು ಕಡೆಯವರಾಗುವರು ಅಂದನು.
ಅದೇ ಗಳಿಗೆಯಲ್ಲಿ ಕೆಲವು ಮಂದಿ ಫರಿಸಾಯರು ಹತ್ತಿರ ಬಂದು ಆತನಿಗೆ - ನೀನು ಇಲ್ಲಿಂದ ಹೊರಟುಹೋಗು, ಹೆರೋದನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ ಎಂದು ಹೇಳಲು ಆತನು ಅವರಿಗೆ - ನೀವು ಹೋಗಿ - ಇಗೋ ನಾನು ಈಹೊತ್ತು ನಾಳೆ ದೆವ್ವಗಳನ್ನು ಬಿಡಿಸುತ್ತಾ ರೋಗಗಳನ್ನು ವಾಸಿಮಾಡುತ್ತಾ ಇದ್ದು ಮೂರನೆಯ ದಿನದಲ್ಲಿ ಸಿದ್ಧಿಗೆ ಬರುತ್ತೇನೆ ಎಂದು ಆ ನರಿಗೆ ಹೇಳಿರಿ. ಹೇಗೂ ನಾನು ಈಹೊತ್ತು ನಾಳೆ ನಾಡಿದು ಸಂಚಾರ ಮಾಡಬೇಕು; ಪ್ರವಾದಿಯಾದವನು ಯೆರೂಸಲೇವಿುನಲ್ಲಿಯೇ ಹೊರತು ಬೇರೆ ಪಟ್ಟಣದಲ್ಲಿ ಕೊಲ್ಲಲ್ಪಡಕೂಡದಷ್ಟೆ. ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳ ಪ್ರಾಣತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು. ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿಬಿಟ್ಟದೆ. ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ ಎಂದು ನೀವು ಹೇಳುವ ತನಕ ನೀವು ನನ್ನನ್ನು ನೋಡುವದೇ ಇಲ್ಲವೆಂದು ನಿಮಗೆ ಹೇಳುತ್ತೇನೆ ಅಂದನು.
ಆತನು ಸಬ್ಬತ್ದಿನದಲ್ಲಿ ಫರಿಸಾಯರ ಮುಖ್ಯಸ್ಥರಲ್ಲಿ ಒಬ್ಬನ ಮನೆಗೆ ಊಟಕ್ಕೆ ಹೋದಾಗ ಅವರು ಆತನನ್ನು ಹೊಂಚಿನೋಡುತ್ತಿದ್ದರು. ಆಗ ಯೇಸು ತನ್ನೆದುರಿಗೆ ಜಲೋದರವುಳ್ಳ ಒಬ್ಬ ಮನುಷ್ಯನಿರುವದನ್ನು ನೋಡಿ - ಸಬ್ಬತ್ದಿನದಲ್ಲಿ ಸ್ವಸ್ಥಮಾಡುವದು ಸರಿಯೋ? ಸರಿಯಲ್ಲವೋ ಎಂದು ಧರ್ಮೋಪದೇಶಕರನ್ನೂ ಫರಿಸಾಯರನ್ನೂ ಕೇಳಿದನು. ಅವರು ಸುಮ್ಮನೇ ಇರಲು ಆತನು ಅವನ ಕೈ ಹಿಡಿದು ಅವನಿಗೆ ವಾಸಿಮಾಡಿ ಕಳುಹಿಸಿ - ನಿಮ್ಮಲ್ಲಿ ಯಾವನೊಬ್ಬನ ಮಗನಾಗಲಿ ಎತ್ತಾಗಲಿ ಬಾವಿಯಲ್ಲಿ ಬಿದ್ದರೆ ಅವನು ತಡಮಾಡದೆ ಸಬ್ಬತ್ದಿನದಲ್ಲಾದರೂ ಮೇಲಕ್ಕೆ ತೆಗೆಯುವದಿಲ್ಲವೇ ಎಂದು ಅವರನ್ನು ಕೇಳಿದನು. ಅವರು ಅದಕ್ಕೆ ಉತ್ತರ ಕೊಡಲಾರದೆ ಇದ್ದರು.
ಊಟಕ್ಕೆ ಕರಿಸಿಕೊಂಡವರು ಪಂಙ್ತಿಯ ಮೊದಲನೆಯ ಸ್ಥಾನವನ್ನು ಆರಿಸಿಕೊಳ್ಳುವದನ್ನು ನೋಡಿ ಯೇಸು ಒಂದು ಸಾಮ್ಯವನ್ನು ಹೇಳಿದನು. ಏನಂದರೆ - ಯಾವನಾದರೂ ನಿನ್ನನ್ನು ಮದುವೇ ಊಟಕ್ಕೆ ಕರೆದರೆ ಪಂಙ್ತಿಯೊಳಗೆ ಮೊದಲನೆಯ ಸ್ಥಾನದಲ್ಲಿ ಕೂತುಕೊಳ್ಳಬೇಡ; ಒಂದು ವೇಳೆ ನಿನಗಿಂತ ಮಾನವುಳ್ಳವನನ್ನು ಅವನು ಕರೆದಿರಬಹುದು, ಮತ್ತು ನಿನ್ನನ್ನೂ ಅವನನ್ನೂ ಕರೆದವನು ಬಂದು - ಇವನಿಗೆ ಸ್ಥಳಬಿಡು ಎಂದು ನಿನಗೆ ಹೇಳುವಾಗ ನೀನು ನಾಚಿಕೊಂಡು ಕಡೆಯ ಸ್ಥಾನದಲ್ಲಿ ಕೂತುಕೊಳ್ಳುವದಕ್ಕೆ ಹೋಗುವಿ. ಆದರೆ ಯಾವನಾದರೂ ನಿನ್ನನ್ನು ಕರೆದಾಗ ನೀನು ಹೋಗಿ ಕಡೆಯ ಸ್ಥಾನದಲ್ಲಿ ಕೂತುಕೋ; ಹೀಗೆ ಮಾಡಿದರೆ ನಿನ್ನನ್ನು ಕರೆದವನು ಬಂದು ನಿನ್ನನ್ನು ನೋಡಿ - ಸ್ನೇಹಿತನೇ, ಇನ್ನೂ ಮೇಲಕ್ಕೆ ಬಾ ಅನ್ನುವನು. ಆಗ ನಿನ್ನ ಸಂಗಡ ಕೂತಿರುವವರೆಲ್ಲರ ಮುಂದೆ ನಿನಗೆ ಮಾನ ಬರುವದು. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು.ಆತನು ತನ್ನನ್ನು ಊಟಕ್ಕೆ ಕರೆದವನಿಗೆ ಸಹ ಒಂದು ಮಾತು ಹೇಳಿದನು; ಅದೇನಂದರೆ - ನೀನು ಮಧ್ಯಾಹ್ನದ ಊಟಕ್ಕೆ ಅಥವಾ ಸಾಯಂಕಾಲದ ಊಟಕ್ಕೆ ನಿನ್ನ ಸ್ನೇಹಿತರನ್ನಾಗಲಿ ನಿನ್ನ ಅಣ್ಣತಮ್ಮಂದಿರನ್ನಾಗಲಿ ನಿನ್ನ ಬಂಧುಬಾಂಧವರನ್ನಾಗಲಿ ಐಶ್ವರ್ಯವಂತರಾದ ನೆರೆಯವರನ್ನಾಗಲಿ ಕರೆಯಬೇಡ. ಒಂದು ವೇಳೆ ಅವರು ಸಹ ಪ್ರತಿಯಾಗಿ ನಿನ್ನನ್ನು ಕರೆದಾರು, ಮತ್ತು ನಿನಗೆ ಮುಯ್ಯಿಗೆಮುಯ್ಯಾಗುವದು. ಆದರೆ ನೀನು ಔತಣ ಮಾಡಿಸುವಾಗ ಬಡವರು ಊನವಾದವರು ಕುಂಟರು ಕುರುಡರು ಇಂಥವರನ್ನು ಕರೆ; ಅವರು ನಿನಗೆ ಮುಯ್ಯಿಗೆಮುಯ್ಯಿಮಾಡುವದಕ್ಕೆ ಏನೂ ಇಲ್ಲದವರಾಗಿದ್ದರೂ ನೀತಿವಂತರು ಜೀವಿತರಾಗಿ ಎದ್ದು ಬರುವಲ್ಲಿ ನಿನಗೆ ಮುಯ್ಯಿಗೆಮುಯ್ಯಾಗುವದರಿಂದ ನೀನು ಧನ್ಯನಾಗುವಿ ಅಂದನು.
ಊಟಕ್ಕೆ ಕೂತವರಲ್ಲಿ ಒಬ್ಬನು ಈ ಮಾತುಗಳನ್ನು ಕೇಳಿ - ದೇವರ ರಾಜ್ಯದಲ್ಲಿ ಊಟ ಮಾಡುವವನೇ ಧನ್ಯನು ಎಂದು ಹೇಳಲು ಯೇಸು ಅವನಿಗೆ ಹೇಳಿದ್ದೇನಂದರೆ - ಒಬ್ಬಾನೊಬ್ಬ ಮನುಷ್ಯನು ದೊಡ್ಡ ಅಡಿಗೆ ಮಾಡಿಸಿ ಅನೇಕರಿಗೆ ಊಟಕ್ಕೆ ಹೇಳಿಸಿದನು. ಆಮೇಲೆ ಊಟದ ಹೊತ್ತಿಗೆ ಅವನು ಊಟಕ್ಕೆ ಹೇಳಿಸಿಕೊಂಡವರ ಬಳಿಗೆ - ಈಗ ಸಿದ್ಧವಾಗಿದೆ, ಬರಬೇಕು ಎಂದು ಕರೆಯುವದಕ್ಕೆ ತನ್ನ ಆಳನ್ನು ಕಳುಹಿಸಿದನು. ಆದರೆ ಅವರೆಲ್ಲರೂ ಕ್ಷವಿುಸಬೇಕೆಂದು ಒಂದೇ ಮನಸ್ಸಿನಿಂದ ಹೇಳುವದಕ್ಕೆ ತೊಡಗಿದರು. ಮೊದಲನೆಯವನು ಆ ಆಳನ್ನು ನೋಡಿ - ಹೊಲವನ್ನು ಕ್ರಯಕ್ಕೆ ತಕ್ಕೊಂಡಿದ್ದೇನೆ, ಅದನ್ನು ಹೋಗಿ ನೋಡುವದಕ್ಕೆ ನನಗೆ ಅಗತ್ಯವಿದೆ, ನನ್ನನ್ನು ಕ್ಷವಿುಸಬೇಕೆಂದು ಕೇಳಿಕೊಂಡೆನೆಂಬದಾಗಿ ಹೇಳು ಅಂದನು. ಮತ್ತೊಬ್ಬನು - ನಾನು ಐದು ಜೋಡಿ ಎತ್ತುಗಳನ್ನು ತಕ್ಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸುವದಕ್ಕೆ ಹೋಗುತ್ತೇನೆ, ನನ್ನನ್ನು ಕ್ಷವಿುಸಬೇಕೆಂದು ಕೇಳಿಕೊಂಡೆನೆಂಬದಾಗಿ ಹೇಳು ಅಂದನು. ಇನ್ನೊಬ್ಬನು - ನಾನು ಮದುವೆಮಾಡಿಕೊಂಡಿದ್ದೇನೆ, ಆದ್ದರಿಂದ ನಾನು ಬರುವದಕ್ಕಾಗುವದಿಲ್ಲ ಅಂದನು. ಆ ಆಳು ಬಂದು ತನ್ನ ಯಜಮಾನನಿಗೆ ಈ ಸಂಗತಿಗಳನ್ನು ತಿಳಿಸಲು ಮನೇಯಜಮಾನನು ಸಿಟ್ಟುಗೊಂಡು ಆಳಿಗೆ - ನೀನು ತಟ್ಟನೆ ಈ ಊರಿನ ಬೀದಿಬೀದಿಗೂ ಸಂದುಸಂದಿಗೂ ಹೋಗಿ ಬಡವರು ಊನವಾದವರು ಕುರುಡರು ಕುಂಟರು ಇಂಥವರನ್ನು ಇಲ್ಲಿಗೆ ಕರಕೊಂಡು ಬಾ ಎಂದು ಹೇಳಿದನು. ಬಳಿಕ ಆ ಆಳು - ಅಯ್ಯಾ, ನೀನು ಅಪ್ಪಣೆಕೊಟ್ಟಂತೆ ಮಾಡಿದ್ದಾಯಿತು; ಆದರೂ ಇನ್ನೂ ಸ್ಥಳವದೆ ಅಂದನು. ಆಗ ಆ ಯಜಮಾನನು ತನ್ನ ಆಳಿಗೆ ಹೇಳಿದ್ದು - ನೀನು ಹಾದಿಗಳಿಗೂ ಬೇಲಿಗಳ ಬಳಿಗೂ ಹೋಗಿ ಅಲ್ಲಿ ಸಿಕ್ಕಿದವರನ್ನು ಬಲವಂತಮಾಡಿ ಒಳಕ್ಕೆ ಕರಕೊಂಡು ಬಾ, ನನ್ನ ಮನೆ ತುಂಬಲಿ. ಆದರೆ ಊಟಕ್ಕೆ ಹೇಳಿಸಿಕೊಂಡವರಲ್ಲಿ ಒಬ್ಬನಾದರೂ ನಾನು ಮಾಡಿಸಿದ ಅಡಿಗೆಯ ಸವಿಯನ್ನು ನೋಡಬಾರದು ಎಂದು ನಿಮಗೆ ಹೇಳುತ್ತೇನೆ ಅಂದನು.
ಅಧ್ಯಾಯ 38
ಬಹು ಜನರು ಗುಂಪುಗುಂಪಾಗಿ ಯೇಸುವಿನ ಸಂಗಡ ಹೋಗುತ್ತಾ ಇರಲು ಆತನು ತಿರುಗಿಕೊಂಡು ಅವರಿಗೆ ಹೇಳಿದ್ದೇನಂದರೆ - ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ ತಾಯಿ ಹೆಂಡತಿ ಮಕ್ಕಳು ಅಣ್ಣತಮ್ಮಂದಿರು ಅಕ್ಕತಂಗಿಯರು ಇವರನ್ನೂ ತನ್ನ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು. ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬಂದ ಹೊರತು ಅವನು ನನ್ನ ಶಿಷ್ಯನಾಗಿರಲಾರನು. ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು - ಅದಕ್ಕೆ ಎಷ್ಟು ಖರ್ಚು ಹಿಡಿದೀತು, ಅದನ್ನು ತೀರಿಸುವದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಉಂಟೋ ಎಂದು ಲೆಕ್ಕಮಾಡುವದಿಲ್ಲವೇ? ಹೀಗೆ ಲೆಕ್ಕಮಾಡದೆ ಅದಕ್ಕೆ ಅಸ್ತಿವಾರ ಹಾಕಿದ ಮೇಲೆ ಆ ಕೆಲಸವನ್ನು ಪೂರೈಸಲಾರದೆ ಹೋದರೆ ನೋಡುವವರೆಲ್ಲರು - ಈ ಮನುಷ್ಯನು ಕಟ್ಟಿಸುವದಕ್ಕಂತೂ ತೊಡಗಿದನು, ಕೆಲಸಪೂರೈಸಲಾರದೆಹೋದನು ಎಂದು ಅವನನ್ನು ಹಾಸ್ಯಮಾಡಾರು. ಇಲ್ಲವೆ ಯಾವ ಅರಸನಾದರೂ ಮತ್ತೊಬ್ಬ ಅರಸನ ಸಂಗಡ ಯುದ್ಧಮಾಡುವದಕ್ಕೆ ಹೋಗುವಾಗ ತನ್ನ ಮೇಲೆ ಇಪ್ಪತ್ತು ಸಾವಿರ ದಂಡು ತೆಗೆದುಕೊಂಡು ಬರುವವನನ್ನು ತಾನು ಹತ್ತು ಸಾವಿರ ದಂಡಿನಿಂದ ಎದುರಿಸುವದಕ್ಕೆ ಶಕ್ತನಾಗುವೆನೋ ಇಲ್ಲವೋ ಎಂದು ಕೂತುಕೊಂಡು ಆಲೋಚಿಸುವದಿಲ್ಲವೇ? ತಾನು ಶಕ್ತನಲ್ಲದಿದ್ದರೆ ಬರುವ ಅರಸನು ಇನ್ನೂ ದೂರದಲ್ಲಿರುವಾಗಲೇ ರಾಯಭಾರಿಗಳನ್ನು ಕಳುಹಿಸಿ ಸಂಧಾನಕ್ಕೆ ಒಪ್ಪಂದವನ್ನು ಕೇಳಿಕೊಳ್ಳುವನು. ಹಾಗೆಯೇ ನಿಮ್ಮಲ್ಲಿ ಯಾವನೇ ಆಗಲಿ ತನಗಿರುವದನ್ನೆಲ್ಲಾ ಬಿಟ್ಟುಬಿಡದೆ ಹೋದರೆ ಅವನು ನನ್ನ ಶಿಷ್ಯನಾಗಿರಲಾರನು.ಉಪ್ಪಂತೂ ಒಳ್ಳೆಯ ಪದಾರ್ಥವೇ; ಉಪ್ಪು ಸಹ ಸಪ್ಪಗಾದರೆ ಅದಕ್ಕೆ ಇನ್ನಾತರಿಂದ ರುಚಿಬಂದೀತು? ಅದು ಭೂವಿುಗಾದರೂ ತಿಪ್ಪೆಗಾದರೂ ಉಪಯೋಗವಲ್ಲ; ಅದನ್ನು ಹೊರಗೆ ಬಿಸಾಡುತ್ತಾರೆ. ಕೇಳುವದಕ್ಕೆ ಕಿವಿಯುಳ್ಳವನು ಕೇಳಲಿ ಅಂದನು.
ಯೇಸುವಿನ ಉಪದೇಶವನ್ನು ಕೇಳಬೇಕೆಂದು ಎಲ್ಲಾ ಸುಂಕದವರೂ ಪಾಪಿಗಳೂ ಆತನ ಬಳಿಗೆ ಬರುತ್ತಾ ಇರಲು ಫರಿಸಾಯರೂ ಶಾಸ್ತ್ರಿಗಳೂ - ಇವನು ಪಾಪಿಗಳನ್ನು ಸೇರಿಸಿಕೊಂಡು ಅವರ ಜೊತೆಯಲ್ಲಿ ಊಟಮಾಡುತ್ತಾನೆ ಎಂದು ಹೇಳಿಕೊಂಡು ಗುಣುಗುಟ್ಟುತ್ತಿದ್ದರು.ಆಗ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು. ಅದೇನಂದರೆ - ನಿಮ್ಮೊಳಗೆ ಯಾವ ಮನುಷ್ಯನಾದರೂ ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದು ಕಳೆದು ಹೋದರೆ ಅವನು ತೊಂಭತ್ತೊಂಭತ್ತನ್ನು ಅಡವಿಯಲ್ಲಿ ಬಿಟ್ಟು ಕಳೆದುಹೋದದ್ದು ಸಿಕ್ಕುವ ತನಕ ಅದನ್ನು ಹುಡುಕಿಕೊಂಡು ಹೋಗದೆ ಇದ್ದಾನೇ? ಸಿಕ್ಕಿದ ಮೇಲೆ ಅವನು ಸಂತೋಷಪಡುತ್ತಾ ಅದನ್ನು ತನ್ನ ಹೆಗಲಿನ ಮೇಲೆ ಇಟ್ಟುಕೊಂಡು ಮನೆಗೆ ಬಂದು ಸ್ನೇಹಿತರನ್ನೂ ನೆರೆಹೊರೆಯವರನ್ನೂ ಕೂಡಿಸಿ - ಕಳೆದುಹೋಗಿದ್ದ ಕುರಿ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ ಎಂದು ಅವರಿಗೆ ಹೇಳುವನಲ್ಲವೇ. ಅದರಂತೆ ದೇವರ ಕಡೆಗೆ ತಿರುಗಿಕೊಳ್ಳುವದಕ್ಕೆ ಅವಶ್ಯವಿಲ್ಲದ ತೊಂಭತ್ತೊಂಭತ್ತು ಮಂದಿ ನೀತಿವಂತರಿಗಿಂತ ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವುಂಟಾಗುವದೆಂದು ನಿಮಗೆ ಹೇಳುತ್ತೇನೆ. ಯಾವ ಹೆಂಗಸು ತನ್ನಲ್ಲಿ ಹತ್ತು ಪಾವಲಿಗಳಿರಲಾಗಿ ಒಂದು ಪಾವಲಿ ಕಳೆದುಹೋದರೆ ದೀಪಾಹಚ್ಚಿ ಮನೆಯನ್ನು ಗುಡಿಸಿ ಸಿಕ್ಕುವ ತನಕ ಅದನ್ನು ಎಚ್ಚರದಿಂದ ಹುಡುಕದೆ ಇದ್ದಾಳು? ಸಿಕ್ಕಿದ ಮೇಲೆ ಆಕೆಯು ತನ್ನ ಗೆಳತಿಯರನ್ನೂ ನೆರೆಹೊರೆಯವರನ್ನೂ ಕೂಡಿಸಿ - ಕಳೆದು ಹೋಗಿದ್ದ ಪಾವಲಿ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ ಎಂದು ಹೇಳುವಳಲ್ಲವೇ. ಅದರಂತೆ ಒಬ್ಬ ಪಾಪಿಯು ದೇವರ ಕಡೆಗೆ ತಿರುಗಿಕೊಳ್ಳುವ ವಿಷಯದಲ್ಲಿ ದೇವದೂತರ ಮುಂದೆ ಸಂತೋಷವಾಗುವದೆಂದು ನಿಮಗೆ ಹೇಳುತ್ತೇನೆ ಅಂದನು.
ಇನ್ನೂ ಆತನು ಹೇಳಿದ್ದೇನಂದರೆ - ಒಬ್ಬಾನೊಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. ಅವರಲ್ಲಿ ಕಿರಿಯವನು ತಂದೆಗೆ - ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು ಎಂದು ಕೇಳಿಕೊಳ್ಳಲು ತಂದೆಯು ಬದುಕನ್ನು ಅವರಿಗೆ ಹಂಚಿಕೊಟ್ಟನು. ಸ್ವಲ್ಪ ದಿವಸದ ಮೇಲೆ ಆ ಕಿರೀಮಗನು ಎಲ್ಲಾ ಕೂಡಿಸಿಕೊಂಡು ದೂರದೇಶಕ್ಕೆ ಹೊರಟು ಹೋಗಿ ಅಲ್ಲಿ ಪಟಿಂಗನಾಗಿ ಬದುಕಿ ತನ್ನ ಆಸ್ತಿಯನ್ನು ಸೂರೆಮಾಡಿಬಿಟ್ಟನು. ಹೀಗೆ ಅವನು ಎಲ್ಲಾ ಹಾಳುಮಾಡಿಕೊಂಡ ಮೇಲೆ ಆ ದೇಶದಲ್ಲೆಲ್ಲಾ ಘೋರವಾದ ಬರ ಬಂದು ಏನೂ ಗತಿಯಿಲ್ಲದವನಾದನು. ಆಗ ಅವನು ಹೋಗಿ ಆ ದೇಶದ ನಿವಾಸಿಗಳೊಳಗೆ ಒಬ್ಬನಲ್ಲಿ ಸೇರಿಕೊಂಡನು; ಆ ಮನುಷ್ಯನು ಹಂದಿಗಳನ್ನು ಮೇಯಿಸುವದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು. ಹೀಗಿರಲಾಗಿ ಅವನು ಹಂದಿ ತಿನ್ನುತ್ತಿದ್ದ ಕಾಯಿಗಳನ್ನಾದರೂ ತಿಂದು ಹಸಿವನ್ನು ತೀರಿಸಿಕೊಳ್ಳಬೇಕೆಂದು ಆಶೆಪಟ್ಟನು; ಆದರೂ ಯಾರೂ ಅವನಿಗೆ ಕೊಡಲಿಲ್ಲ. ಆಗ ಅವನಿಗೆ ಬುದ್ಧಿ ಬಂದು ಅವನು - ನನ್ನ ತಂದೆಯ ಬಳಿಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ಬೇಕಾದಷ್ಟು ಆಹಾರವದೆ; ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತೇನೆ. ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ - ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪ ಮಾಡಿದ್ದೇನೆ; ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ; ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು ಎಂದು ಹೇಳುವೆನು ಅಂದುಕೊಂಡು ಎದ್ದು ತನ್ನ ತಂದೆಯ ಕಡೆಗೆ ಬಂದನು. ಅವನು ಇನ್ನೂ ದೂರದಲ್ಲಿರುವಾಗ ಅವನ ತಂದೆಯು ಅವನನ್ನು ಕಂಡು ಕನಿಕರಪಟ್ಟು ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಬಹಳವಾಗಿ ಮುದ್ದಿಟ್ಟನು. ಆದರೂ ಮಗನು ಅವನಿಗೆ - ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪಮಾಡಿದ್ದೇನೆ; ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ ಎಂದು ಹೇಳಲು ತಂದೆಯು ತನ್ನ ಆಳುಗಳಿಗೆ - ಶ್ರೇಷ್ಠವಾದ ನಿಲುವಂಗಿಯನ್ನು ತಟ್ಟನೆ ತಂದು ಇವನಿಗೆ ತೊಡಿಸಿರಿ; ಇವನ ಕೈಗೆ ಉಂಗುರವನ್ನು ಇಡಿರಿ; ಕಾಲಿಗೆ ಜೋಡು ಮೆಡಿಸಿರಿ; ಕೊಬ್ಬಿಸಿದ ಆ ಕರುವನ್ನು ತಂದು ಕೊಯ್ಯಿರಿ; ಹಬ್ಬಮಾಡೋಣ, ಉಲ್ಲಾಸ ಪಡೋಣ. ಈ ನನ್ನ ಮಗನು ಸತ್ತವನಾಗಿದ್ದನು, ತಿರಿಗಿ ಬದುಕಿ ಬಂದನು; ಪೋಲಿಹೋಗಿದ್ದನು, ಸಿಕ್ಕಿದನು ಎಂದು ಹೇಳಿದನು. ಆಗ ಅವರು ಉಲ್ಲಾಸಪಡುವದಕ್ಕೆ ತೊಡಗಿದರು.
ಆದರೆ ಅವನ ಹಿರೀಮಗನು ಹೊಲದಲ್ಲಿದ್ದನು. ಅವನು ಮನೆಯ ಹತ್ತಹತ್ತರಕ್ಕೆ ಬರುತ್ತಿರುವಾಗ ವಾದ್ಯನರ್ತನಗಳನ್ನು ಕೇಳಿ ಆಳುಗಳಲ್ಲಿ ಒಬ್ಬನನ್ನು ತನ್ನ ಬಳಿಗೆ ಕರೆದು - ಇದೇನು ಎಂದು ವಿಚಾರಿಸಿದನು. ಆಳು ಅವನಿಗೆ - ನಿನ್ನ ತಮ್ಮ ಬಂದಿದ್ದಾನೆ; ಇವನು ಸುರಕ್ಷಿತವಾಗಿ ಬಂದದ್ದರಿಂದ ನಿನ್ನ ತಂದೆಯು ಆ ಕೊಬ್ಬಿಸಿದ ಕರುವನ್ನು ಕೊಯ್ಸಿದ್ದಾನೆ ಎಂದು ಹೇಳಿದನು. ಇದನ್ನು ಕೇಳಿ ಅವನಿಗೆ ಸಿಟ್ಟುಬಂದು ಒಳಕ್ಕೆ ಹೋಗಲೊಲ್ಲದೆ ಇದ್ದನು. ಆಗ ಅವನ ತಂದೆಯು ಹೊರಗೆ ಬಂದು ಅವನನ್ನು ಬೇಡಿಕೊಂಡನು. ಆದರೆ ಅವನು ತನ್ನ ತಂದೆಗೆ - ನೋಡು, ಇಷ್ಟು ವರುಷ ನಿನಗೆ ಸೇವೆ ಮಾಡಿದ್ದೇನೆ, ಮತ್ತು ನಾನು ನಿನ್ನ ಒಂದಪ್ಪಣೆಯನ್ನಾದರೂ ಎಂದೂ ಮೀರಲಿಲ್ಲ; ಆದರೂ ನಾನು ನನ್ನ ಸ್ನೇಹಿತರ ಸಂಗಡ ಉಲ್ಲಾಸಪಡುವದಕ್ಕಾಗಿ ನೀನು ಎಂದೂ ನನಗೆ ಒಂದು ಆಡನ್ನಾದರೂ ಕೊಡಲಿಲ್ಲ. ಆದರೆ ಸೂಳೆಯರನ್ನು ಕಟ್ಟಿಕೊಂಡು ನಿನ್ನ ಬದುಕನ್ನು ನುಂಗಿಬಿಟ್ಟ ಈ ನಿನ್ನ ಮಗನು ಬಂದಾಗ ಕೊಬ್ಬಿಸಿದ ಕರುವನ್ನು ಅವನಿಗೆ ಕೊಯ್ಸಿದಿ ಎಂದು ಉತ್ತರಕೊಟ್ಟನು. ಅದಕ್ಕೆ ತಂದೆಯು - ಕಂದಾ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ, ಮತ್ತು ನನ್ನದೆಲ್ಲಾ ನಿನ್ನದೇ. ಆದರೆ ಉಲ್ಲಾಸಪಡುವದೂ ಸಂತೋಷಗೊಳ್ಳುವದೂ ನ್ಯಾಯವಾದದ್ದೇ; ಯಾಕಂದರೆ ಈ ನಿನ್ನ ತಮ್ಮ ಸತ್ತವನಾಗಿದ್ದನು, ತಿರಿಗಿ ಬದುಕಿ ಬಂದನು; ಪೋಲಿಹೋಗಿದ್ದನು, ಸಿಕ್ಕಿದನು ಎಂದು ಹೇಳಿದನು.
ಅಧ್ಯಾಯ 39
ಯೇಸು ತನ್ನ ಶಿಷ್ಯರಿಗೂ ಹೇಳಿದ್ದೇನಂದರೆ - ಐಶ್ವರ್ಯವಂತನಾದ ಒಬ್ಬ ಮನುಷ್ಯನಿಗೆ ಒಬ್ಬ ಮನೆವಾರ್ತೆಯವನಿದ್ದನು. ಇವನ ವಿಷಯವಾಗಿ ಯಜಮಾನನ ಬಳಿಯಲ್ಲಿ - ಇವನು ನಿನ್ನ ಆಸ್ತಿಯನ್ನು ಹಾಳುಮಾಡುತ್ತಾ ಇದ್ದಾನೆ ಎಂದು ಯಾರೋ ದೂರು ಹೇಳಿರಲಾಗಿ ಯಜಮಾನನು ಅವನನ್ನು ಕರೆದು - ಇದೇನು ನಾನು ನಿನ್ನ ವಿಷಯದಲ್ಲಿ ಕೇಳುವ ಸಂಗತಿ? ನಿನ್ನ ಮನೆವಾರ್ತೆಯ ಲೆಕ್ಕವನ್ನು ಒಪ್ಪಿಸು; ನೀನು ಇನ್ನು ಮನೆವಾರ್ತೆಯವನಾಗಿರುವದಕ್ಕಾಗುವದಿಲ್ಲ ಎಂದು ಹೇಳಿದನು. ಹೀಗಿರಲಾಗಿ ಆ ಮನೆವಾರ್ತೆಯವನು - ನಾನೇನು ಮಾಡಲಿ? ನನ್ನ ಯಜಮಾನನು ನನ್ನಿಂದ ಈ ಮನೆವಾರ್ತೆಕೆಲಸವನ್ನು ತೆಗೆದುಬಿಡುತ್ತಾನಲ್ಲಾ. ಅಗೆಯುವದಕ್ಕೆ ನನಗೆ ಬಲವಿಲ್ಲ; ಭಿಕ್ಷಾ ಬೇಡುವದಕ್ಕೆ ನನಗೆ ನಾಚಿಕೆಯಾಗುತ್ತದೆ. ಈ ಮನೆವಾರ್ತೆಕೆಲಸದಿಂದ ನನ್ನನ್ನು ತೆಗೆದ ಮೇಲೆ ಜನರು ನನ್ನನ್ನು ತಮ್ಮ ಮನೆಗಳೊಳಗೆ ಸೇರಿಸಿಕೊಳ್ಳುವಂತೆ ನಾನು ಮಾಡಬೇಕಾದದ್ದು ಗೊತ್ತಾಯಿತು ಎಂದು ತನ್ನೊಳಗೆ ಅಂದುಕೊಂಡು ತನ್ನ ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನೂ ಕರೆದು ಮೊದಲನೆಯವನನ್ನು - ನೀನು ನನ್ನ ಯಜಮಾನನಿಗೆ ಏನು ಕೊಡಬೇಕು ಎಂದು ಕೇಳಲು ಅವನು - ನೂರು ಬುದ್ದಲಿ ಎಣ್ಣೆ ಅಂದಾಗ ಅವನಿಗೆ - ಈ ನಿನ್ನ ಪತ್ರವನ್ನು ತೆಗೆದುಕೊಂಡು ಬೇಗ ಕೂತುಕೊಂಡು ಐವತ್ತು ಬುದ್ದಲಿ ಅಂತ ಬರಿ ಎಂದು ಹೇಳಿದನು. ಬಳಿಕ ಮತ್ತೊಬ್ಬನನ್ನು - ನೀನು ಏನು ಕೊಡಬೇಕು ಎಂದು ಕೇಳಲು ಅವನು - ನೂರು ಖಂಡುಗ ಗೋದಿ ಅಂದಾಗ ಅವನಿಗೆ - ಈ ನಿನ್ನ ಪತ್ರವನ್ನು ತೆಗೆದುಕೊಂಡು ಎಂಭತ್ತು ಖಂಡುಗ ಅಂತ ಬರಿ ಎಂದು ಹೇಳಿದನು. ಯಜಮಾನನು ಇದನ್ನು ಕೇಳಿ ಅನ್ಯಾಯಗಾರನಾದ ಆ ಮನೆವಾರ್ತೆಯವನನ್ನು - ಇವನು ಜಾಣತನ ಮಾಡಿದನು ಎಂದು ಹೊಗಳಿದನು. ಯಾಕಂದರೆ ಲೌಕಿಕರು ತಮ್ಮಂಥವರ ವಿಷಯದಲ್ಲಿ ಬೆಳಕಿನ ರಾಜ್ಯದವರಿಗಿಂತಲೂ ಜಾಣರಾಗಿದ್ದಾರೆ. ಅನ್ಯಾಯದ ಧನದ ಮೂಲಕವಾಗಿ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ; ಹೀಗೆ ಮಾಡಿದರೆ ಅದು ನಿಮ್ಮ ಕೈಬಿಟ್ಟುಹೋದಾಗ ಅವರು ನಿಮ್ಮನ್ನು ಶಾಶ್ವತವಾದ ವಾಸಸ್ಥಾನಗಳಲ್ಲಿ ಸೇರಿಸಿಕೊಳ್ಳುವರು ಎಂದು ನಾನು ನಿಮಗೆ ಹೇಳುತ್ತೇನೆ. ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು; ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾದವನು ಬಹಳವಾದದ್ದರಲ್ಲಿಯೂ ಅನ್ಯಾಯಗಾರನಾಗುವನು. ಹೀಗಿರುವದರಿಂದ ಅನ್ಯಾಯದ ಧನದ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಕೊಟ್ಟಾರು? ಮತ್ತೊಬ್ಬನ ಸೊತ್ತಿನ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಮ್ಮದನ್ನು ನಿಮಗೆ ಯಾರು ಕೊಟ್ಟಾರು? ಯಾವ ಆಳಾದರೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು; ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು, ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ ಅಂದನು.
ಫರಿಸಾಯರು ಈ ಮಾತುಗಳನ್ನೆಲ್ಲಾ ಕೇಳಿ ತಾವು ಹಣದಾಶೆಯುಳ್ಳವರಾಗಿದ್ದದರಿಂದ ಹಾಸ್ಯಮಾಡಿದರು. ಆಗ ಆತನು ಅವರಿಗೆ ಹೇಳಿದ್ದೇನಂದರೆ - ಮನುಷ್ಯರ ಮುಂದೆ ನೀತಿವಂತರೆಂದು ತೋರಿಸಿಕೊಳ್ಳುವವರು ನೀವು; ಆದರೆ ದೇವರು ನಿಮ್ಮ ಹೃದಯಗಳನ್ನು ತಿಳುಕೊಂಡಿದ್ದಾನೆ. ಮನುಷ್ಯರಲ್ಲಿ ಶ್ರೇಷ್ಠವೆನಿಸಿಕೊಳ್ಳುವಂಥದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ.ಧರ್ಮಶಾಸ್ತ್ರವೂ ಪ್ರವಾದಿಗಳೂ ಯೋಹಾನನ ತನಕವೇ. ಈಚೆಗೆ ದೇವರ ರಾಜ್ಯವು ಸಾರಲ್ಪಡುತ್ತಾ ಇದೆ. ಅದರಲ್ಲಿ ಸಕಲರೂ ಬಲಾತ್ಕಾರವಾಗಿ ನುಗ್ಗುತ್ತಾರೆ.ಧರ್ಮಶಾಸ್ತ್ರದೊಳಗಿನ ಒಂದು ಗುಡಸಾದರೂ ಬಿದ್ದು ಹೋಗುವದಕ್ಕಿಂತಲೂ ಆಕಾಶವೂ ಭೂವಿುಯೂ ಅಳಿದುಹೋಗುವದು ಸುಲಭ.ತನ್ನ ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಮಾಡಿಕೊಳ್ಳುವ ಪ್ರತಿಯೊಬ್ಬನು ವ್ಯಭಿಚಾರ ಮಾಡುವವನಾಗಿದ್ದಾನೆ; ಮತ್ತು ಗಂಡಬಿಟ್ಟವಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ.
ಐಶ್ವರ್ಯವಂತನಾದ ಒಬ್ಬ ಮನುಷ್ಯನಿದ್ದನು. ಅವನು ಸಕಲಾತಿ ನಯವಾದ ನಾರುಮಡಿ ಮುಂತಾದ ವಸ್ತ್ರಗಳನ್ನು ಧರಿಸಿಕೊಂಡು ಪ್ರತಿದಿನವೂ ವೈಭವದೊಡನೆ ಸುಖಸಂತೋಷಪಡುತ್ತಿದ್ದನು. ಅವನ ಮನೇ ಬಾಗಿಲಲ್ಲಿ ಲಾಜರನೆಂಬ ಒಬ್ಬ ಭಿಕ್ಷಗಾರನು ಬಿದ್ದುಕೊಂಡಿದ್ದನು. ಇವನು ಮೈತುಂಬಾ ಹುಣ್ಣೆದ್ದವನು; ಐಶ್ವರ್ಯವಂತನ ಮೇಜಿನಿಂದ ಬಿದ್ದ ಎಂಜಲನ್ನು ತಿಂದು ಹಸಿವು ತೀರಿಸಿಕೊಳ್ಳಬೇಕೆಂದಿದ್ದನು; ಇಷ್ಟು ಮಾತ್ರವಲ್ಲದೆ ನಾಯಿಗಳು ಸಹ ಬಂದು ಅವನ ಹುಣ್ಣುಗಳನ್ನು ನೆಕ್ಕುವವು. ಹೀಗಿರುವಲ್ಲಿ ಸ್ವಲ್ಪ ಕಾಲದ ಮೇಲೆ ಆ ಭಿಕ್ಷಗಾರನು ಸತ್ತನು; ದೇವದೂತರು ಅವನನ್ನು ತೆಗೆದುಕೊಂಡುಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಆ ಐಶ್ವರ್ಯವಂತನು ಸಹ ಸತ್ತನು; ಅವನಿಗೆ ಉತ್ತರಕ್ರಿಯೆಗಳು ಆದವು. ಅವನು ಪಾತಾಳದೊಳಗೆ ಯಾತನೆಪಡುತ್ತಾ ಇರುವಲ್ಲಿ ಕಣ್ಣೆತ್ತಿ ದೂರದಿಂದ ಅಬ್ರಹಾಮನನ್ನೂ ಇವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ನೋಡಿ - ತಂದೆಯೇ, ಅಬ್ರಹಾಮನೇ, ನನ್ನ ಮೇಲೆ ದಯವಿಟ್ಟು ಲಾಜರನನ್ನು ಕಳುಹಿಸು; ಅವನು ತನ್ನ ತುದಿಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ; ಈ ಉರಿಯಲ್ಲಿ ಸಂಕಟಪಡುತ್ತೇನೆ ಎಂದು ಕೂಗಿ ಹೇಳಿದನು. ಆದರೆ ಅಬ್ರಹಾಮನು - ಕಂದಾ, ನೀನು ಆಶಿಸಿದ ಸುಖವನ್ನು ನಿನ್ನ ಜೀವಮಾನದಲ್ಲಿ ಹೊಂದಿದಿ; ಹಾಗೆಯೇ ಲಾಜರನು ಕಷ್ಟವನ್ನು ಹೊಂದಿದನು ಎಂಬದನ್ನು ನೆನಪಿಗೆ ತಂದುಕೋ. ಈಗಲಾದರೋ ಇಲ್ಲಿ ಇವನಿಗೆ ಸಮಾಧಾನ, ಆದರೆ ನಿನಗೆ ಸಂಕಟ. ಇದು ಮಾತ್ರವಲ್ಲದೆ ನಮಗೂ ನಿಮಗೂ ನಡುವೆ ದೊಡ್ಡದೊಂದು ಡೊಂಗರ ಸ್ಥಾಪಿಸಿಯದೆ; ಆದಕಾರಣ ಈ ಕಡೆಯಿಂದ ನಿಮ್ಮ ಬಳಿಗೆ ಹೋಗಬೇಕೆಂದಿರುವವರು ಹೋಗಲಾರರು; ಮತ್ತು ಆ ಕಡೆಯಿಂದ ನಮ್ಮ ಬಳಿಗೆ ಯಾರೂ ದಾಟುವದಕ್ಕಾಗದು ಅಂದನು. ಆಗ ಅವನು - ಅಪ್ಪಾ, ಹಾಗಾದರೆ ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ನನಗೆ ಐದು ಮಂದಿ ಅಣ್ಣತಮ್ಮಂದಿರಿದ್ದಾರೆ; ಅವರು ಸಹ ಈ ಯಾತನೆಯ ಸ್ಥಳಕ್ಕೆ ಬಂದಾರು; ಬಾರದಂತೆ ಅವನು ತಾನು ಕಂಡದ್ದನ್ನು ಅವರಿಗೆ ಚೆನ್ನಾಗಿ ಹೇಳಲಿ ಅಂದನು. ಆದರೆ ಅಬ್ರಹಾಮನು - ಮೋಶೆಯ ಧರ್ಮಶಾಸ್ತ್ರವೂ ಪ್ರವಾದಿಗಳ ಗ್ರಂಥಗಳೂ ಅವರಲ್ಲಿ ಅವೆ; ಅವುಗಳನ್ನು ಕೇಳಲಿ ಅನ್ನಲು ಅವನು - ತಂದೆಯೇ, ಅಬ್ರಹಾಮನೇ, ಹಾಗಲ್ಲ; ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ದೇವರ ಕಡೆಗೆ ತಿರುಗಿಕೊಳ್ಳುವರು ಅಂದನು. ಅಬ್ರಹಾಮನು ಅವನಿಗೆ - ಅವರು ಮೋಶೆಯ ಮಾತನ್ನೂ ಪ್ರವಾದಿಗಳ ಮಾತನ್ನೂ ಕೇಳದಿದ್ದರೆ ಸತ್ತುಹೋಗಿದ್ದವನೊಬ್ಬನು ಜೀವಿತನಾಗಿ ಎದ್ದರೂ ಅವರು ಒಪ್ಪುವದಿಲ್ಲ ಎಂದು ಹೇಳಿದನು.
ಅಪೊಸ್ತಲರು ಸ್ವಾವಿುಗೆ - ನಮ್ಮ ನಂಬಿಕೆಯನ್ನು ಹೆಚ್ಚಿಸು ಎಂದು ಹೇಳಲು ಸ್ವಾವಿುಯು - ಸಾಸಿವೇ ಕಾಳಷ್ಟು ನಂಬಿಕೆ ನಿಮಗಿದ್ದರೆ ನೀವು ಈ ಅತ್ತೀಮರಕ್ಕೆ - ನೀನು ಬೇರು ಸಹಿತ ಕಿತ್ತುಕೊಂಡುಹೋಗಿ ಸಮುದ್ರದಲ್ಲಿ ನಾಟಿಕೋ ಎಂದು ಹೇಳಿದರೂ ಅದು ನಿಮ್ಮ ಮಾತನ್ನು ಕೇಳುವದು.ನಿಮ್ಮಲ್ಲಿ ಯಾವನಿಗಾದರೂ ಉಳುವ ಅಥವಾ ಕುರಿಮೇಯಿಸುವ ಆಳಿರಲಾಗಿ ಅವನು ಹೊಲದಿಂದ ಮನೆಗೆ ಬಂದ ಆ ಆಳಿಗೆ - ನೀನು ತಟ್ಟನೆ ಬಂದು ಊಟಕ್ಕೆ ಕೂತುಕೋ ಎಂದು ಹೇಳಾನೇ? ಹಾಗೆ ಹೇಳದೆ - ನೀನು ನನ್ನ ಊಟಕ್ಕೇನಾದರೂ ಸಿದ್ಧಮಾಡು, ನಾನು ಊಟಮಾಡಿ ಕುಡಿಯುವ ತನಕ ನಡುಕಟ್ಟಿಕೊಂಡು ನನಗೆ ಸೇವೆಮಾಡು; ಆಮೇಲೆ ನೀನು ಊಟಮಾಡಿ ಕುಡಿ ಎಂದು ಹೇಳುವನಲ್ಲವೇ. ತನ್ನ ಅಪ್ಪಣೆಯಂತೆ ನಡೆದ ಆ ಆಳಿಗೆ - ನಿನ್ನಿಂದ ಉಪಕಾರವಾಯಿತೆಂದು ಅವನಿಗೆ ಹೇಳುವನೇ? ಇದರಂತೆಯೇ ನಿಮ್ಮ ಸಂಗತಿ. ನೀವು ನಿಮಗೆ ಅಪ್ಪಣೆಯಾಗಿರುವದನ್ನೆಲ್ಲಾ ಮಾಡಿದ ಮೇಲೆ ನಾವು ಆಳುಗಳು, ಪ್ರಯೋಜನವಿಲ್ಲದವರು, ಮಾಡಬೇಕಾದದ್ದನ್ನೇ ಮಾಡಿದ್ದೇವೆ ಅನ್ನಿರಿ ಎಂದು ಹೇಳಿದನು.
ಅಧ್ಯಾಯ 40
ಆತನು ಯೆರೂಸಲೇವಿುಗೆ ಪ್ರಯಾಣ ಮಾಡುವಾಗ ಸಮಾರ್ಯ ಗಲಿಲಾಯ ಸೀಮೆಗಳ ನಡುವೆ ಹಾದುಹೋದನು. ಒಂದು ಹಳ್ಳಿಗೆ ಬಂದಾಗ ಹತ್ತು ಮಂದಿ ಕುಷ್ಠರೋಗಿಗಳು ಆತನ ಎದುರಿಗೆ ಬಂದು ದೂರದಲ್ಲಿ ನಿಂತು - ಯೇಸುವೇ, ಗುರುವೇ, ನಮ್ಮ ಮೇಲೆ ದಯವಿಡು ಎಂದು ಕೂಗಿ ಹೇಳಿದರು. ಆತನು ಅವರನ್ನು ನೋಡಿ - ನೀವು ಹೋಗಿ ಯಾಜಕರಿಗೆ ಮೈ ತೋರಿಸಿಕೊಳ್ಳಿರಿ ಎಂದು ಹೇಳಿದನು. ಅವರು ಹೋಗುತ್ತಿರುವಾಗಲೇ ಶುದ್ಧರಾದರು. ಅವರಲ್ಲಿ ಒಬ್ಬನು ತನಗೆ ಗುಣವಾದದ್ದನ್ನು ನೋಡಿ ಮಹಾಶಬ್ಧದಿಂದ ದೇವರನ್ನು ಕೊಂಡಾಡುತ್ತಾ ಹಿಂತಿರುಗಿ ಬಂದು ಯೇಸುವಿನ ಪಾದಗಳಿಗೆ ಅಡ್ಡ ಬಿದ್ದು ಆತನಿಗೆ ಉಪಕಾರಸ್ತುತಿಮಾಡಿದನು. ಅವನು ಸಮಾರ್ಯದವನು. ಯೇಸು ಇದನ್ನು ನೋಡಿ - ಹತ್ತು ಮಂದಿ ಶುದ್ಧರಾದರಲ್ಲವೇ, ವಿುಕ್ಕ ಒಂಭತ್ತು ಮಂದಿ ಎಲ್ಲಿ? ದೇವರನ್ನು ಸ್ತುತಿಸುವದಕ್ಕೆ ಈ ಅನ್ಯದೇಶದವನೇ ಹೊರತು ಇನ್ನಾರೂ ಹಿಂತಿರುಗಿ ಬರಲಿಲ್ಲವೇ ಎಂದು ಹೇಳಿ ಅವನಿಗೆ - ಎದ್ದು ಹೋಗು. ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥಮಾಡಿಯದೆ ಎಂದು ಹೇಳಿದನು.
ದೇವರ ರಾಜ್ಯವು ಯಾವಾಗ ಬರುವದೆಂದು ಫರಿಸಾಯರು ಆತನನ್ನು ಕೇಳಿದಾಗ ಆತನು ಅವರಿಗೆ - ದೇವರ ರಾಜ್ಯವು ಪ್ರತ್ಯಕ್ಷವಾಗಿ ಬರುವಂಥದಲ್ಲ. ಇಗೋ ಇಲ್ಲಿ ಇದೆ, ಅಗೋ ಅಲ್ಲಿ ಅದೆ ಎಂದು ಹೇಳುವದಕ್ಕಾಗದು; ದೇವರ ರಾಜ್ಯವು ನಿಮ್ಮಲ್ಲಿಯೇ ಅದೆ ಅಂತ ತಿಳುಕೊಳ್ಳಿರಿ ಎಂದು ಉತ್ತರಕೊಟ್ಟನು.ಮತ್ತು ಆತನು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ - ಒಂದು ಕಾಲ ಬರುತ್ತದೆ, ಅದರಲ್ಲಿ ನೀವು ಮನುಷ್ಯಕುಮಾರನ ದಿವಸಗಳೊಳಗೆ ಒಂದು ದಿನವನ್ನು ನೋಡಬೇಕೆಂದು ಅಪೇಕ್ಷಿಸಿದರೂ ಅದನ್ನು ನೋಡದೆ ಇರುವಿರಿ. ಜನರು ನಿಮಗೆ - ಅಗೋ ಅಲ್ಲಿದ್ದಾನೆ, ಇಗೋ ಇಲ್ಲಿದ್ದಾನೆ ಎಂದು ಹೇಳಿದರೆ ನೀವು ಹೊರಟುಹೋಗಬೇಡಿರಿ, ಅವರನ್ನು ಹಿಂಬಾಲಿಸಲೂ ಬೇಡಿರಿ. ಯಾಕಂದರೆ ವಿುಂಚು ವಿುಂಚುತ್ತಾ ಆಕಾಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಹೇಗೆ ಹೊಳೆಯುವದೋ ಹಾಗೆಯೇ ಮನುಷ್ಯಕುಮಾರನು ತನ್ನ ದಿನದಲ್ಲಿರುವನು. ಆದರೆ ಮೊದಲು ಆತನು ಬಹು ಕಷ್ಟಗಳನ್ನನುಭವಿಸಿ ಈಗಿನ ಕಾಲದ ಜನರಿಂದ ನಿರಾಕರಿಸಲ್ಪಡಬೇಕು. ನೋಹನ ದಿನಗಳಲ್ಲಿ ನಡೆದ ಹಾಗೆಯೇ ಮನುಷ್ಯಕುಮಾರನ ದಿವಸಗಳಲ್ಲಿಯೂ ನಡೆಯುವದು.ಹೇಗಂದರೆ ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದು ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೆ ಇದ್ದರಲ್ಲಾ. ಅದರಂತೆ ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿಯೂ ಇರುವದು.
ಮತ್ತು ಲೋಟನ ದಿವಸಗಳಲ್ಲಿ ನಡೆದ ಪ್ರಕಾರ ನಡೆಯುವದು. ಅವರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಕೊಳ್ಳುತ್ತಿದ್ದರು, ಮಾರುತ್ತಿದ್ದರು, ನೆಡುತ್ತಿದ್ದರು, ಕಟ್ಟುತ್ತಿದ್ದರು. ಆದರೆ ಲೋಟನು ಸೊದೋಮ್ ಊರನ್ನು ಬಿಟ್ಟುಹೋದ ದಿವಸದಲ್ಲಿ ಆಕಾಶದಿಂದ ಬೆಂಕಿ ಗಂಧಕಗಳು ಸುರಿದು ಅವರೆಲ್ಲರನ್ನು ನಾಶಮಾಡಿದವು. ಮನುಷ್ಯಕುಮಾರನು ಪ್ರತ್ಯಕ್ಷವಾಗುವ ದಿವಸದಲ್ಲಿ ಅದೇ ರೀತಿಯಾಗಿ ಇರುವದು. ಆ ದಿನದಲ್ಲಿ ಮಾಳಿಗೆಯ ಮೇಲೆ ಇರುವವನು ಮನೆಯೊಳಗಿರುವ ತನ್ನ ವಸ್ತುಗಳನ್ನು ತೆಗೆದುಕೊಳ್ಳುವದಕ್ಕೆ ಇಳಿದು ಬರಬಾರದು; ಅದೇ ಪ್ರಕಾರ ಹೊಲದಲ್ಲಿರುವವನು ಸಹ ತಿರಿಗಿ ಹಿಂದಕ್ಕೆ ಹೋಗಬಾರದು. ಲೋಟನ ಹೆಂಡತಿಯನ್ನು ನೆನಪಿಗೆ ತಂದುಕೊಳ್ಳಿರಿ. ತನ್ನ ಪ್ರಾಣವನ್ನು ದೊರಕಿಸಿಕೊಳ್ಳಬೇಕೆಂದಿರುವವನು ಅದನ್ನು ಕಳಕೊಳ್ಳುವನು; ಪ್ರಾಣವನ್ನು ಕಳಕೊಂಡವನು ಅದನ್ನು ರಕ್ಷಿಸಿಕೊಳ್ಳುವನು. ಆ ರಾತ್ರಿಯಲ್ಲಿ ಒಂದೇ ಮಂಚದ ಮೇಲೆ ಇಬ್ಬರಿರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು, ಮತ್ತೊಬ್ಬನು ಬಿಡಲ್ಪಡುವನು. ಇಬ್ಬರು ಹೆಂಗಸರು ಒಂದೇ ಕಲ್ಲಲ್ಲಿ ಬೀಸುತ್ತಿರುವರು; ಒಬ್ಬಳು ತೆಗೆದುಕೊಳ್ಳಲ್ಪಡುವಳು, ಮತ್ತೊಬ್ಬಳು ಬಿಡಲ್ಪಡುವಳು ಅಂದನು.ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.ಈ ಮಾತಿಗೆ ಶಿಷ್ಯರು - ಸ್ವಾಮೀ, ಅದು ಎಲ್ಲಿ ಆಗುವದು ಎಂದು ಕೇಳಲು ಆತನು ಅವರಿಗೆ - ಹೆಣ ಎಲ್ಲಿಯೋ ಅಲ್ಲಿಯೇ ಹದ್ದುಗಳು ಕೂಡುವವು ಎಂದು ಉತ್ತರಕೊಟ್ಟನು.
ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬದಕ್ಕೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು. ಅದೇನಂದರೆ - ಒಂದಾನೊಂದು ಊರಿನಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು; ಅವನು ದೇವರಿಗೆ ಹೆದರದೆ ಮನುಷ್ಯರನ್ನು ಲಕ್ಷ್ಯಮಾಡದೆ ಇದ್ದವನು. ಅದೇ ಊರಿನಲ್ಲಿ ಒಬ್ಬ ವಿಧವೆ ಇದ್ದಳು. ಆಕೆಯು ಅವನ ಬಳಿಗೆ ಬಂದು - ನ್ಯಾಯ ವಿಚಾರಣೆಮಾಡಿ ನನ್ನ ವಿರೋಧಿಯಿಂದ ನನ್ನನ್ನು ಬಿಡಿಸು ಎಂದು ಹೇಳಿಕೊಳ್ಳುತ್ತಿದ್ದಳು. ಅವನು ಸ್ವಲ್ಪ ಕಾಲ ಮನಸ್ಸುಕೊಡಲಿಲ್ಲ. ಆ ಮೇಲೆ ಅವನು - ನಾನು ದೇವರಿಗೆ ಹೆದರುವವನಲ್ಲ, ಮನುಷ್ಯರನ್ನು ಲಕ್ಷ್ಯಮಾಡುವವನಲ್ಲ; ಆದರೂ ಈ ವಿಧವೆ ನನ್ನನ್ನು ಕಾಡುತ್ತಾ ಬರುವದರಿಂದ ಈಕೆಯ ನ್ಯಾಯವನ್ನು ವಿಚಾರಿಸಿ ತೀರ್ಪುಮಾಡುವೆನು; ಇಲ್ಲವಾದರೆ ಈಕೆಯು ಬಂದು ಬಂದು ಕಡೆಗೆ ನನ್ನನ್ನು ದಣಿಸಾಳು ಎಂದು ತನ್ನೊಳಗೆ ಅಂದುಕೊಂಡನು. ಸ್ವಾವಿುಯು ಈ ಸಾಮ್ಯವನ್ನು ಹೇಳಿದ ಮೇಲೆ - ಅನ್ಯಾಯಗಾರನಾದ ಈ ನ್ಯಾಯಾಧಿಪತಿ ಅಂದುಕೊಂಡದ್ದನ್ನು ಆಲೋಚಿಸಿಕೊಳ್ಳಿರಿ. ದೇವರಾದುಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡುವಲ್ಲಿ ಆತನು ಅವರ ವಿಷಯದಲ್ಲಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ? ಅವರಿಗೆ ಬೇಗ ನ್ಯಾಯ ತೀರಿಸುವನೆಂದು ನಿಮಗೆ ಹೇಳುತ್ತೇನೆ. ಹೀಗಿದ್ದರೂ ಮನುಷ್ಯಕುಮಾರನು ಬಂದಾಗ ಭೂವಿುಯ ಮೇಲೆ ನಂಬಿಕೆಯನ್ನು ಕಾಣುವನೋ? ಅಂದನು.
ಇದಲ್ಲದೆ ತಾವೇ ನೀತಿವಂತರೆಂದು ತಮ್ಮಲ್ಲಿ ಭರವಸವಿಟ್ಟುಕೊಂಡು ಉಳಿದವರನ್ನು ಉದಾಸೀನಮಾಡುವಂಥ ಕೆಲವರಿಗೆ ಒಂದು ಸಾಮ್ಯವನ್ನು ಹೇಳಿದನು. ಅದೇನಂದರೆ - ಪ್ರಾರ್ಥನೆಮಾಡಬೇಕೆಂದು ಇಬ್ಬರು ಮನುಷ್ಯರು ದೇವಾಲಯಕ್ಕೆ ಹೋದರು; ಒಬ್ಬನು ಫರಿಸಾಯನು, ಒಬ್ಬನು ಸುಂಕದವನು. ಫರಿಸಾಯನು ನಿಂತುಕೊಂಡು ಪ್ರಾರ್ಥಿಸುವಾಗ ತನ್ನೊಳಗೆ - ದೇವರೇ, ಸುಲುಕೊಳ್ಳುವವರೂ ಅನ್ಯಾಯಗಾರರೂ ಹಾದರಮಾಡುವವರೂ ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ಅಲ್ಲ; ಆದದರಿಂದ ನಿನಗೆ ಸ್ತೋತ್ರಮಾಡುತ್ತೇನೆ. ವಾರಕ್ಕೆ ಎರಡಾವರ್ತಿ ಉಪವಾಸ ಮಾಡುತ್ತೇನೆ; ನಾನು ಸಂಪಾದಿಸುವ ಎಲ್ಲಾದರಲ್ಲಿಯೂ ಹತ್ತರಲ್ಲೊಂದು ಪಾಲು ಕೊಡುತ್ತೇನೆ ಅಂದುಕೊಂಡನು. ಆದರೆ ಆ ಸುಂಕದವನು ದೂರದಲ್ಲಿ ನಿಂತು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವದಕ್ಕೂ ಮನಸ್ಸಿಲ್ಲದೆ ಎದೆಯನ್ನು ಬಡುಕೊಳ್ಳುತ್ತಾ - ದೇವರೇ, ಪಾಪಿಯಾದ ನನ್ನನ್ನು ಕರುಣಿಸು ಅಂದನು. ಇವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ತನ್ನ ಮನೆಗೆ ಹೋದನು, ಆ ಫರಿಸಾಯನು ಅಂಥವನಾಗಿ ಹೋಗಲಿಲ್ಲ ಎಂದು ನಿಮಗೆ ಹೇಳುತ್ತೇನೆ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು.
ಅಧ್ಯಾಯ 41
ಯೇಸು ಈ ಮಾತುಗಳನ್ನು ಮುಗಿಸಿದ ಮೇಲೆ ಗಲಿಲಾಯವನ್ನು ಬಿಟ್ಟು ಯೊರ್ದನ್ ಹೊಳೆಯ ಆಚೆ ಪ್ರಯಾಣಮಾಡಿ ಯೂದಾಯ ಪ್ರಾಂತ್ಯಕ್ಕೆ ಬಂದನು. ಬಹುಜನರು ಆತನ ಹಿಂದೆ ಗುಂಪುಗುಂಪಾಗಿ ಹೋದರು; ಆತನು ಅವರನ್ನು ಅಲ್ಲಿಯೇ ಸ್ವಸ್ಥಮಾಡಿದನು.ಅಲ್ಲಿ ಜನರು ತಿರಿಗಿ ಗುಂಪು ಗುಂಪಾಗಿ ಆತನ ಬಳಿಗೆ ಕೂಡಿ ಬರಲು ಆತನು ತಿರಿಗಿ ಎಂದಿನಂತೆ ಅವರಿಗೆ ಉಪದೇಶಮಾಡುತ್ತಿದ್ದನು. ಆಗ ಫರಿಸಾಯರು ಹತ್ತಿರಕ್ಕೆ ಬಂದು ಆತನನ್ನು ಪರೀಕ್ಷಿಸಬೇಕೆಂಬ ಯೋಚನೆಯಿಂದ - ಒಬ್ಬನು ಹೆಂಡತಿಯನ್ನು ಬಿಟ್ಟುಬಿಡುವದು ಧರ್ಮವೋ ಹೇಗೆ ಎಂದು ಕೇಳಿದರು. ಆತನು ಅದಕ್ಕೆ - ಮೋಶೆ ನಿಮಗೆ ಏನು ಆಜ್ಞೆಕೊಟ್ಟನು ಅನ್ನಲಾಗಿ ಅವರು - ತ್ಯಾಗಪತ್ರವನ್ನು ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಅಪ್ಪಣೆಕೊಟ್ಟನು ಅಂದರು. ಆದರೆ ಯೇಸು ಅವರಿಗೆ - ಅವನು ನಿಮ್ಮ ಮೊಂಡತನವನ್ನು ನೋಡಿ ನಿಮಗೆ ಇಂಥ ಆಜ್ಞೆಯನ್ನು ಬರೆದಿಟ್ಟನು.ಅವರ ವಿಷಯದಲ್ಲಿ - ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ಹೇಳಿದನೆಂಬದಾಗಿ ನೀವು ಓದಲಿಲ್ಲವೋ? ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು ಅಂದನು.ಮತ್ತು ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗುತ್ತಾನೆಂದು ನಿಮಗೆ ಹೇಳುತ್ತೇನೆ ಅಂದನು.
ಮನೆಯಲ್ಲಿ ಆತನ ಶಿಷ್ಯರು ಈ ವಿಷಯದಲ್ಲಿ ಆತನನ್ನು ತಿರಿಗಿ ಕೇಳಿದಾಗ ಆತನು ಅವರಿಗೆ - ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ತನ್ನ ಹೆಂಡತಿಗೆ ದ್ರೋಹಿಯಾಗಿ ವ್ಯಭಿಚಾರ ಮಾಡಿದವನಾಗಿದ್ದಾನೆ; ಮತ್ತು ಹೆಂಡತಿಯು ತನ್ನ ಗಂಡನನ್ನು ಬಿಟ್ಟು ಬೇರೊಬ್ಬನನ್ನು ಮದುವೆಮಾಡಿಕೊಂಡರೆ ಅವಳು ವ್ಯಭಿಚಾರ ಮಾಡಿದವಳಾಗಿದ್ದಾಳೆ ಎಂದು ಹೇಳಿದನು. ಅದಕ್ಕೆ ಶಿಷ್ಯರು - ಹೆಂಡತಿಯ ವಿಷಯವಾಗಿ ಗಂಡನ ಧರ್ಮ ಹೀಗಿದ್ದರೆ ಮದುವೆಯಾಗುವದು ಒಳ್ಳೇದಲ್ಲ ಅಂದಾಗ ಆತನು ಅವರಿಗೆ - ಈ ಮಾತನ್ನು ಅಂಗೀಕರಿಸುವ ವರವನ್ನು ಹೊಂದಿದವರೇ ಹೊರತು ಮತ್ತಾರೂ ಅದನ್ನು ಅಂಗೀಕರಿಸುವದಿಲ್ಲ. ತಾಯಿಯ ಗರ್ಭದಿಂದ ನಪುಂಸಕರಾಗಿ ಹುಟ್ಟಿದವರು ಕೆಲವರು ಇದ್ದಾರೆ; ಮನುಷ್ಯರಿಂದ ನಪುಂಸಕರಾಗಿ ಮಾಡಲ್ಪಟ್ಟವರು ಕೆಲವರು ಇದ್ದಾರೆ; ಮತ್ತು ಪರಲೋಕರಾಜ್ಯದ ನಿವಿುತ್ತವಾಗಿ ತಮ್ಮನ್ನು ತಾವೇ ನಪುಂಸಕರಾಗಿ ಮಾಡಿಕೊಂಡವರು ಕೆಲವರು ಇದ್ದಾರೆ. ಅಂಗೀಕರಿಸಬಲ್ಲವನು ಅಂಗೀಕರಿಸಲಿ ಎಂದು ಹೇಳಿದನು.
ಆಗ ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನ ಬಳಿಗೆ ತಂದು ಆತನು ಅವುಗಳ ಮೇಲೆ ಕೈಯಿಟ್ಟು ಪ್ರಾರ್ಥನೆ ಮಾಡಬೇಕೆಂದು ಕೇಳಲು ಶಿಷ್ಯರು ಅವರನ್ನು ಗದರಿಸಿದರು. ಆದರೆ ಯೇಸು ಅದನ್ನು ಕಂಡು ಕೋಪಗೊಂಡು ಅವರಿಗೆ - ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ; ದೇವರ ರಾಜ್ಯವು ಇಂಥವರದೇ. ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವದಿಲ್ಲವೋ ಅವನು ಅದರಲ್ಲಿ ಸೇರುವದೇ ಇಲ್ಲ ಎಂದು ಹೇಳಿ ಅವುಗಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು.
ಆತನು ಹೊರಟು ದಾರಿಹಿಡಿದು ಹೋಗುವಾಗ ಒಬ್ಬನು ಓಡುತ್ತಾ ಆತನ ಎದುರಿಗೆ ಬಂದು ಮೊಣಕಾಲೂರಿ - ಒಳ್ಳೇ ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯಸ್ಥನಾಗಬೇಕಾದರೆ ಏನು ಮಾಡಬೇಕೆಂದು ಆತನನ್ನು ಕೇಳಲಾಗಿ ಯೇಸು ಅವನಿಗೆ - ನನ್ನನ್ನು ಒಳ್ಳೆಯವನೆಂದು ಯಾಕೆ ಹೇಳುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೇಯವನಲ್ಲ.ಆತನು ಅವನಿಗೆ - ಒಳ್ಳೇದನ್ನು ಕುರಿತು ನನ್ನನ್ನು ಯಾಕೆ ಕೇಳುತ್ತೀ? ಆದರೆ ಆ ಜೀವದಲ್ಲಿ ಸೇರಬೇಕೆಂದಿದ್ದರೆ ದೇವರಾಜ್ಞೆಗಳಿಗೆ ಸರಿಯಾಗಿ ನಡೆದುಕೋ ಎಂದು ಹೇಳಿದ್ದಕ್ಕೆ ಅವನು - ಅವು ಯಾವವು ಎಂದು ಕೇಳಲು ಯೇಸು - ನರಹತ್ಯಮಾಡಬಾರದು; ವ್ಯಭಿಚಾರಮಾಡಬಾರದು; ಕದಿಯಬಾರದು; ಸುಳ್ಳುಸಾಕ್ಷಿ ಹೇಳಬಾರದು; ಆ ಯೌವನಸ್ಥನು ಆತನನ್ನು - ಇವೆಲ್ಲಕ್ಕೂ ಸರಿಯಾಗಿ ನಡಕೊಂಡಿದ್ದೇನೆ; ಇನ್ನೇನು ಕಡಿಮೆಯಾಗಿರಬಹುದು? ಎಂದು ಕೇಳಲು,ಯೇಸು ಅವನನ್ನು ದೃಷ್ಟಿಸಿನೋಡಿ ಪ್ರೀತಿಸಿ ಅವನಿಗೆ - ನಿನಗೆ ಒಂದು ಕಡಿಮೆಯಾಗಿದೆ; ಹೋಗು, ನಿನ್ನ ಬದುಕನ್ನೆಲ್ಲಾ ಮಾರಿ ಬಡವರಿಗೆ ಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದನು.
ಆದರೆ ಅವನು ಬಹಳ ಆಸ್ತಿಯುಳ್ಳವನಾಗಿದ್ದದರಿಂದ ಈ ಮಾತಿಗೆ ಮೋರೆ ಬಾಡಿದವನಾಗಿ ದುಃಖದಿಂದ ಹೊರಟುಹೋದನು.ಆಗ ಯೇಸು ಸುತ್ತಲೂ ನೋಡಿ ತನ್ನ ಶಿಷ್ಯರಿಗೆ - ಧನವಂತರು ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ ಎಂದು ಹೇಳಿದನು. ಶಿಷ್ಯರು ಆತನ ಮಾತುಗಳನ್ನು ಕೇಳಿ ಬೆರಗಾದರು. ಯೇಸು ತಿರಿಗಿ ಅವರಿಗೆ - ಮಕ್ಕಳಿರಾ, ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ. ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಒಂಟೆಯು ಸೂಜೀಕಣ್ಣಿನಲ್ಲಿ ನುಗ್ಗಿ ಹೋಗುವದು ಸುಲಭ ಎಂದು ಹೇಳಿದನು. ಈ ಮಾತಿಗೆ ಅವರು ಇನ್ನಷ್ಟಾಶ್ಚರ್ಯಪಟ್ಟು - [ಹೀಗಿದ್ದರೆ] ಯಾರಿಗೆ ರಕ್ಷಣೆಯಾದೀತು ಎಂದು ತಮ್ಮ ತಮ್ಮೊಳಗೆ ಹೇಳಿಕೊಳ್ಳಲು ಯೇಸು ಅವರನ್ನು ದೃಷ್ಟಿಸಿ ನೋಡಿ - ಇದು ಮನುಷ್ಯರಿಗೆ ಅಸಾಧ್ಯ; ದೇವರಿಗೆ ಅಸಾಧ್ಯವಲ್ಲ; ದೇವರಿಗೆ ಎಲ್ಲವು ಸಾಧ್ಯವೇ ಅಂದನು.
ಆಗ ಪೇತ್ರನು ಆತನನ್ನು - ಇಗೋ, ನಾವು ಎಲ್ಲಾ ಬಿಟ್ಟುಬಿಟ್ಟು ನಿನ್ನನ್ನು ಹಿಂಬಾಲಿಸಿದೆವು; ನಮಗೆ ಏನು ದೊರಕುವದು ಎಂದು ಕೇಳಲು ಯೇಸು ಅವರಿಗೆ - ನಿಮಗೆ ಸತ್ಯವಾಗಿ ಹೇಳುತ್ತೇನೆ, ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವಾಗ ನನ್ನನ್ನು ಹಿಂಬಾಲಿಸಿರುವ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ. ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ದೇವರ ರಾಜ್ಯದ ನಿವಿುತ್ತ ಮನೆಯನ್ನಾಗಲಿ ಹೆಂಡತಿಯನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ತಂದೆತಾಯಿಗಳನ್ನಾಗಲಿ ಮಕ್ಕಳನ್ನಾಗಲಿ ಬಿಟ್ಟುಬಿಟ್ಟಿರುವನೋ ಅವನಿಗೆ ಈಗಿನ ಕಾಲದಲ್ಲಿ ಮನೆ ಅಣ್ಣ ತಮ್ಮ ಅಕ್ಕ ತಂಗಿ ತಾಯಿ ಮಕ್ಕಳು ಭೂವಿು ಇವೆಲ್ಲವೂ ಹಿಂಸೆಗಳು ಸಹಿತವಾಗಿ ನೂರರಷ್ಟು ಸಿಕ್ಕೇ ಸಿಕ್ಕುತ್ತವೆ; ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವದು. ಆದರೆ ಬಹುಮಂದಿ ಮೊದಲಿನವರು ಕಡೆಯವರಾಗುವರು, ಕಡೆಯವರು ಮೊದಲಿನವರಾಗುವರು ಎಂದು ಹೇಳಿದನು.
ಅದು ಹೇಗಂದರೆ - ಪರಲೋಕರಾಜ್ಯವು ಒಬ್ಬ ಮನೆಯ ಯಜಮಾನನಿಗೆ ಹೋಲಿಕೆಯಾಗಿದೆ. ಅವನು ತನ್ನ ದ್ರಾಕ್ಷೇತೋಟಕ್ಕೆ ಕೂಲೀ ಆಳುಗಳನ್ನು ಕರೆಯುವದಕ್ಕೆ ಬೆಳಿಗ್ಗೆ ಹೊರಟನು. ಆಳಿಗೆ ದಿನಕ್ಕೆ ಒಂದು ಪಾವಲಿಯಂತೆ ಕೂಲಿ ಗೊತ್ತುಮಾಡಿ ಅವರನ್ನು ದ್ರಾಕ್ಷೇತೋಟಕ್ಕೆ ಕಳುಹಿಸಿದನು. ತರುವಾಯ ಹೆಚ್ಚುಕಡಿಮೆ ಒಂಭತ್ತು ಗಂಟೆಗೆ ಹೋಗಿ ಪೇಟೆಯಲ್ಲಿ ಸುಮ್ಮನೆ ನಿಂತಿದ್ದ ಇನ್ನು ಕೆಲವರನ್ನು ಕಂಡು - ನೀವು ಸಹ ನನ್ನ ದ್ರಾಕ್ಷೇತೋಟಕ್ಕೆ ಹೋಗಿರಿ; ನಿಮಗೆ ಸರಿಯಾದ ಕೂಲಿಯನ್ನು ಕೊಡುತ್ತೇನೆ ಅನ್ನಲು ಅವರು ತೋಟಕ್ಕೆ ಹೋದರು. ಅವನು ತಿರಿಗಿ ಹೆಚ್ಚುಕಡಿಮೆ ಹನ್ನೆರಡು ಗಂಟೆಗೆ ಮತ್ತು ಮೂರು ಗಂಟೆಗೆ ಹೋಗಿ ಅದೇ ಪ್ರಕಾರ ಮಾಡಿದನು. ತಿರಿಗಿ ಹೆಚ್ಚುಕಡಿಮೆ ಸಾಯಂಕಾಲ ಐದು ಗಂಟೆಗೆ ಹೋಗಿ ಬೇರೆ ಕೆಲವರು ನಿಂತಿರುವದನ್ನು ಕಂಡು ಅವರನ್ನು - ದಿನವೆಲ್ಲಾ ಇಲ್ಲಿ ಯಾಕೆ ಸುಮ್ಮನೆ ನಿಂತಿದ್ದೀರಿ ಎಂದು ಕೇಳಲು ಅವರು - ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ ಅಂದಾಗ ಅವನು - ನೀವು ಸಹ ನನ್ನ ದ್ರಾಕ್ಷೇತೋಟಕ್ಕೆ ಹೋಗಿರಿ ಅಂದನು. ಸಂಜೇಹೊತ್ತಿಗೆ ದ್ರಾಕ್ಷೇತೋಟದ ಯಜಮಾನನು ತನ್ನ ಪಾರುಪತ್ಯಗಾರನಿಗೆ - ಆ ಆಳುಗಳನ್ನು ಕರೆದು ಕಡೆಗೆ ಬಂದವರನ್ನು ಮೊದಲು ಮಾಡಿಕೊಂಡು ಮೊದಲು ಬಂದವರ ತನಕ ಅವರಿಗೆ ಕೂಲಿಕೊಡು ಎಂದು ಹೇಳಿದನು. ಆಗ ಸಾಯಂಕಾಲ ಐದು ಗಂಟೆಗೆ ಬಂದವರಿಗೆ ಒಂದೊಂದು ಪಾವಲಿ ಸಿಕ್ಕಿತು. ತರುವಾಯ ಮೊದಲಿನವರು ಬಂದು ತಮಗೆ ಹೆಚ್ಚು ದೊರೆಯುವದೆಂದು ನೆನಸಿದರು; ಆದರೆ ಇವರಿಗೆ ಸಹ ಒಂದೊಂದು ಪಾವಲಿಯೇ ಸಿಕ್ಕಿತು. ಅದನ್ನು ತೆಗೆದುಕೊಂಡು ಮನೆಯ ಯಜಮಾನನ ಮೇಲೆ ಗುಣುಗುಟ್ಟಿ - ಕಡೆಗೆ ಬಂದ ಇವರು ಒಂದು ತಾಸು ಹೊತ್ತು ಮಾತ್ರ ಕೆಲಸ ಮಾಡಿದ್ದಾರೆ; ನಾವು ದಿನವೆಲ್ಲಾ ಬಿಸಲಿನಲ್ಲಿ ಕೆಲಸ ಮಾಡಿ ಕಷ್ಟಪಟ್ಟಿದ್ದೇವೆ; ಇವರನ್ನು ನಮಗೆ ಸಮಮಾಡಿದ್ದೀಯೆ ಅಂದರು. ಅದಕ್ಕೆ ಅವನು ಅವರಲ್ಲಿ ಒಬ್ಬನಿಗೆ - ಏನಪ್ಪಾ, ನಾನು ನಿನಗೆ ಅನ್ಯಾಯ ಮಾಡಲಿಲ್ಲ; ನೀನು ನನ್ನ ಸಂಗಡ ಒಂದು ಪಾವಲಿಗೆ ಒಡಂಬಟ್ಟಿಯಲ್ಲಾ; ನಿನ್ನ ಕೂಲಿ ತಕ್ಕೊಂಡು ಹೋಗು; ನಿನಗೆ ಕೊಟ್ಟಂತೆ ಕಡೆಗೆ ಬಂದ ಇವನಿಗೂ ಕೊಡುವದಕ್ಕೆ ನನಗೆ ಮನಸ್ಸುಂಟು. ನನ್ನ ಬದುಕನ್ನು ನಾನು ಬೇಕಾದ ಹಾಗೆ ಮಾಡಬಹುದಲ್ಲವೋ? ನಾನು ಒಳ್ಳೆಯವನಾಗಿರುವದು ನಿನ್ನ ಕಣ್ಣನ್ನು ಒತ್ತುತ್ತದೋ ಎಂದು ಹೇಳಿದನು. ಈ ಪ್ರಕಾರ ಕಡೆಯವರು ಮೊದಲಿನವರಾಗುವರು, ಮೊದಲಿನವರು ಕಡೆಯವರಾಗುವರು ಎಂದು ಹೇಳಿದನು.
ಅಧ್ಯಾಯ 42
ಅವರು ಯೆರೂಸಲೇವಿುನ ದಾರಿಯನ್ನು ಹಿಡಿದು ಹೋಗುತ್ತಿರುವಾಗ ಯೇಸು ಅವರ ಮುಂದೆ ಮುಂದೆ ಹೋಗುತ್ತಿದ್ದನು. ಅವರು [ನೋಡಿ] ಬೆರಗಾದರು; ಆತನ ಹಿಂದೆ ಬರುವವರು ಭಯಪಡುವವರಾದರು. ಯೇಸು ಹನ್ನೆರಡು ಮಂದಿ ಶಿಷ್ಯರನ್ನು ಒತ್ತಟ್ಟಿಗೆ ಕರೆದುಕೊಂಡು ದಾರಿಯಲ್ಲಿ ಅವರಿಗೆ –ನೋಡಿರಿ, ನಾವು ಯೆರೂಸಲೇವಿುಗೆ ಹೋಗುತ್ತಾ ಇದ್ದೇವೆ; ಮತ್ತು ಮನುಷ್ಯಕುಮಾರನ ವಿಷಯದಲ್ಲಿ ಪ್ರವಾದಿಗಳು ಬರೆದದ್ದೆಲ್ಲಾ ಅವನಲ್ಲಿ ನೆರವೇರುವದು.ಮತ್ತು ಮನುಷ್ಯಕುಮಾರನನ್ನು ಮಹಾಯಾಜಕರ ಮತ್ತು ಶಾಸ್ತ್ರಿಗಳ ಕೈಗೆ ಹಿಡುಕೊಡುವರು. ಅವರು ಅವನಿಗೆ ಮರಣದಂಡನೆಯನ್ನು ವಿಧಿಸಿ ಅವನನ್ನು ಅನ್ಯರ ಕೈಗೆ ಒಪ್ಪಿಸುವರು. ಇವರು ಅವನನ್ನು ಅಪಹಾಸ್ಯಮಾಡುವರು, ಅವನ ಮೇಲೆ ಉಗುಳುವರು, ಅವನನ್ನು ಕೊರಡೆಗಳಿಂದ ಹೊಡೆಯುವರು, ಕೊಂದುಹಾಕುವರು. ಅವನು ಮೂರು ದಿನದ ಮೇಲೆ ಜೀವಿತನಾಗಿ ಎದ್ದು ಬರುವನು ಎಂದು ಹೇಳಿದನು. ಅವರು ಈ ಸಂಗತಿಗಳಲ್ಲಿ ಒಂದನ್ನಾದರೂ ಗ್ರಹಿಸಲಿಲ್ಲ, ಈ ಮಾತುಗಳು ಅವರಿಗೆ ಮರೆಯಾಗಿದ್ದವು, ಅವುಗಳ ಅರ್ಥ ಅವರಿಗೆ ಗೊತ್ತಾಗಲಿಲ್ಲ.
ಆಗ ಜೆಬೆದಾಯನ ಮಕ್ಕಳಾದ ಯಾಕೋಬ ಯೋಹಾನರು ಆತನ ಬಳಿಗೆ ಬಂದು ಆತನಿಗೆ - ಗುರುವೇ, ನಾವು ಒಂದನ್ನು ಕೇಳಿಕೊಳ್ಳುತ್ತೇವೆ; ಅದನ್ನು ನಮಗೋಸ್ಕರ ನಡಿಸಿಕೊಡಬೇಕೆಂದು ಹೇಳಿದರು. ಆತನು ಅವರನ್ನು - ನಿಮಗೇನು ನಡಿಸಿಕೊಡಬೇಕು ಎಂದು ಕೇಳಲು ಅವರು - ನಿನಗೆ ಮಹಾಪದವಿ ಬಂದಾಗ ನಮ್ಮಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲೂ ಮತ್ತೊಬ್ಬನು ಎಡಗಡೆಯಲ್ಲೂ ಕೂತುಕೊಳ್ಳುವಂತೆ ನಮಗೆ ಅನುಗ್ರಹಮಾಡಬೇಕು ಅಂದರು. ಆದರೆ ಯೇಸು ಅವರನ್ನು - ನೀವು ಬೇಡಿಕೊಂಡದ್ದು ಏನೆಂದು ನಿಮಗೆ ತಿಳಿಯದು; ನಾನು ಕುಡಿಯುವ ಪಾತ್ರೆಯಲ್ಲಿ ಕುಡಿಯುವದು ನಿಮ್ಮಿಂದಾದೀತೇ? ನನಗಾಗುವ ದೀಕ್ಷಾಸ್ನಾನವನ್ನು ಹೊಂದುವದು ನಿಮ್ಮಿಂದಾದೀತೇ ಎಂದು ಕೇಳಲು ಅವರು - ಆಗುವದು ಅಂದರು. ಆಗ ಯೇಸು ಅವರಿಗೆ - ನಾನು ಕುಡಿಯುವ ಪಾತ್ರೆಯಲ್ಲಿ ಕುಡಿಯುವಿರಿ; ನನಗಾಗುವ ಸ್ನಾನವು ನಿಮಗಾಗುವದು; ಆದರೆ ನನ್ನ ಬಲಗಡೆಯಲ್ಲಾದರೂ ಎಡಗಡೆಯಲ್ಲಾದರೂ ಕೂತುಕೊಳ್ಳುವಂತೆ ಅನುಗ್ರಹಮಾಡುವದು ನನ್ನದಲ್ಲ; ಅದು ಯಾರಿಗೆಂದು ಸಿದ್ಧಪಡಿಸಿದೆಯೋ ಅವರಿಗೇ ಸಿಕ್ಕುವದು ಎಂದು ಹೇಳಿದನು. ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿ ಯಾಕೋಬ ಯೋಹಾನರ ಮೇಲೆ ಸಿಟ್ಟಿಗೆದ್ದರು. ಯೇಸು ಅವರನ್ನು ಹತ್ತಿರಕ್ಕೆ ಕರೆದು ಅವರಿಗೆ - ಜನಗಳನ್ನಾಳುವವರೆನಿಸಿಕೊಳ್ಳುವವರು ಅವರ ಮೇಲೆ ಅಹಂಕಾರದಿಂದ ದೊರೆತನಮಾಡುತ್ತಾರೆ, ಮತ್ತು ಅವರಲ್ಲಿ ದೊಡ್ಡವರು ಬಲಾತ್ಕಾರದಿಂದ ಅಧಿಕಾರ ನಡಿಸುತ್ತಾರೆ ಎಂದು ನೀವು ಬಲ್ಲಿರಷ್ಟೆ; ಆದರೆ ನಿಮ್ಮಲ್ಲಿ ಹಾಗಿರಬಾರದು; ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು; ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ಎಲ್ಲರ ಆಳಾಗಿರಬೇಕು. ಮನುಷ್ಯಕುಮಾರನು ಸಹ ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು ಎಂದು ಹೇಳಿದನು. ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು ಎಂದು ಹೇಳಿದನು.
ಆಮೇಲೆ ಅವರು ಯೆರಿಕೋವಿಗೆ ಬಂದರು. ಆತನೂ ಆತನ ಶಿಷ್ಯರೂ ಬಹು ಜನರ ಗುಂಪೂ ಆ ಊರಿನಿಂದ ಹೊರಟು ಹೋಗುತ್ತಿರುವಾಗ ತಿಮಾಯನ ಮಗನಾದ ಬಾರ್ತಿಮಾಯನು ದಾರಿಯ ಮಗ್ಗುಲಲ್ಲಿ ಕೂತಿದ್ದನು.ಗುಂಪಾಗಿ ಹೋಗುತ್ತಿದ್ದ ಜನರ ಶಬ್ದವನ್ನು ಕೇಳಿ ಇದೇನು ಎಂದು ವಿಚಾರಿಸಿದನು. ಅವರು ಅವನಿಗೆ - ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂದು ತಿಳಿಸಿದಾಗಅವನು ಕುರುಡ ಭಿಕ್ಷಗಾರನು. ಈ ಮಾರ್ಗವಾಗಿ ಹೋಗುವವನು ನಜರೇತಿನ ಯೇಸುವೆಂದು ಅವನು ಕೇಳಿ - ದಾವೀದನ ಕುಮಾರನೇ, ಯೇಸುವೇ, ನನ್ನನ್ನು ಕರುಣಿಸು ಎಂದು ಕೂಗಿಕೊಳ್ಳುವದಕ್ಕೆ ಪ್ರಾರಂಭಿಸಿದನು. ಅನೇಕರು - ಸುಮ್ಮನಿರು ಎಂದು ಅವನನ್ನು ಗದರಿಸಲು ಅವನು - ದಾವೀದನ ಕುಮಾರನೇ, ನನ್ನನ್ನು ಕರುಣಿಸು ಎಂದು ಮತ್ತಷ್ಟು ಕೂಗಿಕೊಂಡನು. ಆಗ ಯೇಸು ನಿಂತು - ಅವನನ್ನು ಕರೆಯಿರಿ ಅನ್ನಲು ಅವರು ಆ ಕುರುಡನನ್ನು ಕರೆದು - ಧೈರ್ಯವಿರಲಿ, ಏಳು, ನಿನ್ನನ್ನು ಕರೆಯುತ್ತಾನೆ ಅಂದರು. ಅವನು ತನ್ನ ಹೊದಿಕೆಯನ್ನು ತೆಗೆದುಹಾಕಿ ತಟ್ಟನೆ ಎದ್ದು ಯೇಸುವಿನ ಬಳಿಗೆ ಬಂದನು. ಯೇಸು ಅವನನ್ನು - ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ ಎಂದು ಕೇಳಲು ಆ ಕುರುಡನು - ನನಗೆ ಕಣ್ಣು ಬರುವಂತೆ ಮಾಡಬೇಕು, ಗುರುವೇ, ಅಂದನು.ಯೇಸು ಅವನಿಗೆ - ನಿನಗೆ ಕಣ್ಣು ಬರಲಿ; ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿ ಅದೆ ಎಂದು ಹೇಳಿದನು. ತಕ್ಷಣವೇ ಅವನಿಗೆ ಕಣ್ಣುಬಂದವು; ಅವನು ದೇವರನ್ನು ಕೊಂಡಾಡುತ್ತಾ ಆತನ ಹಿಂದೆ ಹೋದನು. ಜನರೆಲ್ಲರು ನಡೆದ ಸಂಗತಿಯನ್ನು ನೋಡಿ ದೇವರನ್ನು ಸ್ತುತಿಸಿದರು.
ಆತನು ಯೆರಿಕೋ ಊರನ್ನು ಹೊಕ್ಕು ದಾಟಿಹೋಗುತ್ತಿದ್ದನು. ಅಲ್ಲಿ ಜಕ್ಕಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು; ಅವನು ಸುಂಕದ ಗುತ್ತಿಗೆದಾರನು ಮತ್ತು ಐಶ್ವರ್ಯವಂತನು. ಅವನು ಯೇಸು ಎಂಥವನೆಂದು ನೋಡಲಪೇಕ್ಷಿಸಿದರೂ ತಾನು ಗಿಡ್ಡನಾಗಿದ್ದದರಿಂದ ಜನರ ಗುಂಪಿನ ನಿವಿುತ್ತ ನೋಡಲಾರದೆ ಹೋದನು. ಆದಕಾರಣ ಆತನನ್ನು ನೋಡುವದಕ್ಕಾಗಿ ಮುಂದೆ ಓಡಿಹೋಗಿ ಆತನು ಬರುತ್ತಿರುವ ಮಾರ್ಗದಲ್ಲಿದ್ದ ಆಲದ ಮರವನ್ನು ಹತ್ತಿದನು. ಯೇಸು ಅಲ್ಲಿಗೆ ಬಂದು ಮೇಲಕ್ಕೆ ನೋಡಿ - ಜಕ್ಕಾಯನೇ, ತಟ್ಟನೆ ಇಳಿದು ಬಾ, ನಾನು ಈಹೊತ್ತು ನಿನ್ನ ಮನೆಯಲ್ಲಿ ಇಳುಕೊಳ್ಳಬೇಕು ಎಂದು ಅವನಿಗೆ ಹೇಳಲು ಅವನು ತಟ್ಟನೆ ಇಳಿದು ಬಂದು ಆತನನ್ನು ಸಂತೋಷದಿಂದ ಸೇರಿಸಿಕೊಂಡನು. ಇದನ್ನು ನೋಡಿದವರೆಲ್ಲರು - ಈತನು ಪಾಪಿಯಾಗಿರುವವನ ಬಳಿಯಲ್ಲಿ ಇಳುಕೊಳ್ಳುವದಕ್ಕೆ ಹೋಗಿದ್ದಾನೆ ಎಂದು ಗುಣುಗುಟ್ಟಿದರು. ಆದರೆ ಜಕ್ಕಾಯನು ನಿಂತುಕೊಂಡು ಸ್ವಾವಿುಗೆ - ಸ್ವಾಮೀ, ನೋಡು, ನನ್ನ ಆಸ್ತಿಯಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ; ಮತ್ತು ನಾನು ಅನ್ಯಾಯವಾಗಿ ಯಾರಿಂದ ಏನಾದರೂ ಎಳಕೊಂಡದ್ದೇಯಾದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ ಎಂದು ಹೇಳಿದನು. ಇದನ್ನು ಕೇಳಿ ಯೇಸು - ಈಹೊತ್ತು ಈ ಮನೆಗೆ ರಕ್ಷಣೆಯಾಯಿತು; ಇವನು ಸಹ ಅಬ್ರಹಾಮನ ವಂಶಿಕನಲ್ಲವೇ. ಮನುಷ್ಯಕುಮಾರನು ಕೆಟ್ಟುಹೋಗಿರುವದನ್ನು ಹುಡುಕಿ ರಕ್ಷಿಸುವದಕ್ಕೆ ಬಂದನು ಎಂದು ಹೇಳಿದನು.
ಅವರು ಈ ಮಾತುಗಳನ್ನು ಕೇಳುತ್ತಿರಲಾಗಿ ಯೇಸು ತಾನು ಯೆರೂಸಲೇವಿುಗೆ ಸಮೀಪವಾಗಿದ್ದದರಿಂದಲೂ ದೇವರ ರಾಜ್ಯವು ಕೂಡಲೆ ಪ್ರತ್ಯಕ್ಷವಾಗುವ ಹಾಗಿದೆ ಎಂದು ಅವರು ಭಾವಿಸಿದ್ದದರಿಂದಲೂ ಇನ್ನೂ ಒಂದು ಸಾಮ್ಯವನ್ನು ಹೇಳಿದನು. ಅದೇನಂದರೆ - ಶ್ರೀಮಂತನಾದ ಒಬ್ಬಾನೊಬ್ಬ ಮನುಷ್ಯನು ತಾನು ರಾಜ್ಯಾಧಿಕಾರವನ್ನು ಪಡೆದುಕೊಂಡು ಹಿಂತಿರುಗಿ ಬರಬೇಕೆಂದು ದೂರದೇಶಕ್ಕೆ ಹೊರಟನು. ಹೊರಡುವಾಗ ತನ್ನ ಆಳುಗಳಲ್ಲಿ ಹತ್ತು ಮಂದಿಯನ್ನು ಕರೆದು ಅವರಿಗೆ ಹತ್ತು ಮೊಹರಿಗಳನ್ನು ಕೊಟ್ಟು - ನಾನು ಬರುವ ತನಕ ವ್ಯಾಪಾರಮಾಡಿಕೊಂಡಿರ್ರಿ ಎಂದು ಹೇಳಿಹೋದನು. ಆದರೆ ಅವನ ಪಟ್ಟಣದ ನಿವಾಸಿಗಳು ಅವನನ್ನು ದ್ವೇಷಿಸಿ ಅವನ ಹಿಂದೆ ರಾಯಭಾರಿಗಳನ್ನು ಕಳುಹಿಸಿ ಇವನು ನಮ್ಮ ಮೇಲೆ ದೊರೆತನಮಾಡುವದು ನಮಗೆ ಇಷ್ಟವಿಲ್ಲ ಎಂದು ಹೇಳಿಸಿದರು. ಆಮೇಲೆ ಅವನು ರಾಜ್ಯಾಧಿಕಾರವನ್ನು ಪಡಕೊಂಡು ಹಿಂತಿರುಗಿ ಬಂದು ತಾನು ಹಣವನ್ನು ಕೊಟ್ಟಿದ್ದ ಆಳುಗಳು ವ್ಯಾಪಾರದಿಂದ ಎಷ್ಟೆಷ್ಟು ಲಾಭ ಸಂಪಾದಿಸಿಕೊಂಡಿದ್ದಾರೆಂದು ತಿಳುಕೊಳ್ಳುವದಕ್ಕಾಗಿ ಅವರನ್ನು ತನ್ನ ಬಳಿಗೆ ಕರಿಸಿದನು. ಮೊದಲನೆಯವನು ಆತನ ಮುಂದೆ ಬಂದು - ದೊರೆಯೇ, ನೀನು ಕೊಟ್ಟ ಮೊಹರಿಯಿಂದ ಹತ್ತು ಮೊಹರಿಗಳು ಸಂಪಾದನೆಯಾದವು ಅನ್ನಲು ಅವನು ಅವನಿಗೆ - ಭಲಾ! ನೀನು ಒಳ್ಳೇ ಆಳು; ನೀನು ಬಹು ಸ್ವಲ್ಪವಾದದ್ದರಲ್ಲಿ ನಂಬಿಕೆಯುಳ್ಳವನಾಗಿದ್ದದರಿಂದ ಹತ್ತು ಗ್ರಾಮಗಳ ಮೇಲೆ ಅಧಿಕಾರಿಯಾಗಿರು ಎಂದು ಹೇಳಿದನು. ಎರಡನೆಯವನು ಬಂದು - ದೊರೆಯೇ, ನೀನು ಕೊಟ್ಟ ಮೊಹರಿಯಿಂದ ಐದು ಮೊಹರಿಗಳು ದೊರಕಿದವು ಅನ್ನಲು ಅವನು ಇವನಿಗೆ - ನೀನು ಸಹ ಐದು ಗ್ರಾಮಗಳ ಮೇಲಿರು ಎಂದು ಹೇಳಿದನು. ಬಳಿಕ ಮತ್ತೊಬ್ಬನು ಬಂದು - ದೊರೆಯೇ, ಇಗೋ ನೀನು ಕೊಟ್ಟ ಮೊಹರಿ.
ನೀನು ಇಡದೆಯಿರುವದನ್ನು ಎತ್ತಿಕೊಂಡು ಹೋಗುವ ಬಿತ್ತದೆಯಿರುವದನ್ನು ಕೊಯ್ಯುವ ಕಠಿನ ಮನುಷ್ಯನು ಎಂದು ನಿನಗೆ ಹೆದರಿಕೊಂಡು ಇದನ್ನು ವಸ್ತ್ರದಲ್ಲಿ ಕಟ್ಟಿ ಇಟ್ಟುಕೊಂಡೆನು ಅಂದನು. ಅದಕ್ಕೆ ಅವನು - ನೀನು ಕೆಟ್ಟ ಆಳು, ನಿನ್ನ ಮಾತಿನ ಮೇಲೆಯೇ ನಿನಗೆ ತೀರ್ಪುಮಾಡುತ್ತೇನೆ. ನಾನು ಇಡದೆಯಿರುವದನ್ನು ಎತ್ತಿಕೊಂಡು ಹೋಗುವ ಬಿತ್ತದೆಯಿರುವದನ್ನು ಕೊಯ್ಯುವ ಕಠಿನ ಮನುಷ್ಯನು ಎಂದು ತಿಳಿದಿಯಾ? ಹಾಗಾದರೆ ನೀನು ನನ್ನ ಹಣವನ್ನು ಸಾಹುಕಾರನ ಕೈಯಲ್ಲಿ ಯಾಕೆ ಕೊಡಲಿಲ್ಲ? ಆಮೇಲೆ ನಾನು ಬಂದು ಅದನ್ನು ಬಡ್ಡಿ ಸಹಿತ ತೆಗೆದುಕೊಳ್ಳುತ್ತಿದ್ದೆನು ಎಂದು ಹೇಳಿ ಹತ್ತಿರ ನಿಂತಿದ್ದವರಿಗೆ - ಆ ಮೊಹರಿಯನ್ನು ಇವನಿಂದ ತೆಗೆದುಕೊಂಡು ಹತ್ತು ಮೊಹರಿಗಳುಳ್ಳವನಿಗೆ ಕೊಡಿರಿ ಎಂದು ಹೇಳಿದನು. ಅವರು - ದೊರೆಯೇ, ಹತ್ತು ಮೊಹರಿಗಳು ಅವನಲ್ಲಿ ಅವೆಯಲ್ಲಾ ಎಂದು ಅವನಿಗೆ ಹೇಳಿದರು. ಅದಕ್ಕವನು - ಇದ್ದವರಿಗೆಲ್ಲಾ ಕೊಡಲ್ಪಡುವದು, ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವದು ಎಂದು ನಾನು ನಿಮಗೆ ಹೇಳುತ್ತೇನೆ; ಮತ್ತು ತಮ್ಮ ಮೇಲೆ ನಾನು ದೊರೆತನ ಮಾಡುವದು ಇಷ್ಟವಿಲ್ಲವೆಂದು ಹೇಳಿದ ಆ ನನ್ನ ವೈರಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಬೇಕು ಅಂದನು.ಆತನು ಈ ಮಾತುಗಳನ್ನು ಹೇಳಿದ ಮೇಲೆ ಗಟ್ಟಾ ಹತ್ತಿ ಯೆರೂಸಲೇವಿುಗೆ ಮುಂದೆ ಮುಂದೆ ಹೋದನು.
ಅಧ್ಯಾಯ 43
ಬೇಥಾನ್ಯದ ಲಾಜರನೆಂಬವನೊಬ್ಬನು ಅಸ್ವಸ್ಥನಾಗಿದ್ದನು. ಅದು ಮಾರ್ಥಳು ಮರಿಯಳು ಎಂಬ ಅಕ್ಕತಂಗಿಯರು ಇದ್ದ ಊರು. ಈ ಮರಿಯಳು ಯೇಸುಸ್ವಾವಿುಗೆ ತೈಲವನ್ನು ಹಚ್ಚಿ ಆತನ ಪಾದಗಳನ್ನು ತನ್ನ ತಲೇಕೂದಲಿನಿಂದ ಒರಸಿದವಳು. ಈಕೆಯ ತಮ್ಮನಾದ ಲಾಜರನೇ ಅಸ್ವಸ್ಥನಾಗಿದ್ದನು. ಹೀಗಿರಲಾಗಿ ಅವನ ಅಕ್ಕಂದಿರು - ಸ್ವಾಮೀ, ನಿನ್ನ ಪ್ರಿಯ ವಿುತ್ರನು ಅಸ್ವಸ್ಥನಾಗಿದ್ದಾನೆ ಎಂಬದಾಗಿ ಯೇಸುವಿನ ಬಳಿಗೆ ಹೇಳಿಕಳುಹಿಸಿದರು. ಯೇಸು ಅದನ್ನು ಕೇಳಿ - ಈ ರೋಗವು ಮರಣಕ್ಕಾಗಿ ಬಂದದ್ದಲ್ಲ; ಇದರಿಂದ ದೇವಕುಮಾರನಿಗೆ ಮಹಿಮೆ ಉಂಟಾಗುವಂತೆ ದೇವರ ಮಹಿಮೆಗೋಸ್ಕರ ಬಂದದ್ದು ಅಂದನು. ಮಾರ್ಥಳಲ್ಲಿಯೂ ಆಕೆಯ ತಂಗಿಯಲ್ಲಿಯೂ ಲಾಜರನಲ್ಲಿಯೂ ಯೇಸುವಿಗೆ ಪ್ರೀತಿ ಇತ್ತು. ಆದರೂ ಲಾಜರನು ಅಸ್ವಸ್ಥನಾಗಿದ್ದಾನೆಂದು ಆತನು ಕೇಳಿದ ಮೇಲೆ ಎರಡು ದಿನ ತಾನಿದ್ದ ಸ್ಥಳದಲ್ಲೇ ನಿಂತನು. ಬಳಿಕ ಶಿಷ್ಯರಿಗೆ - ತಿರಿಗಿ ಯೂದಾಯಕ್ಕೆ ಹೋಗೋಣ ಎಂದು ಹೇಳಿದನು. ಶಿಷ್ಯರು - ಗುರುವೇ, ಯೆಹೂದ್ಯರು ಆಗಲೇ ನಿನ್ನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದರು; ತಿರಿಗಿ ಅಲ್ಲಿಗೇ ಹೋಗುತ್ತೀಯಾ? ಅನ್ನಲು ಯೇಸು - ಹಗಲಿಗೆ ಹನ್ನೆರಡು ತಾಸು ಉಂಟಲ್ಲವೇ. ಒಬ್ಬನು ಹಗಲಲ್ಲಿ ತಿರುಗಾಡಿದರೆ ಈ ಲೋಕದ ಬೆಳಕು ಕಾಣಿಸುವದರಿಂದ ಆತನು ಎಡವುವದಿಲ್ಲ; ರಾತ್ರಿಯಲ್ಲಿ ತಿರುಗಾಡಿದರೆ ಅವನಿಗೆ ಬೆಳಕಿಲ್ಲದ್ದರಿಂದ ಎಡವುವನು ಎಂದು ಉತ್ತರಕೊಟ್ಟನು. ಈ ಮಾತುಗಳನ್ನು ಹೇಳಿದ ಮೇಲೆ ಅವರಿಗೆ - ನಮ್ಮ ವಿುತ್ರನಾದ ಲಾಜರನು ನಿದ್ರೆಮಾಡುತ್ತಾನೆ; ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವದಕ್ಕಾಗಿ ಹೋಗುತ್ತೇನೆ ಎಂದು ಹೇಳಿದನು. ಅದಕ್ಕೆ ಶಿಷ್ಯರು - ಸ್ವಾಮೀ, ಅವನು ನಿದ್ರೆಮಾಡುತ್ತಿದ್ದರೆ ಸ್ವಸ್ಥನಾಗುವನು ಅಂದರು. ಯೇಸು ಅವನ ಮರಣವನ್ನು ಸೂಚಿಸಿ ಅದನ್ನು ಹೇಳಿದ್ದನು; ಆದರೆ ಅವರು ನಿದ್ರೆಯ ವಿಶ್ರಾಂತಿಯನ್ನು ಕುರಿತು ಹೇಳುತ್ತಾನೆಂದು ನೆನಸಿದರು. ಆಗ ಯೇಸು ಸ್ಪಷ್ಟವಾಗಿ ಅವರಿಗೆ - ಲಾಜರನು ಸತ್ತುಹೋದನು; ಮತ್ತು ನಾನು ಅಲ್ಲಿ ಇಲ್ಲದೆ ಇದ್ದದ್ದಕ್ಕೆ ನಿಮ್ಮ ನಿವಿುತ್ತವಾಗಿ ಸಂತೋಷಪಡುತ್ತೇನೆ, ಯಾಕಂದರೆ ಅದರಿಂದ ನೀವು ನಂಬುವದಕ್ಕೆ ಮಾರ್ಗವಾಯಿತು; ಆದರೆ ಅವನ ಬಳಿಗೆ ಹೋಗೋಣ ಎಂದು ಹೇಳಿದನು. ಆಗ ದಿದುಮನೆಂಬ ತೋಮನು ಜೊತೇ ಶಿಷ್ಯರಿಗೆ - ನಾವು ಸಹ ಹೋಗಿ ಆತನೊಡನೆ ಸಾಯೋಣ ಎಂದು ಹೇಳಿದನು.
ಯೇಸು ಬಂದಾಗ ಲಾಜರನನ್ನು ಸಮಾಧಿಯಲ್ಲಿಟ್ಟು ನಾಲ್ಕು ದಿವಸವಾಯಿತೆಂದು ಆತನಿಗೆ ತಿಳಿದುಬಂತು. ಬೇಥಾನ್ಯವು ಯೆರೂಸಲೇವಿುಗೆ ಸಮೀಪವಾಗಿತ್ತು; ಇದಕ್ಕೂ ಅದಕ್ಕೂ ಹೆಚ್ಚುಕಡಿಮೆ ಒಂದು ಹರದಾರಿ ಅಂತರ. ಆದದರಿಂದ ಯೆಹೂದ್ಯರಲ್ಲಿ ಅನೇಕರು ಮಾರ್ಥಳ ಮತ್ತು ಮರಿಯಳ ಬಳಿಗೆ ಅವರನ್ನು ತಮ್ಮನ ವಿಷಯದಲ್ಲಿ ಸಂತೈಸಬೇಕೆಂದು ಬಂದಿದ್ದರು. ಹೀಗಿರುವಲ್ಲಿ ಮಾರ್ಥಳು ಯೇಸು ಬರುತ್ತಾನೆಂದು ಕೇಳಿ ಆತನನ್ನು ಎದುರುಗೊಳ್ಳುವದಕ್ಕೆ ಹೋದಳು; ಆದರೆ ಮರಿಯಳು ಮನೆಯಲ್ಲೇ ಕೂತುಕೊಂಡಿದ್ದಳು. ಮತ್ತು ಮಾರ್ಥಳು ಯೇಸುವಿಗೆ - ಸ್ವಾಮೀ, ನೀನು ಇಲ್ಲಿ ಇರುತ್ತಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ; ಈಗಲಾದರೂ ದೇವರನ್ನು ಏನು ಬೇಡಿಕೊಳ್ಳುತ್ತೀಯೋ ಅದನ್ನು ದೇವರು ನಿನಗೆ ಅನುಗ್ರಹಿಸುವನೆಂದು ಬಲ್ಲೆನು ಎಂದು ಹೇಳಿದಳು. ಯೇಸು ಆಕೆಗೆ - ನಿನ್ನ ತಮ್ಮನು ಎದ್ದುಬರುವನೆಂದು ಹೇಳಿದನು. ಮಾರ್ಥಳು - ಸತ್ತವರಿಗೆ ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದು ಬರುವನೆಂದು ನಾನು ಬಲ್ಲೆನು ಅಂದಳು. ಯೇಸು ಆಕೆಗೆ - ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು; ಮತ್ತು ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವದಿಲ್ಲ; ಇದನ್ನು ನಂಬುತ್ತೀಯಾ? ಎಂದು ಹೇಳಿದನು. ಆಕೆ - ಹೌದು, ಸ್ವಾಮೀ, ಲೋಕಕ್ಕೆ ಬರಬೇಕಾದ ದೇವಕುಮಾರನಾದ ಕ್ರಿಸ್ತನು ನೀನೇ ಎಂದು ನಂಬಿದ್ದೇನೆ ಅಂದಳು.ಇದನ್ನು ಹೇಳಿ ಆಕೆ ಹೋಗಿ ತನ್ನ ತಂಗಿಯಾದ ಮರಿಯಳನ್ನು ಗುಪ್ತವಾಗಿ ಕರೆದು - ಗುರುವು ಬಂದಿದ್ದಾನೆ, ನಿನ್ನನ್ನು ಕರೆಯುತ್ತಾನೆ ಅಂದಳು. ಮರಿಯಳು ಇದನ್ನು ಕೇಳುತ್ತಲೇ ತಟ್ಟನೆ ಎದ್ದು ಆತನ ಬಳಿಗೆ ಹೋದಳು.
ಯೇಸು ಇನ್ನೂ ಊರೊಳಗೆ ಬಾರದೆ ಮಾರ್ಥಳು ಆತನಿಗೆದುರಾಗಿ ಬಂದ ಸ್ಥಳದಲ್ಲೇ ಇದ್ದನು. ಮರಿಯಳ ಕೂಡ ಮನೆಯಲ್ಲಿ ಇದ್ದುಕೊಂಡು ಆಕೆಯನ್ನು ಸಂತೈಸುತ್ತಿದ್ದ ಯೆಹೂದ್ಯರು - ಆಕೆ ತಟ್ಟನೆ ಎದ್ದು ಹೊರಗೆ ಹೋಗುವದನ್ನು ಕಂಡು ಈಕೆ ಅಳುವದಕ್ಕಾಗಿ ಸಮಾಧಿಗೆ ಹೋಗುತ್ತಾಳೆಂದು ನೆನಸಿ ಆಕೆಯ ಹಿಂದೆ ಹೋದರು. ಮರಿಯಳು ಯೇಸು ಇದ್ದಲ್ಲಿಗೆ ಬಂದು ಆತನನ್ನು ಕಂಡು ಆತನ ಪಾದಕ್ಕೆ ಬಿದ್ದು - ಸ್ವಾಮೀ, ನೀನು ಇಲ್ಲಿ ಇರುತ್ತಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ ಅಂದಳು. ಆಕೆ ಗೋಳಾಡುವದನ್ನೂ ಆಕೆಯ ಸಂಗಡ ಬಂದ ಯೆಹೂದ್ಯರು ಗೋಳಾಡುವದನ್ನೂ ಯೇಸು ಕಂಡಾಗ ಆತ್ಮದಲ್ಲಿ ನೊಂದುಕೊಂಡು ತತ್ತರಿಸಿ - ಅವನನ್ನು ಎಲ್ಲಿ ಇಟ್ಟಿದ್ದೀರಿ ಎಂದು ಕೇಳಿದನು. ಅವರು - ಸ್ವಾಮೀ, ಬಂದು ನೋಡು ಅಂದರು. ಯೇಸು ಕಣ್ಣೀರು ಬಿಟ್ಟನು. ಯೆಹೂದ್ಯರು ನೋಡಿ - ಆಹಾ, ಈತನು ಅವನ ಮೇಲೆ ಎಷ್ಟೋ ಮಮತೆ ಇಟ್ಟಿದ್ದನು ಅಂದುಕೊಂಡರು. ಅವರಲ್ಲಿ ಕೆಲವರು - ಈತನು ಆ ಕುರುಡನಿಗೆ ಕಣ್ಣು ಕೊಟ್ಟನಲ್ಲಾ; ಈ ಮನುಷ್ಯನನ್ನು ಸಾಯದ ಹಾಗೆ ಮಾಡಲಾರದೆ ಇದ್ದನೇ? ಅಂದರು. ಯೇಸು ತನ್ನಲ್ಲಿ ತಿರಿಗಿ ನೊಂದುಕೊಳ್ಳುತ್ತಾ ಸಮಾಧಿಯ ಬಳಿಗೆ ಬಂದನು. ಅದು ಗವಿಯಾಗಿತ್ತು, ಅದರ ಬಾಯಿಗೆ ಒಂದು ಕಲ್ಲು ಆನಿಸಿತ್ತು. ಯೇಸು - ಆ ಕಲ್ಲನ್ನು ತೆಗೆದುಹಾಕಿರಿ ಅನ್ನಲು ತೀರಿಹೋದವನ ಅಕ್ಕನಾದ ಮಾರ್ಥಳು - ಸ್ವಾಮೀ, ಅವನು ಸತ್ತು ನಾಲ್ಕು ದಿವಸವಾಯಿತು; ಈಗ ನಾತ ಹುಟ್ಟಿದೆ ಅಂದಳು. ಯೇಸು ಆಕೆಗೆ - ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವಿ ಎಂದು ನಾನು ನಿನಗೆ ಹೇಳಲಿಲ್ಲವೇ ಎಂದು ಉತ್ತರಕೊಟ್ಟನು. ಆಗ ಕಲ್ಲನ್ನು ತೆಗೆದುಹಾಕಿದರು. ಮತ್ತು ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ - ತಂದೆಯೇ, ನೀನು ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕೆ ನಿನ್ನನ್ನು ಕೊಂಡಾಡುತ್ತೇನೆ; ನೀನು ಯಾವಾಗಲೂ ನನ್ನ ಪ್ರಾರ್ಥನೆಯನ್ನು ಕೇಳುವವನಾಗಿದ್ದೀ ಎಂದು ನನಗೆ ಗೊತ್ತೇ ಇದೆ; ಆದರೂ ನೀನೇ ನನ್ನನ್ನು ಕಳುಹಿಸಿಕೊಟ್ಟಿ ಎಂದು ಸುತ್ತಲು ನಿಂತಿರುವ ಜನರು ನಂಬುವಂತೆ ಅವರಿಗೋಸ್ಕರ ಈ ಮಾತುಗಳನ್ನಾಡಿದೆನೆಂದು ಹೇಳಿದನು. ಅದನ್ನು ಹೇಳಿದ ಮೇಲೆ ದೊಡ್ಡ ಶಬ್ದದಿಂದ - ಲಾಜರನೇ, ಹೊರಗೆ ಬಾ ಎಂದು ಕೂಗಿದನು. ಸತ್ತಿದ್ದವನು ಹೊರಗೆ ಬಂದನು; ಅವನ ಕೈಕಾಲುಗಳು ಬಟ್ಟೆಗಳಿಂದ ಕಟ್ಟಿದ್ದವು, ಅವನ ಮುಖವು ಕೈಪಾವುಡದಿಂದ ಸುತ್ತಿತ್ತು. ಯೇಸು ಅವರಿಗೆ - ಅವನನ್ನು ಬಿಚ್ಚಿರಿ, ಹೋಗಲಿ ಎಂದು ಹೇಳಿದನು.ಯೆಹೂದ್ಯರ ಹಿರೀಸಭೆಯವರು ಯೇಸುವನ್ನು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡದ್ದುಮರಿಯಳ ಬಳಿಗೆ ಬಂದ ಯೆಹೂದ್ಯರು ಆತನು ಮಾಡಿದ ಕಾರ್ಯವನ್ನು ನೋಡಿದಾಗ ಅವರಲ್ಲಿ ಅನೇಕರು ಆತನನ್ನು ನಂಬಿದರು;
ಆದರೆ ಕೆಲವರು ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ್ದನ್ನು ಅವರಿಗೆ ತಿಳಿಸಿದರು.ಆಗ ಮಹಾಯಾಜಕರೂ ಫರಿಸಾಯರೂ ಹಿರೀಸಭೆಯನ್ನು ಕೂಡಿಸಿ - ನಾವು ಮಾಡುವದು ಇದೇನು? ಈ ಮನುಷ್ಯನು ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ; ನಾವು ಅವನನ್ನು ಹೀಗೆಯೇ ಬಿಟ್ಟರೆ ಎಲ್ಲರೂ ಅವನನ್ನು ನಂಬಾರು; ಮತ್ತು ರೋಮ್ ರಾಜ್ಯದವರು ಬಂದು ನಮ್ಮ ಸ್ಥಾನವನ್ನೂ ಜನವನ್ನೂ ಸೆಳಕೊಂಡಾರು ಅಂದರು. ಆದರೆ ಅವರಲ್ಲಿ ಕಾಯಫನೆಂಬವನೊಬ್ಬನು ಆ ವರುಷಕ್ಕೆ ಮಹಾಯಾಜಕನಾಗಿದ್ದು ಅವರಿಗೆ - ನಿಮಗೇನೂ ತಿಳಿಯುವದಿಲ್ಲ; ಜನವೆಲ್ಲಾ ನಾಶವಾಗುವದಕ್ಕಿಂತ ಒಬ್ಬ ಮನುಷ್ಯನು ಜನಕ್ಕೋಸ್ಕರ ಸಾಯುವದು ನಿಮಗೆ ಹಿತವೆಂದು ನೀವು ಆಲೋಚಿಸುವದೂ ಇಲ್ಲ ಎಂಬದಾಗಿ ಹೇಳಿದನು. ಇದನ್ನು ಅವನು ತನ್ನಷ್ಟಕ್ಕೆ ತಾನೇ ಹೇಳಲಿಲ್ಲ; ಆದರೆ ತಾನು ಆ ವರುಷದ ಮಹಾಯಾಜಕನಾಗಿದ್ದದರಿಂದ ದೇವಪ್ರೇರಣೆಯಿಂದ ಮಾತಾಡಿ ಯೇಸು ಆ ಜನಕ್ಕೋಸ್ಕರ ಸಾಯುವದಕ್ಕಿದ್ದನೆಂದು ಹೇಳಿದನು. ಯೇಸು ಆ ಜನಕ್ಕೋಸ್ಕರ ಮಾತ್ರವಲ್ಲದೆ ಚದರಿರುವ ದೇವರ ಮಕ್ಕಳನ್ನು ಒಟ್ಟುಗೂಡಿಸುವದಕ್ಕೆ ಸಹ ಸಾಯುವದಕ್ಕಿದ್ದನು. ಆ ದಿನದಿಂದ ಆತನನ್ನು ಕೊಲ್ಲುವದಕ್ಕೆ ಆಲೋಚಿಸುತ್ತಿದ್ದರು.ಹೀಗಿರಲಾಗಿ ಯೇಸು ಇನ್ನೂ ಯೆಹೂದ್ಯರೊಳಗೆ ಬಹಿರಂಗವಾಗಿ ತಿರುಗಾಡದೆ ಅಲ್ಲಿಂದ ಅಡವಿಯ ಹತ್ತಿರದ ಪ್ರದೇಶಕ್ಕೆ ಹೋಗಿ ಎಫ್ರಾಯಿಮ್ ಎಂಬ ಊರಲ್ಲಿ ಶಿಷ್ಯರ ಸಂಗಡ ಇದ್ದನು. ಆಗ ಯೆಹೂದ್ಯರ ಪಸ್ಕಹಬ್ಬ ಹತ್ತಿರವಾಗಿರಲಾಗಿ ಬಹು ಜನರು ತಮ್ಮನ್ನು ಶುದ್ಧಿಮಾಡಿಕೊಳ್ಳುವದಕ್ಕಾಗಿ ಹಬ್ಬಕ್ಕಿಂತ ಮುಂಚೆ ಹಳ್ಳಿಗಳಿಂದ ಯೆರೂಸಲೇವಿುಗೆ ಬಂದರು. ಅವರು ಯೇಸುವನ್ನು ಹುಡುಕುತ್ತಾ ದೇವಾಲಯದಲ್ಲಿ ನಿಂತುಕೊಂಡು - ಅವನು ಹಬ್ಬಕ್ಕೆ ಬಾರದೆ ಇದ್ದಾನೋ? ನಿಮಗೆ ಹೇಗೆ ಕಾಣುತ್ತದೆ ಎಂದು ತಮ್ಮಲ್ಲಿ ಮಾತಾಡಿಕೊಳ್ಳುತ್ತಾ ಇದ್ದರು. ಆದರೆ ಮಹಾಯಾಜಕರೂ ಫರಿಸಾಯರೂ ಆತನನ್ನು ಹಿಡಿಯಬೇಕೆಂಬದಾಗಿ ಯೋಚಿಸಿ - ಅವನಿರುವ ಸ್ಥಳವು ಯಾರಿಗಾದರೂ ತಿಳಿದರೆ ಅದನ್ನು ತಮಗೆ ತಿಳಿಸಬೇಕೆಂದು ಅಪ್ಪಣೆ ಕೊಟ್ಟಿದ್ದರು.
ಅಧ್ಯಾಯ 44
ಪಸ್ಕಹಬ್ಬವು ಇನ್ನು ಆರು ದಿವಸ ಮುಂದೆ ಇರಲಾಗಿ ಯೇಸು ಬೇಥಾನ್ಯಕ್ಕೆ ಬಂದನು. ಯೇಸುವು ಸತ್ತವರೊಳಗಿಂದ ಎಬ್ಬಿಸಿದ ಲಾಜರನು ಅಲ್ಲಿದ್ದನು. ಯೇಸುವಿಗೆ ಅಲ್ಲಿ ಔತಣಮಾಡಿಸಲು ಮಾರ್ಥಳು ನೆರವಾಗಿದ್ದಳು; ಲಾಜರನು ಆತನ ಸಂಗಡ ಊಟಕ್ಕೆ ಕೂತವರಲ್ಲಿ ಒಬ್ಬನು. ಆಗ ಮರಿಯಳು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲವನ್ನು ಒಂದು ಸೇರಷ್ಟು ತಂದು ಯೇಸುವಿನ ಪಾದಕ್ಕೆ ಹಚ್ಚಿ ತನ್ನ ತಲೇಕೂದಲಿನಿಂದ ಆತನ ಪಾದಗಳನ್ನು ಒರಸಿದಳು. ಆ ತೈಲದ ಪರಿಮಳವು ಮನೆಯಲ್ಲೆಲ್ಲಾ ತುಂಬಿಕೊಂಡಿತು. ಆದರೆ ಆತನ ಶಿಷ್ಯರಲ್ಲಿ ಒಬ್ಬನು, ಅಂದರೆ ಆತನನ್ನು ಹಿಡುಕೊಡುವದಕ್ಕಿದ್ದ ಇಸ್ಕರಿಯೋತ ಯೂದನೆಂಬವನು - ಯಾಕೆ ಈ ತೈಲವನ್ನು ಮುನ್ನೂರು ಹಣಕ್ಕೆ ಮಾರಿ ಬಡವರಿಗೆ ಕೊಡಲಿಲ್ಲ ಅಂದನು. ಅವನು ಬಡವರಿಗೋಸ್ಕರ ಚಿಂತಿಸಿ ಇದನ್ನು ಹೇಳಲಿಲ್ಲ; ಅವನು ಕಳ್ಳನಾಗಿದ್ದು ತನ್ನ ವಶದಲ್ಲಿದ್ದ ಅವರ ಹಣದ ಚೀಲದಲ್ಲಿ ಹಾಕಿದ್ದನ್ನು ತಕ್ಕೊಳ್ಳುವವನಾಗಿದ್ದದರಿಂದಲೇ ಹೇಳಿದನು. ಆಗ ಯೇಸು - ಈಕೆಯನ್ನು ಬಿಡು; ನನ್ನನ್ನು ಹೂಣಿಡುವ ದಿವಸಕ್ಕಾಗಿ ಅದನ್ನು ಇಟ್ಟುಕೊಳ್ಳಲಿ. ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ, ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವದಿಲ್ಲ ಅಂದನು.ಯೆಹೂದ್ಯರ ಜನಸಮೂಹವು ಆತನು ಅಲ್ಲಿ ಇದ್ದಾನೆಂದು ತಿಳಿದು ಯೇಸುವನ್ನು ನೋಡುವದಕ್ಕಾಗಿ ಮಾತ್ರವಲ್ಲದೆ ಆತನು ಸತ್ತವರೊಳಗಿಂದ ಎಬ್ಬಿಸಿದ ಲಾಜರನನ್ನು ಸಹ ನೋಡಬೇಕೆಂಬದಾಗಿ ಬಂದರು. ಆದರೆ ಮಹಾಯಾಜಕರು ಲಾಜರನನ್ನೂ ಕೊಲ್ಲಬೇಕೆಂದು ಆಲೋಚಿಸಿದರು. ಯಾಕಂದರೆ ಅವನ ದೆಸೆಯಿಂದ ಯೆಹೂದ್ಯರಲ್ಲಿ ಅನೇಕರು ಹೋಗಿ ಯೇಸುವನ್ನು ನಂಬುವವರಾದರು.
ಅವರು ಯೆರೂಸಲೇವಿುಗೆ ಸಮೀಪಿಸಿ ಎಣ್ಣೇಮರಗಳ ಗುಡ್ಡದ ಬಳಿಯಲ್ಲಿರುವ ಬೇತ್ಪಗೆಗೂ ಬೇಥಾನ್ಯಕ್ಕೂ ಬಂದಾಗ ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು - ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ಅದರೊಳಕ್ಕೆ ಸೇರುತ್ತಿರುವಾಗಲೇ ಅಲ್ಲಿ ಕಟ್ಟಿರುವ ಒಂದು ಕತ್ತೇಮರಿಯನ್ನು ಕಾಣುವಿರಿ; ಇದುವರೆಗೆ ಅದರ ಮೇಲೆ ಯಾರೂ ಹತ್ತಿಲ್ಲ; ಅದನ್ನು ಬಿಚ್ಚಿ ಹಿಡುಕೊಂಡು ಬನ್ನಿರಿ. ಯಾವನಾದರೂ ನಿಮ್ಮನ್ನು - ಏನು ಹೀಗೆ ಮಾಡುವದು ಎಂದು ಕೇಳಿದರೆ - ಇದು ಸ್ವಾವಿುಯವರಿಗೆ ಬೇಕಾಗಿದೆ, ಅವರು ತಡಮಾಡದೆ ತಿರಿಗಿ ಇಲ್ಲಿಗೆ ಕಳುಹಿಸಿಕೊಡುವರು ಅನ್ನಿರಿ ಎಂದು ಹೇಳಿ ಕಳುಹಿಸಿದನು. ಆ ಶಿಷ್ಯರು ಹೋಗಿ ಬೀದಿಯಲ್ಲಿ ಹೊರಗೆ ಬಾಗಿಲಿನ ಹತ್ತಿರ ಒಂದು ಕತ್ತೇಮರಿ ಕಟ್ಟಿರುವದನ್ನು ಕಂಡು ಅದನ್ನು ಬಿಚ್ಚಿದರು. ಅಲ್ಲಿ ನಿಂತಿದ್ದವರಲ್ಲಿ ಕೆಲವರು - ಈ ಮರಿಯನ್ನು ಬಿಚ್ಚಿ ಏನು ಮಾಡುತ್ತೀರಿ? ಎಂದು ಅವರನ್ನು ಕೇಳಿದ್ದಕ್ಕೆ ಯೇಸು ಹೇಳಿದಂತೆಯೇ ಅವರು ಹೇಳಿದಾಗ ಆ ಜನರು ತೆಗೆದುಕೊಂಡು ಹೋಗಗೊಡಿಸಿದರು. ಶಿಷ್ಯರು ಆ ಮರಿಯನ್ನು ಯೇಸುವಿನ ಬಳಿಗೆ ತಂದು ತಮ್ಮ ಬಟ್ಟೆಗಳನ್ನು ಅದರ ಮೇಲೆ ಹಾಕಲು ಆತನು ಅದನ್ನು ಹತ್ತಿ ಕೂತುಕೊಂಡನು. ಆಗ ಅನೇಕರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು. ಬೇರೆ ಕೆಲವರು ತೋಟಗಳಿಂದ ಚಿಗುರುಗಳನ್ನು ಕೊಯಿದು ತಂದು ಹಾಸಿದರು.ಆತನು ಪಟ್ಟಣವನ್ನು ಸಮೀಪಿಸಿ ಎಣ್ಣೇಮರಗಳ ಗುಡ್ಡದಿಂದ ಇಳಿಯುವ ಸ್ಥಳಕ್ಕೆ ಬಂದಾಗ ಶಿಷ್ಯಮಂಡಲಿಯವರೆಲ್ಲಾ ಸಂತೋಷಪಡುತ್ತಾ ತಾವು ಕಂಡಿದ್ದ ಎಲ್ಲಾ ಮಹತ್ಕಾರ್ಯಗಳ ವಿಷಯದಲ್ಲಿ ಆತನ ಹಿಂದೆಯೂ ಮುಂದೆಯೂ ಗುಂಪಾಗಿ ಹೋಗುತ್ತಿದ್ದ ಜನರು -ದಾವೀದನ ಕುಮಾರನಿಗೆ ಜಯ!ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ! ಮೇಲಣ ಲೋಕಗಳಲ್ಲಿ ಜಯ! ಎಂದು ಆರ್ಭಟಿಸಿದರು.
ಜಾತ್ರೆಗೆ ಬಂದಿದ್ದ ಜನಸಮೂಹವು ಯೇಸು ಯೆರೂಸಲೇವಿುಗೆ ಬರುತ್ತಾನೆಂದು ಕೇಳಿ ಖರ್ಜೂರದ ಗರಿಗಳನ್ನು ತಕ್ಕೊಂಡು ಆತನನ್ನು ಎದುರುಗೊಳ್ಳುವದಕ್ಕೆ ಹೊರಗೆ ಬಂದು - ಜಯ, ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ; ಇಸ್ರಾಯೇಲಿನ ಅರಸನಿಗೆ ಆಶೀರ್ವಾದ ಎಂದು ಆರ್ಭಟಿಸಿದರು. ಚೀಯೋನ್ ನಗರಿಯೇ, ಹೆದರಬೇಡ; ಇಗೋ, ನಿನ್ನ ಅರಸನು ಕತ್ತೆಮರಿಯ ಮೇಲೆ ಕೂತುಕೊಂಡು ಬರುತ್ತಾನೆಎಂಬ ಶಾಸ್ತ್ರದ ಮಾತು . ಇದು ಆತನ ಶಿಷ್ಯರಿಗೆ ಮೊದಲು ತಿಳಿದಿರಲಿಲ್ಲ. ಆದರೆ ಯೇಸು ತನ್ನ ಮಹಿಮೆಯ ಪದವಿಗೆ ಬಂದ ಮೇಲೆ ಇದು ಆತನ ವಿಷಯವಾಗಿಯೇ ಬರೆದದೆ ಎಂದೂ ಆತನಿಗೆ ನಾವು ಅದನ್ನೆಲ್ಲಾ ಮಾಡಿದೆವೆಂದೂ ಅವರ ನೆನಪಿಗೆ ಬಂತು. ಜನರ ಗುಂಪಿನೊಳಗಿದ್ದ ಫರಿಸಾಯರಲ್ಲಿ ಕೆಲವರು ಆತನಿಗೆ - ಬೋಧಕನೇ, ನಿನ್ನ ಶಿಷ್ಯರನ್ನು ಗದರಿಸು ಎಂದು ಹೇಳಿದ್ದಕ್ಕೆ ಆತನು - ಇವರು ಸುಮ್ಮನಾದರೆ ಈ ಕಲ್ಲುಗಳೇ ಕೂಗುವವು ಎಂದು ನಿಮಗೆ ಹೇಳುತ್ತೇನೆ ಅಂದನು.ಹೀಗಿರಲಾಗಿ ಫರಿಸಾಯರು - ನಿಮ್ಮ ಯತ್ನವೇನೂ ಸಾಗಲಿಲ್ಲ, ನೋಡಿರಿ; ಲೋಕವೆಲ್ಲಾ ಆತನ ಹಿಂದೆ ಹೋಯಿತಲ್ಲಾ ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.
ಆತನು ಯೆರೂಸಲೇಮನ್ನು ಸೇರಲು ಪಟ್ಟಣವೆಲ್ಲಾ ಗದ್ದಲವಾಗಿ, ಈತನು ಯಾರು? ಅಂದರು. ಅದಕ್ಕೆ ಆ ಜನರ ಗುಂಪಿನವರು - ಈತನು ಆ ಪ್ರವಾದಿ, ಗಲಿಲಾಯದ ನಜರೇತಿನ ಯೇಸು ಅಂದರು. ತರುವಾಯ ಆತನು ಸಮೀಪಕ್ಕೆ ಬಂದಾಗ ಪಟ್ಟಣವನ್ನು ನೋಡಿ ಅದರ ವಿಷಯವಾಗಿ ಅತ್ತು - ನೀನಾದರೂ ಸಮಾಧಾನಕ್ಕೆ ಬೇಕಾದದ್ದನ್ನು ಇದೇ ದಿನದಲ್ಲಿ ತಿಳಿದುಕೊಂಡರೆ ಎಷ್ಟೋ ಒಳ್ಳೇದು. ಆದರೆ ಈಗ ಅದು ನಿನ್ನ ಕಣ್ಣಿಗೆ ಮರೆಯಾಗಿದೆ. -ದೇವರು ನಿನಗೆ ದರ್ಶನಕೊಟ್ಟ ಸಮಯವನ್ನು ನೀನು ತಿಳುಕೊಳ್ಳಲಿಲ್ಲವಾದದರಿಂದ ನಿನ್ನ ವೈರಿಗಳು ಒಡ್ಡುಕಟ್ಟಿ ನಿನ್ನ ಸುತ್ತಲೂ ಮುತ್ತಿಗೆ ಹಾಕಿ ಎಲ್ಲಾ ಕಡೆಗಳಲ್ಲಿಯೂ ನಿನ್ನನ್ನು ಬಂದುಮಾಡಿ ನಿನ್ನನ್ನೂ ನಿನ್ನೊಳಗಿರುವ ನಿನ್ನ ಜನರನ್ನೂ ನಿರ್ಮೂಲಮಾಡಿ ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವ ದಿವಸಗಳು ನಿನ್ನ ಮೇಲೆ ಬರುವವು ಅಂದನು.ತರುವಾಯ ಯೇಸು ಯೆರೂಸಲೇಮನ್ನು ಸೇರಿ ದೇವಾಲಯಕ್ಕೆ ಹೋಗಿ ಸುತ್ತಲೂ ಎಲ್ಲಾ ನೋಡಿಕೊಂಡು ಅಷ್ಟರಲ್ಲಿ ಸಂಜೆಯಾದದ್ದರಿಂದ ಹನ್ನೆರಡು ಮಂದಿ ಶಿಷ್ಯರನ್ನು ಕರಕೊಂಡು ಬೇಥಾನ್ಯಕ್ಕೆ ಹೊರಟುಹೋದನು.
ಮರುದಿನ ಅವರು ಬೇಥಾನ್ಯವನ್ನು ಬಿಟ್ಟು ಬರುತ್ತಿರುವಾಗ ಆತನು ಹಸಿದನು. ಮತ್ತು ಎಲೆಬಿಟ್ಟಿದ್ದ ಒಂದು ಅಂಜೂರದ ಮರವನ್ನು ದೂರದಲ್ಲಿ ಕಂಡು ಅದರಲ್ಲಿ ತನಗೇನಾದರೂ ಹಣ್ಣು ಸಿಕ್ಕೀತೆಂದು ಅಲ್ಲಿಗೆ ಹೋದನು. ಅದರ ಹತ್ತಿರಕ್ಕೆ ಬಂದಾಗ ಅದರಲ್ಲಿ ಬರೀ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ; ಅದು ಅಂಜೂರದ ಹಣ್ಣಿನ ಕಾಲವಲ್ಲ. ಆಗ ಯೇಸು ಆ ಮರಕ್ಕೆ - ಇನ್ನು ಮೇಲೆ ಒಬ್ಬರೂ ನಿನ್ನಲ್ಲಿ ಹಣ್ಣನ್ನು ಎಂದೆಂದಿಗೂ ತಿನ್ನದ ಹಾಗಾಗಲಿ ಎಂದು ಹೇಳಿದನು. ಆತನ ಶಿಷ್ಯರು ಅದನ್ನು ಕೇಳಿದರು.ಆ ಕ್ಷಣವೇ ಆ ಅಂಜೂರದ ಮರವು ಒಣಗಿಹೋಯಿತು. ಶಿಷ್ಯರು ಅದನ್ನು ನೋಡಿ ಬೆರಗಾಗಿ - ಈ ಅಂಜೂರದ ಮರವು ಒಂದು ಕ್ಷಣದಲ್ಲೇ ಒಣಗಿ ಹೋಯಿತಲ್ಲಾ; ಅದು ಹೇಗೆ? ಅಂದರು.
ಅವರು ಯೆರೂಸಲೇವಿುಗೆ ಬಂದಾಗ ಯೇಸು ದೇವಾಲಯಕ್ಕೆ ಹೋಗಿ ಅದರಲ್ಲಿ ಮಾರುವವರನ್ನೂ ಕೊಳ್ಳುವವರನ್ನೂ ಹೊರಡಿಸಿಬಿಡುವದಕ್ಕೆ ಪ್ರಾರಂಭಿಸಿ ಚಿನಿವಾರರ ಮೇಜುಗಳನ್ನೂ ಪಾರಿವಾಳಮಾರುವವರ ಕಾಲ್ಮಣೆಗಳನ್ನೂ ಕೆಡವಿದನು; ಒಬ್ಬನನ್ನಾದರೂ ಸಾಮಾನು ಹೊತ್ತುಕೊಂಡು ದೇವಾಲಯದೊಳಗೆ ಹಾದು ಹೋಗಗೊಡಿಸಲಿಲ್ಲ. ಮತ್ತು ಆತನು ಉಪದೇಶಮಾಡಿ - ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವದು ಎಂದು ಬರೆದಿದೆಯಲ್ಲಾ? ಆದರೆ ನೀವು ಅದನ್ನು ಕಳ್ಳರ ಗವಿ ಮಾಡಿದ್ದೀರಿ ಎಂದು ಹೇಳಿದನು. ಅದನ್ನು ಮಹಾಯಾಜಕರೂ ಶಾಸ್ತ್ರಿಗಳೂ ಕೇಳಿ ಅವನನ್ನು ಯಾವ ಉಪಾಯದಿಂದ ಕೊಲ್ಲೋಣ ಎಂದು ಸಂದರ್ಭ ನೋಡುತ್ತಿದ್ದರು; ಯಾಕಂದರೆ ಜನರೆಲ್ಲಾ ಆತನ ಉಪದೇಶವನ್ನು ಕೇಳಿ ಅತ್ಯಾಶ್ಚರ್ಯಪಟ್ಟದ್ದರಿಂದ ಅವರು ಆತನಿಗೆ ಹೆದರುತ್ತಿದ್ದರು.ಆಗ ಕುರುಡರೂ ಕುಂಟರೂ ದೇವಾಲಯದಲ್ಲಿ ಆತನ ಬಳಿಗೆ ಬರಲು ಅವರನ್ನು ಸ್ವಸ್ಥಮಾಡಿದನು. ಆದರೆ ಮಹಾಯಾಜಕರೂ ಶಾಸ್ತ್ರಿಗಳೂ ಆತನು ಮಾಡಿದ ಆಶ್ಚರ್ಯಕರವಾದ ಕಾರ್ಯಗಳನ್ನೂ ದಾವೀದನ ಕುಮಾರನಿಗೆ ಜಯ ಜಯವೆಂದು ದೇವಾಲಯದಲ್ಲಿ ಕೂಗುತ್ತಿರುವ ಹುಡುಗರನ್ನೂ ನೋಡಿ ಸಿಟ್ಟುಗೊಂಡು ಆತನಿಗೆ - ಇವರು ಹೇಳುವದನ್ನು ಕೇಳುತ್ತೀಯಾ ಎಂದು ಹೇಳಲು ಯೇಸು - ಹೌದು, ಕೇಳುತ್ತೇನೆ, ಸಣ್ಣ ಮಕ್ಕಳ ಬಾಯಿಂದಲೂ ಮೊಲೇಕೂಸುಗಳ ಬಾಯಿಂದಲೂ ಸ್ತೋತ್ರವನ್ನು ಸಿದ್ಧಿಗೆ ತಂದಿ ಎಂಬದನ್ನು ನೀವು ಎಂದಾದರೂ ಓದಲಿಲ್ಲವೋ? ಅಂದನು. ಬಳಿಕ ಅವರನ್ನು ಬಿಟ್ಟು ಪಟ್ಟಣದಿಂದ ಹೊರಟು ಬೇಥಾನ್ಯಕ್ಕೆ ಬಂದು ಅಲ್ಲಿ ರಾತ್ರಿ ಇಳುಕೊಂಡನು.
ಅಧ್ಯಾಯ 45
ಬೆಳಿಗ್ಗೆ ಅವರು ಬರುತ್ತಿರುವಾಗ ಆ ಅಂಜೂರದ ಮರವು ಬುಡದಿಂದಲೂ ಒಣಗಿ ಹೋಗಿರುವದನ್ನು ಕಂಡರು. ಆಗ ಪೇತ್ರನು ಹಿಂದಿನ ದಿನದ ಸಂಗತಿಯನ್ನು ನೆನಸಿಕೊಂಡು ಆತನಿಗೆ - ಗುರುವೇ, ಇಗೋ, ನೀನು ಶಾಪಕೊಟ್ಟ ಅಂಜೂರದ ಮರವು ಒಣಗಿಹೋಗಿದೆ ಎಂದು ಹೇಳಿದ್ದಕ್ಕೆ ಯೇಸು ಹೇಳಿದ್ದೇನಂದರೆ - ನಿಮಗೆ ದೇವರಲ್ಲಿ ನಂಬಿಕೆಯಿರಲಿ.ಅದಕ್ಕೆ ಯೇಸು - ನಿಮಗೆ ಸತ್ಯವಾಗಿ ಹೇಳುತ್ತೇನೆ ನೀವು ಸಂಶಯಪಡದೆ ನಂಬಿದರೆ ನಾನು ಅಂಜೂರದ ಮರಕ್ಕೆ ಮಾಡಿದಂಥದನ್ನು ನೀವು ಮಾಡುವಿರಿ. ಇದು ಮಾತ್ರವಲ್ಲದೆ ಈ ಬೆಟ್ಟಕ್ಕೆ - ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು ಎಂದು ಹೇಳಿದರೆ ಅದೂ ಆಗುವದು.ಆದಕಾರಣ ನೀವು ಪ್ರಾರ್ಥನೆಮಾಡಿ ಏನೇನು ಬೇಡಿಕೊಳ್ಳುತ್ತೀರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವದೆಂದು ನಿಮಗೆ ಹೇಳುತ್ತೇನೆ. ಇದಲ್ಲದೆ ನೀವು ನಿಂತುಕೊಂಡು ಪ್ರಾರ್ಥನೆಮಾಡುವಾಗೆಲ್ಲಾ ಯಾರ ಮೇಲೆ ಏನಾದರೂ ವಿರೋಧವಿದ್ದರೆ ಅದನ್ನು ಅವನಿಗೆ ಕ್ಷವಿುಸಿರಿ; ಕ್ಷವಿುಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ನಿಮಗೆ ಕ್ಷವಿುಸಿಬಿಡುವನು ಅಂದನು.
ಮತ್ತು ಆತನು ದಿನಾಲು ದೇವಾಲಯದಲ್ಲಿ ಉಪದೇಶಮಾಡುತ್ತಿದ್ದನು. ಅಷ್ಟರಲ್ಲಿ ಮಹಾಯಾಜಕರೂ ಶಾಸ್ತ್ರಿಗಳೂ ಪ್ರಜೆಗಳಲ್ಲಿ ಮುಖ್ಯಸ್ಥರೂ ಆತನನ್ನು ಕೊಲ್ಲುವದಕ್ಕೆ ಸಂದರ್ಭನೋಡುತ್ತಿದ್ದರು. ಆದರೆ ಜನರೆಲ್ಲರು ಆತನನ್ನು ಅಂಟಿಕೊಂಡು ಉಪದೇಶವನ್ನು ಗಮನಿಸಿ ಕೇಳುತ್ತಿದ್ದದರಿಂದ ಏನು ಮಾಡಬೇಕೋ ತೋರಲಿಲ್ಲ. ಆ ದಿವಸಗಳೊಳಗೆ ಒಂದು ದಿನ ಆತನು ದೇವಾಲಯದಲ್ಲಿ ಜನರಿಗೆ ಉಪದೇಶಮಾಡುತ್ತಾ ಸುವಾರ್ತೆಯನ್ನು ಸಾರುತ್ತಿರಲಾಗಿ ಮಹಾಯಾಜಕರೂ ಶಾಸ್ತ್ರಿಗಳೂ ಸಭೆಯ ಹಿರಿಯರನ್ನು ಕೂಡಿಕೊಂಡುನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೀ? ಇದನ್ನು ಮಾಡುವದಕ್ಕೆ ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು ಎಂದು ಆತನನ್ನು ಕೇಳಿದರು. ಯೇಸು ಅವರಿಗೆ - ನಾನು ನಿಮ್ಮನ್ನೂ ಒಂದು ಮಾತು ಕೇಳುತ್ತೇನೆ, ನನಗೆ ಉತ್ತರ ಹೇಳಿದರೆ ನಾನು ಸಹ ಯಾವ ಅಧಿಕಾರದಿಂದ ಇದನ್ನು ಮಾಡುತ್ತೇನೆಂಬದನ್ನು ನಿಮಗೆ ಹೇಳುತ್ತೇನೆ. ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಪರಲೋಕದಿಂದ ಬಂತೋ? ಮನುಷ್ಯರಿಂದ ಬಂತೋ? ಉತ್ತರಕೊಡಿರಿ ಅಂದನು. ಆಗ ಅವರು - ಪರಲೋಕದಿಂದ ಬಂತೆಂದು ನಾವು ಹೇಳಿದರೆ ಹಾಗಾದರೆ ನೀವು ಅವನನ್ನು ಯಾಕೆ ನಂಬಲಿಲ್ಲ ಅಂದಾನು;ಮನುಷ್ಯರಿಂದ ಬಂತೆಂದು ಹೇಳಿದರೆ ಜನರೆಲ್ಲರೂ ಯೋಹಾನನನ್ನು ಪ್ರವಾದಿಯೆಂದು ನಂಬಿರುವದರಿಂದ ಅವರು ನಮ್ಮನ್ನು ಕಲ್ಲೆಸೆದು ಕೊಂದಾರು ಎಂಬದಾಗಿ,ಮನುಷ್ಯರಿಂದ ಬಂತೆಂದು ಹೇಳಿದರೆ ನಮಗೆ ಜನರ ಭಯವದೆ; ಯೋಹಾನನು ಪ್ರವಾದಿಯೆಂದು ಎಲ್ಲರೂ ಎಣಿಸಿದ್ದಾರಲ್ಲಾ ಎಂಬದಾಗಿ ತಮ್ಮತಮ್ಮೊಳಗೆ ಮಾತಾಡಿಕೊಳ್ಳುತ್ತಿದ್ದರು.ಹೀಗಿರಲಾಗಿ ಅವರು - ನಾವು ಅರಿಯೆವು ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಯೇಸು ಅವರಿಗೆ - ಯಾವ ಅಧಿಕಾರದಿಂದ ಇದನ್ನು ಮಾಡುತ್ತೇನೋ ಅದನ್ನು ನಾನೂ ನಿಮಗೆ ಹೇಳುವದಿಲ್ಲ ಅಂದನು.
ಇದಲ್ಲದೆ ದೇವಾರಾಧನೆ ಮಾಡಬೇಕೆಂದು ಜಾತ್ರೆಗೆ ಬಂದವರಲ್ಲಿ ಕೆಲವು ಮಂದಿ ಗ್ರೀಕರಿದ್ದರು. ಇವರು ಗಲಿಲಾಯದಲ್ಲಿರುವ ಬೇತ್ಸಾಯಿದ ಊರಿನ ಫಿಲಿಪ್ಪನ ಬಳಿಗೆ ಬಂದು - ಅಯ್ಯಾ, ಯೇಸುವನ್ನು ನೋಡಬೇಕೆಂದಿದ್ದೇವೆಂದು ಅವನನ್ನು ಬೇಡಿಕೊಂಡರು. ಫಿಲಿಪ್ಪನು ಬಂದು ಅಂದ್ರೆಯನಿಗೆ ಹೇಳಿದನು; ಅಂದ್ರೆಯನೂ ಫಿಲಿಪ್ಪನೂ ಯೇಸುವಿಗೆ ಹೇಳಿದರು. ಆಗ ಯೇಸು ಅವರಿಗೆ ಉತ್ತರಕೊಟ್ಟು ಹೇಳಿದ್ದೇನಂದರೆ - ಮನುಷ್ಯಕುಮಾರನು ತನ್ನ ಮಹಿಮೆಯ ಪದವಿಯನ್ನು ಹೊಂದುವ ಸಮಯ ಬಂದದೆ. ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಗೋದಿಯ ಕಾಳು ಭೂವಿುಯಲ್ಲಿ ಬಿದ್ದು ಸಾಯದಿದ್ದರೆ ಒಂದೇಯಾಗಿ ಉಳಿಯುವದು; ಸತ್ತರೆ ಬಹಳ ಫಲಕೊಡುವದು. ತನ್ನ ಪ್ರಾಣದ ಮೇಲೆ ಮಮತೆಯಿಡುವವನು ಅದನ್ನು ಕಳಕೊಳ್ಳುವನು, ಇಹಲೋಕದಲ್ಲಿ ತನ್ನ ಪ್ರಾಣವನ್ನು ಹಗೆಮಾಡುವವನು ನಿತ್ಯಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವನು. ಯಾವನಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನ ಹಿಂದೆ ಬರಲಿ; ಮತ್ತು ಎಲ್ಲಿ ನಾನು ಇರುತ್ತೇನೋ ಅಲ್ಲಿ ನನ್ನ ಸೇವಕನು ಸಹ ಇರುವನು. ಯಾವನಾದರೂ ನನ್ನ ಸೇವೆಯನ್ನು ಮಾಡುವವನಾದರೆ ತಂದೆಯು ಅವನಿಗೆ ಬಹುಮಾನ ಮಾಡುವನು.
ಈಗ ನನ್ನ ಪ್ರಾಣವು ತತ್ತರಿಸುತ್ತದೆ; ಮತ್ತು ನಾನೇನು ಹೇಳಲಿ? ತಂದೆಯೇ, ಈ ಕಾಲದೊಳಗಿಂದ ನನ್ನನ್ನು ತಪ್ಪಿಸು. ಆದರೆ ಇದಕ್ಕಾಗಿಯೇ ಈ ಕಾಲ ಸೇರಿದೆನು. ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ ಅಂದನು. ಅದಕ್ಕೆ - ಮಹಿಮೆಪಡಿಸಿದ್ದೇನೆ, ತಿರಿಗಿ ಮಹಿಮೆಪಡಿಸುವೆನು ಎಂದು ಆಕಾಶವಾಣಿಯಾಯಿತು. ಅಲ್ಲಿ ನಿಂತುಕೊಂಡಿದ್ದ ಜನರು ಅದನ್ನು ಕೇಳಿ - ಗುಡುಗಿತು ಅಂದರು. ಇನ್ನು ಕೆಲವರು - ದೇವದೂತನು ಈತನ ಸಂಗಡ ಮಾತಾಡಿದನು ಅಂದರು. ಆದರೆ ಯೇಸು ಅವರಿಗೆ - ಈ ಆಕಾಶವಾಣಿ ನನಗಾಗಿ ಆಗಲಿಲ್ಲ; ನಿಮಗಾಗಿ ಆಯಿತು. ಈಗ ಈ ಲೋಕಕ್ಕೆ ತೀರ್ಪು ಆಗುತ್ತದೆ; ಈಗ ಇಹಲೋಕಾಧಿಪತಿಯು ಹೊರಗೆ ನೂಕಲ್ಪಡುವನು. ಆದರೆ ನಾನು ಭೂವಿುಯಲ್ಲಿಂದ ಮೇಲಕ್ಕೆ ಎತ್ತಲ್ಪಟ್ಟಾಗ ಎಲ್ಲರನ್ನೂ ನನ್ನ ಬಳಿಗೆ ಎಳಕೊಳ್ಳುವೆನು ಎಂದು ಹೇಳಿದನು. ಈ ಮಾತಿನಿಂದ ತಾನು ಇಂಥ ಸಾವು ಸಾಯತಕ್ಕವನೆಂದು ಸೂಚಿಸಿದನು.
ಅದಕ್ಕೆ ಆ ಜನರು - ಕ್ರಿಸ್ತನು ಸದಾಕಾಲವೂ ಇರುತ್ತಾನೆಂದು ಧರ್ಮಶಾಸ್ತ್ರದಲ್ಲಿ ಕೇಳಿದ್ದೇವೆ; ಹಾಗಾದರೆ ಮನುಷ್ಯಕುಮಾರನು ಮೇಲಕ್ಕೆ ಎತ್ತಲ್ಪಡಬೇಕೆಂದು ನೀನು ಹೇಳುವದು ಹೇಗೆ? ಆ ಮನುಷ್ಯಕುಮಾರನು ಯಾರು? ಅಂದರು. ಯೇಸು ಅವರಿಗೆ - ಇನ್ನು ಸ್ವಲ್ಪ ಕಾಲವೇ ಬೆಳಕು ನಿಮ್ಮಲ್ಲಿ ಇರುತ್ತದೆ; ಕತ್ತಲೆಯು ನಿಮ್ಮನ್ನು ಮುಸುಕಿಕೊಳ್ಳದಂತೆ ಬೆಳಕು ನಿಮಗೆ ಇರುವಾಗಲೇ ಸಂಚಾರಮಾಡಿರಿ. ಕತ್ತಲೆಯಲ್ಲಿ ಸಂಚಾರಮಾಡುವವನಿಗೆ ತಾನು ಎಲ್ಲಿ ಹೋಗುತ್ತೇನೆಂದು ತಿಳಿಯದು. ನಿಮಗೆ ಬೆಳಕು ಇರುವಾಗಲೇ ಬೆಳಕನ್ನು ನಂಬಿರಿ; ನಂಬಿದರೆ ನೀವು ಬೆಳಕಿನವರಾಗುವಿರಿ ಎಂದು ಹೇಳಿದನು. ಇದನ್ನು ಯೇಸು ಹೇಳಿದ ಮೇಲೆ ಅವರನ್ನು ಬಿಟ್ಟುಹೋಗಿ ಅಡಗಿಕೊಂಡನು.ಆತನು ಅವರ ಮುಂದೆ ಅಷ್ಟು ಸೂಚಕಕಾರ್ಯಗಳನ್ನು ಮಾಡಿದರೂ ಅವರು ಆತನನ್ನು ನಂಬಲಿಲ್ಲ. ಇದರಿಂದ ಪ್ರವಾದಿಯಾದ ಯೆಶಾಯನು ನುಡಿದ ಮಾತು ನೆರವೇರಿತು; ಅದೇನಂದರೆ - ಕರ್ತನೇ, ನಮ್ಮ ಉಪದೇಶವನ್ನು ಯಾರು ನಂಬಿದರು?ಕರ್ತನ ಬಾಹುವು ಯಾರಿಗೆ ಗೋಚರವಾಯಿತು? ಎಂಬದು.ಅವರು ನಂಬಲಾರದೆ ಹೋದದ್ದಕ್ಕೆ ಯೆಶಾಯನು ಮತ್ತೊಂದು ಮಾತಿನಲ್ಲಿ ಕಾರಣವನ್ನು ಸೂಚಿಸಿದ್ದಾನೆ; ಅದೇನಂದರೆ -ಅವರು ಕಣ್ಣಿನಿಂದ ಕಾಣದೆ ಹೃದಯದಿಂದ ಗ್ರಹಿಸದೆತಿರುಗಿಕೊಳ್ಳದೆ ತನ್ನಿಂದ ಸ್ವಸ್ಥತೆಯನ್ನು ಹೊಂದದೆ ಇರುವಂತೆ ಆತನು ಅವರ ಕಣ್ಣುಗಳನ್ನು ಕುರುಡುಮಾಡಿಅವರ ಹೃದಯವನ್ನು ಕಠಿನಮಾಡಿದನು ಎಂಬದೇ.ಯೆಶಾಯನು ಆತನ ಮಹಿಮೆಯನ್ನು ನೋಡಿದ್ದರಿಂದ ಆತನ ವಿಷಯದಲ್ಲಿ ಮಾತಾಡುತ್ತಿರುವಾಗ ಆ ಮಾತನ್ನು ನುಡಿದನು. ಆದರೂ ಹಿರೀಸಭೆಯವರಲ್ಲಿಯೂ ಅನೇಕರು ಆತನನ್ನು ನಂಬಿದರು. ಆದರೆ ತಮಗೆ ಸಭೆಯಿಂದ ಬಹಿಷ್ಕಾರವಾದೀತೆಂದು ಫರಿಸಾಯರಿಗೆ ಅಂಜಿಕೊಂಡು ಅದನ್ನು ಜನರ ಮುಂದೆ ಹೇಳಲಿಲ್ಲ. ಯಾಕಂದರೆ ದೇವರಿಂದ ಬರುವ ಮಾನಕ್ಕಿಂತ ಮನುಷ್ಯರಿಂದ ಬರುವ ಮಾನವೇ ಅವರಿಗೆ ಇಷ್ಟವಾಗಿತ್ತು.
ಯೇಸು ಕೂಗಿ ಹೇಳಿದ ಮಾತು ಏನಂದರೆ - ನನ್ನನ್ನು ನಂಬಿದವನು ನನ್ನನ್ನೇ ನಂಬುವವನಲ್ಲ; ನನ್ನನ್ನು ಕಳುಹಿಸಿಕೊಟ್ಟಾತನನ್ನು ನಂಬುವವನಾಗಿದ್ದಾನೆ. ಮತ್ತು ನನ್ನನ್ನು ನೋಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನು ನೋಡುವವನಾಗಿದ್ದಾನೆ. ನನ್ನನ್ನು ನಂಬುವ ಒಬ್ಬನಾದರೂ ಕತ್ತಲೆಯಲ್ಲಿ ಇರಬಾರದೆಂದು ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ. ಯಾವನಾದರೂ ನನ್ನ ಮಾತುಗಳನ್ನು ಕೇಳಿದರೂ ಕೈಕೊಂಡು ನಡೆಯದೆ ಹೋದರೆ ನಾನೇ ಅವನಿಗೆ ತೀರ್ಪುಮಾಡುವದಿಲ್ಲ; ಲೋಕಕ್ಕೆ ತೀರ್ಪುಮಾಡುವದಕ್ಕಾಗಿ ನಾನು ಬಂದಿಲ್ಲ; ಲೋಕವನ್ನು ರಕ್ಷಿಸುವದಕ್ಕಾಗಿ ಬಂದಿದ್ದೇನೆ. ನನ್ನನ್ನು ಲಕ್ಷ್ಯಮಾಡದೆ ನನ್ನ ಮಾತುಗಳನ್ನು ಅಂಗೀಕರಿಸದೆ ಇರುವವನಿಗೆ ತೀರ್ಪುಮಾಡುವಂಥದು ಒಂದು ಇದೆ, ಅದು ಯಾವದಂದರೆ, ನಾನು ಆಡಿದ ಮಾತು; ಅದೇ ಅವನಿಗೆ ಕಡೇ ದಿನದಲ್ಲಿ ತೀರ್ಪುಮಾಡುವದು. ಯಾಕಂದರೆ ನನ್ನಷ್ಟಕ್ಕೆ ನಾನೇ ಮಾತಾಡಿದವನಲ್ಲ; ನನ್ನನ್ನು ಕಳುಹಿಸಿಕೊಟ್ಟ ತಂದೆಯೇ - ನೀನು ಇಂಥಿಂಥದನ್ನು ಹೇಳಬೇಕು, ಹೀಗೆ ಹೀಗೆ ಮಾತಾಡಬೇಕು ಎಂಬದಾಗಿ ನನಗೆ ಆಜ್ಞೆಕೊಟ್ಟಿದ್ದಾನೆ. ಆತನ ಆಜ್ಞೆ ನಿತ್ಯಜೀವವಾಗಿದೆ ಎಂದು ಬಲ್ಲೆನು. ಆದದರಿಂದ ನಾನು ಮಾತಾಡುವದನ್ನೆಲ್ಲಾ ತಂದೆ ನನಗೆ ಹೇಳಿದ ಮೇರೆಗೆ ಮಾತಾಡುತ್ತೇನೆ ಅಂದನು.
ಅಧ್ಯಾಯ 46
ಆಗ ಯೇಸು ಅವರ ಕೂಡ ಸಾಮ್ಯರೂಪವಾಗಿ ಮಾತಾಡುವದಕ್ಕೆ ತೊಡಗಿ ಆದರೆ ನಿಮಗೆ ಹೇಗೆ ತೋರುತ್ತದೆ? ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. ಅವನು ಮೊದಲನೆಯವನ ಬಳಿಗೆ ಬಂದು - ಮಗನೇ, ಹೋಗಿ ಈ ಹೊತ್ತು ದ್ರಾಕ್ಷೇತೋಟದಲ್ಲಿ ಕೆಲಸಮಾಡು ಅಂದಾಗ ಅವನು - ನಾನು ಹೋಗುವದಿಲ್ಲವೆಂದು ಹೇಳಿದಾಗ್ಯೂ ತರುವಾಯ ಪಶ್ಚಾತ್ತಾಪಪಟ್ಟು ತೋಟಕ್ಕೆ ಹೋದನು. ಆಮೇಲೆ ಎರಡನೆಯವನ ಬಳಿಗೆ ಬಂದು ಅದೇ ಮಾತನ್ನು ಹೇಳಿದಾಗ ಅವನು - ಹೋಗುತ್ತೇನಪ್ಪಾ ಅಂದಾಗ್ಯೂ ಹೋಗಲೇ ಇಲ್ಲ. ಅವರಿಬ್ಬರಲ್ಲಿ ತಂದೆಯ ಚಿತ್ತದಂತೆ ನಡೆದವನು ಯಾರು ಎಂದು ಕೇಳಿದ್ದಕ್ಕೆ ಅವರು - ಮೊದಲನೆಯವನೇ ಅಂದರು. ಆಗ ಯೇಸು ಅವರಿಗೆ - ಭ್ರಷ್ಟರೂ ಸೂಳೆಯರೂ ನಿಮಗಿಂತ ಮೊದಲು ದೇವರ ರಾಜ್ಯವನ್ನು ಸೇರುವರು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಯೋಹಾನನು ಧರ್ಮಮಾರ್ಗವನ್ನು ಬೋಧಿಸುವವನಾಗಿ ನಿಮ್ಮ ಬಳಿಗೆ ಬಂದನು, ನೀವು ಅವನನ್ನು ನಂಬಲಿಲ್ಲ; ಭ್ರಷ್ಟರೂ ಸೂಳೆಯರೂ ಅವನನ್ನು ನಂಬಿದರು; ನೀವು ಇದನ್ನು ನೋಡಿದಾಗ್ಯೂ ಪಶ್ಚಾತ್ತಾಪಪಡಲಿಲ್ಲ, ಅವನನ್ನು ನಂಬಲಿಲ್ಲ.
ಮತ್ತೊಂದು ಸಾಮ್ಯವನ್ನು ಕೇಳಿರಿ - ಒಬ್ಬ ಮನೆಯ ಯಜಮಾನನಿದ್ದನು. ಅವನು ಒಂದು ದ್ರಾಕ್ಷೇತೋಟವನ್ನು ಮಾಡಿ ಅದರ ಸುತ್ತಲೂ ಬೇಲಿಹಾಕಿಸಿ ಅದರಲ್ಲಿ ದ್ರಾಕ್ಷೆಯ ಆಲೆಯನ್ನು ಮಾಡಿಸಿ ಹೂಡೆಯನ್ನು ಕಟ್ಟಿಸಿ ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ಬೇರೊಂದು ದೇಶಕ್ಕೆ ಹೋದನು.ಫಲಕಾಲ ಬಂದಾಗ ದ್ರಾಕ್ಷೆಯ ತೋಟದ ಹಣ್ಣಿನ ಪಾಲನ್ನು ಆ ಒಕ್ಕಲಿಗರಿಂದ ತೆಗೆದುಕೊಂಡು ಬರುವದಕ್ಕಾಗಿ ಒಬ್ಬ ಆಳನ್ನು ಅವರ ಬಳಿಗೆ ಕಳುಹಿಸಿದನು. ಅವರು ಅವನನ್ನು ಹಿಡುಕೊಂಡು ಹೊಡೆದು ಬರಿಗೈಲಿ ಕಳುಹಿಸಿಬಿಟ್ಟರು. ಆ ಧಣಿಯು ತಿರಿಗಿ ಮತ್ತೊಬ್ಬ ಆಳನ್ನು ಅವರ ಬಳಿಗೆ ಕಳುಹಿಸಲು ಅವನನ್ನು ಅವರು ತಲೆತಲೆಯ ಮೇಲೆ ಹೊಡೆದು ಅಪಮಾನ ಪಡಿಸಿದರು.ಆಮೇಲೆ ಮೂರನೆಯವನನ್ನು ಕಳುಹಿಸಲು ಅವರು ಅವನನ್ನೂ ಗಾಯವಾಗುವಷ್ಟು ಹೊಡೆದು ಹೊರಕ್ಕೆ ಅಟ್ಟಿದರು.ಕಡೆಯಲ್ಲಿ ನನ್ನ ಮಗನಿಗಾದರೂ ಮರ್ಯಾದೆ ತೋರಿಸಾರು ಅಂದುಕೊಂಡು ತನ್ನ ಮಗನನ್ನು ಅವರ ಬಳಿಗೆ ಕಳುಹಿಸಿದನು. ಆದರೆ ಆ ಒಕ್ಕಲಿಗರು ಅವನ ಮಗನನ್ನು ಕಂಡು - ಇವನೇ ಬಾಧ್ಯಸ್ಥನು, ಬನ್ನಿ ಇವನನ್ನು ಕೊಂದುಹಾಕೋಣ, ಇವನ ಸ್ವಾಸ್ತ್ಯವನ್ನು ನಾವೇ ತೆಗೆದುಕೊಳ್ಳೋಣ ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡು ಅವನನ್ನು ಹಿಡಿದು ದ್ರಾಕ್ಷೇತೋಟದಿಂದ ಹೊರಕ್ಕೆ ದೊಬ್ಬಿ ಕೊಂದುಹಾಕಿದರು.
ಹಾಗಾದರೆ ದ್ರಾಕ್ಷೇತೋಟದ ಧಣಿಯು ಬಂದಾಗ ಆ ಒಕ್ಕಲಿಗರಿಗೆ ಏನು ಮಾಡುವನು ಅಂದನು. ಅವರು ಆತನಿಗೆ - ಆ ಕೆಡುಕರನ್ನು ಕ್ರೂರವಾಗಿ ಸಂಹರಿಸಿ ಕಾಲಕಾಲಕ್ಕೆ ಹಣ್ಣುಗಳನ್ನು ತನಗೆ ಸಲ್ಲಿಸುವಂಥ ಬೇರೆ ಒಕ್ಕಲಿಗರಿಗೆ ತನ್ನ ತೋಟವನ್ನು ವಾರಕ್ಕೆ ಕೊಡುವನು ಎಂದು ಹೇಳಿದರು. ಯೇಸು ಅವರಿಗೆ -ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಕರ್ತನಿಂದಲೇ ಆಯಿತು; ನಮಗೆ ಆಶ್ಚರ್ಯವಾಗಿ ತೋರುತ್ತದೆ ಎಂಬುವ ಮಾತನ್ನು ನೀವು ಶಾಸ್ತ್ರದಲ್ಲಿ ಎಂದಾದರೂ ಓದಲಿಲ್ಲವೋ? ಆದದರಿಂದ ದೇವರರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ ಕೊಡಲಾಗುವದು. ಇದನ್ನು ಜನರು ಕೇಳಿ - ಹಾಗಾಗಬಾರದು ಅಂದರು. ಆದರೆ ಆತನು ಅವರನ್ನು ದೃಷ್ಟಿಸಿ ನೋಡಿ – ಹಾಗಾದರೆ ಮನೇ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು ಎಂದು ಬರೆದಿರುವ ಮಾತೇನು? ಈ ಕಲ್ಲಿನ ಮೇಲೆ ಬೀಳುವ ಪ್ರತಿಯೊಬ್ಬನು ತುಂಡು ತುಂಡಾಗುವನು; ಇದು ಯಾರ ಮೇಲೆ ಬೀಳುವದೋ ಅವನನ್ನು ಪುಡಿ ಪುಡಿ ಮಾಡುವದು ಅಂದನು.ಮಹಾಯಾಜಕರೂ ಫರಿಸಾಯರೂ ಆತನ ಸಾಮ್ಯಗಳನ್ನು ಕೇಳಿ ತಮ್ಮನ್ನೇ ಕುರಿತು ಮಾತಾಡುತ್ತಾನೆಂದು ತಿಳುಕೊಂಡು ಆತನನ್ನು ಹಿಡಿಯುವದಕ್ಕೆ ಸಂದರ್ಭನೋಡುತ್ತಿದ್ದರು; ಆದರೆ ಜನರು ಆತನನ್ನು ಪ್ರವಾದಿಯೆಂದು ಎಣಿಸಿದ್ದರಿಂದ ಅವರಿಗೆ ಭಯಪಟ್ಟರು.
ಯೇಸು ಬೋಧನೆ ಮಾಡುತ್ತಾ ಇನ್ನೂ ಸಾಮ್ಯರೂಪವಾಗಿ ಅವರಿಗೆ ಹೇಳಿದ್ದೇನಂದರೆ - ಪರಲೋಕರಾಜ್ಯವು ಮಗನಿಗೆ ಮದುವೆಮಾಡಿದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ. ಅವನು ಮದುವೆಗೆ ಹೇಳಿಸಿಕೊಂಡವರನ್ನು ಕರೆಯುವದಕ್ಕೆ ತನ್ನ ಆಳುಗಳನ್ನು ಕಳುಹಿಸಲು ಬರುವದಕ್ಕೆ ಅವರಿಗೆ ಮನಸ್ಸಿರಲಿಲ್ಲ. ತಿರಿಗಿ ಬೇರೆ ಆಳುಗಳನ್ನು ಕರೆದು - ನೀವು ಊಟಕ್ಕೆ ಹೇಳಿಸಿಕೊಂಡವರ ಬಳಿಗೆ ಹೋಗಿ - ಇಗೋ, ಅಡಿಗೆ ಸಿದ್ಧವಾಗಿದೆ; ನನ್ನ ಹೋರಿಗಳನ್ನೂ ಕೊಬ್ಬಿದ ಪಶುಗಳನ್ನೂ ಕೊಯಿಸಿದ್ದೇನೆ; ಎಲ್ಲಾ ಸಿದ್ಧವಾಗಿದೆ; ಮದುವೆಯ ಊಟಕ್ಕೆ ಬನ್ನಿರೆಂಬದಾಗಿ ಅವರಿಗೆ ಹೇಳಿರೆಂದು ಅಪ್ಪಣೆ ಕೊಟ್ಟು ಕಳುಹಿಸಿದನು. ಆದರೆ ಅವರು ಅಲಕ್ಷ್ಯಮಾಡಿ ಒಬ್ಬನು ತನ್ನ ಹೊಲಕ್ಕೆ ಒಬ್ಬನು ತನ್ನ ವ್ಯಾಪಾರಕ್ಕೆ ಹೋಗಿಬಿಟ್ಟರು; ಉಳಿದವರು ಅವನ ಆಳುಗಳನ್ನು ಹಿಡಿದು ಬೈದು ಕೊಂದುಹಾಕಿದರು. ಅರಸನು ಸಿಟ್ಟುಗೊಂಡು ತನ್ನ ದಂಡುಗಳನ್ನು ಕಳುಹಿಸಿ ಆ ಕೊಲೆಗಾರರನ್ನು ನಾಶಮಾಡಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು. ಆಗ ತನ್ನ ಆಳುಗಳಿಗೆ - ಮದುವೆಗೆ ಸಿದ್ಧವಾಗಿದೆ ಸರಿ, ಆದರೆ ಕರೆಯಲ್ಪಟ್ಟವರು ಯೋಗ್ಯರಾಗಿರಲಿಲ್ಲ. ನೀವು ಈಗ ನಾಲ್ಕು ಹಾದಿಗಳು ಕೂಡುವ ಸ್ಥಳಗಳಿಗೆ ಹೋಗಿ ಕಂಡವರನ್ನೆಲ್ಲಾ ಮದುವೆಯ ಊಟಕ್ಕೆ ಕರೆಯಿರಿ ಎಂದು ಹೇಳಿದನು. ಆ ಆಳುಗಳು ಹಾದಿಗಳಿಗೆ ಹೋಗಿ ಕೆಟ್ಟವರು ಒಳ್ಳೆಯವರು ಅನ್ನದೆ ಕಂಡವರನ್ನೆಲ್ಲಾ ಕೂಡಿಸಿ ಕರಕೊಂಡು ಬಂದರು. ಹೀಗೆ ಮನೆತುಂಬ ಊಟಕ್ಕೆ ಕೂತರು. ಆಮೇಲೆ ಅರಸನು ಕೂತವರನ್ನು ನೋಡುವದಕ್ಕೆ ಒಳಕ್ಕೆ ಬರಲಾಗಿ ಮದುವೇಬಟ್ಟೆಯನ್ನು ಹಾಕಿಕೊಳ್ಳದ ಒಬ್ಬನನ್ನು ಕಂಡು ಅವನನ್ನು - ಏನಪ್ಪಾ, ಮದುವೆಯ ಬಟ್ಟೆ ಇಲ್ಲದೆ ನೀನಿಲ್ಲಿ ಹೇಗೆ ಒಳಕ್ಕೆ ಬಂದಿ ಎಂದು ಕೇಳಲು ಅವನು ಸುಮ್ಮನಿದ್ದನು. ಆಮೇಲೆ ಅರಸನು ಸೇವಕರಿಗೆ - ಅವನ ಕೈಕಾಲು ಕಟ್ಟಿ ಅವನನ್ನು ಹೊರಗೆ ಕತ್ತಲೆಗೆ ನೂಕಿರಿ ಎಂದು ಹೇಳಿದನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲುಕಡಿಯೋಣವೂ ಇರುವವು. ಹೀಗೆ ಕರೆಯಲ್ಪಟ್ಟವರು ಬಹು ಜನ, ಆಯಲ್ಪಟ್ಟವರು ಸ್ವಲ್ಪ ಜನ ಅಂದನು.
ಆಗ್ಗೆ ಫರಿಸಾಯರು ಹೊರಟು ಆತನನ್ನು ಮಾತಿನಲ್ಲಿ ಹೇಗೆ ಸಿಕ್ಕಿಸುವ ಎಂದು ಕೂಡಿ ಆಲೋಚಿಸಿಕೊಂಡು ಆತನ ಬಳಿಗೆ ತಮ್ಮ ಶಿಷ್ಯರನ್ನು ಹೆರೋದಿಯರ ಕೂಡ ಕಳುಹಿಸಿದರು. ಇವರು ಬಂದು - ಗುರುವೇ, ನೀನು ಸತ್ಯವಂತನು, ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವನು, ಯಾರಿಗೂ ಹೆದರದವನು; ನೀನು ಜನರ ಮುಖದಿಚ್ಫೆಗೆ ಮಾತಾಡುವವನಲ್ಲ ಎಂದು ಬಲ್ಲೆವು. ಹೀಗಿರಲಾಗಿ ಕೈಸರನಿಗೆ ತೆರಿಗೆ ಕೊಡುವದು ಸರಿಯೋ ಸರಿಯಲ್ಲವೋ? ನಿನಗೆ ಹೇಗೆ ತೋರುತ್ತದೆ? ನಮಗೆ ಹೇಳು ಅಂದರು. ಯೇಸು ಅವರ ಕೆಡುಕನ್ನು ಅರಿತುಕೊಂಡವನಾಗಿ - ಕಪಟಿಗಳೇ, ನನ್ನನ್ನು ಯಾಕೆ ಪರೀಕ್ಷೆಮಾಡುತ್ತೀರಿ? ತೆರಿಗೆಗೆ ಕೊಡುವ ನಾಣ್ಯವನ್ನು ನನಗೆ ತೋರಿಸಿರಿ ಅನ್ನಲು ಅವರು ಆತನಿಗೆ ಒಂದು ಹಣವನ್ನು ತಂದುಕೊಟ್ಟರು. ಆತನು - ಈ ತಲೆಯೂ ಈ ಮುದ್ರೆಯೂ ಯಾರದು ಎಂದು ಕೇಳಿದ್ದಕ್ಕೆ ಅವರು - ಕೈಸರನದು ಅಂದರು. ಆಗ ಆತನು ಅವರಿಗೆ - ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ ಎಂದು ಹೇಳಿದನು. ಆತನ ಮಾತಿನಲ್ಲಿ ಅವರು ಜನರ ಮುಂದೆ ಏನೂ ಹಿಡಿಯಲಾರದೆ ಆತನು ಕೊಟ್ಟ ಉತ್ತರಕ್ಕೆ ಆಶ್ಚರ್ಯಪಟ್ಟು ಸುಮ್ಮಗಾದರು.
ಅಧ್ಯಾಯ 47
ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವವರಾದ ಸದ್ದುಕಾಯರಲ್ಲಿ ಕೆಲವರು ಬಂದು ಆತನಿಗೆ ಪ್ರಶ್ನೆಮಾಡಿದ್ದೇನಂದರೆ - ಬೋಧಕನೇ, ಅಣ್ಣನಾದವನು ಹೆಂಡತಿಯುಳ್ಳವನಾಗಿದ್ದು ಮಕ್ಕಳಿಲ್ಲದೆ ಸತ್ತರೆ ಅವನ ತಮ್ಮನು ಆಕೆಯನ್ನು ಮದುವೆ ಮಾಡಿಕೊಂಡು ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ನಮಗೆ ಬರೆದಿಟ್ಟನಷ್ಟೆ. ಒಳ್ಳೇದು, ಏಳು ಮಂದಿ ಅಣ್ಣತಮ್ಮಂದಿರಿದ್ದರು. ಮೊದಲನೆಯವನು ಹೆಂಡತಿಯನ್ನು ಮಾಡಿಕೊಂಡು ಮಕ್ಕಳಿಲ್ಲದೆ ಸತ್ತನು. -ಎರಡನೆಯವನೂ ಅವನ ತರುವಾಯ ಮೂರನೆಯವನೂ ಆಕೆಯನ್ನು ಮದುವೆಮಾಡಿಕೊಂಡರು. ಇದೇ ರೀತಿಯಾಗಿ ಏಳು ಮಂದಿಯೂ ಮಾಡಿಕೊಂಡು ಮಕ್ಕಳಿಲ್ಲದೆ ಸತ್ತರು. ಪುನರುತ್ಥಾನದಲ್ಲಿ ಆಕೆ ಯಾರ ಹೆಂಡತಿಯಾಗಿರುವಳು? ಆಕೆಯನ್ನು ಏಳುಮಂದಿಯೂ ಮದುವೆ ಮಾಡಿಕೊಂಡಿದ್ದರಲ್ಲಾ ಅಂದರು. ಯೇಸು ಅವರಿಗೆ - ನೀವು ಶಾಸ್ತ್ರವನ್ನಾದರೂ ದೇವರ ಶಕ್ತಿಯನ್ನಾದರೂ ತಿಳಿಯದಿರುವದರಿಂದಲೇ ತಪ್ಪುವವರಾಗಿದ್ದೀರಲ್ಲವೆ. ಈ ಲೋಕದ ಜನರು ಮದುವೆಮಾಡಿಕೊಳ್ಳುತ್ತಾರೆ, ಮದುವೆಮಾಡಿಕೊಡುತ್ತಾರೆ; ಆದರೆ ಆ ಲೋಕವನ್ನೂ ಸತ್ತವರೊಳಗಿಂದ ಪುನರುತ್ಥಾನವನ್ನೂ ಪಡೆಯುವದಕ್ಕೆ ಯೋಗ್ಯರೆನಿಸಿಕೊಂಡಿರುವವರು ಮದುವೆ ಮಾಡಿಕೊಳ್ಳುವದೂ ಇಲ್ಲ, ಮಾಡಿಕೊಡುವದೂ ಇಲ್ಲ. ಅವರು ಇನ್ನು ಮರಣಕ್ಕೆ ಗುರಿಯಾಗುವದೇ ಇಲ್ಲ. ಪುನರುತ್ಥಾನವನ್ನು ಹೊಂದಿದವರಾಗಿದ್ದು ದೇವದೂತರಿಗೆ ಸರಿಸಮಾನರೂ ದೇವರ ಮಕ್ಕಳೂ ಆಗಿದ್ದಾರೆ. ಆದರೆ ಸತ್ತವರು ಬದುಕಿ ಏಳುತ್ತಾರೆಂಬ ವಿಷಯದಲ್ಲಿ ಹೇಳಬೇಕಾದರೆ - ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಎಂದು ದೇವರು ಮೋಶೆಗೆ ನುಡಿದದ್ದನ್ನು ನೀವು ಮೋಶೆಯ ಗ್ರಂಥದಲ್ಲಿ ಪೊದೆಯ ಸಂಗತಿಯಿರುವ ಅಧ್ಯಾಯದಲ್ಲಿ ಓದಲಿಲ್ಲವೇ? ಆತನು ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ; ನೀವು ಹಿಡಿದ ಅಭಿಪ್ರಾಯವು ಬಹು ತಪ್ಪಾಗಿದೆ ಎಂದು ಹೇಳಿದನು.ಶಾಸ್ತ್ರಿಗಳಲ್ಲಿ ಕೆಲವರು - ಬೋಧಕನೇ, ಚೆನ್ನಾಗಿ ಹೇಳಿದಿ ಅಂದರು. ಜನರು ಅದನ್ನು ಕೇಳಿ ಆತನ ಬೋಧನೆಗೆ ಅತ್ಯಾಶ್ಚರ್ಯಪಟ್ಟರು.
ಆತನು ಸದ್ದುಕಾಯರ ಬಾಯಿ ಕಟ್ಟಿದನೆಂದು ಫರಿಸಾಯರು ಕೇಳಿ ಅಲ್ಲಿಗೆ ಕೂಡಿಬಂದರು. ಶಾಸ್ತ್ರಿಗಳಲ್ಲಿ ಒಬ್ಬನು ಅವರ ತರ್ಕವನ್ನು ಕೇಳಿ ಯೇಸು ಅವರಿಗೆ ಒಳ್ಳೆಯ ಉತ್ತರ ಕೊಟ್ಟನೆಂದು ತಿಳಿದು ಹತ್ತಿರಕ್ಕೆ ಬಂದು - ಎಲ್ಲಾ ಆಜ್ಞೆಗಳಲ್ಲಿ ಮೊದಲನೆಯದು ಯಾವದು ಎಂದು ಆತನನ್ನು ಕೇಳಿದ್ದಕ್ಕೆ ಯೇಸು - ಇಸ್ರಾಯೇಲ್ ಜನವೇ ಕೇಳು, ನಮ್ಮ ದೇವರಾದ ಕರ್ತನು ಒಬ್ಬನೇ ದೇವರು; ನಿನ್ನ ದೇವರಾದ ಕರ್ತನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು ಎಂಬದೇ ಮೊದಲನೆಯ ಆಜ್ಞೆ;ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಒಂದು ಉಂಟು,ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ ಎರಡನೆಯ ಆಜ್ಞೆ; ಇವುಗಳಿಗಿಂತ ಹೆಚ್ಚಿನ ಆಜ್ಞೆ ಮತ್ತೊಂದಿಲ್ಲಈ ಎರಡು ಆಜ್ಞೆಗಳು ಎಲ್ಲಾ ಧರ್ಮಶಾಸ್ತ್ರಕ್ಕೂ ಪ್ರವಾದನಗ್ರಂಥಕ್ಕೂ ಆಧಾರವಾಗಿವೆ ಎಂದು ಹೇಳಿದನು.ಆಗ ಆ ಶಾಸ್ತ್ರಿಯು - ಬೋಧಕನೇ, ಚೆನ್ನಾಗಿ ಹೇಳಿದೆ; ಒಬ್ಬನೇ ಇದ್ದಾನೆ, ಆತನ ಹೊರತು ಮತ್ತೊಬ್ಬ ದೇವರಿಲ್ಲ ಎಂದು ನೀನು ಹೇಳಿದ್ದು ಸತ್ಯ. ಆತನನ್ನು ಪೂರ್ಣಮನಸ್ಸಿನಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸುವದು ಮತ್ತು ತನ್ನನ್ನು ಪ್ರೀತಿಸಿಕೊಳ್ಳುವಂತೆ ತನ್ನ ನೆರೆಯವನನ್ನು ಪ್ರೀತಿಸುವದು ಇವೆರಡೂ ಎಲ್ಲಾ ಸರ್ವಾಂಗಹೋಮಗಳಿಗಿಂತಲೂ ಎಲ್ಲಾ ಯಜ್ಞಗಳಿಗಿಂತಲೂ ಹೆಚ್ಚಿನವು ಅಂದನು. ಅವನು ಬುದ್ಧಿಯಿಂದ ಉತ್ತರಕೊಟ್ಟದ್ದನ್ನು ಯೇಸು ಕಂಡು - ನೀನು ದೇವರ ರಾಜ್ಯಕ್ಕೆ ದೂರವಾದವನಲ್ಲ ಅಂದನು. ಅಂದಿನಿಂದ ಆತನನ್ನು ಪ್ರಶ್ನೆಮಾಡುವದಕ್ಕೆ ಯಾರಿಗೂ ಧೈರ್ಯವಿರಲಿಲ್ಲ.
ಫರಿಸಾಯರು ಕೂಡಿಬಂದಿರುವಾಗ ಯೇಸು ಅವರಿಗೆ - ಬರಬೇಕಾದ ಕ್ರಿಸ್ತನ ವಿಷಯವಾಗಿ ನಿಮಗೆ ಹೇಗೆ ತೋರುತ್ತದೆ? ಆತನು ಯಾರ ಮಗನು? ಎಂದು ಪ್ರಶ್ನೆಹಾಕಿದ್ದಕ್ಕೆ ಅವರು ಆತನಿಗೆ – - ,ದಾವೀದನ ಮಗನು ಎಂದು ಹೇಳಲು -ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳಿಗೆ ಪೀಠವಾಗ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ಕರ್ತನು ನನ್ನ ಒಡೆಯನಿಗೆ ನುಡಿದನುಎಂಬದಾಗಿ ಕೀರ್ತನಗ್ರಂಥದಲ್ಲಿ ದಾವೀದನೇ ಹೇಳುತ್ತಾನಷ್ಟೆ. ದಾವೀದನು ಆತನನ್ನು ಒಡೆಯನೆಂದು ಹೇಳಿದ ಮೇಲೆ ಆತನು ಅವನಿಗೆ ಮಗನಾಗುವದು ಹೇಗೆ ಎಂದು ಅವರನ್ನು ಕೇಳಿದನು.ಅದಕ್ಕೆ ಉತ್ತರವಾಗಿ ಯಾರೂ ಒಂದು ಮಾತಾದರೂ ಆತನಿಗೆ ಹೇಳಲಾರದೆ ಹೋದರು. ಇದಲ್ಲದೆ ಅಂದಿನಿಂದ ಆತನನ್ನು ಇನ್ನೇನಾದರೂ ಕೇಳುವದಕ್ಕೆ ಯಾರಿಗೂ ಧೈರ್ಯ ಹುಟ್ಟಲಿಲ್ಲ.ಸಾಧಾರಣ ಜನರು ಆತನ ಮಾತನ್ನು ಸಂತೋಷದಿಂದ ಕೇಳುತ್ತಿದ್ದರು.
ಆತನು ಮಾತಾಡುತ್ತಿರುವಾಗ ಒಬ್ಬ ಫರಿಸಾಯನು ಆತನನ್ನು ಊಟಕ್ಕೆ ಬರಬೇಕೆಂದು ಕೇಳಿಕೊಳ್ಳಲು ಆತನು ಒಳಕ್ಕೆ ಹೋಗಿ ಊಟಕ್ಕೆ ಕೂತುಕೊಂಡನು. ಆತನು ತೊಳಕೊಳ್ಳದೆ ಊಟಕ್ಕೆ ಕೂತದ್ದನ್ನು ಆ ಫರಿಸಾಯನು ಕಂಡು ಆಶ್ಚರ್ಯಪಟ್ಟನು. ಸ್ವಾವಿುಯು ಅವನಿಗೆ - ಫರಿಸಾಯರಾದ ನೀವು ಪಂಚಪಾತ್ರೆ ಬಟ್ಟಲು ಇವುಗಳ ಹೊರ ಭಾಗವನ್ನು ಶುಚಿಮಾಡುತ್ತೀರಿ ಸರಿ; ಆದರೆ ನಿಮ್ಮ ಒಳಭಾಗವು ಸುಲಿಗೆಯಿಂದಲೂ ಕೆಟ್ಟತನದಿಂದಲೂ ತುಂಬಿರುತ್ತದೆ. ಬುದ್ಧಿಯಿಲ್ಲದವರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನೂ ಮಾಡಿದನಲ್ಲವೇ. ಹೇಗೂ ಒಳಗಿರುವಂಥದನ್ನು ದಾನಾಕೊಡಿರಿ; ಆಗ ಸಕಲವೂ ನಿಮಗೆ ಶುದ್ಧವಾಗಿರುವದು. ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಮರುಗ ಸೋಪು ಜೀರಿಗೆಗಳಲ್ಲಿ ಹತ್ತರಲ್ಲೊಂದು ಪಾಲುಕೊಡುತ್ತೀರಿ ಸರಿ, ಆದರೆ ಧರ್ಮಶಾಸ್ತ್ರದಲ್ಲಿ ಗೌರವವಾದದ್ದನ್ನು, ಅಂದರೆ ನ್ಯಾಯವನ್ನೂ ಕರುಣೆಯನ್ನೂ ನಂಬಿಕೆಯನ್ನೂ ಬಿಟ್ಟುಬಿಟ್ಟಿರಿ. ಇವುಗಳನ್ನು ಮಾಡಬೇಕಾಗಿತ್ತು; ಅವುಗಳನ್ನೂ ಬಿಡಬಾರದು. ದಾರಿತೋರಿಸುವ ಕುರುಡರೇ, ನೀವು ಸೊಳ್ಳೇ ಸೋಸುವವರು, ಒಂಟೇ ನುಂಗುವವರು.ಅಯ್ಯೋ ಫರಿಸಾಯರೇ, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳೂ ಅಂಗಡಿ ಬೀದಿಗಳಲ್ಲಿ ನಮಸ್ಕಾರಗಳೂ ನಿಮಗೆ ಇಷ್ಟ. ನಿಮ್ಮ ಗತಿಯನ್ನು ಏನು ಹೇಳಲಿ; ನೆಲಸಮವಾದ ಸಮಾಧಿಗಳ ಹಾಗಿದ್ದೀರಿ; ಅವುಗಳ ಮೇಲೆ ತಿರುಗಾಡುವ ಜನರಿಗೆ ಇವು ಸಮಾಧಿಗಳೆಂದು ತಿಳಿಯದು ಎಂದು ಹೇಳಿದನು.
ಇದನ್ನು ಕೇಳಿ ಒಬ್ಬ ಧರ್ಮೋಪದೇಶಕನು ಆತನಿಗೆ - ಬೋಧಕನೇ, ಈ ಮಾತುಗಳನ್ನು ಹೇಳುವದರಿಂದ ನಮ್ಮನ್ನೂ ನಿಂದಿಸಿದ ಹಾಗಾಯಿತು ಎಂದು ಹೇಳಲು ಆತನು - ಧರ್ಮೋಪದೇಶಕರೇ, ನಿಮ್ಮ ಗತಿಯನ್ನೂ ಏನು ಹೇಳಲಿ? ನೀವು ಜನರ ಮೇಲೆ ಹೊರಲಾರದ ಹೊರೆಗಳನ್ನು ಹೊರಿಸುತ್ತೀರಿ; ನೀವಾದರೋ ಆ ಹೊರೆಗಳನ್ನು ಒಂದು ಬೆರಳಿನಿಂದಲೂ ಮುಟ್ಟುವದಿಲ್ಲ. ಅಯ್ಯೋ ಧರ್ಮೋಪದೇಶಕರೇ, ಜ್ಞಾನಕ್ಕೆ ಸಾಧನವಾದ ಬೀಗದ ಕೈಯನ್ನು ತೆಗೆದುಬಿಟ್ಟಿರಿ. ನೀವೂ ಒಳಕ್ಕೆ ಹೋಗಲಿಲ್ಲ; ಒಳಕ್ಕೆ ಹೋಗುತ್ತಿರುವವರಿಗೂ ಅಡ್ಡಿಮಾಡಿದಿರಿ ಅಂದನು. ಜನರೆಲ್ಲರು ಕೇಳುತ್ತಿರುವಲ್ಲಿ ಆತನು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ - ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಾಗಿರ್ರಿ. ಅವರು ನಿಲುವಂಗಿಗಳನ್ನು ತೊಟ್ಟುಕೊಂಡು ತಿರುಗಾಡುವದರಲ್ಲಿ ಮನಸ್ಸುಳ್ಳವರೂ, ಅಂಗಡಿಬೀದಿಗಳಲ್ಲಿ ನಮಸ್ಕಾರಗಳು, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳು, ಔತಣಪ್ರಸ್ತಗಳಲ್ಲಿ ಪ್ರಥಮಸ್ಥಾನ, ಇವುಗಳಲ್ಲಿ ಇಷ್ಟವುಳ್ಳವರೂ ಆಗಿದ್ದಾರೆ. ಅವರು ವಿಧವೆಯರ ಮನೆಗಳನ್ನು ನುಂಗಿ ನಟನೆಗಾಗಿ ದೇವರಿಗೆ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ; ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು ಅಂದನು.
ಅಧ್ಯಾಯ 48
ತರುವಾಯ ಯೇಸು ಜನರ ಗುಂಪಿಗೂ ತನ್ನ ಶಿಷ್ಯರಿಗೂ ಹೇಳಿದ್ದೇನಂದರೆ - ಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಪೀಠದಲ್ಲಿ ಕೂತುಕೊಂಡಿದ್ದಾರೆ; ಆದದರಿಂದ ಅವರು ನಿಮಗೆ ಏನೇನು ಹೇಳುತ್ತಾರೋ ಅದನ್ನೆಲ್ಲಾ ಮಾಡಿರಿ, ಕಾಪಾಡಿಕೊಳ್ಳಿರಿ; ಆದರೆ ಅವರ ನಡತೆಯ ಪ್ರಕಾರ ನಡೆಯಬೇಡಿರಿ; ಅವರು ಹೇಳುತ್ತಾರೇ ಹೊರತು ನಡೆಯುವದಿಲ್ಲ.ಅವರು ತಮ್ಮ ಕೆಲಸಗಳನ್ನೆಲ್ಲಾ ಜನರಿಗೆ ಕಾಣಬೇಕೆಂದು ಮಾಡುತ್ತಾರೆ. ತಾವು ಕಟ್ಟಿಕೊಳ್ಳುವ ಜ್ಞಾಪಕ ಪಟ್ಟಿಗಳನ್ನು ಅಗಲಮಾಡುತ್ತಾರೆ, ಗೊಂಡೆಗಳನ್ನು ಉದ್ದಮಾಡುತ್ತಾರೆ. ಇದಲ್ಲದೆ ಔತಣಪ್ರಸ್ತಗಳಲ್ಲಿ ಪ್ರಥಮಸ್ಥಾನ, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳು, ಅಂಗಡೀ ಬೀದಿಗಳಲ್ಲಿ ನಮಸ್ಕಾರಗಳು, ಜನರಿಂದ ಬೋಧಕರನ್ನಿಸಿಕೊಳ್ಳುವದು, ಇವುಗಳೇ ಅವರಿಗೆ ಇಷ್ಟ. ಆದರೆ ನೀವು ಬೋಧಕರನ್ನಿಸಿಕೊಳ್ಳಬೇಡಿರಿ; ಒಬ್ಬನೇ ನಿಮ್ಮ ಬೋಧಕನು, ನೀವೆಲ್ಲರು ಸಹೋದರರು. ಇದಲ್ಲದೆ ಭೂಲೋಕದಲ್ಲಿ ಯಾರನ್ನೂ ನಮ್ಮ ತಂದೆ ಎಂದು ಕರೆಯಬೇಡಿರಿ; ಪರಲೋಕದಲ್ಲಿರುವಾತನೊಬ್ಬನೇ ನಿಮಗೆ ತಂದೆ. ಮತ್ತು ಗುರುಗಳು ಅನ್ನಿಸಿಕೊಳ್ಳಬೇಡಿರಿ; ಕ್ರಿಸ್ತನೊಬ್ಬನೇ ನಿಮಗೆ ಗುರುವು. ನಿಮ್ಮಲ್ಲಿ ಹೆಚ್ಚಿನವನು ನಿಮ್ಮ ಸೇವಕನಾಗಿರಬೇಕು. ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.
ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ಪರಲೋಕರಾಜ್ಯದ ಬಾಗಲನ್ನು ಮನುಷ್ಯರ ಎದುರಿಗೆ ಮುಚ್ಚಿಬಿಡುತ್ತೀರಿ; ನೀವಂತೂ ಒಳಕ್ಕೆ ಹೋಗುವದಿಲ್ಲ, ಒಳಕ್ಕೆ ಹೋಗಬೇಕೆಂದಿರುವವರನ್ನೂ ಹೋಗಗೊಡಿಸುವದಿಲ್ಲ.ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಒಬ್ಬನನ್ನು ನಿಮ್ಮ ಮತದಲ್ಲಿ ಸೇರಿಸಿಕೊಳ್ಳುವದಕ್ಕಾಗಿ ಭೂವಿುಯನ್ನೂ ಸಮುದ್ರವನ್ನೂ ಸುತ್ತಿಕೊಂಡು ಬರುತ್ತೀರಿ; ಅವನು ಸೇರಿದ ಮೇಲೆ ಅವನನ್ನು ನಿಮಗಿಂತ ಎರಡರಷ್ಟಾಗಿ ನರಕ ಪಾತ್ರನಾಗಮಾಡುತ್ತೀರಿ. ಅಯ್ಯೋ, ದಾರಿತೋರಿಸುವ ಕುರುಡರೇ, ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟುಕೊಂಡರೆ ಅದೇನು ಆಣೆಯಲ್ಲ. ಆದರೆ ಒಬ್ಬನು ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟುಕೊಂಡರೆ ಅದನ್ನು ನಡಿಸಲೇಬೇಕು ಎಂದು ನೀವು ಹೇಳುತ್ತೀರಿ. ಹುಚ್ಚರೇ, ಕುರುಡರೇ, ಯಾವದು ಹೆಚ್ಚಿನದು? ಚಿನ್ನವೋ, ಚಿನ್ನವನ್ನು ಪಾವನ ಮಾಡುವ ದೇವಾಲಯವೋ? ಒಬ್ಬನು ಯಜ್ಞವೇದಿಯ ಮೇಲೆ ಆಣೆಯಿಟ್ಟುಕೊಂಡರೆ ಅದೇನು ಆಣೆಯಲ್ಲ, ಆದರೆ ಅದರಲ್ಲಿರುವ ಕಾಣಿಕೆಯ ಮೇಲೆ ಆಣೆಯಿಟ್ಟುಕೊಂಡರೆ ಅದನ್ನು ನಡಿಸಲೇಬೇಕು ಎಂದು ಹೇಳುತ್ತೀರಿ. ಕುರುಡರೇ, ಯಾವದು ಹೆಚ್ಚಿನದು? ಕಾಣಿಕೆಯೋ, ಆ ಕಾಣಿಕೆಯನ್ನು ಪಾವನ ಮಾಡುವ ಯಜ್ಞವೇದಿಯೋ? ಹೀಗಿರುವದರಿಂದ ಯಜ್ಞವೇದಿಯ ಮೇಲೆ ಆಣೆಯಿಟ್ಟುಕೊಂಡರೆ ಅದರ ಮೇಲೆಯೂ ಅದರಲ್ಲಿರುವ ಎಲ್ಲಾದರ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು. ದೇವಾಲಯದ ಮೇಲೆ ಆಣೆಯಿಟ್ಟುಕೊಂಡರೆ ಅದರ ಮೇಲೆಯೂ ಅದರಲ್ಲಿ ವಾಸಮಾಡುವಾತನ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು. ಪರಲೋಕದ ಮೇಲೆ ಆಣೆಯಿಟ್ಟುಕೊಂಡರೆ ದೇವರ ಸಿಂಹಾಸನದ ಮೇಲೆಯೂ ಅದರಲ್ಲಿ ಕೂತಿರುವಾತನ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು.
ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಪಂಚಪಾತ್ರೆ ಬಟ್ಟಲು ಇವುಗಳ ಹೊರಭಾಗವನ್ನು ಶುಚಿಮಾಡುತ್ತೀರಿ; ಆದರೆ ಅವು ಒಳಗೆ ಸುಲುಕೊಂಡವುಗಳಿಂದಲೂ ಇಹಭೋಗ ಪದಾರ್ಥಗಳಿಂದಲೂ ತುಂಬಿರುತ್ತವೆ. ಕುರುಡನಾದ ಫರಿಸಾಯನೇ, ಮೊದಲು ಪಂಚಪಾತ್ರೆ ಬಟ್ಟಲುಗಳ ಒಳಭಾಗವನ್ನು ಶುಚಿಮಾಡು. ಆಗ ಅವುಗಳ ಹೊರಭಾಗವೂ ಶುಚಿಯಾಗುವದು.ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಸುಣ್ಣಾ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ; ಇವು ಹೊರಗೆ ಚಂದವಾಗಿ ಕಾಣುತ್ತವೆ. ಒಳಗೆ ನೋಡಿದರೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ ತುಂಬಿರುತ್ತವೆ. ಹಾಗೆಯೇ ನೀವು ಸಹ ಹೊರಗೆ ಜನರಿಗೆ ಸತ್ಪುರುಷರಂತೆ ಕಾಣಿಸಿಕೊಳ್ಳುತ್ತೀರಿ ಸರಿ, ಆದರೆ ಒಳಗೆ ಕಪಟದಿಂದಲೂ ಅನ್ಯಾಯದಿಂದಲೂ ತುಂಬಿದವರಾಗಿದ್ದೀರಿ.
ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟಿ, ನೀತಿವಂತರ ಗೋರಿಗಳನ್ನು ಅಲಂಕರಿಸಿ - ನಾವು ನಮ್ಮ ಹಿರಿಯರ ಕಾಲದಲ್ಲಿ ಇರುತ್ತಿದ್ದರೆ ಪ್ರವಾದಿಗಳನ್ನು ಕೊಂದ ಪಾಪದಲ್ಲಿ ಪಾಲುಗಾರರಾಗುತ್ತಿರಲಿಲ್ಲ ಅನ್ನುತ್ತೀರಿ.ಅವರನ್ನು ಕೊಂದವರು ನಿಮ್ಮ ಪಿತೃಗಳೇ. ಹೀಗಿರುವದರಿಂದ ನಿಮ್ಮ ಪಿತೃಗಳು ಮಾಡಿದ್ದಕ್ಕೆ ನೀವೇ ಸಾಕ್ಷಿಗಳಾಗಿರುವದಲ್ಲದೆ ಅವರ ಕೃತ್ಯಗಳಿಗೆ ಒಪ್ಪಿಕೊಂಡ ಹಾಗಾಯಿತು. ಹೇಗಂದರೆ ಅವರು ಪ್ರವಾದಿಗಳನ್ನು ಕೊಂದರು, ನೀವು ಗೋರಿಗಳನ್ನೇ ಕಟ್ಟುತ್ತೀರಿ.ಹಾಗಾದರೆ ನೀವು ಪ್ರವಾದಿಗಳನ್ನು ಕೊಂದವರ ಮಕ್ಕಳೇ ಹೌದು ಎಂಬದಕ್ಕೆ ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ. ಒಳ್ಳೇದು, ನೀವು ನಿಮ್ಮ ಹಿರಿಯರ ಪಾಪದ ಅಳತೆಯನ್ನು ಪೂರ್ತಿಮಾಡಿರಿ. ಹಾವುಗಳೇ, ಸರ್ಪಜಾತಿಯವರೇ, ನರಕದಂಡನೆಗೆ ಹೇಗೆ ತಪ್ಪಿಸಿಕೊಂಡೀರಿ? ಆದದರಿಂದ ನೋಡಿರಿ, ನಾನು ನಿಮ್ಮ ಬಳಿಗೆ ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಶಾಸ್ತ್ರಿಗಳನ್ನೂ ಕಳುಹಿಸುತ್ತೇನೆ; ಅವರಲ್ಲಿ ಕೆಲವರನ್ನು ಕೊಲ್ಲುವಿರಿ, ಶಿಲುಬೆಗೆ ಹಾಕುವಿರಿ; ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆದು ಊರಿಂದ ಊರಿಗೆ ಅಟ್ಟಿಕೊಂಡು ಹೋಗುವಿರಿ. ಆದದರಿಂದ ನೋಡಿರಿ, ನಾನು ನಿಮ್ಮ ಬಳಿಗೆ ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಶಾಸ್ತ್ರಿಗಳನ್ನೂ ಕಳುಹಿಸುತ್ತೇನೆ; ಅವರಲ್ಲಿ ಕೆಲವರನ್ನು ಕೊಲ್ಲುವಿರಿ, ಶಿಲುಬೆಗೆ ಹಾಕುವಿರಿ; ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆದು ಊರಿಂದ ಊರಿಗೆ ಅಟ್ಟಿಕೊಂಡು ಹೋಗುವಿರಿ.
ಹೀಗೆ ನೀತಿವಂತನಾದ ಹೇಬೆಲನ ರಕ್ತವು ಮೊದಲುಗೊಂಡು ನೀವು ದೇವಾಲಯಕ್ಕೂ ಯಜ್ಞವೇದಿಗೂ ನಡುವೆ ಕೊಂದುಹಾಕಿದ ಬರಕೀಯನ ಮಗನಾದ ಜಕರೀಯನ ರಕ್ತದವರೆಗೂ ಭೂವಿುಯ ಮೇಲೆ ಸುರಿಸಲ್ಪಟ್ಟ ಎಲ್ಲಾ ನೀತಿವಂತರ ರಕ್ತದಿಂದುಂಟಾಗುವ ಅಪರಾಧವು ನಿಮ್ಮ ತಲೆಯ ಮೇಲೆ ಬರುವದು. ಅದೆಲ್ಲಾ ಈ ಸಂತತಿಯವರ ಮೇಲೆ ಬರುವದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.ಹೀಗೆ ಲೋಕಾದಿಯಿಂದ ಹೇಬೆಲನ ರಕ್ತವು ಮೊದಲುಗೊಂಡು ಯಜ್ಞವೇದಿಗೂ ದೇವಾಲಯಕ್ಕೂ ನಡುವೆ ಹತವಾದ ಜಕರೀಯನ ರಕ್ತದವರೆಗೂ ಸುರಿಸಲ್ಪಟ್ಟ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಈ ಸಂತತಿಯವರು ಉತ್ತರಕೊಡಬೇಕು ಎಂಬದೇ; ಹೌದು, ಈ ಸಂತತಿಯವರೇ ಉತ್ತರಕೊಡಬೇಕೆಂದು ನಿಮಗೆ ಹೇಳುತ್ತೇನೆ.ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳ ಪ್ರಾಣತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು. ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ. ಈಗಿನಿಂದ - ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ ಎಂದು ನೀವು ಹೇಳುವ ತನಕ ನೀವು ನನ್ನನ್ನು ನೋಡುವದೇ ಇಲ್ಲವೆಂದು ನಿಮಗೆ ಹೇಳುತ್ತೇನೆ ಅಂದನು.
ಅಧ್ಯಾಯ 49
ಯೇಸು ಬೊಕ್ಕಸದ ಮನೆಗೆ ಎದುರಾಗಿ ಕೂತುಕೊಂಡು ಜನರು ಬೊಕ್ಕಸದಲ್ಲಿ ಹಣ ಹಾಕುವದನ್ನು ನೋಡುತ್ತಿದ್ದನು. ಅನೇಕ ಮಂದಿ ಐಶ್ವರ್ಯವಂತರು ಬಹಳ ಬಹಳ ಹಾಕುತ್ತಿರಲು ಒಬ್ಬ ಬಡ ವಿಧವೆಯು ಬಂದು ಎರಡು ಕಾಸು ಅಂದರೆ ಒಂದು ದುಗ್ಗಾಣಿ ಹಾಕಿದಳು. ಆಗ ಆತನು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು - ನಿಮಗೆ ನಿಜವಾಗಿ ಹೇಳುತ್ತೇನೆ, ಬೊಕ್ಕಸದಲ್ಲಿ ಹಾಕಿದವರೆಲ್ಲರಲ್ಲಿ ಈ ಬಡ ವಿಧವೆ ಹೆಚ್ಚು ಹಾಕಿದ್ದಾಳೆ. ಹೇಗೆಂದರೆ ಎಲ್ಲರು ತಮಗೆ ಸಾಕಾಗಿ ವಿುಕ್ಕದ್ದರಲ್ಲಿ ಹಾಕಿದರು; ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಹಾಕಿದಳು, ತನ್ನ ಜೀವನವನ್ನೇ ಕೊಟ್ಟುಬಿಟ್ಟಳು ಅಂದನು.
ಆಮೇಲೆ ಯೇಸು ದೇವಾಲಯದಿಂದ ಹೊರಟು ಹೋಗುತ್ತಿರಲು ಆತನ ಶಿಷ್ಯರು ಆತನಿಗೆ ದೇವಾಲಯದ ಕಟ್ಟಣಗಳನ್ನು ತೋರಿಸುವದಕ್ಕೆ ಹತ್ತರಕ್ಕೆ ಬಂದರು. ಗುರುವೇ, ನೋಡು, ಎಂಥಾ ಕಲ್ಲುಗಳು! ಎಂಥಾ ಕಟ್ಟಣಗಳು! ಎಂದು ಹೇಳಿದನು.ಅದು ಅಂದವಾದ ಕಲ್ಲುಗಳಿಂದಲೂ ಹರಕೆಯ ಒಡವೆಗಳಿಂದಲೂ ಅಲಂಕಾರವಾಗಿದೆ ಎಂದು ಹೇಳುತ್ತಿರುವಾಗಆಗ ಆತನು - ಇವುಗಳನ್ನೆಲ್ಲಾ ನೋಡುತ್ತೀರಲ್ಲವೇ. ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವದಿಲ್ಲ, ಎಲ್ಲಾ ಕೆಡವಲ್ಪಡುವದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು.ಬಳಿಕ ಆತನು ಎಣ್ಣೇಮರಗಳ ಗುಡ್ಡದ ಮೇಲೆ ದೇವಾಲಯಕ್ಕೆ ಎದುರಾಗಿ ಕೂತಿದ್ದಾಗ ಪೇತ್ರ ಯಾಕೋಬ ಯೋಹಾನ ಅಂದ್ರೆಯ ಇವರು –ಅದು ಯಾವಾಗ ಆಗುವದು? ಎಂದು ಆತನನ್ನು ಪ್ರತ್ಯೇಕವಾಗಿ ಕೇಳಲುನೀನು ಪ್ರತ್ಯಕ್ಷನಾಗುವದಕ್ಕೂ ಯುಗದ ಸಮಾಪ್ತಿಗೂ ಸೂಚನೆಯೇನು? ನಮಗೆ ಹೇಳು ಅನ್ನಲುಯೇಸು ಅವರಿಗೆ ಹೇಳಿದ್ದೇನಂದರೆ - ಯಾರಾದರೂ ನಿಮ್ಮನ್ನು ಮೋಸಗೊಳಿಸಾರು ನೋಡಿಕೊಳ್ಳಿರಿ. ಅನೇಕರು ಬಂದು ನನ್ನ ಹೆಸರನ್ನು ಎತ್ತಿಕೊಂಡು - ನಾನು ಕ್ರಿಸ್ತನು, ನಾನು ಕ್ರಿಸ್ತನು ಎಂದು ಹೇಳಿ ಎಷ್ಟೋ ಜನರನ್ನು ಮೋಸಗೊಳಿಸುವರು. ಇದಲ್ಲದೆ ಯುದ್ಧಗಳಾಗುವದನ್ನೂ ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳನ್ನೂ ನೀವು ಕೇಳುವಾಗ ಕಳವಳಪಡಬೇಡಿರಿ. ಹಾಗಾಗುವದು ಅಗತ್ಯ; ಆದರೂ ಇದು ಇನ್ನೂ ಅಂತ್ಯಕಾಲವಲ್ಲ.ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಮಹಾಭೂಕಂಪಗಳಾಗುವವು; ಅಲ್ಲಲ್ಲಿ ಬರಗಳೂ ಉಪದ್ರವಗಳೂ ಬರುವವು; ಉತ್ಪಾತಗಳೂ ಆಕಾಶದಲ್ಲಿ ಮಹಾ ಸೂಚನೆಗಳೂ ತೋರುವವು.ಇವೆಲ್ಲಾ [ನೂತನ ಕಾಲವು ಹುಟ್ಟುವ] ಪ್ರಸವವೇದನೆಯ ಪ್ರಾರಂಭ.
ಆದರೆ ನಿಮ್ಮ ವಿಷಯದಲ್ಲಿ ನೋಡಿಕೊಳ್ಳಿರಿ. ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳಕೊಂಡುಹೋಗುವರು; ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು; ನನ್ನ ನಿವಿುತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದೆಯೂ ಅರಸುಗಳ ಮುಂದೆಯೂ ಸಾಕ್ಷಿಗಳಾಗಿ ನಿಲ್ಲಿಸುವರು. ಹೀಗೆ ಅವರಿಗೆ ಸಾಕ್ಷಿಯಾಗುವದು. ಆಗ ನಿಮ್ಮನ್ನು ಉಪದ್ರವಕ್ಕೆ ಒಪ್ಪಿಸಿ ಕೊಲ್ಲುವರು; ನನ್ನ ಹೆಸರಿನ ನಿವಿುತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ಹಗೆ ಮಾಡುವರು. ಆಗ ಅನೇಕರು ಹಿಂಜರಿದು ಒಬ್ಬರನ್ನೊಬ್ಬರು ಹಿಡುಕೊಡುವರು; ಒಬ್ಬರ ಮೇಲೊಬ್ಬರು ದ್ವೇಷ ಮಾಡುವರು. ಬಹುಮಂದಿ ಸುಳ್ಳುಪ್ರವಾದಿಗಳು ಸಹ ಎದ್ದು ಅನೇಕರನ್ನು ಮೋಸಗೊಳಿಸುವರು. ಇದಲ್ಲದೆ ಅಧರ್ಮವು ಹೆಚ್ಚಾಗುವದರಿಂದ ಬಹುಜನರ ಪ್ರೀತಿಯು ತಣ್ಣಗಾಗಿಹೋಗುವದು.ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು.ಇದಲ್ಲದೆ ಪರಲೋಕರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.ನಿಮ್ಮನ್ನು ಹಿಡುಕೊಂಡುಹೋಗಿ ಒಪ್ಪಿಸುವಾಗ ಏನು ಹೇಳಬೇಕು ಎಂದು ಮುಂಚಿತವಾಗಿ ಚಿಂತೆಮಾಡಬೇಡಿರಿ; ಆ ಗಳಿಗೆಯಲ್ಲಿ ನಿಮಗೆ ಸೂಚನೆಯಾಗುವಂಥ ಮಾತನ್ನೇ ಆಡಿರಿ; ಮಾತಾಡುವವರು ನೀವಲ್ಲ, ಪವಿತ್ರಾತ್ಮನೇ.ಇದು ಸಾಕ್ಷಿಹೇಳುವದಕ್ಕೆ ನಿಮಗೆ ಅನುಕೂಲವಾಗುವದು.ಯಾಕಂದರೆ ನಿಮ್ಮ ವಿರೋಧಿಗಳೆಲ್ಲರೂ ಎದುರುನಿಲ್ಲುವದಕ್ಕೂ ಎದುರುಮಾತಾಡುವದಕ್ಕೂ ಆಗದಂಥ ಬಾಯನ್ನೂ ಬುದ್ಧಿಯನ್ನೂ ನಾನೇ ನಿಮಗೆ ಕೊಡುತ್ತೇನೆ. ಆದರೆ ತಂದೆತಾಯಿಗಳೂ ಅಣ್ಣತಮ್ಮಂದಿರೂ ಬಂಧುಬಾಂಧವರೂ ಸ್ನೇಹಿತರೂ ನಿಮ್ಮನ್ನು ಒಪ್ಪಿಸಿಕೊಡುವರು; ಮತ್ತು ನಿಮ್ಮಲ್ಲಿ ಕೆಲವರನ್ನು ಕೊಲ್ಲಿಸುವರು.ಇದಲ್ಲದೆ ಅಣ್ಣನು ತಮ್ಮನನ್ನು ತಂದೆಯು ಮಗನನ್ನು ಮರಣಕ್ಕೆ ಒಪ್ಪಿಸುವರು. ಮಕ್ಕಳು ಹೆತ್ತವರ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು. ಮತ್ತು ನನ್ನ ಹೆಸರಿನ ನಿವಿುತ್ತವಾಗಿ ನಿಮ್ಮನ್ನು ಎಲ್ಲರೂ ಹಗೆಮಾಡುವರು. ಆದರೆ ಕಡೇವರೆಗೂ ತಾಳುವವನು ರಕ್ಷಣೆ ಹೊಂದುವನು.ಆದರೂ ನಿಮ್ಮದೊಂದು ತಲೆಕೂದಲಾದರೂ ನಾಶವಾಗುವದಿಲ್ಲ. ನಿಮ್ಮ ಸೈರಣೆಯಿಂದ ನಿಮ್ಮ ಪ್ರಾಣಗಳನ್ನು ಪಡಕೊಳ್ಳುವಿರಿ.
ಆದರೆ ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ.ಆದದರಿಂದ ಪ್ರವಾದಿಯಾದ ದಾನಿಯೇಲನು ಹೇಳಿದಂಥ ಹಾಳುಮಾಡುವ ಅಸಹ್ಯ ವಸ್ತುವು ಪವಿತ್ರಸ್ಥಾನದಲ್ಲಿ ನಿಂತಿರುವದನ್ನು ನೀವು ಕಾಣುವಾಗ (ಇದನ್ನು ಓದುವವನು ತಿಳುಕೊಳ್ಳಲಿ) ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ;ಮಾಳಿಗೆಯ ಮೇಲೆ ಇರುವವನು ತನ್ನ ಮನೆಯೊಳಗಿಂದ ಏನಾದರೂ ತೆಗೆದುಕೊಳ್ಳುವದಕ್ಕೆ ಇಳಿಯದೆ ಒಳಕ್ಕೆ ಹೋಗದೆ ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವದಕ್ಕೆ ಹಿಂತಿರಿಗಿ ಬಾರದೆ ಓಡಿಹೋಗಲಿ.ಯಾಕಂದರೆ ಬರೆದಿರುವದೆಲ್ಲಾ ನೆರವೇರುವದಕ್ಕಾಗಿ ಅವು ದಂಡನೆಯ ದಿವಸಗಳಾಗಿವೆ. ಆ ದಿನಗಳಲ್ಲಿ ಬಸುರಿಯರಿಗೂ ಮೊಲೆಕೂಸಿರುವ ಹೆಂಗಸರಿಗೂ ಆಗುವ ಕಷ್ಟವನ್ನು ಏನು ಹೇಳಲಿ! ಈ ಸೀಮೆಯ ಮೇಲೆ ಮಹಾವಿಪತ್ತೂ ಈ ಜನರಿಗೆ ಉಗ್ರದಂಡನೆಯೂ ಆಗುವವು. ಅವರು ಕತ್ತಿಯ ಬಾಯಿಗೆ ಬೀಳುವರು; ಅವರನ್ನು ಅನ್ಯದೇಶಗಳಿಗೆಲ್ಲಾ ಸೆರೆಹಿಡಿದುಕೊಂಡು ಹೋಗುವರು; ಅನ್ಯದೇಶದವರ ಸಮಯಗಳು ಪೂರೈಸುವ ತನಕ ಯೆರೂಸಲೇಮ್ ಪಟ್ಟಣವು ಅನ್ಯದೇಶದವರಿಂದ ತುಳಿದಾಡಲ್ಪಡುತ್ತಿರುವದು.ಆಗ ಮಹಾಸಂಕಟ ಉಂಟಾಗುವದರಿಂದ ನಿಮ್ಮ ಪಲಾಯನವು ಚಳಿಗಾಲದಲ್ಲಿಯಾಗಲಿ ಸಬ್ಬತ್ದಿನದಲ್ಲಿಯಾಗಲಿ ಆಗಬಾರದೆಂದು ಪ್ರಾರ್ಥನೆಮಾಡಿರಿ. ಆ ದಿವಸಗಳು ಸಂಕಟ ದಿವಸಗಳಾಗಿರುವದರಿಂದ ಇದೆಲ್ಲಾ ಚಳಿಗಾಲದಲ್ಲಿ ಆಗಬಾರದೆಂದು ಪ್ರಾರ್ಥನೆ ಮಾಡಿರಿ; ಅಂಥ ಸಂಕಟವು ದೇವರು ಮಾಡಿದ ಸೃಷ್ಟಿ ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ; ಇನ್ನು ಮೇಲೆಯೂ ಆಗುವದಿಲ್ಲ. ಕರ್ತನು ಆ ದಿನಗಳನ್ನು ಕಡಿಮೆಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯದು; ಆದರೆ ತಾನು ಆದುಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆಮಾಡಿದ್ದಾನೆ.
ಅಧ್ಯಾಯ 50
ಆಗ ಯಾರಾದರೂ ನಿಮಗೆ - ಇಗೋ ಕ್ರಿಸ್ತನು ಇಲ್ಲಿದ್ದಾನೆ, ಅಗೋ ಅಲ್ಲಿದ್ದಾನೆ ಎಂದು ಹೇಳಿದರೆ ನಂಬಬೇಡಿರಿ; ಸುಳ್ಳು ಕ್ರಿಸ್ತರೂ ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ದೇವರಾದುಕೊಂಡವರನ್ನು ಮೋಸಗೊಳಿಸುವದಕ್ಕೋಸ್ಕರ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು. ನೀವಂತು ನೋಡಿಕೊಳ್ಳಿರಿ; ನಿಮಗೆ ಎಲ್ಲವನ್ನೂ ಮುಂದಾಗಿ ಹೇಳಿದ್ದೇನೆ.ಆದಕಾರಣ ಯಾರಾದರೂ ನಿಮಗೆ - ಅಗೋ ಕ್ರಿಸ್ತನು ಅಡವಿಯಲ್ಲಿ ಇದ್ದಾನೆಂದು ಹೇಳಿದರೆ ಹೊರಟುಹೋಗಬೇಡಿರಿ; ಇಗೋ ಕೋಣೆಗಳಲ್ಲಿದ್ದಾನೆಂದು ಹೇಳಿದರೆ ನಂಬಬೇಡಿರಿ. ಹೇಗೆ ವಿುಂಚು ಮೂಡಣದಲ್ಲಿ ಹುಟ್ಟಿ ಪಡುವಣದವರೆಗೂ ಕಾಣಿಸುತ್ತದೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯು ಇರುವದು. ಹೆಣ ಬಿದ್ದಲ್ಲಿ ಹದ್ದುಗಳು ಕೂಡುವವು.ಇದಲ್ಲದೆ ಆ ದಿನಗಳಲ್ಲಿ ಆ ಸಂಕಟ ತೀರಿದ ಮೇಲೆ ಸೂರ್ಯನು ಕತ್ತಲಾಗಿ ಹೋಗುವನು; ಚಂದ್ರನು ಬೆಳಕುಕೊಡದೆ ಇರುವನು; ನಕ್ಷತ್ರಗಳು ಆಕಾಶದಿಂದ ಉದುರುತ್ತಿರುವವು; ಆಕಾಶದಲ್ಲಿರುವ ಶಕ್ತಿಗಳು ಕದಲುವವು.ಇದಲ್ಲದೆ ಸೂರ್ಯ ಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು. ಭೂವಿುಯ ಮೇಲೆ ಸಮುದ್ರದ ಮತ್ತು ತೆರೆಗಳ ಘೋಷದ ನಿವಿುತ್ತವಾಗಿ ಜನಗಳಿಗೆ ದಿಕ್ಕು ಕಾಣದೆ ಸಂಕಟವು ಉಂಟಾಗುವದು. ಆಕಾಶದ ಶಕ್ತಿಗಳು ಕದಲುವದರಿಂದ ಮನುಷ್ಯರು ಭಯ ಹಿಡಿದವರಾಗಿ ಲೋಕಕ್ಕೆ ಏನು ಬರುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು.ಆಗ ಮನುಷ್ಯಕುಮಾರನನ್ನು ಸೂಚಿಸುವ ಗುರುತು ಆಕಾಶದಲ್ಲಿ ಕಾಣಬರುವದು. ಆಗ ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳುವರು, ಮತ್ತು ಮನುಷ್ಯಕುಮಾರನು ಬಲದಿಂದಲೂ ಬಹು ಮಹಿಮೆಯಿಂದಲೂ ಆಕಾಶದ ಮೇಘಗಳ ಮೇಲೆ ಬರುವದನ್ನು ಕಾಣುವರು. ಮತ್ತು ಆತನು ತುತೂರಿಯ ಮಹಾ ಶಬ್ದದಿಂದ ತನ್ನ ದೂತರನ್ನು ಕಳುಹಿಸುವನು. ಅವರು ಆತನು ಆದುಕೊಂಡವರನ್ನು ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸುವರು.ಆದರೆ ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ ಅಂದನು.
ಅಂಜೂರದ ಮರದ ದೃಷ್ಟಾಂತದಿಂದ ಬುದ್ಧಿಕಲಿಯಿರಿ. ಅದರ ಕೊಂಬೆ ಇನ್ನೂ ಎಳೆಯದಾಗಿದ್ದು ಎಲೆ ಬಿಡುವಾಗ ಬೇಸಿಗೆಯು ಹತ್ತರವಾಯಿತೆಂದು ತಿಳುಕೊಳ್ಳುತ್ತೀರಲ್ಲಾ. ಹಾಗೆಯೇ ನೀವು ಸಹ ಇದನ್ನೆಲ್ಲಾ ನೋಡುವಾಗ ಆ ದಿನವು ಹತ್ತರವದೆ, ಬಾಗಿಲಲ್ಲೇ ಅದೆ ಎಂದು ತಿಳುಕೊಳ್ಳಿರಿ. ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದುಹೋಗುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ಮಾತುಗಳು ಅಳಿದು ಹೋಗುವದೇ ಇಲ್ಲ.ಇದಲ್ಲದೆ ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.ಆ ಕಾಲವು ಯಾವಾಗ ಬರುವದೋ ನಿಮಗೆ ಗೊತ್ತಿಲ್ಲವಾದ್ದರಿಂದ ನೋಡಿಕೊಳ್ಳಿರಿ, ಜಾಗರೂಕರಾಗಿರಿ. ಒಬ್ಬ ಮನುಷ್ಯಸು ತನ್ನ ಮನೆಯನ್ನು ಬಿಟ್ಟು ಬೇರೊಂದು ದೇಶಕ್ಕೆ ಹೋಗುವಾಗ ತನ್ನ ಆಳುಗಳಿಗೆ ಮನೇ ಆಡಳಿತವನ್ನು ಒಪ್ಪಿಸಿಕೊಟ್ಟು ಒಬ್ಬೊಬ್ಬನಿಗೆ ಅವನವನ ಕೆಲಸವನ್ನು ನೇವಿುಸಿ ಬಾಗಿಲುಕಾಯುವವನನ್ನು ಕರೆದು - ನೀನು ಎಚ್ಚರವಾಗಿರಬೇಕೆಂದು ಅಪ್ಪಣೆ ಕೊಡುವ ಪ್ರಕಾರ [ನಾನು ನಿಮಗೆ ಅಪ್ಪಣೆ ಕೊಡುತ್ತೇನೆ]. ಮನೇಯಜಮಾನನು ಸಂಜೆಯಲ್ಲೋ ಸರುಹೊತ್ತಿನಲ್ಲೋ ಕೋಳಿ ಕೂಗುವಾಗಲೋ ಮುಂಜಾನೆಯಲ್ಲೋ ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲದ ಕಾರಣ ಎಚ್ಚರವಾಗಿರಿ; ಅವನು ಏಕಾಏಕಿ ಬಂದು ನೀವು ನಿದ್ದೆ ಮಾಡುವದನ್ನು ಕಂಡಾನು. ನಾನು ನಿಮಗೆ ಹೇಳಿದ್ದನ್ನು ಎಲ್ಲರಿಗೂ ಹೇಳುತ್ತೇನೆ, ಎಚ್ಚರವಾಗಿರಿ ಅಂದನು.ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು. ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ ಅಂದನು. ಆತನು ಹಗಲು ದೇವಾಲಯದಲ್ಲಿ ಉಪದೇಶಮಾಡುತ್ತಾ ರಾತ್ರಿ ಪಟ್ಟಣದ ಹೊರಗೆ ಹೋಗಿ ಎಣ್ಣೇಮರಗಳ ತೋಪು ಎನಿಸಿಕೊಳ್ಳುವ ಗುಡ್ಡದಲ್ಲಿ ಇಳುಕೊಳ್ಳುತ್ತಾ ಇದ್ದನು. ಜನರೆಲ್ಲರು ಆತನ ಉಪದೇಶವನ್ನು ಕೇಳಬೇಕೆಂದು ಬೆಳಿಗ್ಗೆ ಎದ್ದು ದೇವಾಲಯಕ್ಕೆ ಆತನ ಬಳಿಗೆ ಬರುತ್ತಿದ್ದರು.
ಆಗ ಪರಲೋಕರಾಜ್ಯವು ಆರತಿಗಳನ್ನು ತೆಗೆದುಕೊಂಡು ಮದಲಿಂಗನನ್ನು ಎದುರುಗೊಳ್ಳುವದಕ್ಕೆ ಹೊರಟಂಥ ಹತ್ತು ಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವದು. ಅವರಲ್ಲಿ ಐದು ಮಂದಿ ಬುದ್ಧಿಯಿಲ್ಲದವರು, ಐದು ಮಂದಿ ಬುದ್ಧಿವಂತೆಯರು. ಬುದ್ಧಿಯಿಲ್ಲದವರು ತಮ್ಮ ಆರತಿಗಳನ್ನು ತಕ್ಕೊಂಡರು, ಆದರೆ ಎಣ್ಣೆ ತಕ್ಕೊಳ್ಳಲಿಲ್ಲ. ಬುದ್ಧಿವಂತೆಯರು ತಮ್ಮ ಆರತಿಗಳ ಕೂಡ ಪಾತ್ರೆಗಳಲ್ಲಿ ಎಣ್ಣೆ ತಕ್ಕೊಂಡರು. ಮದಲಿಂಗನು ಬರುವದಕ್ಕೆ ತಡಮಾಡಲು ಅವರೆಲ್ಲರು ತೂಕಡಿಸಿ ಮಲಗಿದರು. ಆದರೆ ಅರ್ಧರಾತ್ರಿಯಲ್ಲಿ - ಇಗೋ, ಮದಲಿಂಗನು! ಅವನನ್ನು ಎದುರುಗೊಳ್ಳುವದಕ್ಕೆ ಹೊರಡಿರಿ ಎಂಬ ಕೂಗಾಯಿತು. ಆಗ ಆ ಕನ್ಯೆಯರೆಲ್ಲರು ಎಚ್ಚತ್ತು ತಮ್ಮ ಆರತಿಗಳನ್ನು ನೆಟ್ಟಗೆಮಾಡಿದರು. ಆಗ್ಗೆ ಬುದ್ಧಿಯಿಲ್ಲದವರು ಬುದ್ಧಿವಂತೆಯರಿಗೆ - ನಿಮ್ಮ ಎಣ್ಣೆಯಲ್ಲಿ ನಮಗೆ ಸ್ವಲ್ಪ ಕೊಡಿರಿ. ನಮ್ಮ ಆರತಿಗಳು ಆರಿಹೋಗುತ್ತವೆ ಎಂದು ಹೇಳಿದರು. ಅದಕ್ಕೆ ಆ ಬುದ್ಧಿವಂತೆಯರು - ನಿಮಗೆ ಕೊಟ್ಟರೆ ನಮಗೂ ನಿಮಗೂ ಕೂಡ ಸಾಲದೆ ಹೋದೀತು; ನೀವು ಮಾರುವವರ ಬಳಿಗೆ ಹೋಗಿ ಕೊಂಡುಕೊಂಡರೆ ಒಳ್ಳೇದು ಅಂದರು. ಅವರು ಕೊಂಡುಕೊಳ್ಳಲಿಕ್ಕೆ ಹೋದಾಗ ಮದಲಿಂಗನು ಬಂದನು. ಸಿದ್ಧವಾಗಿದ್ದವರು ಅವನ ಸಂಗಡ ಮದುವೆಯ ಮನೆಯೊಳಕ್ಕೆ ಹೋದರು. ಬಾಗಿಲು ಮುಚ್ಚಲಾಯಿತು. ತರುವಾಯ ಉಳಿದ ಕನ್ಯೆಯರು ಸಹ ಬಂದು - ಸ್ವಾಮೀ, ಸ್ವಾಮೀ, ನಮಗೆ ತೆರೆಯಿರಿ ಅಂದರು. ಆತನು - ನಿಮ್ಮನ್ನು ನಾನರಿಯೆನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು. ಆದಕಾರಣ ಆ ದಿನವಾದರೂ ಗಳಿಗೆಯಾದರೂ ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.
ಅಧ್ಯಾಯ 51
ದೇಶಾಂತರಕ್ಕೆ ಹೋಗುವ ಒಬ್ಬ ಮನುಷ್ಯನು ತನ್ನ ಆಳುಗಳನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿಕೊಟ್ಟಂತಿರುವದು. ಅವನು ಒಬ್ಬನಿಗೆ ಐದು ತಲಾಂತು, ಒಬ್ಬನಿಗೆ ಎರಡು, ಒಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ಬೇರೊಂದು ದೇಶಕ್ಕೆ ಹೋದನು. ಐದು ತಲಾಂತು ಹೊಂದಿದವನು ಹೋಗಿ ಅದನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಐದು ತಲಾಂತು ಗಳಿಸಿಕೊಂಡನು. ಹಾಗೆಯೇ ಎರಡು ತಲಾಂತು ಹೊಂದಿದವನು ಇನ್ನೂ ಎರಡು ಸಂಪಾದಿಸಿಕೊಂಡನು. ಆದರೆ ಒಂದು ತಲಾಂತು ಹೊಂದಿದವನು ಹೋಗಿ ಭೂವಿುಯನ್ನು ಅಗೆದು ತನ್ನ ದಣಿಯ ಹಣವನ್ನು ಬಚ್ಚಿಟ್ಟನು. ಬಹುಕಾಲದ ಮೇಲೆ ಆ ಆಳುಗಳ ಧಣಿಯು ಬಂದು ಅವರಿಂದ ಲೆಕ್ಕ ತೆಗೆದುಕೊಳ್ಳಲು ಐದು ತಲಾಂತು ಹೊಂದಿದವನು ಮುಂದೆಬಂದು ಇನ್ನೂ ಐದು ತಲಾಂತು ತಂದು - ಸ್ವಾಮೀ, ನೀನು ಐದು ತಲಾಂತನ್ನು ನನಗೆ ಕೊಟ್ಟಿದ್ದಿಯಲ್ಲಾ, ಇಗೋ, ಇನ್ನು ಐದು ತಲಾಂತು ಸಂಪಾದಿಸಿದ್ದೇನೆ ಅಂದನು. ಅವನ ಧಣಿಯು - ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು; ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಧಣಿಯ ಸೌಭಾಗ್ಯದಲ್ಲಿ ಸೇರು ಅಂದನು. ಆಗ ಎರಡು ತಲಾಂತು ಹೊಂದಿದವನು ಮುಂದೆಬಂದು - ಸ್ವಾಮೀ, ಎರಡು ತಲಾಂತು ನನಗೆ ಒಪ್ಪಿಸಿದಿಯಲ್ಲಾ; ಇಗೋ, ಇನ್ನು ಎರಡು ತಲಾಂತು ಸಂಪಾದಿಸಿದ್ದೇನೆ ಅಂದನು. ಅವನ ಧಣಿಯು ಅವನಿಗೆ - ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು; ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಧಣಿಯ ಸೌಭಾಗ್ಯದಲ್ಲಿ ಸೇರು ಎಂದು ಹೇಳಿದನು.
ತರುವಾಯ ಒಂದೇ ತಲಾಂತು ಹೊಂದಿದವನು ಸಹ ಮುಂದೆಬಂದು - ಸ್ವಾಮೀ, ನೀನು ಕಠಿಣ ಮನುಷ್ಯನು, ನೀನು ಬಿತ್ತದಿರುವಲ್ಲಿ ಕೊಯ್ಯುವವನು, ನೀನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಎಂದು ತಿಳಿದು ಹೆದರಿಕೊಂಡು ಹೋಗಿ ನಿನ್ನ ತಲಾಂತನ್ನು ಭೂವಿುಯಲ್ಲಿ ಬಚ್ಚಿಟ್ಟೆನು; ಇಗೋ, ನಿನ್ನದು ನಿನಗೆ ಸಂದಿದೆ ಅಂದನು. ಆಗ ಅವನ ಧಣಿಯು ಅವನಿಗೆ - ಮೈಗಳ್ಳನಾದ ಕೆಟ್ಟ ಆಳು ನೀನು; ನಾನು ಬಿತ್ತದಿರುವಲ್ಲಿ ಕೊಯ್ಯುವವನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಎಂದು ತಿಳಿದಿಯಾ? ಹಾಗಾದರೆ, ನೀನು ನನ್ನ ಹಣವನ್ನು ಸಾಹುಕಾರರಲ್ಲಿ ಬಡ್ಡಿಗೆ ಹಾಕಬೇಕಾಗಿತ್ತು; ನಾನು ಬಂದು ನನ್ನದನ್ನು ಬಡ್ಡಿಸಹಿತ ಪಡಕೊಳ್ಳುತ್ತಿದ್ದೆನು ಎಂದು ಹೇಳಿ ತನ್ನ ಸೇವಕರಿಗೆ - ಅವನಿಂದ ಆ ತಲಾಂತು ತೆಗೆದು ಹತ್ತು ತಲಾಂತು ಇದ್ದವನಿಗೆ ಕೊಡಿರಿ. ಇದ್ದವರಿಗೆಲ್ಲಾ ಕೊಡಲ್ಪಡುವದು, ಅವರಿಗೆ ಮತ್ತೂ ಹೆಚ್ಚಾಗುವದು; ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವದು. ಮತ್ತು ಕೆಲಸಕ್ಕೆ ಬಾರದ ಈ ಆಳನ್ನು ಹೊರಗೆ ಕತ್ತಲೆಗೆ ಹಾಕಿಬಿಡಿರಿ ಎಂದು ಹೇಳಿದನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು.
ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು; ಮತ್ತು ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು. ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆಮಾಡುವ ಪ್ರಕಾರ ಆತನು ಅವರನ್ನು ಬೇರೆಬೇರೆಮಾಡಿ ಕುರಿಗಳನ್ನು ತನ್ನ ಬಲಗಡೆಯಲ್ಲಿ ಆಡುಗಳನ್ನು ತನ್ನ ಎಡಗಡೆಯಲ್ಲಿ ನಿಲ್ಲಿಸುವನು. ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ - ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ. ನಾನು ಹಸಿದಿದ್ದೆನು, ನನಗೆ ಊಟಕ್ಕೆ ಕೊಟ್ಟಿರಿ; ನಾನು ಬಾಯಾರಿದ್ದೆನು, ನನಗೆ ಕುಡಿಯುವದಕ್ಕೆ ಕೊಟ್ಟಿರಿ; ಪರದೇಶಿಯಾಗಿದ್ದೆನು, ನನ್ನನ್ನು ಸೇರಿಸಿಕೊಂಡಿರಿ; ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುವದಕ್ಕೆ ಕೊಟ್ಟಿರಿ; ರೋಗದಲ್ಲಿ ಬಿದ್ದಿದ್ದೆನು, ನನ್ನನ್ನು ಆರೈಕೆ ಮಾಡುವದಕ್ಕೆ ಬಂದಿರಿ; ಸೆರೆಮನೆಯಲ್ಲಿದ್ದೆನು, ನನ್ನನ್ನು ನೋಡುವದಕ್ಕೆ ಬಂದಿರಿ ಎಂದು ಹೇಳುವನು. ಅದಕ್ಕೆ ನೀತಿವಂತರು - ಸ್ವಾಮೀ, ಯಾವಾಗ ನೀನು ಹಸಿದದ್ದನ್ನು ಕಂಡು ನಿನಗೆ ಊಟಕ್ಕೆ ಕೊಟ್ಟೆವು? ಇಲ್ಲವೆ ನೀನು ಬಾಯಾರಿದ್ದನ್ನು ಕಂಡು ಕುಡಿಯುವದಕ್ಕೆ ಕೊಟ್ಟೆವು? ಯಾವಾಗ ನೀನು ಪರದೇಶಿಯಾಗಿರುವದನ್ನು ಕಂಡು ಸೇರಿಸಿಕೊಂಡೆವು? ಇಲ್ಲವೆ ನಿನಗೆ ಬಟ್ಟೆಯಿಲ್ಲದ್ದನ್ನು ಕಂಡು ಉಡುವದಕ್ಕೆ ಕೊಟ್ಟೆವು? ಯಾವಾಗ ನೀನು ರೋಗದಲ್ಲಿ ಬಿದ್ದದ್ದನ್ನು ಅಥವಾ ಸೆರೆಮನೆಯಲ್ಲಿ ಇದ್ದದ್ದನ್ನು ಕಂಡು ನಿನ್ನನ್ನು ನೋಡುವದಕ್ಕೆ ಬಂದೆವು ಎಂದು ಉತ್ತರವಾಗಿ ಹೇಳುವರು. ಅದಕ್ಕೆ ಅರಸನು - ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅನ್ನುವನು.
ಆಮೇಲೆ ಆತನು ಎಡಗಡೆಯಲ್ಲಿರುವವರಿಗೆ - ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚನಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ. ನಾನು ಹಸಿದಿದ್ದೆನು, ನೀವು ನನಗೆ ಊಟಕ್ಕೆ ಕೊಡಲಿಲ್ಲ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವದಕ್ಕೆ ಕೊಡಲಿಲ್ಲ; ಪರದೇಶಿಯಾಗಿದ್ದೆನು, ನೀವು ನನ್ನನ್ನು ಸೇರಿಸಿಕೊಳ್ಳಲಿಲ್ಲ; ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡುವದಕ್ಕೆ ಕೊಡಲಿಲ್ಲ; ರೋಗದಲ್ಲಿ ಬಿದ್ದಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಆರೈಕೆಮಾಡುವದಕ್ಕೆ ಬರಲಿಲ್ಲವೆಂದು ಹೇಳುವನು. ಅದಕ್ಕೆ ಅವರು ಸಹ - ಸ್ವಾಮೀ, ಯಾವಾಗ ನೀನು ಹಸಿದದ್ದನ್ನೂ ನೀನು ಬಾಯಾರಿದ್ದನ್ನೂ ನೀನು ಪರದೇಶಿಯಾದದ್ದನ್ನೂ ಬಟ್ಟೆಯಿಲ್ಲದವನಾಗಿದ್ದದ್ದನ್ನೂ ರೋಗದಲ್ಲಿ ಬಿದ್ದದ್ದನ್ನೂ ಸೆರೆಮನೆಯಲ್ಲಿದ್ದದ್ದನ್ನೂ ಕಂಡು ನಿನಗೆ ಉಪಚಾರಮಾಡದೆ ಹೋದೆವು? ಅನ್ನುವರು. ಆಗ ಆತನು - ನೀವು ಈ ಕೇವಲ ಅಲ್ಪವಾದವರಲ್ಲಿ ಒಬ್ಬನಿಗೆ ಏನೇನು ಮಾಡದೆ ಹೋದಿರೋ ಅದನ್ನು ನನಗೂ ಮಾಡದೆ ಹೋದಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅನ್ನುವನು. ಮತ್ತು ಇವರು ನಿತ್ಯಶಿಕ್ಷೆಗೂ ನೀತಿವಂತರು ನಿತ್ಯಜೀವಕ್ಕೂ ಹೋಗುವರು.
ಅಧ್ಯಾಯ 52
ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ಪಸ್ಕವೆಂಬ ಹಬ್ಬವು ಹತ್ತಿರವಾದಾಗಪಸ್ಕದ ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬ ಬರುವದಕ್ಕೆ ಇನ್ನೂ ಎರಡು ದಿನಗಳಿದ್ದಾಗ ಮಹಾಯಾಜಕರೂ ಶಾಸ್ತ್ರಿಗಳೂ ಯೇಸುವನ್ನು ಉಪಾಯದಿಂದ ಹಿಡಿದು ಕೊಲ್ಲುವದಕ್ಕೆ ಮಾರ್ಗವನ್ನು ಹುಡುಕುತ್ತಿದ್ದರು.ಯೇಸು ಈ ಮಾತುಗಳನ್ನೆಲ್ಲಾ ಆಡಿ ಮುಗಿಸಿದ ಮೇಲೆ ತನ್ನ ಶಿಷ್ಯರಿಗೆ - ಎರಡು ದಿವಸಗಳಾದ ಮೇಲೆ ಪಸ್ಕಹಬ್ಬ ಬರುತ್ತದೆಂದು ಬಲ್ಲಿರಿ; ಆಗ ಮನುಷ್ಯಕುಮಾರನನ್ನು ಶಿಲುಬೆಗೆ ಹಾಕುವದಕ್ಕೆ ಒಪ್ಪಿಸಿಕೊಡೋಣವಾಗುವದು ಎಂದು ಹೇಳಿದನು.ಆ ಕಾಲದಲ್ಲಿ ಮಹಾಯಾಜಕರೂ ಪ್ರಜೆಯ ಹಿರಿಯರೂ ಕಾಯಫನೆಂಬ ಮಹಾಯಾಜಕನ ಮಠಕ್ಕೆ ಕೂಡಿಬಂದು ಯೇಸುವನ್ನು ಉಪಾಯದಿಂದ ಹಿಡಿದು ಕೊಲ್ಲಬೇಕೆಂಬದಾಗಿ ಆಲೋಚನೆಮಾಡಿಕೊಂಡರು. ಆದರೂ - ಹಬ್ಬದಲ್ಲಿ ಹಿಡಿಯಬಾರದು, ನಮ್ಮ ಜನರಲ್ಲಿ ಗದ್ದಲವಾದೀತು ಎಂದು ಮಾತಾಡಿಕೊಂಡರು.
ಯೇಸು ಬೇಥಾನ್ಯದಲ್ಲಿ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿದ್ದಾಗ ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಸುಗಂಧ ತೈಲದ ಭರಣಿಯನ್ನು ತೆಗೆದುಕೊಂಡು ಆತನ ಬಳಿಗೆ ಬಂದು ಆತನು ಊಟಕ್ಕೆ ಕೂತಿರುವಾಗ ಆ ತೈಲವನ್ನು ಆತನ ತಲೆಯ ಮೇಲೆ ಹೊಯಿದಳು.ಆದರೆ ಕೆಲವರು ತಮ್ಮೊಳಗೆ ಕೋಪಗೊಂಡು - ಈ ತೈಲವನ್ನು ನಷ್ಟಮಾಡಿದ್ದೇಕೆ? ಇದನ್ನು ಮುನ್ನೂರು ಹಣಕ್ಕಿಂತ ಹೆಚ್ಚು ಬೆಲೆಗೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ ಎಂದು ಹೇಳಿ ಆಕೆಗೆ ಛೀ ಹಾಕಿದರು. ಆದರೆ ಯೇಸು - ಈಕೆಯನ್ನು ಬಿಡಿರಿ. ಈಕೆಗೆ ಯಾಕೆ ತೊಂದರೆಕೊಡುತ್ತೀರಿ? ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ. ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ; ನಿಮಗೆ ಮನಸ್ಸು ಬಂದಾಗ ಅವರಿಗೆ ಉಪಕಾರಮಾಡಬಹುದು; ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವದಿಲ್ಲ. ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ; ಈಕೆಯು ಮುಂದಾಗಿ ನನ್ನ ಉತ್ತರಕ್ರಿಯೆಗೋಸ್ಕರ ನನ್ನ ದೇಹಕ್ಕೆ ಈ ತೈಲವನ್ನು ಹಚ್ಚಿದ್ದಾಳೆ.ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವದೋ ಅಲ್ಲಲ್ಲಿ ಈಕೆ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ ಹೇಳುವರೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಎಂದು ಹೇಳಿದನು.
ಆಗ ಸೈತಾನನು ಹನ್ನೆರಡು ಮಂದಿ ಶಿಷ್ಯರ ಲೆಕ್ಕದಲ್ಲಿ ಸೇರಿದವನಾದ ಇಸ್ಕರಿಯೋತೆಂಬ ಯೂದನಲ್ಲಿ ಪ್ರವೇಶಿಸಲು ಅವನು ಮಹಾಯಾಜಕರ ಬಳಿಗೂ ಕಾವಲಿನ ದಳವಾಯಿಗಳ ಬಳಿಗೂ ಹೋಗಿ ತಾನು ಯೇಸುವನ್ನು ಹಿಡುಕೊಡುವ ಉಪಾಯವನ್ನು ಕುರಿತು ಅವರ ಸಂಗಡ ಮಾತಾಡಿದನು.ನಾನು ಅವನನ್ನು ನಿಮಗೆ ಹಿಡುಕೊಟ್ಟರೆ ನನಗೆ ಏನು ಕೊಡುತ್ತೀರಿ? ಅಂದನು. ಅವರು ಅವನಿಗೆ ಮೂವತ್ತು ರೂಪಾಯಿ ತೂಗಿ ಕೊಟ್ಟರು.ಆತನನ್ನು ಗದ್ದಲವಾಗದಂತೆ ಅವರಿಗೆ ಹಿಡುಕೊಡುವದಕ್ಕೆ ಅನುಕೂಲವಾದ ಸಮಯವನ್ನು ನೋಡುತ್ತಿದ್ದನು.
ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿವಸಗಳಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ಯತಕ್ಕ ದಿವಸ ಬಂದಾಗ ಯೇಸು ಪೇತ್ರನಿಗೂ ಯೋಹಾನನಿಗೂ - ನೀವು ಹೋಗಿ ನಾವು ಪಸ್ಕದ ಊಟಮಾಡುವಂತೆ ಸಿದ್ಧಮಾಡಿರಿ ಎಂದು ಹೇಳಿ ಅವರನ್ನು ಕಳುಹಿಸಿದನು. ಅವರು - ನಾವು ಎಲ್ಲಿ ಸಿದ್ಧಮಾಡಬೇಕನ್ನುತ್ತೀ ಎಂದು ಆತನನ್ನು ಕೇಳಲು ಆತನು ಅವರಿಗೆ - ನೋಡಿರಿ, ನೀವು ಪಟ್ಟಣದೊಳಕ್ಕೆ ಹೋದ ಮೇಲೆ ಒಬ್ಬ ಮನುಷ್ಯನು ತುಂಬಿದ ಕೊಡವನ್ನು ಹೊತ್ತುಕೊಂಡು ನಿಮ್ಮೆದುರಿಗೆ ಬರುವನು. ಅವನು ಹೋಗುವ ಮನೆಗೆ ನೀವು ಅವನ ಹಿಂದೆ ಹೋಗಿ ಆ ಮನೆಯ ಯಜಮಾನನಿಗೆ - ನಮ್ಮ ಬೋಧಕನು ತನ್ನ ಶಿಷ್ಯರ ಸಂಗಡ ಪಸ್ಕದ ಊಟವನ್ನು ಮಾಡುವದಕ್ಕೆ ಭೋಜನ ಶಾಲೆ ಎಲ್ಲಿ ಎಂದು ನಿನ್ನನ್ನು ಕೇಳುತ್ತಾನೆ ಎಂಬದಾಗಿ ಹೇಳಿರಿ. ಅವನು ತಕ್ಕ ಸಾಮಾನಿಟ್ಟಿರುವ ಮೇಲಂತಸ್ತಿನ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು; ಅಲ್ಲಿ ಸಿದ್ಧಮಾಡಿರಿ ಎಂದು ಹೇಳಿ ಕಳುಹಿಸಿದನು.ಶಿಷ್ಯರು ಹೊರಟು ಪಟ್ಟಣಕ್ಕೆ ಹೋಗಿ ಆತನು ತಮಗೆ ಹೇಳಿದಂತೆ ಕಂಡು ಪಸ್ಕಕ್ಕೆ ಸೌರಿಸಿದರು.
ಅಧ್ಯಾಯ 53
ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಬಂದನು.ಪಸ್ಕಹಬ್ಬದ ಮುಂದೆ ಯೇಸು ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ಕಾಲ ಬಂತೆಂದು ತಿಳುಕೊಂಡು ಲೋಕದಲ್ಲಿರುವ ತನ್ನವರನ್ನು ಪ್ರೀತಿಸಿ ಪರಿಪೂರ್ಣವಾಗಿ ಅವರನ್ನು ಪ್ರೀತಿಸುತ್ತಾ ಬಂದನು. ಅವರು ಊಟಕ್ಕೆ ಕೂತುಕೊಂಡಿದ್ದರು; ಅಷ್ಟರೊಳಗೆ ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಮನಸ್ಸಿನಲ್ಲಿ ಯೇಸುವನ್ನು ಹಿಡುಕೊಡಬೇಕೆಂಬ ಆಲೋಚನೆಯನ್ನು ಹುಟ್ಟಿಸಿದ್ದನು. ಯೇಸು ತನ್ನ ಕೈಯಲ್ಲಿ ತಂದೆ ಎಲ್ಲವನ್ನು ಕೊಟ್ಟಿದ್ದಾನೆಂತಲೂ ತಾನು ದೇವರ ಬಳಿಯಿಂದ ಹೊರಟುಬಂದಿದ್ದು ಮತ್ತೆ ದೇವರ ಬಳಿಗೆ ಹೋಗುತ್ತೇನೆಂತಲೂ ತಿಳುಕೊಂಡವನಾಗಿ ಊಟವನ್ನು ಬಿಟ್ಟು ಎದ್ದು ಹೊದ್ದಿದ್ದ ಮೇಲ್ಹೊದಿಕೆಯನ್ನು ತೆಗೆದಿಟ್ಟು ಕೈಪಾವುಡವನ್ನು ತಕ್ಕೊಂಡು ನಡುವಿಗೆ ಕಟ್ಟಿಕೊಂಡನು. ಆಗ ಬೋಗುಣಿಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಕಾಲುಗಳನ್ನು ತೊಳೆಯುವದಕ್ಕೂ ನಡುವಿಗೆ ಕಟ್ಟಿಕೊಂಡಿದ್ದ ಕೈಪಾವುಡದಿಂದ ಒರಸುವದಕ್ಕೂ ಪ್ರಾರಂಭಿಸಿದನು. ಹೀಗೆ ಸೀಮೋನ ಪೇತ್ರನ ಬಳಿಗೆ ಬರಲು ಇವನು ಆತನಿಗೆ - ಸ್ವಾಮೀ, ನೀನು ನನ್ನ ಕಾಲುಗಳನ್ನು ತೊಳೆಯಬೇಕೇ? ಎಂದು ಹೇಳಿದನು. ಅದಕ್ಕೆ ಯೇಸು - ನಾನು ಮಾಡುವದು ಈಗ ನಿನಗೆ ತಿಳಿಯುವದಿಲ್ಲ, ಇನ್ನು ಮೇಲೆ ನಿನಗೆ ತಿಳಿಯುವದು ಅಂದನು. ಪೇತ್ರನು - ನೀನು ನನ್ನ ಕಾಲುಗಳನ್ನು ಎಂದಿಗೂ ತೊಳೆಯಬಾರದು ಎಂದು ಹೇಳಿದ್ದಕ್ಕೆ ಯೇಸು - ನಾನು ನಿನ್ನನ್ನು ತೊಳೆಯದಿದ್ದರೆ ನನ್ನ ಸಂಗಡ ನಿನಗೆ ಪಾಲಿಲ್ಲ ಅಂದನು. ಸೀಮೋನ ಪೇತ್ರನು - ಸ್ವಾಮೀ, ನನ್ನ ಕಾಲುಗಳನ್ನು ಮಾತ್ರವಲ್ಲದೆ ಕೈಗಳನ್ನೂ ತಲೆಯನ್ನೂ ಸಹ ತೊಳೆಯಬೇಕು ಅಂದನು. ಯೇಸು ಅವನಿಗೆ - ಸ್ನಾನಮಾಡಿಕೊಂಡವನ ಕಾಲುಗಳನ್ನು ತೊಳೆಯುವದಲ್ಲದೆ ಬೇರೇನೂ ತೊಳೆಯಬೇಕಾಗಿರುವದಿಲ್ಲ, ಅವನ ಮೈಯೆಲ್ಲಾ ಶುದ್ಧವಾಗಿದೆ. ನೀವೂ ಶುದ್ಧರಾಗಿದ್ದೀರಿ; ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲವೆಂದು ಹೇಳಿದನು. ಯೇಸು ತನ್ನನ್ನು ಹಿಡುಕೊಡುವವನು ಇಂಥವನೇ ಎಂದು ತಿಳಿದಿದ್ದದರಿಂದ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲವೆಂದನು.
ಆತನು ಅವರ ಕಾಲುಗಳನ್ನು ತೊಳೆದ ಮೇಲೆ ತನ್ನ ಮೇಲ್ಹೊದಿಕೆಯನ್ನು ಹಾಕಿಕೊಂಡು ತಿರಿಗಿ ಕೂತುಕೊಂಡು ಅವರಿಗೆ ಹೇಳಿದ್ದೇನಂದರೆ - ನಾನು ನಿಮಗೆ ಮಾಡಿದ್ದು ಏನೆಂದು ಗೊತ್ತಾಯಿತೋ? ನೀವು ನನ್ನನ್ನು ಗುರುವೆಂದೂ ಕರ್ತನೆಂದೂ ಕರೆಯುತ್ತೀರಿ; ನೀವು ಕರೆಯುವದು ಸರಿ; ನಾನು ಅಂಥವನೇ ಹೌದು. ಕರ್ತನೂ ಗುರುವೂ ಆಗಿರುವ ನಾನು ನಿಮ್ಮ ಕಾಲುಗಳನ್ನು ತೊಳೆದಿರಲಾಗಿ ನೀವು ಸಹ ಒಬ್ಬರ ಕಾಲನ್ನು ಒಬ್ಬರು ತೊಳೆಯುವ ಹಂಗಿನವರಾಗಿದ್ದೀರಿ. ನಾನು ನಿಮಗೆ ಮಾಡಿದ ಮೇರೆಗೆ ನೀವು ಸಹ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ. ನಿಮಗೆ ನಿಜನಿಜವಾಗಿ ಹೇಳುತ್ತೇನೆ, ದಣಿಗಿಂತ ಆಳು ದೊಡ್ಡವನಲ್ಲ, ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ. ನೀವು ಇದನ್ನು ತಿಳುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು. ನಾನು ನಿಮ್ಮೆಲ್ಲರನ್ನು ಕುರಿತು ಈ ಮಾತನ್ನು ಹೇಳಲಿಲ್ಲ; ನಾನು ಆದುಕೊಂಡವರನ್ನು ನಾನು ಬಲ್ಲೆನು; ಆದರೆ - ನನ್ನ ಕೂಡ ಊಟಮಾಡುವವನೇ ನನಗೆ ಕಾಲನ್ನು ಅಡ್ಡಗೊಟ್ಟಿದ್ದಾನೆ ಎಂಬ ಶಾಸ್ತ್ರದ ಮಾತು ನೆರವೇರಬೇಕಾಗಿದೆ. ಅದು ನಡೆಯುವಾಗ ನನ್ನನ್ನೇ ಆತನೆಂದು ನೀವು ನಂಬುವಂತೆ ಅದು ನಡೆಯುವದಕ್ಕಿಂತ ಮುಂಚೆ ಅದನ್ನು ಇಂದಿನಿಂದ ನಿಮಗೆ ಹೇಳುತ್ತೇನೆ. ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನಾನು ಕಳುಹಿಸಿಕೊಟ್ಟವನನ್ನು ಅಂಗೀಕರಿಸುವವನು ನನ್ನನ್ನು ಅಂಗೀಕರಿಸುವವನಾಗಿದ್ದಾನೆ; ನನ್ನನ್ನು ಅಂಗೀಕರಿಸುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನು ಅಂಗೀಕರಿಸುವವನಾಗಿದ್ದಾನೆ.
ಗಳಿಗೆ ಬಂದಾಗ ಆತನು ತನ್ನ ಹನ್ನೆರಡು ಮಂದಿ ಅಪೊಸ್ತಲರ ಸಂಗಡ ಊಟಕ್ಕೆ ಕೂತುಕೊಂಡನು. ಆಗ ಆತನು ಅವರಿಗೆ - ನಾನು ಶ್ರಮೆ ಅನುಭವಿಸುವದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವದಕ್ಕೆ ಕುತೂಹಲದಿಂದ ಅಪೇಕ್ಷಿಸಿದ್ದೇನೆ. ನಾನು ನಿಮಗೆ ಹೇಳುತ್ತೇನೆ, ಇದು ದೇವರ ರಾಜ್ಯದಲ್ಲಿ ನೆರವೇರುವ ತನಕ ನಾನು ಇನ್ನು ಮೇಲೆ ಪಸ್ಕದ ಊಟವನ್ನು ಮಾಡುವದೇ ಇಲ್ಲ ಎಂದು ಹೇಳಿದನು.ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು ಶಿಷ್ಯರಿಗೆ ಕೊಟ್ಟು - ತಕ್ಕೊಳ್ಳಿರಿ, ತಿನ್ನಿರಿ, ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ; ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ ಅಂದನು. ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು - ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ. ಇದರಲ್ಲಿರುವದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ. ನಾನು ನನ್ನ ತಂದೆಯ ರಾಜ್ಯದಲ್ಲಿ ದ್ರಾಕ್ಷಾರಸವನ್ನು ನಿಮ್ಮ ಸಂಗಡ ಹೊಸದಾಗಿ ಕುಡಿಯುವ ದಿನದವರೆಗೂ ಇನ್ನು ಕುಡಿಯುವದೇ ಇಲ್ಲ ಎಂದು ನಿಮಗೆ ಹೇಳುತ್ತೇನೆ ಅಂದನು.ಅವರೆಲ್ಲರೂ ಅದರಲ್ಲಿ ಕುಡಿದರು.
ಅಧ್ಯಾಯ 54
ಅವರು ಕೂತುಕೊಂಡು ಊಟಮಾಡುತ್ತಿರುವಾಗ ಯೇಸು - ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡುಕೊಡುವನು, ಅವನು ನನ್ನ ಸಂಗಡ ಊಟಮಾಡುವವನೇ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು. ಆಗ ಅವರು ಬಹಳ ದುಃಖಪಟ್ಟು - ಸ್ವಾಮೀ, ನಾನಲ್ಲವಲ್ಲ ಎಂದು ಪ್ರತಿಯೊಬ್ಬರು ಕೇಳತೊಡಗಿದರು. ಅದಕ್ಕಾತನು - ಬಟ್ಟಲಲ್ಲಿ ನನ್ನ ಸಂಗಡ ಕೈ ಅದ್ದಿದವನೇ ನನ್ನನ್ನು ಹಿಡುಕೊಡುವನು. ಮನುಷ್ಯಕುಮಾರನು ಹೊರಟುಹೋಗುತ್ತಾನೆ ಸರಿ; ಹಾಗೆ ಆತನ ವಿಷಯವಾಗಿ ಬರೆದದೆಯಲ್ಲಾ. ಆದರೆ ಯಾವನು ಮನುಷ್ಯಕುಮಾರನನ್ನು ಹಿಡುಕೊಡುವನೋ ಅವನ ಗತಿಯನ್ನು ಏನು ಹೇಳಲಿ. ಆ ಮನುಷ್ಯನು ಹುಟ್ಟದಿದ್ದರೆ ಅವನಿಗೆ ಒಳ್ಳೇದಾಗಿತ್ತು ಅಂದನು.ಇದನ್ನು ಕೇಳಿ ಅವರು - ಇಂಥ ಕೆಲಸವನ್ನು ಮಾಡಬೇಕೆಂದಿರುವವನು ನಮ್ಮಲ್ಲಿ ಯಾವನಾಗಿರಬಹುದು ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು. ಶಿಷ್ಯರೊಳಗೆ ಯೇಸುವಿಗೆ ಪ್ರಿಯನಾಗಿದ್ದ ಒಬ್ಬನು ಆತನ ಎದೆಯ ಹತ್ತರ ಒರಗಿಕೊಂಡಿದ್ದನು; ಇವನಿಗೆ ಸೀಮೋನ ಪೇತ್ರನು ಸನ್ನೆಮಾಡಿ - ಯಾರನ್ನು ಕುರಿತು ಮಾತಾಡಿದನು, ತಿಳಿಸು ಎಂದು ಹೇಳಿದನು. ಅವನು ಹಾಗೆಯೇ ಯೇಸುವಿನ ಎದೆಯ ಕಡೆಗೆ ಬಾಗಿ - ಸ್ವಾಮೀ, ಅವನು ಯಾರು? ಅಂತ ಕೇಳಿದನು. ಅದಕ್ಕೆ ಯೇಸು - ನಾನು ಈ ತುತ್ತನ್ನು ಅದ್ದಿ ಯಾರಿಗೆ ಕೊಡುತ್ತೇನೋ ಅವನೇ ಎಂದು ಹೇಳಿ ಆ ತುತ್ತನ್ನು ಅದ್ದಿ ತೆಗೆದು ಸೀಮೋನನ ಮಗನಾದ ಇಸ್ಕರಿಯೋತ ಯೂದನಿಗೆ ಕೊಟ್ಟನು. ಅವನು ಆ ತುತ್ತನ್ನು ತೆಗೆದುಕೊಂಡ ಕೂಡಲೆ ಸೈತಾನನು ಅವನೊಳಗೆ ಹೊಕ್ಕನು. ಆಗ ಆತನನ್ನು ಹಿಡುಕೊಡಬೆಕೆಂದಿದ್ದ ಯೂದನು - ಗುರುವೇ, ನಾನಲ್ಲವಲ್ಲ? ಅನ್ನಲಾಗಿ ಯೇಸು ಅವನಿಗೆ - ನೀನೇ ಹೇಳಿದ್ದೀ ಎಂದು ಹೇಳಿದನು. ಆಗ ಯೇಸು ಅವನಿಗೆ - ನೀನು ಮಾಡುವದನ್ನು ಬೇಗನೆ ಮಾಡಿಬಿಡು ಎಂದು ಹೇಳಿದನು. ಆತನು ಅವನಿಗೆ ಇದನ್ನು ಯಾತಕ್ಕಾಗಿ ಹೇಳಿದನೆಂಬದು ಊಟಕ್ಕೆ ಕೂತವರಲ್ಲಿ ಯಾರಿಗೂ ಗೊತ್ತಾಗಲಿಲ್ಲ; ಅವರಲ್ಲಿ ಕೆಲವರು - ಯೂದನ ವಶದಲ್ಲಿ ಹಣದ ಚೀಲವಿದ್ದದರಿಂದ ಹಬ್ಬಕ್ಕಾಗಿ ನಮಗೆ ಬೇಕಾದದ್ದನ್ನು ಕೊಂಡುಕೋ ಎಂಬದಾಗಿಯೋ ಬಡವರಿಗೆ ಏನಾದರೂ ಕೊಡು ಎಂಬದಾಗಿಯೋ ಯೇಸು ಅವನಿಗೆ ಹೇಳುತ್ತಾನೆ ಎಂದು ನೆನಸಿದರು. ಅವನು ಆ ತುತ್ತನ್ನು ತೆಗೆದುಕೊಂಡ ಕೂಡಲೇ ಹೊರಗೆ ಹೋದನು. ಆಗ ರಾತ್ರಿಯಾಗಿತ್ತು.
ಅವನು ಹೊರಗೆ ಹೋದ ಮೇಲೆ ಯೇಸು - ಈಗ ಮನುಷ್ಯಕುಮಾರನು ಮಹಿಮೆಪಟ್ಟಿದ್ದಾನೆ, ಮತ್ತು ದೇವರು ಆತನಲ್ಲಿ ಮಹಿಮೆಪಟ್ಟಿದ್ದಾನೆ. ದೇವರು ಆತನಲ್ಲಿ ಮಹಿಮೆಪಟ್ಟಿರಲಾಗಿ ತನ್ನಲ್ಲಿ ದೇವರು ಆತನನ್ನೂ ಮಹಿಮೆಪಡಿಸುವನು, ಕೂಡಲೇ ಮಹಿಮೆಪಡಿಸುವನು. ಪ್ರಿಯ ಮಕ್ಕಳೇ, ಇನ್ನು ಸ್ವಲ್ಪಕಾಲವೇ ನಿಮ್ಮ ಸಂಗಡ ಇರುತ್ತೇನೆ. ನನ್ನನ್ನು ಹುಡುಕುವಿರಿ, ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆ ಈಗ ನಿಮಗೂ ಹೇಳುತ್ತೇನೆ. ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು ಅಂದನು.
ಮತ್ತು ಆತನು - ನಿಮ್ಮನ್ನು ನಾನು ಹಮ್ಮೀಣಿ ಹಸಿಬೆ ಜೋಡುಗಳಿಲ್ಲದೆ ಕಳುಹಿಸಿದಾಗ ನಿಮಗೆ ಏನಾದರೂ ಕೊರತೆಯಾಯಿತೋ ಎಂದು ಕೇಳಲು ಅವರು ಏನೂ ಇಲ್ಲವೆಂದು ಉತ್ತರಕೊಟ್ಟರು. ಅದಕ್ಕೆ ಆತನು - ಈಗಲಾದರೋ ಹಮ್ಮೀಣಿಯಿದ್ದವನು ಅದನ್ನು ತಕ್ಕೊಳ್ಳಲಿ, ಹಸಿಬೆಯಿದ್ದವನು ಅದನ್ನು ತಕ್ಕೊಳ್ಳಲಿ, ಮತ್ತು ಕತ್ತಿಯಿಲ್ಲದವನು ತನ್ನ ಮೇಲಂಗಿಯನ್ನು ಮಾರಿ ಒಂದು ಕತ್ತಿಯನ್ನು ಕೊಂಡುಕೊಳ್ಳಲಿ. ಯಾಕಂದರೆ - ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು ಎಂದು ಬರೆದಿರುವ ಮಾತು ನನ್ನಲ್ಲಿ ನೆರವೇರಬೇಕಾಗಿದೆ ಎಂದು ನಿಮಗೆ ಹೇಳುತ್ತೇನೆ; ನನ್ನ ವಿಷಯವಾದದ್ದು ಕೊನೆಗಾಣಬೇಕು ಎಂದು ಹೇಳಿದನು. ಅವರು - ಸ್ವಾಮೀ, ಇಗೋ ಇಲ್ಲಿ ಎರಡು ಕತ್ತಿಗಳಿವೆ ಅನ್ನಲು ಆತನು ಅವರಿಗೆ - ಅಷ್ಟು ಸಾಕು ಅಂದನು.ಬಳಿಕ ಅವರು ಕೀರ್ತನೆಯನ್ನು ಹಾಡಿ ಎಣ್ಣೆಯ ಮರಗಳ ಗುಡ್ಡಕ್ಕೆ ಹೊರಟುಹೋದರು.
ಸೀಮೋನ ಪೇತ್ರನು ಆತನನ್ನು - ಸ್ವಾಮೀ, ಎಲ್ಲಿಗೆ ಹೋಗುತ್ತೀ? ಎಂದು ಕೇಳಿದ್ದಕ್ಕೆ ಯೇಸು - ನಾನು ಹೋಗುವಲ್ಲಿಗೆ ನೀನು ಈಗ ನನ್ನ ಹಿಂದೆ ಬರಲಾರಿ, ತರುವಾಯ ನನ್ನ ಹಿಂದೆ ಬರುವಿ ಅಂದನು. ಪೇತ್ರನು ಆತನಿಗೆ - ಸ್ವಾಮೀ, ನಾನು ಯಾಕೆ ಈಗ ನಿನ್ನ ಹಿಂದೆ ಬರಲಾರೆನು? ನಿನಗಾಗಿ ನನ್ನ ಪ್ರಾಣವನ್ನಾದರೂ ಕೊಟ್ಟೇನು ಎಂದು ಹೇಳಲುಇದಲ್ಲದೆ ತಮ್ಮಲ್ಲಿ ಯಾವನು ಹೆಚ್ಚಿನವನೆನಿಸಿಕೊಳ್ಳುವನು ಎಂಬ ವಿಷಯದಲ್ಲಿ ಅವರೊಳಗೆ ಚರ್ಚೆ ಹುಟ್ಟಿತು. ಆಗ ಆತನು ಅವರಿಗೆ - ಅನ್ಯದೇಶದ ಅರಸರು ತಮ್ಮ ತಮ್ಮ ಜನಗಳ ಮೇಲೆ ದೊರೆತನ ಮಾಡುತ್ತಾರೆ, ಮತ್ತು ಅವರ ಮೇಲೆ ಅಧಿಕಾರ ನಡಿಸುವವರು ಧರ್ಮಿಷ್ಠರೆನಿಸಿಕೊಳ್ಳುತ್ತಾರೆ. ನೀವು ಹಾಗಿರಬಾರದು; ನಿಮ್ಮಲ್ಲಿ ಹೆಚ್ಚಿನವನು ಚಿಕ್ಕವನಂತಾಗಬೇಕು, ಮುಖ್ಯಸ್ಥನು ಸೇವಕನಂತಾಗಬೇಕು. ಯಾವನು ಹೆಚ್ಚಿನವನು; ಊಟಕ್ಕೆ ಕೂತವನೋ ಸೇವೆಮಾಡುವವನೋ? ಊಟಕ್ಕೆ ಕೂತವನಲ್ಲವೇ. ಆದರೆ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ. ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು. ಆದದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇವಿುಸಿದ ಪ್ರಕಾರ ನಾನು ನಿಮಗೂ ನೇವಿುಸುತ್ತೇನೆ; ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ; ಮತ್ತು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ. ಸೀಮೋನನೇ, ಸೀಮೋನನೇ, ನೋಡು, ಸೈತಾನನು ನಿಮ್ಮನ್ನು ಗೋದಿಯಂತೆ ಒನೆಯಬೇಕೆಂದು ಅಪ್ಪಣೆ ಕೇಳಿಕೊಂಡನು; ಆದರೆ ನಿನ್ನ ನಂಬಿಕೆ ಕುಂದಿಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆಮಾಡಿಕೊಂಡೆನು. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು ಎಂದು ಹೇಳಿದನು. ಆದರೆ ಅವನು - ಸ್ವಾಮೀ, ನಿನ್ನ ಸಂಗಡ ಸೆರೆಮನೆಗೆ ಹೋಗುವದಕ್ಕೂ ಸಾಯುವದಕ್ಕೂ ಸಿದ್ಧವಾಗಿದ್ದೇನೆ ಅನ್ನಲು
ಅಧ್ಯಾಯ 55
ಆಗ ಯೇಸು, ಅವರಿಗೆ - ನೀವೆಲ್ಲರೂ ಈ ರಾತ್ರಿ ನನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿಯುವಿರಿ. ಕುರುಬನನ್ನು ಹೊಡೆಯುವೆನು; ಹಿಂಡಿನ ಕುರಿಗಳು ಚದರಿಹೋಗುವವು ಎಂದು ಬರೆದದೆಯಲ್ಲಾ. ಆದರೆ ನಾನು ಜೀವಿತನಾಗಿ ಎದ್ದ ಮೇಲೆ ನಿಮ್ಮ ಮುಂದೆ ಗಲಿಲಾಯಕ್ಕೆ ಹೋಗುವೆನು ಎಂದು ಹೇಳಿದನು. ಪೇತ್ರನು ಆತನಿಗೆ - ಎಲ್ಲರೂ ನಿನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿದರೂ ನಾನು ಎಂದಿಗೂ ಹಿಂಜರಿಯುವದಿಲ್ಲ ಎಂದು ಉತ್ತರಕೊಡಲು ಯೇಸು - ನಿನಗೆ ಸತ್ಯವಾಗಿ ಹೇಳುತ್ತೇನೆ. ಇದೇ ರಾತ್ರಿಯಲ್ಲಿ ಕೋಳಿಕೂಗುವದಕ್ಕಿಂತ ಮುಂಚೆ ನೀನು ನನ್ನ ವಿಷಯದಲ್ಲಿ - ಅವನನ್ನು ಅರಿಯೆನೆಂಬದಾಗಿ ಮೂರು ಸಾರಿ ಹೇಳುವಿ ಅಂದನು. ಪೇತ್ರನು ಆತನಿಗೆ - ನಾನು ನಿನ್ನ ಸಂಗಡ ಸಾಯಬೇಕಾದರೂ ನಿನ್ನನ್ನು ಅರಿಯೆನೆಂಬದಾಗಿ ಹೇಳುವದೇ ಇಲ್ಲ ಎಂದು ಹೇಳಿದನು. ಅದರಂತೆ ಶಿಷ್ಯರೆಲ್ಲರೂ ಹೇಳಿದರು.
ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ. ನನ್ನ ತಂದೆಯ ಮನೆಯಲ್ಲಿ ಬಹಳ ಬಿಡಾರಗಳು ಅವೆ; ಇಲ್ಲದಿದ್ದರೆ ನಿಮಗೆ ಹೇಳುತ್ತಿದ್ದೆನು; ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗುತ್ತೇನಲ್ಲಾ. ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ಧಮಾಡಿದ ಮೇಲೆ ತಿರಿಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಯಾಕಂದರೆ ನಾನಿರುವ ಸ್ಥಳದಲ್ಲಿ ನೀವು ಸಹ ಇರಬೇಕು. ಮತ್ತು ನಾನು ಹೋಗುವ ಸ್ಥಳದ ಮಾರ್ಗವು ನಿಮಗೆ ತಿಳಿದದೆ ಅಂದನು.ತೋಮನು ಆತನನ್ನು - ಸ್ವಾಮೀ, ನೀನು ಎಲ್ಲಿಗೆ ಹೋಗುತ್ತೀಯೋ ನಮಗೆ ತಿಳಿಯದು; ಮಾರ್ಗವು ಹೇಗೆ ತಿಳಿದೀತು ಎಂದು ಕೇಳಲು ಯೇಸು ಅವನಿಗೆ - ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ. ನೀವು ನನ್ನನ್ನು ಅರಿತಿದ್ದರೆ ನನ್ನ ತಂದೆಯನ್ನೂ ಅರಿಯುತ್ತಿದ್ದಿರಿ; ಈಗಿನಿಂದ ಆತನನ್ನು ಅರಿತುಕೊಂಡಿದ್ದೀರಿ; ಆತನನ್ನು ನೋಡಿದ್ದೀರಲ್ಲಾ ಎಂದು ಹೇಳಿದನು.
ಫಿಲಿಪ್ಪನು - ಸ್ವಾಮೀ, ನಮಗೆ ತಂದೆಯನ್ನು ತೋರಿಸು, ನಮಗೆ ಅಷ್ಟೇ ಸಾಕು ಅಂದನು. ಯೇಸು ಅವನಿಗೆ - ಫಿಲಿಪ್ಪನೇ, ನಾನು ಇಷ್ಟು ದಿವಸ ನಿಮ್ಮ ಸಂಗಡ ಇದ್ದರೂ ನೀನು ಇನ್ನೂ ನನ್ನನ್ನು ಅರಿತುಕೊಳ್ಳಲಿಲ್ಲವೇ. ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ. ನಮಗೆ ತಂದೆಯನ್ನು ತೋರಿಸೆಂದು ನೀನು ಹೇಳುವದು ಹೇಗೆ? ನಾನು ತಂದೆಯಲ್ಲಿದ್ದೇನೆ, ತಂದೆಯು ನನ್ನಲ್ಲಿ ಇದ್ದಾನೆ ಎಂದು ನೀನು ನಂಬುವದಿಲ್ಲವೋ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುವದಿಲ್ಲ; ತಂದೆಯು ನನ್ನಲ್ಲಿ ಇದ್ದುಕೊಂಡು ತನ್ನ ಕ್ರಿಯೆಗಳನ್ನು ನಡಿಸುತ್ತಾನೆ. ನಾನು ತಂದೆಯಲ್ಲಿ ಇದ್ದೇನೆ, ತಂದೆಯು ನನ್ನಲ್ಲಿ ಇದ್ದಾನೆಂಬುವ ನನ್ನ ಮಾತನ್ನು ನಂಬಿರಿ; ಇಲ್ಲದಿದ್ದರೆ ಆ ಕ್ರಿಯೆಗಳನ್ನೇ ನೋಡಿ ನನ್ನ ಮಾತನ್ನು ನಂಬಿರಿ.ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು; ಮತ್ತು ಅವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ನಡಿಸುವನು. ಯಾಕಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ. ಇದಲ್ಲದೆ ನೀವು ನನ್ನ ಹೆಸರಿನಲ್ಲಿ ಏನೇನು ಬೇಡಿಕೊಳ್ಳುವಿರೋ, ಅದನ್ನು ನೆರವೇರಿಸುವೆನು; ಹೀಗೆ ಮಗನ ಮೂಲಕವಾಗಿ ತಂದೆಗೆ ಮಹಿಮೆ ಉಂಟಾಗುವದು. ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಬೇಡಿಕೊಂಡರೆ ಅದನ್ನು ನೆರವೇರಿಸುವೆನು.
ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವಿರಿ. ಆಗ ನಾನು ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲ ನಿಮ್ಮ ಸಂಗಡ ಇರುವದಕ್ಕೆ ಕೊಡುವನು. ಆ ಸಹಾಯಕನು ಯಾರಂದರೆ ಸತ್ಯದ ಆತ್ಮನೇ. ಲೋಕವು ಆತನನ್ನು ನೋಡದೆಯೂ ತಿಳಿಯದೆಯೂ ಇರುವದರಿಂದ ಆತನನ್ನು ಹೊಂದಲಾರದು. ನೀವು ಆತನನ್ನು ಬಲ್ಲಿರಿ; ಹೇಗಂದರೆ ನಿಮ್ಮ ಬಳಿಯಲ್ಲಿ ವಾಸಮಾಡುತ್ತಾನೆ ಮತ್ತು ನಿಮ್ಮೊಳಗೆ ಇರುವನು.ನಾನು ನಿಮ್ಮನ್ನು ಅನಾಥರಾಗಿ ಬಿಡುವದಿಲ್ಲ; ನಿಮ್ಮ ಬಳಿಗೆ ಬರುತ್ತೇನೆ. ಇನ್ನು ಸ್ವಲ್ಪಕಾಲವಾದ ಮೇಲೆ ಲೋಕವು ನನ್ನನ್ನು ನೋಡುವದಿಲ್ಲ, ಆದರೆ ನೀವು ನನ್ನನ್ನು ನೋಡುವಿರಿ; ನಾನು ಬದುಕುವದರಿಂದ ನೀವೂ ಬದುಕುವಿರಿ. ನಾನು ನನ್ನ ತಂದೆಯಲ್ಲಿಯೂ ನೀವು ನನ್ನಲ್ಲಿಯೂ ನಾನು ನಿಮ್ಮಲ್ಲಿಯೂ ಇರುವದನ್ನು ನೀವು ಆ ದಿನದಲ್ಲಿ ತಿಳಿದುಕೊಳ್ಳುವಿರಿ. ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಕೊಂಡು ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ತಂದೆಗೆ ಪ್ರಿಯನಾಗಿರುವನು; ನಾನೂ ಅವನನ್ನು ಪ್ರೀತಿಸಿ ಅವನಿಗೆ ಕಾಣಿಸಿಕೊಳ್ಳುವೆನು ಎಂದು ಹೇಳಿದನು.
ಯೂದನು (ಇವನು ಇಸ್ಕರಿಯೋತನಲ್ಲ) - ಸ್ವಾಮೀ, ನೀನು ಲೋಕಕ್ಕೆ ಕಾಣಿಸಿಕೊಳ್ಳದೆ ನಮಗೆ ಮಾತ್ರ ಕಾಣಿಸಿಕೊಳ್ಳುವದಕ್ಕೆ ಏನು ಸಂಭವಿಸಿತು ಎಂದು ಕೇಳಿದ್ದಕ್ಕೆ ಯೇಸು ಅವನಿಗೆ - ಯಾರಾದರೂ ನನ್ನನ್ನು ಪ್ರೀತಿಸುವವನಾದರೆ ನನ್ನ ಮಾತನ್ನು ಕೈಕೊಂಡು ನಡೆಯುವನು; ಅವನನ್ನು ನನ್ನ ತಂದೆಯು ಪ್ರೀತಿಸುವನು, ಮತ್ತು ನಾವಿಬ್ಬರೂ ಅವನ ಬಳಿಗೆ ಬಂದು ಅವನ ಬಳಿಯಲ್ಲಿ ಬಿಡಾರವನ್ನು ಮಾಡಿಕೊಳ್ಳುವೆವು. ನನ್ನನ್ನು ಪ್ರೀತಿಸದೆ ಇರುವವನು ನನ್ನ ಮಾತುಗಳನ್ನು ಕೈಕೊಂಡು ನಡೆಯುವದಿಲ್ಲ; ನೀವು ಆಲಿಸುವ ಮಾತು ನನ್ನದಲ್ಲ, ನನ್ನನ್ನು ಕಳುಹಿಸಿದ ತಂದೆಯ ಮಾತೇ.ಈ ಮಾತುಗಳನ್ನು ನಾನು ಇನ್ನೂ ನಿಮ್ಮ ಬಳಿಯಲ್ಲಿರುವಾಗ ನಿಮಗೆ ಹೇಳಿದ್ದೇನೆ. ಆದರೆ ಆ ಸಹಾಯಕನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು.
ಶಾಂತಿಯನ್ನು ನಿಮಗೆ ಬಿಟ್ಟುಹೋಗುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಿಂದ ನಾನು ನಿಮಗೆ ಕೊಡುವದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ. ನಾನು ಹೋಗಿ ತಿರಿಗಿ ನಿಮ್ಮ ಬಳಿಗೆ ಬರುತ್ತೇನೆಂದು ನಿಮಗೆ ಹೇಳಿದ್ದನ್ನು ಕೇಳಿದಿರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನಾನು ತಂದೆಯ ಬಳಿಗೆ ಹೋಗುವ ವಿಷಯದಲ್ಲಿ ಸಂತೋಷಪಡುತ್ತಿದ್ದಿರಿ; ಯಾಕಂದರೆ ತಂದೆಯು ನನಗಿಂತ ದೊಡ್ಡವನು. ಅದೆಲ್ಲಾ ನಡೆಯುವಾಗ ನೀವು ನನ್ನನ್ನು ನಂಬುವಂತೆ ಅದು ನಡೆಯುವದಕ್ಕಿಂತ ಮುಂಚೆಯೇ ಈಗ ನಿಮಗೆ ಹೇಳಿದ್ದೇನೆ. ಇನ್ನು ನಾನು ನಿಮ್ಮ ಸಂಗಡ ಬಹಳ ಮಾತುಗಳನ್ನಾಡುವದಿಲ್ಲ, ಯಾಕಂದರೆ ಇಹಲೋಕಾಧಿಪತಿಯು ಬರುತ್ತಾನೆ. ಅವನಿಗೆ ಸಂಬಂಧಪಟ್ಟದ್ದು ಯಾವದೊಂದೂ ನನ್ನಲ್ಲಿಲ್ಲ; ಆದರೂ ನಾನು ತಂದೆಯನ್ನು ಪ್ರೀತಿಸುತ್ತೇನೆಂಬದು ಲೋಕಕ್ಕೆ ತಿಳಿದಿರಬೇಕೆಂದು ತಂದೆಯು ನನಗೆ ಕೊಟ್ಟ ಆಜ್ಞೆಯ ಮೇರೆಗೆ ಇದನ್ನು ಮಾಡುತ್ತೇನೆ. ಏಳಿರಿ, ಇಲ್ಲಿಂದ ಹೋಗೋಣ.
ಅಧ್ಯಾಯ 56
ನಾನೇ ನಿಜವಾದ ದ್ರಾಕ್ಷೇಬಳ್ಳಿ. ನನ್ನ ತಂದೆ ತೋಟಗಾರನು. ನನ್ನಲ್ಲಿದ್ದು ಫಲಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲಕೊಡುವ ಹಾಗೆ ಅದನ್ನು ಶುದ್ಧಿಮಾಡುತ್ತಾನೆ. ನಾನು ನಿಮಗೆ ಹೇಳಿದ ವಾಕ್ಯದ ದೆಸೆಯಿಂದ ಈಗ ಶುದ್ಧರಾಗಿದ್ದೀರಿ. ನೀವು ನನ್ನಲ್ಲಿ ನೆಲೆಗೊಂಡಿರ್ರಿ, ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲಕೊಡಲಾರದೋ ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ. ನಾನು ದ್ರಾಕ್ಷೇ ಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನೇ ಬಹಳ ಫಲಕೊಡುವನು; ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ. ಯಾವನು ನನ್ನಲ್ಲಿ ನೆಲೆಗೊಂಡಿರುವದಿಲ್ಲವೋ ಅವನು ಆ ಕೊಂಬೆಯಂತೆ ಹೊರಕ್ಕೆ ಬಿಸಾಡಲ್ಪಟ್ಟು ಒಣಗಿಹೋಗುವನು; ಅಂಥ ಕೊಂಬೆಗಳನ್ನು ಕೂಡಿಸಿ ಬೆಂಕಿಯಲ್ಲಿ ಹಾಕುತ್ತಾರೆ, ಅವು ಸುಟ್ಟುಹೋಗುತ್ತವೆ. ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ಏನು ಬೇಕಾದರೂ ಬೇಡಿಕೊಳ್ಳಿರಿ, ಅದು ನಿಮಗೆ ದೊರೆಯುವದು. ನೀವು ಬಹಳ ಫಲಕೊಡುವದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುವದು; ಮತ್ತು ನನ್ನ ಶಿಷ್ಯರಾಗುವಿರಿ.ತಂದೆ ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ; ನನ್ನ ಪ್ರೀತಿಯಲ್ಲಿ ನೆಲೆಗೊಂಡಿರ್ರಿ. ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಕೊಂಡು ನಡೆದು ಆತನ ಪ್ರೀತಿಯಲ್ಲಿ ನೆಲೆಗೊಂಡಿರುವ ಮೇರೆಗೆ ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. ನನ್ನಲ್ಲಿರುವ ಆನಂದವು ನಿಮ್ಮಲ್ಲಿಯೂ ಇರಬೇಕೆಂತಲೂ ನಿಮ್ಮ ಆನಂದವು ಪರಿಪೂರ್ಣವಾಗಬೇಕೆಂತಲೂ ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ.
ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನಾನು ಕೊಡುವ ಆಜ್ಞೆಯಾಗಿದೆ. ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ. ನಾನು ನಿಮಗೆ ಕೊಟ್ಟ ಆಜ್ಞೆಗಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು. ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳನ್ನುವದಿಲ್ಲ; ಯಜಮಾನನು ಮಾಡುವಂಥದು ಆಳಿಗೆ ತಿಳಿಯುವದಿಲ್ಲ. ನಿಮ್ಮನ್ನು ಸ್ನೇಹಿತರೆಂದು ಹೇಳಿದ್ದೇನೆ; ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ. ನೀವು ನನ್ನನ್ನು ಆರಿಸಿ ತೆಗೆದುಕೊಂಡಿಲ್ಲ; ನಾನು ನಿಮ್ಮನ್ನು ಆರಿಸಿ ತೆಗೆದುಕೊಂಡೆನು. ನೀವುಹೊರಟುಹೋಗಿಫಲಕೊಡುವವರಾಗಬೇಕೆಂತಲೂ ನೀವು ಕೊಡುವ ಫಲವು ನಿಲ್ಲುವಂಥದಾಗಬೇಕೆಂತಲೂ ನಿಮ್ಮನ್ನು ನೇವಿುಸಿದ್ದೇನೆ. ಹೀಗಿರಲಾಗಿ ನನ್ನ ಹೆಸರಿನಲ್ಲಿ ತಂದೆಯನ್ನು ಏನೇನು ಬೇಡಿಕೊಳ್ಳುವಿರೋ ಅದನ್ನು ಆತನು ನಿಮಗೆ ಕೊಡುವನು.ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂತಲೇ ಇವುಗಳನ್ನು ನಿಮಗೆ ಆಜ್ಞಾಪಿಸುತ್ತೇನೆ.
ಲೋಕವು ನಿಮ್ಮ ಮೇಲೆ ದ್ವೇಷಮಾಡುವದಾದರೆ ಅದು ಮೊದಲು ನನ್ನ ಮೇಲೆ ದ್ವೇಷಮಾಡಿತೆಂದು ತಿಳುಕೊಳ್ಳಿರಿ. ನೀವು ಲೋಕದ ಕಡೆಯವರಾಗಿರುತ್ತಿದ್ದರೆ ಲೋಕವು ನಿಮ್ಮ ಮೇಲೆ ತನ್ನವರೆಂದು ಮಮತೆ ಇಡುತ್ತಿತ್ತು; ಆದರೆ ನೀವು ಲೋಕದ ಕಡೆಯವರಲ್ಲದೆ ಇರುವದರಿಂದಲೂ ನಾನು ನಿಮ್ಮನ್ನು ಲೋಕದೊಳಗಿಂದ ಆರಿಸಿ ತೆಗೆದುಕೊಂಡಿರುವದರಿಂದಲೂ ಲೋಕವು ನಿಮ್ಮ ಮೇಲೆ ದ್ವೇಷ ಮಾಡುತ್ತದೆ. ದಣಿಗಿಂತ ಆಳು ದೊಡ್ಡವನಲ್ಲವೆಂಬದಾಗಿ ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಳ್ಳಿರಿ. ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು; ಅವರು ನನ್ನ ಮಾತನ್ನು ಕೈಕೊಂಡು ನಡೆದರೆ ನಿಮ್ಮ ಮಾತನ್ನು ಸಹ ಕೈಕೊಂಡು ನಡೆಯುವರು. ಆದರೆ ಅವರು ನನ್ನನ್ನು ಕಳುಹಿಸಿಕೊಟ್ಟಾತನನ್ನು ತಿಳಿಯದವರಾದದರಿಂದ ಇದನ್ನೆಲ್ಲಾ ನನ್ನ ಹೆಸರಿನ ನಿವಿುತ್ತ ನಿಮಗೆ ಮಾಡುವರು. ನಾನು ಬಂದು ಅವರ ಕೂಡ ಮಾತಾಡದಿದ್ದರೆ ಅವರಿಗೆ ಪಾಪವು ಇರುತ್ತಿದ್ದಿಲ್ಲ; ಆದರೆ ಅವರು ಮಾಡಿದ ಪಾಪಕ್ಕಾಗಿ ಅವರಿಗೆ ಈಗ ನೆವವಿಲ್ಲ. ನನ್ನ ಮೇಲೆ ದ್ವೇಷಮಾಡುವವನು ನನ್ನ ತಂದೆಯ ಮೇಲೆಯೂ ದ್ವೇಷಮಾಡುವವನಾಗಿದ್ದಾನೆ. ಮತ್ತಾರೂ ನಡಿಸದ ಕ್ರಿಯೆಗಳನ್ನು ನಾನು ಅವರಲ್ಲಿ ನಡಿಸದೆ ಇದ್ದರೆ ಅವರಿಗೆ ಪಾಪವು ಇರುತ್ತಿದ್ದಿಲ್ಲ; ಆದರೆ ಈಗ ಅವರು ನೋಡಿದ್ದಾರೆ, ಆದರೂ ನನ್ನ ಮೇಲೆಯೂ ನನ್ನ ತಂದೆಯ ಮೇಲೆಯೂ ದ್ವೇಷಮಾಡಿದ್ದಾರೆ. ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು. ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಸಹಾಯಕನು, ಅಂದರೆ ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು, ಬಂದಾಗ ಆತನು ನನ್ನನ್ನು ಕುರಿತು ಸಾಕ್ಷಿಹೇಳುವನು. ನೀವು ಮೊದಲಿನಿಂದ ನನ್ನ ಸಂಗಡ ಇದ್ದ ಕಾರಣ ನೀವೂ ಸಾಕ್ಷಿಗಳಾಗಿದ್ದೀರಿ.
ನೀವು ಧೈರ್ಯಗೆಟ್ಟು ಹಿಂಜರಿಯಬಾರದೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ನಿಮಗೆ ಬಹಿಷ್ಕಾರ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಯಜ್ಞವನ್ನು ಮಾಡಿದ್ದೇನೆಂದು ನೆನಸುವ ಕಾಲ ಬರುತ್ತದೆ. ಅವರು ತಂದೆಯನ್ನಾದರೂ ನನ್ನನ್ನಾದರೂ ತಿಳಿಯದವರಾಗಿರುವದರಿಂದ ಇಂಥದನ್ನು ನಿಮಗೆ ಮಾಡುವರು. ಆ ಕಾಲ ಬಂದಾಗ ಆತನು ನಮಗೆ ಇಂಥಿಂಥದನ್ನು ಹೇಳಿದನಲ್ಲಾ ಎಂದು ನೀವು ನೆನಪಿಗೆ ತರುವಂತೆ ನಿಮ್ಮ ಸಂಗಡ ಈ ಮಾತುಗಳನ್ನು ಆಡಿದ್ದೇನೆ.ನಾನು ನಿಮ್ಮ ಸಂಗಡ ಇದ್ದದರಿಂದ ಮೊದಲು ಇವುಗಳನ್ನು ನಿಮಗೆ ಹೇಳಲಿಲ್ಲ. ಆದರೆ ಈಗ ನಾನು ನನ್ನನ್ನು ಕಳುಹಿಸಿಕೊಟ್ಟಾತನ ಬಳಿಗೆ ಹೋಗುತ್ತೇನೆ. ನೀನು ಎಲ್ಲಿಗೆ ಹೋಗುತ್ತೀ ಎಂದು ನಿಮ್ಮಲ್ಲಿ ಒಬ್ಬನಾದರೂ ನನ್ನನ್ನು ಕೇಳುವದಿಲ್ಲ; ಆದರೆ ನಾನು ಈ ಮಾತುಗಳನ್ನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯವು ದುಃಖದಿಂದ ತುಂಬಿಯದೆ. ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ಕೇಳಿರಿ; ನಾನು ಹೋಗುವದು ನಿಮಗೆ ಹಿತಕರವಾಗಿದೆ; ಹೇಗಂದರೆ ನಾನು ಹೋಗದಿದ್ದರೆ ಆ ಸಹಾಯಕನು ನಿಮ್ಮ ಬಳಿಗೆ ಬರುವದಿಲ್ಲ; ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿಕೊಡುತ್ತೇನೆ. ಆತನು ಬಂದು ಪಾಪ ನೀತಿ ನ್ಯಾಯತೀರ್ವಿಕೆ ಈ ವಿಷಯಗಳಲ್ಲಿ ಲೋಕಕ್ಕೆ ಅರುಹನ್ನು ಹುಟ್ಟಿಸುವನು. ಅವರು ನನ್ನನ್ನು ನಂಬದೆ ಇರುವದರಿಂದ ಪಾಪದ ವಿಷಯದಲ್ಲಿಯೂ ನಾನು ತಂದೆಯ ಬಳಿಗೆ ಹೋಗಿ ಇನ್ನು ಮೇಲೆ ನಿಮಗೆ ಕಾಣಿಸದೆ ಇರುವದರಿಂದ ನೀತಿಯ ವಿಷಯದಲ್ಲಿಯೂ ಇಹಲೋಕಾಧಿಪತಿಗೆ ನ್ಯಾಯತೀರ್ವಿಕೆಯಾದದರಿಂದ ನ್ಯಾಯತೀರ್ವಿಕೆಯ ವಿಷಯದಲ್ಲಿಯೂ ಲೋಕಕ್ಕೆ ಅರುಹನ್ನು ಹುಟ್ಟಿಸುವನು.ನಾನು ನಿಮಗೆ ಹೇಳಬೇಕಾದದ್ದು ಇನ್ನೂ ಬಹಳ ಉಂಟು; ಆದರೆ ಸದ್ಯಕ್ಕೆ ಅದನ್ನು ಹೊರಲಾರಿರಿ. ಸತ್ಯದ ಆತ್ಮನು ಬಂದಾಗ ಆತನು ನಿಮ್ಮನ್ನು ನಡಿಸಿಕೊಂಡು ಹೋಗಿ ಸಕಲ ವಿಷಯದಲ್ಲಿಯೂ ಸತ್ಯಕ್ಕೆ ಸೇರಿಸುವನು. ಆತನು ತನ್ನಷ್ಟಕ್ಕೆ ತಾನೇ ಮಾತಾಡದೆ ಕೇಳಿದ ಮಾತುಗಳನ್ನೇ ಆಡುವನು; ಮತ್ತು ಮುಂದಾಗುವ ಸಂಗತಿಗಳನ್ನು ನಿಮಗೆ ತಿಳಿಸುವನು. ಆತನು ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ತಿಳಿಸುತ್ತಾ ನನ್ನನ್ನೇ ಮಹಿಮೆಪಡಿಸುವನು. ತಂದೆಗೆ ಇರುವದೆಲ್ಲಾ ನನ್ನದು; ಆದದರಿಂದಲೇ ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ತಿಳಿಸುವನೆಂದು ಹೇಳಿದೆನು.
ಸ್ವಲ್ಪಕಾಲವಾದ ಮೇಲೆ ನಾನು ನಿಮಗೆ ಕಾಣುವದಿಲ್ಲ; ಅನಂತರ ಸ್ವಲ್ಪಕಾಲವಾದ ಮೇಲೆ ನನ್ನನ್ನು ನೋಡುವಿರಿ ಅಂದನು.ಇದನ್ನು ಕೇಳಿ ಶಿಷ್ಯರಲ್ಲಿ ಕೆಲವರು - ಇದೇನು ಈತನು ಹೇಳುವ ಮಾತು? ಸ್ವಲ್ಪಕಾಲವಾದ ಮೇಲೆ ನಾನು ನಿಮಗೆ ಕಾಣುವದಿಲ್ಲ, ಅನಂತರ ಸ್ವಲ್ಪಕಾಲವಾದ ಮೇಲೆ ನನ್ನನ್ನು ನೋಡುವಿರಿ ಅನ್ನುತ್ತಾನೆ; ಮತ್ತು ನಾನು ತಂದೆಯ ಬಳಿಗೆ ಹೋಗುವದರಿಂದ ಅನ್ನುತ್ತಾನೆ ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡು - ಸ್ವಲ್ಪಕಾಲವೆಂದು ಈತನು ಹೇಳುವ ಈ ಮಾತೇನು? ಏನು ಮಾತಾಡುತ್ತಾನೋ ನಮಗೆ ತಿಳಿಯದು ಅಂದುಕೊಳ್ಳುತ್ತಿದ್ದರು. ಯೇಸು ತನ್ನನ್ನು ಕೇಳಬೇಕೆಂದಿದ್ದಾರೆಂದು ತಿಳಿದು ಅವರಿಗೆ - ಸ್ವಲ್ಪಕಾಲವಾದ ಮೇಲೆ ನಾನು ನಿಮಗೆ ಕಾಣುವದಿಲ್ಲ, ಇನ್ನು ಸ್ವಲ್ಪಕಾಲವಾದ ಮೇಲೆ ನನ್ನನ್ನು ನೋಡುವಿರಿ ಎಂದು ನಾನು ಹೇಳಿದ್ದಕ್ಕೆ ನೀವು ನಿಮ್ಮನಿಮ್ಮೊಳಗೆ ವಿಚಾರಿಸಿಕೊಳ್ಳುತ್ತೀರಾ? ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಅಳುತ್ತಾ ಗೋಳಾಡುತ್ತಾ ಇರುವಿರಿ, ಆದರೆ ಲೋಕವು ಸಂತೋಷಿಸುವದು; ನಿಮಗೆ ದುಃಖವಾಗುವದು, ಆದರೆ ನಿಮ್ಮ ದುಃಖವು ಹೋಗಿ ಆನಂದ ಬರುವದು. ಒಬ್ಬ ಸ್ತ್ರೀ ಹೆರುವಾಗ ತನ್ನ ಬೇನೆಯ ಕಾಲ ಬಂತೆಂದು ಆಕೆಗೆ ದುಃಖವಾಗುತ್ತದೆ; ಆದರೆ ಕೂಸನ್ನು ಹೆತ್ತ ಮೇಲೆ ಲೋಕದಲ್ಲಿ ಒಬ್ಬ ಮನುಷ್ಯನು ಹುಟ್ಟಿದನೆಂಬ ಆನಂದದಿಂದ ಆ ಬೇನೆಯನ್ನು ನೆನಸುವದಿಲ್ಲ. ಹಾಗೆಯೇ ನಿಮಗೂ ಈಗ ದುಃಖವಿದ್ದರೂ ನಾನು ನಿಮ್ಮನ್ನು ತಿರಿಗಿ ನೋಡುವೆನು, ಆಗ ನಿಮ್ಮ ಹೃದಯಕ್ಕೆ ಆನಂದವಾಗುವದು, ಮತ್ತು ನಿಮ್ಮ ಆನಂದವನ್ನು ಯಾರೂ ನಿವ್ಮಿುಂದ ತೆಗೆಯುವದಿಲ್ಲ. ಆ ದಿನದಲ್ಲಿ ನೀವು ನನಗೆ ಯಾವ ಪ್ರಶ್ನೆಯನ್ನೂ ಮಾಡುವದಿಲ್ಲ.
ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ತಂದೆಯನ್ನು ಏನಾದರೂ ಬೇಡಿಕೊಂಡರೆ ಅದನ್ನು ಆತನು ನನ್ನ ಹೆಸರಿನ ಮೇಲೆ ನಿಮಗೆ ಕೊಡುವನು. ನೀವು ಇದುವರೆಗೆ ನನ್ನ ಹೆಸರಿನ ಮೇಲೆ ಯಾವದೊಂದನ್ನೂ ಬೇಡಿಕೊಂಡಿಲ್ಲ; ಬೇಡಿಕೊಳ್ಳಿರಿ, ನಿಮಗೆ ಸಿಕ್ಕುವದು; ಆಗ ನಿಮ್ಮ ಆನಂದವು ಪರಿಪೂರ್ಣವಾಗುವದು.ಈ ಸಂಗತಿಗಳನ್ನು ಗೂಢಾರ್ಥವಾಗಿ ನಿಮಗೆ ಹೇಳಿದ್ದೇನೆ; ಆದರೆ ಇನ್ನು ಮೇಲೆ ಸಾಮ್ಯರೂಪವಾಗಿ ನಿಮ್ಮ ಸಂಗಡ ಮಾತಾಡದೆ ತಂದೆಯ ವಿಷಯದಲ್ಲಿ ಸ್ಪಷ್ಟವಾಗಿ ತಿಳಿಸುವ ಕಾಲ ಬರುತ್ತದೆ. ಆ ದಿನದಲ್ಲಿ ನನ್ನ ಹೆಸರಿನ ಮೇಲೆ ಬೇಡಿಕೊಳ್ಳುವಿರಿ. ನಾನು ತಂದೆಯನ್ನು ನಿಮಗೋಸ್ಕರ ಕೇಳಿಕೊಳ್ಳುವೆನೆಂತ ನಿಮಗೆ ಹೇಳುವದಿಲ್ಲ; ನೀವು ನನ್ನ ಮೇಲೆ ಮಮತೆಯಿಟ್ಟು ನನ್ನನ್ನು ತಂದೆಯ ಬಳಿಯಿಂದ ಹೊರಟುಬಂದವನೆಂದು ನಂಬಿದ್ದರಿಂದ ತಂದೆಯು ತಾನೇ ನಿಮ್ಮ ಮೇಲೆ ಮಮತೆ ಇಡುತ್ತಾನಲ್ಲವೇ. ತಂದೆಯ ಬಳಿಯಿಂದ ಹೊರಟು ಈ ಲೋಕಕ್ಕೆ ಬಂದಿದ್ದೇನೆ; ಇನ್ನು ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತೇನೆ ಅಂದನು.ಅದಕ್ಕೆ ಶಿಷ್ಯರು - ನೀನು ಹೇಳುವ ಸಂಗತಿಯನ್ನು ಈಗ ಗೂಢಾರ್ಥವಾಗಿ ಹೇಳದೆ ಸ್ಪಷ್ಟವಾಗಿ ಮಾತಾಡುತ್ತೀಯಲ್ಲಾ; ನೀನು ಸಮಸ್ತವನ್ನು ತಿಳಿದವನೆಂದೂ ನಿನಗೆ ಪ್ರಶ್ನೆಮಾಡಬೇಕಾದ ಅವಶ್ಯವಿಲ್ಲವೆಂದೂ ಈಗ ತಿಳಿಯಿತು; ಇದರಿಂದ ನಿನ್ನನ್ನು ದೇವರ ಬಳಿಯಿಂದ ಬಂದವನೆಂದು ನಂಬುತ್ತೇವೆ ಅಂದದ್ದಕ್ಕೆ ಯೇಸು - ಈಗ ನಂಬುತ್ತೀರೋ? ನೋಡಿರಿ, ನಿಮ್ಮಲ್ಲಿ ಒಬ್ಬೊಬ್ಬನು ತನ್ನತನ್ನ ಸ್ಥಳಕ್ಕೆ ಚದರಿಹೋಗಿ ನನ್ನನ್ನು ಒಂಟಿಗನಾಗಿ ಬಿಡುವ ಕಾಲ ಬರುವದು, ಈಗ ಬಂದಿದೆ. ಆದರೆ ನಾನು ಒಂಟಿಗನಲ್ಲ, ತಂದೆಯು ನನ್ನ ಸಂಗಡ ಇದ್ದಾನೆ. ನೀವು ನನ್ನಲ್ಲಿದ್ದು ಮನಶ್ಶಾಂತಿಯನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ ಎಂದು ಹೇಳಿದನು.
ಅಧ್ಯಾಯ 57
ಯೇಸು ಈ ಮಾತುಗಳನ್ನಾಡಿದ ಮೇಲೆ ಆಕಾಶದ ಕಡೆಗೆ ಕಣ್ಣೆತ್ತಿ ಹೇಳಿದ್ದೇನಂದರೆ - ತಂದೆಯೇ, ಕಾಲ ಬಂದದೆ; ನಿನ್ನ ಮಗನನ್ನು ಮಹಿಮೆಪಡಿಸು, ಆಗ ಮಗನು ನಿನ್ನನ್ನು ಮಹಿಮೆಪಡಿಸುವದಕ್ಕಾಗುವದು. ನೀನು ಅವನಿಗೆ ಯಾರಾರನ್ನು ಕೊಟ್ಟಿದ್ದೀಯೋ ಅವರೆಲ್ಲರಿಗೆ ಅವನು ನಿತ್ಯಜೀವವನ್ನು ಕೊಡಬೇಕೆಂದು ಅವನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿಯಲ್ಲಾ. ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು. ಮಾಡಬೇಕೆಂದು ನೀನು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿ ನಿನ್ನನ್ನು ಭೂಲೋಕದಲ್ಲಿ ಮಹಿಮೆಪಡಿಸಿದೆನು. ಈಗ ತಂದೆಯೇ, ನೀನು ನಿನ್ನ ಬಳಿಯಲ್ಲಿ ನನ್ನನ್ನು ಮಹಿಮೆಪಡಿಸು; ಲೋಕ ಉಂಟಾಗುವದಕ್ಕಿಂತ ಮುಂಚೆ ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದಲೇ ನನ್ನನ್ನು ಮಹಿಮೆಪಡಿಸು.ಲೋಕದೊಳಗಿಂದ ನೀನು ನನಗೆ ಕೊಟ್ಟ ಮನುಷ್ಯರಿಗೆ ನಿನ್ನ ಹೆಸರನ್ನು ತಿಳಿಯಪಡಿಸಿದೆನು. ಇವರು ನಿನ್ನವರಾಗಿದ್ದರು, ನೀನು ಇವರನ್ನು ನನಗೆ ಕೊಟ್ಟೆ; ಮತ್ತು ಇವರು ನಿನ್ನ ವಾಕ್ಯವನ್ನು ಕೈಕೊಂಡು ನಡೆದಿದ್ದಾರೆ. ನೀನು ನನಗೆ ಕೊಟ್ಟದ್ದೆಲ್ಲಾ ನಿನ್ನಿಂದಲೇ ಬಂದದೆ ಎಂದು ಈಗ ಇವರು ತಿಳುಕೊಂಡಿದ್ದಾರೆ.
ಹೇಗಂದರೆ ನೀನು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ; ಇವರು ಆ ಮಾತುಗಳನ್ನು ಕೈಕೊಂಡು ನನ್ನನ್ನು ನಿನ್ನ ಬಳಿಯಿಂದ ಹೊರಟುಬಂದವನೆಂದು ನಿಜವಾಗಿ ತಿಳಿದು ನೀನೇ ನನ್ನನ್ನು ಕಳುಹಿಸಿಕೊಟ್ಟಿರುವದಾಗಿ ನಂಬಿದ್ದಾರೆ. ನಾನು ಇವರಿಗೋಸ್ಕರ ಕೇಳಿಕೊಳ್ಳುತ್ತೇನೆ; ಲೋಕಕ್ಕೋಸ್ಕರ ಕೇಳಿಕೊಳ್ಳದೆ ನೀನು ನನಗೆ ಕೊಟ್ಟವರಿಗೋಸ್ಕರವೇ ಕೇಳಿಕೊಳ್ಳುತ್ತೇನೆ; ನಿನ್ನವರಾಗಿದ್ದಾರೆ. ನನ್ನದೆಲ್ಲಾ ನಿನ್ನದೇ, ನಿನ್ನದೆಲ್ಲಾ ನನ್ನದೇ; ಮತ್ತು ಇವರಿಂದ ನನಗೆ ಮಹಿಮೆ ಉಂಟಾಗಿದೆ. ಇನ್ನು ನಾನು ಲೋಕದಲ್ಲಿ ಇರುವದಿಲ್ಲ, ಇವರು ಲೋಕದಲ್ಲಿ ಇರುತ್ತಾರೆ, ನಾನು ನಿನ್ನ ಬಳಿಗೆ ಬರುತ್ತೇನೆ. ಪವಿತ್ರನಾದ ತಂದೆಯೇ, ನಾವು ಒಂದಾಗಿರುವ ಹಾಗೆ ಇವರೂ ಒಂದಾಗಿರಬೇಕೆಂದು ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಯಬೇಕು. ನಾನು ಇವರ ಸಂಗಡ ಇದ್ದಾಗ ನೀನು ನನಗೆ ಕೊಟ್ಟಿರುವ ನಿನ್ನ ಹೆಸರಿನಲ್ಲಿ ಇವರನ್ನು ಕಾಯುತ್ತಾ ಬಂದೆನು, ಇವರನ್ನು ಕಾಪಾಡಿದೆನು; ಶಾಸ್ತ್ರದ ಮಾತು ನೆರವೇರುವಂತೆ ನಾಶಕ್ಕೆ ಗುರಿಯಾದ ಆ ಮನುಷ್ಯನೇ ಹೊರತು ಇವರಲ್ಲಿ ಮತ್ತಾರೂ ನಾಶವಾಗಲಿಲ್ಲ. ಆದರೆ ಈಗ ನಿನ್ನ ಬಳಿಗೆ ಬರುವವನಾಗಿದ್ದೇನೆ; ಆದದರಿಂದ ಇವರಲ್ಲಿ ನನ್ನ ಆನಂದವು ಪರಿಪೂರ್ಣವಾಗಿರುವಂತೆ ಲೋಕದಲ್ಲಿದ್ದು ಈ ಮಾತುಗಳನ್ನು ಆಡುತ್ತೇನೆ. ನಾನು ನಿನ್ನ ವಾಕ್ಯವನ್ನು ಇವರಿಗೆ ಕೊಟ್ಟಿದ್ದೇನೆ; ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರೂ ಲೋಕದವರಲ್ಲ; ಆದಕಾರಣ ಲೋಕವು ಇವರ ಮೇಲೆ ದ್ವೇಷ ಮಾಡಿ ಅದೆ. ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.
ಇವರನ್ನು ಸತ್ಯದಲ್ಲಿ ಸೇರಿಸಿ ಪ್ರತಿಷ್ಠೆ ಪಡಿಸು; ನಿನ್ನ ವಾಕ್ಯವೇ ಸತ್ಯವು. ನೀನು ನನ್ನನ್ನು ಲೋಕಕ್ಕೆ ಕಳುಹಿಸಿಕೊಟ್ಟಂತೆ ನಾನೂ ಇವರನ್ನು ಲೋಕಕ್ಕೆ ಕಳುಹಿಸಿಕೊಟ್ಟೆನು. ಇವರು ನಿಜವಾಗಿ ಪ್ರತಿಷ್ಠಿತರಾಗಬೇಕೆಂದು ಇವರಿಗೋಸ್ಕರ ನಾನು ನನ್ನನ್ನು ಪ್ರತಿಷ್ಠೆಪಡಿಸಿಕೊಳ್ಳುತ್ತೇನೆ.ಆದರೆ ಇವರಿಗೋಸ್ಕರ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನನ್ನು ನಂಬುವವರಿಗೋಸ್ಕರ ಸಹ ಕೇಳಿಕೊಳ್ಳುತ್ತೇನೆ. ನೀನು ನನ್ನನ್ನು ಕಳುಹಿಸಿಕೊಟ್ಟಿದ್ದೀ ಎಂದು ಲೋಕವು ನಂಬುವದಕ್ಕಾಗಿ ಅವರೆಲ್ಲರೂ ಒಂದಾಗಿರಬೇಕೆಂತಲೂ ತಂದೆಯೇ, ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಪ್ರಕಾರ ಅವರೂ ನಮ್ಮಲ್ಲಿ ಇರಬೇಕೆಂತಲೂ ಕೇಳಿಕೊಳ್ಳುತ್ತೇನೆ. ನಾವು ಒಂದಾಗಿರುವ ಪ್ರಕಾರ ಅವರೂ ಒಂದಾಗಿರಬೇಕೆಂದು ನೀನು ನನಗೆ ಕೊಟ್ಟಿರುವ ಮಹಿಮೆಯನ್ನು ನಾನು ಅವರಿಗೆ ಕೊಟ್ಟಿದ್ದೇನೆ. ನಾನು ಅವರಲ್ಲಿಯೂ ನೀನು ನನ್ನಲ್ಲಿಯೂ ಇರಲಾಗಿ ಅವರ ಐಕ್ಯವು ಪೂರ್ಣಸಿದ್ಧಿಗೆ ಬರುವದರಿಂದ ನೀನು ನನ್ನನ್ನು ಕಳುಹಿಸಿಕೊಟ್ಟಿದ್ದೀ ಎಂದೂ ನೀನು ನನ್ನನ್ನು ಪ್ರೀತಿಸಿದಂತೆ ಅವರನ್ನೂ ಪ್ರೀತಿಸಿದ್ದೀ ಎಂದೂ ಲೋಕಕ್ಕೆ ತಿಳಿದುಬರುವದು. ತಂದೆಯೇ, ನೀನು ಯಾರನ್ನು ನನಗೆ ಕೊಟ್ಟಿಯೋ ಅವರು ನಾನಿರುವ ಸ್ಥಳದಲ್ಲಿ ನನ್ನ ಕೂಡ ಇದ್ದುಕೊಂಡು ಲೋಕವು ಹುಟ್ಟುವದಕ್ಕಿಂತ ಮುಂಚೆಯೇ ನೀನು ನನ್ನನ್ನು ಪ್ರೀತಿಸಿ ನನಗೆ ಕೊಟ್ಟಿರುವ ಮಹಿಮೆಯನ್ನು ನೋಡಬೇಕೆಂದು ಇಚ್ಫೈಸುತ್ತೇನೆ. ನೀತಿಸ್ವರೂಪನಾದ ತಂದೆಯೇ, ಲೋಕವಂತೂ ನಿನ್ನನ್ನು ತಿಳಿಯಲಿಲ್ಲ, ಆದರೆ ನಾನು ನಿನ್ನನ್ನು ತಿಳಿದಿದ್ದೇನೆ; ಮತ್ತು ಇವರು ನೀನೇ ನನ್ನನ್ನು ಕಳುಹಿಸಿಕೊಟ್ಟಿರುವದಾಗಿ ತಿಳುಕೊಂಡಿದ್ದಾರೆ. ನಾನು ಅವರಿಗೆ ನಿನ್ನ ಹೆಸರನ್ನು ತಿಳಿಸಿದ್ದೇನೆ, ಇನ್ನೂ ತಿಳಿಸುವೆನು. ನೀನು ನನ್ನ ಮೇಲೆ ಇಟ್ಟಂಥ ಪ್ರೀತಿಯು ಅವರಲ್ಲಿ ಇರಬೇಕೆಂದೂ ನಾನೂ ಅವರಲ್ಲಿ ಇರಬೇಕೆಂದೂ ಪ್ರಾರ್ಥಿಸುತ್ತೇನೆ ಅಂದನು.
ಅಧ್ಯಾಯ 58
ಯೇಸು ಇದನ್ನು ಹೇಳಿದ ಮೇಲೆ ತನ್ನ ಶಿಷ್ಯರ ಸಂಗಡ ಕೆದ್ರೋನ್ ಹಳ್ಳದ ಆಚೆಗೆ ಹೊರಟುಹೋದನು. ಅಲ್ಲಿ ಒಂದು ತೋಟವಿತ್ತು; ಅದರೊಳಕ್ಕೆ ಆತನೂ ಆತನ ಶಿಷ್ಯರೂ ಹೋದರು.ತರುವಾಯ ಅವರು ಗೆತ್ಸೇಮನೆ ಎಂಬ ತೋಟಕ್ಕೆ ಬಂದರು. ಆತನು ತನ್ನ ಶಿಷ್ಯರಿಗೆ - ಇಲ್ಲೇ ಕೂತುಕೊಳ್ಳಿರಿ, ನಾನು ಪ್ರಾರ್ಥನೆಮಾಡಿ ಬರುತ್ತೇನೆ ಎಂದು ಹೇಳಿ ಪೇತ್ರ ಯಾಕೋಬ ಯೋಹಾನರನ್ನು ತನ್ನ ಜೊತೆಯಲ್ಲಿ ಕರಕೊಂಡು ಹೋಗಿ ಬೆಚ್ಚಿಬೆರಗಾಗಿ ಮನಗುಂದಿದವನಾದನು. ಮತ್ತು ಅವರಿಗೆ - ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ. ನೀವು ಇಲ್ಲೇ ಇದ್ದು ಎಚ್ಚರವಾಗಿರ್ರಿ ಎಂದು ಹೇಳಿ ಸ್ವಲ್ಪ ಮುಂದೆ ಹೋಗಿ ನೆಲದ ಮೇಲೆ ಅಡ್ಡಬಿದ್ದು ಸಾಧ್ಯವಾದರೆ ಆ ಗಳಿಗೆ ತನ್ನನ್ನು ಬಿಟ್ಟುಹೋಗುವಂತೆ ದೇವರನ್ನು ಪ್ರಾರ್ಥಿಸಿ- ನನ್ನ ತಂದೆಯೇ, ಸಾಧ್ಯವಾಗಿದ್ದರೆ ಈ ಪಾತ್ರೆಯು ನನ್ನನ್ನು ಬಿಟ್ಟುಹೋಗಲಿ; ಹೇಗೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ ಎಂದು ದೇವರನ್ನು ಪ್ರಾರ್ಥಿಸಿದನು.
ಆಗ ಪರಲೋಕದಿಂದ ಬಂದ ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು ಆತನನ್ನು ಬಲಪಡಿಸಿದನು. ಆತನು ಮನೋವ್ಯಥೆಯುಳ್ಳವನಾಗಿ ಇನ್ನೂ ಆಸಕ್ತಿಯಿಂದ ಪ್ರಾರ್ಥಿಸುತ್ತಿರಲಾಗಿ ಆತನ ಬೆವರು ಭೂವಿುಗೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳೋಪಾದಿಯಲ್ಲಿತ್ತು. ಆಮೇಲೆ ಆ ಶಿಷ್ಯರ ಬಳಿಗೆ ಬಂದು ಅವರು ನಿದ್ದೆ ಮಾಡುವದನ್ನು ಕಂಡು ಪೇತ್ರನಿಗೆ - ಹೀಗೋ? ಒಂದು ಗಳಿಗೆಯಾದರೂ ನನ್ನ ಸಂಗಡ ಎಚ್ಚರವಾಗಿರಲಾರಿರಾ? ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು ಎಂದು ಹೇಳಿದನು. ತಿರಿಗಿ ಎರಡನೆಯ ಸಾರಿ ಹೋಗಿ - ನನ್ನ ತಂದೆಯೇ, ನಾನು ಕುಡಿದ ಹೊರತು ಈ ಪಾತ್ರೆ ಬಿಟ್ಟು ಹೋಗಕೂಡದಾಗಿದ್ದರೆ ನಿನ್ನ ಚಿತ್ತವೇ ಆಗಲಿ ಎಂದು ಪ್ರಾರ್ಥನೆಮಾಡಿದನು. ಆತನು ತಿರಿಗಿ ಬಂದಾಗ ಅವರು ನಿದ್ದೆಮಾಡುವದನ್ನು ಕಂಡನು; ಅವರ ಕಣ್ಣುಗಳು ಭಾರವಾಗಿದ್ದವು. ಆಮೇಲೆ ತಿರಿಗಿ ಅವರನ್ನು ಬಿಟ್ಟುಹೋಗಿ ತಿರಿಗಿ ಅದೇ ಮಾತನ್ನು ಹೇಳುತ್ತಾ ಮೂರನೆಯ ಸಾರಿ ಪ್ರಾರ್ಥಿಸಿದನು. ತರುವಾಯ ಶಿಷ್ಯರ ಬಳಿಗೆ ಬಂದು ಅವರಿಗೆ - ನೀವು ಇನ್ನೂ ನಿದ್ದೆಮಾಡಿ ದಣುವಾರಿಸಿಕೊಳ್ಳಿರಿ; ಇಗೋ, ಗಳಿಗೆ ಸಮೀಪಿಸಿತು, ಈಗ ಮನುಷ್ಯಕುಮಾರನು ದುರ್ಜನರ ಕೈಗೆ ಒಪ್ಪಿಸಲ್ಪಡುತ್ತಾನೆ. ಏಳಿರಿ, ಹೋಗೋಣ; ನನ್ನನ್ನು ಹಿಡುಕೊಡುವವನು ಹತ್ತಿರಕ್ಕೆ ಬಂದಿದ್ದಾನೆ ನೋಡಿರಿ ಎಂದು ಹೇಳಿದನು.
ಆತನು ಇನ್ನೂ ಮಾತಾಡುತ್ತಿರುವಾಗಲೇ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಬಂದನು. ಮಹಾಯಾಜಕರು ಶಾಸ್ತ್ರಿಗಳು ಹಿರಿಯರು ಇವರ ಕಡೆಯಿಂದ ಒಂದು ಗುಂಪು ಕತ್ತಿದೊಣ್ಣೆಗಳನ್ನು ಹಿಡುಕೊಂಡು ಅವನ ಸಂಗಡ ಬಂತು;ಯೇಸುವೂ ಆತನ ಶಿಷ್ಯರೂ ಆಗಾಗ್ಗೆ ಅಲ್ಲಿ ಕೂಡುತ್ತಾ ಇದ್ದದರಿಂದ ಆತನನ್ನು ಹಿಡುಕೊಟ್ಟ ಯೂದನಿಗೂ ಆ ಸ್ಥಳವು ಗೊತ್ತಾಗಿತ್ತು.ಆಗ ಯೇಸು ತನ್ನ ಮೇಲೆ ಬರುವದನ್ನೆಲ್ಲಾ ತಿಳಿದು ಹೊರಗೆ ಹೋಗಿ - ನೀವು ಯಾರನ್ನು ಹುಡುಕುತ್ತೀರಿ ಎಂದು ಅವರನ್ನು ಕೇಳಿದನು. ಅದಕ್ಕೆ ಅವರು - ನಜರೇತಿನ ಯೇಸುವನ್ನು ಹುಡುಕುತ್ತೇವೆ ಅನ್ನಲು ಯೇಸು ಅವರಿಗೆ - ನಾನೇ ಅವನು ಎಂದು ಹೇಳಿದನು. ಆತನನ್ನು ಹಿಡುಕೊಡುವ ಯೂದನು ಸಹ ಅವರ ಸಂಗಡ ನಿಂತಿದ್ದನು. ಆತನು ಅವರಿಗೆ - ನಾನೇ ಅವನು ಎಂದು ಹೇಳಿದಾಗ ಅವರು ಹಿಂದಕ್ಕೆ ಸರಿದು ನೆಲದ ಮೇಲೆ ಬಿದ್ದರು. ಆತನು - ಯಾರನ್ನು ಹುಡುಕುತ್ತೀರೆಂದು ತಿರಿಗಿ ಅವರನ್ನು ಕೇಳಲು ಅವರು - ನಜರೇತಿನ ಯೇಸುವನ್ನು ಹುಡುಕುತ್ತೇವೆ ಅಂದರು. ಅದಕ್ಕೆ ಯೇಸು - ನಾನೇ ಅವನೆಂದು ನಿಮಗೆ ಹೇಳಿದೆನಲ್ಲಾ; ನೀವು ನನ್ನನ್ನೇ ಹುಡುಕುವವರಾದರೆ ಇವರು ಹೋಗಬಿಡಿರಿ ಅಂದನು. ನೀನು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ನಾನು ಕಳಕೊಳ್ಳಲಿಲ್ಲವೆಂದು ಆತನು ಹೇಳಿದ ಮಾತು ಹೀಗೆ ನೆರವೇರಿತು.
ಇದಲ್ಲದೆ ಆತನನ್ನು ಹಿಡುಕೊಡುವವನು ಅವರಿಗೆ - ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಅವನನ್ನು ಹಿಡಿದು ಭದ್ರವಾಗಿ ತೆಗೆದುಕೊಂಡುಹೋಗಿರಿ ಎಂದು ಗುರುತು ಹೇಳಿಕೊಟ್ಟಿದ್ದನು.ಆತನು ಇನ್ನೂ ಮಾತಾಡುತ್ತಿರಲು, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನೆಂಬವನು ಆ ಜನರ ಮುಂದೆ ಮುಂದೆ ನಡೆದನು. ಅವನು ಯೇಸುವಿಗೆ ಮುದ್ದಿಡುವದಕ್ಕಾಗಿ ಆತನ ಬಳಿಗೆ ಬರಲು ಯೇಸು ಅವನಿಗೆ - ಯೂದನೇ, ಮುದ್ದಿಟ್ಟು ಮನುಷ್ಯಕುಮಾರನನ್ನು ಹಿಡುಕೊಡುತ್ತೀಯಾ ಎಂದು ಕೇಳಿದನು.ಕೂಡಲೆ ಅವನು ಯೇಸುವಿನ ಬಳಿಗೆ ಹೋಗಿ - ಗುರುವೇ, ನಮಸ್ಕಾರ ಎಂದು ಹೇಳಿ ಆತನಿಗೆ ಮುದ್ದಿಟ್ಟನು. ಯೇಸು ಅವನಿಗೆ - ಗೆಳೆಯನೇ, ನೀನು ಬಂದ ಕೆಲಸ ಇದೇಯೋ? ಎಂದು ಹೇಳಲು ಅವರು ಹತ್ತರಕ್ಕೆ ಬಂದು ಯೇಸುವಿನ ಮೇಲೆ ಕೈ ಹಾಕಿ ಆತನನ್ನು ಹಿಡಿದರು.ಆತನ ಸುತ್ತಲಿದ್ದವರು ಮುಂದೆ ಆಗುವದನ್ನು ತಿಳಿದು - ಸ್ವಾಮೀ, ನಾವು ಕತ್ತಿಯಿಂದ ಹೊಡೆಯೋಣೋ ಎಂದು ಕೇಳಿದರು.ಸೀಮೋನ ಪೇತ್ರನಲ್ಲಿ ಒಂದು ಕತ್ತಿ ಇತ್ತು; ಅದನ್ನು ಅವನು ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿದನು. ಆ ಆಳಿನ ಹೆಸರು ಮಲ್ಕನು.ಆಗ ಯೇಸು ಅವನಿಗೆ - ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು. ನಾನು ನನ್ನ ತಂದೆಯನ್ನು ಬೇಡಿಕೊಳ್ಳಲಾರೆನೆಂದೂ ಬೇಡಿಕೊಂಡರೆ ಆತನು ನನಗೆ ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು ಕಳುಹಿಸಿಕೊಡುವದಿಲ್ಲವೆಂದೂ ನೆನಸುತ್ತೀಯಾ? ಕಳುಹಿಸಿಕೊಟ್ಟರೆ ನನಗೆ ಇಂಥಿಂಥದು ಆಗಬೇಕೆಂಬುವ ಶಾಸ್ತ್ರದ ಮಾತುಗಕು ನೆರವೇರುವದು ಹೇಗೆ ಎಂದು ಹೇಳಿದನು.ಆದರೆ ಯೇಸು - ಇಷ್ಟಕ್ಕೇ ಬಿಡಿರಿ ಎಂದು ಹೇಳಿ ಆ ಕಿವಿಯನ್ನು ಮುಟ್ಟಿ ಅವನಿಗೆ ವಾಸಿಮಾಡಿದನು.
ಅಧ್ಯಾಯ 59
ಬಳಿಕ ಯೇಸು ತನ್ನನ್ನು ಹಿಡಿಯುವದಕ್ಕೆ ಬಂದ ಮಹಾಯಾಜಕರಿಗೂ ದೇವಾಲಯದ ಕಾವಲಿನ ದಳವಾಯಿಗಳಿಗೂ ಸಭೆಯ ಹಿರಿಯರಿಗೂ - ಕಳ್ಳನನ್ನು ಹಿಡಿಯುವದಕ್ಕೆ ಬಂದಂತೆ ಕತ್ತಿಗಳನ್ನೂ ದೊಣ್ಣೆಗಳನ್ನೂ ತೆಗೆದುಕೊಂಡುಬಂದಿರಾ?ನಾನು ದಿನಾಲು ದೇವಾಲಯದಲ್ಲಿ ನಿಮ್ಮ ಸಂಗಡ ಇದ್ದಾಗ ನೀವು ನನ್ನ ಮೇಲೆ ಕೈಹಾಕಲಿಲ್ಲ; ಆದರೆ ಇದು ನಿಮ್ಮ ಕಾಲ, ಇದು ಅಂಧಕಾರದ ದೊರೆತನ ಎಂದು ಹೇಳಿದನು.ಆದರೆ ಪ್ರವಾದಿಗಳು ಬರೆದ ವಚನಗಳು ನೆರವೇರುವಂತೆ ಇದೆಲ್ಲಾ ಆಯಿತು ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.ಒಬ್ಬಾನೊಬ್ಬ ಯೌವನಸ್ಥನು ಬರೀ ಮೈ ಮೇಲೆ ನಾರುಮಡಿಯನ್ನು ಹೊದ್ದವನಾಗಿ ಆತನ ಹಿಂದೆ ಜನರ ಕೂಡ ಬರುತ್ತಿದ್ದನು. ಅವರು ಅವನನ್ನು ಹಿಡಿಯಲಾಗಿ ಅವನು ಆ ನಾರುಮಡಿಯನ್ನು ಬಿಟ್ಟು ಬರೀ ಮೈಲಿ ಓಡಿಹೋದನು.
ಆಮೇಲೆ ಆ ಸಿಪಾಯಿಗಳೂ ಸಹಸ್ರಾಧಿಪತಿಯೂ ಯೆಹೂದ್ಯರ ಓಲೇಕಾರರೂ ಯೇಸುವನ್ನು ಹಿಡುಕೊಂಡು ಕಟ್ಟಿ ಮೊದಲು ಅನ್ನನ ಬಳಿಗೆ ಕರಕೊಂಡು ಹೋದರು. ಇವನು ಆ ವರುಷದಲ್ಲಿ ಮಹಾಯಾಜಕನಾಗಿದ್ದ ಕಾಯಫನ ಮಾವನಾಗಿದ್ದನು. ಆ ಕಾಯಫನೇ - ಒಬ್ಬ ಮನುಷ್ಯನು ಜನಕ್ಕೋಸ್ಕರ ಸಾಯುವದು ಹಿತಕರವೆಂದು ಯೆಹೂದ್ಯರಿಗೆ ಆಲೋಚನೆ ಕೊಟ್ಟವನು.ಅಷ್ಟರೊಳಗೆ ಮಹಾಯಾಜಕನು ಯೇಸುವನ್ನು ಆತನ ಶಿಷ್ಯರ ವಿಷಯವಾಗಿಯೂ ಉಪದೇಶದ ವಿಷಯವಾಗಿಯೂ ವಿಚಾರಿಸಿದನು. ಅದಕ್ಕೆ ಯೇಸು - ನಾನು ಧಾರಾಳವಾಗಿ ಲೋಕದ ಮುಂದೆ ಮಾತಾಡಿದ್ದೇನೆ; ಯೆಹೂದ್ಯರೆಲ್ಲಾ ಕೂಡುವಂಥ ಸಭಾಮಂದಿರಗಳಲ್ಲಿಯೂ ದೇವಾಲಯದಲ್ಲಿಯೂ ಯಾವಾಗಲೂ ಉಪದೇಶಮಾಡುತ್ತಾ ಬಂದೆನು; ಮರೆಯಾಗಿ ಯಾವದನ್ನೂ ಮಾತಾಡಲಿಲ್ಲ. ನನ್ನನ್ನು ಯಾಕೆ ವಿಚಾರಿಸುತ್ತೀ? ನಾನು ಏನೇನು ಮಾತಾಡಿದೆನೋ ಅದನ್ನು ಕೇಳಿದವರಲ್ಲಿ ವಿಚಾರಿಸು; ನಾನು ಹೇಳಿದ್ದು ಇವರಿಗೆ ತಿಳಿದಿದೆಯಲ್ಲಾ ಎಂದು ಉತ್ತರಕೊಟ್ಟನು. ಯೇಸು ಈ ಮಾತನ್ನು ಹೇಳಿದಾಗ ಹತ್ತರ ನಿಂತಿದ್ದ ಓಲೇಕಾರರಲ್ಲಿ ಒಬ್ಬನು - ಮಹಾಯಾಜಕನಿಗೆ ಹೀಗೆ ಉತ್ತರಕೊಡುತ್ತೀಯಾ ಎಂದು ಹೇಳಿ ಆತನ ಕೆನ್ನೆಗೆ ಒಂದು ಏಟು ಹಾಕಿದನು. ಯೇಸು ಅವನಿಗೆ - ನಾನು ಮಾತಾಡಿದ್ದರಲ್ಲಿ ಏನಾದರೂ ದೋಷವಿದ್ದರೆ ಆ ದೋಷ ಇಂಥದೆಂದು ಸಾಕ್ಷಿ ಹೇಳು; ನಾನು ಮಾತಾಡಿದ್ದು ಸರಿಯಾಗಿದ್ದರೆ ನನ್ನನ್ನು ಯಾಕೆ ಹೊಡೆಯುತ್ತೀ ಎಂದು ಹೇಳಿದನು. ಆಗ ಅನ್ನನು ಆತನನ್ನು ಕಟ್ಟಿಸಿ ಮಹಾಯಾಜಕನಾದ ಕಾಯಫನ ಬಳಿಗೆ ಕಳುಹಿಸಿಕೊಟ್ಟನು.
ಯೇಸುವನ್ನು ಹಿಡಿದವರು ಆತನನ್ನು ಮಹಾಯಾಜಕನಾದ ಕಾಯಫನ ಬಳಿಗೆ ತೆಗೆದುಕೊಂಡು ಹೋದರು. ಅಲ್ಲಿ ಶಾಸ್ತ್ರಿಗಳೂ ಹಿರಿಯರೂ ಕೂಡಿ ಬಂದಿದ್ದರು. ಪೇತ್ರನಾದರೋ ದೂರದಿಂದ ಆತನ ಹಿಂದೆ ಹೋಗುತ್ತಾ ಮಹಾಯಾಜಕನ ಮಠದ ಅಂಗಳದ ತನಕ ಬಂದು ಒಳಗೆ ಹೊಕ್ಕು ಆತನ ಗತಿ ಏನಾಗುವದೋ ನೋಡಬೇಕೆಂದು ಓಲೇಕಾರರ ಸಂಗಡ ಕೂತುಕೊಂಡನು.ಅಂಗಳದ ನಡುವೆ ಅವರು ಬೆಂಕಿ ಹೊತ್ತಿಸಿ ಒಟ್ಟಾಗಿ ಕೂತುಕೊಳ್ಳಲು ಅವರ ನಡುವೆ ಪೇತ್ರನೂ ಕೂತುಕೊಂಡನು. ಅವನು ಬೆಳಕಿಗೆ ಮುಖವಾಗಿ ಕೂತಿರುವಾಗ ಒಬ್ಬ ದಾಸಿಯು ಅವನನ್ನು ಕಂಡು ಅವನನ್ನು ದೃಷ್ಟಿಸಿ ನೋಡಿ - ಇವನು ಸಹ ಅವನ ಸಂಗಡ ಇದ್ದವನು ಅಂದಳು. ಆದರೆ ಅವನು - ನಾನು ಅವನನ್ನು ಅರಿಯೆನಮ್ಮಾ ಎಂದು ಹೇಳಿದನು. ತುಸು ಹೊತ್ತಿನ ಮೇಲೆ ಒಬ್ಬನು ಅವನನ್ನು ಕಂಡು - ನೀನು ಸಹ ಅವರಲ್ಲಿ ಒಬ್ಬನು ಅನ್ನಲು ಪೇತ್ರನು - ಅಲ್ಲಪ್ಪಾ ಅಂದನು. ಹೆಚ್ಚು ಕಡಿಮೆ ಒಂದು ಘಂಟೆ ಹೊತ್ತಿನ ಮೇಲೆ ಇನ್ನೊಬ್ಬನು - ನಿಶ್ಚಯವಾಗಿ ಇವನು ಸಹ ಅವನ ಸಂಗಡ ಇದ್ದವನು, ಇವನು ಗಲಿಲಾಯದವನಷ್ಟೆ ಎಂದು ದೃಢವಾಗಿ ಹೇಳಿದನು. ಆದರೆ ಪೇತ್ರನು - ನೀನು ಹೇಳುವದೇನೋ ನಾನರಿಯೆನಪ್ಪಾ ಅಂದನು. ಅವನು ಈ ಮಾತನ್ನು ಆಡುತ್ತಿರುವಾಗಲೇ ಕೋಳಿ ಕೂಗಿತು. ಸ್ವಾವಿುಯು ಹಿಂತಿರುಗಿಕೊಂಡು ಪೇತ್ರನನ್ನು ದೃಷ್ಟಿಸಿ ನೋಡಿದನು. ಆಗ ಪೇತ್ರನು - ಈಹೊತ್ತು ಕೋಳಿ ಕೂಗುವದಕ್ಕಿಂತ ಮುಂಚೆ ಮೂರು ಸಾರಿ ನನ್ನ ವಿಷಯವಾಗಿ ಅವನನ್ನು ಅರಿಯೆನೆಂಬದಾಗಿ ಹೇಳುವಿ ಎಂದು ಸ್ವಾವಿು ನುಡಿದ ಮಾತನ್ನು ನೆನಸಿ ಹೊರಗೆ ಹೋಗಿ ಬಹು ವ್ಯಥೆಪಟ್ಟು ಅತ್ತನು.
ಆಗ ಮಹಾಯಾಜಕರೂ ಹಿರೀಸಭೆಯವರೆಲ್ಲರೂ ಯೇಸುವನ್ನು ಕೊಲ್ಲಿಸಬೇಕೆಂದು ಆತನ ಮೇಲೆ ಸಾಕ್ಷಿಯನ್ನು ಹುಡುಕಿದರು; ಆದರೆ ಏನೂ ಸಿಕ್ಕಲಿಲ್ಲ. ಬಹುಮಂದಿ ಬಂದು ಆತನ ಮೇಲೆ ಸುಳ್ಳುಸಾಕ್ಷಿ ಹೇಳಿದರೂ ಅವರ ಸಾಕ್ಷಿ ಒಂದಕ್ಕೊಂದು ಸರಿಬೀಳಲಿಲ್ಲ. -ತರುವಾಯ ಕೆಲವರು ಎದ್ದು ನಿಂತು - ಕೈಯಿಂದ ಕಟ್ಟಿರುವ ಈ ದೇವಾಲಯವನ್ನು ನಾನು ಕೆಡವಿಬಿಟ್ಟು ಕೈಯಿಂದ ಕಟ್ಟದಿರುವ ಮತ್ತೊಂದನ್ನು ಮೂರು ದಿನಗಳಲ್ಲಿ ಕಟ್ಟುವೆನು ಎಂದು ಇವನು ಹೇಳಿದ್ದನ್ನು ನಾವು ಕೇಳಿದ್ದೇವೆ ಎಂಬದಾಗಿ ಆತನ ಮೇಲೆ ಸುಳ್ಳುಸಾಕ್ಷಿ ಹೇಳಿದರು. ಹೀಗೆ ಹೇಳಿದರೂ ಅವರ ಸಾಕ್ಷಿ ಒಂದಕ್ಕೊಂದು ಸರಿಬೀಳಲಿಲ್ಲ. ಆಗ ಮಹಾಯಾಜಕನು ಎದ್ದು ನಡುವೆ ನಿಂತು - ನೀನೇನೂ ಉತ್ತರಹೇಳುವದಿಲ್ಲವೋ? ಇವರು ನಿನ್ನ ಮೇಲೆ ಹೇಳುವ ಈ ಸಾಕ್ಷಿ ಏನು? ಎಂದು ಯೇಸುವನ್ನು ಪ್ರಶ್ನಿಸಿದನು.ಆಗ ಮಹಾಯಾಜಕನು - ನಿನಗೆ ಜೀವಸ್ವರೂಪನಾದ ದೇವರ ಆಣೆಯನ್ನು ಇಡುತ್ತೇನೆ; ನೀನು ದೇವಕುಮಾರನಾದ ಕ್ರಿಸ್ತನು ಹೌದೋ ಅಲ್ಲವೋ ಎಂಬದನ್ನು ನಮಗೆ ಹೇಳಬೇಕು ಎಂದು ಅನ್ನಲಾಗಿ ಯೇಸು –ನೀನು ಕ್ರಿಸ್ತನಾಗಿದ್ದರೆ ನಮಗೆ ಹೇಳು ಅಂದರು. ಆತನು ಅವರಿಗೆ - ನಾನು ನಿಮಗೆ ಹೇಳಿದರೆ ನೀವು ನಂಬುವದಿಲ್ಲ, ನಾನು ನಿಮ್ಮನ್ನು ಏನಾದರೂ ಕೇಳಿದರೆ ನೀವು ಉತ್ತರಕೊಡುವದಿಲ್ಲ.ಇದಲ್ಲದೆ ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವದನ್ನೂ ಆಕಾಶದ ಮೇಘಗಳೊಂದಿಗೆ ಬರುವದನ್ನೂ ನೋಡುವಿರಿ ಅಂದನು. ಆಗ ಎಲ್ಲರು - ಹಾಗಾದರೆ ನೀನು ದೇವರ ಕುಮಾರನೋ ಎಂದು ಕೇಳಲು ಆತನು ಅವರಿಗೆ - ನನ್ನನ್ನು ಅವನೇ ಎಂದು ನೀವೇ ಹೇಳುತ್ತೀರಿ ಎಂದು ಹೇಳಿದನು.ಆಗ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಕೊಂಡು - ಇದು ದೇವದೂಷಣೆಯ ಮಾತು; ನಮಗೆ ಸಾಕ್ಷಿಗಳು ಇನ್ನು ಯಾತಕ್ಕೆ ಬೇಕು? ಇವನು ಈಗಲೇ ಆಡಿದ ದೂಷಣೆಯ ಮಾತನ್ನು ಕೇಳಿದಿರಲ್ಲಾ; ನಿಮಗೆ ಹೇಗೆ ತೋರುತ್ತದೆ? ಅನ್ನಲು ಇವನು ಮರಣದಂಡನೆ ಹೊಂದತಕ್ಕವನು ಎಂದು ಉತ್ತರಕೊಟ್ಟರು. ಆಗ ಆತನ ಮುಖದ ಮೇಲೆ ಉಗುಳಿ ಆತನನ್ನು ಗುದ್ದಿದರು; ಕೆಲವರು ಆತನ ಕೆನ್ನೆಗೆ ಏಟುಹಾಕಿ - ಕ್ರಿಸ್ತನೇ, ನಿನ್ನನ್ನು ಹೊಡೆದವರಾರು? ನಮಗೆ ಪ್ರವಾದನೆ ಹೇಳು ಅಂದರು.
ಅಧ್ಯಾಯ 60
ಆಮೇಲೆ ಅವರು ಯೇಸುವನ್ನು ಕಾಯಫನ ಬಳಿಯಿಂದ ಅರಮನೆಗೆ ಕರಕೊಂಡು ಹೋದರು. ಆಗ ಮುಂಜಾನೆ ಆಗಿತ್ತು. ಅವರು ತಮಗೆ ಮೈಲಿಗೆ ತಟ್ಟಿ ಪಸ್ಕದ ಊಟವನ್ನು ಮಾಡುವದಕ್ಕೆ ಅಡ್ಡಿಯಾದೀತೆಂದು ಅರಮನೆಯೊಳಕ್ಕೆ ಹೋಗಲಿಲ್ಲ. ಹೀಗಿರಲಾಗಿ ಪಿಲಾತನು ಹೊರಕ್ಕೆ ಅವರ ಬಳಿಗೆ ಬಂದು - ಈ ಮನುಷ್ಯನ ಮೇಲೆ ಏನು ದೂರು ತರುತ್ತೀರಿ ಎಂದು ಕೇಳಿದನು. ಅವರು ಅವನಿಗೆ - ಇವನು ದುಷ್ಕರ್ಮಿಯಲ್ಲದಿದ್ದರೆ ನಾವು ಇವನನ್ನು ನಿನಗೆ ಒಪ್ಪಿಸಿಕೊಡುತ್ತಿದ್ದಿಲ್ಲವೆಂದು ಉತ್ತರ ಕೊಟ್ಟರು. ಆಗ ಪಿಲಾತನು ಅವರಿಗೆ - ನೀವೇ ಅವನನ್ನು ತಕ್ಕೊಂಡುಹೋಗಿ ನಿಮ್ಮ ಧರ್ಮಶಾಸ್ತ್ರದ ಪ್ರಕಾರ ಅವನಿಗೆ ತೀರ್ಪುಮಾಡಿರಿ ಎಂದು ಹೇಳಿದನು. ಅದಕ್ಕೆ ಯೆಹೂದ್ಯರು - ಮರಣ ದಂಡನೆಯನ್ನು ವಿಧಿಸುವ ಅಧಿಕಾರವು ನಮಗಿಲ್ಲ ಅಂದರು. ಇದರಿಂದ ಯೇಸು ತಾನು ಎಂಥಾ ಸಾವು ಸಾಯುವೆನೆಂದು ಸೂಚಿಸಿ ಹೇಳಿದ ಮಾತು ನೆರವೇರಿತು.ಯೇಸು ದೇಶಾಧಿಪತಿಯ ಮುಂದೆ ನಿಂತಿರುವಾಗ ಮಹಾಯಾಜಕರು ಆತನ ಮೇಲೆ ತುಂಬಾ ದೂರು ಹೇಳುತ್ತಿದ್ದರು. ಇವನು ತಾನೇ ಕ್ರಿಸ್ತನೆಂಬ ಒಬ್ಬ ಅರಸನಾಗಿದ್ದೇನೆಂದು ಹೇಳುತ್ತಾ ಕೈಸರನಿಗೆ ತೆರಿಗೆಕೊಡಬಾರದೆಂದು ಬೋಧಿಸುತ್ತಾ ನಮ್ಮ ದೇಶದವರ ಮನಸ್ಸು ಕೆಡಿಸುವದನ್ನು ನಾವು ಕಂಡೆವು ಎಂಬದಾಗಿ ಆತನ ಮೇಲೆ ದೂರು ಹೇಳುವದಕ್ಕೆ ತೊಡಗಿದರು.
ಆಗ ಪಿಲಾತನು ತಿರಿಗಿ ಅರಮನೆಯೊಳಕ್ಕೆ ಹೋಗಿ ಯೇಸುವನ್ನು ಕರೆದು ಆತನನ್ನು - ನೀನು ಯೆಹೂದ್ಯರ ಅರಸನು ಹೌದೋ ಎಂದು ಕೇಳಿದನು. ಯೇಸು - ನಿನ್ನಷ್ಟಕ್ಕೆ ನೀನೇ ಇದನ್ನು ಹೇಳುತ್ತೀಯೋ? ಮತ್ತೊಬ್ಬರು ನನ್ನ ವಿಷಯದಲ್ಲಿ ನಿನಗೆ ಹೇಳಿದ್ದಾರೋ ಎಂದು ಕೇಳಲು ಪಿಲಾತನು - ನಾನೇನು ಯೆಹೂದ್ಯನೇ? ನಿನ್ನ ಸ್ವಂತ ಜನವೂ ಮಹಾಯಾಜಕರೂ ನಿನ್ನನ್ನು ನನಗೆ ಒಪ್ಪಿಸಿದ್ದಾರೆ; ನೀನು ಏನು ಮಾಡಿದ್ದೀ ಎಂದು ಕೇಳಿದ್ದಕ್ಕೆ ಯೇಸು - ನನ್ನ ರಾಜ್ಯವು ಈ ಲೋಕದ್ದಲ್ಲ; ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಯಲ್ಲಿ ಬೀಳದಂತೆ ನನ್ನ ಪರಿವಾರದವರು ಕಾದಾಡುತ್ತಿದ್ದರು; ಆದರೆ ನನ್ನ ರಾಜ್ಯವು ಇಲ್ಲಿಯದಲ್ಲವೆಂದು ಉತ್ತರಕೊಟ್ಟನು. ಅದಕ್ಕೆ ಪಿಲಾತನು - ಹಾಗಾದರೆ ನೀನು ಅರಸನು ಹೌದಲ್ಲವೇ ಅಂದನು. ಯೇಸು ಅವನಿಗೆ - ನನ್ನನ್ನು ಅರಸನೆಂದು ನೀನೇ ಹೇಳಿದ್ದೀ. ನಾನು ಸತ್ಯದ ವಿಷಯದಲ್ಲಿ ಸಾಕ್ಷಿ ಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ. ಸತ್ಯಪರರೆಲ್ಲರು ನನ್ನ ಮಾತಿಗೆ ಕಿವಿಕೊಡುತ್ತಾರೆ ಎಂದು ಉತ್ತರಕೊಟ್ಟನು. ಪಿಲಾತನು - ಸತ್ಯವಂದರೇನು? ಅಂದನು.ಮತ್ತು ಮಹಾಯಾಜಕರೂ ಹಿರಿಯರೂ ಆತನ ಮೇಲೆ ದೂರು ಹೇಳುತ್ತಿರುವಾಗ ಆತನು ಏನೂ ಉತ್ತರಕೊಡಲಿಲ್ಲ. ಆಗ ಪಿಲಾತನು ಆತನನ್ನು - ಇವರು ನಿನ್ನ ಮೇಲೆ ಎಷ್ಟು ಸಾಕ್ಷಿ ಹೇಳುತ್ತಾರೆ, ನೀನು ಕೇಳುವದಿಲ್ಲವೋ? ಎಂದು ಕೇಳಿದನು. ಆತನು ಅವನಿಗೆ ಒಂದು ಮಾತಿಗಾದರೂ ಉತ್ತರಕೊಡಲಿಲ್ಲ. ಅದನ್ನು ನೋಡಿ ದೇಶಾಧಿಪತಿಯು ಬಹಳ ಆಶ್ಚರ್ಯಪಟ್ಟನು.
ಪಿಲಾತನು ಮಹಾಯಾಜಕರಿಗೂ ಜನರ ಗುಂಪಿಗೂ - ಈ ಮನುಷ್ಯನಲ್ಲಿ ನನಗೆ ಯಾವ ಅಪರಾಧವೂ ಕಾಣಿಸುವದಿಲ್ಲವೆಂದು ಹೇಳಿದನು. ಅದಕ್ಕೆ ಅವರು - ಗಲಿಲಾಯದಲ್ಲಿ ಪ್ರಾರಂಭಮಾಡಿ ಇಲ್ಲಿಯವರೆಗೂ ಯೂದಾಯ ಸೀಮೆಯಲ್ಲೆಲ್ಲಾ ಇವನು ಬೋಧನೆಮಾಡುತ್ತಾ ಜನರ ಮನಸ್ಸನ್ನು ಕದಲಿಸುತ್ತಾನೆ ಎಂದು ಇನ್ನೂ ಒತ್ತಿ ಹೇಳಿದರು. ಇದನ್ನು ಪಿಲಾತನು ಕೇಳಿ - ಈ ಮನುಷ್ಯನು ಗಲಿಲಾಯದವನೋ ಎಂದು ವಿಚಾರಿಸಿ ಇವನು ಹೆರೋದನ ಅಧಿಕಾರಕ್ಕೆ ಒಳಪಟ್ಟವನು ಎಂದು ತಿಳುಕೊಂಡು ಆತನನ್ನು ಹೆರೋದನ ಬಳಿಗೆ ಕಳುಹಿಸಿದನು. ಹೆರೋದನು ಆ ದಿವಸಗಳಲ್ಲಿ ಯೆರೂಸಲೇವಿುನಲ್ಲೇ ಇದ್ದನು.ಹೆರೋದನು ಯೇಸುವನ್ನು ನೋಡಿದಾಗ ಬಹಳ ಸಂತೋಷಪಟ್ಟನು; ಯಾಕಂದರೆ ಆತನ ವಿಷಯವಾಗಿ ಅನೇಕ ಸಂಗತಿಗಳನ್ನು ಕೇಳಿದ್ದರಿಂದ ಆತನನ್ನು ಕಾಣಬೇಕೆಂದು ಬಹು ಕಾಲದಿಂದ ಅಪೇಕ್ಷಿಸಿದ್ದನು. ಆತನಿಂದ ಯಾವದಾದರೂ ಒಂದು ಸೂಚಕಕಾರ್ಯವಾಗುವದನ್ನು ನೋಡಬೇಕೆಂದು ನಿರೀಕ್ಷಿಸಿದನು. ಆದರೆ ಅವನು ಅನೇಕ ಮಾತುಗಳಿಂದ ಆತನನ್ನು ಪ್ರಶ್ನೆ ಮಾಡಿದಾಗ್ಯೂ ಆತನು ಅವನಿಗೆ ಏನೂ ಉತ್ತರ ಕೊಡಲಿಲ್ಲ. ಮಹಾಯಾಜಕರೂ ಶಾಸ್ತ್ರಿಗಳೂ ನಿಂತುಕೊಂಡು ಆತನ ಮೇಲೆ ಬಹು ಬಲವಾಗಿ ದೂರು ಹೇಳುತ್ತಿದ್ದರು. ಕಡೆಗೆ ಹೆರೋದನು ತನ್ನ ಸಿಪಾಯಿಗಳನ್ನು ಕೂಡಿಕೊಂಡು ಆತನನ್ನು ತಿರಸ್ಕರಿಸಿ ಹಾಸ್ಯಮಾಡಿ ಶೋಭಾಯಮಾನವಾದ ಉಡುಪನ್ನು ಹಾಕಿಸಿ ಪಿಲಾತನ ಬಳಿಗೆ ತಿರಿಗಿ ಕಳುಹಿಸಿಕೊಟ್ಟನು. ಅದೇ ದಿನದಲ್ಲಿ ಹೆರೋದನೂ ಪಿಲಾತನೂ ಒಬ್ಬರಿಗೊಬ್ಬರು ಸ್ನೇಹಿತರಾದರು; ಅದಕ್ಕಿಂತ ಮೊದಲು ವೈರಿಗಳಾಗಿದ್ದರು.
ತರುವಾಯ ಪಿಲಾತನು ಮಹಾಯಾಜಕರನ್ನೂ ಅಧಿಕಾರಿಗಳನ್ನೂ ಪ್ರಜೆಗಳನ್ನೂ ಒಟ್ಟಾಗಿ ಕರಸಿ ಅವರಿಗೆ - ಈ ಮನುಷ್ಯನು ಪ್ರಜೆಗಳನ್ನು ತಿರುಗಿಬೀಳುವಂತೆ ಮಾಡುವವನು ಎಂದು ಇವನನ್ನು ನನ್ನ ಬಳಿಗೆ ತಂದಿರಲ್ಲಾ; ನೀವು ಇವನ ಮೇಲೆ ತಂದ ದೂರುಗಳ ವಿಷಯವಾಗಿ ನಾನು ನಿಮ್ಮ ಮುಂದೆಯೇ ವಿಚಾರಣೆಮಾಡಿದರೂ ಇವನಲ್ಲಿ ಒಂದು ತಪ್ಪಾದರೂ ನನಗೆ ಕಾಣಲಿಲ್ಲ. ಹೆರೋದನಿಗಾದರೂ ಕಾಣಲಿಲ್ಲ; ಅವನು ಇವನನ್ನು ಹಿಂತಿರುಗಿ ನಮ್ಮ ಬಳಿಗೆ ಕಳುಹಿಸಿದನಲ್ಲಾ. ಇವನು ಮರಣದಂಡನೆಗೆ ಯೋಗ್ಯವಾದದ್ದೇನೂ ಮಾಡಿದವನಲ್ಲವೆಂದಾಯಿತು. ಆದದರಿಂದ ನಾನು ಇವನನ್ನು ಹೊಡಿಸಿ ಬಿಟ್ಟುಬಿಡುತ್ತೇನೆ ಎಂದು ಹೇಳಿದನು.ಆಮೇಲೆ ಪಿಲಾತನು ಯೇಸುವನ್ನು ಕೊರಡೆಯಿಂದ ಹೊಡಿಸಿದನು. ಮತ್ತು ಸಿಪಾಯಿಗಳು ಮುಳ್ಳುಬಳ್ಳಿಯಿಂದ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟು ಕೆಂಪು ಒಲ್ಲಿಯನ್ನು ಆತನಿಗೆ ಹೊದಿಸಿ ಆತನ ಬಳಿಗೆ ಬಂದು - ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ; ಎಂದು ಹೇಳಿ ಆತನ ಕೆನ್ನೆಗೆ ಏಟುಹಾಕಿದರು. ತರುವಾಯ ಪಿಲಾತನು ತಿರಿಗಿ ಹೊರಗೆ ಬಂದು ಯೆಹೂದ್ಯರಿಗೆ - ನನಗೆ ಅವನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲವೆಂಬದು ನಿಮಗೆ ತಿಳಿಯುವಂತೆ ಅವನನ್ನು ನಿಮ್ಮ ಬಳಿಗೆ ಹೊರಗೆ ತರುತ್ತೇನೆ, ನೋಡಿರಿ ಎಂದು ಹೇಳಿದನು. ಆಗ ಯೇಸು ಮುಳ್ಳಿನ ಕಿರೀಟವನ್ನೂ ಕೆಂಪು ಒಲ್ಲಿಯನ್ನೂ ಧರಿಸಿದವನಾಗಿ ಹೊರಕ್ಕೆ ಬಂದನು. ಪಿಲಾತನು ಅವರಿಗೆ - ಇಗೋ, ಈ ಮನುಷ್ಯನು! ಅಂದನು. ಮಹಾಯಾಜಕರೂ ಓಲೇಕಾರರೂ ಆತನನ್ನು ಕಾಣುತ್ತಲೇ - ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು ಎಂದು ಕೂಗಿದರು. ಪಿಲಾತನು ಅವರಿಗೆ - ಬೇಕಾದರೆ ನೀವೇ ಅವನನ್ನು ತಕ್ಕೊಂಡುಹೋಗಿ ಶಿಲುಬೆಗೆ ಹಾಕಿಸಿರಿ; ನನಗೆ ಅವನಲ್ಲಿ ಅಪರಾಧವು ಕಾಣಿಸಲಿಲ್ಲವೆಂದು ಹೇಳಿದನು. ಯೆಹೂದ್ಯರು ಅವನಿಗೆ - ನಮಗೆ ಒಂದು ನೇಮ ಉಂಟು, ಆ ನೇಮದ ಪ್ರಕಾರ ಇವನು ಸಾಯತಕ್ಕವನು; ಯಾಕಂದರೆ ಅವನು ತನ್ನನ್ನು ದೇವರ ಮಗನಾಗಿ ಮಾಡಿಕೊಂಡಿದ್ದಾನೆ ಎಂದು ಉತ್ತರಕೊಟ್ಟರು.
ಪಿಲಾತನು ಈ ಮಾತನ್ನು ಕೇಳಿ ಮತ್ತಷ್ಟು ಹೆದರಿಕೊಂಡು ತಿರಿಗಿ ಅರಮನೆಯೊಳಕ್ಕೆ ಹೋಗಿ - ನೀನು ಎಲ್ಲಿಂದ ಬಂದವನು ಎಂದು ಯೇಸುವನ್ನು ಕೇಳಿದನು. ಆದರೆ ಯೇಸು ಅವನಿಗೆ ಉತ್ತರಕೊಡಲಿಲ್ಲ. ಪಿಲಾತನು - ನನ್ನ ಸಂಗಡಲೂ ನೀನು ಮಾತಾಡುವದಿಲ್ಲವೋ? ನಿನ್ನನ್ನು ಬಿಡಿಸುವ ಅಧಿಕಾರವೂ ನಿನ್ನನ್ನು ಶಿಲುಬೆಗೆ ಹಾಕಿಸುವ ಅಧಿಕಾರವೂ ನನಗೆ ಉಂಟೆಂಬದು ನಿನಗೆ ಗೊತ್ತಿಲ್ಲವೋ ಎಂದು ಆತನನ್ನು ಕೇಳಿದನು. ಅದಕ್ಕೆ ಯೇಸು - ಮೇಲಣಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪ ಉಂಟು ಅಂದನು.ಈ ಮಾತಿನ ದೆಸೆಯಿಂದ ಪಿಲಾತನು ಆತನನ್ನು ಬಿಡಿಸುವದಕ್ಕೆ ಪೇಚಾಡಿದನು. ಆದರೆ ಯೆಹೂದ್ಯರು - ನೀನು ಇವನನ್ನು ಬಿಡಿಸಿದರೆ ನೀನು ಕೈಸರನಿಗೆ ವಿುತ್ರನಲ್ಲ; ತನ್ನನ್ನು ಅರಸನಾಗಿ ಮಾಡಿಕೊಳ್ಳುವವನು ಕೈಸರನಿಗೆ ವಿರೋಧಿ ಎಂದು ಕೂಗಿ ಹೇಳಿದರು. ಈ ಮಾತುಗಳನ್ನು ಪಿಲಾತನು ಕೇಳಿ ಯೇಸುವನ್ನು ಹೊರಕ್ಕೆ ಕರತರಿಸಿ ಇಬ್ರಿಯ ಮಾತಿನಲ್ಲಿ ಗಬ್ಬಥಾಯೆನಿಸಿಕೊಳ್ಳುವ ಕಲ್ಲುಹಾಸಿದ ಕಟ್ಟೆ ಎಂಬ ಹೆಸರುಳ್ಳ ಸ್ಥಳಕ್ಕೆ ಹೋಗಿ ನ್ಯಾಯಪೀಠದ ಮೇಲೆ ಕೂತುಕೊಂಡನು. ಪಸ್ಕಹಬ್ಬದ ಸೌರಣೆಯ ದಿವಸದಲ್ಲಿ ಬೆಳಿಗ್ಗೆ ಹೆಚ್ಚುಕಡಿಮೆ ಆರು ಘಂಟೆಯಾಗಿತ್ತು.
ಅಧ್ಯಾಯ 61
ಅವನು ಆ ಹಬ್ಬದಲ್ಲಿ ಜನರು ಬೇಡಿದ ಸೆರೆಯವನನ್ನು ಅವರಿಗೆ ಬಿಟ್ಟುಕೊಡುವ ಪದ್ಧತಿಯಿತ್ತು. ಆಗ ಬರಬ್ಬನೆಂಬವನೊಬ್ಬನಿದ್ದನು; ಇವನನ್ನು ದಂಗೆಯಲ್ಲಿ ಕೊಲೆಪಾತಕ ಮಾಡಿದ ದಂಗೆಗಾರರ ಕೂಡ ಕಟ್ಟಿಹಾಕಿದ್ದರು. ಜನರು ಪಿಲಾತನ ಬಳಿಗೆ ಹೋಗಿ - ನೀನು ನಮಗೆ ಮಾಡುತ್ತಾ ಬಂದ ಪ್ರಕಾರ ಮಾಡು ಎಂದು ಬೇಡಿಕೊಳ್ಳುತ್ತಿದ್ದರು. -ಮಹಾಯಾಜಕರು ಹೊಟ್ಟೇಕಿಚ್ಚಿನಿಂದ ಯೇಸುವನ್ನು ಒಪ್ಪಿಸಿಕೊಟ್ಟಿದ್ದಾರೆಂದು ಪಿಲಾತನು ಗ್ರಹಿಸಿಕೊಂಡು ಆದರೆ ಪಸ್ಕಹಬ್ಬದಲ್ಲಿ ನಾನು ಒಬ್ಬನನ್ನು ನಿಮಗೆ ಬಿಟ್ಟುಕೊಡುವ ಪದ್ಧತಿ ಉಂಟಷ್ಟೆ; ನಾನು ಯೆಹೂದ್ಯರ ಅರಸನನ್ನು ಬಿಟ್ಟುಕೊಡುವದು ನಿಮಗೆ ಇಷ್ಟವೋ, ನಿಮಗೆ ಯಾರನ್ನು ಬಿಟ್ಟುಕೊಡಬೇಕನ್ನುತ್ತೀರಿ? ಬರಬ್ಬನನ್ನೋ? ಕ್ರಿಸ್ತನನ್ನಿಸಿಕೊಳ್ಳುವ ಯೇಸುವನ್ನೋ ಎಂದು ಅವರನ್ನು ಕೇಳಿದನು.ಅತ್ತಲಾಗಿ ಮಹಾಯಾಜಕರು - ಬರಬ್ಬನನ್ನೇ ಬಿಟ್ಟುಕೊಡಬೇಕೆಂದು ಬೇಡಿಕೊಳ್ಳಿರಿ ಎಂಬದಾಗಿ ಜನರನ್ನು ಪ್ರೇರೇಪಿಸಿದರು.ಇದಲ್ಲದೆ ಅವನು ನ್ಯಾಯಾಸನದಲ್ಲಿ ಕೂತಿರುವಾಗ ಅವನ ಹೆಂಡತಿಯು - ನೀನು ಆ ಸತ್ಪುರುಷನ ಗೊಡವೆಗೆ ಹೋಗಬೇಡ; ಅವನ ದೆಸೆಯಿಂದ ಈ ಹೊತ್ತು ಕನಸಿನಲ್ಲಿ ಬಹಳ ತೊಂದರೆ ಪಟ್ಟೆನು ಎಂದು ಅವನ ಬಳಿಗೆ ಹೇಳಿ ಕಳುಹಿಸಿದಳು. ಅತ್ತಲಾಗಿ ಮಹಾಯಾಜಕರೂ ಹಿರಿಯರೂ ಬರಬ್ಬನನ್ನು ಬಿಟ್ಟು ಕೊಡಬೇಕೆಂದು ಬೇಡಿಕೊಳ್ಳುವ ಹಾಗೂ ಯೇಸುವನ್ನು ನಾಶಗೊಳಿಸುವ ಹಾಗೂ ಜನರನ್ನು ಒಡಂಬಡಿಸಿದರು.
ಅದಕ್ಕೆ ದೇಶಾಧಿಪತಿಯು ಅವರನ್ನು - ಈ ಇಬ್ಬರಲ್ಲಿ ಯಾರನ್ನು ನಿಮಗೆ ಬಿಟ್ಟುಕೊಡಬೇಕನ್ನುತ್ತೀರಿ ಎಂದು ಕೇಳಲು - ಬರಬ್ಬನನ್ನು ಅಂದರು. ಪಿಲಾತನು ಅವರನ್ನು - ಹಾಗಾದರೆ ಕ್ರಿಸ್ತನನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ ಎಂದು ಕೇಳಲು ಎಲ್ಲರೂ - ಅವನನ್ನು ಶಿಲುಬೆಗೆ ಹಾಕಿಸು ಅಂದರು. ಅದಕ್ಕವನು - ಯಾಕೆ? ಕೆಟ್ಟದ್ದೇನು ಮಾಡಿದನು? ಅಂದನು. ಆದರೆ ಅವರು - ಅವನನ್ನು ಶಿಲುಬೆಗೆ ಹಾಕಿಸು ಎಂದು ಬಹಳವಾಗಿ ಆರ್ಭಟಿಸಿದರು. ಆಗ ಪಿಲಾತನು ತನ್ನ ಯತ್ನ ನಡೆಯುವದಿಲ್ಲ, ಗದ್ದಲ ಮಾತ್ರ ಹೆಚ್ಚಾಗುತ್ತದೆ ಎಂದು ತಿಳಿದು ನೀರು ತಕ್ಕೊಂಡು ಜನರ ಮುಂದೆ ಕೈ ತೊಳಕೊಂಡು - ಈ ಪುರುಷನನ್ನು ಕೊಲ್ಲಿಸಿದ್ದಕ್ಕೆ ನಾನು ಸೇರಿದವನಲ್ಲ, ನೀವೇ ನೋಡಿಕೊಳ್ಳಿರಿ ಅನ್ನಲಾಗಿ ಜನರೆಲ್ಲಾ - ಅವನನ್ನು ಕೊಲ್ಲಿಸಿದ್ದಕ್ಕೆ ನಾವೂ ನಮ್ಮ ಮಕ್ಕಳೂ ಉತ್ತರ ಕೊಡುತ್ತೇವೆ ಅಂದರು.ಪಿಲಾತನು - ನೀವು ಕೇಳಿಕೊಂಡಂತೆ ಆಗಲಿ ಎಂದು ನಿರ್ಣಯಿಸಿದಂಗೆ ಕೊಲೆಗಳ ನಿವಿುತ್ತವಾಗಿ ಸೆರೆಮನೆಯಲ್ಲಿ ಬಿದ್ದ ಆ ಮನುಷ್ಯನನ್ನು ಅವರು ಕೇಳಿಕೊಳ್ಳುತ್ತಿದ್ದ ಪ್ರಕಾರ ಬಿಟ್ಟುಕೊಟ್ಟು ಯೇಸುವನ್ನು ಅವರ ಚಿತ್ತಾನುಸಾರ ಒಪ್ಪಿಸಿದನು. ಅವನು ಆತನನ್ನು ಶಿಲುಬೆಗೆ ಹಾಕಿಸುವದಕ್ಕೆ ಅವರ ವಶಕ್ಕೆ ಕೊಟ್ಟನು.
ಆಗ ಆತನನ್ನು ಹಿಡುಕೊಟ್ಟ ಯೂದನು ಆತನಿಗೆ ಮರಣದಂಡನೆಯ ತೀರ್ಪಾಯಿತೆಂದು ನೋಡಿ ಪಶ್ಚಾತ್ತಾಪಪಟ್ಟು ಆ ಮೂವತ್ತು ರೂಪಾಯಿಗಳನ್ನು ಮಹಾಯಾಜಕರಿಗೂ ಹಿರಿಯರಿಗೂ ತಿರಿಗಿ ತಂದು - ತಪ್ಪಿಲ್ಲದವನನ್ನು ಮರಣಕ್ಕೆ ಒಪ್ಪಿಸಿಕೊಟ್ಟು ಪಾಪಮಾಡಿದೆನು ಅಂದನು. ಅದಕ್ಕವರು - ಅದು ನಮಗೇನು? ನೀನೇ ನೋಡಿಕೋ ಅಂದರು. ಆಗ ಅವನು ಆ ಹಣವನ್ನು ದೇವಾಲಯದೊಳಗೆ ಬಿಸಾಟುಬಿಟ್ಟು ಹೊರಟುಹೋಗಿ ಉರ್ಲು ಹಾಕಿಕೊಂಡು ಸತ್ತನು. ಮಹಾಯಾಜಕರು ಆ ಹಣವನ್ನು ತೆಗೆದುಕೊಂಡು ಅದು ಜೀವಹತ್ಯಕ್ಕೆ ಕೊಟ್ಟ ಕ್ರಯವಾದ್ದರಿಂದ ಅದನ್ನು ಕಾಣಿಕೇಪೆಟ್ಟಿಗೆಯಲ್ಲಿ ಹಾಕಬಾರದು ಎಂದರು. ಬಳಿಕ ಆಲೋಚನೆ ಮಾಡಿ, ಪರದೇಶಿಗಳನ್ನು ಹೂಣುವದಕ್ಕೋಸ್ಕರ ಅದರಿಂದ ಕುಂಬಾರನ ಹೊಲವೆಂಬ ಭೂವಿುಯನ್ನು ಕೊಂಡುಕೊಂಡರು. ಈ ಕಾರಣದಿಂದ ಇಂದಿನವರೆಗೂ ಆ ಹೊಲಕ್ಕೆ ಜೀವಹತ್ಯದ ಹೊಲವೆಂಬ ಹೆಸರು ಅದೆ.
ಅವರು ಯೇಸುವನ್ನು ತೆಗೆದುಕೊಂಡು ಹೋದರು; ಆತನು ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ಕಪಾಲಸ್ಥಳವೆಂಬ ಸ್ಥಾನಕ್ಕೆ ಹೋದನು. ಇದಕ್ಕೆ ಇಬ್ರಿಯ ಮಾತಿನಲ್ಲಿ ಗೊಲ್ಗೊಥಾ ಎಂದು ಹೆಸರು.ಅವರು ಆತನನ್ನು ತೆಗೆದುಕೊಂಡು ಹೋಗುತ್ತಿರುವಾಗ ಹೊಲದಿಂದ ಬರುತ್ತಿದ್ದ ಕುರೇನೆಪಟ್ಟಣದ ಸೀಮೋನನೆಂಬವನನ್ನು ಹಿಡಿದು ಶಿಲುಬೆಯನ್ನು ಅವನ ಮೇಲೆ ಇಟ್ಟು ಯೇಸುವಿನ ಹಿಂದೆ ಹೊತ್ತುಕೊಂಡು ಬರುವ ಹಾಗೆ ಮಾಡಿದರು.ಜನರೂ ಸ್ತ್ರೀಯರೂ ದೊಡ್ಡ ಗುಂಪಾಗಿ ಆತನ ಹಿಂದೆ ಬಂದರು. ಆ ಸ್ತ್ರೀಯರು ಎದೆಬಡುಕೊಳ್ಳುತ್ತಾ ಆತನ ವಿಷಯದಲ್ಲಿ ಗೋಳಾಡುತ್ತಾ ಇದ್ದರು. ಯೇಸು ಅವರ ಕಡೆಗೆ ತಿರುಗಿಕೊಂಡು - ಯೆರೂಸಲೇವಿುನ ಸ್ತ್ರೀಯರೇ, ನನಗೋಸ್ಕರ ಅಳಬೇಡಿರಿ, ನಿಮಗೋಸ್ಕರವೂ ನಿಮ್ಮ ಮಕ್ಕಳಿಗೋಸ್ಕರವೂ ಅಳಿರಿ. ಯಾಕಂದರೆ ಬಂಜೆಯರೂ ಬಸುರಾಗದವರೂ ಮೊಲೆಕುಡಿಸದವರೂ ಧನ್ಯರು ಎಂದು ಜನರು ಹೇಳುವ ದಿವಸಗಳು ಬರುತ್ತವೆ. ಆ ಕಾಲದಲ್ಲಿ ಜನರು - ಬೆಟ್ಟಗಳೇ, ನಮ್ಮ ಮೇಲೆ ಬೀಳಿರಿ; ಗುಡ್ಡಗಳೇ, ನಮ್ಮನ್ನು ಮುಚ್ಚಿಕೊಳ್ಳಿರಿ ಅನ್ನುವರು. ಮರ ಹಸಿಯಾಗಿರುವಾಗ ಇಷ್ಟೆಲ್ಲಾ ಮಾಡಿದರೆ ಮರ ಒಣಗಿರುವಾಗ ಏನಾಗಬಹುದು? ಅಂದನು.ಆತನ ಸಂಗಡ ಕೊಲ್ಲುವದಕ್ಕಾಗಿ ದುಷ್ಕರ್ಮಿಗಳಾಗಿದ್ದ ಬೇರೆ ಇಬ್ಬರನ್ನೂ ತೆಗೆದುಕೊಂಡು ಹೋದರು.
ಅಧ್ಯಾಯ 62
ಮತ್ತು ಗೊಲ್ಗೊಥಾ ಅಂದರೆ ಕಪಾಸ್ಥಳ ಎಂಬ ಸ್ಥಾನಕ್ಕೆ ಬಂದಾಗ ಆತನಿಗೆ ಕಹಿ ಬೆರಸಿದ ದ್ರಾಕ್ಷಾರಸವನ್ನು ಕುಡಿಯುವದಕ್ಕೆ ಕೊಟ್ಟರು; ಆತನು ಅದನ್ನು ರುಚಿ ನೋಡಿ ಕುಡಿಯಲೊಲ್ಲದೆ ಇದ್ದನು. ಅಲ್ಲಿ ಆತನನ್ನೂ ಆ ದುಷ್ಕರ್ಮಿಗಳನ್ನೂ ಶಿಲುಬೆಗೆ ಹಾಕಿದರು, ಒಬ್ಬನನ್ನು ಆತನ ಬಲಗಡೆಯಲ್ಲಿ ಒಬ್ಬನನ್ನು ಆತನ ಎಡಗಡೆಯಲ್ಲಿ ಹಾಕಿದರು. ಆತನನ್ನು ಶಿಲುಬೆಗೆ ಹಾಕುವಾಗ ಹೊತ್ತಾರೆ ಒಂಭತ್ತು ಗಂಟೆಯಾಗಿತ್ತು.ಆಗ ಯೇಸು - ತಂದೆಯೇ, ಅವರಿಗೆ ಕ್ಷವಿುಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು ಅಂದನು. ಇದಲ್ಲದೆ ಪಿಲಾತನು ಒಂದು ವಿಳಾಸವನ್ನು ಬರೆದು ಆತನ ಶಿಲುಬೆಯ ಮೇಲ್ಗಡೆ ಹಚ್ಚಿಸಿದನು. ಅದೇನಂದರೆ -ನಜರೇತಿನ ಯೇಸು, ಯೆಹೂದ್ಯರ ಅರಸನು ಎಂಬದೇ.ಅವರು ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳವು ಪಟ್ಟಣಕ್ಕೆ ಹತ್ತಿರವಾಗಿದ್ದದರಿಂದ ಯೆಹೂದ್ಯರಲ್ಲಿ ಬಹಳ ಮಂದಿ ಆ ವಿಳಾಸವನ್ನು ಓದಿದರು. ಅದು ಇಬ್ರಿಯ ಲಾತೀನ್ ಗ್ರೀಕ್ ಭಾಷೆಗಳಲ್ಲಿ ಬರೆದಿತ್ತು. ಹೀಗಿರಲಾಗಿ ಯೆಹೂದ್ಯರ ಮಹಾಯಾಜಕರು ಪಿಲಾತನಿಗೆ - ಯೆಹೂದ್ಯರ ಅರಸನು ಎಂದು ಬರೆಯದೆ ನಾನು ಯೆಹೂದ್ಯರ ಅರಸನೆಂದು ಹೇಳಿದವನು ಎಂಬದಾಗಿ ಬರೆಯಬೇಕೆಂತ ಹೇಳಿದರು. ಅದಕ್ಕೆ ಪಿಲಾತನು - ನಾನು ಬರೆದದ್ದು ಬರೆದಾಯಿತು ಅಂದನು.
ಸಿಪಾಯಿಗಳು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಅವರು ಆತನ ಮೇಲುಹೊದಿಕೆಗಳನ್ನು ತಕ್ಕೊಂಡು ನಾಲ್ಕು ಪಾಲು ಮಾಡಿ ಒಬ್ಬೊಬ್ಬ ಸಿಪಾಯಿಗೆ ಒಂದೊಂದು ಪಾಲಿನ ಪ್ರಕಾರ ಹಂಚಿಕೊಂಡರು. ಆತನ ಒಳಂಗಿಯನ್ನು ಸಹ ತಕ್ಕೊಂಡರು; ಆದರೆ ಆ ಅಂಗಿಗೆ ಹೊಲಿಗೆ ಇರಲಿಲ್ಲ. ಅದು ಮೇಲಿನಿಂದ ಅಖಂಡವಾಗಿ ಹೆಣೆದದ್ದಾಗಿತ್ತು. ಅದನ್ನು ನೋಡಿ ಅವರು - ನಾವು ಇದನ್ನು ಹರಿಯಬಾರದು; ಚೀಟುಹಾಕಿ ಇದು ಯಾರಿಗೆ ಬರುವದೋ ನೋಡೋಣ ಎಂದು ಮಾತಾಡಿಕೊಂಡರು. ಇದರಿಂದ -ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲುಮಾಡಿಕೊಂಡರು,ನನ್ನ ಅಂಗಿಗೋಸ್ಕರ ಚೀಟು ಹಾಕಿದರುಎಂಬ ಶಾಸ್ತ್ರದ ಮಾತು ನೆರವೇರಿತು. ಸಿಪಾಯಿಗಳು ಇದನ್ನೆಲ್ಲಾ ಮಾಡಿದರು.ಅಲ್ಲಿ ಹಾದುಹೋಗುವವರು ತಲೇ ಆಡಿಸಿ ಆಹಾ, ದೇವಾಲಯವನ್ನು ಕೆಡವಿ ಮೂರು ದಿನದಲ್ಲಿ ಕಟ್ಟುವವನೇ, ಶಿಲುಬೆಯಿಂದ ಇಳಿದು ನಿನ್ನನ್ನು ರಕ್ಷಿಸಿಕೋ ಎಂದು ಆತನನ್ನು ಹಂಗಿಸುತ್ತಿದ್ದರು.ಅದೇ ಮೇರೆಗೆ ಮಹಾಯಾಜಕರೂ ಶಾಸ್ತ್ರಿಗಳೂ ಹಿರಿಯರೂ - ಅವನು ಮತ್ತೊಬ್ಬರನ್ನು ರಕ್ಷಿಸಿದನು, ತನ್ನನ್ನು ರಕ್ಷಿಸಿಕೊಳ್ಳಲಾರನು. ಅವನು ಇಸ್ರಾಯೇಲಿನ ಅರಸನಲ್ಲವೇ. ಈಗ ಶಿಲುಬೆಯಿಂದ ಇಳಿದು ಬರಲಿ, ಇಳಿದು ಬಂದರೆ ಅವನಲ್ಲಿ ನಂಬಿಕೆಯಿಟ್ಟೇವು. ದೇವರಲ್ಲಿ ಭರವಸವಿಟ್ಟಿದ್ದಾನೆ, ದೇವರು ಅವನಲ್ಲಿ ಇಷ್ಟಪಟ್ಟರೆ ಈಗ ಅವನನ್ನು ಬಿಡಿಸಲಿ; ತಾನು ದೇವರ ಮಗನಾಗಿದ್ದೇನೆಂದು ಹೇಳಿದನಲ್ಲಾ ಎಂದು ಹಾಸ್ಯದಿಂದ ಮಾತಾಡುತ್ತಿದ್ದರು.ಜನರು ನೋಡುತ್ತಾ ನಿಂತರು. ಇದಲ್ಲದೆ ಅಧಿಕಾರಿಗಳು ಹಾಸ್ಯಮಾಡಿ - ಅವನು ಮತ್ತೊಬ್ಬರನ್ನು ರಕ್ಷಿಸಿದನು; ಅವನು ದೇವರಾರಿಸಿಕೊಂಡ ಕ್ರಿಸ್ತನು ಆಗಿದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ ಅಂದರು. ಸಿಪಾಯಿಗಳೂ ಆತನನ್ನು ಹಾಸ್ಯಮಾಡಿದರು; ಅವರು ಆತನ ಹತ್ತಿರ ಬಂದು ಹುಳಿ ಮದ್ಯವನ್ನು ತೋರಿಸಿ - ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ರಕ್ಷಿಸಿಕೋ ಅಂದರು.
ತೂಗಹಾಕಿದ್ದ ಆ ದುಷ್ಕರ್ಮಿಗಳಲ್ಲಿ ಒಬ್ಬನು ಆತನನ್ನು ದೂಷಿಸಿ - ನೀನು ಬರಬೇಕಾದ ಕ್ರಿಸ್ತನಲ್ಲವೇ, ನಿನ್ನನ್ನು ರಕ್ಷಿಸಿಕೋ, ನಮ್ಮನ್ನೂ ರಕ್ಷಿಸು ಎಂದು ಹೇಳಿದ್ದಕ್ಕೆ ಎರಡನೆಯವನು ಅವನನ್ನು ಗದರಿಸಿ - ನೀನು ಇದೇ ದಂಡನೆಯಲ್ಲಿರುವಾಗಲೂ ದೇವರಿಗೆ ಹೆದರುವದಿಲ್ಲವೋ? ನಾವಂತೂ ನ್ಯಾಯವಾಗಿ ದಂಡನೆಯಲ್ಲಿದ್ದೇವೆ, ನಾವು ಮಾಡಿದ್ದಕ್ಕೆ ತಕ್ಕ ಪ್ರತಿಫಲವನ್ನು ಹೊಂದುತ್ತಾ ಇದ್ದೇವೆ; ಈತನಾದರೋ ಅಲ್ಲದ್ದೇನೂ ಮಾಡಲಿಲ್ಲ ಎಂದು ಹೇಳಿ - ಯೇಸುವೇ, ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ ಅಂದನು. ಅದಕ್ಕೆ ಯೇಸು - ಈಹೊತ್ತೇ ನನ್ನ ಸಂಗಡ ಪರದೈಸಿನಲ್ಲಿರುವಿ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ ಎಂದು ಉತ್ತರಕೊಟ್ಟನು. ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ ಆತನ ತಾಯಿಯ ತಂಗಿಯೂ ಕ್ಲೋಪನ ಹೆಂಡತಿಯಾದ ಮರಿಯಳೂ ಮಗ್ದಲದ ಮರಿಯಳೂ ನಿಂತಿದ್ದರು. ಯೇಸು ತನ್ನ ತಾಯಿಯನ್ನೂ ಹತ್ತರದಲ್ಲಿ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತಾಯಿಗೆ - ಅಮ್ಮಾ, ಇಗೋ ನಿನ್ನ ಮಗನು ಎಂದು ಹೇಳಿದನು. ತರುವಾಯ ಆ ಶಿಷ್ಯನಿಗೆ - ಇಗೋ ನಿನ್ನ ತಾಯಿ ಎಂದು ಹೇಳಿದನು. ಆ ಹೊತ್ತಿನಿಂದ ಆ ಶಿಷ್ಯನು ಆಕೆಯನ್ನು ತನ್ನ ಮನೆಯಲ್ಲೇ ಇರಿಸಿಕೊಂಡನು.
ಇಷ್ಟರಲ್ಲಿ ಹೆಚ್ಚು ಕಡಿಮೆ ಮಧ್ಯಾಹ್ನವಾಯಿತು. ಆಗಲಿಂದ ಸೂರ್ಯನು ಕಾಂತಿಗುಂದಿ ಮೂರು ಘಂಟೆಯ ತನಕ ಆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು;ಮೂರು ಗಂಟೆಗೆ ಯೇಸು - ಎಲೋಹಿ, ಎಲೋಹಿ, ಲಮಾ ಸಬಕ್ತಾನೀ ಅಂದರೆ ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ ಎಂದು ಮಹಾಧ್ವನಿಯಿಂದ ಕೂಗಿದನು. ಹತ್ತಿರ ನಿಂತಿದ್ದವರಲ್ಲಿ ಕೆಲವರು ಅದನ್ನು ಕೇಳಿ - ಎಲೀಯನನ್ನು ಕರೆಯುತ್ತಾನೆ ಕಾಣಿರೋ, ಅಂದರು.ಇದಾದ ಮೇಲೆ ಯೇಸು ಈಗ ಎಲ್ಲಾ ತೀರಿತೆಂದು ತಿಳಿದು ಶಾಸ್ತ್ರದ ಮಾತು ನೆರವೇರುವಂತೆ - ನನಗೆ ನೀರಡಿಕೆ ಆಗಿದೆ ಅಂದನು. ಅಲ್ಲಿ ಹುಳಿರಸ ತುಂಬಿದ ಗಡಿಗೆ ಇಟ್ಟಿರಲಾಗಿ ಅವರು ಸ್ಪಂಜನ್ನು ಹುಳಿರಸದಿಂದ ತುಂಬಿಸಿ ಹಿಸೋಪ್ಗಿಡದ ಕೋಲಿಗೆ ಸಿಕ್ಕಿಸಿ ಆತನ ಬಾಯಿಗೆ ಮುಟ್ಟಿಸಿದರು. ಯೇಸು ಆ ಹುಳಿರಸವನ್ನು ತಕ್ಕೊಂಡ ಮೇಲೆ - ತೀರಿತು ಎಂದು ಹೇಳಿ ತಲೇಬಾಗಿಸಿ ಆತ್ಮವನ್ನು ಒಪ್ಪಿಸಿಕೊಟ್ಟನು.ಆಮೇಲೆ ಯೇಸು - ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ ಎಂದು ಮಹಾಧ್ವನಿಯಿಂದ ಕೂಗಿದನು; ಇದನ್ನು ಹೇಳಿದ ಮೇಲೆ ಪ್ರಾಣಬಿಟ್ಟನು.ಆಗ ಇಗೋ ದೇವಾಲಯದ ತೆರೆಯು ಮೇಲಿಂದ ಕೆಳಗಿನವರೆಗೂ ಹರಿದು ಎರಡು ಭಾಗವಾಯಿತು; ಭೂವಿುಯು ಅದರಿತು; ಬಂಡೆಗಳು ಸೀಳಿಹೋದವು; ಸಮಾಧಿಗಳು ತೆರೆದವು; ನಿದ್ದೆಹೋಗಿದ್ದ ಅನೇಕ ಭಕ್ತರ ದೇಹಗಳು ಎದ್ದವು. ಮತ್ತು ಆತನು ಎದ್ದ ಮೇಲೆ ಸಮಾಧಿಗಳೊಳಗಿಂದ ಹೊರಗೆ ಬಂದು ಪರಿಶುದ್ಧ ಪಟ್ಟಣದೊಳಕ್ಕೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು. ಶತಾಧಿಪತಿಯು ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪವನ್ನೂ ನಡೆದ ಸಂಗತಿಗಳನ್ನೂ ನೋಡಿ ಬಹಳ ಹೆದರಿಕೊಂಡು - ನಿಜವಾಗಿ ಈತನು ದೇವಕುಮಾರನಾಗಿದ್ದನು ಅಂದರು.
ಅಧ್ಯಾಯ 63
ಇದಲ್ಲದೆ ಆತನ ಪರಿಚಿತಿಯವರೆಲ್ಲರೂ ಗಲಿಲಾಯದಿಂದ ಆತನ ಹಿಂದೆ ಬಂದಿದ್ದ ಸ್ತ್ರೀಯರೂ ದೂರದಲ್ಲಿ ನಿಂತು ಈ ಸಂಗತಿಗಳನ್ನು ನೋಡುತ್ತಿದ್ದರು. -ಇವರಲ್ಲಿ, ಆತನು ಗಲಿಲಾಯದಲ್ಲಿದ್ದಾಗ ಆತನನ್ನು ಹಿಂಬಾಲಿಸಿ ಸೇವೆ ಮಾಡುತ್ತಿದ್ದವರಾದ ಮಗ್ದಲದ ಮರಿಯ, ಚಿಕ್ಕ ಯಾಕೋಬನ ಮತ್ತು ಯೋಸೆಯ ತಾಯಿಯಾದ ಮರಿಯ, ಸಲೋಮೆ ಎಂಬವರೂ ಆತನ ಸಂಗಡ ಯೆರೂಸಲೇವಿುಗೆ ಬಂದಿದ್ದ ಇನ್ನೂ ಅನೇಕ ಸ್ತ್ರೀಯರೂ ಇದ್ದರು.ಆತನು ಹೀಗೆ ಪ್ರಾಣಬಿಟ್ಟದ್ದನ್ನು ಆತನ ಹತ್ತಿರ ಎದುರಿಗೆ ನಿಂತಿದ್ದ ಶತಾಧಿಪತಿಯು ನೋಡಿ - ನಿಜವಾಗಿ ಈ ಮನುಷ್ಯನು ದೇವಕುಮಾರನಾಗಿದ್ದನು ಅಂದನು.ಈ ನೋಟಕ್ಕಾಗಿ ಕೂಡಿಬಂದಿದ್ದ ಜನರೆಲ್ಲರು ನಡೆದ ಸಂಗತಿಯನ್ನು ನೋಡಿ ಎದೆಬಡುಕೊಳ್ಳುತ್ತಾ ಹಿಂತಿರುಗಿ ಹೋದರು.ಆ ಹೊತ್ತು ಸೌರಣೆಯ ದಿವಸವಾಗಿದ್ದದರಿಂದ ಯೆಹೂದ್ಯರು - ಸಬ್ಬತ್ದಿನದಲ್ಲಿ ಶವಗಳು ಶಿಲುಬೆಯ ಮೇಲೆ ಇರಬಾರದೆಂದು ಪಿಲಾತನನ್ನು - ಅವರ ಕಾಲುಗಳನ್ನು ಮುರಿಸಿ ಅವರನ್ನು ತೆಗೆಸಿಹಾಕಬೇಕೆಂಬದಾಗಿ ಕೇಳಿಕೊಂಡರು; ಯಾಕಂದರೆ ಆ ಸಬ್ಬತ್ದಿನವು ಬಹು ವಿಶೇಷವಾದದ್ದು. ಆದದರಿಂದ ಸಿಪಾಯಿಗಳು ಬಂದು ಮೊದಲನೆಯವನ ಕಾಲುಗಳನ್ನೂ ಅವನ ಜೊತೆಯಲ್ಲಿ ಶಿಲುಬೆಗೆ ಹಾಕಿಸಿಕೊಂಡಿದ್ದ ಮತ್ತೊಬ್ಬನ ಕಾಲುಗಳನ್ನೂ ಮುರಿದರು. ಆದರೆ ಯೇಸುವಿನ ಬಳಿಗೆ ಬಂದಾಗ ಆತನು ಆಗಲೇ ಸತ್ತಿರುವದನ್ನು ಅವರು ಕಂಡು ಆತನ ಕಾಲುಗಳನ್ನು ಮುರಿಯಲಿಲ್ಲ. ಆದರೂ ಸಿಪಾಯಿಗಳಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು; ತಿವಿದ ಕೂಡಲೆ ರಕ್ತವೂ ನೀರೂ ಹೊರಟಿತು. ಅದನ್ನು ಕಂಡವನೇ ಸಾಕ್ಷಿ ಹೇಳಿದ್ದಾನೆ, ಅವನ ಸಾಕ್ಷಿ ಸತ್ಯವೇ; ತಾನು ಹೇಳುವದು ಸತ್ಯವೆಂದು ಅವನು ಬಲ್ಲನು; ನೀವು ಸಹ ನಂಬಬೇಕೆಂದು ಇದನ್ನು ಹೇಳಿದ್ದಾನೆ. ಯಾಕಂದರೆ - ಆತನ ಒಂದು ಎಲುಬನ್ನಾದರೂ ಮುರಿಯಕೂಡದು ಎಂದು ಶಾಸ್ತ್ರದಲ್ಲಿ ಬರೆದ ಮಾತು ನೆರವೇರುವಂತೆ ಇದಾಯಿತು; ಮತ್ತು - ಅವರು ತಾವು ಇರಿದವನನ್ನು ದಿಟ್ಟಿಸಿನೋಡುವರು ಎಂದು ಶಾಸ್ತ್ರದಲ್ಲಿ ಮತ್ತೊಂದು ಮಾತು ಹೇಳಿ ಅದೆ.
ಆಗಲೇ ಸಂಜೆಯಾಗಿತ್ತು; ಮತ್ತು ಆ ದಿನವು ಸೌರಣೆಯ ದಿನ, ಅಂದರೆ ಸಬ್ಬತ್ ದಿನದ ಹಿಂದಿನ ದಿನ ಆಗಿತ್ತು.-ಅರಿಮಥಾಯವೆಂಬ ಯೆಹೂದ್ಯರದೊಂದು ಪಟ್ಟಣದ ಒಬ್ಬ ಮನುಷ್ಯನಿದ್ದನು; ಅವನ ಹೆಸರು ಯೋಸೇಫನು. ಅವನು ಹಿರೀಸಭೆಯವನು, ಉತ್ತಮನು, ಸತ್ಪುರುಷನು, ದೇವರ ರಾಜ್ಯವನ್ನು ಎದುರು ನೋಡುತ್ತಿದ್ದವನು; ಅವನು ಹಿರೀಸಭೆಯವರ ಆಲೋಚನೆಗೂ ಕೃತ್ಯಕ್ಕೂ ಸಮ್ಮತಿ ಪಟ್ಟಿರಲಿಲ್ಲ. ಅವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಂಡುಪಿಲಾತನು - ಅವನು ಇಷ್ಟು ಬೇಗ ಸತ್ತನೋ ಎಂದು ಆಶ್ಚರ್ಯಪಟ್ಟು ಶತಾಧಿಪತಿಯನ್ನು ಕರೆಸಿ - ಅವನು ಆಗಲೇ ಸತ್ತನೋ ಎಂದು ಅವನನ್ನು ಕೇಳಿ ಆತನು ಸತ್ತದ್ದನ್ನು ಶತಾಧಿಪತಿಯಿಂದ ತಿಳಿದು ಶವವನ್ನು ಯೋಸೇಫನಿಗೆ ಕೊಡಿಸಿದನು.ಇದಲ್ಲದೆ ಮೊದಲು ಒಂದು ಸಾರಿ ರಾತ್ರಿವೇಳೆಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ರಕ್ತಬೋಳ ಅಗರುಗಳನ್ನು ಕಲಸಿದ ಚೂರ್ಣವನ್ನು ನೂರು ಸೇರಿನಷ್ಟು ತಕ್ಕೊಂಡು ಅಲ್ಲಿಗೆ ಬಂದನು. ಅವರು ಯೇಸುವಿನ ದೇಹವನ್ನು ತಕ್ಕೊಂಡು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಅದನ್ನು ಆ ಸುಗಂಧದ್ರವ್ಯಗಳ ಸಹಿತವಾಗಿ ನಾರುಬಟ್ಟೆಯಲ್ಲಿ ಸುತ್ತಿದರು. ಆತನನ್ನು ಶಿಲುಬೆಗೆ ಹಾಕಿದ ಸ್ಥಳದಲ್ಲಿ ಒಂದು ತೋಟವಿತ್ತು; ಆ ತೋಟದಲ್ಲಿ ಒಂದು ಹೊಸ ಸಮಾಧಿ ಇತ್ತು; ಅದರಲ್ಲಿ ಅದುವರೆಗೆ ಯಾರನ್ನೂ ಇಟ್ಟಿದ್ದಿಲ್ಲ.ಬಂಡೆಯಲ್ಲಿ ತೋಡಿದ್ದ ತನ್ನ ಹೊಸ ಸಮಾಧಿಯಲ್ಲಿ ಇಟ್ಟು ಸಮಾಧಿಯ ಬಾಗಿಲಿಗೆ ದೊಡ್ಡ ಕಲ್ಲನ್ನು ಉರುಳಿಸಿ ಹೋದನು.ಆ ದಿನವು ಸೌರಣೆಯ ದಿನವಾಗಿತ್ತು; ಮತ್ತು ಸಬ್ಬತ್ದಿನ ಪ್ರಾರಂಭವಾಗುವದಕ್ಕೆ ಸ್ವಲ್ಪ ಹೊತ್ತು ಮಾತ್ರ ಇತ್ತು. ಹೀಗಿರುವಲ್ಲಿ ಗಲಿಲಾಯದಿಂದ ಆತನ ಸಂಗಡ ಬಂದಿದ್ದ ಸ್ತ್ರೀಯರು ಜೊತೆಯಲ್ಲಿ ಹಿಂದೆಯೇ ಹೋಗಿ ಆ ಸಮಾಧಿಯನ್ನೂ ಆತನ ದೇಹವನ್ನಿಟ್ಟ ರೀತಿಯನ್ನೂ ನೋಡಿ ಹಿಂತಿರುಗಿ ಬಂದು ಪರಿಮಳದ್ರವ್ಯಗಳನ್ನೂ ಸುಗಂಧತೈಲವನ್ನೂ ಸಿದ್ಧಮಾಡಿಕೊಂಡರು.
ಮರುದಿನ ಅಂದರೆ ಸೌರಣೆಯ ದಿನ ಕಳೆದ ಮೇಲೆ ಮಹಾಯಾಜಕರೂ ಫರಿಸಾಯರೂ ಪಿಲಾತನ ಬಳಿಗೆ ಕೂಡಿಬಂದು - ದೊರೆಯೇ, ಆ ಮೋಸಗಾರನು ಬದುಕಿದ್ದಾಗ ತಾನು ಮೂರು ದಿನದ ಮೇಲೆ ಏಳುತ್ತೇನೆ ಅಂತ ಹೇಳಿದ್ದು ನಮ್ಮ ನೆನಪಿಗೆ ಬಂತು; ಆದಕಾರಣ ಮೂರನೆಯ ದಿನದ ತನಕ ಸಮಾಧಿಯನ್ನು ಭದ್ರಮಾಡಿ ಕಾಯುವದಕ್ಕೆ ಅಪ್ಪಣೆಕೊಡಬೇಕು; ಇಲ್ಲದಿದ್ದರೆ ಅವನ ಶಿಷ್ಯರು ಬಂದು ಅವನನ್ನು ಕದ್ದುಕೊಂಡು ಹೋಗಿ ಸತ್ತವನು ಬದುಕಿ ಬಂದಿದ್ದಾನೆ ಎಂದು ಹೇಳಾರು; ಆಗ ಮೊದಲನೆಯ ಮೋಸಕ್ಕಿಂತ ಕಡೆಯ ಮೋಸವು ಕೆಡುಕಾದೀತು ಅಂದರು. ಪಿಲಾತನು ಅವರಿಗೆ - ಕಾವಲುಗಾರರನ್ನು ತಕ್ಕೊಳ್ಳಿ; ಹೋಗಿ ನಿಮಗೆ ತಿಳಿದ ಹಾಗೆ ಭದ್ರಮಾಡಿ ಕಾಯಿರಿ ಎಂದು ಹೇಳಲಾಗಿ ಅವರು ಹೊರಟು ಕಾವಲುಗಾರರೊಂದಿಗೆ ಆ ಕಲ್ಲಿಗೆ ಮುದ್ರೆಹಾಕಿ ಸಮಾಧಿಯನ್ನು ಭದ್ರಮಾಡಿದರು.
ಅಧ್ಯಾಯ 64
ಸಬ್ಬತ್ದಿನ ಕಳೆದ ಮೇಲೆ, ಮಗ್ದಲದ ಮರಿಯಳೂ ಯಾಕೋಬನ ತಾಯಿ ಮರಿಯಳೂ ಸಲೋಮೆಯೂ ಆತನ ದೇಹಕ್ಕೆ ಹಚ್ಚುವದಕ್ಕಾಗಿ ಸುಗಂಧದ್ರವ್ಯಗಳನ್ನು ಕೊಂಡರು. ಮತ್ತು ವಾರದ ಮೊದಲನೆಯ ದಿನದ ಬೆಳಿಗ್ಗೆ ಹೊತ್ತು ಮೂಡುವಾಗ ಅವರು ಸಮಾಧಿಯ ಬಳಿಗೆ ಬಂದರು. ಸಮಾಧಿಗೆ ಮುಚ್ಚಿದ್ದ ಕಲ್ಲು ಬಹಳ ದೊಡ್ಡದಾಗಿದ್ದದರಿಂದ ಅವರು - ಸಮಾಧಿಯ ಬಾಗಿಲಿಂದ ಆ ಕಲ್ಲನ್ನು ನಮಗೋಸ್ಕರ ಉರುಳಿಸುವವರು ಯಾರಿದ್ದಾರೆ ಎಂದು ತಮ್ಮತಮ್ಮೊಳಗೆ ಮಾತಾಡಿಕೊಳ್ಳುತ್ತಾ ಇರಲಾಗಿಆಗ ಮಹಾ ಭೂಕಂಪವಾಯಿತು. ಕರ್ತನ ದೂತನು ಆಕಾಶದಿಂದ ಇಳಿದು ಬಂದು ಆ ಕಲ್ಲನ್ನು ಬಾಗಿಲಿನಿಂದ ಉರುಳಿಸಿ ಅದರ ಮೇಲೆ ಕೂತುಕೊಂಡನು. ಅವನ ಮುಖಭಾವವು ವಿುಂಚಿನಂತೆ ಇತ್ತು, ಅವನ ಉಡುಪು ಹಿಮದಂತೆ ಬೆಳ್ಳಗಿತ್ತು; ಕಾವಲುಗಾರರು ಅವನಿಗೆ ಹೆದರಿ ನಡುಗಿ ಸತ್ತವರ ಹಾಗಾದರು. ಆಗ ದೂತನು ಆ ಹೆಂಗಸರಿಗೆ - ನೀವು ಹೆದರಬೇಡಿರಿ; ಶಿಲುಬೆಗೆ ಹಾಕಲ್ಪಟ್ಟಿದ್ದ ಯೇಸುವನ್ನು ಹುಡುಕುತ್ತೀರೆಂದು ಬಲ್ಲೆನು; ಆತನು ಇಲ್ಲಿ ಇಲ್ಲ; ತಾನು ಹೇಳಿದಂತೆ ಎದ್ದಿದ್ದಾನೆ; ಬನ್ನಿ, ಆತನು ಮಲಗಿದ್ದ ಸ್ಥಳವನ್ನು ನೋಡಿರಿ; ಮತ್ತು ಬೇಗ ಹೋಗಿ ಆತನ ಶಿಷ್ಯರಿಗೆ - ಸತ್ತವನು ಬದುಕಿದ್ದಾನೆ, ಆತನು ನಿಮ್ಮ ಮುಂದೆ ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ ಎಂದು ತಿಳಿಸಿರಿ; ನಾನು ನಿಮಗೆ ಹೇಳಿದ್ದೇನೆ, ನೋಡಿರಿ ಎಂದು ಹೇಳಿದನು.
ಒಳಕ್ಕೆ ಹೋಗಿ ನೋಡುವಲ್ಲಿ ಯೇಸು ಸ್ವಾವಿುಯ ದೇಹವು ಕಾಣಲಿಲ್ಲ. ಈ ವಿಷಯದಲ್ಲಿ ಅವರಿಗೆ ಗಲಿಬಿಲಿ ಉಂಟಾದಾಗ ಹೊಳೆಯುವ ಉಡುಪನ್ನು ಧರಿಸಿದ್ದ ಇಬ್ಬರು ಪುರುಷರು ಅಕಸ್ಮಾತ್ತಾಗಿ ಅವರ ಬಳಿಯಲ್ಲಿ ನಿಂತುಕೊಂಡರು. ಆ ಸ್ತ್ರೀಯರು ಭಯ ಹಿಡಿದವರಾಗಿ ತಮ್ಮ ಮುಖಗಳನ್ನು ನೆಲದ ಕಡೆಗೆ ಬೊಗ್ಗಿಸಿಕೊಂಡಿರುವಾಗ ಆ ಪುರುಷರು ಅವರಿಗೆ - ಸತ್ತವರೊಳಗೆ ಬದುಕಿರುವವನನ್ನು ಹುಡುಕುವದೇನು? ಆತನು ಇಲ್ಲಿ ಇಲ್ಲ, ಎದ್ದಿದ್ದಾನೆ. -ಆತನು ಇನ್ನೂ ಗಲಿಲಾಯದಲ್ಲಿದ್ದಾಗ - ಮನುಷ್ಯಕುಮಾರನು ಪಾಪಿಗಳಾದ ಮನುಷ್ಯರ ಕೈಗೆ ಒಪ್ಪಿಸಲ್ಪಟ್ಟು ಶಿಲುಬೆಗೆ ಹಾಕಲ್ಪಟ್ಟು ಮೂರನೆಯ ದಿನದಲ್ಲಿ ಎದ್ದು ಬರುವದು ಅಗತ್ಯವೆಂದು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿರಿ ಎಂದು ಹೇಳಿದರು. ಸ್ತ್ರೀಯರು ಆತನ ಮಾತುಗಳನ್ನು ನೆನಪಿಗೆ ತಂದುಕೊಂಡು ಅವರು ಭಯದಿಂದಲೂ ಮಹಾ ಸಂತೋಷದಿಂದಲೂ ಬೇಗ ಸಮಾಧಿಯ ಬಳಿಯಿಂದ ಹೊರಟು ಆತನ ಶಿಷ್ಯರಿಗೆ ತಿಳಿಸುವದಕ್ಕೆ ಓಡಿಹೋದರು. ಆಗ ಯೇಸು ಅವರ ಎದುರಿಗೆ ಬಂದು - ನಿಮಗೆ ಶುಭವಾಗಲಿ ಅಂದನು. ಅವರು ಹತ್ತರಕ್ಕೆ ಬಂದು ಆತನ ಪಾದಗಳನ್ನು ಹಿಡಿದು ಆತನಿಗೆ ನಮಸ್ಕಾರಮಾಡಿದರು. ಯೇಸು ಅವರಿಗೆ - ಹೆದರಬೇಡಿರಿ; ನನ್ನ ಸಹೋದರರ ಬಳಿಗೆ ಹೋಗಿ ಅವರು ಗಲಿಲಾಯಕ್ಕೆ ಹೋಗಬೇಕೆಂದು ಹೇಳಿರಿ; ಅಲ್ಲಿ ನನ್ನನ್ನು ನೋಡುವರು ಎಂದು ಹೇಳಿದನು.ಸಮಾಧಿಯ ಬಳಿಯಿಂದ ಹಿಂತಿರುಗಿ ಹೋಗಿ ಆ ಸಂಗತಿಗಳನ್ನೆಲ್ಲಾ ಹನ್ನೊಂದು ಮಂದಿ ಶಿಷ್ಯರಿಗೂ ಉಳಿದವರೆಲ್ಲರಿಗೂ ತಿಳಿಸಿದರು. ಆ ಸ್ತ್ರೀಯರು ಯಾರಂದರೆ ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿಯಾದ ಮರಿಯಳು ಇವರೇ. ಇವರ ಜೊತೆಯಲ್ಲಿದ್ದ ಬೇರೆ ಸ್ತ್ರೀಯರು ಸಹ ಅಪೊಸ್ತಲರಿಗೆ ಆ ಸಂಗತಿಗಳನ್ನು ಹೇಳಿದರು. ಅವರು ನಂಬಲಿಲ್ಲ; ಆ ಮಾತುಗಳು ಅವರಿಗೆ ಬರೀ ಹರಟೆಯಾಗಿ ತೋರಿದವು.
ಅವರು ಹೋಗುತ್ತಿರುವಾಗ ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಬಂದು ನಡೆದ ಸಂಗತಿಗಳನ್ನೆಲ್ಲಾ ಮಹಾಯಾಜಕರಿಗೆ ತಿಳಿಸಿದರು. ಇವರು ಹಿರಿಯರ ಸಂಗಡ ಕೂಡಿಕೊಂಡು ಆಲೋಚನೆಮಾಡಿ ಆ ಸಿಪಾಯಿಗಳಿಗೆ ಬಹಳ ಹಣಕೊಟ್ಟು - ಅವನ ಶಿಷ್ಯರು ರಾತ್ರಿಯಲ್ಲಿ ಬಂದು ನಾವು ನಿದ್ದೆಮಾಡುತ್ತಿರುವಾಗ ಅವನನ್ನು ಕದ್ದುಕೊಂಡು ಹೋದರು ಎಂದು ಹೇಳಿರಿ; ಈ ಸುದ್ದಿ ದೇಶಾಧಿಪತಿಯ ಕಿವಿಗೆ ಬಿದ್ದರೆ ನಾವು ಅವನನ್ನು ಸಮಾಧಾನಪಡಿಸಿ ನಿಮಗೆ ಭಯವಿಲ್ಲದ ಹಾಗೆ ಮಾಡುತ್ತೇವೆ ಅಂದರು. ಇವರು ಆ ಹಣವನ್ನು ತೆಗೆದುಕೊಂಡು ತಮಗೆ ಹೇಳಿಕೊಟ್ಟ ಹಾಗೆ ಮಾಡಿದರು. ಈ ಮಾತು ಇಂದಿನವರೆಗೂ ಯೆಹೂದ್ಯರಲ್ಲಿ ಹಬ್ಬಿ ಅದೆ.
[ವಾರದ ಮೊದಲನೆಯ ದಿನ ಬೆಳಿಗ್ಗೆ ಯೇಸು ಜೀವಿತನಾಗಿ ಎದ್ದ ಮೇಲೆ ಮಗ್ದಲದ ಮರಿಯಳಿಗೆ ಮೊದಲು ಕಾಣಿಸಿಕೊಂಡನು. ಆಕೆಗೆ ಏಳು ದೆವ್ವಗಳನ್ನು ಬಿಡಿಸಿದ್ದನು.ವಾರದ ಮೊದಲನೆಯ ದಿನದಲ್ಲಿ ಮಗ್ದಲದ ಮರಿಯಳು ಮುಂಜಾನೆ ಇನ್ನೂ ಕತ್ತಲೆ ಇರುವಾಗಲೇ ಸಮಾಧಿಯ ಬಳಿಗೆ ಬಂದು ಸಮಾಧಿಯ ಕಲ್ಲು ಅಲ್ಲಿಂದ ತೆಗೆದಿರುವದನ್ನು ಕಂಡಳು. ಆಕೆ ಸೀಮೋನ ಪೇತ್ರನ ಬಳಿಗೂ ಯೇಸುವಿಗೆ ಪ್ರಿಯನಾಗಿದ್ದ ಆ ಮತ್ತೊಬ್ಬ ಶಿಷ್ಯನ ಬಳಿಗೂ ಓಡಿ ಬಂದು ಅವರಿಗೆ - ಸ್ವಾವಿುಯನ್ನು ಸಮಾಧಿಯಿಂದ ತೆಗೆದುಕೊಂಡು ಹೋಗಿ ಆತನನ್ನು ಎಲ್ಲಿಟ್ಟಿದ್ದಾರೋ ನಮಗೆ ಗೊತ್ತಿಲ್ಲವೆಂದು ಹೇಳಿದಳು. ಆಗ ಪೇತ್ರನೂ ಆ ಮತ್ತೊಬ್ಬ ಶಿಷ್ಯನೂ ಹೊರಟು ಸಮಾಧಿಯ ಕಡೆಗೆ ಹೋದರು. ಅವರಿಬ್ಬರೂ ಜೊತೆಯಾಗಿ ಓಡಿದರು; ಆದರೆ ಆ ಮತ್ತೊಬ್ಬ ಶಿಷ್ಯನು ಪೇತ್ರನಿಗಿಂತ ಮುಂದೆ ಓಡಿ ಮೊದಲೇ ಸಮಾಧಿಗೆ ಮುಟ್ಟಿ ಬೊಗ್ಗಿ ನೋಡಿ ಆ ನಾರುಬಟ್ಟೆಗಳು ಬಿದ್ದಿರುವದನ್ನು ಕಂಡನು; ಆದರೆ ಒಳಕ್ಕೆ ಹೋಗಲಿಲ್ಲ. ಸೀಮೋನ ಪೇತ್ರನು ಅವನ ಹಿಂದೆ ಬಂದು ಸಮಾಧಿಯೊಳಕ್ಕೆ ಹೋಗಿ ಆ ನಾರುಬಟ್ಟೆಗಳು ಬಿದ್ದಿರುವದನ್ನೂ ಆತನ ತಲೆಯ ಮೇಲಿದ್ದ ಕೈಪಾವುಡವು ಆ ನಾರುಬಟ್ಟೆಗಳ ಕೂಡ ಇರದೆ ಸುತ್ತಿ ಒಂದು ಕಡೆಯಲ್ಲಿ ಬೇರೇ ಇರುವದನ್ನೂ ನೋಡಿದನು. ಆಗ ಸಮಾಧಿಯ ಬಳಿಗೆ ಮೊದಲು ಬಂದಿದ್ದ ಆ ಮತ್ತೊಬ್ಬ ಶಿಷ್ಯನು ಸಹ ಒಳಕ್ಕೆ ಹೋಗಿ ನೋಡಿ ನಂಬಿದನು. ಆತನು ಸತ್ತ ಮೇಲೆ ಜೀವದಿಂದೆದ್ದು ಬರಬೇಕೆಂಬದಾಗಿ ಶಾಸ್ತ್ರದಲ್ಲಿ ಬರೆದಿರುವ ಮಾತು ಅವರಿಗೆ ಇನ್ನೂ ತಿಳಿದಿರಲಿಲ್ಲ. ತರುವಾಯ ಆ ಶಿಷ್ಯರು ತಿರಿಗಿ ತಮ್ಮವರ ಬಳಿಗೆ ಹೋದರು.
ಆದರೆ ಮರಿಯಳು ಹೊರಗೆ ಸಮಾಧಿಯ ಬಳಿಯಲ್ಲಿ ಅಳುತ್ತಾ ನಿಂತಿದ್ದಳು. ಹೀಗೆ ಆಕೆ ಅಳುತ್ತಿರುವಾಗ ಸಮಾಧಿಯೊಳಗೆ ಬೊಗ್ಗಿ ನೋಡಲು ಯೇಸುವಿನ ದೇಹವು ಇಟ್ಟಿದ್ದ ಸ್ಥಳದಲ್ಲಿ ಬೆಳ್ಳಗಿರುವ ವಸ್ತ್ರಗಳನ್ನು ಹೊದ್ದುಕೊಂಡ ಇಬ್ಬರು ದೇವದೂತರನ್ನು ಕಂಡಳು; ಅವರಲ್ಲಿ ಒಬ್ಬನು ತಲೆಯಿದ್ದ ಕಡೆಯಲ್ಲಿ ಒಬ್ಬನು ಕಾಲಿದ್ದ ಕಡೆಯಲ್ಲಿ ಕೂತಿದ್ದರು. ಅವರು ಆಕೆಯನ್ನು - ಅಮ್ಮಾ, ನೀನು ಯಾಕೆ ಅಳುತ್ತೀ ಎಂದು ಕೇಳಲು ಆಕೆ - ನನ್ನ ಸ್ವಾವಿುಯನ್ನು ತೆಗೆದುಕೊಂಡು ಹೋಗಿದ್ದಾರೆ; ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ ಅಂದಳು. ಇದನ್ನು ಹೇಳಿ ತಿರುಗಿಕೊಂಡು ಯೇಸು ನಿಂತಿರುವದನ್ನು ಕಂಡಳು, ಆದರೆ ಆತನು ಯೇಸು ಅಂತ ಆಕೆಗೆ ತಿಳಿಯಲಿಲ್ಲ. ಯೇಸು ಆಕೆಯನ್ನು - ಅಮ್ಮಾ, ಯಾಕೆ ಅಳುತ್ತೀ? ಯಾರನ್ನು ಹುಡುಕುತ್ತೀ? ಎಂದು ಕೇಳಲು ಆಕೆ ಆತನನ್ನು ತೋಟಗಾರನೆಂದು ನೆನಸಿ ಆತನಿಗೆ - ಅಯ್ಯಾ, ನೀನು ಆತನನ್ನು ಎತ್ತಿಕೊಂಡು ಹೋಗಿದ್ದರೆ ಎಲ್ಲಿ ಇಟ್ಟಿದ್ದೀ ನನಗೆ ಹೇಳು; ನಾನು ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದಳು. ಯೇಸು ಆಕೆಗೆ - ಮರಿಯಳೇ, ಎಂದು ಹೇಳಿದನು. ಆಕೆ ತಿರುಗಿಕೊಂಡು ಇಬ್ರಿಯ ಮಾತಿನಲ್ಲಿ - ರಬ್ಬೂನಿ, ಅಂದಳು. (ರಬ್ಬೂನಿ ಅಂದರೆ ಗುರುವೇ ಎಂದು ಅರ್ಥ). ಯೇಸು ಆಕೆಗೆ - ನನ್ನನ್ನು ಹಿಡಿಯಬೇಡ; ಯಾಕಂದರೆ ನಾನು ಇನ್ನೂ ತಂದೆಯ ಬಳಿಗೆ ಏರಿಹೋದವನಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ - ನಾನು ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ಏರಿಹೋಗುತ್ತೇನೆ ಎಂದು ಅವರಿಗೆ ಹೇಳು ಅಂದನು.ಆಕೆ ಹೋಗಿ ಆತನು ಕಾಣಿಸಿಕೊಂಡದ್ದನ್ನು ಮುಂಚೆ ಆತನ ಜೊತೆಯಲ್ಲಿದ್ದವರಿಗೆ ತಿಳಿಸಿದಳು; ಇವರು ಹಂಬಲಿಸುತ್ತಾ ಅಳುತ್ತಾ ಕೂತಿದ್ದರು. ಆತನು ಬದುಕಿದ್ದಾನೆ, ನನಗೆ ಕಾಣಿಸಿಕೊಂಡನು ಎಂಬ ಮಾತನ್ನು ಕೇಳಿದಾಗ ಅವರು ನಂಬಲಿಲ್ಲ.
ಅಧ್ಯಾಯ 65
ಅದೇ ದಿನದಲ್ಲಿ ಶಿಷ್ಯರಲ್ಲಿ ಇಬ್ಬರು ಯೆರೂಸಲೇವಿುಗೆ ಆರುವರೆ ಮೈಲು ದೂರದಲ್ಲಿದ್ದ ಎಮ್ಮಾಹು ಎಂಬ ಹಳ್ಳಿಗೆ ಹೋಗುತ್ತಾ ಸಂಭವಿಸಿದ ಈ ಎಲ್ಲಾ ಕಾರ್ಯಗಳ ವಿಷಯವಾಗಿ ಸಂಭಾಷಣೆ ಮಾಡುತ್ತಿದ್ದರು. ಅವರು ಸಂಭಾಷಣೆಯಲ್ಲಿ ಚರ್ಚಿಸುತ್ತಿರುವಾಗ ಯೇಸು ತಾನೇ ಹತ್ತಿರಕ್ಕೆ ಬಂದು ಅವರ ಜೊತೆಯಲ್ಲಿ ಹೋದನು. ಆದರೆ ಅವರು ಆತನ ಗುರುತನ್ನು ಹಿಡಿಯಲಿಲ್ಲ; ಅವರ ಕಣ್ಣು ಕಟ್ಟಿದ ಹಾಗಾಯಿತು. ಆತನು ಅವರನ್ನು - ನೀವು ಮಾರ್ಗದಲ್ಲಿ ಹೋಗುತ್ತಾ ಚರ್ಚಿಸಿ ಮಾತಾಡಿಕೊಳ್ಳುವ ಈ ಸಂಗತಿಗಳೇನು ಎಂದು ಕೇಳಲು ಅವರು ದುಃಖದ ಮುಖವುಳ್ಳವರಾಗಿ ನಿಂತರು. ಅವರಲ್ಲಿ ಕ್ಲೆಯೊಫನೆಂಬವನು ಆತನನ್ನು ಯೆರೂಸಲೇವಿುಗೆ ಬಂದ ಪರಸ್ಥಳದವರೆಲ್ಲರಿಗೂ ಈ ದಿವಸಗಳಲ್ಲಿ ಅದರೊಳಗೆ ನಡೆದಿರುವ ಸಂಗತಿಗಳು ಗೊತ್ತಿರಲಾಗಿ ನಿನಗೆ ಮಾತ್ರ ಗೊತ್ತಿಲ್ಲವೋ ಎಂದು ಕೇಳಲು ಆತನು ಅವರನ್ನು - ಯಾವ ಸಂಗತಿಗಳು ಎಂದು ಕೇಳಿದನು. ಅದಕ್ಕೆ ಅವರು - ನಜರೇತಿನವನಾದ ಯೇಸುವಿನ ಸಂಗತಿಗಳೇ; ಆತನು ದೇವರ ಮುಂದೆ ಮತ್ತು ಮನುಷ್ಯರ ಮುಂದೆ ಕೃತ್ಯದಲ್ಲಿಯೂ ಮಾತಿನಲ್ಲಿಯೂ ಸಮರ್ಥನಾದ ಪ್ರವಾದಿಯಾಗಿದ್ದನು. ಆತನನ್ನು ಮಹಾಯಾಜಕರೂ ನಮ್ಮ ಅಧಿಕಾರಿಗಳೂ ಮರಣದಂಡನೆಗೆ ಒಪ್ಪಿಸಿಕೊಟ್ಟು ಶಿಲುಬೆಗೆ ಹಾಕಿಸಿದರು. ನಾವಾದರೋ ಇಸ್ರಾಯೇಲ್ ಜನರನ್ನು ಬಿಡಿಸತಕ್ಕವನು ಆತನೇ ಎಂದು ನಿರೀಕ್ಷಿಸಿಕೊಂಡಿದ್ದೆವು. ಇದು ಮಾತ್ರವಲ್ಲದೆ ಆ ಕಾರ್ಯಗಳು ನಡೆದು ಈ ಹೊತ್ತು ಮೂರನೆಯ ದಿನ; ಆದರೂ ನಮ್ಮಲ್ಲಿ ಕೆಲವು ಮಂದಿ ಸ್ತ್ರೀಯರು ಬೆಳಗಾಗುವಾಗ ಸಮಾಧಿಯ ಬಳಿಯಲ್ಲಿ ಇದ್ದು ಆತನ ದೇಹವನ್ನು ಕಾಣದೆ ಅಲ್ಲಿಂದ ಬಂದು ತಮಗೆ ದೇವದೂತರ ದರ್ಶನವಾಯಿತೆಂತಲೂ ಆತನು ಬದುಕುತ್ತಾನೆಂದು ಅವರು ಹೇಳಿದರೆಂತಲೂ ತಿಳಿಸಿ ನಮಗೆ ಅತ್ಯಾಶ್ಚರ್ಯವನ್ನುಂಟುಮಾಡಿದರು. ನಮ್ಮ ಸಂಗಡ ಇದ್ದವರಲ್ಲಿ ಕೆಲವರು ಸಮಾಧಿಗೆ ಹೋಗಿ ಆ ಸ್ತ್ರೀಯರು ಹೇಳಿದ ಪ್ರಕಾರವೇ ಕಂಡರು; ಆತನನ್ನು ಮಾತ್ರ ಕಾಣಲಿಲ್ಲ ಎಂದು ಹೇಳಿದರು.
ಆತನು ಅವರಿಗೆ - ಎಲಾ, ಬುದ್ಧಿಯಿಲ್ಲದವರೇ, ಪ್ರವಾದಿಗಳು ಹೇಳಿದ್ದೆಲ್ಲವನ್ನು ನಂಬುವದರಲ್ಲಿ ಮಂದ ಹೃದಯರೇ, ಕ್ರಿಸ್ತನು ಇಂಥ ಶ್ರಮಗಳನ್ನು ಅನುಭವಿಸಿ ತನ್ನ ಮಹಾಪದವಿಗೆ ಸೇರುವದು ಅಗತ್ಯವಾಗಿತ್ತಲ್ಲವೇ ಎಂದು ಹೇಳಿ ಮೋಶೆಯ ಮತ್ತು ಎಲ್ಲಾ ಪ್ರವಾದಿಗಳ ಗ್ರಂಥಗಳು ಮೊದಲುಗೊಂಡು ಸಮಸ್ತ ಗ್ರಂಥಗಳಲ್ಲಿ ತನ್ನ ವಿಷಯವಾಗಿರುವ ಸೂಚನೆಗಳನ್ನು ಅವರಿಗೆ ವಿವರಿಸಿದನು. ಅವರು ಹೋಗುತ್ತಿರುವ ಹಳ್ಳಿಯ ಸಮೀಪಕ್ಕೆ ಬಂದಾಗ ಆತನು ಇನ್ನೂ ಮುಂದಕ್ಕೆ ಹೋಗುವವನಂತೆ ಕಾಣಿಸಿದನು. ಆದರೆ ಅವರು - ನಮ್ಮ ಸಂಗಡ ಇರು, ಸಂಜೆಯಾಯಿತು, ಹೊತ್ತು ಇಳಿಯುತ್ತಾ ಬಂತು ಎಂದು ಆತನಿಗೆ ಹೇಳಿ ಬಲವಂತಮಾಡಲು ಆತನು ಅವರ ಕೂಡ ಇರುವದಕ್ಕೆ ಊರೊಳಕ್ಕೆ ಹೋದನು. ಆತನು ಅವರ ಸಂಗಡ ಊಟಕ್ಕೆ ಕೂತುಕೊಂಡಾಗ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು ಅವರಿಗೆ ಕೊಡುತ್ತಿರಲಾಗಿ ಅವರ ಕಣ್ಣುಗಳು ತೆರೆದವು. ಅವರು ಆತನ ಗುರುತನ್ನು ಹಿಡಿದರು; ಆತನು ಅವರ ಕಣ್ಣಿಗೆ ಮಾಯವಾದನು. ಆಗ ಅವರು ಒಬ್ಬರಿಗೊಬ್ಬರು - ಆತನು ದಾರಿಯಲ್ಲಿ ನಮ್ಮ ಸಂಗಡ ಮಾತಾಡಿದಾಗಲೂ ಗ್ರಂಥಗಳ ಅರ್ಥವನ್ನು ನಮಗೆ ಬಿಚ್ಚಿ ಹೇಳಿದಾಗಲೂ ನಮ್ಮ ಹೃದಯವು ನಮ್ಮಲ್ಲಿ ಕುದಿಯಿತಲ್ಲವೇ ಎಂದು ಹೇಳಿಕೊಂಡು ಅದೇ ಗಳಿಗೆಯಲ್ಲಿ ಎದ್ದು ಯೆರೂಸಲೇವಿುಗೆ ಹಿಂತಿರುಗಿಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡ ಇದ್ದವರೂ ಒಟ್ಟಾಗಿ ಕೂಡಿಕೊಂಡಿದ್ದು - ಸ್ವಾವಿು ಎದ್ದದ್ದು ನಿಜ, ಆತನು ಸೀಮೋನನಿಗೆ ಕಾಣಿಸಿಕೊಂಡನು ಎಂದು ಹೇಳುತ್ತಿದ್ದರು. ಇದನ್ನು ಕಂಡು ಅವರು ದಾರಿಯಲ್ಲಿ ನಡೆದ ಸಂಗತಿಯನ್ನೂ ರೊಟ್ಟಿ ಮುರಿಯುವದರಲ್ಲಿ ತಾವು ಆತನ ಗುರುತು ಹಿಡಿದೆವೆಂಬದನ್ನೂ ವಿವರಿಸಿದರು.
ಅದೇ ದಿವಸದ ಅಂದರೆ ವಾರದ ಮೊದಲನೆಯ ದಿವಸದ ಸಂಜೆಯಲ್ಲಿ ಶಿಷ್ಯರು ಯೆಹೂದ್ಯರ ಭಯದಿಂದ ತಾವು ಇದ್ದ ಮನೆಯ ಬಾಗಲುಗಳನ್ನು ಮುಚ್ಚಿಕೊಂಡಿರಲು ಯೇಸು ಬಂದು ನಡುವೆ ನಿಂತು - ನಿಮಗೆ ಸಮಾಧಾನವಾಗಲಿ ಅಂದನು.ಅವರು ದಿಗಿಲುಬಿದ್ದು ಭಯಹಿಡಿದವರಾಗಿ ತಾವು ಕಂಡದ್ದನ್ನು ಭೂತವೆಂದು ಭಾವಿಸಿದರು. ಆತನು ಅವರಿಗೆ - ಯಾಕೆ ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯದಲ್ಲಿ ಅನುಮಾನಗಳು ಹುಟ್ಟುವದೇಕೆ? ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿರಿ, ನಾನೇ ಅಲ್ಲವೇ. ನನ್ನನ್ನು ಮುಟ್ಟಿನೋಡಿರಿ, ನಿಮಗೆ ಕಾಣುವ ಪ್ರಕಾರ ನನಗೆ ಮಾಂಸವೂ ಎಲುಬುಗಳೂ ಉಂಟು; ಅವು ಭೂತಕ್ಕಿಲ್ಲ ಎಂದು ಹೇಳಿದನು.ಇದನ್ನು ಹೇಳಿದ ಮೇಲೆ ಅವರಿಗೆ ತನ್ನ ಕೈಗಳನ್ನೂ ಪಕ್ಕೆಯನ್ನೂ ತೋರಿಸಿದನು. ಶಿಷ್ಯರು ಸ್ವಾವಿುಯನ್ನು ನೋಡಿದ್ದರಿಂದ ಸಂತೋಷಪಟ್ಟರು.ಹನ್ನೊಂದು ಮಂದಿ ಶಿಷ್ಯರು ಊಟಕ್ಕೆ ಕೂತಿದ್ದಾಗ ಆತನು ಅವರಿಗೂ ಕಾಣಿಸಿಕೊಂಡನು. ತಾನು ಜೀವಿತನಾಗಿ ಎದ್ದು ಬಂದ ಮೇಲೆ ತನ್ನನ್ನು ಕಂಡವರ ಮಾತನ್ನು ಅವರು ನಂಬಲಿಲ್ಲವಾದ ಕಾರಣ ಆತನು ಅವರ ಅಪನಂಬಿಕೆಗೂ ಅವರ ಮನಸ್ಸಿನ ಕಾಠಿಣ್ಯಕ್ಕೂ ಅವರನ್ನು ಗದರಿಸಿದನು.ಆದರೆ ಅವರು ಸಂತೋಷದ ದೆಸೆಯಿಂದ ಇನ್ನೂ ನಂಬದೆ ಆಶ್ಚರ್ಯಪಡುತ್ತಿರಲಾಗಿ ಆತನು - ತಿನ್ನತಕ್ಕ ಪದಾರ್ಥವೇನಾದರೂ ಇಲ್ಲಿ ನಿಮಗುಂಟೋ ಎಂದು ಅವರನ್ನು ಕೇಳಲು ಅವರು ಸುಟ್ಟ ಮೀನಿನ ಒಂದು ತುಂಡನ್ನು ಆತನಿಗೆ ಕೊಟ್ಟರು. ಆತನು ತಕ್ಕೊಂಡು ಅವರ ಮುಂದೆ ತಿಂದನು.ತರುವಾಯ ಆತನು - ನಾನು ಇನ್ನೂ ನಿಮ್ಮ ಸಂಗಡ ಇದ್ದಾಗ ಇದೆಲ್ಲಾ ನಿಮಗೆ ತಿಳಿಸಲಿಲ್ಲವೇ? ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಗ್ರಂಥಗಳಲ್ಲಿಯೂ ಕೀರ್ತನೆಗಳಲ್ಲಿಯೂ ಬರೆದಿರುವದೆಲ್ಲಾ ನೆರವೇರುವದು ಅಗತ್ಯವೆಂದು ನಿಮಗೆ ಹೇಳಲಿಲ್ಲವೇ ಅಂದನು.
ಆಮೇಲೆ ಅವರು ಶಾಸ್ತ್ರವಚನಗಳನ್ನು ತಿಳುಕೊಳ್ಳುವಂತೆ ಆತನು ಅವರ ಬುದ್ಧಿಯನ್ನು ತೆರೆದು ಅವರಿಗೆ - ಕ್ರಿಸ್ತನು ಶ್ರಮೆಪಟ್ಟು ಸತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದುಬರುವನೆಂತಲೂ ಪಾಪಪರಿಹಾರಕ್ಕೋಸ್ಕರ ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಮಾತು ಯೆರೂಸಲೇಮು ಮೊದಲುಗೊಂಡು ಸಮಸ್ತ ದೇಶದವರಿಗೂ ಆತನ ಹೆಸರಿನಲ್ಲಿ ಸಾರಲ್ಪಡುವದೆಂತಲೂ ಬರೆದದೆ. ಇವುಗಳ ವಿಷಯದಲ್ಲಿ ನೀವೇ ಸಾಕ್ಷಿ ಹೇಳುವವರಾಗಿದ್ದೀರಿ. ಇಗೋ ನನ್ನ ತಂದೆಯು ವಾಗ್ದಾನಮಾಡಿದ್ದನ್ನು ನಿಮಗೆ ಕಳುಹಿಸಿಕೊಡುತ್ತೇನೆ. ದೇವರು ಮೇಲಣ ಲೋಕದಿಂದ ನಿಮಗೆ ಶಕ್ತಿಯನ್ನು ಹೊದಿಸುವ ತನಕ ಈ ಪಟ್ಟಣದಲ್ಲೇ ಕಾದುಕೊಂಡಿರ್ರಿ ಎಂದು ಹೇಳಿದನು.ಯೇಸು ಅವರಿಗೆ - ನಿಮಗೆ ಸಮಾಧಾನವಾಗಲಿ ಎಂದು ತಿರಿಗಿ ಹೇಳಿ - ತಂದೆ ನನ್ನನ್ನು ಕಳುಹಿಸಿಕೊಟ್ಟ ಹಾಗೆಯೇ ನಾನೂ ನಿಮ್ಮನ್ನು ಕಳುಹಿಸಿಕೊಡುತ್ತೇನೆ ಅಂದನು. ಇದನ್ನು ಹೇಳಿ ಅವರ ಮೇಲೆ ಊದಿ ಅವರಿಗೆ - ಪವಿತ್ರಾತ್ಮವರವನ್ನು ತಕ್ಕೊಳ್ಳಿರಿ; ನೀವು ಯಾರ ಪಾಪಗಳನ್ನು ಕ್ಷವಿುಸಿಬಿಡುತ್ತೀರೋ ಅವರಿಗೆ ಅವುಗಳ ಕ್ಷಮಾಪಣೆಯಾಗುತ್ತದೆ; ಯಾರ ಪಾಪಗಳನ್ನು ಕ್ಷವಿುಸದೆ ಉಳಿಸುತ್ತೀರೋ ಅವರಿಗೆ ಅವುಗಳು ಉಳಿಯುತ್ತವೆ ಅಂದನು.ಆಮೇಲೆ ಅವರಿಗೆ - ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ. ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು; ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು. ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ನನ್ನ ಹೆಸರನ್ನು ಹೇಳಿ ದೆವ್ವಗಳನ್ನು ಬಿಡಿಸುವರು; ಹೊಸಭಾಷೆಗಳಿಂದ ಮಾತಾಡುವರು; ಹಾವುಗಳನ್ನು ಎತ್ತುವರು; ವಿಷಪದಾರ್ಥವನ್ನೇನಾದರೂ ಕುಡಿದರೂ ಅವರಿಗೆ ಯಾವ ಕೇಡೂ ಆಗುವದಿಲ್ಲ; ಅವರು ರೋಗಿಗಳ ಮೇಲೆ ಕೈಯಿಟ್ಟರೆ ಅವರಿಗೆ ಗುಣವಾಗುವದು ಎಂದು ಹೇಳಿದನು.
ಯೇಸು ಬಂದಾಗ ಹನ್ನೆರಡು ಮಂದಿ ಶಿಷ್ಯರೊಳಗೆ ಒಬ್ಬನಾದ ದಿದುಮನೆನಿಸಿಕೊಳ್ಳುವ ತೋಮನು ಅವರ ಸಂಗಡ ಇರಲಿಲ್ಲ. ಆದದರಿಂದ ಉಳಿದ ಶಿಷ್ಯರು - ನಾವು ಸ್ವಾವಿುಯನ್ನು ನೋಡಿದ್ದೇವೆ ಎಂದು ಅವನಿಗೆ ಹೇಳಿದರು. ಅದಕ್ಕೆ ಅವನು - ನಾನು ಆತನ ಕೈಗಳಲ್ಲಿ ಮೊಳೆಗಳಿಂದಾದ ಗಾಯವನ್ನು ನೋಡಿ ಆ ಮೊಳೆಯ ಗಾಯದಲ್ಲಿ ನನ್ನ ಬೆರಳನ್ನು ಇಟ್ಟು ಆತನ ಪಕ್ಕೆಯಲ್ಲಿ ನನ್ನ ಕೈಯನ್ನು ಹಾಕಿದ ಹೊರತು ನಿಮ್ಮ ಮಾತನ್ನು ನಂಬುವದೇ ಇಲ್ಲ ಅಂದನು.ಎಂಟು ದಿವಸಗಳಾದ ಮೇಲೆ ಆತನ ಶಿಷ್ಯರು ತಿರಿಗಿ ಒಳಗಿದ್ದಾಗ ತೋಮನೂ ಅವರ ಸಂಗಡ ಇದ್ದನು. ಬಾಗಲುಗಳು ಮುಚ್ಚಿದ್ದವು. ಆಗ ಯೇಸು ಬಂದು ನಡುವೆ ನಿಂತು - ನಿಮಗೆ ಸಮಾಧಾನವಾಗಲಿ ಅಂದನು. ಆಮೇಲೆ ತೋಮನಿಗೆ - ನಿನ್ನ ಬೆರಳನ್ನು ಈ ಕಡೆ ಚಾಚಿ ನನ್ನ ಕೈಗಳನ್ನು ಮುಟ್ಟಿ ನೋಡು; ನಿನ್ನ ಕೈಚಾಚಿ ನನ್ನ ಪಕ್ಕೆಯಲ್ಲಿ ಹಾಕು; ನಂಬದವನಾಗಿರಬೇಡ, ನಂಬುವವನಾಗು ಎಂದು ಹೇಳಿದನು. ತೋಮನು ಆತನಿಗೆ - ನನ್ನ ಸ್ವಾಮೀ, ನನ್ನ ದೇವರು! ಎಂದು ಹೇಳಿದನು. ಯೇಸು ಅವನಿಗೆ - ನೀನು ನನ್ನನ್ನು ನೋಡಿದ್ದರಿಂದ ನಂಬಿದ್ದೀ; ನೋಡದೆ ನಂಬಿದವರು ಧನ್ಯರು ಎಂದು ಹೇಳಿದನು.ಯೇಸು ಇನ್ನು ಬೇರೆ ಎಷ್ಟೋ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಮುಂದೆ ಮಾಡಿದನು. ಅವುಗಳು ಈ ಗ್ರಂಥದಲ್ಲಿ ಬರೆದಿರುವದಿಲ್ಲ. ಆದರೆ ಯೇಸು ದೇವಕುಮಾರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ, ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದದೆ.
ಅಧ್ಯಾಯ 66
ತರುವಾಯ ಯೇಸು ತಿಬೇರಿಯ ಸಮುದ್ರದ ಬಳಿಯಲ್ಲಿ ಶಿಷ್ಯರಿಗೆ ತಿರಿಗಿ ತನ್ನನ್ನು ತೋರಿಸಿಕೊಂಡನು. ತನ್ನನ್ನು ತೋರಿಸಿಕೊಂಡ ರೀತಿ ಯಾವದಂದರೆ - ಸೀಮೋನ ಪೇತ್ರನೂ ದಿದುಮನೆಂಬ ತೋಮನೂ ಗಲಿಲಾಯದ ಕಾನಾ ಊರಿನ ನತಾನಯೇಲನೂ ಜೆಬೆದಾಯನ ಕುಮಾರರೂ ಆತನ ಶಿಷ್ಯರಲ್ಲಿ ಇನ್ನಿಬ್ಬರೂ ಕೂಡಿದ್ದರು. ಅವರಿಗೆ ಸೀಮೋನ ಪೇತ್ರನು - ನಾನು ಮೀನು ಹಿಡಿಯುವದಕ್ಕೆ ಹೋಗುತ್ತೇನೆಂದು ಹೇಳಲು ಅವರು - ನಾವೂ ನಿನ್ನ ಸಂಗಡ ಬರುತ್ತೇವೆ ಅಂದರು. ಅವರು ಹೊರಟು ದೋಣಿಯನ್ನು ಹತ್ತಿದರು. ಆದರೆ ಆ ರಾತ್ರಿಯಲ್ಲಿ ಒಂದು ಮೀನೂ ಸಿಕ್ಕಲಿಲ್ಲ. ಬೆಳಗಾಗುವಾಗ ಯೇಸು ದಡದಲ್ಲಿ ನಿಂತಿದ್ದನು; ಆದಾಗ್ಯೂ ಶಿಷ್ಯರು ಆತನನ್ನು ಯೇಸುವೆಂದು ತಿಳಿಯಲಿಲ್ಲ. ಆಗ ಯೇಸು ಅವರನ್ನು - ಮಕ್ಕಳಿರಾ, ಊಟಕ್ಕೆ ನಿಮಗೆ ಏನೂ ಇಲ್ಲವೇ ಎಂದು ಕೇಳಲು ಅವರು ಇಲ್ಲವೆಂದು ಉತ್ತರಕೊಟ್ಟರು. ಆತನು ಅವರಿಗೆ - ನೀವು ದೋಣಿಯ ಬಲಗಡೆಯಲ್ಲಿ ಬಲೆ ಬೀಸಿದರೆ ಸಿಕ್ಕುವದು ಎಂದು ಹೇಳಿದನು. ಅವರು ಹಾಗೆ ಬೀಸಿದಾಗ ಮೀನುಗಳು ಬಹಳ ಹೆಚ್ಚಾಗಿ ಸಿಕ್ಕಿದ್ದರಿಂದ ಬಲೆಯನ್ನು ಎಳೆಯುವದಕ್ಕೆ ಆಗದೆ ಹೋಯಿತು. ಆಗ ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಪೇತ್ರನಿಗೆ - ಅವರು ಸ್ವಾವಿುಯವರು ಎಂದು ಹೇಳಿದನು. ಸ್ವಾವಿುಯವರೆಂದು ಸೀಮೋನ ಪೇತ್ರನು ಕೇಳಿ ಮೈ ಮೇಲೆ ಬಟ್ಟೆಯಿಲ್ಲದವನಾಗಿದ್ದರಿಂದ ಒಲ್ಲಿಯನ್ನು ಸುತ್ತಿಕೊಂಡು ಸಮುದ್ರದಲ್ಲಿ ದುಮುಕಿದನು. ದಡವು ದೂರವಾಗಿರದೆ ಹೆಚ್ಚುಕಡಿಮೆ ಇನ್ನೂರು ಮೊಳದಲ್ಲಿದ್ದರಿಂದ ಉಳಿದ ಶಿಷ್ಯರು ಮೀನು ತುಂಬಿದ ಆ ಬಲೆಯನ್ನು ಎಳೆಯುತ್ತಾ ದೋಣಿಯಲ್ಲಿಯೇ ಬಂದರು. ಅವರು ಭೂವಿುಗೆ ಇಳಿದಾಗ ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ಮೀನುಗಳನ್ನೂ ರೊಟ್ಟಿ ಸಹಿತವಾಗಿ ಕಂಡರು. ಯೇಸು ಅವರಿಗೆ - ನೀವು ಈಗ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ ಎಂದು ಹೇಳಲು ಸೀಮೋನ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ಭೂವಿುಗೆ ಎಳಕೊಂಡು ಬಂದನು. ಅದು ನೂರೈವತ್ತು ಮೂರು ದೊಡ್ಡ ಮೀನುಗಳಿಂದ ತುಂಬಿತ್ತು. ಅಷ್ಟು ಮೀನುಗಳು ಇದ್ದರೂ ಬಲೆ ಹರಿಯಲಿಲ್ಲ. ಯೇಸು ಅವರಿಗೆ - ಬಂದು ಊಟಮಾಡಿರಿ ಎಂದು ಹೇಳಿದನು. ಶಿಷ್ಯರು ಆತನನ್ನು ಸ್ವಾವಿುಯವರೆಂದು ತಿಳಿದಿದ್ದರಿಂದ ನೀನಾರೆಂದು ವಿಚಾರಿಸುವದಕ್ಕೆ ಅವರಲ್ಲಿ ಒಬ್ಬರೂ ಧೈರ್ಯಪಡಲಿಲ್ಲ. ಯೇಸು ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟನು; ಹಾಗೆಯೇ ಮೀನನ್ನೂ ಕೊಟ್ಟನು. ಯೇಸು ಸತ್ತು ಜೀವದಿಂದೆದ್ದ ಮೇಲೆ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ.
ಅವರು ಊಟಮಾಡಿದ ಮೇಲೆ ಯೇಸು ಸೀಮೋನ ಪೇತ್ರನನ್ನು - ಯೋಹಾನನ ಮಗನಾದ ಸೀಮೋನನೇ, ನೀನು ಇವರಿಗಿಂತ ಹೆಚ್ಚಾಗಿ ನನ್ನ ಮೇಲೆ ಪ್ರೀತಿ ಇಟ್ಟಿದ್ದೀಯೋ ಎಂದು ಕೇಳಲು ಅವನು - ಹೌದು, ಸ್ವಾಮೀ, ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬದನ್ನು ನೀನೇ ಬಲ್ಲೆ ಅಂದನು. ಆತನು ಅವನಿಗೆ - ನನ್ನ ಕುರಿಮರಿಗಳನ್ನು ಮೇಯಿಸು ಎಂದು ಹೇಳಿದನು. ಆತನು ತಿರಿಗಿ ಎರಡನೆಯ ಸಾರಿ ಅವನನ್ನು - ಯೋಹಾನನ ಮಗನಾದ ಸೀಮೋನನೇ, ನನ್ನ ಮೇಲೆ ಪ್ರೀತಿ ಇಟ್ಟಿದ್ದೀಯೋ ಎಂದು ಕೇಳಲು ಅವನು - ಹೌದು, ಸ್ವಾಮೀ, ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬದನ್ನು ನೀನೇ ಬಲ್ಲೆ ಅಂದನು. ಆತನು ಅವನಿಗೆ - ನನ್ನ ಕುರಿಗಳನ್ನು ಕಾಯಿ ಎಂದು ಹೇಳಿದನು. ಆತನು ಮೂರನೆಯ ಸಾರಿ - ಯೋಹಾನನ ಮಗನಾದ ಸೀಮೋನನೇ, ನನ್ನ ಮೇಲೆ ಮಮತೆ ಇಟ್ಟಿದ್ದೀಯೋ ಎಂದು ಕೇಳಿದನು. ಮೂರನೆಯ ಸಾರಿ ಆತನು - ನನ್ನ ಮೇಲೆ ಮಮತೆ ಇಟ್ಟಿದ್ದೀಯೋ ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು - ಸ್ವಾಮೀ, ನೀನು ಎಲ್ಲಾ ಬಲ್ಲೆ; ನಿನ್ನ ಮೇಲೆ ನಾನು ಮಮತೆ ಇಟ್ಟಿದ್ದೇನೆಂಬದು ನಿನಗೆ ತಿಳಿದದೆ ಅಂದನು. ಅವನಿಗೆ ಯೇಸು - ನನ್ನ ಕುರಿಗಳನ್ನು ಮೇಯಿಸು. ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ಯೌವನಸ್ಥನಾಗಿದ್ದಾಗ ನೀನೇ ನಡುವನ್ನು ಕಟ್ಟಿಕೊಂಡು ಇಷ್ಟಬಂದ ಕಡೆಗೆ ತಿರುಗಾಡುತ್ತಿದ್ದಿ; ಆದರೆ ನೀನು ಮುದುಕನಾದಾಗ ನಿನ್ನ ಕೈಗಳನ್ನು ಚಾಚುವಿ, ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿಕೊಂಡು ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ತೆಗೆದುಕೊಂಡು ಹೋಗುವನು ಎಂದು ಹೇಳಿದನು. ಅವನು ಎಂಥಾ ಸಾವಿನಿಂದ ದೇವರನ್ನು ಮಹಿಮೆಪಡಿಸುವನು ಎಂಬದನ್ನು ಆತನು ಈ ಮಾತಿನಿಂದ ಸೂಚಿಸಿದನು. ಇದನ್ನು ಹೇಳಿ ಆತನು ಅವನಿಗೆ - ನನ್ನನ್ನು ಹಿಂಬಾಲಿಸು ಎಂದು ಹೇಳಿದನು.
ಪೇತ್ರನು ತಿರುಗಿಕೊಂಡು ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಹಿಂದೆ ಬರುವದನ್ನು ಕಂಡನು. ಆ ಶಿಷ್ಯನು ಊಟದಲ್ಲಿ ಯೇಸುವಿನ ಎದೆಯ ಕಡೆಗೆ ಬಾಗಿ - ಸ್ವಾಮೀ, ನಿನ್ನನ್ನು ಹಿಡುಕೊಡುವವನು ಯಾರು ಎಂದು ಕೇಳಿದವನೇ. ಇವನನ್ನು ಪೇತ್ರನು ಕಂಡು ಯೇಸುವನ್ನು - ಸ್ವಾಮೀ, ಇವನ ವಿಷಯವೇನು ಎಂದು ಕೇಳಲು ಯೇಸು ಅವನಿಗೆ - ನಾನು ಬರುವ ತನಕ ಇವನು ಇರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು? ನೀನು ನನ್ನನ್ನು ಹಿಂಬಾಲಿಸು ಎಂದು ಹೇಳಿದನು. ಇದರ ದೆಸೆಯಿಂದ ಆ ಶಿಷ್ಯನು ಸಾಯುವದಿಲ್ಲವೆಂಬ ಮಾತು ಸಹೋದರರಲ್ಲಿ ಹಬ್ಬಿತು. ಆದರೆ ಅವನು ಸಾಯುವದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ; ನಾನು ಬರುವ ತನಕ ಅವನು ಇರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು ಎಂತಲೇ ಆತನು ಹೇಳಿದನು. ಈ ಸಂಗತಿಗಳನ್ನು ಬರೆದು ಇವುಗಳ ವಿಷಯವಾಗಿ ಸಾಕ್ಷಿ ಹೇಳುವ ಶಿಷ್ಯನು ಇವನೇ. ಇವನ ಸಾಕ್ಷಿ ಸತ್ಯವೆಂದು ನಾವು ಬಲ್ಲೆವು.
ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಪವಿತ್ರಾತ್ಮನ ಮೂಲಕ ಆಜ್ಞೆಕೊಟ್ಟು ಮೇಲಣ ಲೋಕವನ್ನೇರಿದ ದಿನದವರೆಗೆ ವಿವರಿಸಿದೆನಷ್ಟೆ. ಆತನು ಬಾಧೆಪಟ್ಟು ಸತ್ತ ಮೇಲೆ ತನ್ನನ್ನು ಜೀವಂತನೆಂದು ಅನೇಕ ಪ್ರಮಾಣಗಳಿಂದ ಅಪೊಸ್ತಲರಿಗೆ ತೋರಿಸಿಕೊಂಡನು. ನಾಲ್ವತ್ತು ದಿವಸಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯದ ವಿಷಯವಾದ ಸಂಗತಿಗಳನ್ನು ಹೇಳುತ್ತಾ ಇದ್ದನು.-ಹೀಗಿರಲಾಗಿ ಆತನು ಅವರೊಂದಿಗೆ ಕೂಡಿದ್ದಾಗ್ಗೆ ಅವರಿಗೆ - ಯೋಹಾನನಂತೂ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿದನು, ನಿಮಗಾದರೋ ಇನ್ನು ಸ್ವಲ್ಪ ದಿವಸಗಳೊಳಗಾಗಿ ಪವಿತ್ರಾತ್ಮದಲ್ಲಿ ಸ್ನಾನವಾಗುವದು. ಆದಕಾರಣ ನೀವು ಯೆರೂಸಲೇಮನ್ನು ಬಿಟ್ಟು ಹೋಗದೆ ತಂದೆ ಮಾಡಿದಂಥ ನೀವು ನನ್ನಿಂದ ಕೇಳಿದಂಥ ವಾಗ್ದಾನಕ್ಕೆ ಕಾದುಕೊಂಡಿರ್ರಿ ಎಂದು ಅಪ್ಪಣೆಕೊಟ್ಟನು. ಕೂಡಿ ಬಂದವರು ಆತನನ್ನು - ಸ್ವಾಮೀ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ತಿರಿಗಿ ಸ್ಥಾಪಿಸಿಕೊಡುವಿಯೋ ಎಂದು ಕೇಳಲು ಆತನು ಅವರಿಗೆ - ತಂದೆಯು ಸ್ವಂತ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ ಸಮಯಗಳನ್ನೂ ತಿಳುಕೊಳ್ಳುವದು ನಿಮ್ಮ ಕೆಲಸವಲ್ಲ. ಆದರೆ ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇವಿುನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು ಅಂದನು. ಬಳಿಕ ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೋಗಿ ಯೇಸು ತಮಗೆ ಗೊತ್ತು ಮಾಡಿದ್ದ ಬೆಟ್ಟಕ್ಕೆ ಸೇರಿದರು. ಅಲ್ಲಿ ಆತನನ್ನು ಕಂಡು ಆತನಿಗೆ ಅಡ್ಡಬಿದ್ದರು; ಆದರೆ ಕೆಲವರು ಸಂದೇಹಪಟ್ಟರು. ಆಗ ಯೇಸು ಹತ್ತರಕ್ಕೆ ಬಂದು - ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ಹೇಳಿದನು.
ಮತ್ತು ಆತನು ಅವರನ್ನು ಬೇಥಾನ್ಯದ ತನಕ ಕರಕೊಂಡು ಹೋಗಿ ತನ್ನ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿದನು. ಆಶೀರ್ವದಿಸುತ್ತಿರುವಾಗ ಆತನು ಅವರನ್ನು ಬಿಟ್ಟು [ಪರಲೋಕಕ್ಕೆ ಒಯ್ಯಲ್ಪಟ್ಟನು]. ಮೋಡವು ಆತನನ್ನು ಕವಿದುಕೊಂಡದ್ದರಿಂದ ಅವರ ಕಣ್ಣಿಗೆ ಮರೆಯಾದನು. ಆತನು ಹೋಗುತ್ತಿರುವಾಗ ಅವರು ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಾ ಇರಲಾಗಿ ಶುಭ್ರವಸ್ತ್ರಧಾರಿಗಳಾದ ಇಬ್ಬರು ಪುರುಷರು ಫಕ್ಕನೆ ಅವರ ಹತ್ತರ ನಿಂತುಕೊಂಡು - ಗಲಿಲಾಯದವರೇ, ನೀವು ಯಾಕೆ ಆಕಾಶದ ಕಡೆಗೆ ನೋಡುತ್ತಾ ನಿಂತಿದ್ದೀರಿ? ನಿಮ್ಮ ಬಳಿಯಿಂದ ಆಕಾಶದೊಳಕ್ಕೆ ಸೇರಿಸಲ್ಪಟ್ಟಿರುವ ಈ ಯೇಸು ಯಾವ ರೀತಿಯಲ್ಲಿ ಆಕಾಶದೊಳಕ್ಕೆ ಹೋಗಿರುವದನ್ನು ನೀವು ಕಂಡಿರೋ ಅದೇ ರೀತಿಯಲ್ಲಿ ಬರುವನು ಎಂದು ಹೇಳಿದರು.ಅವರು [ಆತನನ್ನು ಆರಾಧಿಸಿ] ಬಹುಸಂತೋಷದಿಂದ ಯೆರೂಸಲೇವಿುಗೆ ಹಿಂತಿರುಗಿ ಹೋಗಿ ಯಾವಾಗಲೂ ದೇವಾಲಯದಲ್ಲಿ ದೇವರನ್ನು ಕೊಂಡಾಡುತ್ತಿದ್ದರು.
ಯೇಸುಸ್ವಾವಿುಯು ಅವರ ಕೂಡ ಮಾತಾಡಿದ ಮೇಲೆ ಆಕಾಶಕ್ಕೆ ಒಯ್ಯಲ್ಪಟ್ಟು ದೇವರ ಬಲಗಡೆಯಲ್ಲಿ ಆಸನಾರೂಢನಾದನು. ಇತ್ತಲಾಗಿ ಅವರು ಹೊರಟುಹೋಗಿ ಎಲ್ಲೆಲ್ಲಿಯೂ ಸುವಾರ್ತೆಯನ್ನು ಸಾರಿದರು; ಮತ್ತು ಕರ್ತನು ಅವರ ಕೂಡ ಕೆಲಸ ಮಾಡುತ್ತಾ ಸೂಚಕಕಾರ್ಯಗಳಿಂದ ಸುವಾರ್ತೆಯ ವಾಕ್ಯವನ್ನು ಬಲಪಡಿಸುತ್ತಾ ಇದ್ದನು.